ಚಂದ್ರಮುಖಿಗೆ
ಚಂದ್ರಮುಖಿಗೆ ಬರೆದ ಪ್ರೀತಿಯ ಪತ್ರಗಳು
ಚಂದ್ರಮುಖಿ,
ಬೆಳದಿಂಗಳು ಜೀಕುತ್ತ ಜೀಕುತ್ತ
ನಿನ್ನ ಕಾಲಿಗೆ ಕಟ್ಟಿದ
ಗೆಜ್ಜೆಯ ಮಣಿಗಳಲ್ಲಿ
ಗೂಡು ಕಟ್ಟಿತ್ತು ನೋಡೆ...
ಹೌದು! ಈಗ ನಿನ್ನ ಕಾಲಿನ ಪ್ರತಿಯೊಂದು ಸಪ್ಪಳವನ್ನು ಆಲಿಸುವುದು ನನ್ನ ಕೆಲಸವಾಗಿಬಿಟ್ಟಿದೆ. ಇದನ್ನೆಲ್ಲ ನಂಬುವುದಾದರೂ ಹೇಗೆ? ಹಾಗೆ ಅಂದುಕೊಳ್ಳುತ್ತಲೇ ದಿನಗಳು ಹೆಜ್ಜೆ ಮೇಲೆ ಹೆಜ್ಜೆ ಇಟ್ಕೊಂಡು ಹೋಗ್ತಾನೇ ಇದೆ- ನಿನ್ನ ಗೆಜ್ಜೆಯ ಸಪ್ಪಳದ ಹಾಗೆ. ಆ ಹೆಜ್ಜೆಯ ಪ್ರತಿಯೊಂದು ಸದ್ದನ್ನೂ ಅತ್ಯಂತ ಆಪ್ತವಾಗಿ, ನಿಷ್ಠೆಯಿಂದ ಕೇಳಿಸಿಕೊಳ್ಳಬೇಕು ಎಂಬ ತುಡಿತ ಯಾವಾಗಿನಿಂದ ಬಂತು? ನಿಜಕ್ಕೂ ನನ್ನಲ್ಲಿ ಉತ್ತರವಿಲ್ಲ. ಈಗೀಗ ಪ್ರತಿ ಕ್ಷಣಗಳನ್ನೂ ಎದೆಗವಚಿಕೊಂಡು ಅವನ್ನು ಮತ್ತೆ ಮತ್ತೆ ನನಗೆ ನಾನೇ ಕೇಳಿಸಿಕೊಂಡಾಗಲೆಲ್ಲ ಕಣ್ಣುಗಳು ಮಂಜಾಗುತ್ತವೆ. ಇದು ದುಃಖವಲ್ಲ, ನೋವಲ್ಲ. ಕಾಲಿನ ಕಿರುಬೆರಳಿನಿಂದ ಹೊರಟ ಒಂದು ಅತಿ ಸಣ್ಣ ನಡುಕ ಇಡೀ ದೇಹವನ್ನು ಆವರಿಸಿಕೊಂಡು ಕಣ್ಣಲ್ಲಿ ತೇವವಾಗುವ ರೀತಿಯನ್ನು ಯಾರಲ್ಲಿ ಹೇಳಿಕೊಳ್ಳಬೇಕು? ಇಂತಹ ಸಂಭ್ರಮವನ್ನೆಲ್ಲ ನನ್ನ ಕಣ್ಣುಗಳು ಮಾತ್ರ ಅನುಭವಿಸಲು ಸಾಧ್ಯ ಅನಿಸುತ್ತದೆ. ಆ ಕಣ್ಣುಗಳನ್ನು ನೀನು ಮಾತ್ರ ಓದಲು ಸಾಧ್ಯ!
ಯಾಕೆ ಹೇಳ್ತೀನಿ ಗೊತ್ತಾ, ದಿನದ ಒಂದೇ ಒಂದು ಕ್ಷಣದಲ್ಲಿ ನನ್ನನ್ನು ಕಾಳಜಿ ಮಾಡೋ ಜೀವ ಇದೆ ಅಂತ ಅರಿವಿಗೆ ಬರೋ ಹೊತ್ತಿಗೆ ಎಷ್ಟೊಂದು ಮೋಡಗಳು ಗೂಡಿನ ಮೇಲೆ ಗೂಡು ಕಟ್ಟಿ ಮಳೆ ಸುರಿದು ಹೋಗಿವೆ ನೋಡು. ಸುರಿದ ಮಳೆಯ ಒಂದೊಂದು ಹನಿಗಳನ್ನೂ ಹೀಗೆ ಜತನದಿಂದ ಸೇರಿಸಿ ಸೇರಿಸಿ ಅನುಭವಿಸಬಲ್ಲೆ ನಾನು. ಆದರೆ, ಮಳೆ ಬೆಳ್ಳಿಯ ತೆನೆಗಳಂತೆ ಸುರಿವಾಗ ಗದ್ದೆಯ ಅಂಚಿನ ಜೀವನದ ಸರ್ಕಸ್ಸಿನಲ್ಲಿ ನನ್ನ ಅಷ್ಟೂ ಬೆರಳೊಳಗೆ ಬೆರಳಿಟ್ಟು ಹದವಾಗಿ ಅದುಮಿ ``ಯಾಕೆ ನೀನೊಬ್ಬನೇ?'' ಎಂದು ಕೇಳೋ ಜೀವ. ಬಂದೇ ಬಿಡಬಹುದೇ ಎಂದಾದರೂ ಒಂದು ದಿನ? ಅಚ್ಚರಿಯಾಗಬಹುದು ಈ ಮಳೆಯ ದಾರಿಯಲ್ಲಿ ಎಷ್ಟು ದೂರ ನಡೆದು ಬಂದಿದ್ದೇನೆ.... ಏಕಾಏಕಿ ಮಿನುಗೋ ನಕ್ಷತ್ರ ನನ್ನ ಕೈಯೊಳಗೆ ಬಂದು ಆಪ್ತವಾಗುತ್ತದೆ ಎಂಬ ಆಸೆಯನ್ನೇ ಬಿಟ್ಟು ಬಿಟ್ಟಿದ್ದೆ. ಯಾಕೆ ಬಂದೇ ಬಿಟ್ಟಿ ನೀನು? ಹಾಗಂತ ಕೇಳೋ ಸ್ಥಿತಿಯಲ್ಲಿ ನಾನಿಲ್ಲ. ಅಂತಹ ಧೈರ್ಯವನ್ನೂ ಮಾಡುವುದಿಲ್ಲ. ಯಾಕಂತಿಯಾ? ಹಾಗೆ ಕೇಳಿದ್ದೇ ತಪ್ಪಾಗಿ ಮಾಯವಾಗಿ ಬಿಟ್ಟರೆ ಎಂಬ ಭಯ. ಕನಸಿನ ಪರಿಧಿ ಎಷ್ಟು ತೆಳ್ಳಗಿರುತ್ತದೋ ಎಂಬ ಕಳವಳ. ಅದಕ್ಕೆ ಸುಮ್ಮನಿದ್ದೇನೆ.
ಕೆಲ ವರ್ಷಗಳ ಹಿಂದೆ ಬ್ರೌಸಿಂಗ್ ಸೆಂಟರ್ನಲ್ಲಿ ಕುಳಿತು ಅದ್ಯಾವುದೋ ಸ್ಟುಪಿಡ್ ವೆಬ್ಸೈಟಿನಲ್ಲಿ `ಗೆಳತಿಯರಿಗಾಗಿ' ಹೆಸರು ನೋಂದಾಯಿಸಿ ಅಂತಿತ್ತು. ಸುಮ್ನೆ ಭರ್ತಿ ಮಾಡುತ್ತಾ ಹೋದೆ. ನಿನ್ನ ಕಣ್ಣು ಹೇಗಿದೆ? ಎಷ್ಟು ದಪ್ಪ, ಎಷ್ಟು ಉದ್ದ ಇದ್ದಿಯಾ, ಅದ್ ತಿಂತಿಯಾ, ಇದ್ ತಿಂತಿಯಾ, ಪೀಜಾ ಅಂದ್ರೆ ಇಷ್ಟನಾ? ಅಂತೆಲ್ಲ ಇತ್ತು. ನಿನಗೆ ಪ್ರತಿ ತಿಂಗಳು ಎಷ್ಟು ಸಂಬಳ ಬರತ್ತೆ, ಕೊನೆಗೆ ಗೆಳತಿ ಸಿಕ್ರೆ ಆಕೆ ಜೊತೆ ಏನ್ ಮಾಡ್ತಿಯಾ ಅಂತ ಇತ್ತು ನೋಡು. ನಾನೋ ಮಳೆ ಹುಚ್ಚ, ಏನ್ ಬರ್ದೆ ಗೊತ್ತಾ? ``...ಜಿಟಿ ಜಿಟಿ ಮಳೆಯಲ್ಲಿ ಕೊಡೆ ಕೂಡ ಇಲ್ದೆ ಉದ್ದಕ್ಕೆ ಕೈ ಕೈ ಹಿಡ್ಕೋ.....ಂಡು ನಡಕೊಂಡು ಹೋಗಬೇಕು... ಎಷ್ಟು ಚೆಂದ ಅಲ್ವಾ...?'' ಅಂತ ಭರ್ತಿ ಮಾಡಿದ್ದೆ. ಹಾಗೆ ಮಾಡಿ ಸಣ್ಣಗೆ ನಕ್ಕಿದ್ದೆ- ನನ್ನ ಹುಚ್ಚುತನಕ್ಕೆ. ಈ ಬೆಂಗಳೂರಲ್ಲಿ ಪಿಜಾಹಟ್ಗೆ ಹೋಗೋದ್ ಬಿಟ್ಟು ಮಳೆಯಲ್ಲಿ ನೆನೆಯೋ ಹುಚ್ಚನೊಬ್ಬ ಇದ್ದಾನಲ್ಲ? ಅದಕ್ಕೇ ಇರಬೇಕು ಒಂದೇ ಒಂದು ರಿಪ್ಲೈ ಕೂಡ ಬಂದಿರಲಿಲ್ಲ ಬಿಡು. ಇದನ್ನು ಒಂದು ತಮಾಷೆಗೆ ಹೇಳಿದೆಯಷ್ಟೆ. ಆದರೆ, ಅಂತಹುದೊಂದು ನಿರೀಕ್ಷೆ, ಆಸೆ, ನನ್ನ ಎದೆಯಲ್ಲಿ ಇತ್ತು ಎಂಬುದು ಮಾತ್ರ ನಿಜ.
ನೀನು ಪದೆ ಪದೇ ಆಸೆಬುರ್ಕಾ ಅಂತಿಯಲ್ಲ? ಆವತ್ತು ಬ್ರೌಸಿಂಗ್ ಸೆಂಟರ್ನಿಂದ ಹೊರಗೆ ಬರುತ್ತಲೇ ಮಳೆ ಸಣ್ಣಗೆ ಜಿನುಗುತ್ತಿತ್ತು. ನಿಜಕ್ಕೂ ನನ್ನ ಆಸೆಗೆ ಕಿಚ್ಚು ಹಚ್ಚಿದಂತಾಗಿತ್ತು. ಸುಮ್ಮನೆ ನಿಂತೇ ಇದ್ದೆ. ಆವತ್ತೇ ``ಹ್ಞುಂ, ನಡಿ ಹೋಗೋಣ ಬಾ...'' ಅಂತ ಕೈಯೊಳಗೆ ಕೈ ಹಾಕಿ ಪೆದ್ದು ಪೆದ್ದಾಗಿ, ಕಣ್ ಕಣ್ ಮಿಟುಕಿಸುತ್ತಾ ಬಸವನಗುಡಿಯ ಬ್ಯೂಗಲ್ ರಾಕ್ ಪಾರ್ಕಿನ ಮರಗಳ ನಡುವೆ ಎಳೆದುಕೊಂಡು ಹೋಗಿದ್ದರೆ? ಚಿಕ್ಕ ಮಗುವಿನ ಥರ ನಾನು ಬಂದು ಬಿಡುತ್ತಿದ್ದೆ ಅನಿಸಲ್ವಾ? ಅಲ್ಲಿನ ಮರಗಳ ನಡುವಿನ ಹಾದಿಯಲ್ಲಿ ಪಟಪಟ ಅಂತ ಬೀಳ್ತಿತ್ತಲ್ಲ ಮಳೆ...? ಹೀಗೆ ಇಳಿಬಿಟ್ಟ ನಿನ್ನ ಕೂದಲ ಸ್ಪರ್ಶಕ್ಕೆ ಸಿಕ್ಕು ಕೆಳಕ್ಕಿಳಿವ ಹನಿಗಳನ್ನೆಲ್ಲ ಜೋಡಿಸಿ ಜೋಡಿಸಿ ನಿನ್ನ ಗೆಜ್ಜೆಗೆ ಮಣಿಗಳಾಗಿ ಪೋಣಿಸಿಬಿಡಬಹುದಿತ್ತು.
ಬದುಕನ್ನ ಒಮ್ಮೆಗೇ ಅನುಭವಿಸಿ ಬಿಡಬೇಕು ಎಂಬುದು ಎಷ್ಟು ಪೆದ್ದುತನ ಅಲ್ವಾ? ಅದು ಬಿಡಿ ಬಿಡಿಯಾಗಿ ಕೈಗೆ ಸಿಗಬೇಕು, ಅವನ್ನು ಒಂದೊಂದೇ ಎಳೆಯಾಗಿ, ಹೀರುತ್ತಾ ಸಾಗಬೇಕು. ಹಾಗೆ ಮಾಡದೇ ಹೋಗಿದ್ದಿದ್ದರೆ ನೀನು ಸಿಗುತ್ತಿದ್ದುದಾದರೂ ಹೇಗೆ ಅನ್ನಿಸುತ್ತದೆ ನನಗೆ. ನಂದಬಟ್ಟಲು ಕಣ್ಣಿನ ನೀನು ಸಿಗದೇ ಇರುತ್ತಿದ್ದರೆ? ಹೌದು, ಮತ್ತೆ ಮೋಡ ಕಟ್ಟುತ್ತಿತ್ತು ನನ್ನ ಕಣ್ಣೊಳಗೆ...
ಪ್ರೀತಿ ಎಂಬೋದು
ನದಿಯ ನೀರಿನ ಮೇಲೆ
ತೇಲುವ ತೇವದ ಹಾಗೆ
ಮಳೆಯ ಗೂಡಿನ ಕೆಳಗೆ
ಹೊಸೆದ ಮಲ್ಲಿಗೆ ಮಾಲೆ...
ವಾಪಾಸು ಪತ್ರ ಬರೀತಿಯಾ?
-ಚಂದ್ರಮ