ಕವಿತೆ

ಮತ್ತೆ ಮಗುವಾಗಬೇಕು

ಹೊರಗೆ ನಿರಾಭರಣ ಬಯಲಿತ್ತು
ಒಳಗೆ ಚಳಿಯ ಕನಲಿತ್ತು
ಕದಡಿದ ಕಾವಳಕ್ಕಂಜದೇ
ಬಾನಿಗಂಟಿದ್ದ ನಕ್ಷತ್ರಗಳೆಡೆಗೆ
ಬೊಟ್ಟು ತೋರಿಸಿ
ಮಗ್ಗಿ ಹೇಳಿದವಳು ನೀನು
ತಾರೆಗಳ ಊರಿನಿಂದ
ಹೊರಟ ಚೆಂಬೆಳಕು ನಿನ್ನ
ಕೋಣೆಗುಂಟ ನಿಲುಕಲಿಲ್ಲ.


ಬೆಣ್ಣೆಯಂಥ ಕೈಯ ತುಂಬ
ಮದರಂಗಿಯ ಚುಕ್ಕೆ ಇಟ್ಟು
ರಾಣಿಯ ಕಥೆ ಬಿಚ್ಚಿದವಳು
ಬೇರು ಬಿಡುವ ಬಣ್ಣದ ಕೆಳಗೆ
ನಾಳೆಗಳ ಗಂಟು ಕಟ್ಟಿದವಳು
ಹರಡಿಕೊಂಡ ಕನಸ ರಾಶಿ
ನಿನ್ನ ಬೆರಳ ತುದಿಯಲ್ಲಿ
ಜೀವನ್ಮುಖಿಯಾಗಲಿಲ್ಲ.

ಸುಕ್ಕುಗಟ್ಟಿದ ಹಾಳೆಯ ತುಂಬ
ಊರ ತೇರಿನ ಚಿತ್ರ ಬಿಡಿಸಿ
ನನ್ನ ಪೋಕರಿ ಕಣ್ಣುಗಳಲ್ಲಿ
ಹಬ್ಬದ ಬಾಷ್ಯ ಬರೆದವಳು
ನಿನ್ನ ಕಣ್ಣಂಚಿನಲ್ಲಿ ಹೊರಟ
ಸಂಕಟಗಳ ಮೆರವಣಿಗೆಗೆ
ಮತಾಪುಗಳ ಸ್ವಾಗತವಿರಲಿಲ್ಲ

ಹಿತ್ತಿಲ ಬಿದಿರ ಕಡ್ಡಿಗಳನ್ನು ಪೋಣಿಸಿ
ಆಕಾಶಬುಟ್ಟಿ ಕಟ್ಟಿ
ನನ್ನ ಕಣ್ಣಲ್ಲಿ ದೀಪಗಳ
ತೊಟ್ಟಿಲು ಕಟ್ಟಿದವಳು ನೀನು
ಹೊಸಮಳೆ ಬಿದ್ದ ನೆಲದಲ್ಲಿ
ಕವಿತಿದ್ದ ಹಳೆ ಗರುಕೆಯ ಬುಡದಲ್ಲಿ
ಜೀವರಸದ ಆಸೆ ಕಂಡವಳು
ನೀನು ಹರಿಸಿದ ಬೆವರ ಹನಿಗಳು
ಜೀವಸೆಲೆಯಾಗಲಿಲ್ಲ

ಹರಿಯುವ ತೊರೆಯ ತಟದಲ್ಲಿ
ಅರಳಿದ ಕೇದಗೆ ನೀನು
ಹೂವಿನೆಸಳಿನ ಗಂಧ ನೀನು
ನಿನ್ನ ಅಂತರಂಗದ ಕಂಪಿನಲ್ಲಿ
ನಾನು ಮತ್ತೆ ಮಗುವಾಗಬೇಕು
ಅಳಸಿ ಹೋದ ಚಿತ್ರಗಳಿಗೆಲ್ಲ
ಜೀವ ತುಂಬಬೇಕು.




ಕಡಲ
ಹುಡುಗಿಯ ನೆನಪು





















ನರನಾಡಿಯಲ್ಲೆಲ್ಲ ಸುಡುಮದ್ದು
ತುಂಬಿಕೊಂಡ, ಪ್ರೀತಿ ಗೊತ್ತಿಲ್ಲದೆ
ಅವುಡುಗಚ್ಚಿ ಕುಳಿತ ನಗರದಲ್ಲಿ
ನನ್ನೂರ ಕಡಲ ಹುಡುಗಿ ಚಿರಯೌವನೆ

ಕದನದಂಥ ಕಡಲ ಮುಂದೆ
ಕೃಷ್ಣ ಸುಂದರಿ ಅಂತರ್ಮುಖಿ
ಮೌನವೇ ಮತಾಪು
ಕಿಬ್ಬೊಟ್ಟೆಗೆ ಒದ್ದು
ಮಾತಾಗುತ್ತವೆ ಅವಳೊಡಲ ಬೇನೆ

ಎರಡಕ್ಷರ ಕಲಿಯದವಳು
ಭಾರವನ್ನೆಲ್ಲ ಎದೆಯೊಳಗಿಟ್ಟು
ಸೆರಗ ಬಿಗಿದೆತ್ತಿ ಕಟ್ಟಿ
ಕಡಲ ಹೂಗಳ ಹೊತ್ತು
ದಂಡೇರಿ ಬರುವ ನಾಯಕಿ

ರಕ್ತ ಮಾಂಸಗಳ ಮಾರ್ಕೆಟ್ಟಲ್ಲಿ
ಮಾತು ಯುದ್ಧವಾಗಿ
ಹಸಿಬಿಸಿ ಕನಸುಗಳು
ಗಿರಕಿ ಹೊಡೆಯುತ್ತವೆ
ಪ್ರೀತಿ ಕೊಂದು ಮಾತಾಡದ
ಕಡಲ ಹುಡುಗಿ
ಪ್ರಶ್ನೆಗಳಿಗೆ ಕ್ರಯಕಟ್ಟದ ಜೀವಿ

ಮದಿರೆ ಹೀರಿ ನಂಜೇರಿದ
ಈ ನಗರದ ಹುಡುಗರು
ಇವಕ್ಕೆಲ್ಲಿ ಅರ್ಥವಾಗುತ್ತದೆ
ನನ್ನೂರ ಕಡಲು
ಅವಳ ಕಣ್ಣ ಉಗ್ರಾಣದೊಳಗೆ
ಗೂಡು ಕಟ್ಟಿದ ನೋವು




ಬಂದುಬಿಡು
ಮಳೆಗಾಲದ ಸಂಜೆಗೆ

ಅಂಥದೊಂದು ಮಳೆಗಾಲದ ಸಂಜೆ
ಮತ್ತೇರಿದ ಮುಗಿಲಿನ ಕಪ್ಪು ಕರಗಿ
ನಿನ್ನ ಕಣ್ಣ ಕೆಳಗಿನ ಕಾಡಿಗೆಯಾಗಿತ್ತು
ರೆಪ್ಪೆ ಅದುರಿ ಬಿದ್ದ ಪ್ರತಿ ಹನಿಯೂ
ಮುಂಗಾರಿನ ಗಿಲಕಿ ಹಾಡಿತ್ತು

ನೆಲದ ಬದುವಿನ ಕಂಕುಳಲ್ಲಿ
ಒಸರಿದ ಸೆಲೆಗಳ ನೆನೆಯುತ್ತ
ಪಾರಿಜಾತ ಗಿಡದ ಕೆಳಗೆ
ಗಲ್ಲೆನ್ನಲಿಲ್ಲ ಹಸಿರ ಬಳೆ
ತೋಳಬಂಧಿಯಲ್ಲಿ
ಶಿಲೆಯಾಯ್ತು ಒನಪಿನ ದೇಹ

ಕೆಂಪು ಚುಕ್ಕಿಗಳ ದಾವಣಿಯ
ಅಂಚು ಸವರಿ ಕಾವಾರಿದ
ಮಣ್ಣೊಳಗೆ ಇಳಿದಂತೆ ಮಳೆ
ನಿನ್ನೊಳಗೆ ಹುಚ್ಚು ಕುದುರೆಯಾಗಿತ್ತು
ಕೆಂಡದಂಥ ಆಸೆ
ನಾಭಿಯನ್ನೆಲ್ಲ ತಡಕಾಡಿ
ಧ್ಯಾನಸ್ಥನಂತೆ ಸೋಗು ಹಾಕಿತ್ತು

ಮಳೆಯೆಂದರೆ ಹೀಗೆ
ತೆನೆ ಅರಳಿದ ಮೋಡದ ಕಂಪು
ಅದರೊಳಗೆ ಮಿಂದ ನೀನು
ಗಂಧವತಿಯಾದ ಕನಸು

ಮೊದಲ ಮಳೆ ಬಿದ್ದು ಹೋದ ಮೇಲೆ
ಉಳಿದದ್ದು ಮೌನವೋ? ಸದ್ದೋ?
ಉಸಿರಿಗೆ ಉಸಿರೇ ನಿಂತು
ಮೊಳಕೆ ಒಡೆದಿದ್ದು
ಹಸಿನೆಲದೊಡಲಿನ ದಾವಂತವೋ?

ಇಂಥದೊಂದು ಮಳೆಗಾಲದ ಸಂಜೆಗಾಗಿ
ಎಷ್ಟೊಂದು ವರ್ಷ ಕಾದಿದ್ದೇನೆ
ಮೋಡ ಕಟ್ಟಿತ್ತು, ಗಾಳಿ ಬೀಸಿತ್ತು
ನಿನ್ನಂತೆ ತೊಯ್ದು ನಿಂತಿದೆ
ಪಾರಿಜಾತದ ಗಿಡ
ಬೆಟ್ಟದ ತಪ್ಪಲಿನ ಕೆಳಗೆ
ಬಿಸಿಯುಸಿರಿಗೆ ಕಾದು
ಶಿಲೆಯಾಗಿದ್ದೇನೆ ನಾನು

ಈಗ ಮತ್ತೆ ಬಿಚ್ಚಿಕೊಂಡಿದೆ
ಮೋಡದ ಸೆರಗು
ಎದೆಯ ಉಬ್ಬಿನೊಳಗೆ ಉಳಿದ
ಅಷ್ಟೂ ಹನಿಗಳು
ಕರಗಲಿ ನಿನ್ನ ಬೊಗಸೆಯೊಳಗೆ
ಬಂದು ಬಿಡು ಇನ್ನೊಮ್ಮೆ
ಮಳೆಗಾಲದ ಸಂಜೆಗೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ