ಅಮ್ಮ ಹೆಣೆದ ಜಾಜಿ ಮಾಲೆ...

ಅಂಗಳದಲ್ಲಿ ಮಳೆ ಹನಿ ಪಟ ಪಟ ಅಂತ ಸದ್ದು ಮಾಡಿ ನಾಲ್ಕೇ ನಾಲ್ಕು ಹನಿ ಬಿದ್ದರೂ ಸಾಕು ಅಮ್ಮನ ಚಡಪಡಿಕೆ, ಗಡಿಬಿಡಿ ಶುರುವಾಗಿ ಬಿಡುತ್ತದೆ. ರೋಹಿಣಿ ಮಳೆಗೆ ಇನ್ನೂ ತಿಂಗಳಿದೆಯಲ್ಲ ಎಂಬ ಲೆಕ್ಕಾಚಾರದಲ್ಲಿ ಇದ್ದವಳಿಗೆ ಒಂಥರ ತಹತಹ, ಗಡಿಬಿಡಿ. ಮಳೆಗಾಲ ಇನ್ನು ಒಂದೋ ಎರಡೋ ತಿಂಗಳು ಇರುವಾಗಲೇ ಹಾಕಿಕೊಂಡಿರುವ ದೊಡ್ಡ ಕೆಲಸದ ಪಟ್ಟಿಯಲ್ಲಿ ಮುಗಿದಿರುವುದಾದರೂ ಎಷ್ಟು ಎಂಬುದು ಅವಳಿಗೆ ಗೊತ್ತಿರುತ್ತಿತ್ತು. ಆಕಾಶದಲ್ಲಿ ಮೋಡಗಳು ಕಟ್ಟಿಕೊಳ್ಳಲು ಆರಂಭವಾಯಿತು ಎಂದರೆ ಅವಳ ಹಣೆಯಲ್ಲಿ ಚಿಂತೆಯ ನಿರಿಗೆಗಳು ಬೆಳೆಯುತ್ತ ಹೋಗುತ್ತಿದ್ದವು. ಯಾವ ಕೆಲಸಕ್ಕೂ ಯಾರನ್ನೂ ನೆಚ್ಚಿಕೊಳ್ಳದ ಆಕೆ ಗದ್ದೆಯಲ್ಲೋ, ಹೊಲದಲ್ಲೋ, ಅಡುಗೆ ಮನೆಯಲ್ಲೋ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತ ಸಾಗುತ್ತಿದ್ದರೆ ನಮಗೇ ಒಂಥರ ಕಸಿವಿಸಿ. ಒಂದ್ ಚಣವೂ ಪುರುಸೊತ್ತಿಲ್ಲದೆ ಯಾಕೆ ಈ ಪಾಟಿ ಕೆಲಸ ಮಾಡುತ್ತಾಳೆ ಅಮ್ಮ ಎಂಬ ಸಿಟ್ಟು, ಅಸಮಾಧಾನ ನಮಗೆ. ಹಾಗಾಗಿಯೇ ನಾವು ಮಕ್ಕಳಿಬ್ಬರು ಕೆಲಸದಲ್ಲಿ ಕೈಜೋಡಿಸದೇ ಬೇರೆ ದಾರಿ ಇರುತ್ತಿರಲಿಲ್ಲ.
ಅಮ್ಮ ಸೆಗಣಿಯದೊಂದು ದೊಡ್ಡ ರಾಶಿ ಹಾಕಿಕೊಂಡು ಗದ್ದೆ ಬದುಗಳಲ್ಲಿ ಬೆರಣಿ ತಟ್ಟಲು ಶುರು ಮಾಡಿಕೊಂಡಳೆಂದರೆ ಅದು ಮಳೆಗಾಲಕ್ಕೆ ಆಕೆ ಮಾಡಿಕೊಳ್ಳುವ ಸಿದ್ಧತೆ ಎಂದೇ ಲೆಕ್ಕ. ಮಳೆಗಾಲಕ್ಕೆ ಬೆರಣಿ ಮಾಡಿ ಕೂಡಿಡುವುದೆಂದರೆ ನಮ್ಮ ಪಾಲಿಗೆ ಬಹುದೊಡ್ಡ ಕೆಲಸವಾಗಿತ್ತು. ನಮ್ಮ ಹಟ್ಟಿಯಲ್ಲಿ, ತೋಟದಲ್ಲಿ ದನಗಳನ್ನು ಕಟ್ಟಿದ ಕಡೆಗಳಲ್ಲಿ ಬಿದ್ದ ಸಗಣಿಯನ್ನೆಲ್ಲ ಹೆಡಗೆ(ಬುಟ್ಟಿ)ಯಲ್ಲಿ ಹಾಕಿಕೊಂಡು ಗದ್ದೆಯ ನಡುವೆ ರಾಶಿ ಹಾಕುತ್ತಿದ್ದೆವು. ಮನೆಯ ಅಕ್ಕಪಕ್ಕದ ಕಾಲುಹಾದಿಗಳಲ್ಲಿ, ಹಾಡಿಗಳಲ್ಲಿ ಅಡ್ಡಾಡುತ್ತಾ, ಅಲ್ಲಿ ಸಿಕ್ಕ ಕಿಸಗಾರ ಹಣ್ಣು, ಬುಗುರಿ ಹಣ್ಣು, ಗಜರ ಹಣ್ಣು ಮತ್ತಿತರ ಕಾಡ ಹಣ್ಣುಗಳನ್ನೆಲ್ಲ ತಿನ್ನುತ್ತಾ ರಸ್ತೆ ಬದಿಗಳಲ್ಲಿ ಸಿಕ್ಕ ಸಗಣಿಯನ್ನೆಲ್ಲ ಹೆಕ್ಕಿ, ಬುಟ್ಟಿಯಲ್ಲಿ ಹಾಕಿ ಹೊತ್ತು ತರುವ ಕೆಲಸವನ್ನು ಮಾಡುತ್ತಿದ್ದೆ. ಒಂಥರಾ ಅದು ಮಜಾ ಕೊಡುತ್ತಿದ್ದ ಕೆಲಸವಾಗಿತ್ತು.




ಈ ಸೆಗಣಿಯನ್ನೆಲ್ಲ ದುಂಡಗೆ ತಟ್ಟುತ್ತ, ಓರೆಕೋರೆಯಾಗದಂತೆ ಚಪಾತಿಯ ರೂಪದಲ್ಲಿ ಬೆರಣಿ ಮಾಡುವುದು ಹೇಗೆ ಎಂಬುದನ್ನು ಹೇಳಿಕೊಟ್ಟವಳು ಅಮ್ಮ.  ಭತ್ತದ ಹೊಟ್ಟನ್ನು ಬುಟ್ಟಿಯಲ್ಲಿ ತುಂಬಿಕೊಂಡು ಬೆರಣಿ ತಟ್ಟುತ್ತಿದ್ದರೆ ಸೆಗಣಿ ಕೈಗೆ ಮೆತ್ತಿಕೊಳ್ಳುತ್ತಿರಲಿಲ್ಲ. ಒಂದು ವಾರ ಕಳೆದರೆ ಪ್ರತಿ ಗದ್ದೆಯ ಬದುಗಳಲ್ಲಿ ಸಾಲು ಸಾಲು ಬೆರಣಿಯೇ ಕಾಣುತ್ತಿತ್ತು. ನಾಲ್ಕೈದು ಬಿಸಿಲಾದ ಮೇಲೆ ಆ ಬೆರಣಿಗಳನ್ನೆಲ್ಲ ಎತ್ತರಕ್ಕೆ ಕಂಬಗಳಂತೆ ನಿಲ್ಲಿಸಿ ಅವನ್ನು ಹಟ್ಟಿಯ ಮೇಲಿನ ಅಟ್ಟದ ಮೇಲೆ ತಂದು ಕೂಡಿಡುತ್ತಿದ್ದೆವು. ಮಳೆಗಾಲದ ವರೆಗೆ ಅವು ಭದ್ರ. ಅನೇಕ ಬಾರಿ ಅವು ದೀಪಾವಳಿ ಬಲೀಂದ್ರ ಪೂಜೆ ತನಕವೂ ಬರುತ್ತಿದ್ದ ನೆಂಪು.
ತೀರಾ ಗದರಿಸದೇ ಹೋದರೂ ಅಮ್ಮನ ಸಣ್ಣ ಸಿಡುಕು, ಸಣ್ಣ ಮುನಿಸು ಆಕೆ ಸುಸ್ತಾಗಿದ್ದಾಳೆ ಎಂಬುದರ ಸಂಕೇತವಾಗಿರುತ್ತಿತ್ತು. ಕೈಗಳನ್ನು ಕೊಡವಿಕೊಳ್ಳುತ್ತಾ ಬಳೆಗಳನ್ನು ಸದ್ದು ಮಾಡಿಕೊಳ್ಳುತ್ತ ಓಡಾಡುತ್ತಿದ್ದರೆ ಆಕೆ ಮುನಿಸಿಕೊಂಡಿದ್ದಾಳೆ ಎಂದೇ ಅರ್ಥ. ಕೆಲಸ ಮಾಡುತ್ತ ಮಾಡುತ್ತ ಅದು ವ್ಯಕ್ತವಾಗುತ್ತಿತ್ತು ಮತ್ತು ಕೆಲಸದ ಒತ್ತಡ ಮಿತಿಮೀರಿತ್ತು ಎಂದಾದರೆ ಬಳೆಗಳ ಸದ್ದೂ ಹೆಚ್ಚುತ್ತಿತ್ತು. ಅದರಿಂದಾಚೆಗೆ ಇನ್ನೇನು ಮಾಡಲೂ ಆಕೆ ಶಕ್ತಳಾಗಿರಲಿಲ್ಲ. ಇಂಥ ಘಳಿಗೆಗಳಲ್ಲಿ ನಾವು ಅಕ್ಕ-ತಮ್ಮ ಅವಳಿಗೆ ಸಾಥ್ ಕೊಡುತ್ತಿದ್ದೆವು. ನಾವಿಬ್ಬರೂ ಏನಾದರೂ ತುಂಟಾಟ ಮಾಡುತ್ತಲೇ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಿದ್ದೆವು. ಅಕ್ಕ ಒಂದಲ್ಲ ಒಂದು ಹಾಡು ಗುನುಗುತ್ತಲೇ ಇರುತ್ತಿದ್ದಳು, ನಾನೋ ತರಲೆ ಮಾಡಿಕೊಂಡೇ ಕೆಲಸಗಳನ್ನು ಮಾಡುತ್ತಿದ್ದೆ. ಅಮ್ಮನೆಂದರೆ ಕೆಲಸ, ಕೆಲಸವೆಂದರೆ ಅಮ್ಮನಂತಿದ್ದಳು ಸೀತಮ್ಮ. ನೀನೊಂದು ಎಂಥಾ ಕೆಲ್ಸ ಮಾಡ್ತಾನೇ ಇರೂದ್ ಮಾರಾಯ್ತಿ,'' ಎಂದು ಅಕ್ಕ ಬಯ್ಯುತ್ತಲೇ ಇರುತ್ತಿದ್ದಳು. ಆದರೂ ಅಮ್ಮ ಇನ್ನೊಂದು ಕೆಲಸದ ಬೇಟೆಗೆ ಸಿದ್ದತೆ ಶುರು ಮಾಡಿಕೊಂಡಿರುತ್ತಿದ್ದಳು. ಅಂದೂ ಅಮ್ಮನ ಅಸಮಾಧಾನದ ಮೂಲ ಕಾರಣವಿಷ್ಟೇ; ಮಳೆ ಸುರಿಯಲು ಶುರು ಮಾಡಿಬಿಟ್ಟರೆ ಮುಂದೆ ಯಾವ ಕೆಲಸವನ್ನೂ ಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂಬುದು.

ಇನ್ನೇನ್ ಒಂದು ವಾರದಂಗ್ ಮಳ್ಗಾಲ ಶುರುವಾತ್, ಎಷ್ಟೊಂದ್ ಕೆಲಸ ಬಿದ್ಕಂಡಿತ್ ಈಗ, ಎಲ್ಲಾ ಏಗಳಿಕೆ ಮಾಡುವುದೋ,'' ಎಂದು ಹೇಳಿಕೊಳ್ಳುತ್ತಲೇ ಚಿಂತೆಗೆ ಬಿದ್ದುಬಿಡುತ್ತಿದ್ದಳು. ಮಳೆಗಾಲಕ್ಕೆ ಮುಂಚೆ ನಡೆಯುತ್ತಿದ್ದ ಇನ್ನೊಂದು ಬಹುಮುಖ್ಯ ಕೆಲಸವೆಂದರೆ ಸುಡುಮಣ್ಣು ತಯಾರು ಮಾಡುವುದು. ಗದ್ದೆಗಳ ಮಧ್ಯದಲ್ಲಿ ಇಡೀ ಜಮೀನಿನಲ್ಲಿ ಬಿದ್ದ ದರಲೆ (ಒಣಗಿದ ಎಲೆಗಳು), ಕಸಕಡ್ಡಿಗಳನ್ನು ತಂದು ರಾಶಿ ಹಾಕಿ ಅದರ ಮೇಲೆ ಮಳೆಗಾಲದಲ್ಲಿ ಕೊಚ್ಚೆ ನಿಂತು ಗಟ್ಟಿಯಾಗಿದ್ದ ಮಣ್ಣಿನ ರಾಶಿ ಹಾಕುತ್ತಿದ್ದೆವು. ಅದು ದೊಡ್ಡ ರಾಶಿಯಾದ ನಂತರ ಸಂಜೆ ಹೊತ್ತಿಗೆ ಬೆಂಕಿ ಇಡುತ್ತಿದ್ದೆವು. ಅದರ ಬೆಂಕಿ ಎತ್ತರಕ್ಕೆ ಹಾರುತ್ತಿತ್ತು. ನಾನೋ ಅದರಿಂದ ಬಹುದೂರದಲ್ಲಿ ನಿಂತೇ ಚಳಿ ಕಾಯಿಸಿಕೊಳ್ಳುತ್ತಿದ್ದೆ. ಆ ಬೆಂಕಿಯ ಬೆಳಕಿಗೆ ಅಷ್ಟೂ ದೂರದ ತನಕ ಇಡೀ ತೋಟದ ತೆಂಗಿನ ಮರಗಳು ಹೊಳೆಯುತ್ತಿದ್ದವು, ಹೊಸ ಜಗತ್ತೊಂದು ಅನಾವರಣಗೊಳ್ಳುತ್ತಿತ್ತು. ಹಾಗೆ, ಆ ದೊಡ್ಡ ಕಸದ ರಾಶಿ ಸುಟ್ಟು ಹೋಗಿರುವುದನ್ನು ನೋಡಲು ಬೆಳಗಿನ ಜಾವ ಎದ್ದು ಓಡಿ ಬರುತ್ತಿದ್ದೆ. ಉದ್ದನೆಯ ಕೋಲು ಹಾಕಿ ಕೆದರಿದರೆ ಒಳಗೆ ಬೆಂಕಿ ಇನ್ನೂ ನಿಮಿನಿಮಿ ಅಂತಿರುತ್ತು. ಅಮ್ಮನ ಎದೆಯೊಳಗೂ ಇಂಥ ಬೆಂಕಿ ನಿಮಿನಿಮಿ ಅಂತಿರುತ್ತಿತ್ತಾ? ಅದನ್ನು ಅರ್ಥ ಮಾಡಿಕೊಳ್ಳುವಷ್ಟು ದೊಡ್ಡ ಹುಡುಗ ನಾನಾಗಿರಲಿಲ್ಲ. ದೊಡ್ಡ ಕಸದ ರಾಶಿ ಕರಗಿ ಮರುದಿನ ಪುಟ್ಟ ಬೂದಿ ಮತ್ತು ಮಣ್ಣನ್ನು ಒಳಗೊಂಡ ಸುಡುಮಣ್ಣು ರೆಡಿಯಾಗುತ್ತಿತ್ತು. ಮತ್ತೆ ಮರುದಿನದಿಂದ ಅದರ ಮೇಲೆಯೇ ಕಸಕಡ್ಡಿ ರಾಶಿ ಹಾಕಲು ಆರಂಭವಾಗುತ್ತಿತ್ತು. ವಾರಕ್ಕೊಮ್ಮೆ ಅದಕ್ಕೆ ಬೆಂಕಿ ಹಚ್ಚುವ ಕಾರ್ಯಕ್ರಮ. ಮಳೆಗಾಲದ ಹೊತ್ತಿಗೆ ದೊಡ್ಡ ಸುಡುಮಣ್ಣಿನ ರಾಶಿಗಳು ಸಿದ್ಧವಾಗುತ್ತಿದ್ದವು.

ಮಳೆಗಾಲ ಶುರುವಾಯಿತು ಎಂದರೆ ಅಮ್ಮ ಈ ಸುಡುಮಣ್ಣನ್ನು ಹೆಚ್ಚಾಗಿ ಬಳಸುತ್ತಿದ್ದುದು ಜಾಜಿ ಗಿಡಗಳಿಗೆ ಗೊಬ್ಬರವಾಗಿ. ಎಲೆ ಉದುರಿದ ಜಾಜಿ ಗಿಡಗಳ ಬುಡವನ್ನು ಅಗಲಿಸಿ ಅದರ ಸುತ್ತ ಸುಡುಮಣ್ಣು ಹಾಕಿ ಅದರ ಮೇಲೆ ಸಗಣಿ ನೀರನ್ನು ಸುರಿದು ಮಣ್ಣು ಮುಚ್ಚುವ ಕೆಲಸವನ್ನು ಅಮ್ಮನ ಜತೆ ನಾವು ಮಕ್ಕಳು ಮಾಡುತ್ತಿದ್ದೆವು. ಹೀಗೆ ಹತ್ತಾರು ಜಾಜಿ ಗಿಡಗಳ ದಂಡೆಗಳ ಸಾಲುಗಳನ್ನು ರೆಡಿ ಮಾಡುತ್ತಿದ್ದರೆ ಅಮ್ಮನ ಕಣ್ಣಿನಲ್ಲಿ ನಿಜಕ್ಕೂ ಜಾಜಿ ಹೂವುಗಳು ಅರಳುತ್ತಿದ್ದವು ಎಂಬುದನ್ನು ಅರ್ಥ ಮಾಡಿಕೊಳ್ಳುವ ವಯಸ್ಸು ನನ್ನದಾಗಿರಲಿಲ್ಲ. ಆದರೆ ಶಕ್ತಿಯೇ ಇಲ್ಲದ ಅಮ್ಮನ ರಟ್ಟೆಯಲ್ಲಿ ರೂಪು ತಳೆದ ಜಾಜಿ ಹೂವಿನ ದಂಡೆಗಳಿಗೆ ಅಪಾರವಾಗಿ ಹೂವು ಬಿಡುವ ಶಕ್ತಿಯಿತ್ತು. ಆ ಮೂಲಕ ಅವಳ ಕಣ್ಣ ಮುಂದೆ ಚಿಕ್ಕ-ಪುಟ್ಟ ಕನಸುಗಳು ಕುಣಿದಾಡುತ್ತಿದ್ದವು.
ಮಳೆ ಬಿದ್ದು ಆಕೆ ನೆಟ್ಟ ಜಾಜಿ ಕಡ್ಡಿಗಳಲ್ಲೆಲ್ಲ ಚಿಗುರುಗಳು ಬಲಿತು ಭುಜದೆತ್ತರಕ್ಕೆ ಬೆಳೆಯುವ ತನಕ ನಿರಂತರ ಆರೈಕೆ ಮಾಡುತ್ತಿದ್ದಳು. ಎರಡು ತಿಂಗಳ ಮಳೆಗಾಲದ ಬಳಿಕವೇ ಹೂವು ಬಿಡಲು ಶುರುವಾಗುತ್ತಿತ್ತು. ಆರಂಭದಲ್ಲಿ ಸಿಗುವ ಹತ್ತೋ-ಐವತ್ತೋ ಹೂವುಗಳನ್ನೂ ದಂಡೆಯಾಗಿ ಕಟ್ಟಿ ದೇವರ ಪಟಗಳಿಗೆ ಇಡುವ ಮೂಲಕ ಅವಳ ಆ ವರ್ಷದ ಜಾಜಿ ಸೇವೆ ಆರಂಭವಾಗುತ್ತಿತ್ತು.  ಅಮ್ಮ ಸೀರೆ ಸೆರಗಿನೊಳಗೆ ಜಾಜಿ ಮಿಟ್ಟಿಗಳನ್ನು ತುಂಬಿಕೊಂಡು ಬಂದು ಮನೆಯ ಜಗುಲಿಯ ಮೇಲೆ ಸುರಿಯುತ್ತಿದ್ದಳು. ದಿನಗಳು ಕಳೆದಂತೆ ಆಕೆಯ ಸೀರೆಯ ಸೆರಗನ್ನು ಮೀರಿ ಜಾಜಿ ಹೂವುಗಳು ಬೆಳೆಯುತ್ತಿದ್ದವು. ಸವಿಸ್ತಾರದ ದಿನದಲ್ಲಿ ಯಾವತ್ತೂ ಅವಿಸ್ತಾರವಾದ ಕೆಲಸದ ಯಾದಿಯನ್ನೇ ಹೊಂದಿರುತ್ತಿದ್ದ ಅಮ್ಮ ದಿನವಿಡೀ ಒಂದಾದ ಮೇಲೊಂದರಂತೆ ಕೆಲಸಗಳನ್ನು ಮಾಡುತ್ತ ರಾತ್ರಿ ಅದನ್ನೇ ಹೊದ್ದು ಮಲಗುತ್ತಿದ್ದಾಕೆ ಬೆಳಿಗ್ಗೆ ಏಳುತ್ತಲೇ ನೆಯ್ದ ಜಾಜಿ-ಮಲ್ಲಿಗೆ ದಂಡಗಳಿಗೆ ಲೆಕ್ಕವೇ ಇರಲಿಲ್ಲ.  ಜಾಜಿ ಗಿಡಗಳೋ ಆಕೆಯ ಬೊಗಸೆಗೆ ರಾಶಿ ರಾಶಿ ಹೂವುಗಳನ್ನು ಹಾಕುತ್ತಿದ್ದವು.
ಜಾಜಿ ನೇಯಲು ಬಿಸಿಲಿನಲ್ಲಿ ಬಾಡಿದ ಬಾಳೆ ದಿಂಡಿನಿಂದ ನೂಲು ಮಾಡಿ ಅದನ್ನು ದೊಡ್ಡದೊಂದು ಚೆಂಡಿನಾಕಾರದಲ್ಲಿ ಯಾವತ್ತೂ ಸುತ್ತಿಡುತ್ತಿದ್ದಳು. ಆ ಬಳ್ಳಿಯಿಂದ ಜಾಜಿ ದಂಡೆಗಳು ಸಿದ್ಧಗೊಳ್ಳುತ್ತಿದ್ದವು. ಜಾಜಿ ಹೂಗಳನ್ನು ಎಷ್ಟೊಂದು ಪಟಪಟನೆ ಕಟ್ಟಿ ದಂಡೆ ಮಾಡುತ್ತಿದ್ದಳೆಂದರೆ ಚೆಂಡಿನಾಕಾರದ ನೂಲಿನುಂಡೆ ಉರುಳಿಕೊಳ್ಳುವುದೇ ಅದಕ್ಕೆ ಸಾಕ್ಷಿಯಾಗಿತ್ತು. ಕಾಲನ್ನು ಉದ್ದಕ್ಕೆ ನೀಡಿಕೊಂಡು ಜಾಜಿ ಕಟ್ಟುತ್ತಾ ಅದರ ಜತೆಗೇ ಅನ್ನಪೂರ್ಣೆ ಸದಾಪೂರ್ಣೆ ಶಂಕರ ಪ್ರಾಣವಲ್ಲಭೆ... ಎನ್ನುವ ದೇವಿಸ್ತೋತ್ರದ ಪಠಣವೂ ಸಾಗುತ್ತಿತ್ತು. ಅದಾದ ಬಳಿಕ ಕಾಳಿದಾಸನ ಶ್ಯಾಮಲ ದಂಡಕ ಶುರುವಾಗುತ್ತಿತ್ತು. ಅದೂ ಮುಗಿದ ಮೇಲೆ ಮೃತ್ಯುಂಜಯ ಮಂತ್ರ. ಹಾಗೆ ಹೇಳುತ್ತ ಹೇಳುತ್ತ ಆಕೆ ಮಾಡುತ್ತಿದ್ದ ಕೆಲಸವೂ ಮುಗಿದು ಹೋಗುತ್ತಿತ್ತು. ಕೆಲಸದೊಂದಿಗೆ ದೇವರ ನಾಮಸ್ಮರಣೆ ಅನೂಚಾನವಾಗಿ ಸಾಗುತ್ತಿತ್ತು. ಆಕೆ ಕಟ್ಟುತ್ತಿದ್ದ ಜಾಜಿ ಹೂವಿನ ಕಟ್ಟುಗಳೂ ಅಷ್ಟೇ ನೀಟಾಗಿರುತ್ತಿದ್ದವು. ಆಚೀಚೆ ಜಾಜಿ ಮೊಗ್ಗುಗಳು, ನಡುವೆ ಹಾದು ಹೋದ ದಾರ. ನೀಳ ಕೇಶದ ಮದುಮಗಳಿಗೆ ಉದ್ದನೆಯ ಜಡೆ ಪೋಣಿಸಿದಂತೆ ಅದು ಕಾಣುತ್ತಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನಮ್ಮ ಇಡೀ ಮನೆಯೊಳಗೆ ಘಮ್ಮೆಂದು ಪಸರಿಸಿಕೊಳ್ಳುತ್ತಿದ್ದ ಜಾಜಿ ಹೂವಿನ ಪರಿಮಳ. ತೋಟದೊಳಗೆ ಹೋದಾಗಲೂ ಅದೇ ಪರಿಮಳ.
ಬೆಳಿಗ್ಗೆ ನಾನು ಶಾಲೆಗೆ ಹೋಗುವುದರೊಳಗೆ ಅಮ್ಮ ಸಾವಿರಾರು ಹೂವುಗಳನ್ನು ಪೋಣಿಸಿದ ಕಟ್ಟುಗಳನ್ನು ರೆಡಿ ಮಾಡಿ ಅವನ್ನು ಬಾಳೆ ಎಲೆಗಳಲ್ಲಿ ಸುತ್ತಿ ಕೊಡುತ್ತಿದ್ದಳು. ಅದನ್ನು ಪೇಟೆಯ ನಾಯ್ಕರ ಅಂಗಡಿಯಲ್ಲಿ ಇಟ್ಟು ನಾನು ಬಸ್ಸು ಹತ್ತುತ್ತಿದ್ದೆ. ಸಂಜೆ ಶಾಲೆ ಮುಗಿಸಿ ಬರುವಾಗ ನಾಯ್ಕರ ಅಂಗಡಿಗೆ ಹೋಗಿ ಮಾರಿದ ಜಾಜಿ ದಂಡೆಯ ದುಡ್ಡು ಪಡೆದು ಅಮ್ಮನಿಗೆ ಕೊಡುತ್ತಿದ್ದೆ. ಕೆಲವು ಸೀಸನ್ ಗಳಲ್ಲಿ ಮುಂಚಿತವಾಗಿಯೇ ಆರ್ಡರ್ ಬರುತ್ತಿದ್ದವು. ಇವು ಆಕೆಯ ಉತ್ಸಾಹವನ್ನು ಇನ್ನಷ್ಟು ಇಮ್ಮಡಿ ಮಾಡುತ್ತಿದ್ದವು. ಕಾರಣವಿಷ್ಟೇ; ಹೂವು ಮಾರುವುದರಿಂದ ಒಂದಷ್ಟು ಕಾಸು ಬರುತ್ತಿತ್ತು. ಆ ಕಾಸಿನಲ್ಲಿ ರವಿಕೆ ಹೊಲಿಸಿಕೊಳ್ಳಬಹುದು, ಮನೆಯಂಗಳಕ್ಕೇ ತಿಂಗಳಿಗೊಮ್ಮೆ ಬರುವ ಬಳೆಗಾರ್ತಿಯರಿಂದ ಹಸಿರು, ಕೆಂಪು ಬಣ್ಣದ ಮಣ್ಣಿನ, ಗಾಜಿನ ಬಳೆಗಳನ್ನು ಖರೀದಿ ಮಾಡಬಹುದು, ದಪ್ಪನೇ ಬಾರ್ಡರಿನ ಲಂಗವನ್ನು ಹೊಲಿಸಿಕೊಳ್ಳಬಹುದು, ರೂಪಾಯಿಯಗಲದ ಬಿಂದಿ ಕೊಳ್ಳಬಹುದು, ಮಕ್ಕಳಿಗಾಗಿಯೂ ಏನಾದರೂ ಕೊಳ್ಳಬಹುದು... ಅಮ್ಮನ ಆಸೆಯ, ಬೇಡಿಕೆಯ ಪಟ್ಟಿಗಳಲ್ಲಿ ಇದಕ್ಕಿಂತ ಮಿಗಿಲಾದುದು ಏನೂ ಇರಲಿಲ್ಲ.
ಅಮ್ಮ ಅನೇಕ ವರ್ಷಗಳ ಕಾಲ ಈ ಜಾಜಿ ಹೂವಿನ ದಂಡೆಗಳನ್ನು ಕಟ್ಟುತ್ತ ಕಟ್ಟುತ್ತ ನಮ್ಮನ್ನು ಬೆಳೆಸಿದಳು. ಹಾಗೆ ಕಟ್ಟುತ್ತ ಕಟ್ಟುತ್ತ ಆಕೆಯ ಹಣೆಯ ನಿರಿಗೆಗಳೂ ಬೆಳೆದವು, ಕೈಯಲ್ಲಿನ ಸುಕ್ಕುಗಳು ಬಲಿತವು. ಹಾಗೆ ಬಲಿತಂತೆಲ್ಲ ಜಾಜಿ ಕಟ್ಟೆಗಳಿಗೆ ಜೀವ ತುಂಬಬೇಕಾದಷ್ಟು ಶಕ್ತಿಯೂ ಆಕೆಯಲ್ಲಿ ಇರಲಿಲ್ಲ.

(ಅಮ್ಮ ಕೊಟ್ಟ ಜಾಜಿ ದಂಡೆ ಕೃತಿಯಲ್ಲಿ ಪ್ರಕಟವಾದ ಲೇಖನ)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ