ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!
ಕವಿಯಾದವನ ಎದೆಯಲ್ಲಿ ಒಂದು ಕಿಡಿಯಿರುತ್ತದೆ. ನಮಗೆ ಗೋವಿನ ಹಾಡು ಕೇಳಿದಾಕ್ಷಣ ಕಣ್ಣಲ್ಲಿ ನೀರು ಬಂದುಬಿಡುತ್ತದೆ, ಯಾಕೆ ಹೇಳಿ? ಅದು ನಮ್ಮ ಹೃದಯವನ್ನು ಕಲುಕುತ್ತದೆ. ಕಲಕದ ಸಂವೇದನೆ, ಕಾಡದೇ ಇರುವಂತಾದ್ದು ಸಾಹಿತ್ಯ ಅಲ್ಲ. ಇವತ್ತು ಬಂದು ಮಳೆ ಹಾತೆಗಳ ರೀತಿಯಲ್ಲಿ ಮಾಯವಾಗಿ ಹೋಗಬಾರದು. ಸಾಹಿತ್ಯ ಜನಗಳ ನಡುವೆ ರಸಸೇತುವೆಗಳನ್ನು ಕಟ್ಟಬೇಕು. ಎದೆಯೊಳಗಿನ ಕಿಡಿಯನ್ನು ಕೆಂಡವಾಗಿ ಮಾಡುವುದು ಹೇಗೆ ಎಂದು ಹೇಳಿದ್ದಾರೆ ಸಿರಿ ಬೆಳಕಿನ ಕವಿ ನಿಸಾರ್ ಅಹಮದ್. (2018ರ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಓ ಮನಸೇ ಪತ್ರಿಕೆಗಾಗಿ ನಡೆಸಿದ್ದ ಸಂದರ್ಶನದ ಪೂರ್ಣಪಾಠ ಇಲ್ಲಿದೆ... )
1949ರಲ್ಲಿ ನಾನು ಹೊಸಕೋಟೆಯ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಈ ಪಠ್ಯ ಪುಸ್ತಕಗಳಲ್ಲಿದ್ದ ಕುವೆಂಪು, ಪಂಜೆ ಮಂಗೇಶ್ ರಾಯರು, ಬೇಂದ್ರೆ ಅವರ ಪದ್ಯಗಳನ್ನು ಅನುಸರಿಸಿ ಬರೆಯಬೇಕು ಎಂಬ ಆಸೆ ಹುಟ್ಟಿಕೊಂಡಿತು. ಆ ಹೊತ್ತಿನಲ್ಲಿ ನಾವೆಲ್ಲ ಸೇರಿ ವನಸುಮ ಅಂತ ಒಂದು ಕೈಬರಹದ ಪತ್ರಿಕೆ ತಂದ್ವಿ. ಅದಕ್ಕೆ ನಾನೇ ಸಂಪಾದಕ. ಆಗ ಎಲ್ಲ ಸೇರಿ ನನ್ನನ್ನು ಹುರಿದುಂಬಿಸಿದ್ದಕ್ಕೆ 'ಜಲಪಾತ' ಎಂಬ ಪದ್ಯವನ್ನು ಬರೆದೆ. 'ಭರ್ ಭರ್ ಎನ್ನುತಾ ಭೋರ್ಗರೆ ಇಕ್ಕುತ ಕಮರಿಯ ಸೇರುವ ಜಲಪಾತ...' ಒಂದಕ್ಕೊಂದು ಸಂಬಂಧವೇ ಇಲ್ಲದ ಬಾಲಿಶ ಕವಿತೆ ಬಿಡಿ ಅದು. ಜಲಪಾತ ಯಾಕೆ ಭರ್ ಅನ್ನುತ್ತೆ ಅಲ್ವಾ? ಆನೇಕಲ್ ನಾಗರಾಜ್ ಅಂತ ಮೇಷ್ಟ್ರು ಇದ್ರು, ಅವರು ತುಂಬ ಚೆನ್ನಾಗಿದೆ ಎಂದು ಹುರಿದುಂಬಿಸಿ ಬಿಟ್ರು. ಆಗ ನಾನೂ ಬರೀಬಹುದು ಅಂತ ಅಹಂ ಹುಟ್ಟಿಕೊಂಡಿತು.
ಮುಂದೆ ಅದರ ಬೇರುಗಳು ಎಲ್ಲೆಲ್ಲಿ ಬೆಳೆದುಕೊಳ್ಳುತ್ತಾ ಹೋಯಿತು?
ಆಗ ಚಿತ್ರಗುಪ್ತ ಅಂತ ಒಂದು ಪತ್ರಿಕೆ ಬರೋದು. ಅದಕ್ಕಾಗ ತುಂಬಾ ಲಿಟರರಿ ವ್ಯಾಲ್ಯೂ ಇತ್ತು. ಅಲ್ಲಿಗೆ ಚಿಕ್ಕ ಚಿಕ್ಕ ಮಕ್ಕಳ ಪದ್ಯಗಳನ್ನು ಕಳಿಸಿದೆ. ಅವೆಲ್ಲ ಪ್ರಿಂಟಾಗೋದು. ಆಗ ಹುಮ್ಮಸ್ಸು ಇನ್ನಷ್ಟು ಹೆಚ್ಚಾಗುತ್ತ ಹೋಯಿತು. ಹೈಸ್ಕೂಲು ಮುಗಿಸಿ ಬೆಂಗಳೂರಿಗೆ ಕಾಲೇಜಿಗೆ ಬರುವ ಹೊತ್ತಿಗೆ ಸುಮಾರು 25 ಕವಿತೆಗಳನ್ನು ಬರೆದಿದ್ದೆ.
ಕವಿತೆ ಬರೆಯುವಂತಹ ಪೂರಕ ವಾತಾವರಣ ನಿಮಗೆ ಸಿಕ್ಕಿದ್ದಾದರೂ ಹೇಗೆ.
ರೆವೆನ್ಯೂ ಇನ್ಸ್ಪೆಕ್ಟರ್ ಆಗಿದ್ದ ನಮ್ಮ ತಂದೆ ಆನೆಕಲ್ಲಿಗೆ ವರ್ಗವಾದರು. ನಾನಿಲ್ಲೇ ಬೆಂಗಳೂರಿನ ಲಾಲ್-ಬಾಗ್ ಪಕ್ಕದ ಮಾವಳ್ಳಿಯ ಚಿಕ್ಕಪ್ಪನ ಮನೆಯಲ್ಲಿ ಉಳಕೊಂಡಿದ್ದೆ. ಮನೆ ಪಕ್ಕದಲ್ಲೇ ಒಂದು ಮಾವಿನ ತೋಪು ಇತ್ತು. ಅಲ್ಲಿ ನರಪಿಳ್ಳೆಯೂ ಬರುತ್ತಿರಲಿಲ್ಲ. ಆಗ ಅಲ್ಲಿಗೆ ರಾಶಿ ರಾಶಿ ಪುಸ್ತಕಗಳನ್ನು ಕೊಂಡೊಯ್ದು ಓದುತ್ತಿದ್ದೆ. ಅಡಿಗರ ಭೂಗರ್ಭ ಯಾತ್ರೆ, ಕುವೆಂಪು ಅವರ ಪ್ರೇಮ ಕಾಶ್ಮೀರ, ಪಕ್ಷಿಕಾಶಿ ಎಲ್ಲ ಓದುತ್ತ ಹೋದೆ. ಓದುವ ಹುಚ್ಚು ಹೆಚ್ಚಿದ್ದರಿಂದ ಬರೆಯುವ ದಾಹ ಏರಿತು.
ಕವಿತೆಗಳನ್ನು ಯಾರ ಬಳಿ ತೋರಿಸುತ್ತಿದ್ರಿ? ಅವರು ಯಾವ ರೀತಿ ಮಾರ್ಗದರ್ಶನ ಮಾಡ್ತಾ ಇದ್ರು?
1953ರಲ್ಲಿ ನಾನು ಸೆಂಟ್ರಲ್ ಕಾಲೇಜಲ್ಲಿ ಓದುತ್ತಿದ್ದಾಗ ನನ್ನನ್ನು ಪ್ರೋತ್ಸಾಹಿಸಿದವರು ಜಿ.ಪಿ.ರಾಜರತ್ನಂ. 55ರಲ್ಲಿ ವಿದ್ಯಾರ್ಥಿಗಳಿಂದ ಬರೆಸಿ ಪದ್ಯಾಂಜಲಿ ಅಂತ ಪುಸ್ತಕ ತಂದರು. ಐವರು ಕವಿಗಳ ತಲಾ ನಾಲ್ಕೈದು ಪದ್ಯಗಳು. ಲಂಕೇಶ, ನಾಡಿಗ, ಎಲ್.ಜಿ.ಸುಮಿತ್ರ ಮತ್ತು ನನ್ನ ಪದ್ಯಗಳು. ಆ ಸಂಕಲ ನೋಡಿದ ಡಿವಿಜಿಯವರು ನಾಡಿಗ, ಲಂಕೇಶ ಮತ್ತು ನನ್ನನ್ನು ಮುಖತಃ ನೋಡಲು ಬಯಸಿದರು. ಅದೆಂಥಾ ಭಾಗ್ಯ ನಮ್ಮದು. ಬಳಿಕ ನಾಗಸಂದ್ರ ಹತ್ತಿರವಿದ್ದ ಡಿವಿಜಿ ಮನೆಗೆ ನಾನೂ ನಾಡಿಗ ಹೋದೆವು. ಸುಮಾರು ಮುಕ್ಕಾಲು ಗಂಟೆ ಪ್ರೀತಿಪೂರ್ವಕವಾಗಿ ಮಾತನಾಡಿಸಿ ಚೆನ್ನಾಗಿ ಬರಿತೀರಪ್ಪ ಎಂದು ಹುರಿದುಂಬಿಸಿದರು. ಅದು ನಮಗೆ ದೊಡ್ಡ ಸರ್ಟಿಫಿಕೆಟ್ ಆಯ್ತು.
ಅದಾದ ಬಳಿಕ ಕಸಾಪದಲ್ಲಿ ಬೇಂದ್ರೆ ಅಧ್ಯಕ್ಷತೆಯಲ್ಲಿ ಕವಿ ಸಮ್ಮೇಳನ. ಆಗ ದೊಡ್ಡ ದೊಡ್ಡ ಕವಿಗಳ ಜತೆ ಕಿರಿಯನಾದ ನನ್ನನ್ನು ಆರಿಸಿದರು. ಕನ್ನಡಿ ಮುಂದೆ ನಿಂತ್ಕೊಂಡು ಆಂಗಿಕ ಅಭಿನಯಗಳನ್ನು ಮಾಡಿ ಎಲ್ಲ ಸಿದ್ಧತೆ ಮಾಡಿಕೊಂಡು ಗೋಷ್ಠಿಯಲ್ಲಿ ನಾಟಕೀಯವಾಗಿ ಓದಿದೆ. ಅಧ್ಯಕ್ಷ ಭಾಷಣಕ್ಕೆ ಎದ್ದು ನಿಂತ ಬೇಂದ್ರೆ, 'ಕೊನೆಯಲ್ಲಿ ಓದಿದೆಯಲ್ಲ ಕವಿತೆ ನಿನ್ನ ಹೆಸರೇನೋ, ನಿಸಾರ್ ಅಹಮದ್ ಅಲ್ವಾ? ನಿನ್ನ ಹೆಸರು ನಿಸಾರ್ ಆದ್ರೂ ಕವಿತೆ ನಿಸ್ಸಾರ ಅಲ್ಲ, ಅಹಮದ್ ಆದ್ರೂ ಅಹಮ್ ಮತ್ತು ಮದ ಇಲ್ಲ ನಿನ್ನ ಕವಿತೆಯಲ್ಲಿ' ಅಂದುಬಿಟ್ರು.
ಆಗ ಆಕಾಶವಾಣಿ ಕವಿಗಳಿಗೆ ತುಂಬ ಪ್ರೋತ್ಸಾಹ ಕೊಡುತ್ತಿತ್ತು ಅಲ್ವಾ?
ಹೌದೌದು. ಅಂದು ಆಕಾಶವಾಣಿಯಲ್ಲಿ ನಿಲಯ ನಿರ್ದೇಶಕರಾಗಿದ್ದ ರಾಘವೇಂದ್ರ ಇಟಗಿ ನನ್ನ ಪಾಲಿನ ಪ್ರಾತಃಸ್ಮರಣೀಯರು. ಕಾಲೇಜಿನಿಂದಲೇ ಕರೆಸಿ ಪದ್ಯ ಓದಿಸೋರು. ಅದಾದಬಳಿಕ ನಾನು ಬೆಳೆದಿದ್ದೇ ಪ್ರಜಾವಾಣಿಯಿಂದ. ಆಗ ಪರಿಚಯ ಆದವರು ಎಂ.ಬಿ.ಸಿಂಗ್. ಚಿಕ್ಕದಾಗಿ, ಒಂದು ಲಾಯದ ರೀತಿಯಲ್ಲಿದ್ದ ಪ್ರಜಾವಾಣಿ ಕಚೇರಿಗೆ ಹೋಗ್ತಾ ಇದ್ದೆ. ಸಂಸ ದಿನಾಚರಣೆ ಮಾಡ್ತಾ ಇದ್ದಾಗ ವೈಎನ್ಕೆ ಆತ್ಮೀಯರಾದರು.
ಗಾಂಧಿ ಬಜಾರಿನಲ್ಲಿದ್ದೂ ಮನಸ್ಸು ಲಾಲ್-ಬಾಗಿನಂತಾಗಬೇಕು ಎನ್ನುವ ನಿಮ್ಮ ಮೇಲೆ ಆ ಎರಡು ಇಳಿತಾಣಗಳು ಬೀರಿದ ಭಾರಿ ಪರಿಣಾಮ.

ಮುಂದೆ ಅದರ ಬೇರುಗಳು ಎಲ್ಲೆಲ್ಲಿ ಬೆಳೆದುಕೊಳ್ಳುತ್ತಾ ಹೋಯಿತು?
ಆಗ ಚಿತ್ರಗುಪ್ತ ಅಂತ ಒಂದು ಪತ್ರಿಕೆ ಬರೋದು. ಅದಕ್ಕಾಗ ತುಂಬಾ ಲಿಟರರಿ ವ್ಯಾಲ್ಯೂ ಇತ್ತು. ಅಲ್ಲಿಗೆ ಚಿಕ್ಕ ಚಿಕ್ಕ ಮಕ್ಕಳ ಪದ್ಯಗಳನ್ನು ಕಳಿಸಿದೆ. ಅವೆಲ್ಲ ಪ್ರಿಂಟಾಗೋದು. ಆಗ ಹುಮ್ಮಸ್ಸು ಇನ್ನಷ್ಟು ಹೆಚ್ಚಾಗುತ್ತ ಹೋಯಿತು. ಹೈಸ್ಕೂಲು ಮುಗಿಸಿ ಬೆಂಗಳೂರಿಗೆ ಕಾಲೇಜಿಗೆ ಬರುವ ಹೊತ್ತಿಗೆ ಸುಮಾರು 25 ಕವಿತೆಗಳನ್ನು ಬರೆದಿದ್ದೆ.
![]() |
ತಮ್ಮ ಸಂದರ್ಶನವಿರುವ ಓ ಮನಸೇ ಸಂಚಿಕೆ ಕಂಡು ಖುಷಿಯಾದ ನಿಸಾರ್ ಭಾವನಾ ಬೆಳಗೆರೆ ಜೊತೆ |
ಕವಿತೆ ಬರೆಯುವಂತಹ ಪೂರಕ ವಾತಾವರಣ ನಿಮಗೆ ಸಿಕ್ಕಿದ್ದಾದರೂ ಹೇಗೆ.
ರೆವೆನ್ಯೂ ಇನ್ಸ್ಪೆಕ್ಟರ್ ಆಗಿದ್ದ ನಮ್ಮ ತಂದೆ ಆನೆಕಲ್ಲಿಗೆ ವರ್ಗವಾದರು. ನಾನಿಲ್ಲೇ ಬೆಂಗಳೂರಿನ ಲಾಲ್-ಬಾಗ್ ಪಕ್ಕದ ಮಾವಳ್ಳಿಯ ಚಿಕ್ಕಪ್ಪನ ಮನೆಯಲ್ಲಿ ಉಳಕೊಂಡಿದ್ದೆ. ಮನೆ ಪಕ್ಕದಲ್ಲೇ ಒಂದು ಮಾವಿನ ತೋಪು ಇತ್ತು. ಅಲ್ಲಿ ನರಪಿಳ್ಳೆಯೂ ಬರುತ್ತಿರಲಿಲ್ಲ. ಆಗ ಅಲ್ಲಿಗೆ ರಾಶಿ ರಾಶಿ ಪುಸ್ತಕಗಳನ್ನು ಕೊಂಡೊಯ್ದು ಓದುತ್ತಿದ್ದೆ. ಅಡಿಗರ ಭೂಗರ್ಭ ಯಾತ್ರೆ, ಕುವೆಂಪು ಅವರ ಪ್ರೇಮ ಕಾಶ್ಮೀರ, ಪಕ್ಷಿಕಾಶಿ ಎಲ್ಲ ಓದುತ್ತ ಹೋದೆ. ಓದುವ ಹುಚ್ಚು ಹೆಚ್ಚಿದ್ದರಿಂದ ಬರೆಯುವ ದಾಹ ಏರಿತು.
ಕವಿತೆಗಳನ್ನು ಯಾರ ಬಳಿ ತೋರಿಸುತ್ತಿದ್ರಿ? ಅವರು ಯಾವ ರೀತಿ ಮಾರ್ಗದರ್ಶನ ಮಾಡ್ತಾ ಇದ್ರು?
1953ರಲ್ಲಿ ನಾನು ಸೆಂಟ್ರಲ್ ಕಾಲೇಜಲ್ಲಿ ಓದುತ್ತಿದ್ದಾಗ ನನ್ನನ್ನು ಪ್ರೋತ್ಸಾಹಿಸಿದವರು ಜಿ.ಪಿ.ರಾಜರತ್ನಂ. 55ರಲ್ಲಿ ವಿದ್ಯಾರ್ಥಿಗಳಿಂದ ಬರೆಸಿ ಪದ್ಯಾಂಜಲಿ ಅಂತ ಪುಸ್ತಕ ತಂದರು. ಐವರು ಕವಿಗಳ ತಲಾ ನಾಲ್ಕೈದು ಪದ್ಯಗಳು. ಲಂಕೇಶ, ನಾಡಿಗ, ಎಲ್.ಜಿ.ಸುಮಿತ್ರ ಮತ್ತು ನನ್ನ ಪದ್ಯಗಳು. ಆ ಸಂಕಲ ನೋಡಿದ ಡಿವಿಜಿಯವರು ನಾಡಿಗ, ಲಂಕೇಶ ಮತ್ತು ನನ್ನನ್ನು ಮುಖತಃ ನೋಡಲು ಬಯಸಿದರು. ಅದೆಂಥಾ ಭಾಗ್ಯ ನಮ್ಮದು. ಬಳಿಕ ನಾಗಸಂದ್ರ ಹತ್ತಿರವಿದ್ದ ಡಿವಿಜಿ ಮನೆಗೆ ನಾನೂ ನಾಡಿಗ ಹೋದೆವು. ಸುಮಾರು ಮುಕ್ಕಾಲು ಗಂಟೆ ಪ್ರೀತಿಪೂರ್ವಕವಾಗಿ ಮಾತನಾಡಿಸಿ ಚೆನ್ನಾಗಿ ಬರಿತೀರಪ್ಪ ಎಂದು ಹುರಿದುಂಬಿಸಿದರು. ಅದು ನಮಗೆ ದೊಡ್ಡ ಸರ್ಟಿಫಿಕೆಟ್ ಆಯ್ತು.
ಅದಾದ ಬಳಿಕ ಕಸಾಪದಲ್ಲಿ ಬೇಂದ್ರೆ ಅಧ್ಯಕ್ಷತೆಯಲ್ಲಿ ಕವಿ ಸಮ್ಮೇಳನ. ಆಗ ದೊಡ್ಡ ದೊಡ್ಡ ಕವಿಗಳ ಜತೆ ಕಿರಿಯನಾದ ನನ್ನನ್ನು ಆರಿಸಿದರು. ಕನ್ನಡಿ ಮುಂದೆ ನಿಂತ್ಕೊಂಡು ಆಂಗಿಕ ಅಭಿನಯಗಳನ್ನು ಮಾಡಿ ಎಲ್ಲ ಸಿದ್ಧತೆ ಮಾಡಿಕೊಂಡು ಗೋಷ್ಠಿಯಲ್ಲಿ ನಾಟಕೀಯವಾಗಿ ಓದಿದೆ. ಅಧ್ಯಕ್ಷ ಭಾಷಣಕ್ಕೆ ಎದ್ದು ನಿಂತ ಬೇಂದ್ರೆ, 'ಕೊನೆಯಲ್ಲಿ ಓದಿದೆಯಲ್ಲ ಕವಿತೆ ನಿನ್ನ ಹೆಸರೇನೋ, ನಿಸಾರ್ ಅಹಮದ್ ಅಲ್ವಾ? ನಿನ್ನ ಹೆಸರು ನಿಸಾರ್ ಆದ್ರೂ ಕವಿತೆ ನಿಸ್ಸಾರ ಅಲ್ಲ, ಅಹಮದ್ ಆದ್ರೂ ಅಹಮ್ ಮತ್ತು ಮದ ಇಲ್ಲ ನಿನ್ನ ಕವಿತೆಯಲ್ಲಿ' ಅಂದುಬಿಟ್ರು.
ಚಾಕ್ಲೇಟ್ ತಿಂದು ಚೆನ್ನಾಗಿ ಓದಮ್ಮಾ... ಅಡಿಗರ ಮೊಮ್ಮಳಿಗೆ ನಿಸಾರ್ ಆಶೀರ್ವಾದ...! |
ಆಗ ಆಕಾಶವಾಣಿ ಕವಿಗಳಿಗೆ ತುಂಬ ಪ್ರೋತ್ಸಾಹ ಕೊಡುತ್ತಿತ್ತು ಅಲ್ವಾ?
ಹೌದೌದು. ಅಂದು ಆಕಾಶವಾಣಿಯಲ್ಲಿ ನಿಲಯ ನಿರ್ದೇಶಕರಾಗಿದ್ದ ರಾಘವೇಂದ್ರ ಇಟಗಿ ನನ್ನ ಪಾಲಿನ ಪ್ರಾತಃಸ್ಮರಣೀಯರು. ಕಾಲೇಜಿನಿಂದಲೇ ಕರೆಸಿ ಪದ್ಯ ಓದಿಸೋರು. ಅದಾದಬಳಿಕ ನಾನು ಬೆಳೆದಿದ್ದೇ ಪ್ರಜಾವಾಣಿಯಿಂದ. ಆಗ ಪರಿಚಯ ಆದವರು ಎಂ.ಬಿ.ಸಿಂಗ್. ಚಿಕ್ಕದಾಗಿ, ಒಂದು ಲಾಯದ ರೀತಿಯಲ್ಲಿದ್ದ ಪ್ರಜಾವಾಣಿ ಕಚೇರಿಗೆ ಹೋಗ್ತಾ ಇದ್ದೆ. ಸಂಸ ದಿನಾಚರಣೆ ಮಾಡ್ತಾ ಇದ್ದಾಗ ವೈಎನ್ಕೆ ಆತ್ಮೀಯರಾದರು.
ಗಾಂಧಿ ಬಜಾರಿನಲ್ಲಿದ್ದೂ ಮನಸ್ಸು ಲಾಲ್-ಬಾಗಿನಂತಾಗಬೇಕು ಎನ್ನುವ ನಿಮ್ಮ ಮೇಲೆ ಆ ಎರಡು ಇಳಿತಾಣಗಳು ಬೀರಿದ ಭಾರಿ ಪರಿಣಾಮ.
ಅಯ್ಯೋ ನಾವು ಪೂರ್ತಿ ಇರ್ತಾ ಇದ್ದಿದ್ದೇ ಗಾಂಧಿ ಬಜಾರು ಮತ್ತು ಲಾಲ್-ಬಾಗ್-ನಲ್ಲಿ . ಪ್ರತಿ ಸಂಜೆ ವಿದ್ಯಾರ್ಥಿ ಭವನ ಮತ್ತು ಅ.ನಾ.ಸುಬ್ಬರಾವ್ ಕಲಾಮಂದಿರದಲ್ಲಿ ನಮ್ಮ ಹಾಜರಿ. ಆಗ ಚಿತ್ರ ಕಲಾವಿದರು ಅಲ್ಲಿ ಡ್ರಾಮಾ ಪ್ರಾಕ್ಟಿಸ್ ಮಾಡೋರು. ದಾಸರಥಿ ದೀಕ್ಷಿತ್, ಮೂರ್ತಿ ಹೀಗೆ ತುಂಬಾ ಜನ. ಅಲ್ಲಿಂದ ವಿದ್ಯಾರ್ಥಿ ಭವನಕ್ಕೆ ಬಂದು ದೋಸೆ, ಏನೂ ಇಲ್ಲಾ ಅಂದ್ರೆ ರವಾ ವಡಾ. ದುಡ್ಡು ಇಲ್ಲಾ ಅಂದ್ರೂ ಯಾರಾದ್ರೂ ಕೊಡಿಸೋರು. ಆಗ ಸಿಗುತ್ತಿದ್ದವರು ವೈಎನ್ಕೆ. ನವ್ಯ ಸಾಹಿತ್ಯ ಆಗ ಪ್ರವರ್ಧಮಾನಕ್ಕೆ ಬರ್ತಾ ಇತ್ತು. ಅಡಿಗರ ಚಂಡೆ ಮದ್ದಳೆ, ಶರ್ಮರ ಏಳುಸುತ್ತಿನ ಕೋಟೆ ಆಗ್ಲೇ ಬಂದಿದ್ದು. ಆಗ ನಾನು, ನಾಡಿಗ, ಲಂಕೇಶ ನವ್ಯ ಕಾವ್ಯವನ್ನು ನೆಚ್ಚಿಕೊಂಡೆವು. ನಮಗೆ ತುಂಬಾ ಪ್ರೋತ್ಸಾಹ ಕೊಟ್ಟಿದ್ದು ಒಂದು ಚಿತ್ರಗುಪ್ತ ಪತ್ರಿಕೆ ಮತ್ತು ಪ್ರಜಾವಾಣಿಯ ಎಂ.ಬಿ.ಸಿಂಗ್.
ಲಾಲ್ಬಾಗ್ ಅಂತೂ ನಮ್ಮ ಆಡುಂಬುಲವಾಗಿತ್ತು. ಸುತ್ತಲೂ ಹಾಕಿದ್ದ ಕಂಬಿಗಳನ್ನು ಜಾರಿಸಿಕೊಂಡು ಒಳಗೆ ನುಗ್ಗುತ್ತಿದ್ದೆವು. ಕಾಲೇಜು ಬಿಟ್ಟೆವೋ ಲಾಲ್ಬಾಗ್ಗೆ ದೌಡು. ಪ್ರಶಾಂತ ವಾತಾವರಣ. ಜನ ಕೂಡ ಬರ್ತಾ ಇರಲಿಲ್ಲ. ಮರಗಿಡಗಳ ವೈವಿಧ್ಯ, ಪಕ್ಷಿಗಳ ಕಲರವ ಎಲ್ಲವೂ ಕಣ್ಣಿಗೆ ಹಬ್ಬ. ಏಕಾಂತ ಬೇರೆ. ಕುವೆಂಪು ಅವರಿಗೆ ಮಲೆನಾಡು, Wordsworth ಗೆ ಇಂಗ್ಲಂಡ್ ನ ಲೇಕ್ ಡಿಸ್ಟಿಕ್ ಸಿಕ್ತೋ ಹಾಗೆ ನನ್ನ ಪಾಲಿಗೆ ಲಾಲ್-ಬಾಗ್. ಕಾನೂರು ಹೆಗ್ಗಡ್ತಿ ಎಂಬ ಬೃಹತ್ ಕಾದಂಬರಿ ನಾನು ಓದಿದ್ದೇ ಅಲ್ಲಿ. ಸುಮಾರು 3 ತಿಂಗಳು ಅದರ ಹುಚ್ಚಿಗೆ ಬಿದ್ದಂತೆ ಓದಿದೆ. ಕಾದಂಬರಿಯ ಹೂವಯ್ಯ ನನ್ನ ಕನಸಲ್ಲೆಲ್ಲ ಬರೋನು. ರವೀಂದ್ರನಾಥ ಟಾಗೂರರ ಗೀತಾಂಜಲಿ, ಡಿವಿಜಿಯವರ ಸಂಸ್ಕೃತಿ, ಅಡಿಗರ ಭಾವತರಂಗ, ಚಂಡೆಮದ್ದಳೆ ಪದ್ಯಗಳೆಲ್ಲ ನನ್ನೊಳಗೆ ಇಳಿದಿದ್ದೇ ಲಾಲ್-ಬಾಗ್-ನಲ್ಲಿ. ಏಕಾಂತಕ್ಕೆ ಲಾಲ್ಬಾಗ್, ಲೋಕಾಂತಕ್ಕೆ ಗಾಂಧಿ ಬಜಾರು!
![]() |
ಬೆಂಗಳೂರಿನ ಪದ್ಮನಾಭ ನಗರದ ಅವರದೇ ಮನೆಯಲ್ಲಿ ಪ್ರಶಸ್ತಿಗಳ ರಾಶಿಯ ನಡುವೆ.... |
ಹೀಗಾಗಿ ಆಗಿನಿಂದಲೇ ನಿಮಗೆ ದೊಡ್ಡ ಸಾಹಿತಿಗಳ ಸಂಗ ಸಿಕ್ಕುಬಿಟ್ಟಿತು.
ಭಾನುವಾರ ವಿದ್ಯಾರ್ಥಿ ಭವನದ ದೋಸೆಗಂತ ಬಹಳ ಜನ ಬರೋರು. ವೈಎನ್ಕೆ, ಎಂಬಿ ಸಿಂಗ್, ಕಂಠಿ, ಹ.ವೆಂನಾಗರಾಜ್. ವಿದ್ಯಾರ್ಥಿ ಭವನ ಸಾಹಿತ್ಯಕ ಹಾಗೂ ಸಾಂಸ್ಕೃತಿಕ ನೆಲೆ ಇರುವ ಜಾಗ. ಜಗತ್ತಿನಾದ್ಯಂತ ನಾನು ಸುತ್ತಾಡಿ ಬಂದಿದ್ದೆ. ಆದರೆ ಇಂತಹ ನೆಲೆ ಇನ್ನೆಲ್ಲೂ ಸಿಗುವುದಿಲ್ಲ. ಮಾಸ್ತಿ, ಡಿವಿಜಿ, ಅ.ನಾ.ಸುಬ್ಬರಾವ್, ಟಿ.ಟಿ.ಶರ್ಮಾ, ಅನಕೃ, ರವಿ ಕಲಾವಿದರು ಹೀಗೆ ಎಷ್ಟೊಂದು ಜನ ಅಲ್ಲಿಗೆ ಬರೋರು. ವಿದ್ಯಾರ್ಥಿ ಭವನ ನಮ್ಮ ಪಾಲಿನ ಐಕಾನ್. ವೈಎನ್ಕೆ ಪಾಶ್ಚಾತ್ಯ ನವ್ಯ ಸಾಹಿತ್ಯದ ಬಗ್ಗೆ ಯಾವಾಗಲೂ ಚರ್ಚೆ ಮಾಡೋರ್ರು. ಪುಸ್ತಕಗಳ ವಿನಿಮಯ ಆಗ್ತಾ ಇತ್ತು. ವೈಎನ್ಕೆ ಪ್ರಜಾವಾಣಿಗೆ ನೈಟ್ ಡ್ಯೂಟಿಗೆ ಹೋಗಲು ಇಲ್ಲಿನ ಜಟಕಾ ಸ್ಟಾಂಡ್ನಲ್ಲಿ 16ಎ ಬಸ್ ಹತ್ತುತ್ತಿದ್ದರು. ಆಗ್ಲೂ ಭೇಟಿ. ಬೆಳಿಗ್ಗೆ ಒಂಭತ್ತು ಹತ್ತಕ್ಕೆ ಮತ್ತೆ ಭೇಟಿ. ಸಾಹಿತ್ಯದ ಚರ್ಚೆನೇ ನಾವು ಮಾಡ್ತಾ ಇದ್ವಿ. ಪಾಬ್ಲೋ ನೆರುಡಾ ಬಗ್ಗೆ ಮೊದಲು ಹೇಳಿದ್ದೇ ಅವರು. 'ಭಾಳ ದೊಡ್ಡ ಕವಿ, ಲೆಫ್ಟಿಸ್ಟು, ನೊಬೆಲ್ ಪ್ರಶಸ್ತಿ ಬಂತು' ಅಂತೆಲ್ಲ ಹೇಳಿ ಆಸಕ್ತಿ ಹುಟ್ಟಿಸ್ತಾ ಇದ್ರು. ಬೆನ್ ಬೆಲಿಟ್ ಸಂಪಾದನೆ ಮಾಡಿದ ನೆರುಡಾ ಕವಿತೆಗಳನ್ನು 'ಬರೀ ಮರ್ಯಾದಸ್ಥರೇ' ಎಂದು ಭಾಷಾಂತರ ಮಾಡಿ ವೈಎನ್ಕೆಗೇ ಅರ್ಪಣೆ ಮಾಡಿಬಿಟ್ಟೆ.
ವಿಮರ್ಶೆ ಮಾಡು ಅಂತ ಎಂ.ಬಿ.ಸಿಂಗ್ ಪುಸ್ತಕಗಳನ್ನು ಕಳಿಸೋರು. ಇದರಿಂದ ಎಷ್ಟೊಂದು ಓದಲಿಕ್ಕೆ ಅವಕಾಶ ಆಯ್ತು. ಸಿಂಗ್ ಅವರನ್ನು ನಾನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಯುಗಾಧಿ ಸಂಚಿಕೆಯ ಕೊನೆಯ ಪುಟದಲ್ಲಿ 'ಲಾಸ್ಟ್ ಲಾಫ್' ಅಂತ ಕವಿತೆ ಪ್ರಕಟ ಆಯ್ತು. ನಗ್ತೀರಾ ನನ್ನ ಹಿಂದೆ ನಗ್ರಯ್ಯಾ ನಗ್ರಿ, ಸುಮ್ನೆ ಸಿಗಲಿಲ್ಲ ಹೆಸರಿಗೆ ಡಿಗ್ರಿ...
ನವ್ಯ ಕಾವ್ಯದ ದಾಹ ಅಪಾರವಾಗಿದ್ದ ನಿಮಗೆ ಇಂಗ್ಲಿಷ್ ಕವಿಗಳಂತೂ ಭಾರಿ ಪ್ರಭಾವ ಬೀರಿದರು.
ನಿಜ, ತುಂಬಾ ಇಂಗ್ಲಿಷ್ ಸಾಹಿತ್ಯ ಓದ್ತಾ ಇದ್ವಿ. ಡಬ್ಲು.ಎಚ್.ಆರ್ಡೆನ್, ಟಿ.ಎಸ್.ಏಲಿಯೆಟ್, ಎಡಿಸಿಟ್-ವೆಲ್ ಎಂಬ ಕವಯತ್ರಿ, ಅಮೆರಿಕದ ರಾಬರ್ಟ್ ಫಾಸ್ಟನ್ ಕಾರ್ಲ್ ಹ್ಯಾಪಿರೋ ಅವರ ಪದ್ಯಗಳನ್ನೆಲ್ಲ ಓದಿ ಅರಗಿಸಿಕೊಂಡೆವು. ಭಾಷಾಂತರ ಕೂಡ ಮಾಡಿದೆ.
ಕುರಿಗಳು ಸಾರ್ ಕುರಿಗಳು ಕವಿತೆ ಹುಟ್ಟಿದ ಬಗ್ಗೆ ಹೇಳಿ ಸಾರ್.
1962ರಲ್ಲಿ ನಮ್ಮ ದೇಶದ ಮೇಲೆ ಚೀನಿಯರು ಆಕ್ರಮಣ ಮಾಡಿದರು. ನಮ್ಮಲ್ಲಿ 303ನಂತಹ ಹಳೇ ಬಂದೂಕಗಳಿದ್ದವು. ಚೀನಿಯರ ಬಳಿ ಅಲ್ಟ್ರಾ ಮಾಡರ್ನ್ ವೆಪನ್-ಗಳಿದ್ದವು. ಅದರಿಂದಾಗಿ ಅವರು ಭಾರೀ ನರಹತ್ಯೆ ಮಾಡಿಬಿಟ್ಟರು. ನಮ್ಮ ಸಾವಿರಾರು ಯೋಧರು ಸತ್ತು ಹೋದರು. ಎಷ್ಟೋ ಜನ ಮರಗಳ ಮೇಲೆ ದಿನಗಟ್ಟಲೆ ಇದ್ದು, ಎಲೆಗಳನ್ನು ತಿಂದು ಬದುಕಿದರು. ಆಗ ದೆಹಲಿಯಲ್ಲಿ ಕೆಲ ರಾಜಕಾರಣಿಗಳು ಜನರಲ್ಲಿ ತಪ್ಪು ಭಾವನೆ ಹುಟ್ಟಿಸಿದ್ರು. ಚೀನಿಯರಿಗೆ ನಮ್ಮ ಸೈನಿಕರು ತಕ್ಕ ಉತ್ತರ ಕೊಡ್ತಾ ಇದ್ದಾರೆ ಎಂದು ಸುಳ್ಳೇ ಹೇಳಿದರು. ನೆಹರು ಆರ್ಮಿ ಆಫೀಸರ್ ಹೇಳಿದ್ದನ್ನೇ ನಂಬಿದರು. ಆಗ ನನಗೆ ಬಹಳ ಮನಸ್ಸು ನೊಂದು ಹೋಯ್ತು. ಯುದ್ಧ ಮುಗಿದ ಮೇಲೆ ಈ ಪದ್ಯ ಬರೆದೆ. ಕೇಂದ್ರದಲ್ಲಿರುವ ಸರಕಾರ, ಅಧಿಕಾರಿಗಳು ಜನರನ್ನು ಕುರಿಗಳ ರೀತಿಯಲ್ಲಿ ಬಳಸಿಕೊಂಡು ಅವರು ಮಜವಾಗಿ ಕಾಲ ಕಳೆಯುತ್ತಿದ್ದಾರೆ ಎಂಬುದೇ ಇದರ ಭಾವಾರ್ಥ.
ಗೋಪಾಲಕೃಷ್ಣ ಅಡಿಗರ ಮನೆಯಲ್ಲಿ... |
ನಿಮ್ಮ ಹಾಡು ಜನಜನಿತವಾಗಲು ಒಬ್ಬ ಗಾಯಕನೂ ಬೇಕು...
ಈ ಕುರಿಗಳು ಸಾರ್ ಕುರಿಗಳು ಬರೆದ ಕೆಲ ದಿನಗಳಲ್ಲೇ 1963ರಲ್ಲಿ ನನಗೆ ಮೈಸೂರು ಅನಂತಸ್ವಾಮಿ ಪರಿಚಯವಾಯ್ತು. ಗಾಂಧಿ ಬಜಾರಲ್ಲೇ ಆತನ ಮನೆಯಿತ್ತು. ಆತ ಮೊದಲು ಸಂಗೀತ ಸಂಯೋಜನೆ ಮಾಡಿದ್ದು ಕುರಿಗಳು ಪದ್ಯಕ್ಕೆ. ಬೆಣ್ಣೆ ಕದ್ದ ನಮ್ಮ ಕೃಷ್ಣ, ನೀ ಮರೆತರೆ ಮುಂತಾದ ಪದ್ಯಗಳನ್ನು ಕಾಲೇಜು ಮತ್ತು ಸರಕಾರಿ ಕಾರ್ಯಕ್ರಮಗಳಲ್ಲಿ, ಮದುವೆಗಳಲ್ಲಿ ಹಾಡುತ್ತಿದ್ದ. ಕುರಿಗಳು ಪದ್ಯ ಹಾಡದೇ ಹೋದ್ರೆ ಚೀಟಿಗಳನ್ನು ಕಳಿಸಿ ಕೂಗೋರು. ಬಾರಿ ಒಳ್ಳೆಯ ಟ್ಯೂನ್ ಗಳನ್ನು ಹಾಕುತ್ತಿದ್ದ. ಕಾಳಿಂಗ್ ರಾವ್ ಆದ್ಮೇಲೆ ಅನಂತಸ್ವಾಮಿನೇ ನಿಜವಾದ ಉತ್ತರಾಧಿಕಾರಿ. ತಂಪು ಹೊತ್ತಲ್ಲಿ ನೆನೆಯಬೇಕು ಆತನನ್ನು. ಸುಮಾರು ಐನೂರಕ್ಕೂ ಹೆಚ್ಚು ಟ್ಯೂನ್ ಗಳು. ಎಲ್ಲ ಕವಿಗಳದ್ದೇ. ಅದರಿಂದ ಅನೇಕರ ಪದ್ಯಗಳು ನಾಡಿನಾದ್ಯಂತ ಜನಪ್ರಿಯವಾದವು.
ಇಂದು ವಿಶ್ವದಾದ್ಯಂತ ಜನಪ್ರಿಯವಾಗಿರುವ ನಿತ್ಯೋತ್ಸವ ಕವಿತೆ ಹುಟ್ಟಿದ ಬಗೆಯಾದರೂ ಹೇಗೆ?
1968ರಲ್ಲಿ ಈ ಕವಿತೆಯನ್ನು ಆಕಾಶವಾಣಿಗಾಗಿ ಬರೆದಿದ್ದು. ನವೆಂಬರ್ ತಿಂಗಳ ನಾಲ್ಕು ಭಾನುವಾರ ಹಾಕ್ತೀವಿ ಕನ್ನಡದ ಮೇಲೆ ಕವಿತೆ ಬರೆದುಕೊಡಿ ಅಂತ ಕೇಳಿದ್ರು. ಶಿವಮೊಗ್ಗದಲ್ಲಿದ್ದ ನಾನು ರಜೆಯಲ್ಲಿ ಬೆಂಗಳೂರಿಗೆ ಬಂದಿದ್ದೆ. ಆಗ ಆಕಾಶವಾಣಿಯವರು ಮತ್ತೆ ಫೋನ್ ಮಾಡಿ ನಾಳೆನೇ ಕೊಡಬೇಕು ಅಂತ ಒತ್ತಡ ಹಾಕಿದ್ರು. ಜಯನಗರ ಟಿ ಬ್ಲಾಕ್ನಲ್ಲಿದ್ದ ಮನೆಯ ಮಾಳಿಗೆಯಲ್ಲಿ ರಾತ್ರಿ ಬರೆಯಲು ಕುಳಿತೆ. ನನ್ನ ಮೈ-ಮನಸ್ಸು ಎಲ್ಲ ಶಿವಮೊಗ್ಗವೇ ತುಂಬಿಕೊಂಡಿತ್ತು. ಪ್ರತಿದಿನ ತುಂಗೆಯನ್ನು ದಾಟಿಯೇ ಸಹ್ಯಾದ್ರಿ ಕಾಲೇಜಿಗೆ ಹೋಗಬೇಕಾಗಿತ್ತು. ಅಕ್ಕಪಕ್ಕದಲ್ಲಿ ವನಸಿರಿ, ಹಕ್ಕಿಗಳ ಕಲರವ, ನೀರು ಎಲ್ಲವೂ ನನ್ನ ಪಾಲಿಗೆ ಆಪ್ಯಾಯಮಾನವಾಗಿತ್ತು. ಜೋಗವನ್ನೂ ಎರಡು ಭಾರಿ ನೋಡಿದ್ದೆ. ಭೂವಿಜ್ಞಾನದ ಮೇಷ್ಟ್ರಾದ ನಾನು ವಿದ್ಯಾರ್ಥಿಗಳನ್ನು ಕೆಮ್ಮಣ್ಣುಗುಂಡಿಗೆಲ್ಲ ಕರೆದುಕೊಂಡು ಹೋಗಿದ್ದೆ. ಅವೆಲ್ಲ ತಲೆಯಲ್ಲಿ ತುಂಬಿ ತುಳುಕುತ್ತಿತ್ತು. ಆಗ ವಿಪರೀತ ಸಿಗರೇಟು ಸೇದುತ್ತಿದ್ದೆ. ಅತ್ತಿಂದಿತ್ತ ತಿರುಗುತ್ತಿದ್ದಾಗ ತಕ್ಷಣ 'ನಿತ್ಯೋತ್ಸವ' ಎಂಬ ಶಬ್ಧ ಹೊಳೆಯಿತು. ಭಾರಿ ಖುಷಿಯಾಯ್ತು. ಅದೇನು ದೈವದತ್ತವಾದುದೋ ಏನೋ. ನಿತ್ಯ ಉತ್ಸವ ಅಂದ್ರೆ ಪ್ರತಿ ನಿತ್ಯ. ಇನ್ನೊಂದು ನಿತ್ಯ ಅಂದರೆ ಚಿರಕಾಲಿಕವಾದುದು. 'ನಿತ್ಯೋತ್ಸವ ತಾಯೇ ನಿತ್ಯೋತ್ಸವ' ಅಂತ ಮನಸ್ಸಲ್ಲೇ ಅಂದುಕೊಂಡೆ. ಕೇವಲ ಮುಕ್ಕಾಲು ಗಂಟೆಯಲ್ಲಿ ಆ ಪದ್ಯ ಬರೆದು ಮುಗಿಸಿಬಿಟ್ಟೆ. ನವೆಂಬರ್ ಒಂದರಂದು ರಾಜ್ಯೋತ್ಸವ ಮಾಡಿ ಇಡೀ ವರ್ಷ ಕನ್ನಡ ಮರೆತುಬಿಡ್ತಾರೆ. ಆದರೆ ಈ ಪ್ರಕೃತಿ, ಇತಿಹಾಸ ಮತ್ತು ಭಾಷೆ ಇದು ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಲೇ ಇದೆೆ.
ಅದನ್ನು ಆಕಾಶವಾಣಿಯಲ್ಲಿ ಕೇಳಿದ್ದ ಅನಂತಸ್ವಾಮಿ ನನ್ನಿಂದಲೇ ಆ ಕವಿತೆಯನ್ನು ಪಡೆದು ಅದಕ್ಕೆ ಅದ್ಭುತವಾದ ಟ್ಯೂನ್ ಹಾಕಿದ್ರು. ರೇವತಿ ರಾಗದಲ್ಲಿದೆ ಆ ಹಾಡು. ಯಾವ ಘಳಿಗೆಯಲ್ಲಿ ಅದನ್ನು ಹಾಡಿದ್ನೋ ಆ ಪುಣ್ಯಾತ್ಮ, ಇಡೀ ಜಗತ್ತಿಗೇ ಪ್ರಸಿದ್ಧಿಯಾಗಿ ಹೋಯಿತು. ನೀವು ನಂಬಲ್ಲ, ಕುಪ್ಪಂ ದ್ರಾವಿಡ ವಿವಿಯಲ್ಲಿ ಇದೇ ಹಾಡನ್ನು ಕನ್ನಡ ಸೇರಿ ನಾಲ್ಕು ಭಾಷೆಗಳ ಲಾಂಛನ ಗೀತೆಯಲ್ಲಿ ಹಾಡಿದ್ದಾರೆ.
ಮುಂದೆ ನಾನೇ ಸಾಹಸ ಮಾಡಿ ನಿತ್ಯೋತ್ಸವ ಕ್ಯಾಸೆಟ್ನ್ನು ತಂದೆ. ಮೈಸೂರು ಅನಂತಸ್ವಾಮಿ ಸಂಗೀತ ನಿರ್ದೇಶನ ದಲ್ಲಿ ಶಿವಮೊಗ್ಗ ಸುಬ್ಬಣ್ಣ, ರತ್ನಮಾಲಾ ಪ್ರಕಾಶ್ ಅವರಿಗೆಲ್ಲ ಅವಕಾಶ ಕೊಟ್ಟೆ. ಕ್ಯಾಸೆಟ್ ಗೆ ಭಾರಿ ಡಿಮ್ಯಾಂಡ್ ಬಂತು, ಅದನ್ನು ಪೂರೈಸಲಿಕ್ಕೇ ನನ್ನಿಂದ ಸಾಧ್ಯವಾಗಲಿಲ್ಲ. ಸುಗಮ ಸಂಗೀತಕ್ಕೆ ಮಾರ್ಗಸ್ಥಾಪಕ ಕ್ಯಾಸೆಟ್ ಅದು. ಪ್ರಪಂಚದಾದ್ಯಂತ ಕನ್ನಡ ಸಂಘಗಳು ಎಲ್ಲೆಲ್ಲಿವೆಯೋ ಅಲ್ಲಲ್ಲಿ ಹಾಡ್ತಾರೆ. ನಾನು ಯಾವತ್ತೂ ದೊರೆ ಎಂದು ಕರೆಯುತ್ತಿದ್ದ ಅನಂತಸ್ವಾಮಿಗೆ ಯಾವತ್ತೂ ಚಿರಋಣಿ. ಅಂತಹ ಒಬ್ಬ ಸಂಗೀತಗಾರ ಹುಟ್ಟಲ್ಲ ಇನ್ನು.
ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದ ದಿನಗಳಲ್ಲಿ ಇಡೀ ಮಲೆನಾಡು ನಿಮ್ಮನ್ನು ಕವಿಯಾಗಿ ಸಮೃದ್ಧಗೊಳಿಸಿತು ಅಲ್ವಾ?
ಅಲ್ಲಿದ್ದಾಗ ನಾನು ಊರಿಂದ ಆಚೆಗೇ ಹೆಚ್ಚು ಓಡಾಡಿಕೊಂಡು ಇರುತ್ತಿದ್ದೆ. ಅಲ್ಲಿನ ಪ್ರಕೃತಿ ನನ್ನನ್ನು ಬಹಳವಾಗಿ ಸೆಳೆದುಬಿಟ್ಟಿತು. ಸ್ವಲ್ಪವೇ ದೂರ ಹೋದ್ರೆ ಪ್ರಕೃತಿ. ಮರ, ಹಕ್ಕಿಗಳು. ಅರಣ್ಯ ಇಲಾಖೆ ಇತ್ತಲ್ಲ ಅಲ್ಲಿವರೆಗೂ ಹೋಗ್ತಿದ್ದೆ. ಈ ಕಡೆ ನವಲೇ ಗ್ರಾಮದವರೆಗೂ. 'ರಾಮನ್ ಸತ್ತ ಸುದ್ದಿ' ಅಂತ ಕವನ ಬರೆದಿದ್ದೂ ಅಲ್ಲೇ. ನವಲೆ ಗ್ರಾಮದ ಹನುಮ ಅಂತ ಅದರಲ್ಲಿ ಬರೆದಿದ್ದೆ. ಎಲ್ಲೆಲ್ಲೂ ಕಬ್ಬಿನ ತೋಟಗಳು. ಜುಳು ಜುಳು ಹರಿತಿದ್ದ ನದಿಗಳು. ಯಾರೂ ಇರುತ್ತಿರಲಿಲ್ಲ. ಕತ್ತಲು ಕವಿಯುವ ವರೆಗೂ ಕುಳಿತುಕೊಳ್ತಿದ್ದೆ. ಯಾಕಪ್ಪಾ ಹಿಂಗೆಲ್ಲ ಕತ್ತಲಲ್ಲಿ ಕುತ್ಕೊಳ್ತಿಯಾ, ಹಾವುಗಳೆಲ್ಲ ಇರ್ತವೆ, ಬೇಗ ಹೋಗು, ಅಂತ ಅಲ್ಲೊಬ್ಬ ಯಾವತ್ತೂ ಹೆದರಿಸುತ್ತಿದ್ದ. ಏಕಾಂತದಲ್ಲಿ ಧ್ಯಾನಸ್ಥನಾಗಿ ಕುಳಿತು ಬಿಡುತ್ತಿದ್ದೆ. ಕುವೆಂಪು, ಡಿವಿಜಿ, ವೀಸಿ, ಮಾಸ್ತಿ ಅವರನ್ನೆಲ್ಲ ಆಳವಾಗಿ ಓದಿದ್ದೇ ಅಲ್ಲಿ. ಇಂಗ್ಲಿಷ್ ಕೂಡ ಬೇಕಾದಷ್ಟು ಓದಿದೆ. ಇದರಿಂದಲೇ ನನ್ನ ವ್ಯಕ್ತಿತ್ವ ಬಲಶಾಲಿಯಾಯ್ತು. ಶಿವಮೊಗ್ಗವನ್ನು ನಾನು ಮರೆಯುವ ಹಾಗೇ ಇಲ್ಲ.
ನಾಡದೇವಿ ಕಂಡೆ ನಿಮ್ಮ ಮಡಿಲಲ್ಲಿ ಎಂಥ ದೃಶ್ಯ ಒಂದೆದೆಯ ಹಾಲು ಕುಡಿದ ಮಕ್ಕಳಲ್ಲಿ ಎನಿತೊಂದು ಭೇದ ತಾಯಿ ಎನ್ನುತ್ತ ಈ ನಾಡಿನ ದೃಶ್ಯವನ್ನು ಕಟ್ಟಿಕೊಡುತ್ತೀರಿ. ಇಷ್ಟು ವರ್ಷಗಳ ಬಳಿಕ ಆ ದೃಶ್ಯವನ್ನು ರೀಕ್ಯಾಪ್ ಮಾಡಿದ್ರೆ?
ಅದೂ ನಾನು ಶಿವಮೊಗ್ಗದಲ್ಲಿದ್ದಾಗಲೇ ಬರೆದಿದ್ದು. ಕುರಿಗಳು ಪದ್ಯಕ್ಕೂ ಜನ ಹಾಗೇ ಹೇಳ್ತಾರೆ. ರಾಜಕಾರಣಿಗಳಿಗೆ ಸರಿಯಾಗಿ ಪಾಠ ಕಲ್ಸಿದಿರಿ ಅಂತಾರೆ. ಆ ಕಾಲದಲ್ಲಿ ನಾನು ನೊಂದು ಬರೆದ ಪದ್ಯ ಅದು. ಆದರೆ ಪರಿಸ್ಥಿತಿ ಈಗಲೂ ಹಾಗೇ ಇದೆ. ಇನ್ನಷ್ಟು ಬಿಗಡಾಯಿಸಿ ಹೋಗಿದೆ. ಅದೇ ಅಂಧಶ್ರದ್ಧೆಯ ಸಮಾಜ.
ಪ್ರಜಾವಾಣಿಯ ದೀಪಾವಳಿ ವಿಶೇಷಾಂಕ ಕಥಾ ಸ್ಪರ್ಧೆಯಲ್ಲಿ ಸಿಕ್ಕ ದೊಡ್ಡ ಪ್ರಶಸ್ತಿಯೂ ಗುರುಗಳಿಂದಲೇ... |
ಬುದ್ಧಿ-ಭಾವಗಳ ವಿದ್ಯುದಾಲಿಂಗನವಾಗದೇ ಹೋದರೆ ಎಲ್ಲವೂ ಸತ್ವಹೀನ ಎಂದು ನೀವು ಎಲ್ಲೋ ಹೇಳಿದ ನೆನಪು. ಇತ್ತೀಚೆಗಂತೂ ಅದು ಢಾಳಾಗಿ ಕಾಣಿಸುತ್ತಿದೆ ಅಲ್ವಾ?
ಈಗ ಕಾವ್ಯ ಬಹಿರ್ಮುಖ ಚಹರೆ ಧರಿಸಿದೆ. ನಾವೆಲ್ಲ ಅಂತರ್ಮುಖಿಗಳಾಗಿ, ಏಕಾಂತದಲ್ಲಿ, ಒಂದು ಧ್ಯಾನಸ್ಥ ಸ್ಥಿತಿಯಲ್ಲಿ ಬರೆಯುತ್ತಿದ್ದೆವು. ಯಾವುದೇ ಒಂದು ವಿಷಯ ನಮ್ಮನ್ನು ಕಾಡದೇ ಇದ್ದರೆ ಬರೆಯಲಿಕ್ಕೆ ಹೋಗ್ತಲೇ ಇರಲಿಲ್ಲ. ಈಗ ಹಾಗಲ್ಲ, ಯಾವುದೋ ಒಂದು ರಾಜಕೀಯ ಸಮಸ್ಯೆ ತಗೊಳ್ಳೋದು ಬರೆದು ಬಿಡೋದು. ಹೊಂಡದ ಎಮ್ಮೆಗಳ ರೀತಿ ಆಗಿಹೋಗಿದ್ದಾರೆ. ಜೀವನ ಅಗಾಧವಾದುದು. ಬೇಕಾದಷ್ಟು ಅನುಭವಗಳು ಅದರಲ್ಲಿವೆ. ಪ್ರಕೃತಿ, ಮನುಷ್ಯ ಸಂಬಂಧ, ಸ್ನೇಹ, ಪ್ರೀತಿ... ಎಷ್ಟೊಂದು ಇವೆ. ಜೀವನದ ನಾನಾ ಅನುಭವಗಳನ್ನು ಯಾರು ತೋಡಿಕೊಳ್ಳುವನೋ ಅವನೇ ನಿಜವಾದ ಕವಿ. ಕುವೆಂಪು, ಬೇಂದ್ರೆ, ನರಸಿಂಹಸ್ವಾಮಿ, ಪುತಿನ ಯಾರನ್ನೇ ತೆಗೆದುಕೊಳ್ಳಿ ನಿಮಗೆ ಕಣ್ಣಿಗೆ ಕಟ್ಟುವುದು ಅವರ ಜೀವನಾನುಭವ. ಅಲ್ಲಿ ಸಾಮಾಜಿಕ ಕಳಕಳಿಯಿದೆ.
ಇಂಗ್ಲಿಷಿನಲ್ಲಿ ವರ್ಡ್ಸ್-ವರ್ತ್, ಶೆಲ್ಲಿ, ರವೀಂದ್ರನಾಥ ಟಾಗೋರ್ ನನ್ನ ಮೇಲೆ ತೀಕ್ಷ್ಣವಾದ ಪ್ರಭಾವ ಬೀರಿದವರು. ಮೆಟಾಫಿಸಿಕಲ್ ಆಟಿಟ್ಯೂಡ್ (ಆಧ್ಯಾತ್ಮದ ಭಾವ) ಸಿಕ್ಕಿದ್ದೇ ಟಾಗೋರ್ರಿಂದ. ಅವರ ಬರವಣಿಗೆ ಲೌಕಿಕವಾದ ನೆಲೆಯಲ್ಲಿ ನಿಲ್ಲುವುದಿಲ್ಲ. ಗೀತಾಂಜಲಿಯಲ್ಲಿ ಎಂತಹಾ ಉದಾತ್ತ ಸಂಗತಿಗಳು ಕಾಣುತ್ತವೆ ನಮಗೆ; 'ಬಿಕಾಸ್ ಐ ಲವ್ ಲೈಫ್ ಐ ಲವ್ ಡೆತ್ ಆ್ಯಸ್ವೆಲ್' ಜೀವನವನ್ನು ಪ್ರೀತಿಸುವಷ್ಟೇ ಸಾವನ್ನೂ ಪ್ರೀತಿಸುತ್ತೇನೆ ಎಂಬ ಸಾಲು ಬಹಳವಾಗಿ ಕಾಡಿದೆ. The child cries when the mother takes it left breast to right breast. ತಾಯಿ ಮಗುವಿಗೆ ಹಾಲೂಡಿಸುವಾಗ ಒಂದು ಮೊಲೆಯಿಂದ ಇನ್ನೊಂದಕ್ಕೆ ಕೊಂಡೊಯ್ಯುವಾಗ ಹೋ ಎಂದು ಅಳುತ್ತದೆ. ನಾನು ಕ್ಷೀರಪಾನದಲ್ಲಿ ಮಗ್ನವಾಗಿ ಹೋಗಿದ್ದೆ. ಆದರೆ ಅಲ್ಲಿ ಸರಕು ಮುಗಿದು ಹೋಗಿದೆ. ಹಾಗೇ ಜೀವನದ ಸರಕು. ಇನ್ನೊಂದು ಮೊಲೆಗೆ ಹೋಗುವುದನ್ನೇ ಹೊಸ ಜೀವನಕ್ಕೆ ಹೋಗುವ ಪರಿ ಎಂದು ಕವಿ ವರ್ಣಿಸಿದ್ದಾರೆ. ತಾಯಿ ಮೊಲೆಯೂಡಿಸುವ ವರ್ಣನೆಯಲ್ಲಿ ಸಾವು-ಬದುಕಿನ ಚಿತ್ರಣವನ್ನೇ ಕೊಡುತ್ತಾರೆ. ಎಂಥಾ ಅದ್ಭುತ ಅಲ್ವಾ?
ಅದೇ ರಾಮಕೃಷ್ಣ ಪರಮಹಂಸರಿಂದಲೂ ನಾನು ಪ್ರಭಾವಕ್ಕೆ ಒಳಗಾಗಿದ್ದೇನೆ. ಸೇಯಿಂಗ್ಸ್ ಆಫ್ ರಾಮಕೃಷ್ಣ ಕೃತಿಯಲ್ಲಿ ಎಷ್ಟೊಂದು ಉಪಮೆಗಳಿವೆ ಗೊತ್ತಾ? ಎಲ್ಲರಿಗೂ ಲೌಕಿಕ ಅನ್ನೋದು ಇರಲೇಬೇಕು ಅಂತನ್ನುವ ಅವರು ದೇವರು ನಗುವುದು ಎರಡು ಸಲ ಅಂತಾರೆ; ಅಣ್ಣ-ತಮ್ಮ ಈ ಭೂಮಿ ನಂದು, ಇಲ್ಲಿವರೆಗಿನ ಗಡಿ ನಂದು ಅಂತ ಜಗಳ ಆಡ್ತಾರಲ್ಲ ಆಗ ಮತ್ತು ವೈದ್ಯ ಹೇಳ್ತಾನಂತೆ, ಏನೂ ಹೆದರ್ಕೋಬೇಡಿ, ನಾನು ನೋಡ್ಕೊಳ್ತೀನಿ ಅನ್ನುವಾಗ. ಕಾಪಾಡೋನು ದೇವರು, ಆದರೆ ವೈದ್ಯ ನೋಡು ಹೇಗೆ ಸುಳ್ಳು ಹೇಳ್ತಾನೆ ಅಂತ. ಭೂಮಿ ಕೂಡ ಅಷ್ಟೆ, ಅದು ದೇವರಿಗೆ ಸೇರಿದ್ದು. ನನ್ನ ಸಂವೇದನೆಯನ್ನು ಫಲವತ್ತುಗೊಳಿಸಿದ ದಿನಗಳು ಅವೆಲ್ಲ.
ಕಾಡುತ್ತಲೇ ಇರುವ ಇಂಗ್ಲಿಷ್ ಚಿತ್ರಗಳು
ಇಂಗ್ಲಿಷ್ ಸಿನೆಮಾಗಳೆಂದರೆ ನಿಮಗೆ ಭಾರಿ ಹುಚ್ಚು ಎಂದು ಕೇಳಿದ್ದೇನೆ. ನಿಮ್ಮನ್ನು ಕಾಡಿದ ಅಂತಹ ಸಿನೆಮಾಗಳ ಬಗ್ಗೆ ಹೇಳಿ ಸರ್.
ಅಯ್ಯೋ ಹೌದಪ್ಪಾ, ಎಷ್ಟೊಂದು ಇಂಗ್ಲಿಷ್ ಸಿನೆಮಾಗಳನ್ನು ನೋಡುತ್ತಿದ್ದೆ. ನನ್ನ ಭಾಳ ನೆಚ್ಚಿನ ನಿರ್ದೇಶಕ ಡೇವಿಡ್ ಲೀನ್. ಡಾ.ಜುವಾಗೋ, ಅವೆಲ್ಲ ಮಹಾಕಾವ್ಯ ಇದ್ದ ಹಾಗೆ. ರ್ಯಾನ್ಸ್-ಡಾಟ್ ಅನ್ನೋನು ಒಂದು ಥೀಮ್ ತಕೊಂಡು ಸಿನೆಮಾ ಮಾಡುತ್ತಿರಲಿಲ್ಲ. ಪ್ರೇಮ, ರಾಜಕೀಯ, ಸಾಮಾಜಿಕ ಸಮಸ್ಯೆ ಎಲ್ಲವನ್ನು ಸೇರಿಸಿ ಚಿತ್ರ ಮಾಡ್ತಾ ಇದ್ದ. ಲಾರೆನ್ಸ್ ಆಫ್ ಅರೇಬಿಯಾದಂತಹ ಅದ್ಭುತವಾದ ಚಿತ್ರಗಳು ಈಗಲೂ ಕಾಡುತ್ತವೆ. ಚಿಕ್ಕವನಿದ್ದಾಗಿನಿಂದಲೂ ಇಂಗ್ಲಿಷ್ ಸಿನೆಮಾ ಹುಚ್ಚು. ನಾನು ಎಸ್ಎಸ್ಎಲ್ಸಿಯಲ್ಲಿದ್ದಾಗ ಸ್ಯಾಮಸನ್ ಆ್ಯಂಡ್ ಡೆಲೆಲಾ ನೋಡಿದ್ದೆ. ಇಟಲಿಯ ದೊಡ್ಡ ಡೈರೆಕ್ಟರ್ ಸೆಸಿಲ್ ಬಿ ಡೆಮಿಲಿ ತುಂಬಾ ಚೆನ್ನಾಗಿ ಚಿತ್ರ ತೆಗಿಯೋನು. ಪ್ಲಾಜಾ, ಇಂಪಿರಿಯಲ್ ಥಿಯೇಟರ್ಗಳಿಗೆ ಅದಕ್ಕೆಂದೇ ಹೋಗುತ್ತಿದ್ದೆ.
![]() |
ನಿಸಾರ್ ಹಸ್ತಾಕ್ಷರ... ನನ್ನ ಕಥಾ ಸಂಕಲನ ಕದ ತೆರೆದ ಆಕಾಶಕ್ಕೆ ಅವರು ಬರೆದ ಬೆನ್ನುಡಿ |
ರಾಷ್ಟ್ರಕವಿ ಮಾತು ಬಂದಾಗ ಮುನಿದ ಸಹೃದಯಿ
ಕನ್ನಡ ಕವಿಯೊಬ್ಬರನ್ನು ರಾಷ್ಟ್ರಕವಿ ಎಂದು ಘೋಷಿಸುವ ಪರಿಪಾಠವಿತ್ತು. ಅದು ಹೆಮ್ಮೆಯಾಗಿತ್ತು. ಜಿಎಸ್ಎಸ್ ಬಳಿಕ ನಿಮ್ಮನ್ನು ರಾಷ್ಟ್ರಕವಿ ಮಾಡುತ್ತಾರೆ ಎಂಬ ನಿರೀಕ್ಷೆಯೂ ಇತ್ತು. ಆದರೆ ಒಂದು ಸರಕಾರಕ್ಕೆ ಇಚ್ಚಾಶಕ್ತಿಯ ಕೊರತೆಯಿದ್ದರೆ ಹೀಗೆಲ್ಲ ಆಗಿಬಿಡುತ್ತದೆ......
ಹೋಗ್ರಿ ಅವೆಲ್ಲ ನಾನು ಹೇಳಲಿಕ್ಕೆ ಆಗುತ್ತೇನ್ರಿ. ನನಗೆ ನೀವು ಪಟ್ಟ ಕಟ್ಟುವಾಗ ನಾನೇ ಹೇಳ್ಕೊಂಡ್ರೆ? ಹೇಳಬಾರದು ಅದನ್ನೆಲ್ಲ. ಅದೆಲ್ಲ ಮುಗಿದು ಹೋದ ವಿಚಾರ ಬಿಟ್ಟುಬಿಡಿ. ಜನ ಹೇಳಬೇಕು ನಾನಲ್ಲ. ಅದರ ಬಗ್ಗೆ ಹೇಳೋದೇ ಬೇಡಿ ಪ್ಲೀಸ್. ಜೀವನದಲ್ಲಿ ನಾನು ತುಂಬ ಸಂತುಷ್ಟ. ಬರವಣಿಗೆಯಲ್ಲಿ ಇನ್ನೂ ನಾನು ತೃಪ್ತನಾಗಿಲ್ಲ. ಇನ್ನೂ ಹೊಸದು, ವೈವಿಧ್ಯಮಯವಾದುದು ಬರೆಯಬೇಕು ಎಂದು ಈಗಲೂ ತುಡಿಯುತ್ತದೆ. ಸುಮಾರು ಏಳು ಗದ್ಯದ ಕೃತಿಗಳನ್ನೂ ನಾನು ಬರೆದಿದ್ದೇನೆ. ಕಾವ್ಯದಲ್ಲಿ ಎಷ್ಟೋ ಅನುಭವಗಳನ್ನು ವಿಸ್ತಾರವಾಗಿ ಹೇಳಲು ಸಾಧ್ಯವಾಗದೇ ಹೋದಾಗ ಗದ್ಯದಲ್ಲಿ ಬರೆದೆ.
ಅಧ್ಯಯನವೇ ಇಲ್ಲದೆ, ಅನುಭವದ ಗೋಜಿಗೆ ಹೋಗದೇ ಹುಟ್ಟುವ ಕಾವ್ಯ, ಸಾಹಿತ್ಯವೇ ಈಗ ಹೆಚ್ಚಿದೆ...
ಜೀವನಾನುಭವ ಬಹಳ ಮುಖ್ಯವಪ್ಪಾ, ಜೀವನದ ಅನುಭವವನ್ನು ಎಷ್ಟು ದಕ್ಕಿಸಿಕೊಳ್ಳುತ್ತೀರೋ ಅಷ್ಟು ನೀವು ಶ್ರೀಮಂತರಾಗುತ್ತ ಹೋಗುತ್ತೀರಿ. ಇದರ ಜತೆಯಲ್ಲಿ ಅಧ್ಯಯನ. ಕವಿಯಾದವನ ಎದೆಯಲ್ಲಿ ಒಂದು ಕಿಡಿಯಿರುತ್ತದೆ. ನಮಗೆ ಗೋವಿನ ಹಾಡು ಕೇಳಿದಾಕ್ಷಣ ಕಣ್ಣಲ್ಲಿ ನೀರು ಬಂದುಬಿಡುತ್ತದೆ, ಯಾಕೆ ಹೇಳಿ? ಅದು ನಮ್ಮ ಹೃದಯವನ್ನು ಕಲುಕುತ್ತದೆ. ಕಲಕದ ಸಂವೇದನೆ, ಕಾಡದೇ ಇರುವಂತಾದ್ದು ಸಾಹಿತ್ಯ ಅಲ್ಲ. ಇವತ್ತು ಬಂದು ಮಳೆ ಹಾತೆಗಳ ರೀತಿಯಲ್ಲಿ ಮಾಯವಾಗಿ ಹೋಗಬಾರದು. ಜೀವನವನ್ನು ಉತ್ತಮಪಡಿಸುವಂತಹ, ಮನಸ್ಸಿಗೆ ಪ್ರಶಾಂತತೆ ನೀಡುವ, ಸಮಾಜಕ್ಕೆ ಸೌಹಾರ್ದತೆಯನ್ನು ಕೊಡುವ ಸಾಹಿತ್ಯ ನಮಗೆ ಬೇಕು. ಸಾಹಿತ್ಯ ಜನಗಳ ನಡುವೆ ರಸಸೇತುವೆಗಳನ್ನು ಕಟ್ಟಬೇಕು. ಯಾರಿಗೂ ಅಂತಹ ತುಡಿತವಿಲ್ಲ. ರಾಜಕೀಯ, ಸಿನೆಮಾ ಮತ್ತು ಕ್ರಿಕೆಟ್ನಿಂದ ನಮ್ಮವರ ಸಾವಿರಾರು ಗಂಟೆಗಳು ಹಾಳಾಗಿ ಹೋಗುತ್ತಿವೆ.
ಕವಿಯಾದವನಿಗೆ ಹುಟ್ಟಿನಿಂದ ಎದೆಯಲ್ಲಿ ಒಂದು ಕಿಡಿಯಿರುತ್ತದೆ. ಆ ಕಿಡಿಯನ್ನು ನಿಜವಾದ ಕವಿ ಕೆಂಡವಾಗಿ ಮಾಡಿಕೊಳ್ಳಬೇಕು. ಹೇಗೆ? ನಿಮ್ಮ ಸ್ವಂತ ಓದಿನಿಂದ, ಬೇರೆಯವರು ಬರೆದಿರುವುದರಿಂದ ವಿಮಶರ್ೆ ಮಾಡಬೇಕು. ಅಧ್ಯಯನ, ಲೋಕಾನುಭವ, ಸಿದ್ಧತೆಗಳಿಂದ ಕಿಡಿಯನ್ನು ಕೆಂಡಮಾಡಿಕೊಳ್ಳಲು ಸಾಧ್ಯವಿದೆ. ಆ ಬೆಳಕು ಮತ್ತು ಕಾವಿನಿಂದ ಕಾವ್ಯ ಹುಟ್ಟಿಕೊಳ್ಳುತ್ತದೆ. ಕವಿಗೆ ತೃಪ್ತಿ ಅನ್ನುವುದೇ ಇರಬಾರದು, ಅದು ಅವನ ಪರಿಸಮಾಪ್ತಿಯಾಗುತ್ತದೆ.
![]() |
ನನ್ನ ಮಗನಿಗೂ ಅವರ ಆಶೀರ್ವಾದ... |
ರವೀಂದ್ರನಾಥ ಟಾಗೋರರು ತಮ್ಮ 80ನೇ ವರ್ಷಕ್ಕೆ ತೀರಿಕೊಂಡರು. ಕೊನೆಯ ಐದಾರು ವರ್ಷ ಅವರು ಏನನ್ನೂ ಬರೆಯಲಿಲ್ಲ. ಅವರೊಳಗಿನ ಸೆಲೆ ಮುಗಿದು ಹೋಗಿರುವುದು ಅವರಿಗೆ ಗೊತ್ತಾಗಿತ್ತು. ಹಾಗಾಗಿ ಅವರು ಪೈಂಟಿಂಗ್ ಶುರುಮಾಡಿದರು. ಸುಮಾರು ಐದಾರು ಸಾವಿರ ಚಿತ್ರಗಳನ್ನು ರಚಿಸಿದ್ದಾರೆ. ಅವನ್ನೆಲ್ಲ ನೋಡಿದರೆ ಮೆಟಾಫಿಸಿಕಲ್ ಭಾವ ಕಾಣುತ್ತದೆ, ಅರ್ಥವೇ ಆಗದು. ಭ್ರಾಮಕ ಜಗತ್ತು ಅನಿಸುತ್ತದೆ. ಹಾಗೆ ವಯಸ್ಸಾಗುತ್ತ ಪ್ರತಿಭಾಶಕ್ತಿ ಕುಂದುತ್ತಾ ಹೋಗುತ್ತದೆ. ಒಬ್ಬ ಲೇಖಕ, ಕವಿಯ ಜೀವನದಲ್ಲಿ ಒಂದು ಘಟ್ಟವಿರುತ್ತದೆ. ಅಲ್ಲಿಯ ವರೆಗೆ ಉಕ್ಕುತ್ತಾ ಇರುತ್ತದೆ. ಆಮೇಲೆ ಅಧೀರರಾಗುತ್ತ ಹೋಗುತ್ತೇವೆ. ಹಾಗಾಗಿ ಆ ಘಟ್ಟದಲ್ಲಿ ಪರ್ಯಾಯ ಮಾರ್ಗ ಕಂಡುಕೊಳ್ಳಬೇಕು.
ಮತ್ತದೇ ಸಂಜೆ ಅದೇ ಏಕಾಂತ!
ತಲತ್ ಮೆಹಮೂದ್ನ ಗಝಲ್ಗಳು ನನಗೆ ಬಹಳ ಇಷ್ಟ. ತುಂಬ ಕಾಡಿದ ಆತನ ಒಂದು ಹಾಡು, ಫಿರ್ ವಹೀ ಶಾಮ್ ವಹೀ ಗಮ್, ವಹೀ ತನಹಾಯಿ ಅಂತ. ಮತ್ತದೇ ಬೇಸರ, ಅದೇ ಸಂಜೆ, ಅದೇ ಏಕಾಂತ, ನಿನ್ನ ಜತೆ ಇಲ್ಲದೆಯೇ ಮನಸ್ಸು ವಿಭ್ರಾಂತ... ಪದ್ಯ ಬರೆಯಲು ನನಗೆ ಅದೇ ಸ್ಫೂರ್ತಿ. ಆ ಮೂಲಕ ಕನ್ನಡದಲ್ಲಿ ಗಝಲ್ ಪ್ರಯತ್ನ ಮಾಡಿದ್ದೆ.
ಕನ್ನಡ ಶಾಲೆಗೆ ಸೇರಿಸಿದ ಅಪ್ಪ!
ಸರ್ಕಾರಿ ಅಧಿಕಾರಿಯಾಗಿದ್ದ ನನ್ನ ತಂದೆ, ಈ ನಾಡಿಗೆ ಸ್ವಾತಂತ್ರ್ಯ ಬರುವುದಕ್ಕೆ ಮೊದಲೇ ಅವರಲ್ಲಿದ್ದ ದೂರದೃಷ್ಟಿಯಿಂದಾಗಿಯೇ ನನ್ನನ್ನು ಕನ್ನಡ ಶಾಲೆಗೆ ಸೇರಿಸಿದರು. ದೊಡ್ಡ ಮಾವಳ್ಳಿಯಲ್ಲಿ ಇನ್ನೂರು ಮುನ್ನೂರು ಮುಸ್ಲಿಂ ಕುಟುಂಬಗಳಿದ್ದವು, ಅವರ ಮಕ್ಕಳೆಲ್ಲ ಉರ್ದು ಶಾಲೆಗೆ ಸೇರಿದರೆ ನಾನು ಮತ್ತು ನನ್ನ ತಮ್ಮನನ್ನು ಕನ್ನಡ ಶಾಲೆಗೆ ಸೇರಿಸಿದರು. ಸ್ವಾತಂತ್ರ್ಯ ಬಂದ ಮೇಲೆ ಇಂಗ್ಲಿಷ್ ತಗ್ಗಿ ಕನ್ನಡ ಬೇಕಾಗುತ್ತೆ ಎಂದು ನನ್ನ ತಂದೆ ಎಲ್ಲರಿಗೆ ಹೇಳುತ್ತಿದ್ದರು. ಅದು ನಿಜವೂ ಆಯಿತು, ಪಾಲಿನ ಭಾಗ್ಯವೂ ಆಯಿತು.
ನಿತ್ಯೋತ್ಸವಕ್ಕೆ ಸುವರ್ಣ ಮಹೋತ್ಸವ
ನಿಸಾರ್ ಅವರ ನಿತ್ಯೋತ್ಸವ ಹುಟ್ಟಿದ್ದು 1968ರಲ್ಲಿ. ಅಂದರೆ ಐವತ್ತು ವರ್ಷಗಳು ತುಂಬಿ ಹೋಗಿವೆ. ಪ್ರಪಂಚದ ಮೂಲೆಮೂಲೆಯಲ್ಲಿ ಅದು ಕನ್ನಡದ ಕಂಪನವನ್ನು ಸೃಷ್ಟಿಸಿದೆ. 'ನಿತ್ಯೋತ್ಸವ' ಕೃತಿ ಈವರೆಗೆ 26 ಮುದ್ರಣಗಳನ್ನು ಕಂಡಿವೆ. ಪ್ರಿಂಟ್ ಹಾಕಿದ ಕೂಡಲೇ ಸಾವಿರಾರು ಪ್ರತಿಗಳು ಖಾಲಿ. ರಾಜರತ್ನಂ ಬರೆದ ರತ್ನನ ಪದಗಳು, ಡಿವಿಜಿ ಅವರ ಮಂಕುತಿಮ್ಮನ ಕಗ್ಗ, ಕೆಎಸ್ನ ಅವರ ಮೈಸೂರು ಮಲ್ಲಿಗೆ ಕೃತಿಗಳಿಗೂ ಇದೇ ಭಾಗ್ಯವಿದೆ. ಒಬ್ಬ ಕವಿ ಜೀವಂತ ಇರುವಾಗಲೇ ಎಂಥ ಸಂಭ್ರಮ ಅಲ್ವೇ? ನಾಡಿನಾದ್ಯಂತ ಈ ಸಂಭ್ರಮವನ್ನು ಆಚರಿಸಲು ಸಂಘಟನೆಗಳು ಮುಂದಾಗಬೇಕು. ಅದು ನಾವು ಕವಿಗೆ ನೀಡುವ ಗೌರವವಾಗಲಿದೆ. ನಮ್ಮ ಸಂದರ್ಶನದ ಕೊನೆಯಲ್ಲಿ ನಿತ್ಯೋತ್ಸವ ಕವಿತೆಯನ್ನು ನಿರರ್ಗಳವಾಗಿ ಪಠಣ ಮಾಡಿ ದಂಗುಬಡಿಸಿಬಿಟ್ಟರು.

ಅಪಾಯಕಾರಿ ಅಂಕಣಗಳು!
ನಮ್ಮ ಸಾಹಿತ್ಯದ ದೊಡ್ಡ ಅಪಾಯ ಪತ್ರಿಕಾ ಅಂಕಣಗಳು. ಅಲ್ಲಿ ಜೀವನಾನುಭವವೇ ಇರುವುದಿಲ್ಲ. ರಾಜಕೀಯವೇ ಜಾಸ್ತಿ. ದಿನನಿತ್ಯದ ಆಗುಹೋಗುಗಳ ಬಗ್ಗೆ ಬರಿತಾನೇ ಇರ್ತಾರೆ. ಆದರೆ, ಇದನ್ನು ಮೀರಿ ಮನುಷ್ಯನ ಪ್ರಜ್ಞೆ ಎತ್ತರಕ್ಕೆ ಹೋಗಬೇಕು. ಜೀವನಕ್ಕೊಂದು ಹೊಸ ದೃಷ್ಟಿಕೋನ ಕೊಡುವ ಪ್ರಯತ್ನವೇ ಕಾಣುವುದಿಲ್ಲ.
ಸಂದರ್ಶನ: ಮಂಜುನಾಥ್ ಚಾಂದ್
ಕಾಮೆಂಟ್‌ಗಳು