ಯಾವ ಜನುಮದ ಗೆಳೆಯನೋ...
ಆವತ್ತು ವಾರದ ರಜೆಯಿತ್ತು.... ಬೆಂಗಳೂರಿನಲ್ಲಿ ವಿಪರೀತ ಧಗೆ. ಹೊರಗೆ ಕಾಲಿಡಲಾಗದಷ್ಟು ಕೆಂಡದಂತಹ ಬಿಸಿಲು. ಬೆಳಗಿನ ಜಾವವೇ ನಮ್ಮ ಸೈಟಿನ ಭೂಮಿ ಪೂಜೆಯನ್ನು ಅಪ್ಪ-ಅಮ್ಮನ ಸಾನಿಧ್ಯದಲ್ಲಿಯೇ ಮಾಡಿಸಿದ್ದೆ. ಅಪ್ಪ ಸುಮ್ಮನೆ ಕುಂತು ಎಲ್ಲವನ್ನೂ ಶಾಂತಚಿತ್ತದಿಂದ ಮುಗಿಸಿದ್ದರು. ಅಮ್ಮ ಅಪ್ಪನಿಗೆ ಸಾಥ್ ನೀಡಿದ್ದಳು. ಬೆಳಗಿನ ಏಳಕ್ಕೆಲ್ಲ ಆ ಕೆಲಸ ಮುಗಿದೇ ಹೋಗಿತ್ತು. ಹಾಗಾಗಿ ಅಪ್ಪ ಇಡೀ ದಿನ ಸುಡು ಬಿಸಿಲಿನಲ್ಲಿ ಹೊರಗೆ ಹೋಗಿರಲಿಲ್ಲ. ಸಂಜೆ ಭಾರಿ ಮಿಂಚು-ಗುಡುಗು, ಮಳೆ ಬರುವ ಲಕ್ಷಣ. ಆದರೆ, ಹನಿಗಳು ಧರೆಗೆ ಬಿದ್ದು ಮಣ್ಣಿನ ವಾಸನೆ ಮೂಗಿಗೆ ಅಡರಲೇ ಇಲ್ಲ. ರಾತ್ರಿ ಊಟವೆಲ್ಲ ಮುಗಿದ ಬಳಿಕ, ಒಂದು ವಾಕಿಂಗ್ ಹೋಗಿ ಬರೋಣ ಬನ್ನಿ ಅಪ್ಪ ಎಂದು ಕರೆದೆ. "ಹ್ಞಾಂ! ಹೋಗುವಾ...!" ಎಂದು ಉತ್ಸಾಹದಿಂದಲೇ ಎದ್ದರು. ಬಡಾವಣೆಯ ಖಾಲಿ ಖಾಲಿ ರಸ್ತೆಯಲ್ಲಿ ಅಪ್ಪನ ಕೈಹಿಡಿದು ವಾಕಿಂಗ್ ಹೋಗುವುದೆಂದರೆ ಎಲ್ಲಿಲ್ಲದ ಖುಷಿ ನನಗೆ. ಹಿಂದಿನ ದಿನಗಳಲ್ಲಾಗಿದ್ದರೆ ಅಪ್ಪ ಬಾಯಿತುಂಬ ಮಾತನಾಡುತ್ತಿದ್ದರು. ಅಪಾರವಾದ ನೆನಪಿನ ಶಕ್ತಿ ಅವರಿಗಿತ್ತು. ಮುಂಬೈನಲ್ಲಿ ಬಹಳ ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅವರು ಅನೇಕ ಸಂಗತಿಗಳನ್ನು ಹೇಳಿಕೊಳ್ಳುತ್ತಿದ್ದರು. ಸಂಸ್ಥಾ ಕಾಂಗ್ರೆಸ್, ಮುರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಮಾತು, ನೆನಪುಗಳನ್ನು ಹಂಚಿಕೊಳ್ಳಲೆಂದೇ ನಮ್ಮ ಮನೆಗೆ ಸಂಜೆ ಹೊತ್ತು ಅವರ ...