ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಸುತ್ತು…

ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದ ದಿನ ಬೆಳ್ಳಂಬೆಳಗ್ಗೆಯೇ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಂದ ಹೊರಗೆ ಹೋಗಬೇಕಾಗಿ ಬಂತು. ಎಲ್ಲವನ್ನೂ ಮುಗಿಸಿ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಬಂದಾಗ ಮೆರವಣಿಗೆ ಬೆವರು ಇಳಿಸಿಯಾಗಿತ್ತು. ಶೃಂಗರಿಸಿಕೊಂಡಿದ್ದ ಆನೆಗಳು, ಕುದುರೆಗಳು ಕಾಲೆಳೆದುಕೊಂಡು ಬದಿಗೆ ಸರಿದಿದ್ದವು. ಅಧ್ಯಕ್ಷರನ್ನು ಹೊತ್ತ (ಸಾರೋಟು) ವಾಹನ ಇನ್ನೇನು ಒಳ ಪ್ರವೇಶ ಪಡೆಯುವ ತರಾತುರಿಯಲ್ಲಿತ್ತು. ಅಷ್ಟು ಹೊತ್ತಿಗೇ ಅಭಿಮಾನಿಗಳು, ಕನ್ನಡದ ಕಟ್ಟಾಳುಗಳೆಲ್ಲ ಮುತ್ತಿಗೆ ಹಾಕಿದ್ದರು. ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಗೋ ಮಾಡಿ ಕೆಳಗೆ ಇಳಿದಿದ್ದರು. ಹಿರಿಯ ಜೀವ ವೆಂಕಟಸುಬ್ಬಯ್ಯನವರಿಗೆ ಅದು ಕಷ್ಟವಾಯಿತು. ನಲ್ಲೂರು ಪ್ರಸಾದ್ ಕೈ ಹಿಡಿದು ಇಳಿಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ನೆರವಿಗೆ ಬಂದರು. ಹೇಗೋ ಮಾಡಿ ಅಧ್ಯಕ್ಷರನ್ನು ಹಿಂಭಾಗಿಲಿನಿಂದ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು. ಪೊಲೀಸರು, ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು. ಮುಂದೆ ಪ್ರಧಾನ ವೇದಿಕೆಯಲ್ಲಿ ಭಾಷಣಗಳು ಶುರುವಾದವು…. ಸಭಾಂಗಣದ ಮೂರು ದಿಕ್ಕಿನಲ್ಲಿ ಜನವೋ ಜನ. ಎಲ್ಲಿಂದ ಇಣುಕಿದರೂ ವೇದಿಕೆಯಲ್ಲಿ ಯಾರಿದ್ದಾರೆ ಎಂಬುದೇ ಕಾಣಿಸದ ಸ್ಥಿತಿ. ಧೂಳೋ ಧೂಳು…! ಭಾಷಣವನ್ನು ಕೇಳಿಸಿಕೊಳ್ಳಲು, ಸಾಹಿತಿಗಳನ್ನು ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳ ದಂಡನ್ನು ನೋಡಲು ಕೆಲ ಹುಡುಗರು ಆ ಮೈದಾನದ ಮೂಲೆಯಲ್ಲಿದ್...