ನಕ್ಷತ್ರಗಳನ್ನು ಹಾಸಿದವಳು...

ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲ ರಾತ್ರಿ ನೆನೆ ಹಾಕಿದ ಅಕ್ಕಿ ಬೆಳ್ಳಿ ಮೂಡುವ ಹೊತ್ತಿಗೆ ಸೆರಗು ಸೊಂಟಕ್ಕೆ ಸಿಕ್ಕಿ ರೊಟ್ಟಿಯ ಹಿಟ್ಟು ಕಟ್ಟಿದ್ದಾಯಿತು ಕೆಂಡದ ಮೇಲೆ ಸುಡುವ ರೊಟ್ಟಿ ಅಮ್ಮನ ಕಣ್ಣಲ್ಲಿ ನೀರು ಅಡುಗೆಮನೆ ಮೆಟ್ಟಿಲ ಮೇಲೆ ಹಸಿದು ಕೂತವನು ನಾನು ಸೆಗಣಿ ಅಂಟಿದ ಕೆಚ್ಚಲು ಸಾಕಾಗದು ಒಂದೇ ತಂಬಿಗೆ ನೀರು ಇನ್ನೊಂದು ಬಿಂದಿಗೆ ತಾ ಅಂದವಳು ಕೆಂಪಗಿನ ಕೆಚ್ಚಲಿಂದ ನೊರೆ ನೊರೆಯ ಹಾಲು ಅಂಡು ಊರಿಸಿ ಕತ್ತು ಇಣುಕಿಸಿ ಕಣ್ಣು ಪಿಳಿ ಪಿಳಿ ಹೀಗೆ ಕಾದವನು ನಾನು ಸೀಳಿದ್ದ ಒದ್ದೆ ನೆಲದೊಳಗೆ ಗೊಬ್ಬರ ಸಿಬರು ಸಿಬರಿನಂತೆ ಪುಷ್ಯಮಳೆ ಹಾಳೆಯ ಮೇಲೊಂದು ಗೊರಬು ಬಿತ್ತಿದ್ದು ನೆಲಗಡಲೆ ಬೀಜ ಓಲಿ ಕೊಡೆಯೊಳಗೆ ಕುಂತು ಮಣ್ಣಿನ ಘಮಲನು ಕುಡಿದು ಅಮ್ಮ ಇರಿಸಿದ ಜೀವವು ಇನ್ನು ಮೊಳಕೆಯೊಡೆಯದೇ ಹೇಗೆ ಉಳಿದೀತೆಂದು ಬಿಮ್ಮನೆ ಸಂಭ್ರಮಿಸಿದವನು ನಾನು (ನಾ ತೆಗೆದ ಅಮ್ಮನ ಫೋಟೊಗಳು..) ಬಾವಿಕಟ್ಟೆಯ ಮಗ್ಗುಲಲಿ ಪಾರಿಜಾತದ ಗಿಡವಿತ್ತು ಬೈಗು ಹರಿದರೆ ಸಾಕು ಕಸುಬನ್ನೆಲ್ಲ ಬಿಸಾಕಿ ಸೆರಗ ತುಂಬಿಕೊಳ್ಳುತ್ತಿದ್ದಳು ಕೆಂಪು ನತ್ತಿನ ಸುಂದರಿಯರ ಜಗಲಿಯ ತುಂಬ ನಕ್ಷತ್ರ ರಾಶಿ ಮನೆಯ ಮೂಲೆ ಮೂಲೆಗೂ ಜೀವಸೆಲೆ ಘಮದ ನೆಯ್ಗೆ ಕಟ್ಟಿದವನು ನಾನು ಕತ್ತಲ ಕಳೆವ ತತ್ವಮಸಿ ಇವಳಲ್ಲ ಮಸಿ ಕಚ್ಚಿದ ಲಾಟೀನು ಬೂದಿಯ ಸೆಳಕಿಗೆ ಸಿಕ್ಕು ಹೊಳಪು ಕೊಟ್ಟವಳಿವಳು ಬೆಳಕ ಕಣ್ಣಿಗೆ ಕಣ್ಣು ನಿರುಕಿಸಿ ಅವಳ ನಿಟಿಲ ಗೆರೆಗಳನು ಓದದೆ ಮರೆತುಬಿಟ್ಟವನು ನಾನು (ಇವತ್ತು -ಮೇ 8- ಅಮ್ಮನ ...