ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಕವಿಯಾದವನ ಎದೆಯಲ್ಲಿ ಒಂದು ಕಿಡಿಯಿರುತ್ತದೆ. ನಮಗೆ ಗೋವಿನ ಹಾಡು ಕೇಳಿದಾಕ್ಷಣ ಕಣ್ಣಲ್ಲಿ ನೀರು ಬಂದುಬಿಡುತ್ತದೆ, ಯಾಕೆ ಹೇಳಿ? ಅದು ನಮ್ಮ ಹೃದಯವನ್ನು ಕಲುಕುತ್ತದೆ. ಕಲಕದ ಸಂವೇದನೆ, ಕಾಡದೇ ಇರುವಂತಾದ್ದು ಸಾಹಿತ್ಯ ಅಲ್ಲ. ಇವತ್ತು ಬಂದು ಮಳೆ ಹಾತೆಗಳ ರೀತಿಯಲ್ಲಿ ಮಾಯವಾಗಿ ಹೋಗಬಾರದು. ಸಾಹಿತ್ಯ ಜನಗಳ ನಡುವೆ ರಸಸೇತುವೆಗಳನ್ನು ಕಟ್ಟಬೇಕು. ಎದೆಯೊಳಗಿನ ಕಿಡಿಯನ್ನು ಕೆಂಡವಾಗಿ ಮಾಡುವುದು ಹೇಗೆ ಎಂದು ಹೇಳಿದ್ದಾರೆ ಸಿರಿ ಬೆಳಕಿನ ಕವಿ ನಿಸಾರ್ ಅಹಮದ್. (2018ರ ಅಕ್ಟೋಬರ್ ತಿಂಗಳ ಕೊನೆಯ ಭಾಗದಲ್ಲಿ ಓ ಮನಸೇ ಪತ್ರಿಕೆಗಾಗಿ ನಡೆಸಿದ್ದ ಸಂದರ್ಶನದ ಪೂರ್ಣಪಾಠ ಇಲ್ಲಿದೆ... ) ನಿಮ್ಮ ಮೊದಲ ಕವಿತೆ ಹುಟ್ಟಿದ ಕ್ಷಣ ಮತ್ತು ಅದರಿಂದ ನಿಮಗಾದ ಖುಷಿ 1949ರಲ್ಲಿ ನಾನು ಹೊಸಕೋಟೆಯ ಮುನ್ಸಿಪಲ್ ಹೈಸ್ಕೂಲ್ನಲ್ಲಿ ಓದ್ತಾ ಇದ್ದಾಗ ಈ ಪಠ್ಯ ಪುಸ್ತಕಗಳಲ್ಲಿದ್ದ ಕುವೆಂಪು, ಪಂಜೆ ಮಂಗೇಶ್ ರಾಯರು, ಬೇಂದ್ರೆ ಅವರ ಪದ್ಯಗಳನ್ನು ಅನುಸರಿಸಿ ಬರೆಯಬೇಕು ಎಂಬ ಆಸೆ ಹುಟ್ಟಿಕೊಂಡಿತು. ಆ ಹೊತ್ತಿನಲ್ಲಿ ನಾವೆಲ್ಲ ಸೇರಿ ವನಸುಮ ಅಂತ ಒಂದು ಕೈಬರಹದ ಪತ್ರಿಕೆ ತಂದ್ವಿ. ಅದಕ್ಕೆ ನಾನೇ ಸಂಪಾದಕ. ಆಗ ಎಲ್ಲ ಸೇರಿ ನನ್ನನ್ನು ಹುರಿದುಂಬಿಸಿದ್ದಕ್ಕೆ 'ಜಲಪಾತ' ಎಂಬ ಪದ್ಯವನ್ನು ಬರೆದೆ. 'ಭರ್ ಭರ್ ಎನ್ನುತಾ ಭೋರ್ಗರೆ ಇಕ್ಕುತ ಕಮರಿಯ ಸೇರುವ ಜಲಪಾತ...' ಒಂದಕ್ಕೊಂದು ಸಂಬಂಧವೇ ಇಲ್ಲದ ಬಾಲಿಶ ಕವಿತೆ ಬಿಡಿ ಅದು. ಜಲಪಾತ ಯಾಕೆ ಭರ್ ಅನ್ನುತ್ತೆ ಅ...