ಜೈಲಿಗೆ ಕೊಡಪಾನದಲ್ಲಿ ಪಾಯಸ ಕೊಂಡೊಯ್ಯುತ್ತಿದ್ದೆ...
![]() |
ದೊರೆಯ ಬದುಕಿನ ಲಲಿತಗಾನ |
ಹೋರಾಟ, ಚಳವಳಿ ಎಂದರೆ ಎಲ್ಲಿದ್ದರೂ ಹಾಜರಾಗುತ್ತಿದ್ದ ನೀವು ಮದುವೆ ಮಾಡಿಕೊಳ್ಳಬೇಕು ಎಂದು ನಿರ್ಧಾರ ಮಾಡಿದ್ದು ಯಾವಾಗ?
ದೊರೆ: ನಾವು ಮದುವೆಯಾಗಿದ್ದೇ ವಿಚಿತ್ರ ಸನ್ನಿವೇಶದಲ್ಲಿ. ಬೆಂಗಳೂರಿನ ಚಾಮರಾಜಪೇಟೆಯವರಾದ ಲಲಿತಮ್ಮ ತಮ್ಮ ನಾಲ್ವರು ಸಹೋದರರ ಜತೆ ಬೆಳೆದವರು. ಕನ್ನಡ ಲೋವರ್ ಸೆಕೆಂಡರಿ ಓದಿ ಮನೆಯಲ್ಲಿ ಅಮ್ಮನಿಗೆ ನೆರವಾಗಿಕೊಂಡು ಇದ್ದಾಕೆ. ಇವರ ಕುಟುಂಬದ ಸ್ನೇಹಿತ ರಾಘವೇಂದ್ರ ಆಚಾರ್ ಮನೆಗೆ ಒಂದು ದಿನ ಸಂಜೆ ಹೋಗಿದ್ದೆ. ಆಗ ಅಲ್ಲಿ ಆಚಾರ್ ಪತ್ನಿ, ಲಲಿತಮ್ಮ ಮತ್ತವರ ತಾಯಿ ಜತೆ ಪಗಡೆ ಆಡುತ್ತಿದ್ದರು. ನಾನು ಹೋಗಿ ಜೊತೆಯಾದೆ. ಮೂರು ಆಟಗಳನ್ನು ಆಡಿದರೂ ಲಲತೆಯ ಜತೆ ಗೆಲ್ಲಲಾಗಲಿಲ್ಲ. ಇಂಥ ಸಂದರ್ಭದಲ್ಲಿ ರಾಘವೇಂದ್ರ ನನ್ನ ಮುಂದೆ ಮದುವೆಯ ಪ್ರಸ್ತಾಪ ಇಟ್ಟ. ಹುಡುಗಿ ಒಳ್ಳೆಯವಳು, ಅವರ ಮನೆಯವರು ನನಗೆ ಬಹಳ ವರ್ಷಗಳ ಪರಿಚಯ. ನೀನ್ಯಾಕೆ ಮದುವೆಯಾಗಬಾರದು? ಎಂದು. ಅದಕ್ಕೇನಂತೆ ಎಂದು ನಾನು ಒಪ್ಪಿಕೊಂಡೇ ಬಿಟ್ಟೆ.
ನೀವು ಆವಾಗ ಹೋರಾಟದಲ್ಲಿ ಸಂಪೂರ್ಣ ತೊಡಗಿಸಿಕೊಂಡಿದ್ದರೂ ನಿಮ್ಮನ್ನು ಅವರು ಒಪ್ಪಿಕೊಂಡು ಬಿಟ್ಟರೆ? ಮನೆಯಲ್ಲಿ ಯಾವ ಅಭಿಪ್ರಾಯ ಬಂತು?
ದೊರೆ: ನಾನು ಹೋರಾಟ, ಚಳವಳಿಯಲ್ಲಿ ತೊಡಗಿಸಿಕೊಂಡು ಹೀಗೆಲ್ಲ ಓಡಾಡುತ್ತಿದ್ದುದು ರಾಘವೇಂದ್ರನಿಗೆ ಗೊತ್ತೇ ಇತ್ತು. ಅವರಿಗೆ ಅದೆಲ್ಲ ಗೊತ್ತಿದ್ದೇ ಹುಡುಗಿಯನ್ನು ಅಲ್ಲಿಗೆ ಕರೆಸಿದ್ದರು. ಹಾಗಾಗಿ ನಾನು ಬೇರೆ ಯೋಚನೆ ಮಾಡಲು ಹೋಗಲಿಲ್ಲ. ಒಂದಲ್ಲಾ ಒಂದು ದಿನ ಮದುವೆ ಆಗಲೇಬೇಕಿತ್ತಲ್ಲ. ಆಗ ನನಗೆ ಮುವತ್ತೆರಡು ವರ್ಷ ವಯಸ್ಸು. ಆಕೆಗೆ ಹತ್ತೊಂಭತ್ತು. ಮನೆಯಲ್ಲಿ ಅಮ್ಮನಿಗೆ ಭಾರಿ ಖುಷಿಯಾಗಿ ಹೋಯಿತು. ಮಗ ಹೋರಾಟ, ಜೈಲು ಅಂತ ದಾರಿ ತಪ್ಪಿ ಹೋಗುತ್ತಾನೆ. ಮದುವೆಯೇ ಮಾಡಿಕೊಳ್ಳುವುದಿಲ್ಲ ಎಂಬ ಭಯ ಅವರಿಗಿತ್ತು. ಜಾತಕ, ಮೇಳಾ-ಮೇಳಿ ಯಾವುದೂ ಇಲ್ಲದೆ 1950ರ ಸೆ.18ರಂದು ಮದುವೆ ನಡೆದೇ ಹೋಯಿತು.
ದೊರೆಸ್ವಾಮಿ ಅವರು ಈ ರೀತಿ ಹೋರಾಟದಲ್ಲಿ ಓಡಾಡಿಕೊಂಡಿರುವುದು ನಿಮಗೆ ಮೊದಲೇ ಗೊತ್ತಿತ್ತಲ್ಲವೇ?
ಲಲಿತಮ್ಮ: ಅವೆಲ್ಲವೂ ತಿಳಿದೇ ಇತ್ತು. ನಾನು ಯಾವ ಅಭ್ಯಂತರವನ್ನೂ ಮಾಡಲಿಲ್ಲ. ಜೀವನ ಎಲ್ಲ ಸರಾಗವಾಗಿ ನಡೆದು ಹೋಯಿತು. ಅವರ ಹೋರಾಟ ನಮಗೆ ತೊಂದರೆ ಅಂತ ಅನ್ನಿಸಲೇ ಇಲ್ಲ. ಹೋಗದಿರಿ ಎಂದು ನಾನೂ ಹೇಳುತ್ತಿರಲಿಲ್ಲ.
ಅಷ್ಟು ಹೊತ್ತಿಗಾಗಲೇ ಗಾಂಧಿ ವಿಚಾರಧಾರೆಗೆ ಮನಸೋತಿದ್ದ ನೀವು ಮದುವೆ ನಂತರವೂ ನಿಮ್ಮ ಓಡಾಟ, ದೊಡ್ಡ ನಾಯಕರ ಒಡನಾಟ ಮುಂದುವರಿದೇ ಇತ್ತು.
ದೊರೆ: ಹೌದೌದು. ವಿನೋಬಾ ಭಾವೆ ಅವರ ಭೂದಾನ ಚಳವಳಿಯಲ್ಲಿ ಪಾದಯಾತ್ರೆ ಅಂತ ಹೊರಟು ಬಿಡುತ್ತಿದ್ದೆ. ಮನೆ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಲಲಿತೆ ಎಲ್ಲವನ್ನೂ ನಿಭಾಯಿಸಿಕೊಂಡು ಹೋದಳು. ನಿನಗೆ ತೊಂದರೆಯಾದರೆ ಕೆಲ ದಿನಗಳ ಮಟ್ಟಿಗೆ ಅಣ್ಣಂದಿರ ಮನೆಗೆ ಹೋಗಿ ಇದ್ದು ಬಾ ಅಂತಲೂ ಹೇಳಿದೆ. ಆದರೆ ಅದಕ್ಕೆ ಅವಳು ಒಪ್ಪಲೇ ಇಲ್ಲ. ಎಷ್ಟೋ ಬಾರಿ ಮನೆಗೆ ಹಲವಾರು ಮಂದಿ ನಾಯಕರು ಬಂದುಬಿಡುತ್ತಿದ್ದರು. ಅವರಿಗೆಲ್ಲ ಪಾಯಸದ ಊಟವನ್ನೇ ಮಾಡಿ ಹಾಕುತ್ತಿದ್ದಳು. ಕಷ್ಟ ಕಾಲದಲ್ಲಿ ಯಾರ ಮನೆಯಲ್ಲೂ ಹೋಗಿ ಇರಬಾರದು, ನಮ್ಮದು ದಯನೀಯ ಪರಿಸ್ಥಿತಿ ಕಂಡು ಕೇಳಬಾರದ ಮಾತು ಕೇಳಬೇಕಾಗುತ್ತದೆ. ಸಂಬಂಧ ಕೆಟ್ಟು ಹೋಗಲು ಇಷ್ಟು ಸಾಕಾಗುತ್ತದೆ ಎಂಬುದು ಅವಳ ಅಭಿಪ್ರಾಯವಾಗಿತ್ತು.
ಅನೇಕ ದಿನಗಳ ಕಾಲ ದೊರೆಸ್ವಾಮಿ ಅವರು ಪಾದಯಾತ್ರೆ ಎಂದು ಹೊರಟಾಗ ಜೀವನ ಸಾಗಿಸುವುದು ಕಷ್ಟವೆನಿಸಲಿಲ್ಲವೇ?
ಲಲಿತಮ್ಮ: ಅಮ್ಮನ ಮನೆಯಿಂದ ಅಕ್ಕಿ-ರಾಗಿ ಬರುತ್ತಿತ್ತು. ಅದನ್ನು ಅತ್ಯಂತ ಜೋಪಾನದಿಂದ ಬಳಸಿಕೊಂಡು ಇಬ್ಬರು ಮಕ್ಕಳೊಂದಿಗೆ ಸಂಸಾರವನ್ನು ಸಾಗಿಸಬೇಕಾಗಿತ್ತು. ಮನೆಯಲ್ಲಿ ಇಲ್ಲದೇ ಇರುವುದರ ಬಗ್ಗೆ ಯಾವತ್ತೂ ಗೊಣಗಾಡಲಿಲ್ಲ.
ದೊರೆ: ತುರ್ತು ಪರಿಸ್ಥಿತಿಯ ದಿನಗಳ ಸಂದರ್ಭದಲ್ಲಿ ನನ್ನನ್ನು ಜೈಲಿಗೆ ಹಾಕಲಾಗಿತ್ತು. ಆಗಂತೂ ಈಕೆ ಏಕಾಂಗಿ. ಮನೆಯ ಸುತ್ತ ಬಿಗಿ ಕಾವಲು. ಆಗ ನಮ್ಮ ಮನೆ ಬೆಂಗಳೂರಿನ ಅಶೋಕ ನಗರದಲ್ಲಿತ್ತು. ಮಗ ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಮಾಡುತ್ತಿದ್ದ. ಆತನ ಎರಡು ತಿಂಗಳ ಹಾಸ್ಟೆಲ್ ಫೀ 200 ರೂ. ಕಟ್ಟಲಿಲ್ಲ ಎಂಬ ಕಾರಣಕ್ಕೆ ಅವನನ್ನು ಕಾಲೇಜಿನಿಂದಲೇ ಹೊರಗೆ ಹಾಕುವುದಾಗಿ ಎಚ್ಚರಿಕೆ ಕೊಟ್ಟಿದ್ದರು. ಜೈಲಿಗೆ ಬಂದಿದ್ದ ಲಲಿತಾ 'ಏನು ಮಾಡುವುದು ಹೀಗಾಗಿದೆ' ಎಂದು ಅಲವತ್ತುಕೊಂಡಳು. ನಾನದಕ್ಕೆ, ಅವನು ಮನೆಗೆ ವಾಪಸು ಬಂದುಬಿಡಲಿ, ಮುಂದಿನ ವರ್ಷ ಓದಿಕೊಂಡರಾಯಿತು. ನನ್ನ ಬಳಿ ಎಲ್ಲಿದೆ ದುಡ್ಡು ಎಂದು ಹೇಳಿಬಿಟ್ಟಿದ್ದೆ. ಆಗ ಅವಳು ಬಹಳ ನೊಂದುಕೊಂಡಿದ್ದಳು. ಆದರೆ ನನ್ನ ಸ್ನೇಹಿತರು ಸಹಾಯಕ್ಕೆ ಬಂದರು. ಅವರೇ ಸ್ವತಃ ದಾವಣಗೆರೆಗೆ ಹೋಗಿ ಹಾಸ್ಟೆಲ್ ಫೀಸ್ ಕಟ್ಟಿ ಖರ್ಚಿಗೆ ದುಡ್ಡನ್ನೂ ಕೊಟ್ಟು ಬಂದಿದ್ದರು.
1974ರ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೊರೆಸ್ವಾಮಿ ಅವರು ಜೈಲು ಸೇರಿದಾಗ ನೀವು ಏನು ಮಾಡ್ತಾ ಇದ್ದಿರಿ, ಎಷ್ಟು ಬಾರಿ ಅವರನ್ನು ಭೇಟಿ ಮಾಡಲು ಜೈಲಿಗೆ ಹೋಗುತ್ತಿದ್ರಿ?
ಕಾಮೆಂಟ್‌ಗಳು