ಅವರ ಸುಸ್ವರಕ್ಕೆ ಸಾವಿಲ್ಲ

 ಕೊನೆಯ ನಿಲ್ದಾಣ ತಲುಪಿದ ಅಪರ್ಣಾ!

ಮಂಜು

ತಾಸುಗಟ್ಟಲೆ ಹೊತ್ತಿನಿಂದ ಕಾಯುತ್ತ ನಿಂತವರನ್ನು ಸರಿಯಾದ ಫ್ಲಾಟ್ಫಾರ್ಮ್ ತಲುಪಿಸಿ, ಪ್ರಯಾಣದ ನಡುವೆ ಮೈಮರೆತು ಕುಂತವರನ್ನು ಸರಿಯಾದ ನಿಲ್ದಾಣದಲ್ಲಿ ಇಳಿಸಿ ಅಪರ್ಣಾ ನಿರ್ಗಮಿಸಿದ್ದಾರೆ.


ಆದರೆ ಅವರ ಸುಮಧುರ ಕಂಠ ಇಲ್ಲಿ ಚಿರಸ್ಥಾಯಿಯಾಗಿದೆ. ಕನ್ನಡಿಗರ ಕಿವಿಗಳಿಗೆ ಅದು ಸದಾ ಕೇಳಿಸುತ್ತಿರುತ್ತದೆ. ‘ಪ್ರಯಾಣಿಕರ ಗಮನಕ್ಕೆ, ಹುಬ್ಬಳ್ಳಿ-ಧಾರವಾಡ-ಮಂಗಳೂರು ನಡುವೆ ಸಂಚರಿಸುವ ಬಸ್ಸು ಇನ್ನು ಕೆಲವೇ ನಿಮಿಷಗಳಲ್ಲಿ ಫ್ಲಾಟ್ಫಾರ್ಮ್ ಸಂಖ್ಯೆ ಆರರಲ್ಲಿ ಬಂದು ನಿಲ್ಲಲಿದೆ ಎನ್ನುವ ಸಂದೇಶದಿA ಮೊದಲ್ಗೊಂಡು, ‘ರೈಲು ಈಗ ಮಹಾತ್ಮಾ ಗಾಂಧಿ ರಸ್ತೆಗೆ ತಲುಪಲಿದೆ. ಬಾಗಿಲುಗಳು ಬಲಕ್ಕೆ ತೆರೆಯಲಿದೆ. ಇಳಿಯುವ ಮುನ್ನ ಅಂತರದ ಬಗ್ಗೆ ಗಮನವಿರಲಿ ಎಂಬ ಮೆಟ್ರೊ ರೈಲಿನ ಧ್ವನಿಯ ತನಕ ಅಪರ್ಣಾ ಎಲ್ಲರಿಗೂ ಚಿರಪರಿಚಿತ.

ಅಪರ್ಣಾ ವಸ್ತಾರೆ ಅವರ ಧ್ವನಿ ಇಷ್ಟಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ರಾಜ್ಯದ ಉದ್ದಗಲಕ್ಕೂ ನಡೆಯುವ ಕಾರ್ಯಕ್ರಮಗಳಲ್ಲಿ, ಉತ್ಸವಗಳಲ್ಲಿ ಅವರು ನಿರೂಪಣೆಗೆಂದು ನಿಂತುಬಿಟ್ಟರೆ ಕಾರ್ಯಕ್ರಮದ ಸಂಘಟಕರು ನಿರಾತಂಕವಾಗಿ ಇದ್ದುಬಿಡಬಹುದಿತ್ತು. ಯಾವ ಅವ್ಯವಸ್ಥೆ, ಅಪಸವ್ಯಗಳು ನಡೆಯದ ಹಾಗೆ ಕಾರ್ಯಕ್ರಮಗಳನ್ನು ನಿಭಾಯಿಸಿಕೊಂಡು ಹೋಗುವ ಚಾಕಚಕ್ಯತೆ ಅಪರ್ಣಾ ಅವರಿಗೆ ಸಿದ್ಧಿಸಿತ್ತು. ಸಂಘಟಕರು ಕಾರ್ಯಕ್ರಮದ ಮಧ್ಯದಲ್ಲಿ ಬಂದು ಯಾವುದೇ ಬದಲಾವಣೆಗಳನ್ನು ಹೇಳಿದರೂ, ಯಾವುದೋ ಅತಿಥಿಗಳ ಬದಲಿಗೆ ಇನ್ಯಾರೋ ಅತಿಥಿಗಳು ಬಂದರೂ ಯಾವ ಅಳುಕೂ ಇಲ್ಲದೆ ತಮ್ಮದೇ ಆದ ಮಾತಿನ ಶೈಲಿಯ ಮೂಲಕ ಅದಕ್ಕೆ ಹೊಸ ಆಯಾಮವನ್ನೇ ನೀಡುತ್ತಿದ್ದರು. ತಾಸುಗಟ್ಟಳೆ ನಿರೂಪಣೆ ಮಾಡುತ್ತಲೇ ಇದ್ದರೂ ಅವರು ತಮ್ಮ ನಿರೂಪಣೆಯಲ್ಲಿ ಹಿಡಿತ ಕಳೆದುಕೊಳ್ಳುತ್ತಿರಲಿಲ್ಲ. ಒಂದೇ ರೀತಿಯ ರಿಧಂನ್ನು ಕಾಯ್ದುಕೊಳ್ಳುತ್ತಿದ್ದರು.

ಯಾರೀ ಹೆಣ್ಣುಮಗಳು, ಇಷ್ಟು ಚೆನ್ನಾಗಿ ಮಾತನಾಡುತ್ತಾಳೆ? ಇವಳ ಮಾತಿನಲ್ಲಿ ಕನ್ನಡ ಸಿಹಿಗನ್ನಡವಾಗಿದೆ...!” ಎಂದು ವರನಟ ರಾಜ್ಕುಮಾರ್ ಅವರು ಮೆಚ್ಚುಗೆಯಿಂದ ಮಾತನಾಡಿದ್ದರಂತೆ. ಪ್ರಧಾನಿ, ರಾಷ್ಟçಪತಿ, ರಾಜ್ಯಪಾಲರು, ಮುಖ್ಯಮಂತ್ರಿಯAತಹ ಗಣ್ಯಾತಿಗಣ್ಯರು ಭಾಗವಹಿಸಿದ ಕಾರ್ಯಕ್ರಮಗಳನ್ನು ಲೀಲಾಜಾಲವಾಗಿ ನಿರೂಪಣೆ ಮಾಡುತ್ತ ಅವರೆಲ್ಲರೂ ಪ್ರಶಂಸೆಯ, ಅಚ್ಚರಿಯ ಕಣ್ಣುಗಳಿಂದ ನೋಡುವಂತೆ ಮಾಡಿದವರು ಅಪರ್ಣಾ.

ಒಂದು ಕಾರ್ಯಕ್ರಮದ ನಿರೂಪಕರು ತಮ್ಮ ಅಧಿಕಪ್ರಸಂಗಿತನ, ಪೆದ್ದುತನದಿಂದ ಮುಜುಗರದ ಸನ್ನಿವೇಶ ಸೃಷ್ಟಿಸುವ ಸಾಧ್ಯತೆಗಳಿರುತ್ತವೆ. ಸಿದ್ಧತೆ ಮಾಡಿಕೊಳ್ಳದೆ ಸಭಿಕರ ನಗೆಪಾಟಲಿಗೆ ಗುರಿಯಾಗುವ ಪ್ರಕರಣಗಳೂ ಇರುತ್ತವೆ. ಅಪರ್ಣಾ ಮಾತ್ರ ತಮ್ಮ ನಗು, ನಯ-ವಿನಯ, ವಿಟ್ಗಳನ್ನು ಬೆರೆಸಿದ ಮಾತಿನಿಂದ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದರು. ಅವರ ಕನ್ನಡ ನುಡಿಗಳು ಸುಸ್ಪಷ್ಟವಾಗಿದ್ದವು, ಶುದ್ಧವಾಗಿದ್ದವು. ಅವು ನಿರರ್ಗಳವಾಗಿ ಹರಿದುಬರುತ್ತಿದ್ದವು. ಆದರೆ ಅದಷ್ಟೇ ಅವರ ಪ್ರತಿಭೆ ಆಗಿತ್ತೇ? ಖಂಡಿತ ಇಲ್ಲ. ಅವರಿಗೆ ಭಾಷೆ ಮತ್ತು ವಿಷಯದ ಮೇಲೆ ಹಿಡಿತವಿತ್ತು, ಅವರ ನಿರೂಪಣೆಯ ಹಿಂದೆ ಓದಿನ ಶಕ್ತಿಯಿತ್ತು. ಅದಕ್ಕೊಂದು ಲಯವಿತ್ತು. ಯಾವುದೇ ವಿಚಾರವನ್ನು ಗ್ರಹಿಸುವ ಮತ್ತು ಹಾಗೆ ಗ್ರಹಿಸಿದ್ದನ್ನು ಅಷ್ಟೇ ಸಶಕ್ತವಾಗಿ ಮಂಡಿಸುವುದು ಅವರಿಗೆ ಗೊತ್ತಿತ್ತು. ಕೇವಲ ನಿರೂಪಣೆ ಮಾತ್ರವಲ್ಲ ಒಬ್ಬ ಭಾಷಣಕಾರರಾಗಿಯೂ ವಿಚಾರಪ್ರಚೋದಕವಾಗಿ ಮಾತನಾಡುವಲ್ಲಿಯೂ ಅವರು ಗೆಲುವನ್ನು ಸಾಧಿಸಿದ್ದರು.

ಜೀವನ ಒಂದು ನಿತ್ಯೋತ್ಸವ. ಹಕ್ಕಿ ಹಾರೋದು ಒಂದು ಸಂಭ್ರಮ, ಹೂವು ಅರಳುವುದು ಒಂದು ಸಂಭ್ರಮ. ಆದರೆ ಅದನ್ನು ನೋಡುವ ದೃಷ್ಟಿ ನಮಗೆ ಬರಬೇಕು. ಇಷ್ಟು ಕೋಟಿ ಜನ ಇದ್ದಾರೆ ಅಂದರೆ ಅಷ್ಟು ಕೋಟಿ ಮನಸ್ಸುಗಳಿರುತ್ತವೆ, ಅಷ್ಟು ಕೋಟಿ ಆಸೆ-ನಿರಾಶೆಗಳಿರುತ್ತವೆ ಎಂಬ ಅವರ ಮಾತುಗಳು ಇದಕ್ಕೆ ಸಾಕ್ಷಿ.

ಇವೆಲ್ಲಕ್ಕೆ ಮುಖ್ಯ ಕಾರಣ ಅವರ ಮನೆಯಲ್ಲಿ ಸಾಹಿತ್ಯಕವಾದ ವಾತಾವರಣವಿತ್ತು. ಯಾಕೆಂದರೆ ಅಪರ್ಣಾ ತಂದೆ ನಾರಾಯಣ ಸ್ವಾಮಿ ಅವರು ಪತ್ರಕರ್ತರಾಗಿದ್ದರು. ಹಾಗಾಗಿ ಬಾಲ್ಯದಿಂದಲೇ ಓದಿನ ಸಾಂಗತ್ಯ ಲಭಿಸಿತ್ತು. ಜೊತೆಗೆ ಸಾಹಿತಿಗಳು, ಪತ್ರಕರ್ತರು, ಸಿನೆಮಾ ನಿರ್ದೇಶಕರ ಒಡನಾಟವೂ ಇತ್ತು. ಇದು ಅವರ ಬೆಳವಣಿಗೆಗೆ ಪೂರಕವಾಗುತ್ತ ಹೋಯಿತು. ಖ್ಯಾತ ಚಿತ್ರನಿರ್ದೇಶಕ ಪುಟ್ಟಣ್ಣ ಕಣಗಾಲ್ ಹೇಳಿಕೇಳಿ ನಾರಾಯಣ ಸ್ವಾಮಿಯವರಿಗೆ ಆಪ್ತರು. ತಮ್ಮಮಸಣದ ಹೂ ಚಿತ್ರದ ಒಂದು ನಿರ್ದಿಷ್ಟ ಪಾತ್ರಕ್ಕೆ ಅಪರ್ಣಾ ಬೇಕೇಬೇಕು ಎಂದು ಕಣಗಾಲ್ ಹಠಕ್ಕೆ ಬಿದ್ದರು. ಒಲ್ಲದ ಮನಸ್ಸಿನಿಂದ ಮಗಳನ್ನು ಸಿನೆಮಾದಲ್ಲಿ ಅಭಿನಯಿಸಲು ಒಪ್ಪಿಗೆ ಕೊಟ್ಟಿದ್ದರು. ಅದರ ಫಲವಾಗಿ ೧೯೮೪ರಲ್ಲಿ ತೆರೆಕಂಡಮಸಣದ ಹೂ ಚಿತ್ರದಲ್ಲಿ ಅಪರ್ಣಾ ಬಾಲನಟಿಯಾಗಿ ಕಾಣಿಸಿಕೊಂಡರು. ಮಾತ್ರಲ್ಲ ಅದ್ಭುತವಾಗಿ ಅಭಿನಯಿಸಿ ಮೆಚ್ಚುಗೆಯನ್ನೂ ಗಳಿಸಿದರು.

ಒಬ್ಬ ಸಿನೆಮಾ ಪತ್ರಕರ್ತರಾಗಿ ಚಿತ್ರರಂಗವನ್ನು ತೀರಾ ಹತ್ತಿರದಿಂದ ಕಂಡಿದ್ದ ನಾರಾಯಣ ಸ್ವಾಮಿ ಅವರು ಮಗಳು ಸಿನೆಮಾ ಸೆಳೆತಕ್ಕೆ ಸಿಲುಕದಂತೆ ನೋಡಿಕೊಂಡರು. ಇದರಿಂದಾಗಿ ಹಿರಿತೆರೆಯಿಂದ ಬಹಳ ಕಾಲ ದೂರವೇ ಇದ್ದ ಅಪರ್ಣಾ ಮತ್ತೆ ಕಾಣಿಸಿಕೊಂಡಿದ್ದು ನಟಿಯಾಗಿ ಅಲ್ಲ, ಉದ್ಘೋಷಕಿಯಾಗಿ. ಬೆಂಗಳೂರು ಆಕಾಶವಾಣಿಯ ಕಾರ್ಯಕ್ರಮಗಳಲ್ಲಿ ಅಪರ್ಣಾ ಅವರ ಧ್ವನಿ ಕೇಳಲು ಆರಂಭವಾಯಿತು. ಅದು ೧೯೯೦ರ ದಶಕದಲ್ಲಿ. ಕ್ರಮೇಣ ದೂರದರ್ಶನದಲ್ಲಿಯೂ ಅವರ ಸಿರಿಕಂಠ ಕೇಳಲು ಆರಂಭವಾಯಿತು. ಎಫ್ಎಂ ರೇಡಿಯೋ ಜಾಕಿಯಾಗಿ ಅವರ ನಿರೂಪಣೆ ಜನಮಾನಸವನ್ನು ಗೆಲ್ಲತೊಡಗಿತು. ಯಾಕೆಂದರೆ ಅವರು ಮಂಡಿಸುವ ವಿಚಾರಗಳು ಸ್ಪಷ್ಟವಾಗಿರುತ್ತಿದ್ದವು, ಧ್ವನಿ ಸುಮಧುರವಾಗಿರುತ್ತಿತ್ತು. ಅವರ ಸ್ವರ ಲಾಲಿತ್ಯಕ್ಕೆ ತಲೆದೂಗದವರು ಇರಲಿಲ್ಲ.

ನಂತರದ ದಿನಗಳಲ್ಲಿ ಕಿರುತೆರೆ ಧಾರಾವಾಹಿಗಳಲ್ಲಿ ಅವಕಾಶಗಳು ಅವರನ್ನು ಅರಸಿ ಬಂದವು. ‘ಪ್ರೀತಿ ಇಲ್ಲದ ಮೇಲೆ ಧಾರಾವಾಹಿಯ ಪಾತ್ರ ಅವರನ್ನು ಮತ್ತೊಮ್ಮೆ ಗೆಲ್ಲಿಸಿತ್ತು. ಅಲ್ಲಿ ಅವರಿಗೆ ಅತ್ಯುತ್ತಮ ನಟಿಯ ಪುರಸ್ಕಾರವೂ ದೊರಕಿತ್ತು. ಮೂಡಲಮನೆ, ಮನ್ವಂತರ ಮತ್ತು ಮುಕ್ತ ಮುಕ್ತ ಸೀರಿಯಲ್ಗಳ ಅಭಿನಯದಲ್ಲಿಯೂ ಅವರು ಸೈ ಅನ್ನಿಸಿಕೊಂಡರು. ಇನ್ನೂ ಕೆಲವು ಕಿರುಚಿತ್ರಗಳುಸಾಕ್ಷ್ಯಚಿತ್ರಗಳಲ್ಲಿ ಅವರು ಅಭಿನಯಿಸಿದ್ದರು. ‘ಮಜಾ ಟಾಕೀಸ್ ರಿಯಾಲಿಟಿ ಶೋನ ವರಲಕ್ಷ್ಮಿ ಪಾತ್ರದಲ್ಲಂತೂ ಅಪರ್ಣಾ ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಷ್ಟು ನಗಿಸುತ್ತಿದ್ದರು. ಇಷ್ಟೆಲ್ಲದರ ನಡುವೆ ನಾಡಿನ ಹೆಸರಾಂತ ಪತ್ರಿಕೆಕನ್ನಡ ಪ್ರಭ ಪತ್ರಿಕೆಗೆಸಖೀಗೀತ ಎಂಬ ಅಂಕಣವನ್ನೂ ಬರೆಯುತ್ತಿದ್ದರು. ಹಾಗಾಗಿ ಅವರದ್ದು ಬಹುಮುಖ ಪ್ರತಿಭೆ ಎನ್ನುವುದರಲ್ಲಿ ಯಾವುದೇ ಅನುಮಾನವಿರಲಿಲ್ಲ.

ಬೆಂಗಳೂರಿನ ಬನಶಂಕರಿ ಎರಡನೇ ಹಂತದಲ್ಲಿ ಅವರು ನೆಲೆಸಿದ್ದ ಅಪರ್ಣಾ ಅವರ ಪತಿ ನಾಗರಾಜ ವಸ್ತಾರೆ ಕೂಡ ಕವಿ, ಕಥೆಗಾರ ಹಾಗೂ ವಾಸ್ತುಶಿಲ್ಪಿ. ಇದೂ ಕೂಡ ಅವರ ಓದಿಗೆ, ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿತ್ತು. ಬದುಕೆಂಬ ರೈಲಿನ ಒಂದೊAದೇ ನಿಲ್ದಾಣಗಳನ್ನು ದಾಟುತ್ತ, ಸಹಪ್ರಯಾಣಿಕರಿಗೆ ಮಾರ್ಗದರ್ಶನವನ್ನೂ ಮಾಡುತ್ತಲೇ ಅಪರ್ಣಾ ವಸ್ತಾರೆ ಕೊನೆಯ ನಿಲ್ದಾಣವನ್ನೂ ತಲುಪಿದ್ದಾರೆ. ಅವರ ಸುಮಧುರ ಧ್ವನಿಯನ್ನು ನಾವು ಕೇಳುತ್ತಲೇ ಇದ್ದೇವೆ.

 

 

 

 

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!