ಕಥಾಲೋಕ
ತಿಮಿರ (ಕಥೆ)
ಅಷ್ಟು ದೂರಕ್ಕೆ ನೀಲಿ ನೀಲಿಯಾಗಿ ಪ್ರಖರವಾಗಿ ಹೊಳೆಯುತ್ತಿರುವುದು ಎಂಥಾ ಬೆಳಕು ಎಂದು ಚಾವಡಿಯಲ್ಲಿ ಮಲಗಿದ್ದ ತಿಮಿರ ಕತ್ತನ್ನು ಒಮೆ ಉದ್ದಕ್ಕೆ ನೀಕಿ ನೋಡೋ ಹೊತ್ತಿಗೆ ಬ್ಯಾಟರಿ ಬೆಳಕು ಹಿಡಿದಿದ್ದ ಅಪ್ಪ `ಯಾವುದೊ ಕರಿ ಮುಸುಡಿ ಕಾಡ್‌ಬೆಕ್ಕು ಕೊಟ್ಗಿ ಒಳಗ್ ಬಂದು ಕೂತ್ಕಂಡಿತ್' ಅಂತ ಹೇಳುವುದಕ್ಕೂ ಸರಿಹೋಯ್ತು. ಎಲ್ಲರೂ ಕುತೂಹಲದಿಂದ ಎಂತದಿದು ಅಂದ್ಕಂಡ್ ನೋಡ್ತಾ ಇದ್ರೂ ಬೆಳಕಿನ ಪ್ರಖರಕ್ಕಾಗಲೀ, ಜನರ ಗುಸು ಗುಸುಗಾಗಲೀ ಬೆಕ್ಕಿನ ದೇಹ ಒಂಚೂರೂ ಅಲುಗಾಡಲಿಲ್ಲ. ಬಿಟ್ಟ ಕಣ್ಣು ಬಿಟ್ಕಂಡ್ ದಿಟ್ಟಿಸುತ್ತಲೇ ಇತ್ತು. ಆಕಾಶವೇ ಕಳಚಿ ಬೀಳೋ ಹಾಗೆ ಬರ್ರೋ..... ಅಂತ ಸುರಿಯುತ್ತಿರುವ ಈ ಮಳೆಯ ಜೋರಿಗೆ ಹೆದರಿ ಎಲ್ಲಿಂದಲೋ ಓಡಿ ಬಂದಿದ್ದ ಕಾಡ್‌ಬೆಕ್ಕು ಅರ್ಧ ನಿತ್ರಾಣವಾಗಿ ಹೋಗಿತ್ತು. ಮನೆಯಂಗಳದಲ್ಲಿ ಒಂದು ಪುಟ್ಟ ನಾಯಿ ಕಂಡರೂ `ಹಚಾ... ಹತ್...' ಎಂದು ಬೆದರಿಸುವ ಅಪ್ಪ ಶಂಕರಣ್ಣನಿಗೇ ಕರುಣೆ ಬಂದು `ಬದ್ಕಣಲಿ' ಎಂಬಂತೆ ಸುಮನಾದ. ಆದ್ರೆ, ನಮನೆ ಬಡಕಲು ದೇಹದ ನಾಯಿ ದಾಸ ಎಲ್ಲೋಯ್ತು? ಬಿಸಿ ಬೂದಿಯೊಳಗೆ ಮೂತಿ ಸಿಕ್ಸ್‌ಕೊಂಡು ಮಲ್ಕೊಂಡ್ ಬಿಟ್ಟಿರಬೇಕು ಮುಂಡೇದು ಎಂದು ಮನೆ ಮಂದಿ ನಾಯಿಯನ್ನು ಶಪಿಸುತ್ತಾ ಮಲಗೋಕೆ ಅಣಿಯಾದರು.
ಇಷ್ಟಾದರೂ ತಿಮಿರನಿಗೆ ನಿದ್ದೆ ಕಣ್ಣಿಗೆ ಹತ್ತಲಿಲ್ಲ. ಕತ್ತಲ ರಾಶಿಯನ್ನೆಲ್ಲ ಆಪಾದಮಸ್ತಕವಾಗಿ ಆಪೋಶನ ತೆಗೆದುಕೊಂಡವರಂತೆ ಸುರಿಯುತ್ತಿದ್ದ ಮಳೆ ಈ ರಾತ್ರಿಯ ಅಗಾಧ ನೀರವತೆಯಿಂದಾಗಿ ಇನ್ನಷ್ಟು ಭಯ ಹುಟ್ಟಿ ಉಂಡಿದ್ದ ಗಂಜಿಯನ್ನೆಲ್ಲ ಒಮ್ಮೆ ಕಲಸಿ ಹಾಕಿದಂತಾಯ್ತು. ಅಪ್ಪ ಬ್ಯಾಟರಿ ಬೆಳಕು ಬಿಟ್ಟಾಗ ಸುರಿಯುತ್ತಿದ್ದ ಮಳೆಯ ಭೀಕರತೆ ಎಂಥದೆಂಬುದು ಅರ್ಥವಾಗಿತ್ತು ಅವನಿಗೆ. ಜೊತೆಗೆ ಆ ಬೆಕ್ಕು! ನನ್ನ ದಿಗಿಲು ಹೆಚ್ಚು ಮಾಡಲಿಕ್ಕೇ ಬಂದು ಕುತ್ಕಂಡಿದೆ ಬೇರೆ. ಮಳೆಯ ತಾಟಕೀ ಸ್ವರೂಪಕ್ಕೆ ಹೆದರಿ ಗಾಳಿಯ ಉಸಿರೇ ನಿಂತು ಹೋದಂತೆ ತೋಟದಲ್ಲಿರುವ ಅಡಿಕೆ ಮರವನ್ನು ದೆವ್ವ ಅವಚಿಕೊಂಡು ಕುಳಿತಂತೆ ಗವ್ವನೆ ಮೌನ. ಗದ್ದೆಗಳಾಚೆಗೆ ಹೊಂಡದಲ್ಲಿರುವ ಮಾಟದ ಭಟ್ಟರ ಮನೆಯಲ್ಲಿ ದಿನಾ ರಾತ್ರಿ ಉರಿಯುವ ದೊಂದಿ ದೀಪ, ಏರು ದನಿಯ ಮಂತ್ರ.ವೂ ಇಲ್ಲ.
ಮನೆಯೊಳಗಿನ ತಂಡಿ-ಸಿಮ ಹೊಡೆದಟ್ಟಲು ಪಡಸಾಲೆಯ ಮಧ್ಯದಲ್ಲಿ ಪಾರೋತಿ ಅಜ್ಜಿ ಇಷ್ಟಗಲ ತಪ್ಪಲೆಯಲ್ಲಿ ಇದ್ದಿಲು ಸುರಿದು ಹೊಗೆ ಹಾಕಿದ್ದಳು. ಅದರಲ್ಲಿ ಹಾಕಿದ್ದ ಓಮ, ಅರಷಿಣ, ಕಹಿಬೇವಿನ ಸೊಪ್ಪನ್ನೆಲ್ಲ ಬೂದಿ ಮಾಡಿದ್ದ ಬೆಂಕಿ ಮಿಣ ಮಿಣಾಂತ ಕಣ್‌ಹೊಡಿತಿತ್ತು. ಈ ಅರೆಜೀವದ ಬೆಳಕನ್ನು ಮಲಗಿದ್ದಲಿಂದಲೇ ದಿಟ್ಟಿಸುತ್ತಿದ್ದ ತಿಮಿರನ ಮಟ್ಟಿಗೆ ಇಡೀ ಜೀವನದಲ್ಲಿ ಮಳೆ ಅಂದ್ರೆ ಈ ಪಾಟೀ ಕಪ್ಪುಗಟ್ಟಿಕೊಂಡು ಸುರಿಯೋದು ವಿಸಯಾತಿವಿಸಯ. `ರಾಮಾ....ರಾಮಾ ಅಂತ ಕಣ್‌ಮುಚ್ಕಂಡ್ ಮಲ್ಕಳ್ಳೋ' ಎಂಬ ಅಜ್ಜಿಯ ಸಲಹೆಗೆ ತಲೆ ಬಾಗಿದ ತಿಮಿರ ಕಾಲಿನಿಂದ ತಲೆ ತಂಕಾ ಗೋದೂಡಿಯನ್ನ ಎಳಕೊಂಡು, ಎರಡೂ ಕೈಗಳನ್ನ ತೊಡೆಗಳ ಮಧ್ಯೆ ಸೇರಿಸಿಕೊಂಡು, ಬೆನ್ನ ಹುರಿಯಲ್ಲಿ ಮಿಂಚಂಗೆ ಮಿಂಚುತ್ತಿದ್ದ ಚಳಿಯನ್ನೆಲ್ಲ ಹೊಟ್ಟೆಯೊಳಗೆ ಸೇರಿಸಿ, `ಸ್ವಾಮಿ ದೇವನೇ ಲೋಕಪಾಲನೇ ತೇನಮೋಸ್ತು ನಮೋಸ್ತುತೆ.....' ಅನ್ನುತ್ತಾ ನಿದ್ರೆಗೆ ಶರಣಾದ. ತಿಮಿರನ ಇಡೀ ದೇಹ ಬಿಲ್ಲಿನಂಗೆ ಬಾಗ್ಕೊಂಡು ಹೊಡೀತಿದ್ದ ಗೊರಕೆಯ ಸದ್ದು ಹುಯ್ಯೋ ಮಳೆರಾಯನಿಗೆ ಶರಣಾಗಿತ್ತು.
ಬೆಳಿಗ್ಗೆ ಏಳೋ ಹೊತ್ತಿಗೆ ದಬ್ಬಣದಂಗೆ ಸುರಿತ್ತಿದ್ದ ಮಳೆ ಸೂಜಿ ಗಾತ್ರಕ್ಕೆ ಇಳಿದಿತ್ತು. ಆದ್ರೂ ಈ ದಗಲ್ಬಾಜೀದು ನಿನ್ನೆ ಬೆಳಿಗ್ಗೆನೂ ಹೀಗೇ ಇತ್ತು. ಆಕಾಶದಿಂದ ಮಳೆ ಬಿದ್ದಿದ್ದೇ ಸುಳ್ಳು ಅಂಬಂಗೆ. ಅಷ್ಟೊಂದು ನೀಲಾನೀಲಿ ಇದ್ದ ಅಂಬರ ಇದ್ದಕ್ಕಿದ್ದಂತೆ ಕಾಡಿಗೆ ಬಳ್ಕಂಡೋರ್ ತರಾ ಬಯಂಕರ ಸ್ವರೂಪ ಪಡಕೊಂಡು ಬಿಟ್ಟಿತ್ತು. ಏಕಾಏಕಿ ಏನಾಯ್ತೋ ಆವೇಶ ಬಂದವರಂಗೆ ಮಳೇ ಸುರಿಯಲು ಶುರುಮಾಡಿತ್ತು. ರಾತ್ರಿ ತನ್ಕಾನೂ ಅದು ತನ್ನ ಹಠ ಬಿಟ್ಟೇ ಇರಲಿಲ್ಲ. ಇವತ್ತಿನ್ ಕತಿಯೂ ಅದೇ ಆಗತ್ತೋ ಎನೋ? ಯಾರಿಗ್ ಗೊತ್ತು? ಎಂತಾದ್ದಾದರೂ ಆಗಲಿ, ಮಳೇಲಿ ಬೆಚ್ಚಗೆ ಮಲ್ಕಂಡಿರೋ ಸುಖ ಯಾರಿಗ್ ತಾನೇ ಬೇಡ? ಹಂಗೇ ಇನ್ನೊಂದಿಷ್ಟು ಹೊತ್ತು ಮಲ್ಕೊಂಡಿರೋ ಆಸೆಯಲ್ಲಿ ಇಡೀ ದೇಹವನ್ನು ಇನ್ನೊಂದು ಮಗ್ಗುಲಿಗೆ ತಿರುವಿ ಹಾಕಿದ ತಿಮಿರ, ಕನಸು ಕಾಣಲು ಅನುವಾದ.
ಅಷ್ಟೊತ್ತಿಗೇ ಬಾಗಿಕೊಂಡಿದ್ದ ಅಂಡಿನ ಮೇಲೆ ದಡಾರ್ ಅಂತ ಬಿದ್ದ ಪೆಟ್ಟು, ಮಳೆ ಬಂದು ಹಿರಿಯೋ ಹೊತ್ತಿಗೆ ಸಿಡಿಲು ಬಿತ್ತಲ್ಲ ಎಂದ್ಕೊಂಡು ಎದ್ದು ಕುಳಿತರೆ ಪಾರೋತಿ ಅಜ್ಜಿಯ ಬೆಳಗಿನ ಸಹಸ್ರನಾಮ ಆರಂಭವಾಗಿತ್ತು. ಸೂರ್ಯಂಗೇ ಕೊಡೆ ಹಿಡಿಯುವ ಹಂಗೆ ಕರಿಮೋಡದ ಮೇಲೆ ಇನ್ನೊಂದು ಕರಿಮೋಡ ಕುಳ್ತಕಂಡು ಮಳೆ ಸುರೀತಾ ಇದ್ರೆ ಬೆಳಗಾಗಿದ್ದೇ ಗೊತ್ತಾಗದು. ಅದರಲ್ಲಿ ಈ ಮುದುಕೀದು ಏನಪ್ಪಾ ವರಾತ ಎಂದು ಸಿಡಿಮಿಡಿಗೊಂಡ ತಿಮಿರ. ಮಳೆ ಇರ್ಲಿ, ಬಿಸ್ಲು ಇರ್ಲಿ, ಈ ಅಜ್ಜಿ ಮಾತ್ರ ಸುಕಾ ಕೊಡೋ ಮನಸ್ತಿ ಅಲ್ಲ. ಈ ತಿಮಿರನ್ನ ಕಂಡ್ರೆ ಅಜ್ಜಿಗೆ ಸಿಟ್ಟು ಅದೆಲ್ಲಿಂದ ತಿವ್ಕೊಂಡು ತಿವ್ಕೊಂಡು ಬಂದ್‌ಬಿಡ್ತದೋ ಗೊತ್ತಿಲ್ಲ. ಅಷ್ಟಕ್ಕೂ ಕ್ಯಾರೇ ಅನ್ದೇ ಸುಮ್ನೆ ಮಲ್ಕೊಂಡ್ ಬಿಟ್ರೆ ಅಜ್ಜಿ ಸುಮನೇ ಬಿಡೋ ಛಾನ್ಸು ಇರಲಿಲ್ಲ. ಅದಕ್ಕೇ ಹೊದ್ದುಕೊಂಡಿದ್ದ ಗೋದೂಡಿ ಸುತ್ತಿಕೊಂಡೇ ಹೊರಗಿನ ಜಗುಲಿಯ ಮೇಲೆ ಬಂದು ಸೆಟ್ಲಾದ ತಿಮಿರ ಮಳೆಯ ರೌದ್ರಾವತಾರದ ಇನ್ನೊಂದು ದರ್ಶನ ಪಡೆದ. ಮನೆ ಮುಂದಿನ ಅಂಗಳ ಕೆಂಪು ನೀರಿನ ಹೊಂಡವಾಗಿತ್ತು. ಇಡೀ ತೋಟದ ಕಸ-ಪಸ, ಗಲೀಜು ಶಂಕರಣ್ಣನ ಮನೆಯ ಮುಂದೇ ಸೇರಿಕೊಂಡಿತ್ತು. ಕಟ್ಕೊಂಡಿದ್ದ ಅಂಗಳದ ತೂಬಿಗೆ ಹಾರಂಗೋಲ್ ಹಾಕಿ ನೀರನ್ನು ತೋಟಕ್ಕೆ ಬಿಡೋ ಗಡಿಬಿಡಿಯಲ್ಲಿ ಸಣ್ಣ್ ಮಾವ ದೇವಯ್ಯ ನಿರತನಾಗಿದ್ದ. ಉದ್ದ ಗೋಣಿ ಚೀಲಾ ಹೆಗಲ ಮೇಲೆ ಹಾಕ್ಕೊಂಡಿದ್ದ ಅಪ್ಪ ಕೊಳಕು ನೀರಿನಲ್ಲಿದ್ದ ತೆಂಗಿನ್‌ಕಾಯಿ, ಅಡಕೆ, ಗೇರುಬೀಜ, ಎಣ್ಣೆಕಾಯ್‌ಗಳನ್ನೆಲ್ಲ ಹೆಕ್ತಾ ಇದ್ದ. ಇದೆಲ್ಲ ತನ್ಗೆ ಸಂಬಂಧಪಟ್ಟಿದ್ದೇ ಅಲ್ಲ ಎಂಬಂತೆ ದೊಡ್ಡ ಮಾವ ಈರಯ್ಯ ಮಾತ್ರ ತಾನುಟ್ಟ ತುಂಡು ಲುಂಗಿಯನ್ನು ಚೆಡ್ಡಿ ತೋರುವ ತಂಕಾ ಎತ್ತಿ ಕಟ್ಟಿ ಗಣೇಶ ಬೀಡಿಯ ದಮು ಎಳೆಯುತ್ತ ಜೀವನಾನಂದ ಅನುಭವಿಸುತ್ತಿದ್ದ. ಎಳೆಯುತ್ತಿದ್ದ ಬೀಡೀಯನ್ನೇ ತಿಂಡಿ ಅನ್ನೋ ಭ್ರಮೆಯಲ್ಲಿ ಈರಯ್ಯನ ಪ್ರೀತಿಯ ನಾಯಿ ದಾಸ ಬಾಲ ಅಲ್ಲಾಡಿಸ್ತಾ, ಯಜಮಾನನ ಲುಂಗಿಯನ್ನು ಮೂಸುತ್ತಾ, ಮತ್ತೊಮೆ ಎದ್ದು ಸುತ್ತು ಹಾಕುತ್ತಾ ಕುಂಯಿ ಕುಂಯಿ... ಅಂತಿತ್ತು.
ಈ ದೃಶ್ಯಗಳನ್ನೆಲ್ಲ ನೋಡ್ತಾ ಇದ್ದ ತಿಮಿರನಿಗೆ ನಿದ್ದೆ ಅಮಲಿನಂಗೆ ಎಳಿತಾ ಇತ್ತು. ಮತ್ತೆ ಮತ್ತೆ ಮುಚ್ಚುತ್ತಿದ್ದ ಕಣ್ಣಿನ ರೆಪ್ಪೆಯನ್ನು ಬಲವಂತವಾಗಿ ಅಗಲಿಸಿಕೊಂಡು ಕುಳಿತವನಿಗೆ, `ಮೊಕ ತೊಳ್ದಿಯೇನೋ ತಿಮ್ರ!' ಎಂಬೋ ಅಮನ ದನಿ ಕೇಳಿ ಇಡೀ ದೇಹಾನ ಒಂದ್ಸಲಕ್ಕೆ ಅಲ್ಲಾಡ್ಸಿ ಜಾಗೃತಗೊಳಿಸಿತ್ತು.
`ಬಚ್ಚಲ್ ಮನೆಯಲ್ಲಿ ಅಕ್ಕಯ್ಯ ಸ್ನಾನ ಮಾಡ್ತಾ ಇದಾಳೆ' ಅಂತ ಕುಂತಲ್ಲೇ ಒಂದು ಹಸೀ ಸುಳ್ಳು ಎಸೆದು ಮತ್ತೆ ಅಲ್ಲೇ ಕುಂತ.
`ಥೂ! ಆ ನಮನಿ ಮಳೆ ನೀರ್ ಸುರಿಯತ್ತ್ ಬಚ್ಚಲ್ ಮನೆಗೆ ಹೋಗ್ತಾನಂತೆ, ಹೊರಗೇ ಮೊಕ ತೊಳಿ ಹೋಗೋ ಮೈಗಳ್ಳ....'
`ತೊಳಿತೆ ಬಿಡಮಾ'
ಹೀಗಂತ ತಿಮ್ರ ಹೇಳಿದ್ರೂ ಊರಿದ್ದ ಅಂಡು ತೆಗೆಯೋ ಮನಸ್ಸು ಮಾತ್ರ ಬರಲಿಲ್ಲ. ಸುಮ್ನೆ ಕೂತ್ಕಂಡ್‌ಬಿಟ್ರೆ ಒದ್ಕೊಂಡ್ ಬಪ್ಪೋ ನಿದ್ದೆ ತಪ್ಸೋಕಾಗೋ ಕತಿ ಅಲ್ಲ ಅನ್ನುತ್ತಾ ಕಿರಿಕಿರಿ ಮಾಡ್ತಿದ್ದ ಮೂಗಿನ ಹೊಳ್ಳೆಗೆ ಕೈ ಹಾಕಿ ಅದರೊಳಗಿನ ಹೇಸಿಗೇನ ಹಾರೆ ಥರ ಕೆರೆಯ ತೊಡಗಿದ. ಇದೇನಿದು ಇಲ್ಲೂ ಕರಿಮೋಡ ಕಡಿದೆಯೇ ಎಂದು ಒಮೆಗೇ ದಿಗಿಲಾದ. ಇಷ್ಟೊಂದು ಗೊಣ್ಣೆ ಎಲ್ಲಿಂದ ಬಂತೋ ? ಥೂ! ಮಳೆ ಬಂತೆಂದ್ರೆ ಮೂಗೂ ಚರಂಡಿ ಆಗ್ತದಾ ಅಂತ ಆಶ್ಚರ್ಯ ಪಟ್ಕೋಂತ ಒಳಗಿದ್ದ ಕೊಳೆಯನ್ನು ತೆಗೆಯುವುದರಲ್ಲೇ ಮಗ್ನನಾದ. ಕಪ್ಪಗಿನ ಪದಾರ್ಥನ್ನೆಲ್ಲ ಸೇರ್ಸಿ ಸೇರ್ಸಿ ಉಂಡೆ ಥರ ಮಾಡಿದ. ಗೊಬ್ಬರದ ಹುಳು, ಗೊಬ್ಬರವನ್ನ ಉಂಡೆ ಮಾಡಿ ಅದರ ಮೇಲೆ ಸವಾರಿ ಮಾಡುತ್ತ ಹೋದ ಹಾಗೇ ತಿಮಿರ ಇಲ್ಲದ ಯೋಚನೆಯನ್ನೆಲ್ಲ ತಲೆಗೆ ಹಾಕ್ಕೊಂಡು ಗೊಣ್ಣೆಯನ್ನ ಉರುಟುರುಟು ಗೋಲಿ ಮಾಡುತ್ತಲೇ ಕುಂತಿದ್ದ.
ಆ ಕ್ಷಣದಲ್ಲಿಯೇ ತೂಬಿನೊಳಗಿಂದ ನುಗ್ಗಿ ಬರುತ್ತಿದ್ದ ನೀರಿನ ರಭಸದಿಂದ ತಪ್ಪಿಸಿಕೊಳ್ಳಲು ಒದ್ದಾಡಿದ ದೊಡ್ಡ ಹೆಗ್ಗಣವೊಂದು ದಿಕ್ಕು ಕಾಣದಂತಾಗಿ ಜಗಲೀ ಕೆಳಗಿನ ತೂತಿನಿಂದ ಎಗರಿ, ದಡಬಡಾಯಿಸಿ ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ತಿಮ್ರನ ಮೈ ಮೇಲೇ ಜಂಪ್ ಮಾಡ್ಕೊಂಡು ಕ್ಷಣಾರ್ಧದಲ್ಲಿ ಮಾಯವಾಯ್ತು. ಆ ಹೆಗ್ಗಣದ ಮೈಮೇಲೆ ಮೆತ್ಕಂಡಿದ್ದ ರಾಶಿ ರಾಶಿ ಗಲೀಜೂ ಇವನ ಮೈತುಂಬಾ, ಹೊದ್ಕೊಂಡಿದ್ದ ಗೋದೂಡಿ ತುಂಬಾ ಪ್ರೋಕ್ಷಣೆಯಾಗಿತ್ತು. ಈ ಹಠಾತ್ ದಾಳಿಗೆ ಸಿಕ್ಕಿದ ತಿಮಿರನ ಇಡೀ ದೇಹ ಜಗಲಿ ಕೆಳಗೆ ದೊಪ್ಪನೆ ಬಿದ್ಬಿಡ್ತು. ಕೈಯಲ್ಲಿದ್ದ ಗೊಣ್ಣೆ ಉಂಡೆ ಎಗರಿ ಎಲ್ಲಿ ಬಿತ್ತೋ? ಮಣ ಗಾತ್ರದ ಹೆಗ್ಗಣ ಕಂಡ ತಿಮಿರನಿಗೆ ಚರಂಡಿಯ ಕೊಳೆಯನ್ನೆಲ್ಲ ಒಮೆಗೇ ಸೇರಿಸಿ ಕುಂಡೆಯೊಳಗಿನಿಂದ ಪಂಪ್ ಮಾಡಿದಂಗೆ ಕಣ್ಣಲ್ಲಿ ನೀರು ಬಂದು `ಅಮಾ.......' ಎಂದು ಹಾಕಿದ ಬೊಬ್ಬೆಗೆ ಅಂಗಳದಲ್ಲಿದ್ದ ಅಪ್ಪ ಶಂಕರಣ್ಣ ಹೆಗ್ಗಣ ಹಾರಿ ಹೋದ ವೇಗದಲ್ಲೇ ಜಗಲಿ ಕಡೆಗೆ ದಾವಿಸಿ ಬಂದ.
ಏನಾಯ್ತೋ ತಿಮ್ರಾ....ಯಾಕೋ ಬಿದ್ದೀ......ಕೂತ್ಕಂಡಲ್ಲೇ ನಿದ್ದೆ ಮಾಡ್ಬೇಡಾಂತ ಎಷ್ಟ್ ಸಾರಿ ಹೇಳಿದ್ದೆ ನಿಂಗೆ...?
ನಿದ್ರೆ ಮಾಡ್ಲಿಲ್ಲಪ್ಪಾ,....." ಜೀವ ಹೋಗೋ ಹಂಗೆ ನೋಯುತ್ತಿದ್ದ ತಿಕವನ್ನು ಹಿಡಕೊಂಡು ಮೇಲೇಳುವ ಪ್ರಯತ್ನ ಮಾಡಿದ ತಿಮಿರ.
"ನಿದ್ರೆ ಅಲ್ದಿದ್ರೆ ಮತ್ತೇನಾಯ್ತೋ... ಕೆಟ್ಟ್ ಗಾಳಿ ಬೀಸ್ತಾ ?" ಮಳೆ ಗಾಳಿಗೆ ಸಿಕ್ಕಿದ ಮರದಂತೆ ದರಾಶಾಯಿಯಾಗಿದ್ದ ಮಗನನ್ನು ಅನಾಮತ್ತಾಗಿ ಮೇಲಕ್ಕೆತ್ತಿದ ಶಂಕರಣ್ಣ.
"ಅದೆಲ್ಲಿಂದ್ಲೋ ಹೆಗ್ಗಣಾ ಒಂದ್ ಮೈಮೇಲೆ ಹಾರಿ ಹೋಯ್ತಪ್ಪಾ, ಆ ಕಾಡ್‌ಬೆಕ್ಕಿನ್ ತರಾ ಇತ್ತು. ದಿಕ್‌ತಪ್ದಂಗಾಗಿ ಬಿದ್ಬಿಟ್ಟೆ.. ಕಣ್ಣೆಲ್ಲ ಕತ್ತಲಾದಂಗಾಯ್ತು...
ಅಷ್ಟೊತ್ತಿಗಾಗಲೇ ಮನೆ ಮಂದಿಯೆಲ್ಲ ಈ ಪ್ರಸಂಗವನ್ನು ನೋಡಲು ಜಗಲೀ ಮುಂದೆ ಪ್ರತ್ಯಕ್ಷರಾಗಿ ಬಿಟ್ಟಿದ್ದರು. ತಿಮಿರ ಅಷ್ಟೆತ್ತರದ ಜಗಲಿಯಿಂದ ಬಿದ್ದ ಕಾರಣ ಕೇಳಿ ಎಲ್ಲರಿಗೂ ಒಂಥರಾ ತಮಾಷೆ ಅನಿಸಿತು. ಮಳೆಯಿಂದ ಆದ ರಂಪಾಟವನ್ನು ಎಲ್ಲರೂ ಒಂದು ಕ್ಷಣಕ್ಕೆ ಮರೆತು ಬಿಟ್ಟರು. ಒಬ್ಬೊಬ್ಬರು ಒಂದೊಂದು ರೀತೀಲಿ ಮಾತಾಡಲು ಶುರು ಮಾಡ್ಕಂಡ್ರು. `ಮೈಗಳ್ಳನ ಹಾಗೆ ಕುತ್ಕಂಡಿದ್ರೆ ಹಿಂಗೇ ಆಗಾದು' ಅಂತ ದೊಡ್ಡ ಮಾವ ಈರಯ್ಯ ಲೇವಡಿ ಮಾಡಿದ್ದು ಕೇಳಿಸ್ಕಂಡ ತಿಮ್ರನಿಗೆ ಮೈಯೆಲ್ಲ ಉರ್ದೊಯ್ತು. ಮೈತುಂಬಾ ಉದಾಸೀನ ಹೊದ್ದುಕೊಂಡಿರೋ ಈರಯ್ಯನೇ ಹೀಗ್ ಹೇಳ್ಬೌದಾ ಅಂತ ಸಿಟ್ಟೂ ಬಂತು.
ಈ ಸಿಟ್ಟಿನಲ್ಲಿಯೇ ತಿಮ್ರ ದಪ ದಪಾ ಅಂತ ಹೆಜ್ಜೆ ಹಾಕುತ್ತಾ ಬಚ್ಚಲ ಮನೆಗೆ ನುಗ್ಗಿ ಮಾವಿನ ಕಡ್ಡಿ ಹಿಡ್ಕೊಂಡು ಹಲ್ಲುಜ್ಜಲು ಆರಂಭಿಸಿದ. ಬೆಳಗಾತಾನೇ ಹೀಗೆ ಅವಮಾನವಾಯ್ತಲ್ಲ ಎಂಬುದು ಮನಸ್ಸಿನಲ್ಲಿ ಗಿರಕಿ ಹಾಕುತ್ತಿತ್ತು. ಎಲ್ಲದಕ್ಕೂ ಆ ಹೋಂತದ ಹೆಗ್ಗಣವೇ ಕಾರಣ, ಅದರ ಮನೆ ಹಾಳಾಗ, ಅದರ ಸಂತಾನ ನಿರ್ನಾಮವಾಗಿ ಹೋಗಾ, ಅದರ ಕಣ್ಣಿಗೆ ಮೆಣಸಿನಪುಡಿ ಹಾಕಾ, ಅದರ ಬಾಲಕ್ಕೆ ಪಟಾಕಿ ಹಚ್ಚ..... ಮುಂತಾಗಿ ಮನಸ್ಸಿನಲ್ಲೇ ಬೈಗುಳಗಳ ಸುರಿಮಳೆ ಮಾಡುತ್ತಾ ಬಾಯಿ ತುಂಬಾ ತುಂಬಿಕೊಂಡಿದ್ದ ಎಂಜಲನ್ನು ಥೂ... ಎಂದು ಜೋರಾಗಿ ಉಗಿದ. ಆ ಎಂಜಲು ಅಷ್ಟು ದೂರ ಹೋಗಿ ಹೇಲಿನ ಮುದ್ದೆಯಂತಿರುವ ವಸ್ತುವಿನ ಮೇಲೆ ಪಟ್ ಅಂತ ಬಿತ್ತು. ಅದನ್ನು ಕಂಡು ತಿಮ್ರ ಒಂದು ಕ್ಷಣ ಅವಾಕ್ಕಾದ. ಮಳೆ ಬತ್ತಾ ಇದೆ ಅಂತ ಈ ಬಚ್ಚಲ ಮನೆಯಲ್ಲೇ ಹೇತವರ್ರೋ ಹೊಲಸು ಮುಂಡೇವೂ ಥೂ! ಆ ಈರಯ್ಯನೇ ಈ ತರಾ ಮಾಡಿರ್ಬೌದು ಅಂಥ ಎಣಿಸುವುದರೊಳಗೆ ಆ ಹೇಲು ಇದ್ದಕ್ಕಿದ್ದಂತೆ ಅಲ್ಲಾಡತೊಡಗಿತು. ಅರೆರೆ... ಎಂಥಾದಪ್ಪಾ ಇದು ಎಂದು ಕುತೂಹಲದಿಂದ ಕತ್ತನ್ನೂ, ಸೊಂಟವನ್ನೂ ಬಗ್ಗಿಸಿದ್ದನೋ ಇಲ್ಲವೋ ಅಷ್ಟೊತ್ತಿಗೆ ಆ ಹೇಲು ಜೀವ ತಳೆದು ಹೆಗ್ಗಣದ ರೂಪ ತಾಳಿ, ಆ ಜೀವ ಸತ್ತೆನೋ, ಬಿದ್ದೆನೋ ಎಂಬಂತೆ ತಿಮ್ರನ ಕಾಲಿನಡಿಯಿಂದ ಜಗುಲಿ ಕಡೆಗೆ ದೌಡಾಯಿಸಿತು. ಟೊಣಪನ ಹಾಗಿದ್ದ ತಿಮ್ರ ನೀರು ನಿಂತ ನೆಲದಲ್ಲಿ ಬ್ಯಾಲೆನ್ಸು ಮಾಡಲಾಗದೇ, ಭಯ ವಿಹ್ವಲನಾಗಿ ಮತ್ತೊಮೆ ಕಾಲು ಜಾರಿ ಬಿದ್ದುಬಿಟ್ಟ..
ಸಮರದ ನೆಲೆಯಿಂದ ತಪ್ಪಿಸಿಕೊಂಡ ಯೋಧನಂತೆ ಹೇಲು ಮೆತ್ತಿಕೊಂಡಂತಿದ್ದ ಹೆಗ್ಗಣ ಬಚ್ಚಲು ಮನೆಯಿಂದ ಪಡಸಾಲೆಯ ಕಡೆಗೆ ಶರವೇಗದಲ್ಲಿ ಓಡಿ ಬಂತು. ಈ ಜಗುಲಿಯಲ್ಲೋ ಜನವೋ ಜನ. ಎಲ್ಲರೂ ತಿಮ್ರ ಬಿದ್ದ ಪರಿಯನ್ನು ಚರ್ಚಿಸುತ್ತಾ.... ಹೆಗ್ಗಣ ಮೈಮೇಲೆ ಹತ್ತಿ ಓಡಿದ್ದು ತಿಮ್ರನ ಭ್ರಮೆಯೇ ಇರಬೇಕು ಎಂದು ಕೆಲವರು ವಾದಿಸಿದರು. ಬೊಗಳೇ ಸಿದ್ದನ ಕತೆಯಿದು ಎಂದು ಇನ್ನು ಕೆಲವರು ಲೇವಡಿ ಮಾಡುತ್ತ ಕುಳಿತಿದ್ದರು. ಈ ಜನರ ರಾಶಿಯನ್ನು ನೋಡಿದ ಹೆಗ್ಗಣಕ್ಕೋ ಮತ್ತೆ ದಿಕ್ಕು ತಪ್ಪಿದಂತಾಗಿತ್ತು. ಮೋರಿಯೊಳಗಿನಿಂದ ಎದ್ದು ಬಂದ ಪಾಪಕ್ಕೆ ಅದು ಜೀವ ಉಳಿಸಿಕೊಂಡರೆ ಸಾಕಾಗಿತ್ತು. ಆ ಭಯದಿಂದಲೇ ಪಡಸಾಲೆಯ ಆ ಮೂಲೆಯಿಂದ ಈ ಮೂಲೆಗೆ ಅಟ್ಟಾಡಿಸಿಕೊಂಡ ಬೇವಾರ್ಸಿಯಂತೆ ಓಡಾಡಿತು; ಬಿದ್ದು ಲಾಗ ಹಾಕಿತು. ಇದರಿಂದಾಗಿ ಇಡೀ ಪಡಸಾಲೆಯಲ್ಲಿ ಹೇಲಿನ ರಂಗೋಲಿ. ಜಗುಲಿ ಈ ರೀತಿ ಗಲೀಜುಮಯವಾಗಿ, ಅಸಹ್ಯ ವಾಸನೆ ಬರುತ್ತಿದ್ದ ಪರಿಯನ್ನು ತಟ್ಟನೆ ಕಂಡ ತಿಮ್ರನ ಅಜ್ಜಿ ಪಾರೋತಿ ಒಮೆಲೇ ಮೈಯೆಲ್ಲ ದಿಗಿಲಾಗಿ ನಿಂತು ಬಿಟ್ಟಳು. ಆಕೆಗೋ ಕರಳು ಕಿತ್ತು ಬರೋವಷ್ಟು ಸಂಕಟವಾಯಿತು. ಒಂದು ಕ್ಷಣ ಇದು ದಿಟವೋ ಅಲ್ಲವೋ ಎಂಬುದು ತಿಳಿಯಲಿಕ್ಕೇ ಆಗದೆ ಚಡಪಡಿಸಿದಳು. ಮತ್ತೊಮೆ ಚೇತರಿಸಿಕೊಂಡು ಕೂಗಿದಳು.
"ಅಯ್ಯೋ ಅಯ್ಯೋ... ಅಯ್ಯೋ... ಬ್ಯಾವರ್ಸಿ ಮುಂಡೇದೇ... ಇಲ್ಲಿ ನಿಂತಿದ್ದ ಮನುಷ್ಯರಿಗೆಲ್ಲ ಕಣ್ಣು ನೆತ್ತಿ ಮ್ಯಾಲೆ ಹೋಯ್ತೆ...? ಜಗ್ಲೀ ತುಂಬಾ ಮಾರಿ ನರ್ತನ ಮಾಡ್ತಾ ಇದ್ರೂ ಯಾರಿಗೂ ಕಣ್ಣೇ ಕಾಣ್ಸುದಿಲ್ಲಾಂದ್ರೆ....?" ಎಂದು ಮನೆಯ ಹಿರಿಯ ಜೀವ ಕಂಚಿನ ಕಂಠದಲ್ಲಿ ಬೊಬ್ಬೆ ಹಾಕುವುದನ್ನು ನಿಲ್ಲಿಸೋ ಹೊತ್ತಿಗೆ ಮನುಷ್ಯ ಜಗತ್ತಿಗೆ ಬಂದಿದ್ದ ಆ ಹೆಗ್ಗಣ ಹೈರಾಣಾಗಿ ಹೋಗಿತ್ತು. ಆ ಪುಟ್ಟ ಜೀವ ಭಯದ ಬೀಜವಾಗಿ ಯಾರ್ಯಾರದ್ದೋ ದೇಹಗಳ ನಡುವಿನಿಂದ, ಎದುರಿಗೆ ಸಿಕ್ಕ ಮಾಂಸದ ಖಂಡಗಳನ್ನೆಲ್ಲ ಪರಚಿ, ಹರುಪಿ, ಲಾಗಾ ಹಾಕಿ ಅಂಗಳದ ದಂಡೆಯನ್ನೇರಿ ಮಾಯವಾಯ್ತು. ಹೆಗ್ಗಣ ಎನ್ನೋದು ಬರೀ ಭ್ರಮೆ ಎಂದು ವಾದಿಸುತ್ತ ಕುಂತಿದ್ದವರೆಲ್ಲ ಹಠಾತ್ತಾಗಿ ದಿಟದ ಜಗತ್ತಿಗೆ ಬಂದಿದ್ದರು. ಈ ದರಬೇಶಿ ಹೆಗ್ಗಣವನ್ನು ಇವತ್ತು ಕೊಂದೇ ಬಿಡುತ್ತೇನೆ ಎಂದು ಮುಂದಾದವನು ಈರಯ್ಯ. ಜಗುಲಿ ತುಂಬ ಬಿದ್ದಿದ್ದ ಹೇಲಿನಂತ ಕೊಳಕನ್ನು ಮೆಟ್ಟಿಕೊಂಡೇ ಕೋಲಿಗಾಗಿ ತಡಕಾಡಿದ ಆತ ಕಟ್ಟಿದ್ದ ಲುಂಗಿಯನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು ಅಂಗಳಕ್ಕೆ ಜಿಗಿಯುವ ಹೊತ್ತಿಗಾಗಲೇ ಆ ಜೀವ ತೋಟದ ಯಾವುದೋ ಹಳುವಿನ ಮರೆಯಲ್ಲಿ ಸೇರಿಕೊಂಡು ನಿಟ್ಟುಸಿರು ಬಿಟ್ಟಿತ್ತು.
ಆದರೆ, ಅನಾಮತ್ತಾಗಿ ನಡೆದ ಇಂತಹುದೊಂದು ಪ್ರಸಂಗ ಮನೆ ಮಂದಿಯನ್ನೆಲ್ಲ ಕಂಗೆಡಿಸಿತ್ತು. ಕಾಡುಬೆಕ್ಕಿನಷ್ಟು ಮಜಬೂತಾಗಿದ್ದ ಹೆಗ್ಗಣವನ್ನು ಜೀವಮಾನದಲ್ಲೇ ಕಂಡಿದ್ದಿಲ್ಲ, ಎಂಥೆಂತ ಪಾಶಾಣ ತಿಂದು ಬೆಳೆದಿತ್ತೋ ಮುಂಡೇದು ಎಂದು ಅಜ್ಜ ಮಾದಯ್ಯ ವ್ಯಾಖ್ಯಾನ ಮಾಡಿದ. ಐದಾರು ತಲೆಮಾರುಗಳನ್ನೇ ಕಂಡುಬಂದಿದ್ದ ಪಾರೋತಜ್ಜಿ ಮಾತ್ರ ಈ ಘಟನೆ ಕೆಟ್ಟ ಶಕುನವೇ ಇರಬೇಕೆಂದು ಗಾಭರಿಗೊಂಡಳು. ಕಳೆದೆರಡು ದಿನಗಳಿಂದ ಪ್ರಳಯ ಬಂದಂತೆ ಸುರಿದ ಮಳೆಗೂ, ರಾತ್ರಿ ಕೊಟ್ಗಿಯೊಳಗೆ ಕಾಡ್ಬೆಕ್ಕು ಬಂದು ಕುಳಿತಿದ್ದಕ್ಕೂ, ಈಗ ನಡೆದ ಹೆಗ್ಗಣದ ಘಟನೆಗೂ ತಳಕು ಹಾಕಿಕೊಂಡು, ಇದಕ್ಕೇನಾದರೊಂದು ಪರಿಹಾರ ಮಾಡಲೇಬೇಕು, ಇಲ್ಲವಾದ್ರೆ ಏನೇನು ಸಂಬವಿಸ್ತದೋ ಎಂದು ವಾದ ಮಂಡಿಸಿದಳು. ಮನೆಯೊಳಗೆ ಬಂದು ಅಡ್ಡಾಡಿ ಹೋದ ಹೆಗ್ಗಣದ ಬಗ್ಗೆ ಇಷ್ಟೆಲ್ಲ ಅಪಶಕುನದ ಮಾತಾಡುವುದು ಸರಿಯಲ್ಲ, ಅದೋ ಜೀವಭಯದಿಂದ ಓಡಿ ಬಂದಿತ್ತು ಎಂದು ಪ್ರತಿವಾದ ಮಂಡಿಸೋ ಯೋಚನೆ ಕಾಲೇಜಿನಲ್ಲಿ ಸಾಯನ್ಸು ಸಬ್ಜೆಕ್ಟು ಓದುತ್ತಿದ್ದ ತಿಮಿರನ ಅಕ್ಕ ಶರವಂತಿ ಮನಸ್ಸಿನಲ್ಲಿ ಬಂದಿತಾದರೂ ಈ ಮನೆಯಲ್ಲಿ ಅದಕ್ಕೆ ಕವಡೆ ಕಿಮತ್ತಿಲ್ಲ ಎಂದುಕೊಂಡು ಸುಮಗಾದಳು.
ಆಕೆಯ ಅವ್ವ ಸುಶೀಲಮ ಮಾತ್ರ ಪಡಸಾಲೆಯ ಸುತ್ತಲೆಲ್ಲೂ ಮಗ ತಿಮ್ರನ ಸುಳಿವೇ ಕಾಣದೇ ಬೆಚ್ಚಿಬಿದ್ದು, ಏನು ಕೇಡುಕಾಲ ಬಂತೋ ಎಂದು ಬಚ್ಚಲಮನೆಯತ್ತ ದಾವಿಸಿದಳು.
ಬಚ್ಚಲಮನೆಯ ಹೊಂಡದಲ್ಲಿ ಹೆಗ್ಗಣದ ಕಾಲಿಗೆ ಸಿಕ್ಕು ಬಿದ್ದಿದ್ದ ತಿಮ್ರ ಸಾವರಿಸಿಕೊಂಡು ಅದರ ದಂಡೆಯ ಮೇಲೇ ಕುಕ್ಕುರು ಬಡಿದಿದ್ದ. ಈ ಕತ್ತಲು ಎಂಬೋದು ನನ್ನ ಕಣ್ಣಿಗೆ ಮಾತ್ರವೇ ಯಾಕೆ ಇಷ್ಟೊಂದು ಕಪ್ಪು ಕಪ್ಪಾಗಿ ಕಾಣ್ತದೆ ಎಂಬ ಭಾವನೆ ಅವನ ಮುಖದ ತುಂಬೆಲ್ಲ ಹರಡಿಕೊಂಡು ಕುಳಿತಿತ್ತು. ಅದಕ್ಕೆ ತಕ್ಕಂತೆ ಕಣ್ಣು ಮಂಜುಮಂಜಾದಂತೆ ಅನಿಸಿದ್ದು ನಿಜ. ಕೈಯಲ್ಲಿದ್ದ ಮಾವಿನ ಕಡ್ಡಿ ಹೊಂಡದ ನೀರಿಲ್ಲೆಲ್ಲೋ ಬಿದ್ದು ತೇಲಿ ಹೋಗಿತ್ತು. ಬಾಯೊಳಗಿನ ಮಾವಿನ ಒಗರು ಇನ್ನೂ ಇಳಿದಿರಲಿಲ್ಲ. ಈ ಬೆಳಗಾತಿಂದ ಆಗುತ್ತಿರುವ ಘಟನೆಗಳೆಲ್ಲ ನಿಜವೋ, ಸುಳ್ಳೋ ಒಂದೂ ಅರಿಯದಾಯ್ತು. ಇಷ್ಟೆಲ್ಲಾ ಅಧ್ವಾನಕ್ಕೆ ಕಾರಣವಾಗಲೆಂದೇ ಒಳಗೆ ನುಗ್ಗಿ ಬಂದಿದ್ದು ಹೆಗ್ಗಣವೋ, ಹುಲಿ ಮರಿಯೋ, ಕಾಡುಬೆಕ್ಕೋ ಎಂಬ ಭ್ರಮೆ, ಅನುಮಾನದಲ್ಲಿ ಇಷ್ಟಗಲ ಕಣ್ಣು ಬಿಟ್ಟು ಸುತ್ತಲೂ ದೃಷ್ಟಿ ಹಾಯಿಸಿದ; ಆತನಿಗೆ ಕಂಡಿದ್ದು ಅದ್ಯಾವುದೋ ದೂರ ದಿಗಂತದಿಂದ ಬಚ್ಚಲ ಕಿಂಡಿಯೊಳಗೆ ತೂರಿ ಬಂದಂತಿದ್ದ ಮಿಣಮಿಣ ಬೆಳಕಿನ ಸೆಲೆ; ಮಾಡಿಗೆ ತಾಕಿಕೊಂಡೇ ಇರುವ ಬಾಳೆ ಎಲೆಯ ಮೇಲೆ ಪಟಪಟಾ ಅಂತ ಬೀಳುತ್ತಿದ್ದ ಮಳೆಯ ಸದ್ದು. ಗುಹೆಯೊಂದರಲ್ಲಿ ಕುಳಿತಂತೆ, ಯಾರೋ ಕುಣಿದಾಡಿದಂತೆ, ಯಾರನ್ನೋ ಅಟ್ಟಿಸಿಕೊಂಡು ಓಡಿದಂತೆ, ಯಾರೋ ಜಗಳ ಮಾಡಿದಂತೆ.....
ತಿಮ್ರನಿಗೆ ಇಡೀ ಮೈ ಗುದ್ದಿ ಬಿಸಾಡಿದಂಗೆ ನೋಯುತ್ತಿತ್ತು. ತನ್ನ ಎರಡೂ ಕೈಯನ್ನು ಬಚ್ಚಲಮನೆ ದಂಡೆಗೆ ಊರಿ ಮೇಲೆತ್ತಲು ಸಾಧ್ಯವೇ ಇಲ್ಲದ ಹಾಗೆ ನೋಯುತ್ತಿದ್ದ ಅಂಡಿನೊಂದಿಗೆ ಏಳುವ ಪ್ರಯತ್ನ ಮಾಡಿದ. ಅಷ್ಟೊತ್ತಿಗೆ ಸರಿಯಾಗಿ ಬಚ್ಚಲ ಮನೆಯೆಂಬ ಅರೆಬರೆ ಕತ್ತಲ ಕೋಣೆಯೊಳಗೆ ಸುಶೀಲಮನ ಪ್ರವೇಶವಾಯಿತು.
"ಅಯ್ಯೋ! ಯಾಕೋ ಮಗಾ ಇಲ್ಲೂ ಬಿದ್‌ಬಿಟ್ಟಿಯಾ? ಮತ್ತೆ ಕಾಲ್ ಜಾರ್ತಾ? ಕತ್ತಲಲ್ಲಿ ಚಿಮಿಣಿ ದೀಪಾನಾದ್ರೂ ಹಚ್ಕಬಾರ್ದಿತ್ತಾ? ಇಷ್ಟ್ ದೊಡ್ಡ ದೇಹಾ ಬೆಳೆದಿದೆ, ಉದಾಸೀನಾ ಮಾತ್ರ ನಿನ್ನ ಮೈಯಾ ಬಿಟ್ಟಿಲ್ಲ ನೋಡು........" ಎಂದು ಮುಂತಾಗಿ ಬೈಗುಳಗಳನ್ನು ಉದುರಿಸುತ್ತಾ ತಿಮ್ರನ ಕೈಹಿಡಿದು ಮೇಲಕ್ಕೆತ್ತಿದಳು. ದಯಾಮಯಿ ಲೋಕಪಾಲನೇ ಬಂದು ಜೀವವನ್ನು ಎತ್ತಿದಂತಾಯಿತು ತಿಮ್ರನ ಪಾಲಿಗೆ.
"ಜಗುಲಿಯಲ್ಲಿ ಮೈಮೇಲೆ ಹತ್ತಿತ್ತಲ್ಲ ಆ ದರಿದ್ರದ ಹೆಗ್ಣಾ ಮತ್ತೆ ಬಚ್ಚಲಮನೆಯೊಳಗೂ ಬಂದು ಕಾಲಡಿ ಸಿಕ್ಕಿ..." ಎಂದು ಮಗ ಉದ್ಘಾರ ತೆಗೆಯುತ್ತಲೇ ಸುಶೀಲಮನ ಅನುಮಾನ ನಿಜವಾಯ್ತು. ಪಡಸಾಲೆಯಲ್ಲಿ ರಂಪಾಟ ಮಾಡಿದ್ದ ಹೆಗ್ಗಣ ತನ್ನ ಕದನ ಶುರು ಮಾಡಿದ್ದೇ ಬಚ್ಚಲಮನೆಯಿಂದ ಎಂಬುದು ಖಾತ್ರಿಯಾಯ್ತು ಅವಳಿಗೆ. ಇದು ಯಾವ ಕೆಡುಕಿನ ಸಂಕೇತ ಎಂಬುದು ಮಾತ್ರ ಅರ್ಥವಾಗಲಿಲ್ಲ. ಊರಿನ ಗದ್ದೆ ಕೊನೆಯಲ್ಲಿರುವ ಜೋಯಿಸರ ಮನೆಯಲ್ಲಾದರೂ ಹೋಗಿ ಇದಕ್ಕೆ ಪರಿಹಾರ ಕೇಳಿಕೊಂಡು ಬರಬೇಕು ಎಂಬ ಯೋಚನೆಯಂತೂ ಅವಳ ಮನಸ್ಸಿನಲ್ಲಿ ಬಂತು. ಅಕಾಲಕ್ಕೆ ಬಾನು ತೂತಾಗುವಂತೆ ಸುರಿಯುತ್ತಿರುವ ಮಳೆಗೂ ಇಂತಹುದೊಂದು ಘಟನೆಗೂ ಸಂಬಂಧವಿದ್ದೀತೇ ಎಂಬ ಅನುಮಾನವೂ ಸುಳಿದಾಡಿ ಒಂದು ಕ್ಷಣಕ್ಕೆ ಭಯ ಆವರಿಸಿ ಬೇವರಿದಂತಾದಳು.
ತಿಮ್ರ ಹೇಗೋ ತೆವಳಿಕೊಂಡು ಜಗುಲಿಯತ್ತ ಹೆಜ್ಜೆ ಹಾಕಿದ್ದ. ದೇಹ ಎಷ್ಟು ನೋಯುತ್ತಿತ್ತೋ ಅದಕ್ಕಿಂತ ಹೆಚ್ಚು ಆತನ ಮನಸ್ಸು ಘಾಸಿಗೊಂಡಿತ್ತು. ಈ ಮನೆಯ ಜನ ಬೈಯುದನ್ನು ಬಿಟ್ಟು, ಮೈದಡವಿ ಪ್ರೀತಿ ಮಾಡಬಾರದೇ, ಎದೆಗೊತ್ತಿಕೊಂಡು ಬೆನ್ನು ನೇವರಿಸಬಾರದೇ ಎಂಬ ಭಾವನೆ ಮೂಡಿತು. ಅವನಿಗೆ ಗೂತ್ತಿಲ್ಲದಂತೆಯೇ ಕಣ್ಣು ಹನಿಯಾಯಿತು. ಗಂಟಲು, ನಾಲಿಗೆ ಒಣಗಿ ಧ್ವನಿ ನಡುಗಿದಂತಾಯಿತು. ಎದೆಯ ಆಳದಿಂದ ಉಕ್ಕಿ ಬಂದಿದ್ದು ದುಃಖವೋ, ಭಯವೋ ಎಂಬುದು ಅರ್ಥವಾಗಲಿಲ್ಲ.
ಹೊರಗೆ ಜಗುಲಿಯಲ್ಲಿ ಸೇರ್ಕೊಂಡಿದ್ದ ಮನೆ ಮಂದಿಯೆಲ್ಲ ಹೆಗ್ಗಣದ ಹಗರಣವನ್ನೇ ಪರಿಪರಿಯಾಗಿ ಚರ್ಚೆ ಮಾಡುತ್ತ ಮೈಮರೆತಿದ್ದರು. ಕತ್ತಲ ಕೋಣೆಯಿಂದ ಜಗುಲಿಗೆ ಅಡಿಯಿಟ್ಟ ತಿಮ್ರನಿಗೆ ಹೊಸ ಬೆಳಕು ಕಂಡಂತೆ ಸ್ವಲ್ಪ ಚೈತನ್ಯ ಬಂದಿತಾದರೂ ಎಂಥದೋ ಕೆಟ್ಟ ವಾಸನೆ ಮೂಗಿಗಡರಿ ಕರುಳು ಕಿವುಚಿ ಬಂತು. ಇದು ಎಲ್ಲಿಂದ ಬರುತ್ತಿದೆ ಎಂಬುದರ ಅರಿವಾಗದೇ ಕಂಬಕ್ಕೆ ನೇತು ಹಾಕಿದ್ದ ನಿಲುಗನ್ನಡಿಯ ಮುಂದೆ ಮುಖವಾನಿಸಿ ನಿಂತ. ಒಮೆಗೇ ದಿಗಿಲಾಗಿ ಹೋಯಿತು; ಮುಖ, ಎದೆಯ ಮೇಲೆಲ್ಲ ಕಪ್ಪು ಕಪ್ಪು ಗಲೀಜು, ಅಲ್ಲಲ್ಲಿ ಗೀರಿದಂತೆ ಗಾಯ! ಅರ್ಧಂಬರ್ದ ತೊಳೆದಿದ್ದ ಬಾಯಿಯೂ ವಾಸನೆ, ಮೊಕವೂ ವಾಸನೆ. ಈ ಮೊಕ ನನ್ನದೇನೇ ಎಂದು ಒಂದು ಸಲಕ್ಕೆ ಅಚ್ಚರಿಗೊಂಡ. ಆ ಬೇವಾರ್ಸಿ ಹೆಗ್ಗಣ ಮತ್ತೊಮೆ ಏರಿ ಬಂದಂತಾಗಿ ಇಡೀ ದೇಹವಿಡೀ ಚುಂಗು ಎದ್ದಿತು.
ತಿಮ್ರನ ಈ ರೂಪ ಕಂಡುಾ ಹೊತ್ತಿನಲ್ಲಿ ಪ್ರೀತಿಗೆ ಆಸರೆಯಾದವಳು ಅಕ್ಕ ಶರವಂತಿ. ಬಿಸಿನೀರು ಮಾಡಿ ತಿಮ್ರನ ಮೊಕ, ಮೈಯನ್ನೆಲ್ಲ ತೊಳೆಸಿ ಅಕ್ಕರೆಯಿಂದ ಆರೈಕೆ ಮಾಡಿದಳು. ತಿಮ್ರನಿಗೆ ನಿಜಕ್ಕೂ ಹೋದ ಜೀವ ಮತ್ತೆ ಬಂದಂತಾಯಿತು. ಇಷ್ಟಾದರೂ ಅವನ ಆಂತರ್ಯದಲ್ಲಿ ಅಡಗಿದ್ದ ಭಯ ಕಡಿಮೆಯಾದ ಹಾಗೆ ಕಾಣಲಿಲ್ಲ.
ಹೊರಗೆ ಮಳೆಯ ರಭಸ ಇಳಿದಿತ್ತು. ಆದ್ರೆ ಮನೆಯವರೆಲ್ಲ ಮಳೆಯ ಆರ್ಭಟವನ್ನು ಮರೆತುಬಿಟ್ಟಿದ್ದರು. ಹೆಗ್ಗಣದ ಮಾರಿ ನರ್ತನದ ಬಗ್ಗೆಯೇ ಮಾತಿನ ಓಘ ಹರಿದಿತ್ತ್ತು. ಸಗಣಿ ಹಾಕಿ ಜಗುಲಿಯನ್ನೆಲ್ಲ ಗುಡಿಸಿದ್ದರು. ಇದಕ್ಕೆಲ್ಲ ಮುಂದಾಳತ್ವ ವಹಿಸಿದ್ದವಳು ಅಜ್ಜಿ ಪಾರೋತಿ. ಜೋಗುಮಾರನಹಳ್ಳಿಯ ತಿಮರಾಯೇಶ್ವರ ದೇವಸ್ಥಾನದ ತೀರ್ಥವನ್ನೂ, ಪ್ರಸಾದವನ್ನೂ ಸಿಂಪಡಿಸಿ `ಬಂದ ಕೆಡಕುಗಳನ್ನೆಲ್ಲ ನೀನೇ ಹೊಟ್ಟೆಯೊಳಗೆ ಹಾಕಿಕೊಳ್ಳೊ ತಂದೆ' ಎನ್ನುತ್ತಾ ಆತನ ನಾಮ ಸರಣೆ ಮಾಡಿದಳು. ಎಲ್ಲ ಅನಿಷ್ಠಗಳನ್ನೂ ಪರಿಹಾರ ಮಾಡಿದರೆ ನಿನಗೆ ಪ್ರಿಯವಾದ ಎಕ್ಕದ ಹೂವಿನ ಪೂಜೆ ಮಾಡಿಸುತ್ತೇನೆಂದು ಎಲ್ಲರ ಸಮುಖದಲ್ಲಿ ಹರಕೆಯನ್ನೂ ಹೊತ್ತುಕೊಂಡಳು. ಒಂದು ತೆಂಗಿನಕಾಯಿ, ಮೂರು ಲಿಂಬೆ ಹಣ್ಣುಗಳನ್ನೂ ತಿಮ್ರನಿಗೆ ಸುಳಿದು ದೇವರ ಕೋಣೆಯಲ್ಲಿ ಬಿಳಿ ವಸ್ತ್ರ ಕಟ್ಟಿ ಇಟ್ಟಳು. ಇವೆಲ್ಲ ಅಪ್ರಿಯವೆನಿಸಿದರೂ ಒಂದು ಸೊಲ್ಲನ್ನೂ ಎತ್ತದೇ ಶರವಂತಿ ಸುಮನಿದ್ದಳು.
ಇವೆಲ್ಲ ದೃಶ್ಯಾವಳಿಗಳು ತಿಮ್ರನ ತಲೆಯಲ್ಲಿ ಇನ್ನಷ್ಟು ಕೋಲಾಹಲವನ್ನು ಎಬ್ಬಿಸಿತ್ತು. ಹಾಗೆ ನೋಡಿದರೆ ತಿಮ್ರ ಎಂಬೋದು ಅವನ ಹೆಸರೇ ಅಲ್ಲ. ಅಕ್ಕ ಶರವಂತಿ ಹುಟ್ಟಿದ ಮೇಲೆ ಇನ್ನೊಂದು ಗಂಡು ಸಂತಾನವಾದರೆ ಅದಕ್ಕೆ ನಿನ್ನ ಹೆಸರನ್ನೇ ಇಡುತ್ತೇನೆೆಂದು ಅಮ, ತಿಮರಾಯೇಶ್ವರನಿಗೆ ಹರಕೆ ಹೊತ್ತಿದ್ದಕ್ಕೆ ದೊರಕಿದ್ದು ಈ ಪುತ್ರ ಫಲ. ಹಾಗಾಗಿ ಮಗನಿಗೆ ತಿಮರಾಯ ಎಂದು ನಾಮಕರಣವಾಯಿತು. ಹೆಸರು ದೊಡ್ಡದಾಯಿತೆಂದು ಮನೆಯಲ್ಲಿ ಕೆಲವರು ತಮ ಅನುಕೂಲಕ್ಕೆ ತಕ್ಕಂತೆ ತಿಮ್ರ ಅಂತಲೂ, ತಿಮಿರ ಅಂತಲೂ ಅಪಭೃಂಶ ಮಾಡಿ ಕರೆಯತೊಡಗಿದರು. ತಿಮಿರನೆಂದರೆ ಕತ್ತಲೆಯ ರಾಜಕುಮಾರ ಅನ್ನೋ ರೀತಿಯಲ್ಲಿ ತಿಮರಾಯ ಬೆಳೆದ. ಅಜ್ಜಿ ಪಾರೋತಿಗೆ ಇಂಥಾದೊಂದು ವಿಷಯ ಗೊತ್ತಾಗಿದ್ದರೆ ದೇವರನ್ನೇ ಉಲ್ಲಂಘನೆ ಮಾಡಿದ್ದೀರೆಂದು ಎಲ್ಲರ ಜಂಘಾಬಲವನ್ನೇ ಉಡುಗಿಸಿ ಬಿಡುತ್ತಿದ್ದಳೇನೋ. ಇವನು ಓದೋ ಗುಡ್ಡದ ಶಾಲೆಯ ಐದನೇ ತರಗತಿ ಹುಡುಗ್ರೂ ತಿಮ್ರನೆಂಬೋದು ಈತನ ಬಾರೀ ದೇಹಕ್ಕೆ ಸಂಬಂಧಿಸಿದ್ದೋ ಅಥವಾ ಊರ ದೇವರಿಗೆ ಸಂಬಂಧಿಸಿದ್ದೋ ಎಂದು ತಿಳಿಯಲಾಗದೇ ಗೊಂದಲದಿಂದ ಸುಮನಾಗಿದ್ದರು.
ತಿಮರಾಯ ಇವತ್ತು ಶಾಲೆಗೆ ಹೋಗುವ ಸ್ಥಿತಿಯಲ್ಲಂತೂ ಇರಲಿಲ್ಲ. ಇಡೀ ದೇಹದ ನರನಾಡಿಗಳಲ್ಲಿ ಬೆಂಕಿ ಹರಿದಾಡಿದಂತೆ, ತೊಡೆಯ ಮಾಂಸಖಂಡವನ್ನೆಲ್ಲ ಹಿಡಿದು ಎಳೆದಾಡಿದಂತೆ ವಿಪರೀತ ಹಿಂಸೆ ಶುರುವಾಗಿತ್ತು. ಎಲ್ಲ ಶಕ್ತಿಯನ್ನು ಹೆಗ್ಗಣವೇ ಎಳಕೊಂಡು ಹೋದಂತೆ ಅನಿಸಿತ್ತು. ಅದಕ್ಕಾಗೇ ತಾನಿಂದು ಸ್ಕೂಲಿಗೇ ಹೋಗುವುದಿಲ್ಲವೆಂದು ಅಕ್ಕನ ಬಳಿ ರಚ್ಚೆ ಹಿಡಿದಿದ್ದ. ತಿಮ್ರನನ್ನು ಸ್ಕೂಲಿಗೆ ಕಳುಹಿಸುವ ಆಸಕ್ತಿ ಯಾರಿಗೂ ಇರಲಿಲ್ಲ. ಅಮ ಮಾಡಿದ್ದ ರಾಗಿ ದೋಸೆಯನ್ನು ಅರೆಬರೆಯಾಗಿ ತಿಂದು ಕೋಣೆಯ ಮೂಲೆಯಲ್ಲಿ ತಲೆಯಿಂದ ಕಾಲಿನ ತಂಕ ಕಂಬಳಿ ಹೊದ್ದು ಮಲಗಿದ. ನಿನ್ನೆ ರಾತ್ರಿ ನಿದ್ರಾದೇವತೆಯೇ ಮುತುವರ್ಜಿ ವಹಿಸಿ ತನ್ನ ಮಡಿಲಿಗೆ ಎಳೆದುಕೊಂಡು ಜೋಗುಳ ಹಾಡಿದ್ದಳು. ಈಗ ಅದು ಸಂಪೂರ್ಣ ಉಲ್ಟಾ. ಎಷ್ಟೇ ಜಗ್ಗಾಡಿದರೂ ನಿದ್ರೆ ಮಾತ್ರ ಕಣ್ಣಿನ ಸನಿಹಕ್ಕೂ ಸುಳಿದಾಡುತ್ತಿಲ್ಲ. ಮಳೆಯಂತೂ ನಿಂತಿತ್ತು. ಆದರೆ, ಕದನವಾಡಿ ಸೋತು ಹೋದ ದೇವತೆಗಳನ್ನೆಲ್ಲ ಕಂಡು ರಾಕ್ಷಸ ಕುಲವೆಲ್ಲ ಗಹಗಹಿಸಿ ನಕ್ಕಂತೆ ಭ್ರಾಂತು. ರಾಕ್ಷಸರ ಒಂದು ಪ್ರತಿರೂಪ ಈ ಮನೆಗೆ ಹೆಗ್ಗಣವಾಗಿ ಬಂತೇ ಎಂಬ ಭಯ. ಅಷ್ಟಕ್ಕೂ ನಿದ್ರೆಯೊಂದು ಬಂದರೆ ಸಾಕೆಂದು ಒಂಚೂರೂ ಸಂದು ಕಾಣದ ಹಾಗೆ ಕಂಬಳಿಯ ಮೇಲೊಂದು ಗೋದೂಡಿ ಹೊದ್ದುಕೊಂಡ. ಆ ಕಂಬಳಿಯೊಳಗಿಂದಲೇ ಮತ್ತೆ ಕಣ್ತೆರೆದು ನೋಡಿದ. ಬರೀ ಕತ್ತಲೇ! ಇಡೀ ಊರಿಗೆ ಊರೇ ಕತ್ತಲು ಕವಿದಂತೆ ಮತ್ತಿಷ್ಟು ಭಯವಾಯ್ತು. ಎರಡೂ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಕೊಂಡು, ಎರಡೂ ಕೈಯನ್ನು ಎದೆಯ ಮಟ್ಟಕ್ಕೆ ಕಟ್ಟಿಕೊಂಡು ಅವನ ನೆಚ್ಚಿನ `ಸ್ವಾಮಿದೇವನೇ ಲೋಕಪಾಲನೆ...' ಭಜನೆಯನ್ನು ಗುನುಗುನಿಸಿದ. ಅವನ ಪಾಲಿಗೆ ನಿದ್ರಾ ದೇವತೆಯೆಂಬುದೇನೂ ಬೇರೆ ಇರಲಿಲ್ಲ.
ಈ ರಂಪಾಟವೆಲ್ಲ ಮುಗಿದು ಮೂರು ದಿನ ಕಳೆದರೂ ತಿಮ್ರ ಶಾಲೆಗೆ ಹೋಗುವ ಪ್ರಮೇಯವೇ ಬರಲಿಲ್ಲ. ಹತ್ತೂರೂ ಕೊಚ್ಚಿಕೊಂಡು ಹೋಗುವಂತೆ ಸುರಿದಿದ್ದ ಮಳೆಯ ನೀರು ಸಂಪೂರ್ಣ ಇಂಗುವ ರೀತಿಯಲ್ಲಿ ಮಾರಮನಹಳ್ಳಿ ಮತ್ತು ಅಕ್ಕಪಕ್ಕದ ಊರುಗಳಲ್ಲಿ ರಣರಣ ಬಿಸಿಲು. ಯಾರಾದರೂ ಊರಿಗೆ ಹೊಸಬರು ಬಂದಿದ್ದರೆ `ಊರಲ್ಲಿ ಮಳೆ ಬಂದಿತ್ತೇ...!' ಎಂದು ಆಶ್ಚರ್ಯಪಟ್ಟುಕೊಳ್ಳುವ ಸ್ಥಿತಿ. ಮಾರಮನಹಳ್ಳಿ ಗುಡ್ಡದ ಶಾಲೆಗ್ಯಾಕೆ ಅಕ್ಕಪಕ್ಕದ ಊರಿನ ಶಾಲೆಗಳಿಗೂ ಒಂದು ವಾರ ಕಾಲ ರಜೆ ಘೋಷಿಸಲಾಗಿತ್ತು. ಊರೂರಿನಲ್ಲೂ ಎಂಥದೋ ವಿಷಮಶೀತ ಜ್ವರ. ಇದಕ್ಕೆ ಒಳಗಾದವರೆಲ್ಲ ಶಕ್ತಿಹೀನರಂತೆ ಒದ್ದಾಡತೊಡಗಿದರು. ಜ್ವರ ವ್ಯಾಪಿಸತೊಡಗಿತ್ತು.
ಹಾಗೇ ನೋಡಿದರೆ ಇಂಥಹುದೊಂದು ವಿಚಿತ್ರ ಜ್ವರ ಮೊದಲು ಕಾಣಿಸಿಕೊಂಡಿದ್ದೇ ಶಂಕರಣ್ಣನ ಮನೆಯಲ್ಲಿ. ತಿಮ್ರ ಆವತ್ತು ಹೆಗ್ಗಣ ಪ್ರವೇಶ ಮಾಡಿದ ದಿನ ಮಧ್ಯಾಹ್ನ ಭಯದಿಂದ ಕಂಬಳಿ ಹೊದೆದು ಮಲಗಿದವನಿಗೆ ನಿದ್ರೆ ಹೇಗೆ ಬಂದಿತ್ತೋ ಅದೇ ಭರದಲ್ಲಿ ಮೈ ಸುಡುವ ರೀತಿಯಲ್ಲಿ ಬಿಸಿ ಏರಿತ್ತು. ಊರಿನ ಡಾಕ್ಟರ ಬಳಿ ಅಂದೇ ಸಂಜೆ ಕರೆದುಕೊಂಡು ಹೋಗಿದ್ದಳು ಶರವಂತಿ. ಕೊಟ್ಟ ಗುಳಿಗೆಗೆ ಜ್ವರ ಶರಣಾಗಲಿಲ್ಲ. ರಾತ್ರಿ ಜ್ವರ ಸ್ವಲ್ಪ ಇಳಿದಂತೆ ಮತ್ತೆ ಜಾಸ್ತಿಯಾದಂತೆ ತಿಮ್ರನನ್ನು ಹಿಂಸೆಗೆ ದೂಡಿತ್ತು. ಆದರೆ, ಮರುದಿನ ಸಂಜೆಯಿಂದ ಶುರುವಾದ ಜ್ವರ ಬಿಡಲೇ ಇಲ್ಲ. ತಿಮ್ರ ಸಂಪೂರ್ಣ ನಿತ್ರಾಣನಾಗಿದ್ದ. ಮೈಯನ್ನು ಅಲುಗಾಡಿಸಲೇ ಸಾಧ್ಯವಿಲ್ಲದಂತಹ ಸ್ಥಿತಿ. ಇಡೀ ಮನೆಯ ಮಂದಿ ತಿಮ್ರನ ಅಕ್ಕಪಕ್ಕದಲ್ಲಿ ಕಂಗಾಲಾಗಿ ಕುಳಿತಿದ್ದರು. ಪಕ್ಕದೂರಿನ ನಾರಾಯಣ ಡಾಕ್ಟರು ಬಂದು ಪರೀಕ್ಷೆ ಮಾಡಿ, ಮೊನ್ನೆ ಅಕಾಲಕ್ಕೆ ಮಳೆ ಬಂದು ಹೋಯಿತಲ್ಲ ಅದಕ್ಕೇ ಹೀಗೆ- ಎಂದು ಹೇಳಿ ಇಂಜೆಕ್ಷನ್ ಕೊಟ್ಟು ಹೋಗಿದ್ದರು. ಒಂದು ಗಂಟೆಯ ಮಟ್ಟಿಗೆ ತಿಮ್ರ ಚೇತರಿಸಿಕೊಂಡಿದ್ದ.
`ಊರಿಗೆ ಬಂದ ಶನಿ ಬೇಗ ಕಳೆದು ಹೋಗಬೇಕಿದ್ದರೆ ಮಾರಮನೇ ಕಾಪಾಡಬೇಕು, ಅದಕ್ಕೆ ಂದೆವು...' ಎಂದು ಹೆಂಗಸರು ಹೇಳಿದಾಗ ಅನಿಷ್ಠ ಬಂದಿದ್ದು ನಮನೆಗೆ ಮಾತ್ರವಲ್ಲ ಎಂಬುದು ಅರಿವಾಗಿತ್ತು. ಊರಿನ ಜನರ ಪೂಜೆಗೆ ಇಡೀ ಕಣಗಿಲ ಗಿಡ ಕೆಂಪುಮಯವಾಗಿ ಮಾರಮನಹಳ್ಳಿ ಪೂರ್ತಿ ಪಾಪವನ್ನು ತಾನೇ ಹೊತ್ತುಕೊಂಡಂತೆ ನಡ ಬಾಗಿಸಿತು. ಆ ಪ್ರದೇಶದಲ್ಲೆಲ್ಲ ಕುಂಕುಮದ, ಊದಿನಕಟ್ಟಿಯ ವಾಸನೆಯೇ ಮೂಗಿಗೆ ಅಡರಿತು. ಒಂದು ಕ್ಷಣಕ್ಕೆ ಮಾರಮನಹಳ್ಳಿ ಕೆಂಪುಕಣಗಿಲ ಗಿಡವೂ ಸ್ಥಿತಿಯಲ್ಲಿ ಬೇರೆ ಅಲ್ಲ ಎಂಬಂತೆ ಬಾಸವಾಯಿತು. ಎಲ್ಲ ಮುತ್ತೈದೆಯರ ಪ್ರಾರ್ಥನೆ ಮುಗಿಯುವ ಹೊತ್ತಿಗೆ ಇಡೀ ಊರಿನ ಜನ ಬಂದು ಕಣಗಿಲ ಗಿಡದ ಸುತ್ತ ಸೇರಿದ್ದರು.
ಹೆಂಡತಿ ಮಕ್ಕಳಿಗೆ ಕರಳುಬೇನೆ ಬಂದು ಮನೆಯೇ ನಿರ್ನಾಮವಾಗಿ ಹೋದ ನಂತರ ಮಾನಸಿಕ ರೋಗಿಯಾಗಿ ಊರನ್ನೇ ಬಿಟ್ಟು ಹೋಗಿದ್ದ ಬಸವಯ್ಯನ ಇಡೀ ಹಿತ್ತಿಲಲ್ಲಿ ಸೊಂಪಾಗಿ ಬೆಳೆದಿದ್ದ ಒಂದೇ ಒಂದು ಕಣಗಿಲ ಗಿಡ ಜನರ ಪಾಲಿಗೆ ಮಾರಮನ ಅವತಾರವಾಗಿತ್ತು. ಜನ ತಮ ಪಾಡಿಗೆ ತಾವು ಬಂದು ಕುರಿಯೋ ಕೋಳಿಯನ್ನೋ ಕಡಿದು ರಕ್ತತರ್ಪಣ ಕೊಡುತ್ತಿದ್ದರು. ಜೊತೆಗೆ ಮಾಂಸನಾ ಅಲ್ಲೇ ಪದಾರ್ಥ ಮಾಡಿ ಊಟಾನೂ ಮುಗಿಸಿ ಹೋಗುತ್ತಿದ್ದುದು ರೂಢಿಯಾಗಿತ್ತು. ಹಳ್ಳಿಯ ಜನಕ್ಕೆ ಕೆಂಪುಕಣಗಿಲ ಹರಕೆ ಹೆಸರಿನಲ್ಲಿ ಪಿಕ್‌ನಿಕ್ ಸ್ಪಾಟ್ ಆಗಿತ್ತು. ಊರಿಗೆ ಬರೋ ಒಂದೇ ಒಂದು ಬಸ್ಸು ಕೂಡ ಇಲ್ಲಿ ನಿಲ್ಲೋಕೆ ಶುರು ಮಾಡಿ ಇದು ಕ್ರಮೇಣ ದೊಡ್ಡ ಕಣಗಿಲ ಸ್ಟಾಪ್ ಆಗಿ ಫೆಮಸ್ ಆಗಿತ್ತು.
ಈಗ ಎರಗಿರುವ ಅನಿಷ್ಠವೆಲ್ಲವೂ ತೊಲಗಿದ್ದೇ ಆದಲ್ಲಿ ಕೆಂಪುಕಣಗಿಲದ ಜಾಗದಲ್ಲಿಯೇ ಮಾರಮನಿಗೊಂದು ಗುಡಿಯನ್ನು ಕಟ್ಟುವ ಸಂಕಲ್ಪವನ್ನೂ ಸೇರಿದ್ದ ಹಿರಿಯರೆಲ್ಲ ಕೈಗೊಂಡರು. ಆದರೆ, ಕೆಲವರು ಮಾತ್ರ ಗುಡಿ ಕಟ್ಟುವುದನ್ನೇ ಒಂದು ಹರಕೆಯಾಗಿ ಮಾಡಿಕೊಳ್ಳುವುದು ಸರಿಯಲ್ಲ, ಹೆಸರಿಗೆ ಮಾರಮನಹಳ್ಳಿಯಾದರೂ ಊರಲ್ಲೊಂದು ದೇವಿ ಗುಡಿ ಕಟ್ಟದೇ ಇದ್ದುದು ದೊಡ್ಡ ಪಾಪ, ಗುಡಿ ಕಟ್ಟುವುದನ್ನು ನಾಳೆಯಿಂದಲೇ ಶುರು ಮಾಡಿಕೊಳ್ಳೋಣ, ಆಗ ಆಗಬಹುದಾದ ಬಾರೀ ಅನಾಹುತ ತಪ್ಪಬಹುದೇನೋ ಎಂಬ ಸಲಹೆಯನ್ನೂ ಮುಂದಿಟ್ಟರು. ಸೇರಿದ್ದ ಅನೇಕರಿಗೆ ಇದು ನಿಜವೆಂದೇ ಅನಿಸಿತು. ಮಾರಮನಹಳ್ಳಿ ಹೆಸರನ್ನು ಸಾರ್ಥಕಗೊಳಿಸಲು ಊರಿನ ಜನ ಮುಂದಾದರು. ಒಂದೊಂದು ಮನೆಯವರು ಒಂದೊಂದು ಸಾಮಗ್ರಿ ಸಂಗ್ರಹಿಸಿ ತತ್ಕಾಲಕ್ಕೊಂದು ಕಟ್ಟಡ ಕಟ್ಟುವುದೆಂಬ ನಿರ್ಧಾರವನ್ನೂ ಸ್ಥಳದಲ್ಲಿಯೇ ಕೈಗೊಂಡರು. ಕೇವಲ ಎರಡೇಎರಡು ದಿನಗಳಲ್ಲಿ ಗುಡಿ ಕಟ್ಟುವುದನ್ನು ಸಂಕ್ಷಿಪ್ತವಾಗಿ ಮುಗಿಸಿ, ಅದನ್ನು ಜೋಗುಮಾರನಹಳ್ಳಿಯ ದೊಡ್ಡ ಜೋಯಿಸರಿಂದ ಉದ್ಘಾಟನೆಯನ್ನೂ ಮಾಡಿಸಿಬಿಡಬೇಕು ಎಂಬ ತರಾತುರಿ ಎಲ್ಲರಲ್ಲಿ ಕಾಣಿಸುತ್ತಿತ್ತು.
ತಿಮ್ರನ ಅಜ್ಜಿ ಪಾರ್ವತಿ ಕಣಗಿಲ ಗಿಡಕ್ಕೆ ಮಾಡಿದ ಪೂಜೆಯ ಪ್ರಸಾದವನ್ನೆಲ್ಲ ಮನೆಗೆ ತಂದು ಅದನ್ನು ನೀರಿನಲ್ಲಿ ಚಿಮುಕಿಸಿದಳು. ಜೊತೆಗೆ ಒಂದು ತೆಂಗಿನ ಕಾಯಿ, ಅದರೊಟ್ಟಿಗೆ ಮೂರು ಲಿಂಬೆ ಹಣ್ಣು ಮತ್ತೊಂದು ಬೆಲ್ಲದುಂಡೆಯನ್ನು ಸೇರಿಸಿ ಒಂದು ಬಿಳಿ ಬಟ್ಟೆಯಲ್ಲಿ ಕಟ್ಟಿ ತಿಮ್ರ ಮಲಗೋವಲ್ಲಿ ಮಾಡಿನ ಗಳಕ್ಕೆ ಕಟ್ಟಿದಳು. ವಿನಾಶವೆಂಬುದು ಊರಿನಾಚೆ, ಮನೆಯಾಚೆಯೇ ಗಡಿಪಾರಾಗಿ ಹೋಗಲಿ ಎಂದು ಮನಸ್ಸಿಲ್ಲಿಯೇ ಹರಸಿಕೊಂಡಳು.
ಮಾರಮನಹಳ್ಳಿಯ ಸುತ್ತಮುತ್ತ ಹರಡಿರುವ ಈ ವಿಚಿತ್ರ ಜ್ವರದ ಸುದ್ದಿ ಜಿಲ್ಲಾ ಕೇಂದ್ರವನ್ನು ತಲುಪಿ ವೈದ್ಯಾಧಿಕಾರಿಗಳ ತಂಡ ಮಾರಮನಹಳ್ಳಿಗೂ, ಪಕ್ಕದ ಹತ್ತೂರುಗಳಿಗೂ ಜೀಪಿನಲ್ಲಿ ಬಂದು ಅನೇಕರನ್ನು ಪರೀಕ್ಷಿಸಿದ್ದರು, ಸಂದರ್ಶನ ಮಾಡಿದ್ದರು. ಊರಿನವರಿಗೆಲ್ಲ ಮುಂಜಾಗೃತೆಯ ಮಾರ್ಗಸೂಚಿಗಳನ್ನು ಕೊಟ್ಟಿದ್ದರು. ಸಿಟಿಯಿಂದ ತಂದಿದ್ದ ಗುಳಿಗೆಗಳನ್ನೂ ಕೊಟ್ಟು ಹೋಗಿದ್ದರು. ಜ್ವರ ಕಡಿಮೆಯಾಗದೇ ಹೋದ ಪಕ್ಷದಲ್ಲಿ ಜಿಲ್ಲಾ ಆಸ್ಪತ್ರೆಗೆ ತಕ್ಷಣ ಹೋಗುವಂತೆಯೂ ಸೂಚಿಸಿದ್ದರು. ಆದರೆ, ಮಾರಮನ ಗುಡಿ ನಿರ್ಮಾಣವನ್ನೇ ತಲೆಯಲ್ಲಿ ಪ್ರತಿಷ್ಠಾಪನೆ ಮಾಡಿಕೊಂಡಿದ್ದ ಜನ ವೈದ್ಯರ ಸೂಚನೆಗಳನ್ನೆಲ್ಲ ಮಾರಮನ ಮೇಲೇ ಹಾಕಿದರು.
ಹಳ್ಳಿಯ ಕೆಲ ಉತ್ಸಾಹೀ ಹುಡುಗರಂತೂ ಮರುದಿನವೇ ಕರೀ ಬಣ್ಣದ ಕುರಿಯೊಂದನ್ನು ತಂದು ಅದಕ್ಕೆ ಕೆಂಪು ಕಣಗಿಲ ಹೂವಿನ ಮಾಲೆ ಹಾಕಿ ಊರಲ್ಲೆಲ್ಲ ಮೆರವಣಿಗೆ ತಂದು ಗಿಡದ ಮುಂದೆ ಬಲಿಕೊಟ್ಟಿದ್ದರು. ಪ್ರಾಣಿ ಬಲಿ ಕೊಡೂದನ್ನ ನಿಲ್ಲಿಸಿದಿದ್ರೆ ಶಿಕ್ಷೆ ಅನುಭವಿಬೇಕಾಗ್ತದೆ ಎಂದು ವರ್ಷದ ಹಿಂದೆ ಎಚ್ಚರಿಕೆ ಕೊಟ್ಟು ಹೋಗಿದ್ದ ಪೋಲೀಸರು ಮತ್ತೆ ಈ ಕಡೆ ತಲೆ ಹಾಕಿರಲಿಲ್ಲ. ಜನರ ಹರಕೆ ಪಿಕ್‌ನಿಕ್ ಮಾತ್ರ ಮುಂದುವರಿದಿತ್ತು. ಈ ಬಾರಿ ಊರಿನ ಹಿರೀಕರು ಮಾರಮನಿಗೆ ಗುಡಿ ಕಟ್ಟೂದನ್ನ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದರ ಗಡಿಬಿಡಿ ಶುರುವಾಗಿತ್ತು..
ಇತ್ತ ಶಂಕರಣ್ಣನ ಮನೆಯ ಜಗುಲಿಯ ಮೇಲೆ ಮಲಗಿದ್ದ ತಿಮರಾಯ ಮಾರಮನಹಳ್ಳಿಯ ವಿದ್ಯಮಾನಗಳಿಗೆಲ್ಲ ತಾನೇ ಕಾರಣಪುರುಷನೇನೋ ಎಂಬಂತೆ ಮಾಡಿನ ಮೂಲೆಯಲ್ಲಿ ಅಜ್ಜಿ ತೂಗು ಹಾಕಿದ್ದ ಲಿಂಬೆ ಹಣ್ಣಿನ ಗಂಟಿನ ಕಡೆಗೆ ನಿರ್ಲಿಪ್ತ ದೃಷ್ಟಿ ಬೀರುತ್ತಾ ಮಲಗಿದ್ದ. ಅಜ್ಜಿ ಕಟ್ಟಿದ್ದ ಗಂಟಿನ ಸುತ್ತ ನಾಲ್ಕೈದು ಜಿರಲೆಗಳು ಸೇರಿಕೊಂಡು ಒಳಗಡೆ ತುಂಬಿದ್ದ ಬೆಲ್ಲವನ್ನು ಮೀಸೆಯ ತುದಿಯಿಂದ ಗುಟುಕು ಗುಟುಕು ಹೀರುವ ಪೈಪೋಟಿಗೆ ಇಳಿದಿದ್ದವು. ಈ ದೃಶ್ಯವೇ ತಿಮ್ರನಿಗೆ ಅಸಹ್ಯವಾಗಿ, ಭೀಕರವಾಗಿ ಕಾಣಿಸಿತು. ಇವು ನನ್ನ ಮೈಯಿಂದ ಶಕ್ತಿ ಹೀರುತ್ತಿದೆ ಎಂಬಂತೆ ಭಾಸವಾಗಿ ನಡುಕ ಹುಟ್ಟಿತು. ಪಕ್ಕದಲ್ಲಿಯೇ ತಮನ ತಲೆ ನೇವರಿಸುತ್ತ ಕುಳಿತಿದ್ದ ಅಕ್ಕ ಶರವಂತಿ ರೇಡಿಯೋ ಕಿವಿ ತಿರುಗಿಸುತ್ತಿದ್ದವಳು ಸಂಜೆಯ ವಾರ್ತೆ ಬರುವುದನ್ನು ಕೇಳಿಸಿಕೊಳ್ಳಲು ಶುರುಮಾಡಿದಳು...
`ವಾರ್ತೆಗಳು, ಓದುತ್ತಿರುವವರು...... ಜೋಗುಮಾರನಹಳ್ಳಿ, ಕೋಗಿಲೆಪುರ, ಮಾರಮನಹಳ್ಳಿ ಮೊದಲಾದ ಕಡೆ ಕಾಣಿಸಿಕೊಂಡ ವಿಚಿತ್ರ ಜ್ವರದ ಅಧ್ಯಯನಕ್ಕೆಂದು ತೆರಳಿದ್ದ ತಜ್ಞರ ತಂಡ ಇಂದು ಜಿಲ್ಲಾಡಳಿತಕ್ಕೆ ತನ್ನ ವರದಿಯನ್ನು ಸಲ್ಲಿದೆ, ಈ ಗ್ರಾಮಗಳಲ್ಲಿ ಕಾಣಿಸಿಕೊಂಡ ಜ್ವರ ಪ್ಲೇಗ್ ಎಂಬುದಾಗಿಯೂ ತಜ್ಞರು ದೃಢಪಡಿಸಿದ್ದಾರೆ.... ಈ ಗ್ರಾಮಗಳ ಜನ ತಕ್ಷಣ ಮುಂಜಾಗೃತೆ ವಹಿಸಬೇಕೆಂದು ಸೂಚಿಸಲಾಗಿದೆ.......ಜ್ವರದಿಂದ ಬಳಲುತ್ತಿರುವವರನ್ನು ತಕ್ಷಣ ಜಿಲ್ಲಾ ಆಸ್ಪತ್ರೆಗೆ ಸೇರಿಸತಕ್ಕದ್ದು... ಆರೋಗ್ಯ ಮಂತ್ರಿ ಗೋವಿಂದಸ್ವಾಮಿಯವರು ನಾಳೆ ಜ್ವರ ಪೀಡಿತ ಹಳ್ಳಿಗಳಿಗೆ ಭೇಟಿ ನೀಡಲಿದ್ದಾರೆ.....' ರೇಡಿಯೋ ಹಿಡಕೊಂಡಿದ್ದ ಶರವಂತಿಯ ಕೈ ನಡುಗತೊಡಗಿತ್ತು. `ಊರಿಗೆ ಪ್ಲೇಗ್ ಬಂತೇ?' ಎಂದು ಉದ್ಘಾರ ತೆಗೆದವಳು, ಭಯದ ತುತ್ತತುದಿಗೆ ತಲುಪಿ ತಮ ತಿಮ್ರನತ್ತ ಕಣ್ಣು ಹಾಯಿಸಿದಳು.
ಜಗುಲಿಯ ಮೇಲೆ ಪವಡಿಸಿದ್ದ ತಿಮ್ರನ ದೃಷ್ಟಿ ಇನ್ನಷ್ಟು ಮಂಜುಮಂಜಾಗಿತ್ತು. ದೂರದಲ್ಲಿ ಯಾವುದೋ ದನಿ... ಪಾರೋತಿ ಅಜ್ಜಿ ಇನ್ನೂ ತಿಮರಾಯೇಶ್ವರನ ಸ್ತುತಿ ಮಾಡುತ್ತಿದ್ದಾಳ್ವ ಎಂಬಂತೆ ತಿಮಿರನ ಕಣ್ಣಿನೊಳಗಿನ ಕಪ್ಪುಗುಡ್ಡೆ ಪ್ರಶ್ನಾರ್ಥವಾಗಿ ನಿಂತುಬಿಟ್ಟಿತು. ತಿಮ್ರ ಆವತ್ತು ಬೆಳಿಗ್ಗೆ ಹೆಗ್ಗಣದ ಹಗರಣದಿಂದ ಕಂಗಾಲಾಗಿದ್ದ ಜಗಲಿ ಮೇಲೇ ಕುಳಿತಿದ್ದ ಈರಯ್ಯ ಮಾರಮನ ಕಟ್ಟೆಯಲ್ಲಿ ಮಧ್ಯಾಹ್ನ ಹುಡುಗರು ಮಾಡಿದ್ದ ಮಾಂಸದಡುಗೆಯ ಪ್ರಸಾದದ ರುಚಿ ನೋಡ್ತಾ ಖುಷಿಖುಷಿಯಾಗಿದ್ದ.
(2006ರ ಪ್ರಜಾವಾಣಿ ಕಥಾ ಸ್ಪರ್ಧೆಯಲ್ಲಿ ಮೂರನೇ ಬಹುಮಾನ ಪಡೆದ ಕಥೆ. ನಿತ್ಯೋತ್ಸವದ ಕವಿ ನಿಸಾರ್ ಅಹಮದ್ ಅವರಿಂದ ಬಹುಮಾನ ಸ್ವೀಕಾರ)