ಅವಳಿಗಳ ಮೋಹಕೆ ಕರಗಿದ ಪರ್ವತಗಳು!

ಅದು ಡೆತ್ ಝೋನ್! ಪರ್ವತಾರೋಹಿಗಳು ಹಾಗೆಂದು ಅದನ್ನು ಕರೆಯುತ್ತಾರೆ. ಯಾವುದೇ ಪರ್ವತವಿರಲಿ, 26000 ಅಡಿಗಿಂತ ಆಚೆಗಿನ ಶಿಖರಾಗ್ರವೆಂದರೆ ಯಾವತ್ತೂ ಸಾವಿನ ಸಹವಾಸ. ಎಂತಹ ಗಟ್ಟಿಗುಂಡಿಗೆ, ಕಬ್ಬಿಣದ ದೇಹವೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಹನಿ ಆಮ್ಲಜನಕ ಸಿಕ್ಕರೂ ಸಾಕೆಂಬ ಸ್ಥಿತಿ. ಕಣ್ಣಿಗೆ ನಿದ್ದೆ ಹತ್ತುವುದಿಲ್ಲ. ತಿಂದ ಆಹಾರ ಜೀರ್ಣವಾಗುವುದಿಲ್ಲ. ಶ್ವಾಶಕೋಶವೇ ಊದಿಕೊಳ್ಳಲು ಶುರುವಾಗುತ್ತದೆ. ಯಾವುದೂ ನಿಮ್ಮ ಹತೋಟಿಗೆ ಸಿಕ್ಕುವುದಿಲ್ಲ. ಕೈ ಚಾಚಿದರೆ ನೀಲಾಕಾಶವೇ ಎಟಕುವಂತಿರುತ್ತದೆ, ಆದರೆ ಜೀವ ಹಿಡಿಹಿಡಿ. ಜೀವನದ ಅಂತಿಮ ಕ್ಷಣ ಕಣ್ಣಂಚಿಗೇ ಬಂದು ಕುಂತಂತೆ, ಅದು ಇನ್ನೇನು ಜಾರಿಯೇ ಬಿಟ್ಟಿತು ಎಂಬೋ ಭಾವ! ಅದೊಂದೇ ಅಲ್ಲ, ಒಂದು ಶಿಖರದ ತುತ್ತತುದಿಗೇ ಏರಿ ಬಿಡಬೇಕೆಂದರೆ ನೇರಾ ನೇರ ಏಣಿ ಇಟ್ಟು ಹತ್ತುವಂತಾದ್ದಲ್ಲ. ಹತ್ತಾರು ಕಣಿವೆಗಳನ್ನು ದಾಟಬೇಕು, ಕಣ್ಣ ಮುಂದೇ ಕರಗಿ ಹೋಗುವ ನೀರ್ಗಲ್ಲುಗಳ ಬೆಟ್ಟಗಳ ನಡುವಲೊಂದು ಏಣಿ ಇಟ್ಟು ಮುಂದೆ ಕ್ರಮಿಸಬೇಕು. ಕೆಳಗೆ ಪ್ರಪಾತ, ಮೇಲಂತೂ ಕಣ್ಣೆತ್ತಿ ನೋಡುವ ಹಾಗೇ ಇಲ್ಲ. ಒಂದರ್ಥದಲ್ಲಿ ಅದೂ ಡೆತ್ ಝೋನ್! ಅಂತಹ ಒಂದು ಪರ್ವತ ತುಂಗವನ್ನೇರಿ, ಕೊರಕಲುಗಳನ್ನು ದಾಟಿ ಬಂದು ನೋಡಿ, ಬದುಕು ಧನ್ಯವೆನ್ನುತ್ತದೆ. ಆದರೆ ಮತ್ತೆ ಮತ್ತೆ ಅಂತಹ ಡೆತ್ ಝೋನ್ಗಳನ್ನೇ ಕೆಣಕಿ ಬರುವುದಕ್ಕೆ ಎಂತಹ ಗುಂಡಿಗೆ ಬೇಕು ಹೇಳಿ? ಹಾಗೆ ಬೃಹತ್ ಹಿಮದ ಬುದ್ಭುದಗಳನ್ನು ಮೆಟ್ಟಿ, ನೂರಾರು ನೀ...