ಜೈಲಿಗೆ ಕೊಡಪಾನದಲ್ಲಿ ಪಾಯಸ ಕೊಂಡೊಯ್ಯುತ್ತಿದ್ದೆ...

ದೊರೆಯ ಬದುಕಿನ ಲಲಿತಗಾನ ಒಂದು ಶತಮಾನ ಕಂಡ ಹಿರಿಯ ಜೀವ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಈಗಲೂ ಹೋರಾಟವೆಂದರೆ ಸಾಕು ಹೊರಟುಬಿಡುವ ಜೀವ. ಅಂದಿನ ಸ್ವಾತಂತ್ರ್ಯ ಹೋರಾಟ ಮತ್ತು ಪ್ರಭುತ್ವದ ನಡುವೆ ಸಾಕ್ಷಿಯಾಗಿರುವ ದೊರೆ ನಮ್ಮ ನಡುವಿನ ಸ್ಪೂರ್ತಿಯ ಚಿಲುಮೆ. ಒಂದು ಪ್ರತಿಭಟನೆ, ಆಂದೋಲನ, ಜನಪರ ಕಾರ್ಯಕ್ರಮಗಳಲ್ಲಿ ದೊರೆಯದೊಂದು ದನಿ ಇದ್ದೇ ಇರುತ್ತದೆ. ಈ ಎಲ್ಲ ಜೀಕಾಟದ ನಡುವೆ ದಂಪತಿ ಹೇಗೆ ಜೀವನ ನಡೆಸಿದರು? ಅದಕ್ಕೆ ಉತ್ತರ ಕೊಟ್ಟವರು ದೊರೆಸ್ವಾಮಿ ಮತ್ತು ಲಲಿತಮ್ಮ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ಕಾರ್ಯಕರ್ತನಿಗೆ ಬಡತನ ಇಚ್ಛಾಪೂರ್ವಕವಾಗಿರಬೇಕು ಎಂಬ ಗಾಂಧೀಜಿ ಮಾತಿಗೆ ಈ ದಂಪತಿಗಿಂಥ ಉದಾಹರಣೆ ಬೇರೆ ಬೇಕಿಲ್ಲ. ಹೋರಾಟ, ಚಳವಳಿ ಎಂದರೆ ಎಲ್ಲಿದ್ದರೂ ಹಾಜರಾಗುತ್ತಿದ್ದ ನೀವು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದು ಯಾವಾಗ? ದೊರೆ : ನಾವು ಮದುವೆಯಾಗಿದ್ದೇ ವಿಚಿತ್ರ ಸನ್ನಿವೇಶದಲ್ಲಿ. ಬೆಂಗಳೂರಿನ ಚಾಮರಾಜಪೇಟೆಯವರಾದ ಲಲಿತಮ್ಮ ತಮ್ಮ ನಾಲ್ವರು ಸಹೋದರರ ಜತೆ ಬೆಳೆದವರು. ಕನ್ನಡ ಲೋವರ್ ಸೆಕೆಂಡರಿ ಓದಿ ಮನೆಯಲ್ಲಿ ಅಮ್ಮನಿಗೆ ನೆರವಾಗಿಕೊಂಡು ಇದ್ದಾಕೆ. ಇವರ ಕುಟುಂಬದ ಸ್ನೇಹಿತ ರಾಘವೇಂದ್ರ ಆಚಾರ್ ಮನೆಗೆ ಒಂದು ದಿನ ಸಂಜೆ ಹೋಗಿದ್ದೆ. ಆಗ ಅಲ್ಲಿ ಆಚಾರ್ ಪತ್ನಿ, ಲಲಿತಮ್ಮ ಮತ್ತವರ ತಾಯಿ ಜತೆ ಪಗಡೆ ಆಡುತ್ತಿದ್ದರು. ನಾನು ಹೋಗಿ ಜೊತೆಯಾದೆ. ಮೂರು ಆಟಗಳನ್ನು ಆಡಿದರೂ ಲಲತೆಯ ಜತೆ ಗೆಲ್ಲಲಾಗಲಿಲ್ಲ...