ಅಮ್ಮ ಹೆಣೆದ ಜಾಜಿ ಮಾಲೆ...
ಅಂಗಳ ದಲ್ಲಿ ಮಳೆ ಹನಿ ಪಟ ಪಟ ಅಂತ ಸದ್ದು ಮಾಡಿ ನಾಲ್ಕೇ ನಾಲ್ಕು ಹನಿ ಬಿದ್ದರೂ ಸಾಕು ಅಮ್ಮನ ಚಡಪಡಿಕೆ, ಗಡಿಬಿಡಿ ಶುರುವಾಗಿ ಬಿಡುತ್ತದೆ. ರೋಹಿಣಿ ಮಳೆಗೆ ಇನ್ನೂ ತಿಂಗಳಿದೆಯಲ್ಲ ಎಂಬ ಲೆಕ್ಕಾಚಾರದಲ್ಲಿ ಇದ್ದವಳಿಗೆ ಒಂಥರ ತಹತಹ, ಗಡಿಬಿಡಿ. ಮಳೆಗಾಲ ಇನ್ನು ಒಂದೋ ಎರಡೋ ತಿಂಗಳು ಇರುವಾಗಲೇ ಹಾಕಿಕೊಂಡಿರುವ ದೊಡ್ಡ ಕೆಲಸದ ಪಟ್ಟಿಯಲ್ಲಿ ಮುಗಿದಿರುವುದಾದರೂ ಎಷ್ಟು ಎಂಬುದು ಅವಳಿಗೆ ಗೊತ್ತಿರುತ್ತಿತ್ತು. ಆಕಾಶದಲ್ಲಿ ಮೋಡಗಳು ಕಟ್ಟಿಕೊಳ್ಳಲು ಆರಂಭವಾಯಿತು ಎಂದರೆ ಅವಳ ಹಣೆಯಲ್ಲಿ ಚಿಂತೆಯ ನಿರಿಗೆಗಳು ಬೆಳೆಯುತ್ತ ಹೋಗುತ್ತಿದ್ದವು. ಯಾವ ಕೆಲಸಕ್ಕೂ ಯಾರನ್ನೂ ನೆಚ್ಚಿಕೊಳ್ಳದ ಆಕೆ ಗದ್ದೆಯಲ್ಲೋ, ಹೊಲದಲ್ಲೋ, ಅಡುಗೆ ಮನೆಯಲ್ಲೋ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತ ಸಾಗುತ್ತಿದ್ದರೆ ನಮಗೇ ಒಂಥರ ಕಸಿವಿಸಿ. ಒಂದ್ ಚಣವೂ ಪುರುಸೊತ್ತಿಲ್ಲದೆ ಯಾಕೆ ಈ ಪಾಟಿ ಕೆಲಸ ಮಾಡುತ್ತಾಳೆ ಅಮ್ಮ ಎಂಬ ಸಿಟ್ಟು, ಅಸಮಾಧಾನ ನಮಗೆ. ಹಾಗಾಗಿಯೇ ನಾವು ಮಕ್ಕಳಿಬ್ಬರು ಕೆಲಸದಲ್ಲಿ ಕೈಜೋಡಿಸದೇ ಬೇರೆ ದಾರಿ ಇರುತ್ತಿರಲಿಲ್ಲ. ಅಮ್ಮ ಸೆಗಣಿಯದೊಂದು ದೊಡ್ಡ ರಾಶಿ ಹಾಕಿಕೊಂಡು ಗದ್ದೆ ಬದುಗಳಲ್ಲಿ ಬೆರಣಿ ತಟ್ಟಲು ಶುರು ಮಾಡಿಕೊಂಡಳೆಂದರೆ ಅದು ಮಳೆಗಾಲಕ್ಕೆ ಆಕೆ ಮಾಡಿಕೊಳ್ಳುವ ಸಿದ್ಧತೆ ಎಂದೇ ಲೆಕ್ಕ. ಮಳೆಗಾಲಕ್ಕೆ ಬೆರಣಿ ಮಾಡಿ ಕೂಡಿಡುವುದೆಂದರೆ ನಮ್ಮ ಪಾಲಿಗೆ ಬಹುದೊಡ್ಡ ಕೆಲಸವಾಗಿತ್ತು. ನಮ್ಮ ಹಟ್ಟಿಯಲ್ಲಿ, ತೋಟದಲ್ಲಿ ದನಗಳನ್ನು ಕಟ್ಟಿದ ಕಡೆಗಳಲ್ಲಿ ಬಿದ್ದ ಸಗಣಿಯನ್ನ...