ತಿಮಿರ

ತಿಮಿರ (ಕಥೆ) ಅಷ್ಟು ದೂರಕ್ಕೆ ನೀಲಿ ನೀಲಿಯಾಗಿ ಪ್ರಖರವಾಗಿ ಹೊಳೆಯುತ್ತಿರುವುದು ಎಂಥಾ ಬೆಳಕು ಎಂದು ಚಾವಡಿಯಲ್ಲಿ ಮಲಗಿದ್ದ ತಿಮಿರ ಕತ್ತನ್ನು ಒಮೆ ಉದ್ದಕ್ಕೆ ನೀಕಿ ನೋಡೋ ಹೊತ್ತಿಗೆ ಬ್ಯಾಟರಿ ಬೆಳಕು ಹಿಡಿದಿದ್ದ ಅಪ್ಪ `ಯಾವುದೊ ಕರಿ ಮುಸುಡಿ ಕಾಡ್‌ಬೆಕ್ಕು ಕೊಟ್ಗಿ ಒಳಗ್ ಬಂದು ಕೂತ್ಕಂಡಿತ್' ಅಂತ ಹೇಳುವುದಕ್ಕೂ ಸರಿಹೋಯ್ತು. ಎಲ್ಲರೂ ಕುತೂಹಲದಿಂದ ಎಂತದಿದು ಅಂದ್ಕಂಡ್ ನೋಡ್ತಾ ಇದ್ರೂ ಬೆಳಕಿನ ಪ್ರಖರಕ್ಕಾಗಲೀ, ಜನರ ಗುಸು ಗುಸುಗಾಗಲೀ ಬೆಕ್ಕಿನ ದೇಹ ಒಂಚೂರೂ ಅಲುಗಾಡಲಿಲ್ಲ. ಬಿಟ್ಟ ಕಣ್ಣು ಬಿಟ್ಕಂಡ್ ದಿಟ್ಟಿಸುತ್ತಲೇ ಇತ್ತು. ಆಕಾಶವೇ ಕಳಚಿ ಬೀಳೋ ಹಾಗೆ ಬರ್ರೋ..... ಅಂತ ಸುರಿಯುತ್ತಿರುವ ಈ ಮಳೆಯ ಜೋರಿಗೆ ಹೆದರಿ ಎಲ್ಲಿಂದಲೋ ಓಡಿ ಬಂದಿದ್ದ ಕಾಡ್‌ಬೆಕ್ಕು ಅರ್ಧ ನಿತ್ರಾಣವಾಗಿ ಹೋಗಿತ್ತು. ಮನೆಯಂಗಳದಲ್ಲಿ ಒಂದು ಪುಟ್ಟ ನಾಯಿ ಕಂಡರೂ `ಹಚಾ... ಹತ್...' ಎಂದು ಬೆದರಿಸುವ ಅಪ್ಪ ಶಂಕರಣ್ಣನಿಗೇ ಕರುಣೆ ಬಂದು `ಬದ್ಕಣಲಿ' ಎಂಬಂತೆ ಸುಮನಾದ. ಆದ್ರೆ, ನಮನೆ ಬಡಕಲು ದೇಹದ ನಾಯಿ ದಾಸ ಎಲ್ಲೋಯ್ತು? ಬಿಸಿ ಬೂದಿಯೊಳಗೆ ಮೂತಿ ಸಿಕ್ಸ್‌ಕೊಂಡು ಮಲ್ಕೊಂಡ್ ಬಿಟ್ಟಿರಬೇಕು ಮುಂಡೇದು ಎಂದು ಮನೆ ಮಂದಿ ನಾಯಿಯನ್ನು ಶಪಿಸುತ್ತಾ ಮಲಗೋಕೆ ಅಣಿಯಾದರು. ಇಷ್ಟಾದರೂ ತಿಮಿರನಿಗೆ ನಿದ್ದೆ ಕಣ್ಣಿಗೆ ಹತ್ತಲಿಲ್ಲ. ಕತ್ತಲ ರಾಶಿಯನ್ನೆಲ್ಲ ಆಪಾದಮಸ್ತಕವಾಗಿ ಆಪೋಶನ ತೆಗೆದುಕೊಂಡವರಂತೆ ಸುರಿಯುತ್ತಿದ್ದ ಮಳೆ ಈ ರಾತ್ರಿಯ ಅಗಾಧ ನೀರವತೆಯಿಂದಾಗಿ ಇನ...