ಕಡಲ ಹುಡುಗಿಯ ನೆನಪು

ನರನಾಡಿ ಯಲ್ಲೆಲ್ಲ ಸುಡುಮದ್ದು ತುಂಬಿಕೊಂಡ, ಪ್ರೀತಿ ಗೊತ್ತಿಲ್ಲದೆ ಅವುಡುಗಚ್ಚಿ ಕುಳಿತ ನಗರದಲ್ಲಿ ನನ್ನೂರ ಕಡಲ ಹುಡುಗಿ ಚಿರಯೌವನೆ ಕದನದಂಥ ಕಡಲ ಮುಂದೆ ಕೃಷ್ಣ ಸುಂದರಿ ಅಂತರ್ಮುಖಿ ಮೌನವೇ ಮತಾಪು ಕಿಬ್ಬೊಟ್ಟೆಗೆ ಒದ್ದು ಮಾತಾಗುತ್ತವೆ ಅವಳೊಡಲ ಬೇನೆ ಎರಡಕ್ಷರ ಕಲಿಯದವಳು ಭಾರವನ್ನೆಲ್ಲ ಎದೆಯೊಳಗಿಟ್ಟು ಸೆರಗ ಬಿಗಿದೆತ್ತಿ ಕಟ್ಟಿ ಕಡಲ ಹೂಗಳ ಹೊತ್ತು ದಂಡೇರಿ ಬರುವ ನಾಯಕಿ ರಕ್ತ ಮಾಂಸಗಳ ಮಾರ್ಕೆಟ್ಟಲ್ಲಿ ಮಾತು ಯುದ್ಧವಾಗಿ ಹಸಿಬಿಸಿ ಕನಸುಗಳು ಗಿರಕಿ ಹೊಡೆಯುತ್ತವೆ ಪ್ರೀತಿ ಕೊಂದು ಮಾತಾಡದ ಕಡಲ ಹುಡುಗಿ ಪ್ರಶ್ನೆಗಳಿಗೆ ಕ್ರಯಕಟ್ಟದ ಜೀವಿ ಮದಿರೆ ಹೀರಿ ನಂಜೇರಿದ ಈ ನಗರದ ಹುಡುಗರು ಇವಕ್ಕೆಲ್ಲಿ ಅರ್ಥವಾಗುತ್ತದೆ ನನ್ನೂರ ಕಡಲು ಅವಳ ಕಣ್ಣ ಉಗ್ರಾಣದೊಳಗೆ ಗೂಡು ಕಟ್ಟಿದ ನೋವು