ಬಸವಳಿದ ಮೂಕ ಜೀವಿಗಳಿಗೆ ಬಟ್ಟಲ ತುಂಬ ನೀರು!

 ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ವಿನೂತನ ಅಭಿಯಾನ

-chandramukhi



 ತಮ್ಮ ಉದ್ಯಮದ ಕೆಲಸಕ್ಕೆಂದು ಬೆಂಗಳೂರಿಗೆ ಬಂದಿದ್ದ ಅವರು ಅಂದು ಸಂಜೆ ಮರಳಿ ತುಮಕೂರಿಗೆ ಪ್ರಯಾಣ ಬೆಳೆಸಿದ್ದರು. ಇನ್ನೇನು ತುಮಕೂರು ಸನಿಹದಲ್ಲಿರುವಾಗ ಅವರ ಕಾರಿಗೆ ಏಕಾಏಕಿ ನಾಯಿಯೊಂದು ಅಡ್ಡ ಬಂತು. ಗಂಭೀರ ಸ್ವರೂಪದ ಗಾಯಗೊಂಡ ನಾಯಿಯನ್ನು ಕಂಡು ಅವರು ಇನ್ನಿಲ್ಲದಂತೆ ಚಡಪಡಿಸಿ ಹೋದರು. ತಕ್ಷಣ ಮೂಕ ಜೀವಿಯನ್ನು ತಮ್ಮ ಕಾರಿನಲ್ಲಿಯೇ ಹಾಕಿಕೊಂಡು ತುಮಕೂರಿನ ವೈದ್ಯರಲ್ಲಿಗೆ ಕರೆದೊಯ್ದರು. ಅಲ್ಲಿ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಆದರೆ ಅದರ ಮೂಳೆಗಳು ಮುರಿದಿದ್ದವು. ಓಡಾಡಲಾಗದ ಸ್ಥಿತಿಯನ್ನು ಅದು ತಲುಪಿತ್ತು. ಅದಕ್ಕಾದ ಗಾಯ ನಿಜಕ್ಕೂ ತೀವ್ರ ಸ್ವರೂಪದ್ದಾಗಿತ್ತು. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆದೊಯ್ಯದೇ ಬೇರೆ ಮಾರ್ಗವಿಲ್ಲ ಎಂದರು ವೈದ್ಯರು.





ಆದರೆ ಉದ್ಯಮಿ ಒಂದಿನಿತೂ ಹಿಂಜರಿಯಲಿಲ್ಲ. ತನ್ನ ವೇದನೆಯನ್ನು ಹೇಳಿಕೊಳ್ಳಲಾಗದ ಜೀವವನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಬೇಕು ಎಂಬ ಸಂಕಲ್ಪ ಮಾಡಿದರು. ಅದರ ನೋವನ್ನು ತನ್ನ ನೋವೆಂದೇ ಭಾವಿಸಿದರು. ಬೆಂಗಳೂರಿನ ತಜ್ಞ ಪಶುವೈದ್ಯರಲ್ಲಿಗೆ ಕರೆತಂದು ಹೆಚ್ಚಿನ ಚಿಕಿತ್ಸೆ ಕೊಡಿಸಿದರು. ಅದಕ್ಕೆ ಸ್ಪಂದಿಸಿದ ನಾಯಿ ಸಲ್ಪ ಚೇತರಿಕೆ ಕಂಡಿತು. ಸುಮಾರು ನಾಲ್ಕೆöÊದು ದಿನಗಳ ಕಾಲ ಪ್ರತಿದಿನವೂ ತುಮಕೂರಿನಿಂದ ಬೆಂಗಳೂರಿಗೆ ಅದನ್ನು ಕರೆತಂದು ಆರೈಕೆ ಮಾಡಿದರು. ಅಷ್ಟಾಗಿಯೂ ನಾಯಿಯನ್ನು ಉಳಿಸಿಕೊಳ್ಳಲು ಅವರಿಂದ ಸಾಧ್ಯವಾಗಲಿಲ್ಲ. ಇದರಿಂದ ಅವರು ತೀವ್ರ ಖಿನ್ನತೆಗೆ ಒಳಗಾದರು. ಹೀಗೆ ಒಂದು ಮೂಕಪ್ರಾಣಿಯ ಸಾವಿಗೆ ಕಾರಣನಾಗಿ ಬಿಟ್ಟೆನಲ್ಲ ಎಂಬ ಪಾಪಪ್ರಜ್ಞೆ ಅವರನ್ನು ಬಿಡದೇ ಕಾಡತೊಡಗಿತು.

ಇದರ ಚಿಂತೆಯಲ್ಲಿಯೇ ಇದ್ದಾಗ ಒಂದು ದಿನ ತಮ್ಮ ಮನೆಯ ಮುಂಭಾಗದಲ್ಲಿ ಕೆಲವು ನಾಯಿಗಳು ಬಿಸಿಲಿನ ದಾಹವನ್ನು ತಡೆಯಲು ಸಾಧ್ಯವಾಗದೇ ಚರಂಡಿಯಲ್ಲಿದ್ದ ಕಲುಷಿತ ನೀರನ್ನು ಕುಡಿಯುತ್ತಿದ್ದವು. ಇದನ್ನು ನೋಡಿ ಅವರಿಗೆ ಕರುಳು ಚುರ್ ಅಂದಿತು. ನಾವು ಬುದ್ಧಿ ಇರುವ ಮನುಷ್ಯರು ಕುಡಿಯುವ ನೀರಿನ ಬಗ್ಗೆ ಎಷ್ಟೊಂದು ಕಾಳಜಿ ವಹಿಸುತ್ತೇವೆ. ಮಾತು ಬಾರದ ಪ್ರಾಣಿಗಳು ಗಲೀಜು ನೀರನ್ನು ಕುಡಿದು ಆರೋಗ್ಯದ ಸಮಸ್ಯೆ ಎದುರಿಸಿದರೂ ಅವುಗಳಿಗೆ ಹೇಳಿಕೊಳ್ಳಲು ಸಾಧ್ಯವಿಲ್ಲ. ತಮ್ಮ ಕಾರಿನಡಿ ಸಿಕ್ಕ ಒಂದು ನಾಯಿಯನ್ನು ಉಳಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗಿನಿಂದ ಕುಗ್ಗಿ ಹೋಗಿದ್ದ ಅವರು, ಕನಿಷ್ಠ ಇದಕ್ಕಾದರೂ ಹೇಗಾದರೂ ಪರಿಹಾರ ಕಂಡುಕೊಳ್ಳಬೇಕು ಎಂಬ ನಿರ್ಧಾರ ಮಾಡಿದರು.

ತಕ್ಷಣ ಮನೆಯೊಳಕ್ಕೆ ಹೋದ ಅವರು ಒಂದು ಬಟ್ಟಲಿನ ತುಂಬ ನೀರನ್ನು ತುಂಬಿ ಮನೆಯ ಮುಂದೆ ಇಟ್ಟರು. ಆರಂಭದಲ್ಲಿ ಒಂದು ನಾಯಿ ಮಾತ್ರ ಬಂದು ಬಟ್ಟಲಿನಲ್ಲಿದ್ದ ನೀರನ್ನು ಕುಡಿಯಲು ಆರಂಭಿಸಿತು. ಬಳಿಕ ಪಕ್ಷಿಗಳೂ ನೀರು ಅರಸಿ ಬಂದವು. ರಸ್ತೆಯಲ್ಲಿ ಹೋಗುತ್ತಿದ್ದ ಹಸು ಕೂಡ ಇದೇ ಬಟ್ಟಲಿನ ನೀರನ್ನು ಕುಡಿಯಿತು. ದೃಶ್ಯವನ್ನು ಕಂಡ ಅವರಿಗೆ ಕಣ್ಣು ಮಂಜಾಯಿತು. ಬಟ್ಟಲ ಘಟನೆಯನ್ನು ಅವರು ತಮ್ಮ ಸ್ನೇಹಿತರು ಹಾಗೂ ಕುಟುಂಬಸ್ಥರೊAದಿಗೆ ಹಂಚಿಕೊAಡರು. ತಮ್ಮೂರಿನ, ತಮ್ಮ ಬಡಾವಣೆಯ ಇತರ ಮನೆಗಳಿಗೂ ತೆರಳಿ ಇದರ ಬಗ್ಗೆ ಮನವರಿಕೆ ಮಾಡಿದರು. ಅವರಿಗೆಲ್ಲ ಉಚಿತವಾಗಿ ಬೌಲ್ಗಳನ್ನು ನೀಡಿದರು. ಇವರ ಕಾಳಜಿ ಉಳಿದವರಿಗೂ ಅರ್ಥವಾಯಿತು. ಎಲ್ಲರೂ ಇಂತಹುದೊAದು ಅಪರೂಪದ ಅಭಿಯಾನಕ್ಕೆ ಸ್ಪಂದಿಸಿದರು. ಒಂದು ಪುಟ್ಟ ನಾಯಿಯ ಜೀವ ಕಸಿದೆನೆಂಬ ಕಾರಣಕ್ಕೆ ಮಾನಸಿಕ ಹಿಂಸೆಗೆ ಒಳಗಾಗಿದ್ದ ಅವರು ನಿಟ್ಟುಸಿರು ಬಿಟ್ಟರು.

ಹೀಗೆ ಒಂದು ಮೂಕ ಪ್ರಾಣಿ ಕೂಡ ತಮ್ಮಂತೆ ರಕ್ತ-ಮೂಳೆ-ಮಾಂಸ ಹೊಂದಿದ ಜೀವವೆಂದು ಭಾವಿಸಿ ಅವುಗಳ ಉಳಿವಿಗೆ ಸಂಕಲ್ಪ ಮಾಡಿದ ಉದ್ಯಮಿ ಸನ್ನಿ ಹಸ್ತಿಮಾಲ್ ಜೈನ್. ಅವರು ಅಂದು ಆರಂಭಿಸಿದಬೌಲ್ ಅಭಿಯಾನ ಕ್ರಮೇಣ ವೈರಲ್ ಆಯಿತು. ‘ನಾವೂ ನಮ್ಮ ಮನೆ ಮುಂದೆ ಪ್ರಾಣಿಗಳಿಗಾಗಿ ಬಟ್ಟಲು ಇಡುತ್ತೇವೆ ಎಂದು ಅನೇಕ ಮಂದಿ ಮುಂದೆ ಬಂದರು. ಜನರ ಆಸಕ್ತಿಯನ್ನು ಗಮನಿಸಿದ ಅವರು ಇದಕ್ಕೊಂದು ಸಾಂಸ್ಥಿಕ ರೂಪ ನೀಡಬೇಕು, ಇತರ ಊರು, ನಗರಗಳಿಗೂ ಇದು ವಿಸ್ತರಿಸಬೇಕು ಎಂದು ಯೋಚಿಸಿದರು. ಆಗ ಹುಟ್ಟಿಕೊಂಡಿದ್ದೇWater for Voiceless ಸಂಸ್ಥೆ. ನಾಯಿ, ಪಶು, ಹಕ್ಕಿಗಳಿಗೆ ನೀರುಣಿಸುವ ಕೈಕಂರ್ಯದೊAದಿಗೆ ಅವುಗಳಿಗೆ ಜೀವಚೈತನ್ಯವನ್ನು ನೀಡುವುದು ಸಂಸ್ಥೆಯ ಗುರಿ. ಜೈನ್ ಅವರ ಕಾಳಜಿಗೆ ಸಿಕ್ಕಿದ್ದು ಅಭೂತಪೂರ್ವ ಬೆಂಬಲ. ಸುಮಾರು ಒಂಭತ್ತು ವರ್ಷಗಳ ಹಿಂದೆ ಆರಂಭವಾದ ಅಭಿಯಾನ ಪಟ್ಟಣ, ನಗರಗಳ ಗಡಿಯನ್ನು ಮೀರಿ ದೇಶಾದ್ಯಂತ ಹಬ್ಬಿರುವುದು ವಿಶೇಷ.



ಯಾವುದೇ ಹಣದ ಅಪೇಕ್ಷೆ ಇಲ್ಲದೆ ಸೇವಾ ಮನೋಭಾವನೆಯನ್ನು ಹೊಂದಿದ ಇಂತಹ ಅಪರೂಪದ ಕೆಲಸಕ್ಕೆ ಸಾಥ್ ಕೊಟ್ಟವರ ಸಂಖ್ಯೆ ದೊಡ್ಡದು. ಅದರಲ್ಲಿ ಅನೇಕ ಸಂಘ-ಸಂಸ್ಥೆಗಳೂ ಇರುವುದು ವಿಶೇಷ. ಇದರ ಫಲವಾಗಿ ಇಂದು ದೇಶದ ನಾನಾ ನಗರ ಪ್ರದೇಶಗಳು, ಪಟ್ಟಣಗಳು, ಹಳ್ಳಿಗಳಲ್ಲಿ ವಿತರಣೆ ಮಾಡಿದ ಬೌಲ್ಗಳ ಸಂಖ್ಯೆ ಎಂಭತ್ತು ಸಾವಿರಕ್ಕೂ ಅಧಿಕ ಎಂದರೆ ನೀವು ನಂಬಲಾರಿರಿ. ಶಾಲಾ-ಕಾಲೇಜಿನ ವಿದ್ಯಾರ್ಥಿಗಳಿಗೆ, ವಿವಿಧ ಸಂಘಟನೆಗಳಿಗೆ ಅರಿವು ಮೂಡಿಸಿ ಅಭಿಯಾನವನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವಲ್ಲಿ ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆ ಯಶಸ್ವಿಯಾಗಿದೆ.

ಇಂತಹ ವಿಚಾರ ಬಂದಾಗ ಜನರು ಆರಂಭದಲ್ಲಿ ಅಷ್ಟೇನು ಆಸಕ್ತಿ ತೋರಿಸುವುದಿಲ್ಲ. ಹಾಗಾಗಿ ಜನರಲ್ಲಿ ಅರಿವುದು ಮೂಡಿಸುವುದು ಬಹಳ ದೊಡ್ಡ ಹೊಣೆ. ಹೊಣೆಯನ್ನು ಹೆಗಲಿಗೇರಿಸಿಕೊಂಡ ಸನ್ನಿ ಜೈನ್ ಅವರು ತಮ್ಮಬೌಲ್ ಅಭಿಯಾನವನ್ನು ಹತ್ತಾರು ಸಂಘ-ಸಂಸ್ಥೆಗಳ ಮುಂದೆ ಮಂಡಿಸಿದ್ದಾರೆ. ಅವುಗಳಲ್ಲಿ ಹೆಚ್ಚಾಗಿ ಶಿಕ್ಷಣ ಸಂಸ್ಥೆಗಳು, ರಕ್ಷಣಾ ಸಂಸ್ಥೆಗಳು, ಅರಣ್ಯ ಇಲಾಖೆ, ಕಾನೂನು ಸಂಸ್ಥೆಗಳು, ಸರ್ಕಾರಿ ಸಂಸ್ಥೆಗಳು, ಏರ್-ಪೋರ್ಟ್, ಕಾರ್ಪೊರೇಟ್ ವಲಯಗಳು ಸೇರಿವೆ. ಎಲ್ಲ ಸಂಸ್ಥೆಗಳು ಇದರ ವಿಶೇಷತೆ-ವಿಭಿನ್ನತೆಯನ್ನು ಅರ್ಥಮಾಡಿಕೊಂಡು ಅಭಿಯಾನವನ್ನು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಜಾರಿಗೆ ತರಲು ಶ್ರಮಿಸಿದರು. ಇಂತಹ ಹೊತ್ತಿನಲ್ಲಿ ಜೈನ್ ಅವರ ಬೆನ್ನಿಗಂಟಿಕೊAಡು ಕೆಲಸ ಮಾಡಿದವರು ಪ್ರಫುಲ್ ಮೌನ್. ವಾಟರ್ ಫಾರ್ ವಾಯ್ಸ್ಲೆಸ್ ಸಂಸ್ಥೆಯ ಸಹ-ಸಂಸ್ಥಾಪಕರಾಗಿರುವ ಪ್ರಫುಲ್, ಅದರ ಮುಂದಿನ ಯೋಜನೆಗಳಲ್ಲಿ ಹೆಗಲು ಕೊಟ್ಟಿದ್ದಾರೆ.

ಪ್ರಾಣಿದಯೆ ಎನ್ನುವುದು ಜೈನ್ ಅವರಿಗೆ ರಕ್ತಗತವಾಗಿ ಬಂದಿದೆ. ಪ್ರಾಣಿಗಳ ವಿಚಾರದಲ್ಲಿ ಅವರು ವಹಿಸುವ ಆಸಕ್ತಿ, ಪ್ರೀತಿ ಕೇವಲ ತೋರಿಕೆಯದ್ದಲ್ಲ ಎಂಬುದು ಅವರ ಇಷ್ಟೂ ವರ್ಷಗಳ ಕೆಲಸದಿಂದ ವೇದ್ಯವಾಗುತ್ತದೆ. ಗೋಶಾಲೆ ನಿರ್ಮಾಣ, ವನ್ಯಜೀವಿಗಳ ರಕ್ಷಣೆಯಂತಹ ಕೆಲಸದಲ್ಲಿ ಅವರು ನಿರಂತರವಾಗಿ ತೊಡಗಿಸಿಕೊಂಡು ಬಂದಿರುವುದು ಇದಕ್ಕೆ ಸಾಕ್ಷಿಯಾಗಿದೆ. ಕೊರೋನಾ ಸಂದರ್ಭದಲ್ಲಿಯೂ ಅವರು ತೋರಿದ ಮಾನವೀಯ ಕಳಕಳಿ ಶ್ಲಾಘನೀಯ. ಕಾರಣದಿಂದ ಅವರುಕೊರೋನಾ ವಾರಿಯರ್ಸ್ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಶಾಲಾ ಮಕ್ಕಳಲ್ಲಿ ಪ್ರಾಣಿಗಳ ಬಗ್ಗೆ ಕಾಳಜಿ, ಪ್ರೀತಿ ಮೂಡುವಂತೆ ಮಾಡುವ ದೃಷ್ಟಿಯಿಂದ ಹಲವಾರು ಶಾಲೆಗಳಲ್ಲಿ ಮಕ್ಕಳಿಗೆ ಪ್ರಾಣಿಗಳ ಚಿತ್ರ ಬಿಡಿಸುವ ಸ್ಪರ್ಧೆಯನ್ನು ಸಂಸ್ಥೆöಏರ್ಪಡಿಸುತ್ತ ಬಂದಿದೆ. ತೈವಾನ್ ಸಂಸ್ಥೆಯೊAದು ನೀಡುವ ಶೈನಿಂಗ್ ವರ್ಲ್ಡ್ ಅವಾರ್ಡ್ ಸೇರಿದಂತೆ ಅನೇಕ ಪ್ರಶಸ್ತಿಗಳು ಬಂದಿರುವುದು ಅವರ ಸಾಧನೆಯ ಕಿರೀಟಕ್ಕೆ ಇನ್ನಷ್ಟು ಗರಿಗಳು.

ಶುದ್ಧ ಕುಡಿಯುವ ನೀರು ಸಿಕ್ಕ ತಕ್ಷಣ ಮೂಕ ಜೀವಿಗಳಿಗಾಗುವ ಖುಷಿಯಿದೆಯಲ್ಲ ಅದು ನಿಜಕ್ಕೂ ವರ್ಣಿಸಲಸದಳ. ದೃಶ್ಯವನ್ನು ಕಂಡರೆ ನಮ್ಮ ಕಣ್ಣಲ್ಲೂ ಆನಂದಭಾಷ್ಪ. ಕಾಳಜಿ ಎಲ್ಲರಿಗೂ ಅರ್ಥವಾದರೆ ನಮ್ಮ ಶ್ರಮ ಸಾರ್ಥಕ. ನಮ್ಮ ಕೈಂಕರ್ಯ ನಿರಂತರವಾಗಿ ಮುಂದುವರಿಯಲಿದೆ.” ಎನ್ನುತ್ತಾರೆWater for Voiceless ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಸನ್ನಿ ಹಸ್ತಿಮಾಲ್ ಜೈನ್. ಅವರ ಕಣ್ಣಲ್ಲಿ ನಿಜಕ್ಕೂ ಕೃತಜ್ಞತೆಯ ಭಾವ ತುಂಬಿತ್ತು.

 


 ಬೌಲ್ ಅಭಿಯಾನ ಜಾರಿಗೆ ತಂದ ಜಿಲ್ಲೆಗಳು

.    ಬೆಂಗಳೂರು

.    ತುಮಕೂರು

.    ಮೈಸೂರು

.    ಮಂಡ್ಯ

.    ಹುಬ್ಬಳಿ

.    ದೊಡ್ಡಬಳ್ಳಾಪುರ

.    ನೆಲಮಂಗಲ

(ಮುಂಬೈ, ಗೋವಾ, ಪುಣೆ, ಚೆನ್ನೆöÊ ಸೇರಿದಂತೆ ೨೦ ಸಿಟಿಗಳಲ್ಲಿ ಅಳವಡಿಸಲಾಗಿದೆ)

 

ಸಾಥ್ ನೀಡಿದ ಪ್ರಮುಖ ಸಂಸ್ಥೆಗಳು

  ಬಿಎಸ್ಎಫ್ ಯಲಹಂಕ, ಸಿಐಎಸ್ಎಫ್ ದಾಬಸ್ಪೇಟೆ, ಸಿಆರ್ಪಿಎಫ್ ಯಲಹಂಕ, ವಾಯುಪಡೆ ನೇಮಕಾತಿ ಘಟಕ ಬೆಂಗಳೂರು.

  ಕರ್ನಾಟಕ ಹೈಕೋರ್ಟ್, ಮಧುಗಿರಿ ಜಿಲ್ಲಾ ನ್ಯಾಯಾಲಯ, ತುಮಕೂರು ಕೋರ್ಟ್, ಪರಪ್ಪನ ಅಗ್ರಹಾರ ಜೈಲು

ವಿಶಾಖಪಟ್ಟಣಂ ಅಂತಾರಾಷ್ಟಿçà ವಿಮಾನ ನಿಲ್ದಾಣ, ರಾಜಮುಂಡ್ರಿ ಏರ್ಪೋರ್ಟ್,

ನ್ಯಾಕ್ ಬೆಂಗಳೂರು, ಸೇಂಟ್ ಜೋಸೆಫ್ ಯೂನಿವರ್ಸಿಟಿ, ಸುರಾನ ಕಾಲೇಜ್, ಡಾನ್ಬಾಸ್ಕೋ, ಕ್ರೆöÊಸ್ತ್ ವಿವಿ, ಬಿಎಂಎಸ್ ಕಾನೂನು ಕಾಲೇಜು, ಸಿದ್ಧಾರ್ಥ ಮೆಡಿಕಲ್ ಕಾಲೇಜ್.

 ಬಿಬಿಎಂಪಿ, ಸಚಿವಾಲಯ ತಮಿಳು ನಾಡು, ಕೊಪ್ಪಳ ಅರಣ್ಯ ಇಲಾಖೆ, ಬಿಕಾನೇರ್ ಮರುಭೂಮಿ

 

ಪರಿಶುದ್ಧವಾದ ನೀರಿನ ಕೊರತೆಯಿಂದ ಪ್ರತಿದಿನ ಅಸಂಖ್ಯ ಪ್ರಾಣಿ ಪಕ್ಷಿಗಳು ಮಲಬದ್ಧತೆಗೆ ಒಳಗಾಗುತ್ತವೆ. ಕೆಲವು ಸಾಯುತ್ತವೆ ಕೂಡ. ಆದರೆ ಇವ್ಯಾವುದೂ ನಮಗೆ ಗೊತ್ತೇ ಆಗುವುದಿಲ್ಲ. ಯಾಕೆಂದರೆ ಅವು ಮೂಕಪ್ರಾಣಿಗಳು. ನಮ್ಮ ಬೌಲ್ ಅಭಿಯಾನದಿಂದಲಾದರೂ ಅಂತಹ ಅನೇಕ ಜೀವಿಗಳು ಉಳಿಯುತ್ತವೆ ಎಂಬ ಕಳಕಳಿ ನಮ್ಮದು.”

-ಸನ್ನಿ ಹಸ್ತಿಮಾಲ್ ಜೈನ್, ಸಂಸ್ಥಾಪಕರು, ವಾಟರ್ ಫಾರ್ ವಾಯ್ಸ್ಲೆಸ್.

 

ನಮ್ಮ ಅಭಿಯಾನದಿಂದ ಧ್ವನಿರಹಿತ ಜೀವಿಗಳು ಧ್ವನಿ ಬಂದAತಾಗಿದೆ ಎಂಬ ಹೆಮ್ಮೆ, ತೃಪ್ತಿ ನಮ್ಮದು. ನಮ್ಮ ಜೊತೆ ಇನ್ನಷ್ಟು ಜನ ಕೈಜೋಡಿಸಿದರೆ ಮುಂದೆ ಯಾವ ಮೂಕಪ್ರಾಣಿಗಳೂ ನೀರಿಲ್ಲದೆ ಸಾಯುವುದನ್ನು ನಾವು ತಪ್ಪಿಸಬಹುದು. ಪ್ರತಿ ಜೀವಿಗೂ ಮೌಲ್ಯವಿದೆ ಎಂಬ ಅರಿವು ಎಲ್ಲರಲ್ಲಿಯೂ ಬರುವಂತಾಗಲಿ.

-ಪ್ರಫುಲ್ ಮೌನ್, ಸಹಸಂಸ್ಥಾಪಕರು, ವಾಟರ್ ಫಾರ್ ವಾಯ್ಸ್ಲೆಸ್.

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ