ಇದೆಂಥಾ ಬದುಕು?

ಆ ಮಗುವಿನ ಮೃತದೇಹದ ಮುಂದೆ ನಿಂತವನಿಗೆ ಇಡೀ ಜೀವವೇ ಜಗ್ಗಿದಂತಾಯಿತು. ಅದರ ಪಕ್ಕದಲ್ಲಿಯೇ ಅಪ್ಪ-ಅಮ್ಮ ತಲೆ ತಗ್ಗಿಸಿಕೊಂಡು ಕಣ್ಣೀರಾಗಿದ್ದರು. ಐದು ನಿಮಿಷ ಹಾಗೇ ನಿಂತು ಬಿಟ್ಟೆ. ಇಡೀ ದೇಹಕ್ಕೆ ಬಿಳಿ ಬಟ್ಟೆ ಸುತ್ತಿದ್ದ ಆ ಮಗು ಎರಡು ಮೊಳದಷ್ಟೂ ಉದ್ದವಿಲ್ಲ. ಮುಖದ ಚರ್ಮ ಎಷ್ಟು ತೆಳ್ಗಗಿದೆ ಎಂದರೆ ಅದು ರೇಷಿಮೆ ನೂಲಿನಂತೆ ಮುಖದ ಮೂಳೆಗಳಿಗೆ ಅಂಟಿಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಹಳ ಹೊತ್ತು ನಿಲ್ಲಲಾಗಲಿಲ್ಲ. ಆ ಮನೆಯ ಹಾಲ್ ನಿಂದ ಈಚೆಗೆ ಬಂದು ಮಿತ್ರರ ಜೊತೆ ನಿಂತವನಿಗೆ ಮನಸ್ಸಿನ ತುಂಬಾ ವೇದನೆ-ಸಂಕಟ. ಬದುಕಿನ ತಕ್ಕಡಿಯಲ್ಲಿ ಎಲ್ಲರಿಗೂ ಸಮಪಾಲು ಇದ್ದಿದ್ದರೆ ಏನಾಗುತ್ತದೆ? ಒಬ್ಬರ ಜೀವನದಲ್ಲಿ ಅತೀವ ಯಾತನೆ, ಇನ್ನೊಬ್ಬರಿಗೆ ಮೆರೆಯುವಷ್ಟು ಸುಖ, ಉಲ್ಲಾಸ. ಜೀವನ ಎಲ್ಲರಿಗೂ ಸಹನೀಯವಾಗಿ ಯಾಕಿರುವುದಿಲ್ಲ? ಆವಾಗ ಜೀವನವೇ ಪರಿಪೂರ್ಣವಾಗುವುದಿಲ್ಲವೇ? ಗೊತ್ತಿಲ್ಲ. ನಾನು ನೋಡಿದ್ದು ನಿಜಕ್ಕೂ ಮಗುವಿನ ಮೃತ ದೇಹ ಅಲ್ಲ! ಮಗುವಿನ ಹಾಗೆ ಇದ್ದವಳು ಅವಳು. ಆಕೆಗೆ ಸುಮಾರು ಹತ್ತು ವರ್ಷ. ಆದರೆ ಇಡೀ ದೇಹದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಬೆನ್ನುಮೂಳೆ, ಮೆದುಳು, ಶ್ವಾಸಕೋಶ.... ಯಾವುದರಲ್ಲೂ ಬೆಳವಣಿಗೆ ಕಾಣಲೇ ಇಲ್ಲ. ಡಾಕ್ಟರು ಆರಂಭದಲ್ಲೇ ಹೇಳಿದ್ದರು ಈ ಮಾತುಗಳನ್ನು. ಮಗು ಬದುಕಿದರೆ ಹತ್ತು ವರ್ಷ ಬದುಕಬಹುದು ಎಂದ್ದಿದ್ದರು. ಹಾಗಂತ ಕರುಳ ಕುಡಿಯಲ್ಲವೇ ಅದು? ಅಂದಿನಿಂದ ಶುರುವಾಯಿತು ಅಪ್ಪ ಅಮ್ಮನ ಬದುಕಿನ ಹೊಸ ತಿರುವು. ಅಪ್ಪ...