ಭಾನುವಾರ, ಜೂನ್ 17, 2018

ಯಾವ ಜನುಮದ ಗೆಳೆಯನೋ...

ಆವತ್ತು ವಾರದ ರಜೆಯಿತ್ತು....
ಬೆಂಗಳೂರಿನಲ್ಲಿ ವಿಪರೀತ ಧಗೆ. ಹೊರಗೆ ಕಾಲಿಡಲಾಗದಷ್ಟು ಕೆಂಡದಂತಹ ಬಿಸಿಲು. ಬೆಳಗಿನ ಜಾವವೇ ನಮ್ಮ ಸೈಟಿನ ಭೂಮಿ ಪೂಜೆಯನ್ನು ಅಪ್ಪ-ಅಮ್ಮನ ಸಾನಿಧ್ಯದಲ್ಲಿಯೇ ಮಾಡಿಸಿದ್ದೆ. ಅಪ್ಪ ಸುಮ್ಮನೆ ಕುಂತು ಎಲ್ಲವನ್ನೂ ಶಾಂತಚಿತ್ತದಿಂದ ಮುಗಿಸಿದ್ದರು. ಅಮ್ಮ ಅಪ್ಪನಿಗೆ ಸಾಥ್ ನೀಡಿದ್ದಳು. ಬೆಳಗಿನ ಏಳಕ್ಕೆಲ್ಲ ಆ ಕೆಲಸ ಮುಗಿದೇ ಹೋಗಿತ್ತು. ಹಾಗಾಗಿ ಅಪ್ಪ ಇಡೀ ದಿನ ಸುಡು ಬಿಸಿಲಿನಲ್ಲಿ ಹೊರಗೆ ಹೋಗಿರಲಿಲ್ಲ. ಸಂಜೆ ಭಾರಿ ಮಿಂಚು-ಗುಡುಗು, ಮಳೆ ಬರುವ ಲಕ್ಷಣ. ಆದರೆ, ಹನಿಗಳು ಧರೆಗೆ ಬಿದ್ದು ಮಣ್ಣಿನ ವಾಸನೆ ಮೂಗಿಗೆ ಅಡರಲೇ ಇಲ್ಲ. ರಾತ್ರಿ ಊಟವೆಲ್ಲ ಮುಗಿದ ಬಳಿಕ, ಒಂದು ವಾಕಿಂಗ್ ಹೋಗಿ ಬರೋಣ ಬನ್ನಿ ಅಪ್ಪ ಎಂದು ಕರೆದೆ.
"ಹ್ಞಾಂ! ಹೋಗುವಾ...!" ಎಂದು ಉತ್ಸಾಹದಿಂದಲೇ ಎದ್ದರು.
ಬಡಾವಣೆಯ ಖಾಲಿ ಖಾಲಿ ರಸ್ತೆಯಲ್ಲಿ ಅಪ್ಪನ ಕೈಹಿಡಿದು ವಾಕಿಂಗ್ ಹೋಗುವುದೆಂದರೆ ಎಲ್ಲಿಲ್ಲದ ಖುಷಿ ನನಗೆ. ಹಿಂದಿನ ದಿನಗಳಲ್ಲಾಗಿದ್ದರೆ ಅಪ್ಪ ಬಾಯಿತುಂಬ ಮಾತನಾಡುತ್ತಿದ್ದರು. ಅಪಾರವಾದ ನೆನಪಿನ ಶಕ್ತಿ ಅವರಿಗಿತ್ತು. ಮುಂಬೈನಲ್ಲಿ ಬಹಳ ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅವರು ಅನೇಕ ಸಂಗತಿಗಳನ್ನು  ಹೇಳಿಕೊಳ್ಳುತ್ತಿದ್ದರು. ಸಂಸ್ಥಾ ಕಾಂಗ್ರೆಸ್, ಮುರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಮಾತು, ನೆನಪುಗಳನ್ನು ಹಂಚಿಕೊಳ್ಳಲೆಂದೇ ನಮ್ಮ ಮನೆಗೆ ಸಂಜೆ ಹೊತ್ತು ಅವರ ಮಿತ್ರರು ಬರುತ್ತಿದ್ದರು. ಪಿಲಿಪ್ ನಾಯಕ್, ಸದಾಶಿವ ಸೇರೇಗಾರ್, ಡಾ.ನಂಬಿಯಾರ್, ಡಾ.ಮೀನಾಕ್ಷಿ, ಬಾಬು ರಾವ್, ರಾಜೀವ್ ಶೆಟ್ಟಿ ಹೀಗೆ ಪಟ್ಟಿ ಬೆಳೆಯುತ್ತದೆ. ಮನೆಯ ಎದುರಿಗೇ ಇದ್ದ ಹೋಲಿ ಕ್ರಾಸ್ ಎಂಬ ಆಸ್ಪತ್ರೆಯ ಡಾಕ್ಟರ್ ಗಳು, ಕೆಲವೊಮ್ಮೆ ಅಲ್ಲಿನ ನನ್ ಗಳು ಬಂದು ಮನೆಯ ಅಂಗಳದಲ್ಲಿ ಮಾತಿಗೆ ಕೂರುತ್ತಿದ್ದರು. ಗಂಟೆಗಳ ಕಾಲ ಮಾತು ಮುಂದುವರಿಯುತ್ತಿತ್ತು. 
ಈ ಆಸ್ಪತ್ರೆಗೆ ಹೊಸದಾಗಿ ಒಬ್ಬರು ಡಾಕ್ಟರ್ ಬಂದಿದ್ದರು. ಯುವ, ನೀಳಕಾಯದ ಡಾಕ್ಟರ್. ಟಿಪ್-ಟಾಪ್ ಡ್ರೆಸ್ ಮಾಡುತ್ತಿದ್ದ ಅವರಿಗೆ (ಡಾಕ್ಟರ್ ಹೆಸರು ನೆನಪಾಗುತ್ತಿಲ್ಲ) ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ನಮ್ಮೂರಲ್ಲಿ ಇಂಗ್ಲಿಷ್ ಬರುತ್ತಿದ್ದವರು ಬಹುತೇಕ ಯಾರೂ ಇರಲಿಲ್ಲ. ಡಾಕ್ಟರ್ ಗೆ  ಮಾತನಾಡಲಿಕ್ಕಂತ ಯಾರೂ ಇರಲಿಲ್ಲ. ಹಾಗಿದ್ದ ಅವರು ಎದುರಿನ ತೋಟದಲ್ಲಿದ್ದ ನಮ್ಮ ಮನೆಗೆ ಬಂದರು. ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪನಿಗೆ ನಮಸ್ಕಾರ ಮಾಡಿದರು. ಅರೆಬರೆ ಕನ್ನಡದಲ್ಲಿ ಮಾತನಾಡುತ್ತಿದ್ದ ಅವರನ್ನು ಕಂಡ ಅಪ್ಪ, ಇಂಗ್ಲಿಷ್ನಲ್ಲೇ ಮಾತು ಶುರುಮಾಡಿಕೊಂಡಿದ್ದರು. ಅದನ್ನು ಕಂಡು, "ಯೂ ಸ್ಪೀಕಿಂಗ್ ಇನ್ ಇಂಗ್ಲಿಷ್!" ಎಂದು ಅಚ್ಚರಿಯಿಂದ ತಮ್ಮ ಲಂಬೂ ದೇಹವನ್ನು ಬಗ್ಗಿಸಿ ಕೈ ಮುಗಿದಿದ್ದರು.
ಅಂದಿನಿಂದ ಅವರು ನಮ್ಮ ಮನೆಗೆ ವಾರಕ್ಕೊಮ್ಮೆಯಾದರೂ ಹಾಜರಾಗಿ ಬಿಡುತ್ತಿದ್ದರು. ವಿಶಾಲವಾದ ಅಂಗಳದಲ್ಲಿ, ತಣ್ಣನೆ ಬೀಸುವ ಗಾಳಿಯ ನಡುವೆ ಕುಂತು ಇಬ್ಬರೂ ಇಂಗ್ಲಿಷ್ ನಲ್ಲಿ ಗಪ್ಪಾ ಹೊಡೆಯುತ್ತಿದ್ದರು. ಆಧ್ಯಾತ್ಮ, ರಾಜಕೀಯ, ಆಯುರ್ವೇದದ, ಚೂರುಪಾರು ಸಾಹಿತ್ಯದ ಬಗ್ಗೆ ಮಾತು ನಡೆಯುತ್ತಿತ್ತು. ಇಬ್ಬರೂ ಒಳ್ಳೆಯ ಗೆಳೆಯರಾಗಿ ಬಿಟ್ಟಿದ್ದರು. ಅಲೋಪತಿ ಡಾಕ್ಟರಾಗಿದ್ದ ಅವರು ಅಪ್ಪ ಹೇಳುತ್ತಿದ್ದ ಆಯುರ್ವೇದದ ಕಥೆಗಳನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದರು. ಆಗಿನ್ನೂ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ನನಗೆ ಹತ್ತಿರ ಹೋಗಿ ಅವರ ಮಾತನ್ನು ಕೇಳಿಸಿಕೊಳ್ಳುವ ಅವಕಾಶ ಇರಲಿಲ್ಲ. ಹಾಗೆ ಮಾಡಿದಾಗಲೆಲ್ಲ ಅಪ್ಪ, "ಸಣ್ಣ ಮಕ್ಳಿಗೆಲ್ಲ ಎಂತಕೆ ದೊಡ್ಡರ್ ವಿಷಯ," ಎಂದು ನನ್ನನ್ನು ಬೈದು ಒಳಗೆ ಅಟ್ಟುತ್ತಿದ್ದರು. ನಾನೋ ಅನೇಕ ಬಾರಿ ಕಿಟಕಿಯಲ್ಲಿ ಅಡಗಿಕೊಂಡು ಕೇಳಿಸಿಕೊಳ್ಳುತ್ತಿದ್ದುದೂ ಇತ್ತು. ಅವನ್ನೆಲ್ಲ ನೋಟ್ ಮಾಡಿಕೊಂಡು ಇಟ್ಟುಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಇವತ್ತು ಅನಿಸುತ್ತಿರುತ್ತದೆ. ಕಾಲದ ಗಿರಣಿಯೊಳಗೆ ಎಲ್ಲವೂ ಪುಡಿಗಟ್ಟಿವೆ.
ಅಪ್ಪನ ಮಾತಿನ ವೈಖರಿಗೆ ಅನೇಕರು ಗೆಳೆಯರಾಗಿ ಬಿಡುತ್ತಿದ್ದರು. ಹಾಗಂತ ತಮ್ಮ ವೇವ್ಲೆಂಥ್ ಗೆ ಹೊಂದದವರನ್ನು ಅವರು ಎಂದಿಗೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರ ಗೆಳೆಯರಾಗಿದ್ದವರ ಪಟ್ಟಿಯನ್ನು ಇವತ್ತು ಹಠಾತ್ ನೆನಪಿಗೆ ಬಂದು ಹಳೆಯ ದಿನಗಳು ಫ್ಲಾಶ್ ಬ್ಯಾಕ್ ಆಗಿರುವುದಕ್ಕೆ ಕಾರಣವೂ ಇದೆ. ಈ ರಾತ್ರಿ ಅವರೊಂದಿಗೆ ವಾಕ್ ಹೋಗುತ್ತಿದ್ದಾಗ, ಬಡಾವಣೆಯ ಮಧ್ಯೆದಲ್ಲಿ ಅವರನ್ನು ಅರ್ಧ ದಾರಿಯಲ್ಲಿ ನಿಲ್ಲಿಸಿ, ಕೈಯನ್ನು ಅದುಮುತ್ತಾ ತಮಾಷೆಯ ಲಹರಿಯಲ್ಲೇ ಕೇಳಿದೆ;
 "ನೀವು ಯಾರು ಅಪ್ಪಯ್ಯಾ? "
"ನಾನಾ? ಯಾರಂತ ಗೊತ್ತಿಲ್ಲ, ಯಾರು ನಾನು?" ಅಂತ ನನ್ನ ಮುಖಮುಖ ನೋಡಿದರು. ನನಗೆ ಆಶ್ಚರ್ಯವಾಯಿತು.
"ನಿಮ್ಮ ಹೆಸರು ಗೊತ್ತಿಲ್ಲವಾ? ಒಮ್ಮೆ ನೆನಪು ಮಾಡಿಕೊಳ್ಳಿ" ಎಂದೆ. ಅವರು ಕ್ಷಣಕಾಲ ಯೋಚಿಸಿ, ನಾನು ಪಣಿಯಾ ಅಂದರು. ರಂಗನಾಥ್ ಹೆಸರಿನ ಅಪ್ಪನನ್ನು ಚಿಕ್ಕವರಿರುವಾಗ ಪಣಿಯಾ ಎಂದು ಕರೆಯುತ್ತಿದ್ದರು. ಕಾರಣ ಅವರು ಚಿಕ್ಕವರಿರುವಾಗ ಸಾಕಷ್ಟು ಪಣಕ್ (ತಂಟೆ) ಮಾಡುತ್ತಿದ್ದರು. ಅದಕ್ಕೇ ಅವರು ಪಣಿಯಾ.
"ಹಾಗಾದರೆ ನಾನು ಯಾರು?" ನಾಲ್ಕು ಹೆಜ್ಜೆ ಮುಂದೆ ಹಾಕುತ್ತಾ ಮುಂದಿನ ಪ್ರಶ್ನೆ ಹಾಕಿದೆ. ಮತ್ತೆ ನನ್ನ ಮುಖವನ್ನೇ ನೋಡಿದ ಅವರು,
"ನೀನು ನನ್ನ ಗೆಳೆಯಾ!" ಅಂದು ಬಿಟ್ಟರು.
ಅವರ ಮಾತು ಕೇಳಿ ನಿಜಕ್ಕೂ ಸಖೇದಾಶ್ಚರ್ಯವಾಯಿತು. ಯಾವತ್ತೂ ಅವರು ಹೀಗೆ ಹೇಳಿರಲಿಲ್ಲ. ಒಂದೋ ನನ್ನ ಮಗ, ಇಲ್ಲವೇ ಮಂಜು ಅನ್ನುತ್ತಿದ್ದುದೇ ಸಾಮಾನ್ಯವಾಗಿತ್ತು. ಆದರೆ ಇವತ್ತು ಅವರ ಮಾತು ಕೇಳಿ ಸ್ಟನ್ ಆಗಿ ನಿಂತು ಬಿಟ್ಟೆ..
"ಏನು ನಾನು ನಿಮ್ಮ ಗೆಳೆಯನಾ? ನಿಮ್ಮ ಮಗ ಅಲ್ವಾ ಅಪ್ಪಯ್ಯ?"
"ಅಲ್ಲ...... ಮಗ ಅಲ್ಲ, ಗೆಳೆಯ" ಎಂದು ಮತ್ತೆ ಒತ್ತಿ ಹೇಳುತ್ತಾ ಮುಂದಿನ ಹೆಜ್ಜೆ ಹಾಕಿದರು. ಮುಂದೆ ಹೋಗುವಾ ಬಾ ಎಂದು ಕೈ ಹಿಡಿದು ಎಳೆದರು.
"ನಾನು ಯಾಕೆ ನಿಮ್ಮ ಗೆಳೆಯ?" ಅಂತ ಮತ್ತೆ ಪ್ರಶ್ನೆ ಮಾಡಿದೆ.
"ಹಮ್ ಗೆಳೆಯನೇ... " ಎನ್ನುತ್ತಾ ಕ್ಷಣಹೊತ್ತು ಮೌನಕ್ಕೆ ಶರಣಾದರು. ಕೆಲ ಹೆಜ್ಜೆ ಹಾಕಿದ ಮೇಲೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದೆ.
"ಮಗ ಮನೆಯಲ್ಲಿ ನೋಡಿಕೊಳ್ಳುತ್ತಾನೆ. ಆದ್ರೆ, ಗೆಳೆಯ ಹೀಗೆ ಹೊರಗೆಲ್ಲ ಕರಕೊಂಡು ಬಂದು ಹೊರಗಡೆ ಗಿಡ, ಮರ ಇವೆಲ್ಲ ಇರುವುದನ್ನು ತೋರಿಸುತ್ತಾನೆ. ನೀನು ನನ್ನ ಯಾವ ಜನ್ಮದ ಗೆಳೆಯನೋ ಏನೋ ದೇವರಿಗೇ ಗೊತ್ತು...!"
"ಎಂಥಾ ಮಾತು ಅಂದ್ರಿ ಅಪ್ಪಯ್ಯ ನೀವು!" ಎಂದು ಮತ್ತೆ ಅವರ ಕೈ ಅದುಮಿದೆ.
ಗೆಳೆಯ ಮಾತ್ರ ಕೊನೆಯ ತನಕ ಇರುವುದು... ಅಂತ ಹೇಳಿದ ಅವರಿಗೆ,  "ಎಷ್ಟೊಂದು ಜನ ಫ್ರೆಂಡ್ಸು ಇದ್ರಲ್ಲಾ ನಿಮಗೆ, ಎಲ್ಲ ಎಲ್ಲಿ ಹೋದರು?" ಎಂದು ಕೇಳಿದೆ.
"ನನಗೆ ಫ್ರೆಂಡ್ಸ್ ಇದ್ರಾ? ಯಾರೂ ಈಗ ನೆನಪಿಗೆ ಬರುವುದಿಲ್ಲ. ಒಂದೂ ಗೊತ್ತಾಗುವುದಿಲ್ಲ," ಅನ್ನುತ್ತಾ ಮತ್ತೆ ಮನೆಯತ್ತ ಹೆಜ್ಜೆ ಹಾಕಿದರು. ಅಪ್ಪನ ನೆನಪಿನ ಶಕ್ತಿ ಢಾಳಾಗಿದ್ದಾಗ, ಅವರ ಮಾತುಗಳನ್ನು ಕೇಳಲಿಕ್ಕೆಂದೇ ಬರುತ್ತಿದ್ದ ಸ್ನೇಹಿತರೆಲ್ಲ ಎಲ್ಲಿ ಹೋದರು? ಎಂಬ ಪ್ರಶ್ನೆ ನನ್ನಲ್ಲಿಯೇ ಉಳಿದು ಬಿಟ್ಟಿತು.

ಭಾನುವಾರ, ಅಕ್ಟೋಬರ್ 15, 2017

ಕದ ತೆರೆದ ಆಕಾಶ

ಕದ ತೆರೆದ ಆಕಾಶ 


"ಒಂದು ಕಮಿಟ್ ಮೆಂಟಿನ  ಭಾರ ಇಳಿಸಿಕೊಂಡು ಇನ್ನೊಂದಕ್ಕೆ ಜಿಗಿಯುವ ಹೊತ್ತಿಗೆ ಎಷ್ಟೊಂದು ಮುಖವಾಡಗಳು ಕಳಚಿ ಬಿದ್ದಿರುತ್ತವೆ. ಇವೆಲ್ಲ ನಿನಗೆ ಅರ್ಥವಾಗುವ ವಿಷಯವಲ್ಲ''
ಹಾಗೆ ಹೇಳುತ್ತ ಒಂದು ನಿಟ್ಟುಸಿರು ಬಿಟ್ಟ ಆಕೆ ಡ್ರೈವರ್ ಸೀಟಿನಲ್ಲಿದ್ದ ನನ್ನನ್ನೊಮ್ಮೆ ಕಡೆಗಣ್ಣಿನಲ್ಲಿ ನೋಡಿದಳು. ಮಾತನ್ನು ಕೇಳಿಸಿಕೊಂಡನೇನೋ ಎಂಬ ಅನುಮಾನ ಆ ದೃಷ್ಟಿಯಲ್ಲಿತ್ತು. ನನ್ನ ಕಣ್ಣು ಮಾತ್ರ ಆಕೆಯ ತೋಳಿನ ಮೇಲಿತ್ತು. ಕಣ್ಣಂಚಿನ ನೋಟ ರೆಪ್ಪೆ ಬಾಗಿ ಮೇಲೇಳುವ ಹೊತ್ತಿಗೆ ಮಾಯವಾಗಿ ತನ್ನ ಸ್ಲೀವ್ಲೆಸ್ ತೋಳಿನ ತುಂಬಾ ವೇಲ್ ಹರಡಿಕೊಂಡಳು. ಹೊನ್ನ ಬಣ್ಣದ ತಿಳಿತಿಳಿ ಲೇಪನದಂತೆ ಇದ್ದ ಆ ಹೊದಿಕೆಗೆ ಅಲ್ಲಿನ ಅಕ್ಷರಗಳನ್ನು ಮುಚ್ಚಲು ಅಂಜಿಕೆ. ಆಕೆಯ ಗೋಧಿ ಬಣ್ಣದ ತೋಳು ಆ ಹಚ್ಚೆಯ ಬರಹಕ್ಕೆ ಇನ್ನಷ್ಟು ಹೊಳಪನ್ನು ಕೊಟ್ಟಿತ್ತು. ಅಲ್ಲಿದ್ದುದು 'ತಪಸ್ವಿ' ಎನ್ನುವ ಒಂದೇ ಒಂದು ಪುಟ್ಪುಟಾಣಿ ಪದ. ಮುದ್ದು ಮುದ್ದಾದ ಅಕ್ಷರ. ಕೆಲವು ಕಮಿಟ್.ಮೆಂಟುಗಳು  ಮುಖವಾಡ ಹೊದ್ದುಕೊಳ್ಳಲೂ ಸಾಧ್ಯವಿರದಷ್ಟು ವೈಬ್ರೆಂಟ್ ಆಗಿರುತ್ತವಾ ಎಂದು ಕೇಳಬೇಕು ಅನಿಸಿತು. ಆಕೆ ಮತ್ತೆ ಇಷ್ಟುದ್ದದ ಬಿಳಿಯ ಫೋನಿಗೆ ಕಿವಿಯಿಟ್ಟು ಕಾರಿನ ವಿಂಡೋ ಗ್ಲಾಸ್ ಇಳಿಸಿ ತೀರಾ ಸ್ಲೋ ಮೋಷನ್ನಲ್ಲಿ ಕತ್ತನ್ನು ಆಚೆಗೆ ತಿರುಗಿಸಿದಳು. ಆಕೆಯ ಕಿರುದನಿಯ ಮಾತುಗಳು ಹೊರಗಿನ ಸದ್ದಿನೊಂದಿಗೆ ಲೀನವಾದವು. ಆಕೆ ತನ್ನ ಉದ್ದಾನುದ್ದ ಮುಂಗುರುಳುಗಳನ್ನು ಒಂದೊಂದಾಗಿ ಹಿಡಿದೆಳೆದು ಭುಜದ ಮೇಲೆ ಹಾಸಿಕೊಳ್ಳುತ್ತಾ ಹೋದಂತೆ ತೋಳಿನೊಳಗಿದ್ದ ತಪಸ್ವಿಗೆ ಇರುಳು ಕವಿದಂತೆ ಭಾಸವಾಯಿತು. ಎರಡೇ ಎರಡು ಸೆಕೆಂಡು, ಮಳೆಯ ನೀರು ಒಳಗೆ ಒತ್ತರಿಸಿ ಬಂತು. ಎರಡೇ ಎರಡು ಹನಿಗಳು ಆಕೆಯ ಕೆನ್ನೆಯನ್ನು ಸವರಿ ಗಲ್ಲದ ತುದಿಯಲ್ಲಿ ಇನ್ನೆರಡು ಹನಿಗಳಾಗಿ ನೇತಾಡಿದವು. ಅದನ್ನು ಅಲ್ಲೇ ಆರಲು ಬಿಟ್ಟು, ಗ್ಲಾಸು ಏರಿಸಿ ಮತ್ತೆ ಆ ಕಡೆಯ ದನಿಗೆ ಕಿವಿಯಾದಳು.

ಮಾನ್ಯತಾ ಟೆಕ್ ಪಾರ್ಕ್ ನಿಂದ ಇಳಿ ಸಂಜೆಯ ಹೊತ್ತಿಗೆ ಹೊರಟಿದ್ದ ಕಾರು ಮೇಖ್ರಿ ಸರ್ಕಲಿನ ಅಂಡರ್ಪಾಸ್ ಸನಿಹಕ್ಕೆ ಬರುವ ಸಮಯಕ್ಕೆ ಇಡೀ ಟ್ರಾಫಿಕ್ ಒಂದೇ ಒಂದು ಸಾಸಿವೆ ಕಾಳಿನಷ್ಟು ಸರಿಸಲು ಸಾಧ್ಯವೇ ಇರದಷ್ಟು ನಿಶ್ಚಲವಾಗಿ ಹೋಗಿತ್ತು. ಈ ಉಬ್ಬು ಕೆನ್ನೆಯ, ನೀಳಕಾಯದ ಸುಂದರಿ ಒಂದು ಹನಿ ಪರಿಚಯವೂ ಇಲ್ಲದ ನನ್ನ ಮೇಲೊಂದು ಮಲ್ಲಿಗೆಯ ನಗೆಯನ್ನು ಚೆಲ್ಲಿ ಪ್ಲೀಸ್ ಲೆಟ್ ಮಿ ಇನ್ ಎನ್ನುತ್ತಾ ಕಾರಿನೊಳಗೆ ಸೇರಿಕೊಂಡು "ಕಂಪೆನಿ ಕ್ಯಾಬ್ ಬರಲಿಕ್ಕೆ  ಇನ್ನೂ ಅರ್ಧ ಗಂಟೆ ಕಾಯಬೇಕು, ಬಸವನಗುಡಿಯ ಬ್ಯೂಗಲ್ ಪಾರ್ಕ್ ಹಿಂಭಾಗದಲ್ಲಿ ನನ್ನ ಮನೆ, ರಾತ್ರಿ ಒಂದು ಪ್ರೋಗ್ರಾಂ ಇದೆ' ಎಂದಳು. ಕಾರು ಮ್ಯಾನತಾ ಪಾಕರ್ಿನ ಮೇನ್ ಗೇಟಿನಿಂದ ಹೊರಗೆ ಇಳಿಯುವ ಮುನ್ನವೇ ರಾತ್ರಿ ಒಂಭತ್ತು ಗಂಟೆಗೆ ತೀರ್ಥಹಳ್ಳಿಗೆ ಹೋಗಬೇಕು, ಗಜಾನನ ಬಸ್ಸಿಗೆ ಟಿಕೆಟ್ ಬುಕ್ ಮಾಡಿದ್ದೇನೆ ಎಂದು ಪ್ರಸನ್ನಮೂರ್ತಿ  ಹಿಂದಿನ ಸೀಟಿಗೆ ಸೇರಿಕೊಂಡಿದ್ದ. ಕಿಬ್ಬೊಟ್ಟೆಯಿಂದ ಉಸಿರು ಒತ್ತಿಕೊಂಡು ಬಂದ ಹಾಗೆ ಕರಿಮೋಡದ ಹಿಂಡು ಕರಗುತ್ತ ಕರಗುತ್ತ ತಿಳಿಯಾಗಿ ಇಳಿಯಲು ಶುರು ಮಾಡುತ್ತಿದ್ದುದನ್ನು ತನ್ನ ಕಡೆಗಣ್ಣಿನಿಂದ ನೋಡಿದ ತ್ಯಾಗಿ ತನ್ನ ಕರ್ರಗಿನ ಗಡ್ಡವನ್ನು ನೀವಿಕೊಳ್ಳುತ್ತ ಮೂವರ ಕಡೆಗೂ ನಿರ್ಲಿಪ್ತ ದೃಷ್ಟಿ ಬೀರಿದ್ದ. ಅಂದುಕೊಂಡಿದ್ದು ನಿಜವಾಯಿತು. ಧಾರೆಯಾಯಿತು ಮಳೆ. ಹೇಗೋ ಕಾರಿನೊಳಕ್ಕೆ ಸೇರಿಕೊಂಡಿದ್ದಾಗಿದೆ, ಇನ್ನು ನಾವೆಲ್ಲ ಸೇಫ್ ಅಂದುಕೊಂಡಿದ್ದರು ಮೂರೂ ಜನ. ಸಿಬಿಐ ಆಫೀಸು ದಾಟಿ ಫ್ಲೈಓವರ್ ಏರಿನಿಂದ ಇಳಿದು ಮೇಖ್ರಿ ಸರ್ಕಲಿನ ಇಳಿಜಾರಿಗೆ ಬರುತ್ತಲೇ ಇಡೀ ಏರಿಯಾಕ್ಕೆ ಮಂಜಿನ ಹೊದಿಕೆ ಹಾಸಿದಂತೆ ಕಾಣಿಸಿತ್ತು. ಹೆಡ್ಲೈಟ್ ಬೆಳಕಿಗೂ ಏನೇನೂ ಕಾಣಿಸುತ್ತಿಲ್ಲ. ವೈಪರ್ ಹೈಸ್ಪೀಡಿಗೆ ಇಟ್ಟು ಒಳಗಿನ ತೇವವನ್ನು ಒರೆಸಿ ಕಣ್ಣು ಕೀಲಿಸಿ ನೋಡಿದರೆ, ಮೂರು ಸಾಲಿನಲ್ಲಿ ವಾಹನಗಳೇ ತುಂಬಿಕೊಂಡಿವೆ. ಪಕ್ಕದ ರೋಡೂ ಈ ರೋಡಿನ ಪಡಿಯಚ್ಚು. ಎಲ್ಲವೂ ಸ್ತಬ್ಧ. ಒಂದೇ ಒಂದು ನರಪಿಳ್ಳೆಯೂ ರಸ್ತೆಯಲ್ಲಿ ನಿಂತಿರುವುದು ಕಾಣಿಸಲಿಲ್ಲ. ವಾಹನಗಳಲ್ಲಿದ್ದ ಜನ ಯಾರೂ ರೋಡಿಗೆ ಇಳಿಯುವ ಸ್ಥಿತಿ ಇಲ್ಲ.ಪೂರ್ತಾ ಪೂರ್ತಿ
 ಏರಿಯಾ ತೆಳ್ಳನೆ ಪರದೆ ಹೊದ್ದುಕೊಂಡಂತೆ ಏಕವಾಗಿ ಕಾಣಿಸುತ್ತಿತ್ತು.


"ಅಪ್ಪಾ ಎಲ್ಲಿದ್ದಿಯಾ, ಎಷ್ಟು ಹೊತ್ತಿಗೆ ಬರ್ತಿಯಾ?"
"ಇಲ್ಲ ಮಗನೇ ಆಫೀಸಿಂದ ಆಗ್ಲೇ ಹೊರಟಿದ್ದೇನೆ. ಸ್ವಲ್ಪ ಟ್ರಾಫಿಕ್ ಇದೆ. ಬಂದ್ಬಿಡ್ತೀನಿ ಇನ್ನೊಂದ್ ಅರ್ಧ ಗಂಟೆ"
"ಸರಿಯಪ್ಪಾ, ಆದಷ್ಟ್ ಬೇಗ ಬಂದ್ಬಿಡು. ಬರೋವಾಗಕೇಕ್ & ಸ್ಪೈಸ್ ನಲ್ಲಿ ಬರ್ತ್ ಡೇ ಕೇಕ್ ಆರ್ಡರ್ ಮಾಡಿದ್ದೀಯಲ್ಲ ತಕೊಂಡ್ ಬಾ, ಮರೀಬೇಡ ಮತ್ತೆ"
"ಆಯ್ತು ಕಂದಾ ಶೂರ್. ಅಮ್ಮಾ ಫೋನ್ ಮಾಡಿತ್ತಾ?"
"ಸಂಜೆ ಫೋನ್ ಮಾಡಿ ವಿಶ್ ಮಾಡಿದ್ಲು ಅಮ್ಮಾ, ತಮಿಳುನಾಡಿನ ಕಾರೈಕುಡಿಯಲ್ಲಿ ಇವತ್ತು ರಾಜ್ಯದ ಎಲ್ಲ ಅರಣ್ಯ ಅಧಿಕಾರಿಗಳ ಮೀಟಿಂಗ್ಯಿತ್ತಂತೆ. ಬ್ಯುಸಿ ಇದ್ದೀನಿ ಮಗಾ ಅಂದಿದ್ಲು,"
"ಹ್ಞಾಂ ಚಿರಂತನ್, ಆಕೆಯದ್ದು ದೊಡ್ಡ ಜವಾಬ್ದಾರಿ, ವೀಕೆಂಡ್ ನಲ್ಲಿ ಬೆಂಗಳೂರಿಗೆ ಬರುವಾಗ ನಿಂಗೆ ಗಿಫ್ಟ್ ತರ್ತೀನಿ ಅಂದಿದ್ದಾಳೆ."
"ಓಕೆ ಅಪ್ಪಾ ನೀನ್ ಮಾತ್ರ ಬೇಗ ಬಂದು ಬಿಡು, ಏಳೂವರೆಗೆಲ್ಲಾ ಬಂದುಬಿಡಿ ಅಂತ ಅಪಾಟರ್್ಮೆಂಟಿನ ನಾಲ್ಕೂ ಫ್ಲೋರಿನ ಫ್ರೆಂಡ್ಸಿಗೆ ಹೇಳ್ಬಿಟ್ಟೀನಿ
"ಓಹ್! ಅಷ್ಟ್ರೊಳಗೆ ಎಲ್ಲಾ ಟ್ರಾಫಿಕ್ ಕ್ಲೀಯರ್ ಆಗುತ್ತೆ ಡೋಂಟ್ ವರಿ ಪುಟ್ಟಾ, ಇಬ್ಬರಿಗೂ ಸ್ಪೆಷಲ್ ಊಟ ಪಾರ್ಸೆಲ್ ತರ್ತೀನಿ, ಕೇಕ್ ಒಂದು ತಂದರಾಯ್ತು. ಉಳಿದಿದ್ದೆಲ್ಲ ಬೆಳಿಗ್ಗೆನೇ ಅರೇಂಜ್ ಮಾಡಿದ್ದೆ. ಹೋಮ್ ವರ್ಕ್ ಮಾಡ್ತಾ ಇರು, ಅಷ್ಟ್ರೊಳಗೆ ಬಂದ್ಬಿಡ್ತೀನಿ, ಬೈ"
ಆ ಹೊತ್ತಿಗೇ ತ್ಯಾಗಿ ಆತಂಕದಿಂದ ದೂರವಾಣಿ ಸಂಭಾಷಣೆಯಲ್ಲಿ ತೊಡಗಿಕೊಂಡಿದ್ದ. ಕಾರಿನಲ್ಲಿದ್ದ ಎಲ್ಲರೂ ಆತನ ಪ್ರತಿ ಮಾತನ್ನೂ ಶಾಕ್ ಆದವರ ಹಾಗೆ ಕೇಳಿಸಿಕೊಳ್ಳುತ್ತಿದ್ದರು. ಎಲ್ಲರ ಕಣ್ಣಲ್ಲೂ ಭಯ. ತ್ಯಾಗಿ ಮಾತು ಮುಗಿಸುವುದನ್ನೇ ಉಳಿದವರು ಕಾದಿದ್ದರು. ಏನಾಯ್ತಂತೆ ಸರ್? ಪ್ರಸನ್ನಮೂರ್ತಿ ಒಮ್ಮೆಗೇ  ಮೈಮೇಲೆ ಬಿದ್ದವರ ಹಾಗೇ ಕೇಳಿದ, ತ್ಯಾಗಿ ಗಡ್ಡದ ಒಂದು ಕೂದಲು ನಿದಾನಕ್ಕೆ ಎಳೆದುಕೊಳ್ಳುತ್ತ,
"ಆಫೀಸಿಂದ ಹೇಮಂತ್ ಫೋನ್ ಮಾಡಿದ್ದ. ಬ್ಲಾಸ್ಟ್ ನೀಯರ್ ರಾಯಲ್ ಹೋಟೆಲ್!" ಅಂದ.
"ವಾಟ್! ಬ್ಲಾಸ್ಟಾ? ಆ ಹೋಟೆಲ್ ವಿಧಾನಸೌಧ ಹತ್ತಿರದಲ್ಲೇ ಇದೆಯಲ್ಲ" ಉದ್ಗಾರ ತೆಗೆದ ಜನ್ನಿ.
"ಹೌದು ಜನ್ನಿ, ದೇಶದ ಎಲ್ಲ ನ್ಯೂಸ್ ಚಾನೆಲ್ನಲ್ಲೂ ಅದೇ ಬರ್ತಿದೆಯಂತೆ. ರಾಯಲ್ ಹೋಟೆಲ್ ಪಕ್ಕ ಸಂದೇಶ್ ಚಾಟ್ಸ್ ಇದೆಯಲ್ಲಾ ಅಲ್ಲೇ ಬ್ಲಾಸ್ಟ್ ಆಗಿರೋದು. ನಾಲ್ಕು ಜನ ಸತ್ತಿದ್ದಾರೆ ಅಂತಿದಾನೆ. ಇಡೀ ಬೆಂಗಳೂರಲ್ಲಿ ಟ್ರಾಫಿಕ್ ಜಾಮ್ ಆಗಿದೆಯಂತೆ. ಈ ಮಳೆ ಬೇರೆ ಹ್ಯಾಗ್ ಸುರಿತಾ ಇದೆ ನೋಡು?"
"ಓಹ್ ಗಾಡ್, ನಾವು ಈ ಮಳೆ, ಟ್ರಾಫಿಕ್ ನಡುವೆ ಬಂಧಿಯಾಗ್ ಬಿಟ್ವಿ. ಈ ವೆಹಿಕಲ್ ಗಳನ್ನು ನೋಡಿದ್ರೆ ವಿಧಾನಸೌಧದ ನಾಲ್ಕೂ ದಿಕ್ಕು ಜಾಮ್ ಆಗಿರುವಂತೆ ಕಾಣ್ತಿದೆ. ವಾಟ್ ಎ ಮೆಸ್. ಅಟ್ ಲೀಸ್ಟ್ ಮಿಡ್ನೈಟ್ ಆಗತ್ತೆ ನಾವ್ ಮನೆ ತಲುಪೋದು ಕಿವಿಗೆ ಅಂಟಿದ್ದ ಮೊಬಲ್ ಅನ್ನು ತನ್ನ ತೊಡೆ ಮೇಲೆ ಇಟ್ಕೊಂಡು ಇಳಿಬಿದ್ದ ತುರುಬನ್ನು ತಿರುವಿ ತಿರುವಿ ಕಟ್ಟಿಕೊಳ್ಳುತ್ತ ಹೇಳಿದಳು ಆಕೆ.
"ಯೆಸ್, ನೀವ್ ಹೇಳೋದ್ ನಿಜ. ಬಟ್... ನಿಮ್ ಹೆಸ್ರು ಗೊತ್ತಾಗ್ಲಿಲ್ಲ?"
"ಜಾಹ್ನವಿ ಮಾಧವನ್, ಟೀಮ್ ಲೀಡರ್ ಐಬಿಎಂ"
"ಬಟ್ ಯೂ ಆರ್ ಸೇಫ್ ಹೀಯರ್...!" ಹಾಗೆ ಹೇಳಿದ ತ್ಯಾಗಿಯ ಕಣ್ಣಲ್ಲಿ ಕಣ್ಣಿಟ್ಟಳು ಜಾಹ್ನವಿ. ಸೇಫ್ ಅನ್ನೋ ಒಂದು ಪಾಯಿಂಟ್ ಕಿವಿಗೆ ಬೀಳುತ್ತಲೇ ತನ್ನ ಸುತ್ತಲೂ ಇರುವ ಮೂವರ ಕಣ್ಣುಗಳನ್ನೂ ದಿಟ್ಟಿಸಿ ನೋಡಬೇಕು ಅನ್ನಿಸಿತು. ಆ ಕ್ಷಣದಲ್ಲಿ ಧೈರ್ಯವೇ ಸಾಕಾಗಲಿಲ್ಲ. ಒಂದು ಅಸಾಧ್ಯ ಮೌನ ಆವರಿಸಿಬಿಟ್ಟಿತ್ತು ಕಾರಿನೊಳಗೆ, ಅದು ಅಸಹನೀಯವೂ ಅನಿಸಿತು. ಈಗಲೇ ಕಾರಿನಿಂದಿಳಿದು ಆಟೋ ಹಿಡಿದು ಹೊರಟು ಬಿಡಲೇ, ಕತ್ತಲು ಆವರಿಸಿ ಬಿಟ್ಟಿದೆ. ಮಳೆ ಧೋ ಅನ್ನುತ್ತಿದೆ. ಹಿಂದೆ, ಮುಂದೆ, ಅಕ್ಕಪಕ್ಕದ ಯಾವ ವಾಹನಗಳೂ ಅಲುಗಾಡುತ್ತಿಲ್ಲ. ಕಾರಿನಿಂದ ಕೆಳಗೆ ಕಾಲಿಡುವುದೂ ಸಾಧ್ಯವಿಲ್ಲ. ಓಹ್ ನಾನೀಗ ನಿಜಕ್ಕೂ ದಿಗ್ಬಂಧನಕ್ಕೆ ಒಳಗಾಗಿದ್ದೇನೆ. ಕಾರಿನ ಡ್ರೈವರ್ ಸೀಟಿನಲ್ಲಿ ಕುಂತಿರುವ ವ್ಯಕ್ತಿಯನ್ನು ಆಗೀಗ ನಾನು ಕೆಲಸ ಮಾಡುವ ಬ್ಲಾಕ್ನಲ್ಲಿ ನೋಡಿದ್ದು ಬಿಟ್ಟರೆ ಉಳಿದಿಬ್ಬರೂ ಅಪರಿಚಿತರು. ನಿಜಕ್ಕೂ ಸೇಫಾ? ಹೊರಗಿನ ಅಪಾಯ ಒಂದು ರೀತಿಯದ್ದಾದರೆ ಒಳಗೆ ಹೇಗಿದ್ದೇನೆ ಎಂದು ಯೋಚಿಸುವುದೇ ಭಯವೆನಿಸಿತು. ಇದು ನಾನೇ ಮಾಡಿಕೊಂಡ ಬ್ಲಂಡರ್ ಅಲ್ವಾ? ಛೆ ಎಂಥಾ ಕೆಲ್ಸ ಮಾಡ್ಬಿಟ್ಟೆ. ಸುಮ್ಮನೇ ಆಫೀಸ್ ಕ್ಯಾಬ್ಗೆ ಕಾಯಬೇಕಿತ್ತು. ರಾತ್ರಿ ಕಾರ್ಯಕ್ರಮಕ್ಕೆ ಬೇಗ ಹೋಗೋ ದಾವಂತದಲ್ಲಿ ಏನೆಲ್ಲ ಮಾಡಿಕೊಂಡೆ? ರಸ್ತೆಯಲ್ಲಿರುವ ಟ್ರಾಫಿಕ್ ನೋಡಿ ಒಮ್ಮೆ ಮನೆ ತಲುಪಿ ಬಿಡೋಣ ಅಂತ ಕಾರಿನೊಳಗೆ ತೂರಿಕೊಂಡಾಗ ಮನಸ್ಸು ನಿರಾಳ ಅನಿಸಿದ್ದು ಹೌದು. ಕಾರಿನ ಎಸಿ ತಂಪುಗಾಳಿ ಹಣೆಯ ಮೇಲಿನ ಬೆವರ ಹನಿಗಳನ್ನು ಒಣಗಿಸುತ್ತಿದ್ದಂತೆಯೇ ಒಳಗಿನ ಪರಿಸ್ಥಿತಿಯೂ ಅರಿವಾಗುತ್ತಾ ಬಂತು. ಮನಸ್ಸೊಳಗಿದ್ದ ನಿರಾಳತೆಯೂ ಮಾಯವಾಗಲು ಶುರುವಾಯಿತು. ಕಾರೊಳಗಿನ ಪುಟ್ಟ ಜಗತ್ತು ನಿದನಿಧಾನಕ್ಕೆ ದೊಡ್ಡಗಾಗಲು ಶುರುವಾದಂತೆ ಅನಿಸಿ... ಓಹ್ ಯಾಕೆ ಈ ಮನಸ್ಸು ಇಷ್ಟೊಂದು ತರ್ಕ ಮಾಡುತ್ತದೆ, ಹೀಗೆ ತರ್ಕ ಮಾಡುವುದನ್ನೆ ನಿಲ್ಲಿಸುವುದು ಸಾಧ್ಯವಿಲ್ಲವೇ ನನಗೆ ಅನ್ನಿಸಿ ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡಳು. ಮತ್ತೊಂದು ಕ್ಷಣದಲ್ಲೇ ಅದು ಸಾಧ್ಯವಾಗಲಿಲ್ಲ. ಕಾರಿನ ಮುಂಭಾಗದ ಬೃಹತ್ ಗಾಜಿನಲ್ಲೇ ತನ್ನ ಹಿಂದೆ ಕುಳಿತವರ ಮುಖಭಾವ ಪತ್ತೆ ಮಾಡಬಹುದಾ ಅಂತ ಹುಡುಕಾಡಿದಳು. ಉಹುಂ, ಪ್ರಖರವಾದ  ಹೆಡ್ಲೈಟ್ ಅದನ್ನು ಮರೆಸಿತ್ತು. ಪಕ್ಕದಲ್ಲಿರುವಾತ? ಆತನ ಧ್ಯಾನವೆಲ್ಲ ಸುರಿಯುವ ಮಳೆ ಮತ್ತು ನಿಂತೇ ಬಿಟ್ಟಂತಿರುವ ಟ್ರಾಫಿಕ್ ಮೇಲಿತ್ತು. ಕಾರಿನ ಕ್ಲಚ್ ಗಟ್ಟಿಯಾಗಿ ಅದುಮಿ ಸುಸ್ತಾದವನಂತೆ ಅನಿಸಿತು. ಇಂಗ್ಲೆಂಡಿನಿಂದ ಮರಳಿ ಬಂದ ಕಳೆದೆರಡು ತಿಂಗಳಲ್ಲಿ ಹತ್ತಾರು ಬಾರಿ ಆತನನ್ನು ನೋಡಿದ್ದೇನೆ. ಮತ್ತೆ ಆತನ ಬಗ್ಗೆ ತರ್ಕಕ್ಕೆ ಇಳಿಯುವುದು ಬೇಡವೆನಿಸಿತು. ಬಲಬದಿಯ ಸಾಲಿನಲ್ಲಿರುವ ಕಾರುಗಳನ್ನು ನೋಡುವ ನೆಪದಲ್ಲಿ ಮಿಂಚಿನಂತೆ ತಿರುಗಿ ಅವನ ಕಣ್ಣು ಸಾಚವಾ ಅಂತ ಅಳೆದಳು. ತಾನು ಪ್ರಸನ್ನಮೂರ್ತಿ ಎಂದು ಪರಿಚಯ ಮಾಡಿಕೊಂಡನಲ್ಲವೇ ಅವನು? ಆತ ನಿಜಕ್ಕೂ ಪ್ರಸನ್ನಚಿತ್ತನಾಗಿರಲಿಲ್ಲ. ಗಾಢ ಚಿಂತೆಯಲ್ಲಿ ಮುಳುಗಿದ್ದ. ಆತನಿಂದ ದೊಡ್ಡ ತೊಂದರೆ ಸಂಭವಿಸುವುದು ಸಾಧ್ಯವಿರಲಿಲ್ಲ.
ಆದರೆ ನನ್ನ ಹಿಂಭಾಗದಲ್ಲೇ ಕುಳಿತಿದ್ದಾನಲ್ಲ ಆತ? ಸೇಫು ಗೀಪು ಅಂತ ಅವನೇ ಏನು ಹೇಳೋದು. ಸ್ವಲ್ಪ ಅಹಂಕಾರ ಇರಬಹುದಾ? ಹೋಗಲಿ ಹೆಣ್ಣುಮಕ್ಕಳನ್ನು ಕಂಡರೆ ಕೆಲ ಗಂಡಸರು ಮಹಾರಕ್ಷಕರಂತೆ ವರ್ತಿಸುತ್ತಾರೆ. ಅದೇ ಗಂಡಸು ಮನಸ್ಸಿನಿಂದ ಏನೋ ಹೇಳಿರಬಹುದು. ಆದರೂ ಅಂತರಂಗದ ಭಯ ಮಾಸಲಿಲ್ಲ. ಆತ ದುರುಗುಟ್ಟಿ ನೋಡುತ್ತಿದ್ದಾನೆ ಎಂಬ ಭಾವದಿಂದಲೇ ಕುತ್ತಿಗೆಯ ಹಿಂಭಾಗದ ಚರ್ಮಕ್ಕೆ ಹೆಚ್ಚು ಪ್ರಜ್ಞೆ ಬಂದಂತೆ ಅನ್ನಿಸಿ ದುಪ್ಪಟ್ಟಾ ಎಳೆದುಕೊಂಡಳು. ಯೋ ದೇವರೆ, ಮನಸ್ಸು ತರ್ಕಕ್ಕೆ ಪಕ್ಕಾಗುವುದನ್ನು ನಿಲ್ಲಿಸಿ ಬಂದುದನ್ನು ಎದುರಿಸುವುದಕ್ಕೆ ಸಜ್ಜಾಗುವುದು ಒಳಿತೆನಿಸಿತು.
ಸೇಫ್ ಇನ್ ದಿ ಸೆನ್ಸ್... ಈ ಜನ್ನಿ ನಿಮ್ಮನ್ನು ಕಾರಿನೊಳಗೆ ಹತ್ತಿಸಿಕೊಳ್ಳದೇ ನೀವು ಯಾವುದೋ ಆಟೋ ಹತ್ತಿದ್ದರೆ ಎಂಥಾ ಅಪಾಯವಿತ್ತು, ಯೋಚನೆ ಮಾಡಿ ಮೇಡಂ ಅನ್ನುತ್ತಾ ತನ್ನ ಪಕ್ಕದಲ್ಲೇ ಇದ್ದ ಕಪ್ಪಗಿನ ಜಾಕೆಟ್ನ್ನು ಮುಂದಿನ ಸೀಟಿನೆಡೆಗೆ ಹಿಡಿದು, ವೇರ್ ದಿಸ್, ಡೋಂಟ್ ಬೀ ಪ್ಯಾನಿಕ್. ಈ ಕ್ಷಣದಲ್ಲಿ ನೀವು ಹೊರಗಡೆ ಕಾಲಿಡುತ್ತೇನೆ ಎಂಬ ಯೋಚ್ನೆ ಬಿಟ್ಬಿಡಿ, ಅದು ಮೋಸ್ಟ್ ಡೇಂಜರಸ್. ಬಾಂಬ್ ಸ್ಫೋಟ ಬೇರೆ ಆಗಿದೆ, ಯಾವ ಕ್ಷಣದಲ್ಲಿ ಎಲ್ಲಿ ಏನಾಗತ್ತೋ ಅಂದ ತ್ಯಾಗಿ. ಯಾವ ಭಿಡೆಯನ್ನೂ ತೋರದೇ ಜಾಕೆಟ್ನ್ನು ಹಾಕ್ಕೊಂಡು ಕುಂತ ಸೀಟಿನಲ್ಲೇ ಮತ್ತೆ ಸರ್ಕೊಂಡು ಕುಂತ ಜಾಹ್ನವಿಗೆ ತ್ಯಾಗಿಯ ಮಾತು ಕೇಳಿ ಒಂದು ಕ್ಷಣಕ್ಕೆ ಅಚ್ಚರಿಯಾಯಿತು. ನನ್ನ ಮನಸ್ಸಿನ ತರ್ಕವನ್ನು ಈ ಮನುಷ್ಯ ಹ್ಯಾಗೆ ಅರ್ಥ ಮಾಡಿಕೊಂಡ  ಅನ್ನಿಸಿತು. ಹೆಣ್ಣುಮಕ್ಕಳೆಲ್ಲ ಹೀಗೇ ಯೋಚ್ನೆ ಮಾಡೋದು ಅಂದ್ಕೊಂಡಿದ್ದಾನಾ ಈ ಮನುಷ್ಯ? ಆದರೂ ಅದನ್ನು ತೋರಗೊಡದೇ ಕಿಟಕಿ ಗ್ಲಾಸಿನ ಮೇಲೆ ಕೆನ್ನೆಯನಿಟ್ಟು ಕೈಯಿಂದ ಸವರಿ, ಸವರಿ ಕಣ್ಣನ್ನು ನಿರುಕಿಸಿ ಹೊರಗೆ ಇಣುಕುವ ಪ್ರಯತ್ನ ಮಾಡಿದಳು, ಪಕ್ಕದ ವಾಹನಗಳ ಮೇಲೆ ಬೀಳುತ್ತಿದ್ದ ಜಲಧಾರೆಯಲ್ಲಿ ಮಳೆಯ ಬಿಳಲುಗಳೇ ಕಾಣಿಸಲಿಲ್ಲ. ಗಾಳಿಯದೊಂದು ಸಣ್ಣ ಅಲೆಯೂ ಇಲ್ಲದೆ ಹ್ಯಾಲೋಜಿನ್ ಬೆಳಕಿನ ಅಡಿಯಲ್ಲಿ ನಿಂತ ವಾಹನದ ಮೇಲೆ ಬೀಳುತ್ತಿದ್ದ ಮಳೆಯ ಭೀಕರತೆ ಕಂಡು ಭಯದ ಮಿಂಚು ಎದೆಯಲ್ಲಿ ಹಾದು ಹೋಯಿತು. ಒಂದು ರೀತಿಯಲ್ಲಿ ಕಾದ ಕೆಂಡದ ಮೇಲೆ ನೀರು ಹುಯ್ದು ಸುತ್ತಲಿನ ತಾಣವೆಲ್ಲ ಕೆಂಪಗಾಗಿದೆಯಲ್ಲ ಅನ್ನುವ ಭ್ರಾಮಕಲೋಕ ಸೃಷ್ಟಿಯಾಗಿತ್ತು. ಎದುರಿನ ಗ್ಲಾಸಿಗೂ, ಪಕ್ಕದ ಗ್ಲಾಸಿಗೂ ಗಾಳಿಯೊಂದಿಗೆ ಮಳೆ ಬೀಸಿ ಹೊಡೆದಾಗ ಎಲ್ಲರಿಗೂ ಮೈಗೇ ಬಂದು ಅಪ್ಪಳಿಸಿದಂತೆ ಅನಿಸುತ್ತಿತ್ತು.


ಇಂತಹ ಸ್ಥಿತಿಯಲ್ಲಿ ಬಾಂಬ್ ಸ್ಪೋಟವಾದ ಸ್ಥಳದ ಪರಿಸ್ಥಿತಿ ಹೇಗಿರಬಹುದು, ಎಂದು ಯೋಚಿಸಿದಳು. ಗೆಳತಿ ಸಾಗರಿಕಾಳ ಮನೆ ಇಲ್ಲೇ ಮಲ್ಲೇಶ್ವರಂ ಹದಿನೆಂಟನೇ ಕ್ರಾಸಿನಲ್ಲಿದೆ. ಈ ಮೇಖ್ರಿ ಸರ್ಕಲ್ಲಿನ ಸೊಂಟಕ್ಕೆ ಅಂಟಿಕೊಂಡಂತೇ ಇದೆ. ಆದರೆ ಅಲ್ಲಿಗೆ ಹೋಗುವುದಾದರೂ ಹೇಗೆ, ಮಲ್ಲೇಶ್ವರಂ ಮಾತು ಹಾಗಿರಲಿ, ಪಕ್ಕದ ಸದಾಶಿವನಗರವೇ ಮೈಲುಗಟ್ಟಲೆ ದೂರವೆನಿಸಿತು. ತನ್ನ ಸ್ಮಾಟರ್್ಫೋನ್ನಲ್ಲಿ ನೆಟ್ ಆನ್ ಮಾಡಿ ಏನಾದರೂ ನ್ಯೂಸ್ ಇದ್ಯಾ ಅಂತ ಸಚರ್್ ಮಾಡುವ ಪ್ರಯತ್ನವೂ ಸಫಲವಾಗಲಿಲ್ಲ. ನೆಟ್ವಕರ್್ ನಿಲುಕಲಿಲ್ಲ. ಹೀಗೆ ನಾಲ್ಕೂ ಮಂದಿ ಫೋನ್ನಲ್ಲಿ ಮಾತನಾಡುವ, ಹೊಸ ಸುದ್ದಿ ಸಿಕ್ಕೀತೇನೋ ಎಂದು ಚಡಪಡಿಸುತ್ತಿದ್ದುದು ಸಹಜವೇ ಆಗಿತ್ತು. ಪ್ರಸನ್ನಮೂರ್ತಿ ನಿಜಕ್ಕೂ ಟೆನ್ಸ್ ಆಗಿದ್ದ. ಮಳೆ ಮತ್ತು ಸ್ಫೋಟದಿಂದ ಬೆದರಿ ಹೋಗಿರುವ ಬೆಂಗಳೂರಿನಿಂದ ರಾತ್ರಿ ತೀರ್ಥಹಳ್ಳಿಗೆ ಬಸ್ಸು ಹೊರಡುವುದೇ ಸಾಧ್ಯವಿಲ್ಲ ಅನ್ನುವುದು ಆತನಿಗೆ ಖಚಿತವಾಗಿತ್ತು.
"ಯಾವ ಮಾತನ್ನು ಯಾವಾಗ ಕೇಳಬೇಕು ಎಂಬ ಕನಿಷ್ಠ ಪ್ರಜ್ಞೆಯೂ ನಿನಗಿಲ್ಲ. ಬರುವಾಗ ಈರುಳ್ಳಿ, ಬೆಳ್ಳುಳ್ಳಿ, ಟಮಾಟಿಹಣ್, ಶುಂಠಿ ತಕಬಾ ಅಂತಿಯಲ್ಲ, ಹೊರಗೆ ಕೆಂಡದಂತಹ ಮಳೆ ಬೀಳ್ತಿದೆ ಅನ್ನೋದಾದ್ರೂ ಗೊತ್ತಾ ನಿಂಗೆ?"
"ಏನ್ ನೀವು, ಇಡೀ ಮಲೆನಾಡೇ ಅಡಿಮೇಲಾಗೋ ಹಾಗೆ ಮಳೆ ಬಿದ್ದಿದ್ ನೋಡಿಲ್ವಾ ನಾನು? ನಿಮ್ದು ತೀರ್ಥಹಳ್ಳಿ, ನಂದು ಆಗುಂಬೆ. ಅದೆಂಥಾ ಮಳೆ ಇತ್ತು ನಮ್ ಮದ್ವೆ ದಿನ? ಆದ್ರೂ ನಮ್ಮಪ್ಪ ಮದ್ವೆ ದಿಬ್ಬಣವನ್ನ ತೀರ್ಥಹಳ್ಳಿಗೇ ತಕೊಂಡು ಬರಲಿಲ್ವಾ? ಆ ಮಳೆಯಲ್ಲಿ ನಾವ್ ಮದ್ವೆ ಆಗಿದ್ದೇ ಸುಳ್ಳಾ ಹಾಂಗಾದ್ರೆ? ಮದ್ವೆ ದಿನ ರಾತ್ರಿ ನೆನ್ಸಕೊಳ್ಳಿ, ಮ್ಯಾಲ್ ಇರೋ ನಕ್ಷತ್ರವೆಲ್ಲ ನಿಮ್ ಕೋಣೆಯೊಳಗೇ ಬಂದಂಗೆ ಮಿಂಚ್ತಿತ್ತಲ್ಲ, ಹಾಂಗಿದ್ರೂ ನಾವ್ ಸೇರಿದ್ದು ಸುಳ್ಳಾ..."
"ಅದೇ ರಮಣಿ ನಾನು ಹೇಳಿದ್ದೂ, ಹಾಗೇ ಅಕಾಲಿಕ ಮದ್ವೆ ಆಗಿದ್ದರಿಂದ್ಲೇ ನೀ ಹೀಗ್ ಮಾತಾಡ್ತಿರೋದು. ನಮ್ ಮದ್ವೆ ಆಗಿದ್ ದಿನ ಬಾಂಬ್ ಸ್ಫೋಟವೊಂದು ಆಗಿರ್ಲಿಲ್ಲ ನೋಡು... ಜೀವನದಲ್ಲಿ ಯಾವ ಸ್ಫೋಟವೂ ಇಲ್ಲದೇ ಜರ್ಝರಿತ ಆಗಿರೋನು ನಾನು... ಹಲೋ ಹಲೋ..." ಯಾವುದೋ ಒಂದು ಕಡೆಯಿಂದ ಫೋನ್ ನೆಟ್  ಕಟ್ ಆಗಿತ್ತು. ರಮಣೀಪ್ರಸನ್ನಳಿಗೆ ಸ್ಫೋಟದ ಸುದ್ದಿ ಗೊತ್ತಾಗಿಲ್ಲ ಅನ್ನುವುದು ಖಾತ್ರಿಯಾಗಿತ್ತು. ಆಕೆ ಮನೇಲಿ ಟೀವಿ ನೋಡಿರುವ ಚಾನ್ಸೂ ಇರಲಿಲ್ಲ. ಡೆಡ್ ಆಗಿರುವ ಫೋನ್ಗೆ ಮತ್ತೆ ಜೀವ ತುಂಬುವ ಪ್ರಯತ್ನಕ್ಕೆ ಮೂರ್ತಿ ಮುಂದಾಗಲಿಲ್ಲ. ಅದೇ ಹೊತ್ತಿಗೆ ಕರೆಂಟೂ ಆಫ್ ಆಗಿ ಇಡೀ ಪ್ರದೇಶ ಆವರಿಸಿದ ಕಾರ್ಗತ್ತಲ ಕಾವಳ. ಜನ್ನಿ ಕಾರೊಳಗಿನ ಬೆಳಕು ಆನ್ ಮಾಡಿದ. ಹೊರಗೆ ಆಗೀಗ ಫಳ್ ಅಂತ ಮಿಂಚಿದಾಗ ನಾಲ್ಕೂ ಮಂದಿ ಗಾಜಿನಾಚೆಗಿನ ದೃಶ್ಯವನ್ನು ನೋಡಲು ಒಮ್ಮೆಗೇ ಡ್ಯಾಶ್ಬೋಡರ್್ ಕಡೆಗೆ ನುಗ್ಗುತ್ತಿದ್ದರು. ವಾಹನಗಳ ದಟ್ಟ ಸಾಲು ಮತ್ತು ಅದರ ಮೇಲೆ ಬೀಳುತ್ತಲೇ ಇರುವ ಮಳೆಯನ್ನು ನೋಡಿ ದಿಗಿಲಾಗಿ ಒಬ್ಬರಿಗೊಬ್ಬರು ದಿಟ್ಟಿಸುತ್ತಿದ್ದರು. ಅಷ್ಟೊಂದು ವಾಹನಗಳು ನಿಂತಿದ್ದರೂ ಒಂದೇ ಒಂದು ಸಣ್ಣ ಶಬ್ಧವೂ ಇಲ್ಲ. ವಾಹನಗಳ ಒಳಗಿದ್ದ ಅಷ್ಟೂ ಜನಕ್ಕೆ ಗೊತ್ತಾಗಿ ಬಿಟ್ಟಿದೆಯಾ, ಮುಂದೊಂದು ಬಾಂಬ್ ಸ್ಫೋಟವಾಗಿದೆ ಮತ್ತು ಎಲ್ಲವೂ ನಿಶ್ಚಲವಾಗಿದೆ ಎಂದು? ಒಳಗೆ ಎಷ್ಟು ಜನ ಯಾವ ಜರೂರಿಗೆ ಸಿಕ್ಕಿ ದಿಗಿಲಾಗಿದ್ದಾರೋ, ಯಾವ ಚಡಪಡಿಕೆ, ತಹತಹಿಕೆಗೂ ತಗ್ಗದೇ ನಿರಂತರವಾಗುತ್ತಿದೆ ವರ್ಷಧಾರೆ. ಜನ್ನಿಯ ಕಾರಿನಲ್ಲೋ ಸುದೀರ್ಘ ಮೌನ.
"ಅಪ್ಪಾ ನೀ ಎಲ್ಲಿದ್ದಿಯಾ ಇನ್ನೂ? ಎಂಟೂವರೆಯಾಯ್ತು. ಅಪಾರ್ಟ್ ಮೆಂಟಲ್ಲಿ ಕರೆಂಟೂ ಇಲ್ಲ, ಮಳೆ ಎಷ್ಟೊಂದು ಬರ್ತಾ ಇದೆ. ಎಲ್ಲಾ ಫ್ರೆಂಡ್ಸೂ ಬಂದಿದ್ದಾರೆ, ನೀ ಬರ್ತಿ ಅಂತ ಕ್ಯಾಂಡಲ್ ಹಚ್ಕೊಂಡು ಕಾಯ್ತಾ ಇದ್ದೇವೆ." ಚಿರಂತನ್ ಒಂದೇ ಉಸಿರಿನಲ್ಲಿ ಮಾತಾಡುತ್ತಿದ್ದ.
"ಸ್ಸಾರಿ ಚಿರು, ಇಲ್ಲಿ ಕಂಪ್ಲೀಟ್ ಟ್ರಾಫಿಕ್ ಜಾಮ್ ಆಗಿದೆ. ವಿಧಾನಸೌಧ ಹತ್ರ ಬಾಂಬ್ ಸ್ಫೋಟ ಆಗಿದೆಯಂತೆ, ತುಂಬಾ ಲೇಟ್ ಆಗಬಹುದು ಪುಟ್ಟ... ಆಯಾಮ್ ರಿಯಲೀ ಸಾರಿ."
"ಅಯ್ಯೋ ಬಾಂಬ್ ಸ್ಫೋಟಾನಾ ಅಪ್ಪಾ? ಸಾರಿ ಯಾಕ್ ಕೇಳ್ತಿಯಾ, ನೀನ್ ಸೇಫ್ ಆಗಿ ಮನೆಗೆ ಬಾ. ಫ್ರೆಂಡ್ಸ್ ಎಲ್ಲ ಸೇರಿ ಕೇಕ್ ತಂದಿದ್ದಾರೆ. ನೀನ್ ಜೋಪಾನಪ್ಪಾ..." ಫೋನ್ ಮತ್ತೆ ಕಟ್ ಆಯಿತು. ಜನಾರ್ಧನ್ ಮತ್ತೆ ಫೋನ್ ಮಾಡುವ ಪ್ರಯತ್ನ ಮಾಡುತ್ತಿದ್ದ.
ಜನ್ನೀ...! ಥಳ್ ಥಳ್ ಎಂಬ ಶಬ್ಧ ಬರುತ್ತಿದ್ದುದು ನೋಡಿ ನಿಧಾನಕ್ಕೆ ಕಾರಿನ ಡೋರ್ ತೆರೆದು ನೋಡಿದ ತ್ಯಾಗಿ ಸಣ್ಣಗೆ ಕೂಗಿದ.
ನೀರು ತುಂಬಿಕೊಳ್ಳುತ್ತಿದೆ ಕಾರಿನ ಕೆಳಗೆ!
ಓಹ್ ಶಟ್! ಅಂತ ಮೊದಲು ಉದ್ಗಾರ ತೆಗೆದವಳು ಜಾಹ್ನವಿ. ಮಳೆ ನೀರು ಕಾರಿನ ಒಳಕ್ಕೂ ಪ್ರವೇಶ ಮಾಡುವುದು ಖಚಿತವಾಗಿತ್ತು. ಒಮ್ಮೆಗೇ ಕಾರಿನೊಳಗೆ ಗಡಿಬಿಡಿ, ದಿಗಿಲು. ತಕ್ಷಣ ನಾಲ್ಕೂ ಜನ ತಮ್ಮ ಸೀಟಿನ ಮೇಲೆ ಚಕ್ಕಲಮಕ್ಕಲ ಹಾಕಿ ಕುಂತರು. ಅಂಡರ್ಪಾಸಿನ ಕೆಳಗೆ ಕಾರು ನಿಂತಿದ್ದೇ ದೊಡ್ಡ ಅಪಾಯವೆನಿಸಿತು. ಹೀಗೆ ನೀರು ತುಂಬಿಕೊಳ್ಳಲು ಶುರು ಮಾಡಿದರೆ ಮುಂದೇನು ಎಂದು ಒಬ್ಬರಿಗೊಬ್ಬರು ನೋಡಿಕೊಂಡರು. ಕಾರು ನೀರಿನಲ್ಲಿ ಮುಳುಗಲು ಬಹಳ ಹೊತ್ತು ಬೇಕಾಗುವುದಿಲ್ಲ ಎಂಬುದು ಅವರಿಗೆ ಖಚಿತವಾಗಿತ್ತು.
ಅಲ್ಲಿ ನೋಡಿ! ಅಂದ ತ್ಯಾಗಿ. ಹಾಗೆಂದು ಹೇಳಿ ಆತ ತೋರಿಸಿದ್ದು ಕೆಲವೇ ಮಾರು ದೂರ ನಿಂತಿದ್ದ ಬಿಎಂಟಿಸಿ ಬಸ್ಸುಗಳನ್ನು. ಅಪಾಯ ಸುತ್ತಲೂ ಬೇಲಿ ಹಾಕಿತ್ತು. ನೀರು ಏರುತ್ತಲೇ ಇತ್ತು. ಅದು ಕಾರನ್ನು ಆವರಿಸಿಕೊಳ್ಳದಿರುವ ಸಾಧ್ಯತೆಯೇ ಇರಲಿಲ್ಲ. ತ್ಯಾಗಿ ಒಂದು ಕ್ಷಣವೂ ಯೋಚನೆ ಮಾಡಲಿಲ್ಲ. ಕಾರಿನಿಂದ ಇಳಿದು ಮೊದಲು ಜಾಹ್ನವಿಯನ್ನು ಬಸ್ಸು ಹತ್ತುವಂತೆ ಆದೇಶದ ದನಿಯಲ್ಲಿ ಹೇಳಿದ. ಇವತ್ತಿನ ದಿನಕ್ಕೆಂದೇ ಖರೀದಿಸಿದ್ದ ತನಗಿಷ್ಟವಾದ ದಟ್ಟಹಸಿರಿನ ಸೀರೆ ಹಾಕಿಕೊಳ್ಳದೇ ಚೂಡಿ ಹಾಕ್ಕೊಂಡು ಬಂದಿದ್ದು ಎಷ್ಟು ಒಳ್ಳೆಯದಾಯ್ತು ಅಂದುಕೊಂಡಳು ಜಾಹ್ನವಿ. ಇಲ್ಲದಿದ್ದರೆ ಬಸಿರೊಡೆದ ವರ್ಷವತಿಯ  ಕೆಂಪನೆಯ ಹರಿವಿನಲ್ಲಿ ಕೊಚ್ಚಿ ಹೋಗುತ್ತಿದ್ದೆ. ತ್ಯಾಗಿ ಕೊಟ್ಟ ಜಾಕೆಟ್ ಹಾಕೊಂಡಿದ್ದು ನಿಜಕ್ಕೂ ಸೇಫ್ ಅನಿಸಿತು. ನಾಲ್ಕೂ ಮಂದಿ ಬಸ್ಸಿನ ಬಾಗಿಲು ಬಳಿ ಬಂದು ತಟಪಟನೆ ಬಡಿದರು, ಕೂಗಿಕೊಂಡರು. ಒಳಗಿದ್ದ ಚಾಲಕನಿಗೆ ಅದು ಕೇಳಿಸಲೇ ಇಲ್ಲವೋ, ಆತ ಬಾಗಿಲು ತೆರೆಯಲೇ ಇಲ್ಲ. ಇನ್ನೂ ನಾಲ್ಕು ಮಾರು ಹಿಂದೆ ಇನ್ನೊಂದು ಬಸ್ಸು ನಿಂತಿತ್ತು. ಅಷ್ಟೂ ಮಂದಿ ಅಲ್ಲಿಗೆ ಧಾವಿಸಿದರು. ನೀರು ಹರಿದು ಬರುತ್ತಲೇ ಇತ್ತು. ಅಲ್ಲಿಯ ವರೆಗೆ ನಡೆದು ಹೋಗುವುದು ಕಷ್ಟದ ಕೆಲಸವಾಗಿತ್ತು. ಇನ್ನೊಂದು ಬಸ್ಸಿನ ಬಾಗಿಲೂ ತೆರೆದುಕೊಳ್ಳಲಿಲ್ಲ. ತ್ಯಾಗಿ ನೇರ ಬಸ್ಸಿನ ಮುಂಭಾಗಕ್ಕೆ ಬಂದು ಅದರ ಬಾನೆಟ್ ಹಿಡಿದು ಮೇಲಕ್ಕೆ ಹತ್ತಿ ಗ್ಲಾಸನ್ನೊಮ್ಮೆ ಬಡಿದು ಡ್ರೈವರ್ಗೆ ಬಾಗಿಲು ತೆರಿ ಎನ್ನುವಂತೆ ಗದರಿಸಿದ. ಅದೇ ಹೊತ್ತಿಗೆ ಪಳ್ ಅಂತ ಮಿಂಚಿತು. ಡ್ರೈವರ್ ನಿಜಕ್ಕೂ ಬೆಚ್ಚಿ ಬಿದ್ದಿದ್ದ. ಏನಾಗುತ್ತಿದೆ ಎಂಬುದು ಆತನಿಗೆ ಗೊತ್ತಾಗಲಿಲ್ಲ. ಒಮ್ಮೆಗೇ ಹೆಡ್ಲೈಟು, ಬಸ್ಸೊಳಗಿನ ಲೈಟು ಎರಡನ್ನೂ ಅದುಮಿದ. ಬಸ್ಸಿನ ಡೋರ್ ಕೂಡ ತೆರೆದುಕೊಂಡಿತು. ಅಷ್ಟೂ ಮಂದಿ ಒಳಕ್ಕೆ ನುಗ್ಗಿಕೊಂಡರು.
ಯಾರು ನೀವು? ಎನ್ನುತ್ತಾ ಡ್ರೈವರ್ ಎದ್ದು ಬಂದು ತ್ಯಾಗಿಯ ಕೊರಳಪಟ್ಟಿಗೆ ಕೈ ಹಾಕಿದ.  ಟೆರರಿಸ್ಟ್ ಅಲ್ಲ ಎನ್ನುತ್ತ ತ್ಯಾಗಿ ಸಂಪೂರ್ಣ ತೊಯ್ದು ಹೋಗಿದ್ದ ಪರ್ಸಿನಿಂದ ಕಂಪೆನಿ ಕಾರ್ಡ್ ತೋರಿಸಿದ. ಡ್ರೈವರ್ ಸೇರಿದಂತೆ ಬಸ್ಸಿನಲ್ಲಿದ್ದ ಅಷ್ಟೂ ಜನ ನಿಟ್ಟುಸಿರುಬಿಟ್ಟರು. ತನ್ನ ಜಾಕೆಟ್ನ್ನೊಮ್ಮೆ ಹಿಡಿದೆಳೆದು ಕೊಡವಿದ ಜಾಹ್ನವಿ ತ್ಯಾಗಿಯ ಕಡೆಗೆ ಕೃತಜ್ಞತೆಯ ದೃಷ್ಟಿ ಬೀರಿದಳು, ಒಂದು ಸಂಕೀರ್ಣ ಸ್ಥಿತಿಯಲ್ಲಿ ಒಬ್ಬ ಮನುಷ್ಯನ ಬಗ್ಗೆ ಏನೇನು ತರ್ಕ, ಜಿಜ್ಞಾಸೆಗೆ ಬಿದ್ದುಬಿಡುತ್ತೇವಲ್ಲ ಅನಿಸಿತು. ಇಷ್ಟಾಗುತ್ತಲೇ ಮತ್ತೆ ಬಸ್ಸಿನ ಬಾಗಿಲು ಬಡಿಯುವ ಸದ್ದು. ಸುತ್ತಮುತ್ತ ಕಾರು, ಸಣ್ಣಪುಟ್ಟ ವಾಹನಗಳಲ್ಲಿದ್ದ ಜನವೆಲ್ಲ ಬಸ್ಸಿನೊಳಕ್ಕೆ ನುಗ್ಗಿದ್ದರು. ಇದ್ದಕ್ಕಿದ್ದಂತೆ ಬಸ್ಸು ಭರ್ತಿಯಾಗಿ ಹೋಯಿತು. ಹಾಗೆ ಅಲ್ಲಿ ನಿಂತಿದ್ದ ಎಲ್ಲ ಬಸ್ಸುಗಳೂ ಜನರಿಂದ ಗಿಜಿಗಿಜಿ. ಡ್ರೈವರ್ ಸೀಟಿನ ಪಕ್ಕದಲ್ಲೇ ನಿಂತಿದ್ದ ಜನ್ನಿ,  ಪ್ರಸನ್ನಮೂರ್ತಿ, ತ್ಯಾಗಿ ಮತ್ತು ಜಾಹ್ನವಿ ತಾವು ಕುಂತಿದ್ದ ಕಾರು ಎಲ್ಲಿದೆ ಎಂದು ಮತ್ತೆ ಮತ್ತೆ ಇಣುಕಿ ನೋಡಿದರು. ಮುಂಭಾಗದಲ್ಲಿ ನಿಂತಿದ್ದ ಸಾಲು ಸಾಲು ಕಾರುಗಳು, ಕಂಠಪೂತರ್ಿ ನೀರು. ಜನ್ನಿಯ ಕಾರು ಗೋಚರಕ್ಕೆ ಬೀಳಲಿಲ್ಲ. ಉಳಿದ ಕಾರು, ಟೋಗಳು ಯಾವುದೇ ಕ್ಷಣದಲ್ಲಿ ದೃಷ್ಟಿಗೆ ಗೋಚರಿಸದಂತೆ ಮಾಯವಾಗುವುದು ಖಚಿತ ಅನ್ನಿಸಿ ಇಂತಹ ಸನ್ನಿವೇಶದಲ್ಲೂ ಮನುಷ್ಯರ ನಡುವೆ ಸೇಫ್ ಆಗಿರೋ ಬಗ್ಗೆ ತರ್ಕಕ್ಕೆ ಬಿದ್ದೆನಲ್ಲ, ಎಂಥಾ ದಡ್ಡತನ ನನ್ನದು ಎಂದು ನಡುಗಿದಳು ಜಾಹ್ನವಿ. ಕಣ್ಣೆದುರೇ ಬದುಕು ಮುಳುಗಿ ಹೋಗುತ್ತಿದ್ದ ಕ್ಷಣದಲ್ಲಿ ಒಬ್ಬ ಮನುಷ್ಯ ಖಚಿತ ನಿರ್ಧಾರ ಕೈಗೊಳ್ಳದೇ ಇದ್ದಿದ್ದರೆ ಬದುಕು ಕೇವಲ ಪೆಪ್ಪರ್ ಸ್ಪ್ರೇಗೆ ಸೀಮಿತವಾಗಿ ಬಿಡುತ್ತಿತ್ತು.


"ಬಟ್ ನಿಮ್ ಹೆಸರು ಜಾಹ್ನವಿ ಮಾಧವನ್ ಅನ್ನೋದು ನಿಜಾನಾ?"
"ವಾಯ್?"
ತ್ಯಾಗಿ ಕೇಳಿದ ಪ್ರಶ್ನೆಗೆ ಜಾಹ್ನವಿ ಬೆಚ್ಚಿಬಿದ್ದಿದ್ದು ನಿಜವಾಗಿತ್ತು. ಅಷ್ಟೂ ಹೊತ್ತಿನಿಂದ ಮೇಘಸ್ಫೋಟವಾದಂತೆ ಆರ್ಭಟಿಸುತ್ತಿದ್ದ ಮಳೆಯ ತಾರಕಸ್ಥಿತಿ ಒಂದೊಂದೇ ಚರಣ ಕಡಿಮೆಯಾಗುತ್ತಿದ್ದ ಕ್ಷಣದಲ್ಲೇ ಸಿಡಿಲು ಬಡಿದಂತೆ ಅನಿಸಿತು. ಅಪ್ರತಿಭಳಾಗುವುದು ಆಕೆಯ ಜಾಯಮಾನದಲ್ಲಿಯೇ ಇಲ್ಲ. ಅಂತಹುದೇನಾದರೂ ಇದ್ದರೆ ಅದನ್ನು ಹೃದಯದ ಒಳತೋಟಿಗೆ ಸೇರಿಸಿ ಸುಮ್ಮನಿದ್ದುಬಿಡುವುದು ಆಕೆಗೆ ಗೊತ್ತಿತ್ತು. ನಿರ್ಲಿಪ್ತ  ಮುಖಭಾವದ ಪ್ರಯತ್ನ ಮಾಡಿದಳು.
"ಯಾಕೂ ಇಲ್ಲ, ಗಾಬರಿಯಾಗಬೇಡಿ. ನಿಮ್ಮ ಈ ನೀಳ ಮುಖ, ಸ್ನಿಗ್ಧ ನಗು, ಉದ್ದನೆಯ ಮೂಗು, ಇಳಿಬಿಟ್ಟ ಕೂದಲು, ಯಾವುದೋ ಒಂದು ಆ್ಯಂಗಲ್ನಲ್ಲಿ ಈ ನೋಟ ನೋಡಿದ ಹಾಗಿದೆಯಲ್ಲ ಅಂತ ಅನಿಸಿಬಿಟ್ಟಿತು."
"ಓಹ್ ಥ್ಯಾಂಕ್ಸ್!"
ಆದ್ರೆ, ಆಕರ್ಷಕ ಕಣ್ಣುಗಳು ಎಲ್ಲರಿಗೂ ಇರುವುದಿಲ್ಲ ಮತ್ತು ಹಾಗೆ ಕಂಡ ಕಣ್ಣುಗಳನ್ನು ಮರೆಯಲೂ ಸಾಧ್ಯವಿಲ್ಲ. ಒಬ್ಬಳು ನೃತ್ಯಗಾತಿಯ ಕಾಡಿಗೆ ಹಚ್ಚಿದ ಮಾಟದ ಕಣ್ಣುಗಳು ಆಕೆಯ ಹೆಜ್ಜೆಗಿಂತ ಹೆಚ್ಚು ಕಾಡುತ್ತವೆ ಅಲ್ಲವೇ?
ಆಫ್ಕೋಸರ್್ ನಿಜವಿರಬಹುದು. ಆದರೆ ಮುಳುಗುವ ಹಡಗಿನಲ್ಲಿ ಕುಳಿತಿರುವಾಗ ಆಕರ್ಷಕ ಕಣ್ಣುಗಳ ಬಗ್ಗೆ ಯೋಚಿಸುವ ಮನಸ್ಥಿತಿ ಇರುವುದಿಲ್ಲ. ಆಯಾಮ್ ವೆರಿ ಮಚ್ ಪಿಟಿ ಅಬೌಟ್ ಯೂ.
ನಿಜ, ಮುಳುಗಿಯೇ ಹೋಗಿರುವ ದೋಣಿಯಿಂದ ಬಂದವರು ನಾವು ಎಂಬ ಸತ್ಯಕ್ಕೆ ಎಷ್ಟು ಚಿಕ್ಕ ಆಯುಷ್ಯ ನೋಡಿ. ಈಗ ಅದು ಸತ್ತೇ ಹೋಗಿದೆ. ಅಂತಾದ್ದರಲ್ಲಿ ಹಳೆಯ ಸತ್ಯದ ಪುಟಗಳು ಯಾರಿಗೆ ನೆನಪಿರಲು ಸಾಧ್ಯ ಅಂದವನ ಮಾತಿನಲ್ಲಿ ಎಂಥ ಮರ್ಮವಿದೆ ಎಂದು ಹುಡುಕುವ ವ್ಯವಧಾನ ಜಾಹ್ನವಿಗೆ ಇರಲಿಲ್ಲ. ಬದುಕಿನಲ್ಲಿ ಒಂದು ಅರ್ಧ ವಿರಾಮ ಹಾಕಿ ಮುಂದಿನ ವಾಕ್ಯದ ಕಡೆಗೆ ಕಾಲು ಚಾಚುವ ನಿರೀಕ್ಷೆಯೇ ಆಕೆಯ ಕಣ್ಣಿನಲ್ಲಿ ಅತಿಯಾಗಿತ್ತು.
ಮಳೆ ನಿಂತಂತೆ ಕಾಣಿಸಿದರೂ ದಟ್ಟ ಕೆಸರಿನ ನೀರು ಅಂಡರ್ ಪಾಸ್ ಬುಡಕ್ಕೆ ಹರಿದು ಬರುತ್ತಲೇ ಇತ್ತು. ಇನ್ನೈದು ನಿಮಿಷಕ್ಕೆ ಮಳೆ ಸಂಪೂರ್ಣ ನಿಲ್ಲದೇ ಹೋದರೆ ಈ ದೊಡ್ಡ ಹಡಗೂ ಮುಳುಗಿ ಬಿಡುವ ಅಪಾಯ ನಿಚ್ಚಳವಾಗಿತ್ತು. ಒಬ್ಬರ ಭುಜಕ್ಕೆ, ಬೆನ್ನಿಗೆ, ಕಾಲಿಗೆ ತಗಲಿಸಿಕೊಂಡೇ ಬಸ್ಸಿನಲ್ಲಿ ನಿಂತಿದ್ದ ಜನಕ್ಕೂ ಅದು ಖಾತ್ರಿಯಾಗಿ ಎರಡೇ ಎರಡು ಕ್ಷಣವನ್ನು ಕಳೆಯಲಾಗದ ಸ್ಥಿತಿ ಇರುವುದು ಗೋಚರಿಸುತ್ತಿತ್ತು. ಪದೇ ಪದೆ ತಮ್ಮ ಮೊಬೈಲ್ ತಡಕಾಡುತ್ತಲೇ ಇದ್ದ ಚಿತ್ರಣ ಹೇಗಿತ್ತೆಂದರೆ ರೋಬೊಗಳು ಒಂದಾದ ಮೇಲೆ ಒಂದರಂತೆ ಕೈಗಳನ್ನು ಆಡಿಸುತ್ತಿರುವಂತೆ ಕಾಣುತ್ತಿತ್ತು. ಆದರೆ ಯಾವ ಮೊಬೈಲ್ಗಳೂ ಜೀವ ತಳೆದಂತೆ ಕಾಣಿಸಲಿಲ್ಲ. ಮೂರೂವರೆ ತಾಸು ಧಾರೆಯಾಗಿದ್ದ ವರ್ಷವತಿ ತನ್ನ ಹೆರಿಗೆಯ ನೋವನ್ನೆಲ್ಲ ಸಹಿಸಿಕೊಂಡವಳಂತೆ ನಿಡುಸುಯ್ದಳಾದರೂ ಹರಿಯುತ್ತಿರುವ ನೀರು ಯಾರ ಸಂಕಟದ ಹಂಗಿಗೂ ಸಿಲುಕಲಿಲ್ಲ.
ಆ ಬಾಗಿಲ ಸಂದಿಯಿಂದ ನೀರು ಒಳಗೆ ನುಗ್ಗುತ್ತಿದೆ! ಎಂದು ಇದ್ದಕ್ಕಿದ್ದಂತೆ ಕೂಗಿಕೊಂಡಿದ್ದು ಕೇಳಿಸಿತು. ಮಿಂಚಿನ ಸಂಚಾರವಾದಂತೆ ಅನ್ನಿಸಿ ಒಬ್ಬರ ಮೇಲೆ ಒಬ್ಬರು ಬಿದ್ದು ದುರಂತದ ಮುನ್ಸೂಚನೆಯನ್ನು ನೋಡಲು ಮುಂದಾದರು. ಅಷ್ಟೂ ಹೊತ್ತಿನ ತನಕ ಡ್ರೈವರ್ ಸೀಟಿನಲ್ಲಿ ಕುಂತೇ ಇದ್ದವನಿಗೂ ಬಸ್ಸು ಮುಳುಗುವುದು ಖಾತ್ರಿ ಎನಿಸಿತ್ತು. ನನ್ನೊಳಗಿನ ವೈರುಧ್ಯಗಳು, ಅನಗತ್ಯ ತರ್ಕಕ್ಕೆ ಬಿದ್ದುಬಿಡುವ ಒಳಮನಸ್ಸನ್ನು ಈ ಬಸ್ಸಿನೊಳಗೇ ಸಮಾಧಿ ಮಾಡುವ ಕಾಲ ಸಮೀಪಿಸಿದೆ ಅನಿಸಿಬಿಟ್ಟಿತು ಜಾಹ್ನವಿಗೆ. ಮುಂದೆ ಅನೇಕ ತಿರುವುಗಳಿಗಾಗಿ ಕಾದು ಕುಳಿತಿರುವಾಗಲೇ ಒಂದು ಚಡಪಡಿಕೆಯೂ ಅನಪೇಕ್ಷಿತ ಅನ್ನುವಂತೆ ಬದುಕು ಹೀಗೆ ಗಕ್ಕನೆ ಮುಗಿದೇ ಬಿಡುತ್ತದೆ ಎಂಬ ನಿರೀಕ್ಷೆಯಾದರೂ ಯಾರಿಗಿತ್ತು, ಒಂದು ಚಿಟಿಕೆ ಆಸೆಯೂ ಇಲ್ಲಿ ಅಮುಖ್ಯವಾಯಿರು ಅಂದುಕೊಂಡಳು.
ನಾಳೆ ತೀರ್ಥಹಳ್ಳಿಯಲ್ಲಿ ಆಸ್ತಿಯನ್ನು ನಾಲ್ಕು ಪಾಲು ಮಾಡಿ ಮೂವರು ತಂಗಿಯರ ಜೊತೆ ಹಂಚಿಕೊಳ್ಳುವ ಕಾತರದಲ್ಲಿದ್ದ ಪ್ರಸನ್ನಮೂರ್ತಿಗೆ ತನ್ನ ಪಾಲು ಇಲ್ಲಿಯೇ ಜಲಸಮಾಧಿಯಾಯ್ತು ಅನ್ನಿಸಿ ಎದೆಯುಬ್ಬಿ, ಕಣ್ಣ ಕೊನೆಯಲ್ಲಿ ಅದು ಹನಿಯಾದದ್ದು ಅನುಭವಕ್ಕೆ ಬಂತು. ಒಂದು ಫೋರ್ಡ್  ಕಾರು, ಬೆಂಗಳೂರಿನ ಯಾವುದಾದರೂ ಮೂಲೆಯಲ್ಲೊಂದು ಸೈಟು, ಅಲ್ಲಿ ಎರಡೇ ಎರಡು ಬೆಡ್ರೂಮಿನ ಮನೆ ಕಟ್ಟುವ ಕನಸು ಹೊಂದಿದ್ದ ರಮಣಿಗೆ ಬದುಕಿದ್ದರೆ ನೂರಾರು ಕೇಜಿ ಟಮಾಟಿ ಹಣ್ಣುಗಳನ್ನು ತಂದುಕೊಡಬಹುದಿತ್ತಲ್ಲವೇ ಅಂದುಕೊಂಡ. ಮಗನ ಬರ್ತ್ ಡೇ  ದಿನವೇ ಕೊಡಬೇಕೆಂದು ಎರಡು ಇಂಪೋರ್ಟೆಡ್ ಟೆನಿಸ್ ರಾಕೆಟ್ ಗಳನ್ನು ಕಾರಿನ ಡಿಕ್ಕಿಯಲ್ಲಿ ಇರಿಸಿಕೊಂಡಿದ್ದ ಜನಾರ್ಧನನಿಗೆ ಐಷಾರಾಮಿ ಅಪಾರ್ಟ್ ಮೆಂಟಿನ ಗೂಡಿನಲ್ಲಿ ಒಬ್ಬನೇ ಕುಳಿತು ಕಾಯುತ್ತಿರುವ ಮಗನ ಚಿತ್ರಗಳೇ ಕಣ್ಣ ಮುಂದೆ ಬಂತು.
ಒಂದು ಕಡೆಯಲ್ಲಿ ಸಂದೇಶ್ ಚಾಟ್ಸ್ ಬಾಂಬ್ ಸ್ಫೋಟದಿಂದ ಹೇಗೆ ಛಿದ್ರವಾಗಿ ಹೋಗಿದೆ ಎಂಬುದರ ನೇರ ಪ್ರಸಾರವನ್ನು ಟೀವಿಯಲ್ಲಿ ತೋರಿಸುತ್ತಿದ್ದರೆ ಇನ್ನೊಂದು ಕಡೆ ಮೇಖ್ರಿ ಸರ್ಕಲ್ನ ಅಂಡರ್ಪಾಸ್ನಲ್ಲಿ ನೀರು ಪ್ರವಾಹದೋಪಾದಿಯಲ್ಲಿ ಹರಿದು ಬರುತ್ತಿದ್ದು ಅಲ್ಲಿ ಸಾಲುಗಟ್ಟಿ ನಿಂತಿರುವ ಬಸ್ಸು ಕಾರುಗಳಲ್ಲಿ ಇರುವ ಪ್ರಯಾಣಿಕರ ಸ್ಥಿತಿ ನಿಜಕ್ಕೂ ಅಸಹನೀಯವಾಗಿದೆ ಎಂದು ವರದಿಗಾರ ಕೂಗಿಕೊಳ್ಳುತ್ತಿದ್ದ. ಬಾಂಬ್ ಸ್ಫೋಟದಿಂದ ಈಗಾಗಲೇ ನಾಲ್ಕು ಜನ ಸತ್ತಿದ್ದಾರೆ, ಆದರೆ ಅಂಡರ್ ಪಾಸಿನ 
ಕೆಳಗೆ ಸಿಕ್ಕಿಕೊಂಡಿರುವ ಪ್ರಯಾಣಿಕರನ್ನು ರಕ್ಷಿಸದೇ ಇದ್ದರೆ ಸಾವಿನ ಸಂಖ್ಯೆಯನ್ನು ಈಗಲೇ ಅಂದಾಜು ಮಾಡಲು ಸಾಧ್ಯವಿಲ್ಲ, ಅದು ಐವತ್ತಾಗಬಹುದು, ನೂರಾಗಬಹುದು ಎಂದು ಆತ ಭೀತಿ ಹುಟ್ಟಿಸುತ್ತಿದ್ದ. ಅದೇ ಟೀವಿ ಸ್ಟುಡಿಯೋದಲ್ಲಿ ಕುಳಿತ ಆ್ಯಂಕರ್ ರಾಮನಾಥ, "ನಮ್ಮ ವರದಿಗಾರರು ಈ ಅಪರಾತ್ರಿಯಲ್ಲಿ ನಗರದ ಹತ್ತು ಕಡೆ ಜೀವದ ಹಂಗು ತೊರೆದು ರೀಪೋರ್ಟಿಂಗ್ ನಲ್ಲಿ ತೊಡಗಿದ್ದು, ಎಲ್ಲೆಲ್ಲಿ ಅಂಡರ್ ಪಾಸಿನ  ಕೆಳಗೆ ವಾಹನಗಳು ಸಿಕ್ಕಿಹಾಕಿಕೊಂಡಿವೆ ಎಂಬುದರ ನೇರ ಪ್ರಸಾರ ಮಾಡುತ್ತಿದ್ದೇವೆ, ಹತ್ತೂ ಕಡೆ ನಮ್ಮ ಓಬಿ ವ್ಯಾನ್ ಗಳು ಕಾರ್ಯ ನಿರ್ವಹಿಸುತ್ತಿವೆ, ಇದು ನಮ್ಮ ಚಾನೆಲ್ ಮಾಡುತ್ತಿರುವ ದೊಡ್ಡ ಸಾಹಸವಾಗಿದ್ದು, ನಮ್ಮ ಟೀವಿ ಚಾನೆಲ್ ಅನ್ನು ನಗರಕ್ಕೆ ಇಟ್ಟಿರುವ ಸೀಸೀ ಕ್ಯಾಮೆರಾ ಎಂದು ಭಾವಿಸಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸಬೇಕು, ಪೊಲೀಸರು ಜನರನ್ನು ರಕ್ಷಿಸಬೇಕು" ಎಂದು ಕರೆಕೊಡುತ್ತಿದ್ದ.
"ಬಾಂಬ್ ಸ್ಫೋಟ ನಿಜಕ್ಕೂ ದುರದೃಷ್ಟಕರ. ಅದೇ ವೇಳೆ ಅಕಾಲಿಕ ಮಳೆಯೂ ಬಂದಿದೆ. ಇಡೀ ಸರ್ಕಾರ ಸಮರೋಪಾದಿಯಲ್ಲಿ ಸಜ್ಜಾಗಿದೆ, ಇಂತಹ ಪರಿಸ್ಥಿತಿಯನ್ನು ನಾವು ಹಿಂದೆಂದೂ ಎದುರಿಸಿಲ್ಲ. ಕನಿಷ್ಠ ಎಪ್ಪತ್ತು ಲೈಫ್ ಸೇವಿಂಗ್ ಬೋಟ್ಗಳನ್ನು ಕಳುಹಿಸಲಾಗಿದೆ. ಕೆಲವು ಕಡೆ ಕ್ರೇನ್ಗಳನ್ನೂ ಬಳಸಲಾಗುತ್ತಿದೆ. ಜನರ ರಕ್ಷಣೆ ನಮ್ಮ ಆದ್ಯತೆ" ಎಂದು ಗೃಹ ಸಚಿವ ಶ್ರದ್ಧಾನಂದ ಹೇಳುತ್ತಿದ್ದುದನ್ನು ಚಾನೆಲ್ಗಳು ವರದಿ ಮಾಡುತ್ತಿದ್ದವು. ಇಷ್ಟೂ ಸುದ್ದಿಗಳನ್ನು ಬಹಳ ಆತಂಕದಿಂದ ನೋಡುತ್ತಿದ್ದವನು ಚಿರಂತನ್. ಪ್ರತಿ ಹತ್ತು ನಿಮಿಷಕ್ಕೊಮ್ಮೆ ಅಪ್ಪನಿಗೆ ಫೋನ್ ಮಾಡಿ ಸುಸ್ತಾಗಿದ್ದ ಆತನಿಗೆ ಇವತ್ತು ತನ್ನ ಬರ್ತ್ ಡೇ ಎಂಬುದೂ ಮರೆತು ಟೀವಿಯಲ್ಲಾದರೂ ಅಪ್ಪ ಕಾಣಿಸಿಕೊಂಡಾರೇ? ನಿಜಕ್ಕೂ ಅವರ ಸ್ಥಿತಿ ಏನಾಗಿದೆ ಎಂಬುದನ್ನು ತಿಳಿದುಕೊಳ್ಳೋ ಕಾತುರ. ಮೇಖ್ರಿ ಸರ್ಕಲ್ನ ಅಂಡರ್ಪಾಸ್ ಕೆಳಗೆ  ಬೋಟ್ ಗಳನ್ನು ಕಳುಹಿಸುವ ಪ್ರಯತ್ನ ಮಾಡಲಾಗುತ್ತಿದೆ, ಆದರೆ ಅದು ಸಾಧ್ಯವಿರುವ ಕೆಲಸ ಅಲ್ಲ, ನಗರಪಾಲಿಕೆ ಅಧಿಕಾರಿಗಳಿಗೆ ತಲೆಯಲ್ಲಿ ಮೆದುಳೇ ಇಲ್ಲ, ಹೊಸದಾಗಿ ಏನನ್ನೂ ಯೋಚನೆ ಮಾಡದ ಸ್ಥಿತಿಗೆ ಅವರು ತಲುಪಿದ್ದಾರೆ ಎಂಬುದೇ ಶೋಚನೀಯ ಎಂದೆಲ್ಲ ಆ ಟೀವಿ ವರದಿಗಾರ ವಾದಿಸುತ್ತಿದ್ದ.
ಹಾಗೆ ಆತ ಬಡಬಡಾಯಿಸುತ್ತಿದ್ದಂತೆ ಇದ್ದಕ್ಕಿದ್ದ ಹಾಗೆ ಅಂಡರ್ಪಾಸ್ನ ಮೇಲ್ಭಾಗದ ಎರಡೂ ಕಡೆ ದೊಡ್ಡ ದೊಡ್ಡ ಕ್ರೇನ್ಗಳು ಬಂದು ನಿಂತವು. ಎರಡೂ ಕಡೆಯಿಂದ ಅದರ ಟವರ್ಗಳನ್ನು ಅಡ್ಡ ಅಡ್ಡ ಮಲಗಿಸಲಾಯಿತು. ಏಕಾಏಕಿ ಹತ್ತಕ್ಕೂ ಅಧಿಕ ಮಂದಿ ರಕ್ಷಣಾ ಯೋಧರು ಅದನ್ನು ಏರಿ ಮುನ್ನುಗ್ಗಿದರು. ಕ್ರೇನ್ಗೆ ಕಟ್ಟಲಾಗಿದ್ದ ಹಗ್ಗವನ್ನು ಕೆಳಕ್ಕಿಳಿಸಿ ಬಸ್ಸಿನಲ್ಲಿ, ವಾಹನಗಳ ಮೇಲೆ ಸಿಕ್ಕಿಕೊಂಡಿದ್ದ ಜನರನ್ನು ಎತ್ತುವ ಕಾರ್ಯ ಶುರುವಾಗಿ ಹೋಯಿತು. ದಿಸ್ ಇಸ್ ವಂಡರ್ಫುಲ್ ಐಡಿಯಾ, ಫೆಂಟಾಸ್ಟಿಕ್. ಒನ್ ಶುಡ್ ಅಪ್ರಿಸೇಟ್ ದಿಸ್ ಎಂದು ನಮ್ ಚಾನೆಲ್ನ ರಾಮನಾಥ ಕೂಗಿಕೊಳ್ಳುತ್ತಿದ್ದ. ಜನರನ್ನು ರಕ್ಷಿಸಲು ಅಡಿಶನಲ್ ಪೋಲಿಸ್ ಕಮಿಷನರ್ ಅನಿಕೇತನ್ ಕೈಗೊಂಡಿರುವ ಈ ಕ್ರಮ ನಿಜಕ್ಕೂ ಶ್ಲಾಘನೀಯ, ಸದ್ಯ ಸ್ಪಾಟ್ನಲ್ಲಿಯೇ ಇರುವ ಅವರೀಗ ನಮ್ಮ ಜೊತೆ ದೂರವಾಣಿ ಸಂಪರ್ಕದಲ್ಲಿದ್ದಾರೆ ಎಂದು ಆತ ಹೇಳುತ್ತಿದ್ದ. ಆದರೆ ಎಷ್ಟೇ ಪ್ರಯತ್ನ ಮಾಡಿದರೂ ಅನಿಕೇತನ್ ದೂರವಾಣಿ ಸಂಪರ್ಕಕ್ಕೆ ಬರಲೇ ಇಲ್ಲ. ಆಲ್ ರೈಟ್, ಅನಿಕೇತನ್ ಮೊದಲು ಜನರನ್ನು ರಕ್ಷಿಸಲಿ ಆಮೇಲೆ ಅವರೊಂದಿಗೆ ಮಾತನಾಡುತ್ತೇವೆ, ನಮ್ಮ ಇನ್ನೂ ಇಬ್ಬರು ವರದಿಗಾರರು ಈಗ ಸ್ಪಾಟ್ಗೆ ತಲುಪಿದ್ದಾರೆ, ಈ ರಕ್ಷಣಾ ಕಾರ್ಯಾಚರಣೆಯ ಕ್ಷಣಕ್ಷಣದ ವರದಿಯನ್ನು ನಿಮಗೆ ಒದಗಿಸುತ್ತಿದ್ದೇವೆ ಎಂದು ವಿವರಿಸತೊಡಗಿದ. ಒಂದು ಸಣ್ಣ ಬ್ರೇಕ್ ತೆಗೆದುಕೊಂಡು ನಾವು ಮತ್ತೆ ಬರುತ್ತೇವೆ ಎಂದು ಚಿಟಿಕೆ ಹಾರಿಸಿದ. ಆದರೆ ರಕ್ಷಣಾ ಕಾರ್ಯಕರ್ತರು ಯಾವುದೇ ಬ್ರೇಕ್ ತೆಗೆದುಕೊಳ್ಳದೇ ಕಾರ್ಯಾಚರಣೆ ಮುಂದುವರಿಸಿದ್ದರು.
ಬಸ್ಸಿನಿಂದ ಕೆಳಗೆ ಜಿಗಿದು ಹೋದರೂ ಪಾರಾಗಲು ಸಾಧ್ಯವಿಲ್ಲ, ಬಸ್ಸಿನಲ್ಲಿದ್ದರೂ ಮುಳುಗಿ ಹೋಗುತ್ತೇವೆ. ಏನು ಮಾಡುವುದೀಗ, ಬೇರೆ ಏನಾದರೂ ದಾರಿ ಇದೆಯಾ ಎಂದ ಪ್ರಸನ್ನಮೂರ್ತಿಯ  ಆತಂಕವೂ ಜನಾರ್ಧನನ ಮುಖದಲ್ಲಿ ರಿಫ್ಲೆಕ್ಟ್ ಆಗಿತ್ತು. ಬಸ್ಸಿನಲ್ಲಿದ್ದ ಇನ್ನೂ ಸಾಕಷ್ಟು ಮಂದಿಗೆ ಅದೇ ಮಾತನ್ನು ಹೇಳಬೇಕು ಅನಿಸಿತ್ತಾದರೂ ಮನಸ್ಸಿನಲ್ಲಿ ಅಂದುಕೊಂಡ ಮಾತು ನಿಜವಾಗಿ ಬಿಟ್ಟರೆ ಎಂಬ ಭಯ.
ನಿನ್ನ ಈ ಋಣದಿಂದಲೂ ನಾನು ಮುಕ್ತಳಾಗುತ್ತೇನೆ. ಬದುಕು ಮುಳುಗುವಾಗ ಇದರ ಭಾರವೇಕೆ ನನಗೆ ಎನ್ನುತ್ತಾ ಜಾಕೆಟ್ನ ಝಿಪ್ ಎಳೆಯಲು ಮುಂದಾದಳು ಜಾಹ್ನವಿ. ಆಕೆಯ ಮುಖದಲ್ಲಿ ವಿಷಾದ ಸ್ಥಾಯಿ ರೂಪ ಪಡೆದಿತ್ತು. ಎಲ್ಲ ಖಾಲಿಯಾದಂತೆ, ನಿಂತ ತಾಣವೇ ತೇಲಿ ತೇಲಿ ಪ್ರಪಾತಕ್ಕೆ ಬಿದ್ದಂತೆ, ಎದೆಯಲ್ಲಿನ ಒಂದು ಸಣ್ಣ ತಳಮಳಕ್ಕೂ ಬೆಲೆ ಇಲ್ಲ ಎಂಬುದು ನಿಚ್ಚಳವಾಗಿತ್ತು. ಇಂತಹ ಸ್ಥಿತಿಗಳಲ್ಲಿ ನಿಲರ್ಿಪ್ತವಾಗಿರುವುದನ್ನು ದೇಹವೂ ಅಭ್ಯಾಸ ಮಾಡಿಕೊಳ್ಳುತ್ತಿದೆಯಾ ಎಂಬ ಅನುಮಾನ ಅವಳೊಳಗೆ.
ಬದುಕು ಮುಳುಗಿಯೇ ಹೋಯಿತು ಎನ್ನುವುದೆಲ್ಲ ಅಪ್ಪಟ ಮೂರ್ಖತನ. ಯಾವುದೋ ಪ್ರವಾಹದಲ್ಲಿ ಕೊಚ್ಚಿಯೇ ಹೋದೆವು ಅಂದುಕೊಳ್ಳುತ್ತೇವೆ, ಆದರೆ ಬದುಕನ್ನು ಮೇಲೆತ್ತಲು ಇನ್ನೊಂದಾವುದೋ ಜೀವ ಕಾದಿರುತ್ತದೆ. ಹಾಗೆ ಹೇಳಿದ ತ್ಯಾಗರಾಜ ನೀರಿನ ಮಟ್ಟ ಏರುತ್ತಲೇ ಇದ್ದ ಬಸ್ಸಿನ ಬಾಗಿಲ ಕಡೆಗೆ ಹೆಜ್ಜೆ ಇಟ್ಟ.  ಜಾಹ್ನವಿ ಅವನ ತೋಳನ್ನು ಮೆದುವಾಗಿ ಹಿಡಿದೆಳೆದಳು.

"ಈ ಬಾರಿಯೂ ನನ್ನನ್ನು ರೆಸ್ಕ್ಯೂ ಮಾಡ್ತಿಯಾ?" ಏಕಾಏಕಿ ಏಕವಚನ ಬಳಸಿದ್ದು ಕೇಳಿ ನಕ್ಕ
"ಹಂಡ್ರಡ್ ಪರ್ಸಂಟ್...!"
ಒಹ್ ಥ್ಯಾಂಕ್ಸ್...!
ಆದರೆ ಒಂದು ಕಂಡೀಷನ್
"ಯೆಸ್... ತೇಲುವ-ಮುಳುಗುವ ಲೈಫ್ ಗೆ  ಎಂಥಾ ಕಂಡೀಷನ್?"
ಮಾತು ತೇಲಿಸುವ ಟ್ರಿಕ್ಸ್ ಬೇಡ
"ನೋ ಟ್ರಿಕ್ಸ್... ಏನಂತ ಹೇಳು. ಶೂರ್ ಐ ವಿಲ್"
"ಓಕೆ... ನಿನ್ನ ಎಡಗಾಲಿನ ಗೆಜ್ಜೆ ತೆಗೆದು ಜಾಕೆಟ್ ಜೇಬಿನಲ್ಲಿಡು. ಜೀವವುಳಿದರೆ ಗೆಜ್ಜೆ ಜತೆಗೇ ಜಾಕೆಟ್ ವಾಪಸ್ ಕೊಡು!"
"ವಾಟ್ ರಬ್ಬಿಶ್! ನನ್ನ ಎಡಗಾಲಿನ ಗೆಜ್ಜೆ...?"
"ಬದುಕುಳಿದರೆ ಅದರ ಅರ್ಥ ಗೊತ್ತಾಗುತ್ತದೆ"
ಮೊಣಕಾಲಿನ ಎತ್ತರಕ್ಕೆ ಬಂದಿದ್ದ ನೀರ ಹರಿವನ್ನು ನೋಡುತ್ತಲೇ ಗೆಜ್ಜೆಯನ್ನು ಕಳಚುವ ಪ್ರಯತ್ನ ಮಾಡಿದಳು. ಸುಲಭಕ್ಕೆ ಅದು ಬರುವ ಲಕ್ಷಣ ಕಾಣಿಸಲಿಲ್ಲ. ಕಾಲಿಗೆ ಕಟ್ಟಿಕೊಂಡ ಈ ಗೆಜ್ಜೆ, ಅದರಲ್ಲಿ ಹಾಕಿದ ಹೆಜ್ಜೆ, ಬಿದ್ದ ಕರತಾಡನಕ್ಕೆ ಲೆಕ್ಕವಿಡಲು ಸಾಧ್ಯವಿಲ್ಲ. ಅದರ ನೆನಪುಗಳನ್ನು ಕೀಳುವುದು ಎಷ್ಟು ಹಿಂಸೆ ಅನಿಸಿತು. ಬಲವಂತದಿಂದ ಗೆಜ್ಜೆಯನ್ನು ಕಿತ್ತು ಜಾಕೆಟ್ನ ಪಾಕೆಟ್ನಲ್ಲಿ ಹಾಕಿ ಝಿಪ್ ಎಳೆದಳು ಜಾಹ್ನವಿ. ಅಷ್ಟು ಹೊತ್ತಿಗೆಲ್ಲ ಬಸ್ಸಿನ ಮೇಲ್ಛಾವಣಿಯಲ್ಲಿ ಓಡಾಡಿದ ಸದ್ದು. ಗಡಿಬಿಡಿ. ಕೆಲವರು ಮತ್ತೆ ಗುಡುಗುತ್ತಿದೆ, ನಿಂತ ಮಳೆ ಮತ್ತೆ ಶುರುವಾಯಿತು ಅಂದುಕೊಂಡರು, ಇನ್ನು ಕೆಲವರು ಉಗ್ರಗಾಮಿಗಳೇ ಬಂದಿರಬಹುದು ಅಂದರು. ಬಸ್ಸಿನ ಬಾಗಿಲ ಕಡೆಗೆ ನುಗ್ಗುವ ಪ್ರಯತ್ನ ಮಾಡಿದರು ಹಲವರು. ಚಾಲಕ ಬಾಗಿಲು ಓಪನ್ ಮಾಡಲಿಲ್ಲ. ಅದರಾಚೆಗೆ ನಿಂತ ನೀರು ಗ್ಲಾಸಿನಲ್ಲಿ ಕಾಣಿಸುತ್ತಿತ್ತು. ಸೀಟಿನ ಮೇಲೆ ಹತ್ತಿ ನಿಂತಿದ್ದ ಕೆಲವರು ಆಕ್ರೋಶದಿಂದ ಕಿಟಕಿ ಗಾಜು ಒಡೆಯಲು ಮುಂದಾದರು. ಒಳಗೇ ತುಂಬಿದ ಹೊಳೆಯಲ್ಲಿ ಓಡಾಡಿದ, ಜಿಗಿದಾಡಿದಂತಹ ಸದ್ದು. ಇನ್ಯಾರೋ ಕೂಗಿಕೊಂಡರು; ಕಿಟಕಿ ಗಾಜು ಒಡೆದು ಬಿಟ್ಟರೆ ಎಲ್ಲ ನೀರು ಒಳಗೆ ನುಗ್ಗುತ್ತದೆ, ಈ ಬಸ್ಸಿನಲ್ಲೇ ಈ ಕ್ಷಣವೇ ನಾವು ಜಲಸಮಾಧಿಯಾಗ್ತೇವೆ. ಇಬ್ಬರ ಆಕ್ರೋಶವೂ ಅಷ್ಟೇ ಜೋರಾಗಿತ್ತು. ಮತ್ತೆ ಮೌನ, ಮತ್ತೆ ಮಡುಗಟ್ಟಿದ ವಿಷಾದ. ಬಸ್ಸಿನ ಮೇಲ್ಭಾಗದ ಸದ್ದು ಇನ್ನಷ್ಟು ಜೋರಾಯಿತು. ಪ್ರಸನ್ನಮೂರ್ತಿ  ಉಸಿರೇ ನಿಂತವನಂತೆ ದಿಗಿಲಾಗಿ ನೋಡೇ ನೋಡಿದ. ತ್ಯಾಗರಾಜ್ ಮತ್ತು ಜಾಹ್ನವಿ ನಿಂತ ನೇರಕ್ಕೆ ಮೇಲ್ಭಾಗದಲ್ಲೇ ಇದ್ದ ಎಮರ್ ಜೆನ್ಸಿ ಡೋರ್ ದಿಢೀರ್ ಓಪನ್ ಆಗಿಬಿಟ್ಟಿತು. ಆ ಕಿಂಡಿಯಲ್ಲೊಬ್ಬ ಕಾಣಿಸಿಕೊಂಡ ತಕ್ಷಣವೇ ತ್ಯಾಗರಾಜ್ ಜಾಹ್ನವಿಯನ್ನು ಅನಾಮತ್ತಾಗಿ ಮೇಲಕ್ಕೆತ್ತಿದ. ಉಸಿರು ತೆಗೆದುಕೊಳ್ಳುವುದರೊಳಗೆ ಆಕೆ ಕಿಂಡಿಯೊಳಗೆ ತೂರಿದ್ದಳು.
ಯೋಧರಿಗೆ ಭೇಷ್ ಅನ್ನೋಣ... ಈಗಾಗಲೇ 60ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ... ಕಾರ್ಯಾಚರಣೆ ನಡೆಯುತ್ತಲೇ ಇದೆ... ಈಗ ನಮ್ಮ ಜೊತೆ ಬದುಕಿ ಬಂದಿರುವ ಜಾಹ್ನವಿ ಮಾಧವನ್ ಇದ್ದಾರೆ, ಅವರನ್ನು ಮಾತನಾಡಿಸೋಣ ಬನ್ನಿ... ಎಂದು ಟೀವಿ ವರದಿಗಾರ ಗಂಟಲು ಹರಿದು ಹೋಗುವಂತೆ ಕೂಗಿಕೊಳ್ಳುತ್ತಿದ್ದ. ಜಾಹ್ನವಿ ತಣ್ಣಗೆ ನಿಂತೇ ಇದ್ದಳು, ಕ್ಷಣಕಾಲ ಮಾತು ಹೊರಡಲೇ ಇಲ್ಲ. ದಟ್ಟವಾದ ಮೋಡ ಕಟ್ಟಿಕೊಂಡಂತೆ, ಅದು ಮಳೆಯಾಗಲು ಕಾತರಿಸಿದಂತೆ ಕಂಡಿತು. ಗದ್ಗದಿತಳಾದಳು, ಉಸಿರು ಬಿಗಿಹಿಡಿದಳು, ಎರಡೂ ಕಣ್ಣುಗಳನ್ನೊಮ್ಮೆ ಒತ್ತಿಕೊಂಡಳು, ಒತ್ತರಿಸಿ ಬಂದ ದುಃಖದಿಂದಲೋ ಮೂಗು ಕೆಂಪಗಾಗಿತ್ತು... ಕೆಂಡವನ್ನೇ ಹುಯ್ದ ಮಳೆಯಂತೆ.

"ನಾನಿವತ್ತು ಎರಡು ಬಾರಿ ಬದುಕಿ ಬಂದೆ... ಇವತ್ತು ನನ್ನ ವೆಡ್ಡಿಂಗ್ ಆನಿವರ್ಸರಿ...! ಇವತ್ತೇ ನನ್ನ ಜೀವನದ ಕೊನೆಯ ದಿನವೂ ಆಗುತ್ತಿತ್ತು. ಹಾಗೇ ಅಂದ್ಕೊಂಡಿದ್ದೆ. ಈಗಲೂ... ಈ ಕ್ಷಣವೂ ಜೀವಂತ ಇರೋದು ಸತ್ಯವೇ ಅನ್ನಿಸುತ್ತಿದೆ... ಪ್ರತಿ ಬಾರಿ ದೇವರೇ ರಕ್ಷಿಸುತ್ತಾನೆ ಎಂಬುದು ಸುಳ್ಳು... ಮನುಷ್ಯರೂ ಬೇಕಾಗುತ್ತಾರೆ... ಭಯದ ಕ್ಷಣದಲ್ಲಿ ಎಂತೆಂಥಾ ಅನುಮಾನಕ್ಕೆ ಬಿದ್ದುಬಿಡುತ್ತೇವೆ, ಛೇ! ಇದಕ್ಕಿಂತ ಹೆಚ್ಚಿನದೇನನ್ನೂ ಹೇಳಲಾರೆ ಪ್ಲೀಸ್..." ಎನ್ನುತ್ತಾ ತನ್ನ ಪಕ್ಕದಲ್ಲಿದ್ದ ತ್ಯಾಗರಾಜ, ಜನಾರ್ಧನ, ಪ್ರಸನ್ನಮೂರ್ತಿಯನ್ನು ಬರಸೆಳೆದುಕೊಂಡು ಕಣ್ಣೀರಾದಳು. ಆ ಟೀವಿ ವರದಿಗಾರನ ಬಳಿ ಇನ್ನೂ ಅನೇಕ ಪ್ರಶ್ನೆಗಳಿದ್ದವು. ಆತ ಕೇಳಲಿಲ್ಲ. ಒಂದು ಕ್ಷಣ ಆತನೂ ಆ ಸನ್ನಿವೇಶದಲ್ಲಿ ಮುಳುಗಿ ಹೋದ. ಪ್ರಸನ್ನಮೂತರ್ಿಗೆ ತಾನು ತೀರ್ಥಹಳ್ಳಿಗೆ ಹೋಗಿ ತಂಗಿಯರಿಗೆ ಅಪ್ಪನ ಭೂಮಿಯ ಪಾಲು ಮಾಡಬೇಕಿತ್ತು, ಜೀವವೇ ಮುಳುಗಿ ಹೋಗಿದ್ದರೆ ಯಾವ ದೇಹ, ಯಾವ ಪಾಲು ಎಂದು ಹೇಳಬೇಕು ಅನಿಸಿತು, ಮಗನ ಬರ್ತ್ ಡೇ  ಮಾಡಬೇಕಿತ್ತು, ಕಾದಿರುವ ಮಗನಿಗೆ ಒಂದು ಹಾಯ್ ಹೇಳಬೇಕೆಂದು ಜನ್ನಿ ಬಯಸಿದ್ದ... ಆದರೆ ಎಲ್ಲವೂ ಜಾಹ್ನವಿಯ ಕಣ್ಣೀರಲ್ಲಿ ತೊಳೆದು ಹೋಯಿತು. 'ಆ ನಾಲ್ಕೂ ಮಂದಿ ಗೆಳೆಯರ ಕಡೆಗೆ ಕ್ಯಾಮರಾವನ್ನು ಝೂಮ್ ಮಾಡಿ... ನೋಡಿ, ಇದೇ ನಿಜವಾದ ಮೇಘಸ್ಪೋಟ. ಮಳೆ ನಾಲ್ಕು ಅಪ್ಪಟ ನಕ್ಷತ್ರಗಳನ್ನು ಸೃಷ್ಟಿ ಮಾಡಿವೆ ನೋಡಿ...ಲವ್ಲೀ' ಎಂದು ಟೀವಿಯಲ್ಲಿ ರಾಮನಾಥ ಇಡೀ ವಿದ್ಯಮಾನವನ್ನು ಭಾವಪೂರ್ಣವಾಗಿ ವಿಶ್ಲೇಷಣೆ ಮಾಡಲು ಶುರುವಿಟ್ಟುಕೊಂಡಿದ್ದ.
"ಕೊಟ್ಟ ಮಾತಿನಂತೆ ನನ್ನ ಎಡಗಾಲಿನ ಗೆಜ್ಜೆ ಹಾಗೂ ನಿಮ್ಮದೇ ಜಾಕೆಟ್"
"ಆದರೆ, ಒಂದು ಬದಲಾವಣೆ, ಜಾಕೆಟ್ ನಿಮಗಿರಲಿ. ಅದರ ಮೇಲೆ ಕೈ ಸವರಿದಾಗೆಲ್ಲ ಈ ಮಳೆ ನೆನಪಾಗಬೇಕು.. ಆದರೆ ಈ ಗೆಜ್ಜೆ ಬೇಕು, ಕಳೆಗುಂದಿದ ಕಾಲಿನ ಸೌಂದರ್ಯವನ್ನು ಹೆಚ್ಚಿಸುವ ಸಾಮರ್ಥ್ಯ  ಇದಕ್ಕಿದೆ!"
"ಅದೂ ಎಡಗಾಲಿನ ಗೆಜ್ಜೆಯನ್ನು ಯಾರೂ ಅಪೇಕ್ಷಿಸುವುದಿಲ್ಲ...! ವೆರಿ ಅನ್ಯೂಶ್ವಲ್"
"ನಿಜ, ವಿಚಿತ್ರ ಅನಿಸಬಹುದು. ನೀವು ಜಾಹ್ನವಿ ಅಲ್ಲ ಅಹಲ್ಯಾ ಅನ್ನುವುದನ್ನು ಸಾಬೀತು ಮಾಡುವ ತಾಕತ್ತು ಈ ಎಡಗಾಲಿನ ಗೆಜ್ಜೆಗಿದೆ. ನಿಮ್ಮ ಆಕರ್ಷಕ ಕಣ್ಣುಗಳು ಗೆಜ್ಜೆಗೆ ರಿದಂ ಕೊಡುವುದನ್ನು ನಿಲ್ಲಿಸಿರಬಹುದು. ಒಬ್ಬ ಈಶ್ವರ ಪ್ರಸಾದ ತಪಸ್ವಿ ಆ ರಿದಂನಲ್ಲೇ ಬದುಕುತ್ತಿದ್ದಾನೆ. ಒಬ್ಬ ನೃತ್ಯಗಾತಿ ಅಹಲ್ಯಾ ಆತನ ಕೋಣೆಗಳಲ್ಲಿ ಇನ್ನೂ ಜೀವಂತವಾಗಿದ್ದಾಳೆ. ಆ ಆಳುದ್ದದ ಚಿತ್ರಗಳಲ್ಲಿದ್ದ ಕಣ್ಣುಗಳನ್ನು ನಾನಾದರೂ ಯಾಕೆ ಮರೆಯಲಿ... ಅವು ಎಂಥವರನ್ನೂ ಮೋಹಕ್ಕೆ ಬೀಳಿಸಿ ಬಿಡುತ್ತವೆ."
"ವಾಟ್...! ಮತ್ತೆ ನೀವು?" ತಿದಿಯೊಳಗಿನ ಉಸಿರು ಮತ್ತೆ ಬಿಗಿಯಾಯಿತು.
"ನಾನು ತ್ಯಾಗರಾಜ್. ಇಂಗ್ಲೆಂಡ್ನಲ್ಲಿ ಈಶ್ವರ ಪ್ರಸಾದ ತಪಸ್ವಿ ಕಂಪೆನಿಯಲ್ಲಿಯೇ ಇದ್ದವನು. ತಪಸ್ವಿ ನನ್ನ ಅಪರೂಪದಲ್ಲಿ ಅಪರೂಪದ ಗೆಳೆಯ. ಆದರೆ, ಜೀವನ ಎಷ್ಟು ವಿರೋಧಾಭಾಸಗಳ ಗೂಡಲ್ಲವೇ, ಕೆಲವರು ಸುಳ್ಳುಗಳಲ್ಲೇ ಬದುಕುತ್ತಿರುತ್ತಾರೆ. ಅದನ್ನು ಇವತ್ತು ಕಣ್ಣಾರೆ ಕಂಡೆ."
ನಿಜ! ಹಾಗೆ ಹೇಳಿದ ಆಕೆ ಇಡೀ ತೋಳಿಗೆ ಸುತ್ತಿಕೊಂಡಿದ್ದ ವೇಲ್ ಸಂಪೂರ್ಣ ಕುತ್ತಿಗೆಗೆ ಎಳೆದುಕೊಂಡಳು. ...ಸುಳ್ಳುಗಳಲ್ಲಿ ನಾನು ಬದುಕುತ್ತಿಲ್ಲ. ಸುಳ್ಳುಗಳೇ ನನ್ನನ್ನು ಬದುಕಿಸುತ್ತಿವೆ. ಸದಾ ಜಾಹ್ನವಿಯಾಗಿಯೇ ಬದುಕಲು ಇಷ್ಟಪಡುವವಳು... ಆದರೆ ಕೆಲವು ಸುಳ್ಳುಗಳು ಸತ್ಯವನ್ನೇ ಧಿಕ್ಕರಿಸುವಷ್ಟು ವೈಬ್ರೆಂಟ್ ಆಗಿರುತ್ತವೆ.
"ನಿಜವಿರಬಹುದು. ಆದರೆ, ಒಬ್ಬ ತಪಸ್ವಿ ಕಪಟಿಯಾಗಿ ಬದುಕಲು ಸಾಧ್ಯವಾಗುತ್ತಿಲ್ಲ."
"ಇಂತಹ ಮಳೆ ಮುಖವಾಡವನ್ನು ಕಳಚಿರಬಹುದು. ಹಾಗಂತ ಸುಳ್ಳುಗಳನ್ನು ಸಮಾಧಿ ಮಾಡಲು ಸಾಧ್ಯವಿಲ್ಲ... ಒಂದು ಸ್ಪರ್ಶದಲ್ಲಿರುವ ಪ್ರೀತಿಯ ಜೀವಂತಿಕೆಯನ್ನು ಅನುಭವಿಸಲಾರದಷ್ಟು ದೂರ ಸರಿದು ಬಂದಿದ್ದೇನೆ... ಈಗ ಹೇಳಿ ಅಂತಹ ಸ್ಪರ್ಶದ ಯಾವ ಅನುಭವವೂ ಇಲ್ಲದ ಈ ಎಡಗಾಲಿನ ಗೆಜ್ಜೆಯಾದರೂ ನಿಮಗ್ಯಾಕೆ?"
"ಇವತ್ತು ಬೆಳಗಿನ ಜಾವ ಆರೂವರೆಗೆ ಕೇಂಬ್ರಿಡ್ಜ್ ಗೆ ಫ್ಲೈಟ್ ಹತ್ತಬೇಕು ನಾನು. ಅಲ್ಲಿ ಮತ್ತೆ ಈಶ್ವರ ಪ್ರಸಾದನನ್ನು ಭೇಟಿಯಾಗುತ್ತೇನೆ. ಈ ಫೋಟೊವನ್ನೊಮ್ಮೆ ನೋಡಿ, ಥೇಮ್ಸ್ ನದಿದಂಡೆಯ ಹುಲ್ಲುಹಾಸಿನಲ್ಲಿರುವ ಈ ಜೋಕಾಲಿ, ಅದು ನೀವೆಂದೂ ಮರೆಯಲಾರದ ಸ್ಪರ್ಶವನ್ನು ಕೊಟ್ಟಿದೆ ಅಂದುಕೊಳ್ಳುತ್ತೇನೆ. ಆ ಜೋಕಾಲಿಯಲ್ಲಿ ನೀವು ಕಾಲುಗಳನ್ನು ಇಳಿಬಿಟ್ಟು ಜೀಕುತ್ತಾ ಜೀಕುತ್ತಾ ಮಲಗಿದಂತೆ ಚಿತ್ರಿಸಿರುವ ಈ ಅದ್ಭುತ ಪೇಂಟಿಂಗ್ ನೋಡಿ, ಇದನ್ನು ಚಿತ್ರಿಸಿದ್ದು ಈಶ್ವರ ಪ್ರಸಾದ್ ತಪಸ್ವಿ ಎಂಬ ಕಲಾವಿದ...! " ಎಂದು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದ ಚಿತ್ರವನ್ನು ತೋರಿಸಿದ. ಜಾಹ್ನವಿ ಯಾನೆ ಅಹಲ್ಯಾಳ ಕಣ್ಣುಗಳಲ್ಲಿ ಮತ್ತೆ ಮೋಡ ಕಟ್ಟಿಕೊಂಡಿತ್ತು. ಮೊಬೈಲ್ನಲ್ಲಿರುವ ಚಿತ್ರವನ್ನು ನಿಧಾನಕ್ಕೆ ಝೂಮ್ ಮಾಡುತ್ತ ಹೋದ ತ್ಯಾಗರಾಜ್. ಆಕೆಯ ಕಣ್ಣುಗಳಲ್ಲಿ ಆಗಸದ ಅಷ್ಟೂ ತಾರೆಗಳು ಹೊಳೆದಂತೆ ಅನಿಸಿತು.
"ಇಲ್ಲಿನೋಡಿ ಕೆಳಗೆ ಇಳಿಬಿಟ್ಟಿರುವ ಈ ಎಡಗಾಲನ್ನ, ಅದರಲ್ಲಿ ಗೆಜ್ಜೆಯೇ ಇಲ್ಲ! ಸರಪಳಿಯ ಸನಿಹದಲ್ಲಿರುವ ಬಲಗಾಲನ್ನು ನೋಡಿ, ನೀವು ಆವತ್ತು ತಪಸ್ವಿಗೆ ಕೊಟ್ಟಿದ್ದ ಒಂದೇ ಒಂದು ಗೆಜ್ಜೆ! ಇನ್ನೊಂದು ಗೆಜ್ಜೆಯನ್ನು ತೊಡಿಸುವ ಅದಮ್ಯ ಆಸೆಯಲ್ಲಿ ಕಾದೇ ಇದ್ದಾನೆ ತಪಸ್ಸಿನಂತೆ...!"

ಭಾನುವಾರ, ಜುಲೈ 24, 2016

ಮೇಷ್ಟ್ರು ಮೆಚ್ಚಿದ ಕಥೆಗಳು...


ಗಂಧವತೀ ಪೃಥವಿ.. ಅಂದಹಾಗೆ ಚಂದವತೀ ಚಾಂದ್ ಕಥೆಗಳು.....ಅನುಭವಗಳನ್ನು ತಿಕ್ಕಿ, ತೀಡುವ ರಚನಾತ್ಮಕ ಗುಣ ನಿನ್ನ ಬರವಣಿಗೆಯಲ್ಲಿದೆ..ನೀನೊಬ್ಬಉತ್ತಮ ಕಥೆಗಾರ ಅನ್ನಲು "ಕದ ತೆರೆದ ಆಕಾಶ" ಕೃತಿಯೊಂದು ಸಾಕು... ಹೀಗೆ ಬರೆದಿದ್ದಾರೆ ನನ್ನ ಪ್ರೌಢಶಾಲಾ ದಿನಗಳ ಪ್ರೀತಿಯ ಮೇಷ್ಟ್ರು ಕೋ.ಶಿವಾನಂದ ಕಾರಂತ್ ಅವರು. ನನ್ನೂರು ಕುಂದಾಪುರದ ಜನಪ್ರಿಯ ಸಾಪ್ತಾಹಿಕ "ಕುಂದಪ್ರಭ''ದಲ್ಲಿ ಈ ವಾರ ಅವರ ಆತ್ಮೀಯ ಮಾತುಗಳು ಪ್ರಕಟವಾಗಿವೆ...ಬಹು ವರ್ಷಗಳ ಬಳಿಕ ಶಿಷ್ಯನ ಬೆಳವಣಿಗೆ ಕಂಡು ಗುರು ಬರೆದಿರುವ ಮೆಚ್ಚಿಗೆ ಮಾತುಗಳಿಂದ ಖುಷಿಯಾಗಿದೆ... ಗುರುವಿಗೆ ಶಿಷ್ಯನ ಪ್ರೀತಿಯ ವಂದೇ.ಭಾನುವಾರ, ಜನವರಿ 3, 2016

ಕದ ತೆರೆದ ಆಕಾಶ -ಎರಡು ಪ್ರಮುಖ ವಿಮರ್ಶೆಗಳು...

ಕಳೆದ ನವೆಂಬರ್ ನಲ್ಲಿ ಬಿಡುಗಡೆಯಾದ ನನ್ನ ಕಥಾ ಸಂಕಲನ "ಕದ ತೆರೆದ ಆಕಾಶ" ಕೃತಿಯ ಬಗ್ಗೆ ಪತ್ರಕರ್ತ ಹಾಗೂ ಕಥೆಗಾರರೂ ಆದ ಡಾ. ಜಗದೀಶ್ ಕೊಪ್ಪ ಮತ್ತು ಡಾ.ವೆಂಕಟರಮಣ ಗೌಡ ಅವರು ಬರೆದಿರುವ ಎರಡು ಪ್ರಮುಖ ವಿಮರ್ಶೆಗಳು ಇಲ್ಲಿವೆ.....

ಮಂಜುನಾಥ್ ಚಾಂದ್ ರವರ ಚಂದನೆಯ ಕಥೆಗಳು....

-ಡಾ.ಜಗದೀಶ್ ಕೊಪ್ಪ, ಹುಬ್ಬಳ್ಳಿ

ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದ “ ಕದ ತೆರೆದ ಆಕಾಶ” ಕೃತಿಯು ಹಲವುಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತುಮಾಡುತ್ತಿರುವ ಪತ್ರಕರ್ತರೆ ಹೆಚ್ಚುಆದರೆಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆಮರೆಯ ಕಾಯಿಯಂತೆತುಂಬಿದ ಕೊಡದಂತೆ ಬದುಕಿದವರುಅವರ  ವ್ಯಕ್ತಿತ್ವದ ಗುಣಗಳು   ಕಥಾ ಸಂಕಲದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದುಶಾಪವೂ ಹೌದುಏಕೆಂದರೆಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮಆದರೆಅವರಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿಲವಲವಿಕೆಯನ್ನಾಗಲಿ ಕಾಣುವುದು ಕಷ್ಟ ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದುಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳುಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳುನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನುತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ತಮ್ಮ “ದೂರತೀರ” ಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ “ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು  ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳುಸಾಬೀತು ಪಡಿಸಿವೆಏಕೆಂದರೆಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳುವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು  ಕಾರಣಕ್ಕೆಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕುಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆಜೊತೆಗೆ ನಾವು ವೈದೇಹಿಯವರಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.ನಮ್ಮ ನಡುವಿನ ಸೂಕ್ಷ್ಮ ಸಂವೇದನೆಯ ಪತ್ರಕರ್ತ ಹಾಗೂ ಕಥೆಗಾರ ಮಂಜುನಾಥ್ ಚಾಂದ್ ರವರ ಪ್ರಥಮ ಕಥಾ ಸಂಕಲನವಾದ “ ಕದ ತೆರೆದ ಆಕಾಶ” ಕೃತಿಯು ಹಲವುಕಾರಣಕ್ಕಾಗಿ ವಿಶಿಷ್ಟ ಕಥಾ ಸಂಕಲನವಾಗಿದೆಕುದುರೆಗಿಂತ ಅದರ ಲದ್ದಿ ಬಿರುಸು ಎನ್ನುವ ಗಾದೆಯಂತೆ ಇವೊತ್ತಿನ ಪತ್ರಿಕೋದ್ಯಮದಲ್ಲಿ ಸುದ್ದಿಗಿಂತ ಸದ್ದು ಮಾಡಿದ ಮತ್ತುಮಾಡುತ್ತಿರುವ ಪತ್ರಕರ್ತರೆ ಹೆಚ್ಚುಆದರೆಕಳೆದ ಇಪ್ಪತ್ತೈದು ವರ್ಷಗಳಿಂದ ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಮತ್ತು ದೃಶ್ಯ ಮಾಧ್ಯಮದಲ್ಲಿ ಸೇವೆ ಸಲ್ಲಿಸಿರುವ ಚಾಂದ್ ಸದಾ ಎಲೆಮರೆಯ ಕಾಯಿಯಂತೆತುಂಬಿದ ಕೊಡದಂತೆ ಬದುಕಿದವರುಅವರ  ವ್ಯಕ್ತಿತ್ವದ ಗುಣಗಳು   ಕಥಾ ಸಂಕಲ£ದಲ್ಲಿ ಪ್ರತಿಬಿಂಬಿತವಾಗಿವೆ.

ಪತ್ರಕರ್ತನಾದವನಿಗೆ ಬರೆವಣಿಗೆ ಎಂಬುವುದು ವರವೂ ಹೌದುಶಾಪವೂ ಹೌದುಏಕೆಂದರೆಅವನು ಏನೇ ವಿಷಯವಿದ್ದರೂ ಬರೆದು ಬಿಸಾಡಬಲ್ಲ ಅಕ್ಷರ ಬ್ರಹ್ಮಆದರೆಅವರಬರೆವಣಿಗೆಯಲ್ಲಿ ಯಾವುದೇ ಜೀವಂತಿಕೆಯಾಗಲಿಲವಲವಿಕೆಯನ್ನಾಗಲಿ ಕಾಣುವುದು ಕಷ್ಟ ವಿಷಯದಲ್ಲಿ ಪಿ.ಲಂಕೇಶ್ ಮತ್ತು ರವಿಬೆಳೆಗೆರೆ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿಎರಡಲ್ಲೂ ಅಕ್ಷರಗಳಿಗೆ ಜೀವ ತುಂಬಿದವರಲ್ಲಿ ಪ್ರಮುಖರು ಎಂದು ವಿಶೇಷವಾಗಿ ನಾವು ಹೆಸರಿಸಬಹುದುಅಂತಹ ಪರಂಪರೆಯ ವಾರಸುದಾರರಂತೆ ಕಾಣುವ ಮಂಜುನಾಥ್ ಚಾಂದ್ರವರ ಕಥೆಗಳಲ್ಲಿ ತಾವು ಹುಟ್ಟಿ ಬಂದ ಕಡಲ ತಡಿಯ ತಲ್ಲಣಗಳುಪಲ್ಲಟಗೊಳ್ಳುತ್ತಿರುವ ಸಾಂಸ್ಕತಿಕ ಚಹರೆಗಳುನಶಿಸುತ್ತಿರುವ ಮನುಷ್ಯ ಸಂಬಂಧಗಳು ಓದುಗರ ಎದೆಯ ಕದವನ್ನುತಟ್ಟುತ್ತವೆ.

ಇತ್ತೀಚಿಗಿನ ದಿನಗಳಲ್ಲಿ ತಮ್ಮ ವಿಶಿಷ್ಟ ಹಾಗೂ ಸೂಕ್ಷ್ಮ ಸಂವೇದನೆಯ ಕಥೆಗಳ ಮೂಲಕ ಕರ್ನಾಟಕದ  ಕರಾವಳಿ ಪ್ರದೇಶದಲ್ಲಿ ಕಾಸರಗೂಡಿನ ಹೆಣ್ಣು ಮಗಳು ಅನುಪಮಾ ಪ್ರಸಾದ್ತಮ್ಮ “ದೂರತೀರ” ಸಂಕಲನದಿಂದ ಮತ್ತು ಮಂಜುನಾಥ್ ಚಾಂದ್ “ಕದ ತೆರೆದ ಆಕಾಶ” ಸಂಕಲನದ ಮೂಲಕ  ಕನ್ನಡ ಕಥಾ ಜಗತ್ತು ಕುತೂಹಲದಿಂದ ಗಮನಿಸಲೇ ಬೇಕಾದಪ್ರತಿಭಾವಂತರು ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಚಾಂದ್ ರವರು  ಕಥಾ ಸಂಕಲನದಲ್ಲಿ  ಕೇವಲ ಒಂಬತ್ತು ಕಥೆಗಳಿವೆಅವರೆಂದೂ ಖಯಾಲಿಗಾಗಿ ಕತೆ ಬರೆದವರಲ್ಲ ಹಾಗೂ ಬರೆಯುವವರಲ್ಲ ಎಂಬುದನ್ನು ಇಲ್ಲಿನ ಪ್ರತಿ ಕತೆಗಳುಸಾಬೀತು ಪಡಿಸಿವೆಏಕೆಂದರೆಕಳೆದ ಒಂಬತ್ತು ವರ್ಷಗಳಲ್ಲಿ ಅವರು ಬರೆದದ್ದು ಕೇವಲ ಒಂಬತ್ತೇ ಕತೆಗಳುವರ್ಷವೊಂದಕ್ಕೆ ಒಂಬತ್ತು ಕಥಾ ಸಂಕಲನಗಳನ್ನು ಹೊರ ತಂದು ಮೀಸೆತಿರುವುವ ಪತ್ರಕರ್ತರ ನಡುವೆ ಚಾಂದ್ ಮುಖ್ಯವಾಗುವುದು  ಕಾರಣಕ್ಕೆಅವರ ಕಥೆಗಳಲ್ಲಿ ನಗರ ಮತ್ತು ನಾಗರೀಕ ಜಗತ್ತಿನ ಅಮಾನವೀಯ ಮತ್ತು ಭಾವಶೂನ್ಯ ಬದುಕುಕುರಿತಂತೆ ಒಂದೆರಡು ಕತೆಗಳಿದ್ದರೂ ಸಹ ಉಳಿದ ಕಥೆಗಳು ತಾವು ಹುಟ್ಟಿ ಬೆಳೆದ ಕುಂದಾಪುರದ ಪರಿಸರದ  ಸುತ್ತ ಮುತ್ತಲಿನ ಕತೆಗಳಾಗಿವೆಜೊತೆಗೆ ನಾವು ವೈದೇಹಿ ಅವರ ಕಥೆಗಳಲ್ಲಿ ಓದಿದ್ದ ಕುಂದಾಪುರದ ಸುಂದರ ಕನ್ನಡ ಭಾಷೆಯ ಬನಿಯನ್ನು ಚಾಂದ್ ರವರ ಕಥೆಗಳಲ್ಲಿಯೂ ಸಹ ಸವಿಯಬಹುದು.

ನಗರದ ಬದುಕಿನ ಕಥೆಗಳಿಗಿಂತ ಹೆಚ್ಚಾಗಿ ತಮ್ಮ ಪರಿಸರ ಕಥೆಗಳನ್ನು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿರುವ ಚಾಂದ್ ರವರ ನಿರೂಪಣೆ ಮತ್ತು ಕಥೆಗಳ ಪಾತ್ರಗಳಿಗೆ ಬಳಸಿರುವಭಾಷೆಯಲ್ಲಿ ಕವಿಯೊಬ್ಬನ ಪ್ರತಿಭೆ ಅನಾವರಣಗೊಂಡಿದೆ ಸಂಕಲನದ ತಿಮಿರಸವೆದ ಹಾದಿಯ ಉಸಿರುಹೊಳೆ ದಂಡೆಯ ಆಚೆಸಂತೆಯಿಂದ ಬಂದವನುಊರಿಗೆ ಬಂದದೇವರು ಕಥೆಗಳು ಗಮನ ಸೆಳೆಯುತ್ತವೆಜೊತೆಗೆ ಓದುಗರ ಮನದಲ್ಲಿ ಬಹುಕಾಲ ನಿಲ್ಲುತ್ತವೆ.


ಜಾಗತೀರಣವೆಂಬುದು ಸದ್ದಿಲ್ಲದೆಅದೃಶ್ಯ ರೂಪದಲ್ಲಿ ನಮ್ಮನ್ನ ಹಿಂಬಾಲಿಸಿಕೊಂಡು ಬರುತ್ತಿರುವ  ಬೆಂಬಿಡದ ಭೂತ. ನಮಗರಿವಾಗದಂತೆ ಅದು ನಮ್ಮನ್ನು ತಬ್ಬಿಕೊಂಡು  ಹೊಸಕಿ ಹಾಕುತ್ತಿರುವ ವರ್ತಮಾನದ ದುರಂತಗಳು ಚಾಂದ್ ರವರ ಕಥೆಗಳಲ್ಲಿ ರೂಪಕದ ಭಾಷೆಯ ಮೂಲಕ  ಪರಿಣಾಮಕಾರಿಯಾಗಿ ವ್ಯಕ್ತವಾಗಿವೆನಾವು  ಹುಟ್ಟಿ ಬೆಳೆದು ಓಡಾಡಿದ ನೆಲವೆಂಬುದು,  ಈಗ  ನಮ್ಮದೆರು  ಆದುನಿಕತೆಯ ಕಾಡ್ಗಿಚ್ಚಿಗೆ ಸಿಲುಕಿಇತ್ತ ಒಣಗಲಾರದ,  ಅತ್ತ ಬೇರು ಬಿಡಲಾರದ ಅರೆ ಬೆಂದ ಹಸಿರು ಮರದಂತಾಗಿದೆಅಂತಹ ನೋವಿನ,ಸಂಕಟದ ಕ್ಷಣಗಳನ್ನು ಚಾಂದ್ ತಮ್ಮ ಕಥೆಗಳ ಪಾತ್ರಗಳ ಮೂಲಕ ಸಶಕ್ತವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ.  ಜೊತೆಗೆ ಅವರ ಮುಂದಿನ ಕಥೆಗಳ ಕುರಿತು ನಮ್ಮಲ್ಲಿ ಆಸೆ ಮೂಡಿಸಿದ್ದಾರೆ.

ಚಾಂದ್ ಕಥೆಗಳು: ಹೊಸ ಕಾಲವನ್ನು ಕಾಣುವ ಬಿಂದು


-ಡಾ.ವೆಂಕಟರಮಣ ಗೌಡ, ಅಂಕೋಲ, 


ತೀವ್ರ ತಲ್ಲಣದ ಮುಂದೆ ನಮ್ಮೊಳಗಿನ ಮನುಷ್ಯನ ಗುರುತು ಹಿಡಿಯಲಾರದೆ ನಿಂತವನು ಭಾಷಣವನ್ನಷ್ಟೇ ಮಾಡಬಲ್ಲ.ಮಾನುಷ ಚಹರೆಗಳ ಮೃದುತ್ವ ಮತ್ತು ಒರಟುತನವೆರಡನ್ನೂ ಗ್ರಹಿಸಿದವನು ಮಾತ್ರವೇ ಈ ಜಗತ್ತಿನ ತಲ್ಲಣ ಮತ್ತು ಮುಗ್ಧ ತನ್ಮಯತೆಯ ಇದಿರಿನಲ್ಲಿ ಮಾತಿಲ್ಲದೆ ನಿರುತ್ತರಿಯಂತೆ ನಿಲ್ಲುತ್ತಾನೆ. ಮೊದಲನೆಯವನದು ವರದಿಗಾರಿಕೆ; ಎರಡನೆಯವನದು ಕಥೆಗಾರಿಕೆ. ಪತ್ರಕರ್ತ ಮಂಜುನಾಥ್ ಚಾಂದ್ ಅವರ ಕಥೆಗಳು ಫಲಿಸುವುದು, ನಮ್ಮ ಸುತ್ತಲಿನ ಚಲನೆಗಳನ್ನು ಕಾಣುವ ಮತ್ತು ಕಂಡಿರಿಸುವ ಬಗೆಯಲ್ಲಿನ ಮೀರುವಿಕೆ ಹಲವು ದಿಕ್ಕುಗಳಿಂದ, ಹಲವು ನೆಲೆಗಳಿಂದ ಕ್ರಮಿಸುತ್ತ, ನಿಜದ ರೂಹಿನೊಳಗೆ ಪ್ರಾಣ ಪ್ರತಿಷ್ಠೆ ಮಾಡುವುದೆಂಬುದರ ನಿರೂಪಗಳಾಗುವ ಮೂಲಕ.
“ಕದ ತೆರೆದ ಆಕಾಶ” ಸಂಕಲನದಲ್ಲಿ 2005ರಿಂದ ಚಾಂದ್ ಅವರು ಬರೆದ ಒಂಬತ್ತು ಕಥೆಗಳಿವೆ. ಈ ಹತ್ತು ವರ್ಷಗಳಲ್ಲಿ ಒಂಬತ್ತೇ ಕಥೆಗಳು ಎಂಬುದು ಚಾಂದ್ ಅವರ ಸಂಯಮಕ್ಕೆ ಮಾತ್ರವಲ್ಲ, ಪರವಶವಾಗದ ನೋಡುವಿಕೆಗೂ ಸಾಕ್ಷಿ. ಪತ್ರಕರ್ತನ ವೃತ್ತಿಯ ಮಧ್ಯೆ ಪುರುಸೊತ್ತಾದಾಗ ಹವ್ಯಾಸದಂತೆ ಬರೆದ ಕಥೆಗಳಲ್ಲ ಇವು. ಬದಲಾಗಿ, ಕಥನದ ಗಾಂಭೀರ್ಯಕ್ಕೆ ಒಪ್ಪಿಸಿಕೊಂಡು ಹಂಗಿಲ್ಲದ ಹಾದಿಗಳಲ್ಲಿ ನಡೆಯುತ್ತ ಕೇಳಿಸಿಕೊಂಡದ್ದರ ಮಾರ್ನುಡಿಯಂತಿವೆ. ಈ ಕಥೆಗಳ ಓದಿನಲ್ಲಿ ಸಿಗುವ ಜಗತ್ತು ನಮ್ಮೊಳಗಿನ ಹೊಳೆಗಳಿಗೆ ಸಮುದ್ರದ ಅಗಾಧತೆಯನ್ನು ಕಲಿಸುವ ಮತ್ತು ನಮ್ಮೊಳಗಿನ ಸಮುದ್ರವನ್ನು ಹೊಳೆಗಳ ಕಡೆಗೆ ನಡೆಸುವ ಬೆರಗನ್ನು ಧರಿಸಿದ್ದಾಗಿದೆ.
ಸುಮ್ಮನೆ ಒಮ್ಮೆ ಈ ಕಥೆಗಳ ಹೆಸರು ಗಮನಿಸಿದರೆ, ಹೊರಳುವಿಕೆಯನ್ನು, ಅಯನವನ್ನು, ಅಂಥ ತುಡಿತವನ್ನು ಅವು ಸೂಚಿಸುತ್ತಿರುವುದು ಗೊತ್ತಾಗುತ್ತದೆ. ‘ಸಂತೆಯಿಂದ ಬಂದವನು’, ‘ಹೊಳೆ ದಂಡೆಯ ಆಚೆ’, ‘ಗೋಡೆಗಳನು ದಾಟಿ’, ‘ಊರಿಗೆ ಬಂದ ದೇವರು’ ಹೀಗೆ. ಇನ್ನೂ ಸೂಕ್ಷ್ಮವಾಗಿ ಅದು ತಾಕಲಾಟ. ಪ್ರಾದೇಶಿಕ ಎಂಬುದಕ್ಕಿಂತ ಮಿಗಿಲಾಗಿ ಮನಸ್ಸಿನೊಳಗಿನ ಸಂಘರ್ಷ. ಮೇಲ್ನೋಟಕ್ಕೆ, ಆಡುನುಡಿಯೂ ಸೇರಿ ಒಂದು ಪ್ರಾದೇಶಿಕ ಶರೀರವುಳ್ಳದ್ದಾಗಿ ಕಾಣುವ ಈ ಕಥೆಗಳು ಆಳದಲ್ಲಿ ಅದನ್ನು ಮೀರುವ ತಹತಹವನ್ನೇ ಉಸಿರಾಡುತ್ತಿವೆ. ಆ ತಹತಹ ಮೂಲವಾದ ಪ್ರಯಾಣದ ಕೊನೆ ಕೂಡ ಕೊನೆಗಾಣದ ಕದನದ ಹತಾಶೆಯೊಂದಿಗೇ ಮಡುಗಟ್ಟುವುದರಲ್ಲಿ ಈ ಕಥೆಗಳಿಗೆ ಒಂದು ತೆರನಾದ ಅವಿರತತೆಯು ಒದಗಿದೆ. ನಾನು ಈ ಮಾತು ಹೇಳುತ್ತಿರುವುದು ‘ತಿಮಿರ’, ‘ಸಂತೆಯಿಂದ ಬಂದವನು’, ‘ಕುಬೇರ ಶಿಕಾರಿ’, ‘ಊರಿಗೆ ಬಂದ ದೇವರು’ ಈ ಕಥೆಗಳನ್ನು ಮನಸ್ಸಿನಲ್ಲಿಟ್ಟುಕೊಂಡು. ಗಾಢ ನಿರೀಕ್ಷೆಯೊಂದು ತಣ್ಣಗೆ ಹುಸಿಹೋಗುವಲ್ಲಿ ಧುತ್ತನೆ ಎದುರಾಗುವ ಕ್ರೌರ್ಯ ಅರಗಿಸಿಕೊಳ್ಳಲಿಕ್ಕೆ ಆಗದಂಥದ್ದು. ಆ ಆಘಾತವನ್ನು ಹೊತ್ತುಕೊಂಡೇ ಬದುಕು ಮುಂದುವರಿಯಲಿರುವುದರ ಸುಳಿವಿನೊಂದಿಗೆ ತಲ್ಲಣಗಳ ತೀರದಲ್ಲಿ ಓದುಗನನ್ನು ತಂದು ನಿಲ್ಲಿಸುತ್ತವೆ ಚಾಂದ್ ಅವರ ಕಥೆಗಳು.
‘ಸವೆದ ಹಾದಿಯ ಉಸಿರು’, ‘ಹೊಳೆ ದಂಡೆಯ ಆಚೆ’, ‘ಗೋಡೆಗಳನು ದಾಟಿ’ ಕಥೆಗಳು ಮತ್ತೊಂದು ಬಗೆಯವು. ಹಲವು ಯಾತನೆಗಳಲ್ಲಿ ನರಳುವ ಹಂಬಲವು ಅಂತಿಮವಾಗಿ ಗೆಲ್ಲುವುದನ್ನು ಹೇಳುವ ಈ ಕಥೆಗಳಲ್ಲಿ, ಜಂಜಡದ, ಸಂಕಟದ, ಅಪಸ್ವರಗಳ ಹಾದಿಯೇ ಉದ್ದಕ್ಕೂ ಚಾಚಿಕೊಂಡಿದೆ. ಆದರೆ ಅವನ್ನೆಲ್ಲ ದಾಟುವುದರೊಂದಿಗೆ ನಿಕ್ಕಿಯಾದ ನಿರಾಳತೆಯಲ್ಲಿ ಕಾಣಿಸುವುದು ಜೀವನಪ್ರೀತಿಯ ಪ್ರಭೆ.
‘ಕದ ತೆರೆದ ಆಕಾಶ’ ಮತ್ತು ‘ಕಂಚಿಮಳ್ಳು’ ಕಥೆಗಳು ಬಹುಮುಖ್ಯವಾದವುಗಳಾಗಿ ನನಗೆ ಕಾಣಿಸುತ್ತವೆ. ಚಾಂದ್ ಅವರು ಮತ್ತೆ ಮತ್ತೆ ಬರೆಯಬಹುದಾದ ಕಥೆಗಳ ವಿನ್ಯಾಸವೊಂದು ಈ ಎರಡು ಕಥೆಗಳಲ್ಲಿ ಮೈಗೂಡಿದೆ ಎಂಬುದು ನನ್ನ ದೃಢವಾದ ನಂಬಿಕೆ. ಇದನ್ನು ಸ್ವಲ್ಪ ವಿಸ್ತರಿಸಿ ಹೇಳುವುದಾದರೆ, ಬದುಕು, ಭಾವನೆ, ಭಾಷೆ, ವ್ಯಾವಹಾರಿಕವಾದದ್ದರ ಪೈಪೋಟಿ, ಪ್ರೀತಿ ಪ್ರೇಮದಂಥದ್ದನ್ನು ಆಕ್ರಮಿಸಿಕೊಳ್ಳಲು ಹವಣಿಸುತ್ತಿರುವ ಮತ್ತೇನೋ ಒಂದು ಇವೆಲ್ಲವನ್ನೂ ಒಳಗೊಂಡ ಇವತ್ತಿನ ಜಗತ್ತು ಮತ್ತು ಅದು ತೆಗೆದುಕೊಳ್ಳಬಹುದಾದ ಅನಿರೀಕ್ಷಿತ, ಅನಪೇಕ್ಷಿತ ತೀರ್ಮಾನಗಳಲ್ಲಿ ಏಕಕಾಲದಲ್ಲೇ ಸ್ವಾತಂತ್ರ್ಯವನ್ನು ಕೊಟ್ಟಂತೆ ಮಾಡುತ್ತ ಇನ್ನೊಂದೆಡೆಯಿಂದ ಕಸಿದುಕೊಳ್ಳುತ್ತಲೂ ಇರುವ ಚೋದ್ಯವಿದೆ. ಇಲ್ಲಿ ಒಂದು ಗಂಡು ಹೆಣ್ಣು ತಮ್ಮ ಸ್ವಾಭಿಮಾನ, ಸ್ವಂತಿಕೆ ಮತ್ತು ಸ್ವಾತಂತ್ರ್ಯವನ್ನು ಬಯಸುತ್ತ ಮತ್ತು ಘೋಷಿಸಿಕೊಳ್ಳುತ್ತಲೇ ಇವಾವುದೂ ಸಾಧ್ಯವಾಗಲು ಆಸ್ಪದವಿರದ ಶರಣಾಗತ ಸ್ಥಿತಿಯಲ್ಲಿ ಬಯಸಿ ಬಯಸಿಯೇ ಸಿಲುಕುವುದು ನಡೆಯುತ್ತದೆ. ಉದ್ವೇಗ ಮತ್ತು ಗೊಂದಲಗಳು ಅವರೊಳಗಿನ ಭ್ರಮಾಧೀನ ನಿಚ್ಚಳತೆಯ ಸೆರಗಿನಲ್ಲೇ ಅಡಗಿರುತ್ತವೆ. ಹಾಗಾಗಿ ಭ್ರಮೆ ಒಡೆದುಕೊಂಡ ಪ್ರತಿ ಬಾರಿಯೂ ಸ್ಥಿತ್ಯಂತರ. ಇಂಥ, ತೀರ್ಮಾನಗಳಿಗೆ ದೀರ್ಘಾಯಸ್ಸು ಇಲ್ಲದ ಅವಸ್ಥೆಯಲ್ಲಿ, ಬದಲಾಗುತ್ತಿರುವ ತೀರ್ಮಾನಗಳ ಜೊತೆಗಿನ ಪ್ರಯಾಣದಲ್ಲೇ ಬದುಕು ದಣಿದುಬಿಡುವಲ್ಲಿ ತೆರೆದುಕೊಳ್ಳುವ ಆಧ್ಯಾತ್ಮಿಕ ಸ್ಪರ್ಶದ ಭಾವುಕ ಸಾಧ್ಯತೆ ಹೊಸ ಕಾಲದ ವ್ಯಂಗ್ಯವೊ ತೀವ್ರತೆಯೊ ಗೊತ್ತಾಗುವುದಿಲ್ಲ.ಒಟ್ಟಿನಲ್ಲಿ ಇದು ನಿಗೂಢವಾದಂಥ ಮತ್ತು ನಿಲುಗಡೆಯಿಲ್ಲದಂತೆ ತೋರುವ ಯಾನ. ಈ ಸ್ಥಿತಿಯ ಒಳಗನ್ನು ಶೋಧಿಸಲು ಹೊರಟಂತಿರುವ ಚಾಂದ್ ಅವರು, ಈ ಎರಡು ಕಥೆಗಳಲ್ಲಿ ಕಟ್ಟಿಕೊಡುವ ಅನುಭೂತಿ ವಿಶಿಷ್ಟವಾದುದಾಗಿದೆ.
‘ಕದ ತೆರೆದ ಆಕಾಶ’ ಕಥೆಯ ಜಾಹ್ನವಿ ನಿಜವಾಗಿಯೂ ಜಾಹ್ನವಿಯಲ್ಲ ಮತ್ತು ಅವಳು ಜಾಹ್ನವಿಯಾಗಿಯೇ ಬದುಕಲು ಬಯಸುತ್ತಿದ್ದಾಳೆ ಎಂಬ ಸತ್ಯ, ಅದಕ್ಕೆ ಪ್ರತಿಯಾಗಿ ‘ಕೆಲವರು ಸುಳ್ಳುಗಳ ಹೊದಿಕೆಯಲ್ಲೇ ಬದುಕುತ್ತಿರುತ್ತಾರೆ’ ಎಂಬ ತ್ಯಾಗರಾಜನ ತಕರಾರಿನಲ್ಲಿರುವ ಸತ್ಯ ಈ ಮುಖಾಮುಖಿ ಅಪರೂಪದ್ದಾಗಿದೆ. ಅವಳು ಬಿಟ್ಟುಬಂದಿರುವ ಅವಳ ಗಂಡನ ಪರವಾಗಿ ತ್ಯಾಗರಾಜ ವಕಾಲತ್ತು ನಡೆಸುತ್ತಾನೆ ಅವಳೆದುರಿನಲ್ಲಿ. ಇದೆಲ್ಲವೂ ಎಲ್ಲರನ್ನೂ ಜಲಸಮಾಧಿ ಮಾಡಿಬಿಡುವಂತೆ ಸುರಿದ ಮಳೆಯ ನಡುವೆ ಇನ್ನೇನು ಬದುಕು ಮುಗಿದೇಹೋಯಿತು ಎಂಬ ಘಟ್ಟ ಮುಟ್ಟಿ ಕಡೆಗೂ ಬದುಕುಳಿದ ದೀರ್ಘ ನಿಟ್ಟುಸಿರಿನ ಹೊತ್ತಲ್ಲಿ ಜರುಗುತ್ತದೆ. ಇಡೀ ಕಥೆಯೇ ಒಂದು ಅಸಾಧಾರಣ ರೂಪಕವಾಗಿ ಆವರಿಸಿಕೊಳ್ಳುತ್ತದೆ. ‘ಕಂಚಿಮಳ್ಳು’ ಕಥೆ ಕೂಡ ಇಷ್ಟೇ ನಾಟಕೀಯತೆಯೊಂದಿಗೆ ತೆರೆದುಕೊಳ್ಳುತ್ತದೆ. ದೇವ್ರು ಭಟ್ಟ ಮತ್ತು ಇಂದ್ರಾಣಿ ಅಲ್ಲಿ ಬರೀ ಪಾತ್ರಗಳಲ್ಲ. ನಮ್ಮ ಗೊಂದಲ, ಮಹತ್ವಾಕಾಂಕ್ಷೆ, ಹುಚ್ಚುತನ, ಆದರ್ಶ ಮತ್ತು ಇವೆಲ್ಲವನ್ನೂ ಆಳದಲ್ಲಿ ನಿರ್ವಹಿಸುವ ಕಾಮನೆಯ ಪ್ರವಹಿಸುವಿಕೆಯಾಗಿ ದೇವ್ರು ಮತ್ತು ಇಂದ್ರಾಣಿ ವಿಸ್ತಾರಗೊಳ್ಳುತ್ತಾರೆ.
ಕುತೂಹಲದ ಸಂಗತಿಯೊಂದಿದೆ. ಏನೆಂದರೆ, ‘ಕದ ತೆರೆದ ಆಕಾಶ’ದಲ್ಲಿನಂತೆ ‘ಕಂಚಿಮಳ್ಳು’ ಕಥೆಯಲ್ಲೂ ಮಳೆ ಬರುತ್ತದೆ. ಮೊದಲನೆಯದರಲ್ಲಿ ದುರಂತವನ್ನೇ ತರುತ್ತದೆ ಎನ್ನಿಸಿ ಆತಂಕ ಸೃಷ್ಟಿಸುವ ಮತ್ತು ಅದೇ ವೇಗದಲ್ಲೇ ಎದುರಾಗುತ್ತಿರುವ ಅಂತ್ಯಕ್ಕೆ ಸಜ್ಜುಗೊಳಿಸುವ ಮಳೆ; ಎರಡನೆಯದರಲ್ಲಿ ಶಾಲೆಯ ಗೋಡೆಯ ಮೇಲೆ ದೇವ್ರು ಬರೆದ ಇಂದ್ರಾಣಿಯ ಚಿತ್ರವನ್ನು ಅಳಿಸುವ ಮೂಲಕ ತೀರಾ ಕೌಟುಂಬಿಕವಾದದ್ದೊಂದು ಅನಗತ್ಯವಾಗಿ ಜನರ ಬಾಯಿಗೆ ಬೀಳುವುದನ್ನು ತಪ್ಪಿಸುವ ಮಳೆ. ಬದುಕನ್ನು ಹದಗೊಳಿಸುವ ಒಂದು ಶಕ್ತಿಯಂತೆ ಮಳೆ ವ್ಯಕ್ತಗೊಳ್ಳುತ್ತದೆ ಇಲ್ಲಿ.
ಗಂಡು ಹೆಣ್ಣಿನ ನಡುವಿನ ಸಂಬಂಧ ಮತ್ತು ದಾಂಪತ್ಯದ ಬಿಕ್ಕಟ್ಟುಗಳನ್ನು ಸಶಕ್ತವಾಗಿ ಚಾಂದ್ ಕಥನಿಸಬಲ್ಲರು ಎಂಬುದಕ್ಕೂ ‘ಕದ ತೆರೆದ ಆಕಾಶ’ ಮತ್ತು ‘ಕಂಚಿಮಳ್ಳು’ ಕಥೆಗಳು ಋಜುವಾತಿನಂತಿವೆ. ‘ನೀವು ಜಾಹ್ನವಿ ಅಲ್ಲ, ಅಹಲ್ಯಾ ಅನ್ನುವುದನ್ನು ಸಾಬೀತು ಮಾಡುವ ತಾಕತ್ತು ಈ ಎಡಗಾಲಿನ ಗೆಜ್ಜೆಗಿದೆ. ನಿಮ್ಮ ಆಕರ್ಷಕ ಕಣ್ಣುಗಳು ಗೆಜ್ಜೆಗೆ ರಿದಂ ಕೊಡುವುದನ್ನು ನಿಲ್ಲಿಸಿರಬಹುದು. ಒಬ್ಬ ಈಶ್ವರ ಪ್ರಸಾದ ತಪಸ್ವಿ ಆ ರಿದಂನಲ್ಲೇ ಬದುಕುತ್ತಿದ್ದಾನೆ. ಒಬ್ಬ ನೃತ್ಯಗಾತಿ ಅಹಲ್ಯಾ ಆತನ ಕೋಣೆಗಳಲ್ಲಿ ಇನ್ನೂ ಜೀವಂತವಾಗಿದ್ದಾಳೆ’ ಎಂಬ ತ್ಯಾಗರಾಜನ ಮಾತಿನಲ್ಲಿ ದಾಂಪತ್ಯದ ಒಂದು ಇತಿಹಾಸವೇ ಪ್ರಜ್ವಲಿಸುತ್ತಿದೆ. ಆದರೆ ‘ಒಂದು ಸ್ಪರ್ಶದಲ್ಲಿರುವ ಪ್ರೀತಿಯ ಜೀವಂತಿಕೆಯನ್ನು ಅನುಭವಿಸಲಾರದಷ್ಟು ದೂರ ಸರಿದು ಬಂದಿದ್ದೇನೆ’ ಎಂದು ಒಪ್ಪಿಕೊಳ್ಳುವ ಜಾಹ್ನವಿ ಅಲಿಯಾಸ್ ಅಹಲ್ಯಾ ಅನುಭವಿಸುತ್ತಿರುವ ಸಂಘರ್ಷ ಕೂಡ ಅದೇ ದಾಂಪತ್ಯದ ಕಥೆಯನ್ನು ಮತ್ತೊಂದು ಮಗ್ಗುಲಿಂದ ಬಿಡಿಸಿಡುತ್ತಿದೆ. ‘ಸಂಬಂಜಕ್ಕಿಂತ ಬದುಕು ದೊಡ್ಡದು ದೇವ್ರು. ಸಂಬಂಜದ ಗಂಟುಗಳೊಳಗೆ ಸಿಕ್ಕಾಕೊಂಡ್ರೆ ಅದರಾಚೆಗಿನ ಬದುಕು ಕಾಣ್ತಿಲ್ಲೆ. ನೀ ಊರೊಳಗಿನ ದೇವರನ್ನು ನಂಬಿಕೊಂಡಂವಾ. ನಾ ಅದರಾಚೆಗಿನ ಜೀವ್ನಾ ಕಾಣವು’ ಎಂದು ಹೇಳಿ ಅವನನ್ನು ಮದುವೆಯಾಗುವುದರಿಂದ ತಪ್ಪಿಸಿಕೊಂಡು ಹೋಗಿದ್ದ ಇಂದ್ರಾಣಿ, ಅದೇ ದೇವ್ರು ಸಾರ್ವಜನಿಕ ಸ್ಥಳದಲ್ಲಿ ಬರೆದ ತನ್ನ ಚಿತ್ರದ ಕಾರಣದಿಂದಾಗಿ ವಾಪಸಾಗುತ್ತಾಳೆ. ‘ಎಲ್ಲ ಸಂಬಂಜಕ್ಕೂ ಮನಸ್ಸೂ ಅಂತ ಇರ್ತಿಲ್ಲೆ’ ಎನ್ನುತ್ತಿದ್ದ ದೇವ್ರು ಹಾಗೆ ತನ್ನೊಳಗಿನ ಇಂದ್ರಾಣಿಯನ್ನು ಹೂಬೇಹೂಬು ಬರೆದದ್ದು ಒಂದು ಬೆರಗಿನಂತೆ ಕಾಡುತ್ತದೆ. ಇವೆಲ್ಲದರ ಮೂಲಕ ಚಾಂದ್ ಅವರು ಸಂಬಂಧಗಳ ಸೂಕ್ಷ್ಮತೆ, ನಿಗೂಢತೆ, ವೈರುದ್ಧ್ಯಗಳನ್ನು ಮತ್ತು ಇದೆಲ್ಲದಕ್ಕಿಂತ ಹೆಚ್ಚಾಗಿ ನಿಷ್ಕಾರಣ ಪ್ರೀತಿಯ ಶಕ್ತಿ ಮತ್ತು ಸಂಕಟಗಳನ್ನು ಧ್ಯಾನಿಸುತ್ತಾರೆ.
ಚಾಂದ್ ಅವರು ಕಥೆಗಾರಿಕೆಯನ್ನು ಗಂಭೀರವಾಗಿ ತೆಗೆದುಕೊಂಡವರು ಎಂಬುದನ್ನು ಆರಂಭದಲ್ಲೇ ಹೇಳಿದೆ. ಕಥೆ ಸುಲಭವಾಗಿ ದಕ್ಕಿಬಿಡಬೇಕು ಎಂಬ ಆತುರವಾಗಲಿ, ಸುಲಭದಲ್ಲೇ ದಕ್ಕುತ್ತದೆ ಎಂಬ ಭ್ರಮೆಯಾಗಲಿ ಅವರಿಗೆ ಇಲ್ಲ. ಕಥನದ ಹೊಳಹುಗಳಿಗಾಗಿ ಕಾಯುವ ಚಾಂದ್, ಕಥೆ ಹೇಳಲು ತುಸು ದುರ್ಗಮವೆನ್ನಿಸುವಂಥ ಹಾದಿಯನ್ನು ಆಯ್ದುಕೊಳ್ಳುತ್ತಾರೆ. ಹಾಗಾಗಿಯೇ ಅವರ ಕಥೆಗಳಲ್ಲಿ ಗದ್ದಲವಿಲ್ಲ. ಎಂಥ ಅಬ್ಬರವನ್ನೂ ತಣ್ಣಗಿನ ತನ್ಮಯತೆಯಲ್ಲೇ ಹೇಳಿಬಿಡುವ ಅವರ ಧಾಟಿಗೆ ಕಡಲಿನೆದುರು ನಿಂತವನ ದೃಢತೆ ಮತ್ತು ನಿರ್ದಾಕ್ಷಿಣ್ಯ ಮನಃಸ್ಥಿತಿಯಲ್ಲಿ ಏರ್ಪಡುವ ಉಲ್ಲಂಘನೆಯ ಗುಣ ಇದೆ. ಹೊಸ ಕಾಲವು ಕೇಳುತ್ತಿರುವ ಕಥೆಗಳನ್ನು ಕಾಣಬಲ್ಲ ಬಿಂದುವನ್ನು ಗಳಿಸಿಕೊಳ್ಳಬಲ್ಲವರಾಗಿದ್ದಾರೆ ಅವರು.

ಶುಕ್ರವಾರ, ಡಿಸೆಂಬರ್ 25, 2015

ಬದುಕು ಗೆಲ್ಲಿಸುವ ಸಿಮರೂಬ....

ಧರೆಗಿಳಿದ ಸ್ವರ್ಗಸೀಮೆಯ ಸಸ್ಯ.... 

ಕ್ಯಾನ್ಸರ್ ಮುಕ್ತ ನಾಡು ಕಟ್ಟುವ-ಡಾ.ಜೋಷಿ ದಂಪತಿ ಕನಸು 


ಆತನ ಹೆಸರು ನಚಿಕೇತ್. ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನಲ್ಲಿ ಪಿಯುಸಿಗೆ ಸೇರ್ಪಡೆಯಾಗಿದ್ದ. ಆಗ ಆತನಿಗೆ ಕಾಣಿಸಿಕೊಂಡಿದ್ದು ಮಾರಕ ಕಾಯಿಲೆ. `ಇದು ಬ್ಲಡ್ ಕ್ಯಾನ್ಸರ್, ತಕ್ಷಣ ಚಿಕಿತ್ಸೆ ಆರಂಭಿಸಿ' ಎಂದು ವೈದ್ಯರು ಸಲಹೆ ಮಾಡುತ್ತಾರೆ. ಕುಟುಂಬ ಕಣ್ಣೀರಾಗುತ್ತದೆ, ಬೆಳೆದು ನಿಂತ ಮಗನ ಭವಿಷ್ಯವೇ ಮುಗಿದು ಹೋದಂತೆ ಕುಸಿದು ಕುಳಿತು ಬಿಡುತ್ತದೆ. ಧೃತಿಗೆಡದ ಅಪ್ಪ-ಅಮ್ಮ ಮೊದಲ ಕಿಮೋಥೆರಪಿಯನ್ನೂ ಮಾಡಿಸುತ್ತಾರೆ. ಆ ಸಮಯದಲ್ಲೇ ಅವರಿಗೆ ಸಿಕ್ಕ ಮಾಹಿತಿ-ಸಿಮರೂಬಚಿಕಿತ್ಸೆ. ಬೇರೇನನ್ನೂ ಯೋಚಿಸದೇ ಚಿಕಿತ್ಸೆ ಶುರು ಮಾಡಿಕೊಳ್ಳುತ್ತಾರೆ. ಆರು ತಿಂಗಳು ನಿರಂತರ ಚಿಕಿತ್ಸೆ. ಬಳಿಕ ಕ್ಲಿನಿಕಲ್ ಟೆಸ್ಟ್; ಕ್ಯಾನ್ಸರ್ ಇರುವ ಸಣ್ಣ ಕುರುಹೂ ಕಾಣಿಸುವುದಿಲ್ಲ!

ಸಿಮರೂಬ ಗಿಡ (ಲಕ್ಷ್ಮೀತರು)ದೊಂದಿಗೆ ಡಾ. ಜೋಷಿ ದಂಪತಿ

 ಆಕೆಯ ಹೆಸರು ಸುಲೇಖಾ. ಇಬ್ಬರು ಮಕ್ಕಳ ತಾಯಿ. ಆಕೆಗೆ ಕಾಣಿಸಿಕೊಂಡಿದ್ದು ಮೆಲನೋಮಾ. ಇದೊಂದು ಚರ್ಮರೋಗ. ಕ್ಯಾನ್ಸರ್ ನಲ್ಲಿಯೇ ಅತ್ಯಂತ ಮಾರಕವಿದು ಎನ್ನುತ್ತಾರೆ ವೈದ್ಯರು. ಸುಲೇಖಾ ಪತ್ನಿಗೆ ತಜ್ಞ ವೈದ್ಯರು ಹೇಳಿದ್ದು ಇಷ್ಟು; ಬದುಕಿದ್ದರೆ ಮೂರು ಅಥವಾ ನಾಲ್ಕು ತಿಂಗಳು ಮಾತ್ರ! ಆದರೆ ಕಿದ್ವಾಯಿ ಆಸ್ಪತ್ರೆಯ ಹಿರಿಯ ವೈದ್ಯರಾದ ಡಾ.ವಿಜಯಲಕ್ಷ್ಮೀ ದೇಶಮಾನೆ ಅವರು ಸುಲೇಖಾಗೆ ಮಾಡಿದ ಸಲಹೆ- ಸಿಮರೂಬ ಚಿಕಿತ್ಸೆ. "ಕೊನೆಯ ಪ್ರಯತ್ನವಾಗಿ ಡಾ. ಶ್ಯಾಮಸುಂದರ ಜೋಷಿ ಅವರನ್ನು ಭೇಟಿ ಮಾಡಿ" ಎಂಬ ಮಾರ್ಗದರ್ಶನ. ಸಿಮರೂಬದ ಶರಣು ಹೋದ ಸುಲೇಖಾ ಎರಡು ವರ್ಷಗಳು ಕಳೆದಿವೆ. ಈಗ ದಿನವೂ ಬಿಎಂಟಿಸಿ ಬಸ್ಸು ಹತ್ತಿ ಕೆಲಸಕ್ಕೆ ಹೋಗುತ್ತಾರೆ. ಮನೆಯ ಎಲ್ಲ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಾರೆ. ಅವರೀಗ ಸಂಪೂರ್ಣ ಗುಣಮುಖಿ!

ಬೆಂಗಳೂರಿನ ನಾಗರಭಾವಿಯ ಸಹೀದಾಗೆ ಸಂಧಿವಾತ. ಇದನ್ನು rheumatoid arthritis ಎನ್ನುತ್ತಾರೆ. ಕೈ-ಕಾಲಿನ ಗಂಟುಗಳಲ್ಲಿ ಅಸಾಧ್ಯ ಯಾತನೆ. ಕುಂತರೆ ಏಳಲಾಗದ ಸ್ಥಿತಿ. 2009ರಿಂದ ಈ ರೋಗದಿಂದ ಬಳಲುತ್ತಿದ್ದ ಆಕೆ, ಕೊನೆಗೆ ಶುರು ಮಾಡಿಕೊಂಡಿದ್ದು ಸಿಮರೂಬ ಚಿಕಿತ್ಸೆಯನ್ನು. 2014ರ ಜನವರಿಯಲ್ಲಿ ಚಿಕಿತ್ಸೆ ಆರಂಭಿಸಿದ ಸಹೀದಾಗೆ ಅದೇ ವರ್ಷದ ಜುಲೈ ಹೊತ್ತಿಗೆ ಎಲ್ಲ ನೋವಿನಿಂದ ಮುಕ್ತಿ. ಈಗ ಎರಡು-ಮೂರು ಮಹಡಿ ಮೆಟ್ಟಿಲುಗಳನ್ನು ಅವರೇ ಹತ್ತಿ ಇಳಿಯುತ್ತಾರೆ. ಅವರದ್ದೀಗ ನಿರಾಳ ಜೀವನ....

ಎಷ್ಟೋ ಬಾರಿ ಹಾಗೇ, ಬದುಕು ಮುಗಿದೇ ಹೋಯಿತು, ಕಣ್ಣು ಮುಚ್ಚಿ ಕುಳಿತರೂ ಕುಸಿದು ಹೋದ ಅನುಭವ....

ಹೀಗೆ ಜೀವನದ ಕೊನೆಯ ಬಾಗಿಲು ಹಾಕಲು ಮಾನಸಿಕವಾಗಿ ಸಿದ್ಧತೆ ಮಾಡಿಕೊಂಡ ನೂರಾರು ಜನರಿಗೆ ಹೊಸ ಬೆಳಕು ಮೂಡಿಸಲು ಕುಂತಿರುವವರು ಡಾ.ಶ್ಯಾಮಸುಂದರ ಜೋಷಿ ಮತ್ತು ಡಾ. ಶಾಂತಾ ಜೋಷಿ ದಂಪತಿ. ಸಸ್ಯಶಾಸ್ತ್ರ ತಜ್ಞರಾದ ಇಬ್ಬರೂ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ನಿವೃತ್ತ ಪ್ರೋಫೆಸರ್.

ರಾಜ್ಯದ ಮೂಲೆ ಮೂಲೆಗಳಿಂದ ನೂರಾರು ಜನ ಅವರ ಮನೆಗೆ ಎಡತಾಕುತ್ತಾರೆ. ಬದುಕು ಕಣ್ಣು ಮುಚ್ಚೇ ಬಿಟ್ಟಿತು, ಕೊನೆಯ ಆಸೆಯಿಂದ ಬಂದಿದ್ದೇವೆ ಎನ್ನುತ್ತಾರೆ. ಅವರು ದೊಡ್ಡದಾಗಿ ನಕ್ಕು `ಸಿಮರೂಬ ತಾಯಿಯನ್ನು ಪ್ರೀತಿಸಿ, ನೂರಕ್ಕೆ ನೂರು ಎಲ್ಲವೂ ಸರಿ ಹೋಗುತ್ತದೆ' ಎಂಬ ಭರವಸೆ ನೀಡುತ್ತಾರೆ. ಅವರ ಮನೆ ಇರುವುದು ಬೆಂಗಳೂರಿನ ಆರ್.ಟಿ.ನಗರದ ಬಾಜೂಕು ಇರುವ ಆನಂದನಗರದಲ್ಲಿ. ಜೋಷಿ ದಂಪತಿ ಎಲ್ಲರನ್ನೂ ಸಮಚಿತ್ತದಿಂದ ಸ್ವಾಗತಿಸುತ್ತಾರೆ. ಸಾಂತ್ವನ ಹೇಳುತ್ತಾರೆ. ಚಿಕಿತ್ಸೆ ಪಡೆದು ಬದುಕು ಕಣ್ಣು ತೆರೆದು ಖುಷಿಯಾದವರನ್ನು ಕಂಡು ಧನ್ಯರಾಗುತ್ತಾರೆ.

ಕಾಯಿಲೆಯಿಂದ ಗುಣಮುಖರಾದ ಅದೃಷ್ಟಶಾಲಿಗಳು ಬರೆದಿರುವ ನೋಟ್... 
ಹಾಗೆ ಮಾರಕ ಕಾಯಿಲೆಗಳಿಂದ ಮುಕ್ತಿ ಪಡೆದು ಸುಖಜೀವನ ನಡೆಸುತ್ತಿರುವವರ ದೊಡ್ಡ ಪಟ್ಟಿಯೇ ಅವರ ಬಳಿಯಿದೆ. ಮೇಲೆ ಪ್ರಸ್ತಾಪಿಸಿದ ಎಲ್ಲ ಪ್ರಕರಣಗಳೂ ಅವರೇ ಕಾಯ್ದಿಟ್ಟಿರುವ ನೋಟ್ ಬುಕ್ ಗಳಲ್ಲಿ ರೋಗಿಗಳೇ ಬರೆದುಕೊಂಡಿರುವ ನಿಜ ಸಂಗತಿಗಳು. ಜೋಷಿ ಅವರ Book rack ನಲ್ಲಿ ಇಂತಹ ಕನಿಷ್ಠ 25 ಪುಸ್ತಕಗಳಿವೆ. ಅದರ ಪುಟಪುಟಗಳಲ್ಲೂ ಯಾತನೆಯ ಕಥೆಗಳು ಮತ್ತು ಕೊನೆಯಲ್ಲಿ ಸುಖಾಂತ್ಯದ ನೋಟ್!ಈಚೆಗೆ ತಾನೆ ಜೋಷಿ ಅವರ ಮನೆಗೆ ಹೋದಾಗ ಒಂದು ಹೃದ್ಯ ಸನ್ನಿವೇಶಕ್ಕೆ ಸಾಕ್ಷಿಯಾಗಬೇಕಾಯಿತು. ಬ್ಲಡ್ ಕ್ಯಾನ್ಸರ್ ಪೀಡಿತ ನಚಿಕೇತ್ (ಲೇಖನದ ಆರಂಭದಲ್ಲಿ ಪ್ರಸ್ತಾಪಿಸಿದ ಹುಡುಗ) ಸಂಪೂರ್ಣ ಗುಣಮುಖನಾಗಿ ಜೋಷಿ ದಂಪತಿಯ ಆಶೀರ್ವಾದ ಪಡೆಯಲು ಬಂದಿದ್ದ. `ನಾಳೆಯಿಂದಲೇ ಕಾಲೇಜಿಗೆ ಹೋಗಬೇಕು, ಅದಕ್ಕೇ ಆಶೀರ್ವಾದ ಪಡೆಯಲು ಬಂದಿದ್ದೇನೆ' ಎನ್ನುತ್ತಾನೆ ಆತ. `ಇವೆಲ್ಲವೂ ತಾಯಿ ಸಿಮರೂಬ ಮಹಿಮೆ, ನನ್ನದೇನೂ ಇಲ್ಲ' ಎನ್ನುತ್ತ ನಗುತ್ತಾರೆ ಜೋಷಿ. ನಚಿಕೇತನ ಅಮ್ಮನ ಕಣ್ಣಿನಲ್ಲಿ ಭರವಸೆಯ ಬೆಳಕು. ನಚಿಕೇತನ ಕಣ್ಣಿನಲ್ಲಿ ಬದುಕು ಗೆದ್ದ ಖುಷಿ.....

ಒಂದು ಸಿಮರೂಬ ಗಿಡ ಮನುಷ್ಯನ ಸುತ್ತ ಸುಭದ್ರವಾದ ಆರೋಗ್ಯ ಕವಚವನ್ನೇ ಸೃಷ್ಟಿಸಬಲ್ಲುದು ಎಂದರೆ ನಿಜಕ್ಕೂ ಅಚ್ಚರಿಯಾಗುತ್ತದೆ. ಕೇವಲ ಆರೋಗ್ಯ ಮಾತ್ರವಲ್ಲ, ಮನುಷ್ಯನಿಗೆ ಇರುವ ಇದರ ಪ್ರಯೋಜನಗಳ ಶಾಖೆ ಅನೇಕ. ಜೋಷಿ ದಂಪತಿ ಕಳೆದ 20 ವರ್ಷಗಳಲ್ಲಿ ಸಿಮರೂಬದ ಮೇಲೆ ಅನೇಕ ಸಂಶೋಧನೆ, ಪ್ರಯೋಗಗಳನ್ನು ಮಾಡಿದ್ದಾರೆ. ಕೆಲವನ್ನು ತಮ್ಮ ಮೇಲೇ ಪ್ರಯೋಗ ಮಾಡಿಕೊಂಡಿದ್ದಾರೆ. ಅಮೀಬಿಯಾಸಿಸ್ ಎಂಬ ರೋಗದಿಂದ ಬಹಳ ಕಾಲ ಬಳಲುತ್ತಿದ್ದ ಶ್ಯಾಮಸುಂದರ ಜೋಷಿ ಕೊನೆಗೆ ಮೊರೆ ಹೋಗಿದ್ದು ಕೂಡ ಸಿಮರೂಭಕ್ಕೆ. ಅಲ್ಲಿಂದಾಚೆಗೆ ಅವರು ಬದಲಾಗಿದ್ದಾರೆ, ಇಳಿ ವಯಸ್ಸಿನಲ್ಲಿರುವ ಜೋಷಿ ದಂಪತಿ ಅನೇಕರ ಬದುಕನ್ನು ಬದಲಿಸಿದ್ದಾರೆ. ಪ್ರತಿ ದಿನ ಮಧ್ಯಾಹ್ನ 2ರಿಂದ ಸಂಜೆ ಆರರ ತನಕ ಅವರ ಮನೆಯಲ್ಲಿ ಕುಂತು ಬಿಟ್ಟರೆ "ಬದಲಾದ ಬದುಕಿನ ಚಿತ್ರಣ" ನಿಮ್ಮ ಕಣ್ಣ ಮುಂದೆ ತೆರೆದುಕೊಳ್ಳುತ್ತದೆ.

ಇದು ಆ್ಯಂಟಿ ಬ್ಯಾಕ್ಟೀರಿಯಲ್, ಆ್ಯಂಟಿ ವೈರಲ್, ಆ್ಯಂಟಿ ಹೆಲ್ಮೆಂಟಿಕ್, ಆ್ಯಂಟಿ ಪ್ರೊಟೋಝೋವಾ ಮತ್ತು ಆ್ಯಂಟಿ ಕ್ಯಾನ್ಸರ್ ಎಂದು ಅರಳು ಹುರಿದಂತೆ ವಿವರಕ್ಕೆ ಶುರು ಮಾಡುವ ಜೋಷಿ, ಸಿಮರೂಭದ ಕಷಾಯವನ್ನು ಬಾಯಲ್ಲಿಟ್ಟು ಹತ್ತು ನಿಮಿಷ ಮುಕ್ಕಳಿಸಿದರೆ ಹಲ್ಲಿನ ವಸಡು ಸಮಸ್ಯೆ, ಬಾಯಲ್ಲಿ ಕೆಟ್ಟ ವಾಸನೆ ಮಾಯವಾಗುತ್ತದೆ. ಜೀರ್ಣಾಂಗ ವ್ಯವಸ್ಥೆಯ ಉದ್ದಕ್ಕೆ ಎಲ್ಲಿಯೇ ರಕ್ತಸ್ರಾವ ಇರಲಿ ಗುಣವಾಗುವುದು ಖಚಿತ. ಅಲ್ಸರ್ ಯಾವುದೇ ಹಂತದಲ್ಲಿರಲಿ ಒಂದರಿಂದ ಆರು ತಿಂಗಳಲ್ಲಿ ಶಮನ ಗ್ಯಾರೆಂಟಿ. ಚಿಕೂನ್ ಗುನ್ಯ, ಹೆಚ್1ಎನ್1, ಡೆಂಗ್ಯೂ, ಹಂದಿಜ್ವರ, ಸಂಧಿವಾತ, ಹೆಪಟೈಟಿಸ್-ಬಿ., ಕರುಳುಬೇನೆ ಹೀಗೆ ಅನೇಕ ಕಾಯಿಲೆಗಳನ್ನು ಶಮನ ಮಾಡಿದ ಪಟ್ಟಿಯನ್ನವರು ಕೊಡುತ್ತಾರೆ.

ಲಂಡನ್ನಲ್ಲಿ ವೈದ್ಯರಾಗಿರುವ ಡಾ. ರಾಜೀವ್ ರಂಗರಾಜನ್ ಐದು ವರ್ಷಗಳಿಂದ ಅಲ್ಸರೆಟಿವ್ ಕೊಲೈಟಿಸ್ ನಿಂದ ಬಳಲುತ್ತಿದ್ದರು. ವಿದೇಶದಲ್ಲಿಯೇ ಅನೇಕ ದೊಡ್ಡ ಡಾಕ್ಟರ್ ಗಳ ಸಲಹೆ ಪಡೆಯುತ್ತಾರೆ. "ಆಹಾರ ಕ್ರಮದಲ್ಲಿ ನಿಯಂತ್ರಣ ಸಾಧಿಸಿ ಮತ್ತು ಅದರ ಪಾಡಿಗೆ ಅದನ್ನು ಬಿಟ್ಟುಬಿಡಿ, ಇನ್ನೇನು ಮಾಡಲು ಸಾಧ್ಯವಿಲ್ಲ" ಎಂದು ಅವರು ಕೈಚೆಲ್ಲುತ್ತಾರೆ. ಕೊನೆಗೆ ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ತಮ್ಮ ಮನೆಗೆ ಬಂದಾಗ ಅವರ ಅರಿವಿಗೆ ಬಂದಿದ್ದು ಸಿಮರೂಬ ಚಿಕಿತ್ಸೆ. ತಕ್ಷಣ ಜೋಷಿ ಅವರಿಂದ ಚಿಕಿತ್ಸೆ ಆರಂಭಿಸುತ್ತಾರೆ. ಈಗವರು ಅಲ್ಸರೆಟಿವ್ ನಿಂದ ಸಂಪೂರ್ಣ ಮುಕ್ತರಾಗಿದ್ದಾರೆ. ಡಾ. ರಾಜೀವ್ ಅವರು ಪ್ರತಿ ಬಾರಿ ಭಾರತಕ್ಕೆ ಬಂದಾಗ ಮುದ್ದಾಂ ಜೋಷಿ ಅವರನ್ನು ಭೇಟಿ ಮಾಡಿಯೇ ಮಾಡುತ್ತಾರೆ. ಒಂದಿಷ್ಟು ಕಷಾಯ, ಹುಡಿ ಪಡೆದು ಅಮೆರಿಕಕ್ಕೆ ಮರಳುತ್ತಾರೆ.

ಕ್ಯಾನ್ಸರ್ ಮೊದಲ ಮತ್ತು ಎರಡನೇ ಹಂತದಲ್ಲಿದ್ದರೆ ಸಿಮರೂಬ ಬಿಟ್ಟು ಬೇರಿನ್ನಾವುದೇ ಔಷಧಿಯ ಅಗತ್ಯವಿಲ್ಲ, ಕಿಮೋ ಥೆರಪಿ ಆರಂಭ ಮಾಡಿದ್ದರೂ ಪರ್ಯಾಯವಾಗಿಯೂ ಇದನ್ನು ಸೇವಿಸುತ್ತ ಬರಬಹುದು. ಅದರ ಪರಿಣಾಮದ ಅರಿವಾಗುವುದನ್ನು ನೀವೇ ಗಮನಿಸುವಿರಿ. ಕೊನೆಗೆ ತಲೆಕೂದಲೂ ಉದುರುವುದಿಲ್ಲ. ಹುಬ್ಬಳ್ಳಿಯ ಕವಿತಾ ಎಂಬವರಿಗೆ ಮಿದುಳಿನ ಕ್ಯಾನ್ಸರ್ ಆಪರೇಷನ್ ಆಗಿತ್ತು, ವೈದ್ಯರು ಆಕೆಯ ಬದುಕಿಗೆ ಮೂರು ತಿಂಗಳ ಗಡುವು ಕೊಟ್ಟಿದ್ದರು. ಕಳಚಿ ಹೋಗುವ ಜೀವನ ಸೌಧದ ಚಿತ್ರವನ್ನು ಕಣ್ಣ ಮುಂದೆ ಇಟ್ಟುಕೊಂಡೇ ಅವರು ಸಿಮರೂಬ ಥೆರಪಿ ಆರಂಭ ಮಾಡಿದರು. ವೈದ್ಯರು ಕೊಟ್ಟ ಬದುಕಿನ ಗಡುವು ಮುಗಿದು ಆರು ವರ್ಷಗಳೇ ಕಳೆದಿವೆ. ಕಳೆದ ಆರು ವರ್ಷಗಳಿಂದ ಆಕೆ ತನ್ನ ಪ್ರತಿ ಸುಖ, ಸಂತೋಷವನ್ನು ಜೋಷಿ ಅವರ ಬಳಿ ಹಂಚಿಕೊಳ್ಳುತ್ತಾರೆ, ಮೊನ್ನೆ ತಾನೆ ಆಳೆತ್ತರಕ್ಕೆ ಬೆಳೆದ ಸಿಮರೂಬ ಮರದ ಪಕ್ಕದಲ್ಲಿ ನಿಂತು ಫೊಟೋ ತೆಗೆಸಿ ಕಳಿಸಿದ್ದಾರೆ.

ಸೀದಾ ಸೀದಾ ಅಸ್ತಿಮಜ್ಜೆಗೆ ದಾಳಿ ಮಾಡುವ ಮಲ್ಟಿಪಲ್ ಮೈಲೋಮಾಕ್ಕೆ ಒಳಗಾದ 56 ವರ್ಷದ ಶಿವಮೊಗ್ಗದ ರಾಮಚಂದ್ರ ಎಲ್ಲ ಇಂಗ್ಲಿಷ್ ಚಿಕಿತ್ಸೆಯ ಬಳಿಕ ಇನ್ನು ಸಾವಷ್ಟೇ ಖಾತರಿ ಎಂದುಕೊಂಡಿದ್ದರು. ಅವರ ಮಗ ತಂದೆಗೆ ಕೊಡಿಸಿದ್ದು ಸಿಮರೂಬ ಚಿಕಿತ್ಸೆ. ನಾಲ್ಕೇ ತಿಂಗಳಲ್ಲಿ ಅವರು ಮತ್ತೆ ತಮ್ಮ ದ್ವಿಚಕ್ರ ವಾಹನದಲ್ಲಿ ಕೆಲಸಕ್ಕೆ ಹೋಗಲು ಆರಂಭಿಸಿದ್ದಾರೆ. ಮಗ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈಗ ಅರಣ್ಯ ಇಲಾಖೆಯವರೂ ಇದನ್ನು ಬೆಳೆಸುತ್ತಾರೆ.... ನಿಮ್ಮ ಬಡಾವಣೆಯಲ್ಲಿ ತೋಟದಲ್ಲಿ ಈ ಸಸ್ಯವಿರಲಿ

ಆರೋಗ್ಯ ರಕ್ಷಣೆಯೊಂದೇ ಇದರ ತಾಕತ್ತಲ್ಲ, ಯಾವುದೇ ಬರಡು ಭೂಮಿಯಲ್ಲಿ ಇದನ್ನು ಬೆಳೆಯಿರಿ- ಸಿಮರೂಬ ಎತ್ತರಕ್ಕೆ ಬೆಳೆದು ಹಸಿರಾಗುತ್ತದೆ. ಹಾಗಾಗಿ ಇದು  ಧರೆಗಿಳಿದ ಸ್ವರ್ಗ ಸೀಮೆಯ ಸಸ್ಯ,ಅದಕ್ಕೆ  ತಾಯಿ ಸಿಮರೂಬ ಎಂಬ ಹೆಗ್ಗಳಿಕೆ ಎನ್ನುತ್ತಾರೆ ಜೋಷಿ. ಆಹಾರ, ಆರೋಗ್ಯ, ಔಷಧಿ, ಇಂಧನ, ರಸಗೊಬ್ಬರ... ಹೀಗೆ ಸಿಮರೂಬ ಪ್ರಯೋಜನಗಳನ್ನು ಪಟ್ಟಿ ಮಾಡಬಹುದು. ಲ್ಯಾಟಿನ್ ಅಮೆರಿಕ ಮೂಲವಾಗಿರುವ ಇದರ ನಾಲ್ಕೇ ನಾಲ್ಕು ಬೀಜಗಳನ್ನು ಕುತೂಹಲಕ್ಕೆಂದು ಜಿಕೆವಿಕೆಯಲ್ಲಿ ನೆಟ್ಟರೆ ಅದು ಮುಂದಿನ ತಲೆಮಾರಿನ ರಕ್ಷಕ ಎಂಬುದು ಸಾಬೀತಾಗುತ್ತ ಹೋಯಿತು.

ಜೋಷಿ ದಂಪತಿ ಮುಂದೆ ಕುಂತರೆ ಸಿಮರೂಬಕ್ಕೆ ಸಂಬಂಧಿಸಿದ ನೂರಾರು ಕಥೆಗಳನ್ನು ಹೇಳುತ್ತ ಹೋಗುತ್ತಾರೆ. ಹೀಗೆ ಜನ ಸಿಮರೂಬದ ಪರಿಣಾಮವನ್ನು ತಮಗೆ ತಾವೇ ಅನುಭವಿಸಿದ ಬಳಿಕ ಎಲ್ಲಿ ಸಾಧ್ಯವೋ ಅಲ್ಲಿ ಈ ಗಿಡವನ್ನು ಬೆಳೆಸಲು ಆರಂಭಿಸಿದ್ದಾರೆ. ಯಾವುದೇ ವಾತಾವರಣದಲ್ಲಿ, ಯಾವುದೇ ನೆಲದಲ್ಲಿ ಇದನ್ನು ಬೆಳೆಯಬಹುದು. ಪಾರ್ಕ್, ದೇವಸ್ಥಾನ, ಸ್ಮಶಾನ,  ಬಡಾವಣೆಯ ರಸ್ತೆ ಬದಿಯಲ್ಲಿ ಎಲ್ಲಿ ಬೇಕಾದರೂ ನೆಡಬಹುದು. ಕೇವಲ ಎರಡು ವರ್ಷ ಕಷ್ಟಪಟ್ಟು ಈ ಗಿಡಗಳನ್ನು ನೆಟ್ಟು ಸಲಹಿ, ಐದನೇ ವರ್ಷಕ್ಕೆ ಹೂ, ಬೀಜ ಬಿಡಲು ಆರಂಭಿಸುತ್ತದೆ ಮತ್ತು ಅದು ನಿಮ್ಮನ್ನು ಆರವತ್ತು ವರ್ಷಗಳ ಕಾಲ ಕಾಪಾಡುತ್ತದೆ. ಅದರ ಗಾಳಿ ಸೇವನೆ ಮಾಡುತ್ತ ಬದುಕಿ, ಕ್ಯಾನ್ಸರ್ ಮುಕ್ತವಾಗಿ, ರೋಗಮುಕ್ತವಾಗಿ. ಕ್ಯಾನ್ಸರ್ ಎಂಬುದು ಕುಬೇರನ ವ್ಯಾಧಿ. ಅದು ಬಂದಿತೆಂದರೆ ಲಕ್ಷಾಂತರ ರೂ. ಕಬಳಿಸಿ ಹಾಕುತ್ತದೆ. ಅಂತಹ ಮಾರಕ ರೋಗಕ್ಕೆ ಅಂಕುಶವೊಡ್ಡುವ ಶಕ್ತಿಯಿರುವ ಸಿಮರೂಬ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಲಭ್ಯವಾಗಬೇಕು. ನಮ್ಮದು ಕ್ಯಾನ್ಸರ್ ಮುಕ್ತ ರಾಷ್ಟ್ರವಾಗಬೇಕು. ಮುಂದಿನ ತಲೆಮಾರು ನೆಮ್ಮದಿಯಿಂದ ಬದುಕಬೇಕು ಎಂಬುದು ನನ್ನ ಕನಸು ಎನ್ನುವ ಜೋಷಿ ಅವರು ನನ್ನ ಬೊಗಸೆಗೆ ಒಂದು ಮುಷ್ಟಿ ಸಿಮರೂಬ ಬೀಜಗಳನ್ನು ಹಾಕಿ `ನಿಮ್ಮ ಬಡಾವಣೆಯಲ್ಲಿ ಎಲ್ಲಾದರೂ ಬೀಜ ಹಾಕಿ, ಅದರ ಪಾಡಿಗೆ ಅದು ಬೆಳೆದುಕೊಳ್ಳಲಿ' ಎಂದು ಮುಗುಳ್ನಗುತ್ತಾರೆ. ಅವರು ನನ್ನ ಬೊಗಸೆಗೆ ಇಟ್ಟ ಗಿಡ ನಮ್ಮೂರಲ್ಲೂ ಬೆಳೆಯುತ್ತಿದೆ-ಮುಂದಿನ ತಲೆಮಾರಿಗೆ.


(ರೋಗಿಗಳ ಹೆಸರುಗಳನ್ನು ಬದಲಿಸಲಾಗಿದೆ)

ಒಂದು ಗಿಡ ಕಲಿಸಿದ ನೂರಾರು ಪಾಠಗಳು....

ಡಾ. ಶಾಂತಾ ಜೋಷಿ
ಸಿಮರೂಬ 1993ರಲ್ಲಿ ಮೊದಲ ಬಾರಿಗೆ ಹೂ ಬಿಟ್ಟಿತು. 95ರಿಂದ ಚಿಕಿತ್ಸೆಗಾಗಿ ಇದನ್ನು ಕೊಡುವುದಕ್ಕೆ ಆರಂಭಿಸಿದೆವು. ಮೊದಲ ಪ್ಲಾಂಟಿಂಗ್ ಮಾಡಿದ್ದು 85ರಲ್ಲಿ. ಜಿಕೆವಿಕೆಯಲ್ಲಿ ಸನ್ ಫ್ಲವರ್ ಯೋಜನೆಯ ಮುಖ್ಯಸ್ಥಳಾಗಿದ್ದ ಸಂದರ್ಭದಲ್ಲಿ ಒರಿಸ್ಸಾಗೆ ಹೋಗಿದ್ದ ನಮ್ಮ ನಿರ್ದೇಶಕರಾದ ಡಾ.ಕೆ.ಕೃಷ್ಣಮೂರ್ತಿ ಅವರು ಅಲ್ಲಿಂದ ನಾಲ್ಕು ಬೀಜಗಳನ್ನು ತಂದಿದ್ದರು. ಸಂಶೋಧನೆಯ ಕಾರಣದಿಂದ ಅದನ್ನು ನೆಟ್ಟೆವು. ಮುಂದೆ ಅದು ಹೂ ಬಿಟ್ಟು ಬೆಳೆಯತೊಡಗಿದಾಗ ಒಂದೊಂದಾಗಿ ಅದರ ಮಹತ್ವಗಳ ಬಗ್ಗೆ ಅಧ್ಯಯನ ಮಾಡುತ್ತ ಹೋದೆವು. ಸಿಮರೂಬ ದಿನದಿಂದ ದಿನಕ್ಕೆ ನಮಗೆ ಹೊಸಹೊಸ ಪಾಠಗಳನ್ನು ಕಲಿಸುತ್ತಾ ಹೋಯಿತು ಎಂದು ವಿವರಿಸುತ್ತಾರೆ ಶಾಂತಾ ಜೋಷಿ. ಶಾಂತಾ ಅವರು ಇದರ ವೈದ್ಯಕೀಯ ಮಹತ್ವದ ಬಗ್ಗೆ ಹಾಗೂ ಶ್ಯಾಮಸುಂದರ ಜೋಷಿ ಇದರ ಆರ್ಥಿಕ ಹಾಗೂ ಪರಿಸರ ಪ್ರಾಮುಖ್ಯತೆಯನ್ನು ಅಧ್ಯಯನ ಮಾಡುತ್ತ ಹೋದರು. ಜಿಕೆವಿಕೆ ಸುತ್ತಮುತ್ತ ಇರುವ ಹತ್ತು ಎಕರೆ ಜಾಗದಲ್ಲಿ 2000ಕ್ಕೂ ಅಧಿಕ ಸಿಮರೂಬ ಮರಗಳಿವೆ.


ವೈದ್ಯರಿಂದಲೇ ದೂರ ಇರಿ....

* ಪ್ರತಿ ಆರು ತಿಂಗಳಿಗೊಮ್ಮೆ 15 ದಿನಗಳ ಕಾಲ ದಿನಕ್ಕೆ ಮೂರಾವರ್ತಿ ಸಿಮರೂಬ ಕಷಾಯವನ್ನು ಸೇವಿಸಿದರೆ ಇಡೀ ಜೀವಮಾನ ವೈದ್ಯರಿಂದ ದೂರ ಇರಬಹುದು.
* ರಕ್ತಹೀನತೆ, ಮುಟ್ಟಿನ ಸಮಸ್ಯೆ, ರಕ್ತಸ್ರಾವವನ್ನು ತಡೆಗಟ್ಟಬಹುದು.
* ವಾಣಿಜ್ಯ ಬೆಳೆಯಾಗಿಯೂ ಇದನ್ನು ಬೆಳೆಸಬಹುದು. ಅತಿ ಬೇಗ ಬೆಳೆಯುತ್ತದೆ, 10ನೇ ವರ್ಷಕ್ಕೆ ಕತ್ತರಿಸಿ ಮರದ ನಾಟಾದಿಂದ ಪೀಠೋಪಕರಣ ತಯಾರಿಸಬಹುದು.
* ಮಧ್ಯ ಅಮೆರಿಕ ರಾಷ್ಟ್ರಗಳಲ್ಲಿ ಇದನ್ನು ನೂರಾರು ವರ್ಷಗಳಿಂದ ಅನೇಕ ಕಾಯಿಲೆಗಳಿಗೆ ಬಳಸುತ್ತಿದ್ದರು.
* ಸಿಮರೂಬ ಹಣ್ಣಿನ ತಿರುಳಿನಲ್ಲಿ ಶೇ.16ರಷ್ಟು ಸಕ್ಕರೆ ಅಂಶವಿದೆ. ಒಂದು ಮರದ ಹಣ್ಣುಗಳಿಂದ 20 ಲೀಟರ್ನಷ್ಟು ಜೂಸ್ ಮಾಡಬಹುದು.
* ಸಿಮರೂಬ ಬೀಜದಿಂದ ಶೇ.75ರಷ್ಟು ತೈಲವನ್ನು ತೆಗೆಯಬಹುದು. ಲ್ಯಾಟಿನ್ ಅಮೆರಿಕದಲ್ಲಿ ಇದನ್ನು ಮಂಟೆಕಾ ವೆಜಿಟಲ್ ನೀವ್ ಎಂದು ಕರೆಯುತ್ತಾರೆ. ಈ ಸಂಸ್ಕರಿತ ತೈಲ ಕೊಲೆಸ್ಟ್ರಾಲ್ ರಹಿತವಾಗಿದ್ದು ಉತ್ತಮ ಖಾದ್ಯ ತೈಲವೂ ಹೌದು.
* ಸಿಮರೂಬದಿಂದ ಬಯೋಡೀಸೆಲ್ ತಯಾರಿಕೆಯೂ ಸಾಧ್ಯ.
* ಒಟ್ಟಾರೆ ಇದರ ಎಲೆ, ಬೀಜ, ಹಣ್ಣು, ಬೀಜದ ತಿರುಳು, ಕಾಂಡ, ಚಕ್ಕೆ, ಬೇರು ಎಲ್ಲವೂ ಬಳಕೆಗೆ ಯೋಗ್ಯ.ಉಳಿದ ಬದುಕು...
ಮೂರೂವರೆ ಸೆಂ.ಮೀ. ಟ್ಯೂಮರ್ ಗಡ್ಡೆ ಇದ್ದು ನಾಳೆ ಸರ್ಜರಿ ಟೇಬಲ್ ಮೇಲೆ ಮಲಗಬೇಕಿದ್ದ ಮಹಿಳೆಯೊಬ್ಬರು ಸಿಮರೂಬ ಚಿಕಿತ್ಸೆ ಆರಂಭಿಸುತ್ತಾರೆ. ಆರೇ ತಿಂಗಳಲ್ಲಿ ಅಚ್ಚರಿಯಾಗುವ ರೀತಿಯಲ್ಲಿ ಗಡ್ಡೆಯ ಕುರುಹೇ ನಾಪತ್ತೆಯಾಗಿದೆ. ಈಗವರು ಮಹಡಿ ಮನೆಯನ್ನು ಹತ್ತಿ ಇಳಿದು ಸರಾಗವಾಗಿ ಕೆಲಸ ಮಾಡುತ್ತಾರೆ. ಈ ಚಿಕಿತ್ಸೆಯ ಜತೆಗೆ ಅವರ ದೇಹದ ಪ್ರಮುಖ ಅಂಗವೊಂದು ಉಳಿದಿದೆ ಮತ್ತು ಅನೇಕ ಸಂಕೀರ್ಣ ಸಮಸ್ಯೆಗಳಿಂದ ಮುಕ್ತಿ ಪಡೆದಿದ್ದಾರೆ.
-ಡಾ ಶ್ಯಾಮಸುಂದರ ಜೋಷಿ, ಜಿಕೆವಿಕೆ ನಿವೃತ್ತ ಪ್ರೊಫೆಸರ್


ಸಿಮರೂಭದಲ್ಲಿರುವ ಪ್ರಮುಖ ರಾಸಾಯನಿಕಗಳು
ಕಾಸಿನೊಯ್ಡಗಳಾದ ಐಲಂಥಿನಾನ್, ಬೆಂನ್ಝೋಕ್ವಿನೋನ್, ಕ್ಯಾಂಥಿನ್, ಗ್ಲಾಕಾರುಬೈನ್, ಗ್ಲಾಕಾರುಬೊಲೋನ್, ಹೋಲೊಕ್ಯಾಂಥೋನ್, ಸಿಮರೂಬಿಡಿನ್, ಸಿಮರೊಲೈಡ್, ಸಿಮರೂಬಿನ್, ಸಿಮರೂಬೊಲೈಡ್, ಸಿಸ್ಟೋಸ್ಟೆರೋಲ್ ಮತ್ತು ಟಿರುಕಲ್ಲಾ.....


ಸಿಮರೂಬ ಗಿಫ್ಟ್  ಕೊಡಿ
ನಿಮ್ಮ ಮನೆಗೆ ಬಂದವರಿಗೆ ಒಂದು ಗಿಫ್ಟ್ ಕೊಡಬೇಕೆನಿಸಿದರೆ ಸಿಮರೂಬಗಿಡ ಕೊಟ್ಟು ಅದರ ಮಹತ್ವವನ್ನು ಹೇಳಿ. ಅದು ಮುಂದಿನ ತಲೆಮಾರಿಗೆ ನೀವು ಕೊಡುವ ಬಹುದೊಡ್ಡ ಕೊಡುಗೆಯಾಗುತ್ತದೆ ಎನ್ನುವುದನ್ನು ಮರೆಯದಿರಿ.


(ಹೀಗೆ ಸಿಮರೂಬದಿಂದ, ಡಾ.ಜೋಷಿ ಅವರಿಂದ ಚಿಕಿತ್ಸೆ ಪಡೆದು ಗುಣಮುಖರಾದವರಿದ್ದರೆ ಅವರು ಇಲ್ಲಿ ಅಭಿಪ್ರಾಯಗಳನ್ನು ಹಂಚಿಕೊಂಡರೆ ಉಳಿದವರಿಗೆ ಭರವಸೆ ಬಂದೀತು ಬದುಕಿನ ಮೇಲೆ....)

ಡಾ. ಶಾಮಸುಂದರ ಜೋಷಿ ಅವರ ದೂರವಾಣಿ ಸಂಖ್ಯೆ- 9448684021
ಆರ್.ಬಿ.ಐ. ಬಡಾವಣೆ, ಆನಂದನಗರ, ಆರ್.ಟಿ.ನಗರ, ಬೆಂಗಳೂರು. (ಆರ್.ಟಿ.ನಗರ ಸಾಯಿ ಮಂದಿರ ಬಳಿ)

ಡಿಸೆಂಬರ್ 15-2015ರ ಸಖಿಯಲ್ಲಿ ಪ್ರಕಟವಾಗಿರುವ ಲೇಖನ