ಚಂದ್ರಬಿಂಬ

ಸೆಪ್ಟೆಂಬರ್ ತಿಂಗಳ ಮೂರನೇ ವಾರ. ಶಿರಾಡಿ ಘಾಟ್ ಹತ್ತಿ ಮಂಗಳೂರಿಂದ ಬೆಂಗಳೂರಿಗೆ ಪ್ರಯಾಣ ಮಾಡುವ ಸಾಹಸಕ್ಕೆ ಕೈ ಹಾಕಿದೆವು ನಾವು ಮೂವರು ಸ್ನೇಹಿತರು. ಸುಮಾರು ಇಪ್ಪತ್ಮೂರು ಕಿ.ಮೀ. ಘಾಟ್! ಅಬ್ಬಾ! ದೇವರೇ ಗತಿ ಅಲ್ಲೇನಿದೆ ರಸ್ತೆ? ಪಕ್ಕದಲ್ಲೇ ಮೈಮೇಲೆ ಬರುವಂತೆ ಹಾದು ಹೋಗುವ ಟ್ಯಾಂಕರ್...



ಒಂದೇ ಉಸಿರಿಗೆ ಮುಕ್ಕಾಲು ಭಾಗ ಘಾಟ್ ಏರಿದಾಗ ಬೆಟ್ಟದ ಹಸಿರು ಸಾಲಿನಲ್ಲಿ ಮಂಜಿನ ಹೊದಿಕೆ! ಕೆಳಗೆ ರಭಸದಿಂದ ಹರಿಯುತ್ತಿದೆ ನದಿ. ನಿಜಕ್ಕೂ ಮನಸ್ಸು ಒಮ್ಮೆಗೇ ಕುಣಿದಾಡಿತು. ಮೈ ತುಂಬ ತುಂಬಿಕೊಂಡಿದ್ದ ಆಯಾಸ ಮಾಯವಾಯಿತು.



ಬೆಂಗಳೂರು-ಮಂಗಳೂರು ರೈಲು ಇಲ್ಲೇ ಬೆಟ್ಟದ ಮೇಲೆ ಹಾದು ಹೋಗುತ್ತದಲ್ಲವೇ? ನಮ್ಮೊಳಗೇ ಚರ್ಚೆಗೆ ತೊಡಗಿದೆವು. ಈಗ ರೈಲು ಬಂದಿದ್ದರೆ ಎಷ್ಟು ಚೆಂದ ಅಂದುಕೊಳ್ಳುತ್ತಾ ಕಣ್ಣು ಅಗಲಗೊಳಿಸಿ ನೋಡೇ ನೋಡಿದೆವು...


ಹತ್ತೇ ನಿಮಿಷ! ಅಕೋ ಬಂದೇ ಬಿಟ್ಟಿತು ರೈಲು! ಬೆಟ್ಟದ ಇನ್ನೊಂದು ಹಾಸಿನಲ್ಲಿ ನಿಂತ ನಮಗೆ ಸ್ವರ್ಗವೇ ಕೈಗೆ ಸಿಕ್ಕಷ್ಟು ಖುಷಿ. ಸತ್ತೇ ಹೋಗುವಷ್ಟು ಖುಷಿ ಅಂತಾರಲ್ಲ? ಹಾಗೆ. ಅದೊಂದು ನಿಜಕ್ಕೂ ಅಪರೂಪದ ಕ್ಷಣ. ರೈಲು ಬರುವ ಹೊತ್ತಿಗೇ ನಾವಲ್ಲಿ ಇರಬೇಕೇ?



ಹಸಿರು... ಹಸಿರು... ಪರ್ವತ ಶ್ರೇಣಿ ಅದರ ಮೇಲೆ ಮಂಜಿನ ಹೊದಿಕೆ... ಕೆಳಗೆ ನದಿಯ ರಭಸ... ರಸ್ತೆಯ ಈ ಕಡೆಯಲ್ಲೂ ಸಣ್ಣಗೆ ಇಳಿದಿದೆ ಬೆಳ್ನೊರೆಯಂಥ ಜಲಝರಿ!




ಎಲ್ಲಿ ಹೋಯಿತು ರೈಲು? ಹಸಿರ ಸಂಪತ್ತಿನ ನಡುವೆ ಸಣ್ಣಗೆ ಸದ್ದು ಮಾಡುತ್ತಾ.. ಮುಂದೆ ಅಲ್ಲಿ ಇಲ್ಲಿ ಕಣ್ಣಾಮುಚ್ಚಾಲೆ ಆಟ ಆಡುತ್ತಾ ಇನ್ನೊಂದು ಬೆಟ್ಟದ ಸಾಲಿಗೆ ಸರಿದು ಹೋಯಿತು...ಇದು ರಮ್ಯ ನೋಟ... ಅನನ್ಯ ಅನುಭವ


ಮಳೆಗಾಲದ ಶಿರಾಡಿ ಶಿಖರ ಶ್ರೇಣಿ
ಹೊದ್ದುಕೊಂಡಿದೆ
ಹಿಮದ ಮುಕುಟ ಮಣಿ


ಇಂತಹ ದಟ್ಟ, ನಿರ್ಭರವಾದ ಕಾಡಿನ ಮಧ್ಯೆ, ಬೆಟ್ಟ ಸಾಲುಗಳ ಮಧ್ಯೆ ರೈಲು!!! ಅಲ್ಲಿ ರೈಲಿನ ಟ್ರ್ಯಾಕು?? ನಿಜಕ್ಕೂ ಅದ್ಭುತ ಸಾಧನೆ ಅನಿಸಿತು...! ಕವಿ ನರಸಿಂಹ ಸ್ವಾಮಿ ಇದನ್ನು ನೋಡಿದ್ದರೆ ಹೇಗೆ ವರ್ಣಿಸುತ್ತಿದ್ದರು?






ಆದರೆ ನೋಡಿ ಬೆಟ್ಟಸಿರಿಯ ಮೇಲೆ ಅದ್ಭುತ ಸಾಧನೆ!
ಅದು ಸಾಧನೆ... ಇದು ವೇದನೆ!!
ಇಲ್ಲಿ ಕಬಳಿಸುತ್ತಿದ್ದಾರೆ ರಸ್ತೆ ಹೆಸರಿನಲ್ಲಿ ಕೋಟಿ ಕೋಟಿ ಹಣ! ರಸ್ತೆ ಅನ್ನುವುದು ಎಲ್ಲಿದೆ ಇಲ್ಲಿ?

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ