ಯಾವ ಜನುಮದ ಗೆಳೆಯನೋ...
ಆವತ್ತು ವಾರದ ರಜೆಯಿತ್ತು....
ಬೆಂಗಳೂರಿನಲ್ಲಿ ವಿಪರೀತ ಧಗೆ. ಹೊರಗೆ ಕಾಲಿಡಲಾಗದಷ್ಟು ಕೆಂಡದಂತಹ ಬಿಸಿಲು. ಬೆಳಗಿನ ಜಾವವೇ ನಮ್ಮ ಸೈಟಿನ ಭೂಮಿ ಪೂಜೆಯನ್ನು ಅಪ್ಪ-ಅಮ್ಮನ ಸಾನಿಧ್ಯದಲ್ಲಿಯೇ ಮಾಡಿಸಿದ್ದೆ. ಅಪ್ಪ ಸುಮ್ಮನೆ ಕುಂತು ಎಲ್ಲವನ್ನೂ ಶಾಂತಚಿತ್ತದಿಂದ ಮುಗಿಸಿದ್ದರು. ಅಮ್ಮ ಅಪ್ಪನಿಗೆ ಸಾಥ್ ನೀಡಿದ್ದಳು. ಬೆಳಗಿನ ಏಳಕ್ಕೆಲ್ಲ ಆ ಕೆಲಸ ಮುಗಿದೇ ಹೋಗಿತ್ತು. ಹಾಗಾಗಿ ಅಪ್ಪ ಇಡೀ ದಿನ ಸುಡು ಬಿಸಿಲಿನಲ್ಲಿ ಹೊರಗೆ ಹೋಗಿರಲಿಲ್ಲ. ಸಂಜೆ ಭಾರಿ ಮಿಂಚು-ಗುಡುಗು, ಮಳೆ ಬರುವ ಲಕ್ಷಣ. ಆದರೆ, ಹನಿಗಳು ಧರೆಗೆ ಬಿದ್ದು ಮಣ್ಣಿನ ವಾಸನೆ ಮೂಗಿಗೆ ಅಡರಲೇ ಇಲ್ಲ. ರಾತ್ರಿ ಊಟವೆಲ್ಲ ಮುಗಿದ ಬಳಿಕ, ಒಂದು ವಾಕಿಂಗ್ ಹೋಗಿ ಬರೋಣ ಬನ್ನಿ ಅಪ್ಪ ಎಂದು ಕರೆದೆ.
"ಹ್ಞಾಂ! ಹೋಗುವಾ...!" ಎಂದು ಉತ್ಸಾಹದಿಂದಲೇ ಎದ್ದರು.
ಬಡಾವಣೆಯ ಖಾಲಿ ಖಾಲಿ ರಸ್ತೆಯಲ್ಲಿ ಅಪ್ಪನ ಕೈಹಿಡಿದು ವಾಕಿಂಗ್ ಹೋಗುವುದೆಂದರೆ ಎಲ್ಲಿಲ್ಲದ ಖುಷಿ ನನಗೆ. ಹಿಂದಿನ ದಿನಗಳಲ್ಲಾಗಿದ್ದರೆ ಅಪ್ಪ ಬಾಯಿತುಂಬ ಮಾತನಾಡುತ್ತಿದ್ದರು. ಅಪಾರವಾದ ನೆನಪಿನ ಶಕ್ತಿ ಅವರಿಗಿತ್ತು. ಮುಂಬೈನಲ್ಲಿ ಬಹಳ ವರ್ಷಗಳ ಕಾಲ ಉದ್ಯೋಗದಲ್ಲಿದ್ದ ಅವರು ಅನೇಕ ಸಂಗತಿಗಳನ್ನು ಹೇಳಿಕೊಳ್ಳುತ್ತಿದ್ದರು. ಸಂಸ್ಥಾ ಕಾಂಗ್ರೆಸ್, ಮುರಾರ್ಜಿ ದೇಸಾಯಿ, ಇಂದಿರಾ ಗಾಂಧಿ, ಸಂಜಯ್ ಗಾಂಧಿ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಿದ್ದರು. ಅವರ ಮಾತು, ನೆನಪುಗಳನ್ನು ಹಂಚಿಕೊಳ್ಳಲೆಂದೇ ನಮ್ಮ ಮನೆಗೆ ಸಂಜೆ ಹೊತ್ತು ಅವರ ಮಿತ್ರರು ಬರುತ್ತಿದ್ದರು. ಪಿಲಿಪ್ ನಾಯಕ್, ಸದಾಶಿವ ಸೇರೇಗಾರ್, ಡಾ.ನಂಬಿಯಾರ್, ಡಾ.ಮೀನಾಕ್ಷಿ, ಬಾಬು ರಾವ್, ರಾಜೀವ್ ಶೆಟ್ಟಿ ಹೀಗೆ ಪಟ್ಟಿ ಬೆಳೆಯುತ್ತದೆ. ಮನೆಯ ಎದುರಿಗೇ ಇದ್ದ ಹೋಲಿ ಕ್ರಾಸ್ ಎಂಬ ಆಸ್ಪತ್ರೆಯ ಡಾಕ್ಟರ್ ಗಳು, ಕೆಲವೊಮ್ಮೆ ಅಲ್ಲಿನ ನನ್ ಗಳು ಬಂದು ಮನೆಯ ಅಂಗಳದಲ್ಲಿ ಮಾತಿಗೆ ಕೂರುತ್ತಿದ್ದರು. ಗಂಟೆಗಳ ಕಾಲ ಮಾತು ಮುಂದುವರಿಯುತ್ತಿತ್ತು.
ಈ ಆಸ್ಪತ್ರೆಗೆ ಹೊಸದಾಗಿ ಒಬ್ಬರು ಡಾಕ್ಟರ್ ಬಂದಿದ್ದರು. ಯುವ, ನೀಳಕಾಯದ ಡಾಕ್ಟರ್. ಟಿಪ್-ಟಾಪ್ ಡ್ರೆಸ್ ಮಾಡುತ್ತಿದ್ದ ಅವರಿಗೆ (ಡಾಕ್ಟರ್ ಹೆಸರು ನೆನಪಾಗುತ್ತಿಲ್ಲ) ಕನ್ನಡ ಅಷ್ಟಾಗಿ ಬರುತ್ತಿರಲಿಲ್ಲ. ನಮ್ಮೂರಲ್ಲಿ ಇಂಗ್ಲಿಷ್ ಬರುತ್ತಿದ್ದವರು ಬಹುತೇಕ ಯಾರೂ ಇರಲಿಲ್ಲ. ಡಾಕ್ಟರ್ ಗೆ ಮಾತನಾಡಲಿಕ್ಕಂತ ಯಾರೂ ಇರಲಿಲ್ಲ. ಹಾಗಿದ್ದ ಅವರು ಎದುರಿನ ತೋಟದಲ್ಲಿದ್ದ ನಮ್ಮ ಮನೆಗೆ ಬಂದರು. ಯಾವುದೋ ಕೆಲಸದಲ್ಲಿ ಮಗ್ನರಾಗಿದ್ದ ಅಪ್ಪನಿಗೆ ನಮಸ್ಕಾರ ಮಾಡಿದರು. ಅರೆಬರೆ ಕನ್ನಡದಲ್ಲಿ ಮಾತನಾಡುತ್ತಿದ್ದ ಅವರನ್ನು ಕಂಡ ಅಪ್ಪ, ಇಂಗ್ಲಿಷ್ನಲ್ಲೇ ಮಾತು ಶುರುಮಾಡಿಕೊಂಡಿದ್ದರು. ಅದನ್ನು ಕಂಡು, "ಯೂ ಸ್ಪೀಕಿಂಗ್ ಇನ್ ಇಂಗ್ಲಿಷ್!" ಎಂದು ಅಚ್ಚರಿಯಿಂದ ತಮ್ಮ ಲಂಬೂ ದೇಹವನ್ನು ಬಗ್ಗಿಸಿ ಕೈ ಮುಗಿದಿದ್ದರು.
ಅಂದಿನಿಂದ ಅವರು ನಮ್ಮ ಮನೆಗೆ ವಾರಕ್ಕೊಮ್ಮೆಯಾದರೂ ಹಾಜರಾಗಿ ಬಿಡುತ್ತಿದ್ದರು. ವಿಶಾಲವಾದ ಅಂಗಳದಲ್ಲಿ, ತಣ್ಣನೆ ಬೀಸುವ ಗಾಳಿಯ ನಡುವೆ ಕುಂತು ಇಬ್ಬರೂ ಇಂಗ್ಲಿಷ್ ನಲ್ಲಿ ಗಪ್ಪಾ ಹೊಡೆಯುತ್ತಿದ್ದರು. ಆಧ್ಯಾತ್ಮ, ರಾಜಕೀಯ, ಆಯುರ್ವೇದದ, ಚೂರುಪಾರು ಸಾಹಿತ್ಯದ ಬಗ್ಗೆ ಮಾತು ನಡೆಯುತ್ತಿತ್ತು. ಇಬ್ಬರೂ ಒಳ್ಳೆಯ ಗೆಳೆಯರಾಗಿ ಬಿಟ್ಟಿದ್ದರು. ಅಲೋಪತಿ ಡಾಕ್ಟರಾಗಿದ್ದ ಅವರು ಅಪ್ಪ ಹೇಳುತ್ತಿದ್ದ ಆಯುರ್ವೇದದ ಕಥೆಗಳನ್ನು ಕುತೂಹಲದಿಂದ ಕೇಳಿಸಿಕೊಳ್ಳುತ್ತಿದ್ದರು. ಆಗಿನ್ನೂ ಹತ್ತನೆ ತರಗತಿಯಲ್ಲಿ ಓದುತ್ತಿದ್ದ ನನಗೆ ಹತ್ತಿರ ಹೋಗಿ ಅವರ ಮಾತನ್ನು ಕೇಳಿಸಿಕೊಳ್ಳುವ ಅವಕಾಶ ಇರಲಿಲ್ಲ. ಹಾಗೆ ಮಾಡಿದಾಗಲೆಲ್ಲ ಅಪ್ಪ, "ಸಣ್ಣ ಮಕ್ಳಿಗೆಲ್ಲ ಎಂತಕೆ ದೊಡ್ಡರ್ ವಿಷಯ," ಎಂದು ನನ್ನನ್ನು ಬೈದು ಒಳಗೆ ಅಟ್ಟುತ್ತಿದ್ದರು. ನಾನೋ ಅನೇಕ ಬಾರಿ ಕಿಟಕಿಯಲ್ಲಿ ಅಡಗಿಕೊಂಡು ಕೇಳಿಸಿಕೊಳ್ಳುತ್ತಿದ್ದುದೂ ಇತ್ತು. ಅವನ್ನೆಲ್ಲ ನೋಟ್ ಮಾಡಿಕೊಂಡು ಇಟ್ಟುಕೊಂಡಿದ್ದರೆ ಎಷ್ಟು ಚೆನ್ನಾಗಿತ್ತು ಅಂತ ಇವತ್ತು ಅನಿಸುತ್ತಿರುತ್ತದೆ. ಕಾಲದ ಗಿರಣಿಯೊಳಗೆ ಎಲ್ಲವೂ ಪುಡಿಗಟ್ಟಿವೆ.
ಅಪ್ಪನ ಮಾತಿನ ವೈಖರಿಗೆ ಅನೇಕರು ಗೆಳೆಯರಾಗಿ ಬಿಡುತ್ತಿದ್ದರು. ಹಾಗಂತ ತಮ್ಮ ವೇವ್ಲೆಂಥ್ ಗೆ ಹೊಂದದವರನ್ನು ಅವರು ಎಂದಿಗೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿರಲಿಲ್ಲ. ಅವರ ಗೆಳೆಯರಾಗಿದ್ದವರ ಪಟ್ಟಿಯನ್ನು ಇವತ್ತು ಹಠಾತ್ ನೆನಪಿಗೆ ಬಂದು ಹಳೆಯ ದಿನಗಳು ಫ್ಲಾಶ್ ಬ್ಯಾಕ್ ಆಗಿರುವುದಕ್ಕೆ ಕಾರಣವೂ ಇದೆ. ಈ ರಾತ್ರಿ ಅವರೊಂದಿಗೆ ವಾಕ್ ಹೋಗುತ್ತಿದ್ದಾಗ, ಬಡಾವಣೆಯ ಮಧ್ಯೆದಲ್ಲಿ ಅವರನ್ನು ಅರ್ಧ ದಾರಿಯಲ್ಲಿ ನಿಲ್ಲಿಸಿ, ಕೈಯನ್ನು ಅದುಮುತ್ತಾ ತಮಾಷೆಯ ಲಹರಿಯಲ್ಲೇ ಕೇಳಿದೆ;
"ನೀವು ಯಾರು ಅಪ್ಪಯ್ಯಾ? "
"ನಾನಾ? ಯಾರಂತ ಗೊತ್ತಿಲ್ಲ, ಯಾರು ನಾನು?" ಅಂತ ನನ್ನ ಮುಖಮುಖ ನೋಡಿದರು. ನನಗೆ ಆಶ್ಚರ್ಯವಾಯಿತು.
"ನಿಮ್ಮ ಹೆಸರು ಗೊತ್ತಿಲ್ಲವಾ? ಒಮ್ಮೆ ನೆನಪು ಮಾಡಿಕೊಳ್ಳಿ" ಎಂದೆ. ಅವರು ಕ್ಷಣಕಾಲ ಯೋಚಿಸಿ, ನಾನು ಪಣಿಯಾ ಅಂದರು. ರಂಗನಾಥ್ ಹೆಸರಿನ ಅಪ್ಪನನ್ನು ಚಿಕ್ಕವರಿರುವಾಗ ಪಣಿಯಾ ಎಂದು ಕರೆಯುತ್ತಿದ್ದರು. ಕಾರಣ ಅವರು ಚಿಕ್ಕವರಿರುವಾಗ ಸಾಕಷ್ಟು ಪಣಕ್ (ತಂಟೆ) ಮಾಡುತ್ತಿದ್ದರು. ಅದಕ್ಕೇ ಅವರು ಪಣಿಯಾ.
"ಹಾಗಾದರೆ ನಾನು ಯಾರು?" ನಾಲ್ಕು ಹೆಜ್ಜೆ ಮುಂದೆ ಹಾಕುತ್ತಾ ಮುಂದಿನ ಪ್ರಶ್ನೆ ಹಾಕಿದೆ. ಮತ್ತೆ ನನ್ನ ಮುಖವನ್ನೇ ನೋಡಿದ ಅವರು,
"ನೀನು ನನ್ನ ಗೆಳೆಯಾ!" ಅಂದು ಬಿಟ್ಟರು.
ಅವರ ಮಾತು ಕೇಳಿ ನಿಜಕ್ಕೂ ಸಖೇದಾಶ್ಚರ್ಯವಾಯಿತು. ಯಾವತ್ತೂ ಅವರು ಹೀಗೆ ಹೇಳಿರಲಿಲ್ಲ. ಒಂದೋ ನನ್ನ ಮಗ, ಇಲ್ಲವೇ ಮಂಜು ಅನ್ನುತ್ತಿದ್ದುದೇ ಸಾಮಾನ್ಯವಾಗಿತ್ತು. ಆದರೆ ಇವತ್ತು ಅವರ ಮಾತು ಕೇಳಿ ಸ್ಟನ್ ಆಗಿ ನಿಂತು ಬಿಟ್ಟೆ..
"ಏನು ನಾನು ನಿಮ್ಮ ಗೆಳೆಯನಾ? ನಿಮ್ಮ ಮಗ ಅಲ್ವಾ ಅಪ್ಪಯ್ಯ?"
"ಅಲ್ಲ...... ಮಗ ಅಲ್ಲ, ಗೆಳೆಯ" ಎಂದು ಮತ್ತೆ ಒತ್ತಿ ಹೇಳುತ್ತಾ ಮುಂದಿನ ಹೆಜ್ಜೆ ಹಾಕಿದರು. ಮುಂದೆ ಹೋಗುವಾ ಬಾ ಎಂದು ಕೈ ಹಿಡಿದು ಎಳೆದರು.
"ನಾನು ಯಾಕೆ ನಿಮ್ಮ ಗೆಳೆಯ?" ಅಂತ ಮತ್ತೆ ಪ್ರಶ್ನೆ ಮಾಡಿದೆ.
"ಹಮ್ ಗೆಳೆಯನೇ... " ಎನ್ನುತ್ತಾ ಕ್ಷಣಹೊತ್ತು ಮೌನಕ್ಕೆ ಶರಣಾದರು. ಕೆಲ ಹೆಜ್ಜೆ ಹಾಕಿದ ಮೇಲೆ ಮತ್ತೆ ಅದೇ ಪ್ರಶ್ನೆಯನ್ನು ಕೇಳಿದೆ.
"ಮಗ ಮನೆಯಲ್ಲಿ ನೋಡಿಕೊಳ್ಳುತ್ತಾನೆ. ಆದ್ರೆ, ಗೆಳೆಯ ಹೀಗೆ ಹೊರಗೆಲ್ಲ ಕರಕೊಂಡು ಬಂದು ಹೊರಗಡೆ ಗಿಡ, ಮರ ಇವೆಲ್ಲ ಇರುವುದನ್ನು ತೋರಿಸುತ್ತಾನೆ. ನೀನು ನನ್ನ ಯಾವ ಜನ್ಮದ ಗೆಳೆಯನೋ ಏನೋ ದೇವರಿಗೇ ಗೊತ್ತು...!"
"ಎಂಥಾ ಮಾತು ಅಂದ್ರಿ ಅಪ್ಪಯ್ಯ ನೀವು!" ಎಂದು ಮತ್ತೆ ಅವರ ಕೈ ಅದುಮಿದೆ.
ಗೆಳೆಯ ಮಾತ್ರ ಕೊನೆಯ ತನಕ ಇರುವುದು... ಅಂತ ಹೇಳಿದ ಅವರಿಗೆ, "ಎಷ್ಟೊಂದು ಜನ ಫ್ರೆಂಡ್ಸು ಇದ್ರಲ್ಲಾ ನಿಮಗೆ, ಎಲ್ಲ ಎಲ್ಲಿ ಹೋದರು?" ಎಂದು ಕೇಳಿದೆ.
"ನನಗೆ ಫ್ರೆಂಡ್ಸ್ ಇದ್ರಾ? ಯಾರೂ ಈಗ ನೆನಪಿಗೆ ಬರುವುದಿಲ್ಲ. ಒಂದೂ ಗೊತ್ತಾಗುವುದಿಲ್ಲ," ಅನ್ನುತ್ತಾ ಮತ್ತೆ ಮನೆಯತ್ತ ಹೆಜ್ಜೆ ಹಾಕಿದರು. ಅಪ್ಪನ ನೆನಪಿನ ಶಕ್ತಿ ಢಾಳಾಗಿದ್ದಾಗ, ಅವರ ಮಾತುಗಳನ್ನು ಕೇಳಲಿಕ್ಕೆಂದೇ ಬರುತ್ತಿದ್ದ ಸ್ನೇಹಿತರೆಲ್ಲ ಎಲ್ಲಿ ಹೋದರು? ಎಂಬ ಪ್ರಶ್ನೆ ನನ್ನಲ್ಲಿಯೇ ಉಳಿದು ಬಿಟ್ಟಿತು.

ಕಾಮೆಂಟ್‌ಗಳು