ಈನಾ ಮೀನಾ ಡೀಕಾ... ಇದು ಕಿಶೋರ್!

ಕಿಶೋರ್ ಕುಮಾರ್ ಬಗ್ಗೆ ಏನನ್ನೇ ಹೇಳಿದರೂ, ಬರೆದರೂ ಅದು ಕ್ಲೀಷೆಯಾಗಿ ಬಿಡುತ್ತದೆ. ಈ ಗೀತೆಗಳ ಸರದಾರನ ಬಗ್ಗೆ ಸಾವಿರಾರು ಲೇಖನಗಳು ಬಂದು ಹೋಗಿವೆ. ಅವರ ವ್ಯಕ್ತಿತ್ವ, ಹಾಡು, ಅಭಿನಯ, ಬದುಕಿನಲ್ಲಿ ಕಂಡ ಏರಿಳಿತದ ನೆನಪು ಮೊನ್ನೆ ಮೊನ್ನೆ ಕೇಳಿದ ಹಳೆಯ ಹಿಂದಿ ಹಾಡಿನಷ್ಟೆ ಹಸಿಹಸಿಯಾಗಿದೆ. ಒಬ್ಬ ಹಾಡುಗಾರನಾಗಿ ಕಿಶೋರ್ ದಾ ಏರಿದ ಎತ್ತರವನ್ನು ಯಾರೊಬ್ಬರೂ ಏರಲು ಸಾಧ್ಯವಿಲ್ಲ. ಹಿಂದಿ ಚಿತ್ರದ ಗೀತೆಗಳಿಗೆ ಕಿಶೋರ್ ಕೊಟ್ಟ ಸ್ಪರ್ಶಕ್ಕೆ ಏನೇ ಹೇಳಿದರೂ ಕಮ್ಮಿಯೇ. ಯಾರೇ ಆದರೂ ಅವರೊಬ್ಬ ಜೀನಿಯಸ್ ಎಂದು ಬಿಡಲೇ ಬೇಕು. ಆದರೆ, ಬದುಕಿನ ಕೊನೆಯ ಅಧ್ಯಾಯದಲ್ಲಿ ಪಟ್ಟ ಅಧ್ವಾನಗಳು, ಅವರ ವಿಚಿತ್ರ ವರ್ತನೆಗಳು, ಪದೆಪದೇ ಎದುರಿಸಿದ ಸಮಸ್ಯೆಗಳಿಂದಾಗಿ ಅವರು ಹರಿದ ಗಾಳಿಪಟದಂತಾಗಿ ಬಿಟ್ಟಿದ್ದರು. ಸಂಪೂರ್ಣ ಮಗುವಿನಂತೆ ರಚ್ಚೆ ಹಿಡಿದು ಬಾಲಿಶವಾಗಿ ವರ್ತಿಸುತ್ತಿದ್ದರು. ಅವರ ವರ್ಚಸ್ಸಿಗೆ ತಕ್ಕ ಗಾಂಭೀರ್ಯ ಇರಲೇ ಇಲ್ಲ. ಜನ ಅವರ ವಿಚಿತ್ರ ವರ್ತನೆಗಳನ್ನು ನೋಡಿ ಭಯ ಬೀಳುತ್ತಿದ್ದರು. ಕಿಶೋರ್ ಸಹವಾಸನೇ ಬೇಡಾ ಎಂದು ದೂರ ಉಳಿಯುತ್ತಿದ್ದರು. (ತನುಜಾ ಜೊತೆ ಕಿಶೋರ್ ) `ಮೇ ಹ್ಞೂಂ ಏಕ್ ಪಾಗಲ್ ಪ್ರೇಮಿ... ಮೇರಾ ದರ್ದ್ ನಾ ಕೋಯೀ...ಜಾನಾ...' ಹೌದು ಕಿಶೋರ್ ಬದುಕು ಹಾಗೇ ಇತ್ತು ಅನಿಸುತ್ತದೆ. ಅವರ ಆಂತರ್ಯದಲ್ಲಿ ಇದ್ದ ನೋವಾದರೂ ಎಂಥಾದ್ದು ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ. ಆದರೆ, ಒಂದು ವಿಚಾರವನ್ನು ಯಾರದೂ ಅರ್ಥ ಮಾಡಿಕೊಳ್ಳಬಹುದಾಗಿತ್ತು...