ಅವಳಿಗಳ ಮೋಹಕೆ ಕರಗಿದ ಪರ್ವತಗಳು!

ಅದು ಡೆತ್ ಝೋನ್!

ಪರ್ವತಾರೋಹಿಗಳು ಹಾಗೆಂದು ಅದನ್ನು ಕರೆಯುತ್ತಾರೆ. ಯಾವುದೇ ಪರ್ವತವಿರಲಿ, 26000 ಅಡಿಗಿಂತ ಆಚೆಗಿನ ಶಿಖರಾಗ್ರವೆಂದರೆ  ಯಾವತ್ತೂ ಸಾವಿನ ಸಹವಾಸ. ಎಂತಹ ಗಟ್ಟಿಗುಂಡಿಗೆ, ಕಬ್ಬಿಣದ ದೇಹವೂ ಅಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುವುದಿಲ್ಲ. ಹನಿ ಆಮ್ಲಜನಕ ಸಿಕ್ಕರೂ ಸಾಕೆಂಬ ಸ್ಥಿತಿ. ಕಣ್ಣಿಗೆ ನಿದ್ದೆ ಹತ್ತುವುದಿಲ್ಲ. ತಿಂದ ಆಹಾರ ಜೀರ್ಣವಾಗುವುದಿಲ್ಲ. ಶ್ವಾಶಕೋಶವೇ ಊದಿಕೊಳ್ಳಲು ಶುರುವಾಗುತ್ತದೆ. ಯಾವುದೂ ನಿಮ್ಮ ಹತೋಟಿಗೆ ಸಿಕ್ಕುವುದಿಲ್ಲ. ಕೈ ಚಾಚಿದರೆ ನೀಲಾಕಾಶವೇ ಎಟಕುವಂತಿರುತ್ತದೆ, ಆದರೆ ಜೀವ ಹಿಡಿಹಿಡಿ. ಜೀವನದ ಅಂತಿಮ ಕ್ಷಣ ಕಣ್ಣಂಚಿಗೇ ಬಂದು ಕುಂತಂತೆ, ಅದು ಇನ್ನೇನು ಜಾರಿಯೇ ಬಿಟ್ಟಿತು ಎಂಬೋ ಭಾವ!

ಅದೊಂದೇ ಅಲ್ಲ, ಒಂದು ಶಿಖರದ ತುತ್ತತುದಿಗೇ ಏರಿ ಬಿಡಬೇಕೆಂದರೆ ನೇರಾ ನೇರ ಏಣಿ ಇಟ್ಟು ಹತ್ತುವಂತಾದ್ದಲ್ಲ. ಹತ್ತಾರು ಕಣಿವೆಗಳನ್ನು ದಾಟಬೇಕು, ಕಣ್ಣ ಮುಂದೇ ಕರಗಿ ಹೋಗುವ ನೀರ್ಗಲ್ಲುಗಳ ಬೆಟ್ಟಗಳ ನಡುವಲೊಂದು ಏಣಿ ಇಟ್ಟು ಮುಂದೆ ಕ್ರಮಿಸಬೇಕು. ಕೆಳಗೆ ಪ್ರಪಾತ, ಮೇಲಂತೂ ಕಣ್ಣೆತ್ತಿ ನೋಡುವ ಹಾಗೇ ಇಲ್ಲ. ಒಂದರ್ಥದಲ್ಲಿ ಅದೂ ಡೆತ್ ಝೋನ್!
ಅಂತಹ ಒಂದು ಪರ್ವತ ತುಂಗವನ್ನೇರಿ, ಕೊರಕಲುಗಳನ್ನು ದಾಟಿ ಬಂದು ನೋಡಿ, ಬದುಕು ಧನ್ಯವೆನ್ನುತ್ತದೆ. ಆದರೆ ಮತ್ತೆ ಮತ್ತೆ ಅಂತಹ ಡೆತ್ ಝೋನ್ಗಳನ್ನೇ ಕೆಣಕಿ ಬರುವುದಕ್ಕೆ ಎಂತಹ ಗುಂಡಿಗೆ ಬೇಕು ಹೇಳಿ? ಹಾಗೆ ಬೃಹತ್ ಹಿಮದ ಬುದ್ಭುದಗಳನ್ನು ಮೆಟ್ಟಿ, ನೂರಾರು ನೀರ್ಗಲ್ಲುಗಳನ್ನು ದಾಟಿ ಸಪ್ತ ಪರ್ವತಗಳನ್ನು ಏರಿ ಬಂದವರು ಈ ಹಾಲುಗಲ್ಲದ ಅವಳಿ ಸಹೋದರಿಯರು. ಅವರು ಎರಡು ಜೀವ ಒಂದೇ ದೇಹ ಎಂಬಂತಿರುವ ನುಂಗ್ಶಿ ಮತ್ತು ತಾಶಿ ಮಲ್ಲಿಕ್.

`ನಿಜ್ಜ, ಅಂತಹ ಅನೇಕ ಡೆತ್ ಝೋನ್ಗಳನ್ನು ಅಕ್ಷರಶಃ ಮುಟ್ಟಿ ಬಂದಿದ್ದೇವೆ. ಎವರೆಸ್ಟ್ ಶಿಖರವನ್ನು ಏರುವಾಗ ಖುಂಬು ಹಿಮದ ಮನೆಗಳನ್ನು ದಾಟಿ ಮುಂದೆ ಕ್ರಮಿಸಬೇಕು. ಒಂದು ಹೆಜ್ಜೆ ಇಟ್ಟರೆ ಅಲುಗಾಡುವ ಏಣಿಯ ಮೇಲೆ ಬ್ಯಾಲೆನ್ಸ್ ಮಾಡುತ್ತ ಹಿಮದ ಕಣಿವೆಗಳನ್ನು ದಾಟುವುದೆಂದರೆ ನಿಜಕ್ಕೂ ಸಾವಿನ ಕಣಿವೆಗಳನ್ನು ದಾಟಿದಂತೆ. ಇವನ್ನೆಲ್ಲ ಹೇಳಲಿಕ್ಕೆ ನಮ್ಮ ಬಳಿ ಪದವೇ ಸಿಗುವುದಿಲ್ಲ' ಎನ್ನುತ್ತಾರೆ ನುಂಗ್ಶಿ ಮಲ್ಲಿಕ್. ಖುಂಬು ನೀರ್ಗಲ್ಲ ಹಾದಿ ನಿಜಕ್ಕೂ ಸಾವಿನ ನಿತ್ಯ ದರ್ಶನ. ಆಗಸಕ್ಕೆ ಲಿಂಕ್ ಮಾಡಿಕೊಂಡಂತೆ ಹಿಮದ ರಾಶಿ. ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಕರಗುವ ನೀರ್ಗಲ್ಲು ಯಾವಾಗ ಹಾಸಿಗೆಯಂತೆ ಮಗುಚಿಕೊಳ್ಳುತ್ತದೆ ಎಂಬುದು ಅರಿವಿಗೇ ಬರುವುದಿಲ್ಲ. ಹಾಗೇನಾದರೂ ಆಯಿತೋ ಅದರ ಕೆಳಗಿದ್ದವರು ಇರುವೆಗಳಿಗೆ ಸಮಾನ!

ಹಾಗಂತ, ಇಂತಹ ಹಾದಿಗಳನ್ನು ಕ್ರಮಿಸಲು, ಉತ್ತುಂಗವನ್ನು ಏರಲು ಪುರುಷರಷ್ಟೇ ಸಮರ್ಥರೇ? ಪರ್ವತಗಳಿಗೆಲ್ಲಿ ಲಿಂಗ ತಾರತಮ್ಯ? ಬೆಟ್ಟ ಹತ್ತೋ ಕೆಲ್ಸವನ್ನು ಹುಡ್ಗೀರು ಮಾಡಬಾರದು ಎಂಬುದಕ್ಕೆ ಸೆಡ್ಡು ಹೊಡೆದವರು ಈ ಅವಳಿಗಳು.  `ಊಂಚಾಯಿಯೋಂ ಸೆ ಆಗೇ' -ಉತ್ತುಂಗಕ್ಕಿಂತ ಆಚೆ ಏನಿದೆ ನೋಡೇ ಬಿಡೋಣ ಎಂದು ಹೊರಟ ಮಲ್ಲಿಕ್ ಸಹೋದರಿಯರಿಗೆ ಯಾವ ಶಿಖರಗಳೂ ಸಾಟಿಯಾಗಲಿಲ್ಲ. ಯಾವ ನೀರ್ಗಲ್ಲೂ ದೃತಿಗೆಡಿಸಲಿಲ್ಲ. ಕ್ರಮಿಸಿದ ಹಾದಿ, ಏರಿದ ಎತ್ತರ ಎಲ್ಲವೂ ದಾಖಲೆಯಾಗುತ್ತ ಹೋಯಿತು. ಕಳೆದ ಡಿಸೆಂಬರ್ನಲ್ಲಿ ಹಿಮದ ದಾರಿಯಲ್ಲಿ ಸ್ಕೀಯಿಂಗ್ ಮಾಡುತ್ತ ದಕ್ಷಿಣ ಧ್ರುವ ತಲುಪಿದವರು ಕೊನೆಗೆ ಮೊನ್ನೆ ಮೊನ್ನೆ ಉತ್ತರಧ್ರುವದಲ್ಲೂ ಭಾರತದ ಧ್ವಜ ನೆಟ್ಟು ಬಂದ ಮೊದಲ ಅವಳಿ ಸಹೋದರಿಯರು ಎಂಬ ಕೀತರ್ಿಗೂ ಭಾಜನರು.
ಕೇವಲ ಮೂರೇ ಮೂರು ವರ್ಷಗಳಲ್ಲಿ ಏಳು ಪರ್ವತಗಳನ್ನೇರಿದ 23 ವರ್ಷ ವಯಸ್ಸಿನ ದಿಟ್ಟೆಯರು ಹಿಮಾಲಯದ ಶಿಖರಾಗ್ರವನ್ನು ನೋಡುತ್ತಲೇ ಬೆಳೆದವರು. ಉತ್ತರಾಖಂಡ್ನ ಡೆಹ್ರಾಡೂನ್ನವರಾದ ಅವಳಿಗಳ ಬೇರುಗಳಿರುವುದು ಹರ್ಯಾಣದ ಹಳ್ಳಿಗಳಲ್ಲಿ. ಚಿಕ್ಕವರಿರುವಾಗಲೇ ಉತ್ತುಂಗವನ್ನೇರಬೇಕು ಎಂಬ ಕನಸು. ತಾರುಣ್ಯದ ಹೊತ್ತಿನಲ್ಲಿ ಅದು ಇನ್ನಷ್ಟು ಗಟ್ಟಿಯಾಯಿತು. ಕಿಲಿಮಂಜಾರೋ ಇರಲಿ ಎವರೆಸ್ಟ್ ಇರಲಿ, ಅದು ಎಷ್ಟೇ ಎತ್ತರಕ್ಕೇ ಬೆಳೆದಿರಲಿ, ನಾವಲ್ಲಿಗೇರಬೇಕು ಎಂಬ ವಾಂಛೆ. ತಂದೆ ಕರ್ನಲ್ ವಿರೇಂದ್ರ ಮಲ್ಲಿಕ್ ಯಾವುದನ್ನೂ ವಿರೋಸಲಿಲ್ಲ. ಶಾಲೆಯಾಚೆಗಿನ ಎಲ್ಲ ಆಟಗಳಿಗೂ ಸಮ್ಮತಿ ಎಂದರು. ಬೆಳಗಿನ ಐದಕ್ಕೇ ಎದ್ದು ದೇಹ ದಂಡನೆ ಮಾಡಲು ಅಪ್ಪನ ಶಿಸ್ತೇ ಪಾಠವಾಗಿತ್ತು. ಉತ್ತಮ ಅಥ್ಲೀಟ್ಗಳಾಗಿ ಬೆಳೆದರು. ಓಟದಲ್ಲಿ ಮುಂಚೂಣಿಯಲ್ಲಿದ್ದರು. ಅಮ್ಮ ವಾಕಿಂಗ್ಗೆಂದು ಹೊರಟರೆ ಅವರೊಂದಿಗೇ 15 ಕೆ.ಜಿ. ಭಾರ ಹೊತ್ತು ನಡೆಯುವ ತಾಲೀಮು ಮಾಡಿದರು. ಚಾರಣಕ್ಕೆ ಮನೆಯ ಪಕ್ಕದಲ್ಲೇ ಬೆಟ್ಟಗಳಿದ್ದವು. ಡೆಹ್ರಾಡೂನ್ನಲ್ಲಿ ಶಾಲಾ ದಿನಗಳನ್ನು ಕಳೆದ ಮಕ್ಕಳು ಮಾಡಿದ್ದು ಬಿಎ-ಜರ್ನಲಿಸಂ.
ಅಲ್ಲಿಂದ ಮುಂದಿನ ಪ್ರತಿಯೊಂದು ದಿನವೂ ಸವಾಲೇ. ಆದರೆ ಚಾರಣವೆಂಬ ಮೋಹ ಅವರ ರಕ್ತದೊಳಗೆ ಸೇರಿ ಹೋಗಿತ್ತು. ನುಂಗ್ಶಿ-ತಾಶಿ ಅವರ ಕಣ್ಣ ಮುಂದೆ ಬೃಹತ್ತಾಗಿ ನಿಂತಿದ್ದ ಜಗತ್ತಿನ ಪರ್ವತಗಳ ಸಾಲು ಕುಬ್ಜವಾದುವು. ಉತ್ತರಧ್ರುವ- ದಕ್ಷಿಣ ಧ್ರುವಗಳ ತುಂಬ ತುಂಬಿ ಹೋಗಿದ್ದ ಬೆಳ್ನೊರೆಯ ಹಿಮದ ಗುಡ್ಡೆಗಳು ಅವರ ಹಾಲು ಚೆಲ್ಲಿದ ನಗೆಯ ಮುಂದೆ ಹಾಲಿನಂತೆ ಕರಗಿ ಹೋದವು. ಕಾರಣವಿಷ್ಟೇ- ಜಸ್ಟ್ ಡೆಡಿಕೇಶನ್!
ಇವೆಲ್ಲದರ ಜತೆಗೇ ಒಂದು ಬಹುಮುಖ್ಯ ಸಂಗತಿ; ಇಬ್ಬರ ನಡುವಿನ ವೇವ್ಲೆಂಗ್ತ್. ಎಷ್ಟೋ ಬಾರಿ ಅಣ್ಣ-ತಮ್ಮಂದಿರು, ಅಕ್ಕ-ತಮ್ಮಂದಿರು, ಹೋಗ್ಲಿ ಗಂಡ-ಹೆಂಡತಿಯ ನಡುವೆ ಮಿಸ್ ಆಗೋದೇ ಈ ವೇವ್ಲೆಂಗ್ತ್. ಎರಡು ಹೃದಯ ಎಂದೂ ಹೊಂದಾಣಿಕೆಯಾಗದ ಸಂದರ್ಭಗಳೇ ನಮ್ಮ ಕಣ್ಣಿಗೆ ಕಾಣುತ್ತಿರುತ್ತದೆ. ಆದರೆ ನುಂಗ್ಶಿ ಮತ್ತು ತಾಶಿ ಎಂಬ ಅವಳಿಗಳ ಹೃದಯ ಸದಾ ಒಂದೇ ನುಡಿ, ಒಂದೇ ತುಡಿತ. ಇಬ್ಬರೂ ಬೇಸಿಕ್ ಮೌಂಟನೇರಿಂಗ್ ಕೋಸರ್್ ಮುಗಿಸಿ ಬಂದ ತಕ್ಷಣ ಯಸ್! ಇದೇ ನಮ್ಮ ಗುರಿ, ನಮ್ಮ ಛಲ ಎಂದುಕೊಂಡರು. ಅವಳಿಗಳಾಗಿರುವುದೇ ನಮಗಿರುವ ದೊಡ್ಡ ಶಕ್ತಿ ಎಂದು ಗೊತ್ತಾಗಿದ್ದೇ ಅವರು ಒಂದರ ಹಿಂದೆ ಒಂದರಂತೆ ಪರ್ವತಗಳನ್ನು ಹತ್ತತೊಡಗಿದಾಗ. ಪ್ರತಿ ಬಾರಿ ಪರ್ವತಗಳನ್ನು ಹತ್ತಲು ಅಡಿ ಇಟ್ಟಾಗಲೆಲ್ಲ ಅವರ ಕಣ್ಣಮುಂದೆ ಆದರ್ಶವಾಗಿದ್ದುದು ಎಡ್ಮಂಡ್ ಹಿಲರಿ-ತೇನ್ಸಿಂಗ್ ಜೋಡಿಯೇನೂ ಅಲ್ಲ, ಬದಲಾಗಿ ಇಟಲಿಯ ಪರ್ವತಾರೋಹಿ ರೀನ್ಹೋಲ್ಡ್ ಮೆಸ್ಸೆನರ್. ಈತ 8000 ಅಡಿಗಳಿಗೂ ಅಧಿಕ ಎತ್ತರದ ಹದಿನಾಲ್ಕು ಪರ್ವತಗಳನ್ನು ಏರಿದ ಸಾಹಸಿ, ಅದಷ್ಟೇ ಅಲ್ಲ. ಇಷ್ಟೂ ಪರ್ವತಗಳ ತುದಿಗೆ ತಲುಪಿದಾಗ ಆತನ ಬಳಿ ಯಾವುದೇ ಕೃತಕ ಆಮ್ಲಜನಕದ ಸಹಾಯವಿರಲಿಲ್ಲ!
ಹೇಳಿಕೇಳಿ ಈ ಅವಳಿಗಳು ಹುಟ್ಟಿದ್ದು ಹರಿಯಾಣದ ಹಳ್ಳಿಯಲ್ಲಿ. ಅಲ್ಲಿ ಗಂಡು ಸಂತಾನವೇ ಜೀವನದ ಸರ್ವಸ್ವ. ಹೆಣ್ಣುಮಕ್ಕಳೆಂದರೆ ಒಂದು ರೀತಿಯ ನಿರ್ಲಕ್ಷ. ಕರ್ನಲ್ ವೀರೇಂದ್ರ ಮಲ್ಲಿಕ್ ಹುಟ್ಟಿದ್ದೂ ನಾಲ್ಕು ಹೆಣ್ಣುಮಕ್ಕಳ ಬಳಿಕ. ಆದರೆ ವೀರೇಂದ್ರ ಅವರಿಗೆ ಮೊದಲ ಕೊಡುಗೆಯಾಗಿ ಸಿಕ್ಕಿದ್ದು ಈ ಅವಳಿ ಕುಡಿಗಳು. ಏನಾದರಾಗಲಿ ಇನ್ನೊಂದು ಗಂಡು ಸಂತಾನ ಬೇಕೇಬೇಕು ಎಂಬ ಜಿದ್ದಿಗೆ ಬಿದ್ದಿದ್ದರು ವೀರೇಂದ್ರ, ಆದರೆ ಎರಡೇ ವರ್ಷಗಳಲ್ಲಿ ಅವರ ನಿಧರ್ಾರ ಬದಲಾಗಿ ಬಿಟ್ಟಿತು. ಇನ್ನು ಮಕ್ಕಳೇ ಬೇಡ ಎಂದು ವಾಸೆಕ್ಟೆಮಿಗೆ ಒಳಗಾಗಿಬಿಟ್ಟರು. ಎರಡು ಹೆಣ್ಣು ಮಕ್ಕಳನ್ನು ಗಂಡು ಮಕ್ಕಳಂತೆ ಸಾಕಿದರು.
ಈ ದೇಶದ ಅನೇಕ ಹಳ್ಳಿಗಳಲ್ಲಿ ಈಗಲೂ ಗಂಡು ಸಂತಾನವೇ ಭವಿಷ್ಯದ ಬೆಳಕು ಎಂಬ ಗಟ್ಟಿ ನಂಬಿಕೆ. ನಿಜಕ್ಕೂ ಅದಲ್ಲ, ನಾವಿದ್ದೇವೆ ನೋಡಿ ಗಂಡುಗೋವಿಗಳಿಗೇ ಇಲ್ಲದ ಗಟ್ಟಿಗುಂಡಿಗೆ ಇರುವ ಹೆಣ್ಮಕ್ಕಳು ಎಂಬುದನ್ನು ಇಡೀ ಜಗತ್ತಿಗೆ ತೋರಿಸಿಕೊಟ್ಟವರು ಈ ಅವಳಿಗಳು. ಸಪ್ತ ಪರ್ವತಗಳ ಸಾಧನೆಯನ್ನು ಅವರು ಅರ್ಪಣೆ ಮಾಡಿರುವುದು ಕೂಡ ಭಾರತದ ಹೆಣ್ಣು ಮಗುವಿಗೆ!



 ಅವಳಿಗಳ ಸಪ್ತ ಪರ್ವತಗಳ ಚಾರಣ

ಕಿಲಿಮಂಜಾರೋ (19,341ಅಡಿ)-2012
ಎವರೆಸ್ಟ್ (29,029 ಅಡಿ)-2013
ಏಲ್ಬ್ರಸ್ (18,510 ಅಡಿ)-2013
ಅಕೊಂಗುವಾ  (22,841 ಅಡಿ)-2014
ಕಾರ್ಸ್ಟೆಂಝ್ ಪಿರಾಮಿಡ್ (16,024 ಅಡಿ)-2014
ಮೆಕ್ಕಿನ್ಲೇ (20,237 ಅಡಿ)- 2014
ವಿನ್ಸನ್ (16,050 ಅಡಿ)-2014


ಹೊಂಚು ಹಾಕುವ ಸಾವು! 
ಮೌಂಟ್ ಎವರೆಸ್ಟ್ ಏರುತ್ತ ಸಾಗಿದ ಹಾಗೆ ಸಾವಿನ ಭಯ ದಟ್ಟವಾಗುತ್ತ ಹೋಗುತ್ತದೆ. ಅದಕ್ಕೆ ಕಾರಣ ಹಿಂದೆ ಅದೇ ಹಾದಿಯಲ್ಲಿ ಹೋದ ಚಾರಣಿಗರ ಹೆಜ್ಜೆ ಗುರುತುಗಳು ಸಿಗುವುದಲ್ಲ, ಹೆಣಗಳು ಸಿಗುತ್ತವೆ. ಕೆಲ ದಿನಗಳ ಹಿಂದಷ್ಟೇ ರಾತ್ರಿಯೆಲ್ಲ ಜತೆಯಲ್ಲೇ ಕಾಫಿ ಕುಡಿದವರು, ಹರಟಿದವರು, ಭವಿಷ್ಯದ ಕನಸುಗಳ ಪಟ್ಟಿಯನ್ನು ಬಿಚ್ಚಿಟ್ಟವರು ನಮ್ಮ ಕಾಲಡಿಯಲ್ಲೇ ನಿಜರ್ೀವವಾಗಿದ್ದಾರೆ! ಉಸಿರೇ ನಿಂತು ಹೋಗುವ ಸ್ಥಿತಿ. ನುಂಗ್ಶಿ ಮತ್ತು ತಾಶಿಗೆ ಎವರೆಸ್ಟ್ ಹಾದಿಯಲ್ಲಿ ಸಿಕ್ಕ ಹೆಣಗಳ ಸಂಖ್ಯೆಯೇ ಹದಿನಾರು, ಬಹುತೇಕ ಎಲ್ಲರೂ ಸಹಚಾರಣಿಗರು! ಕ್ಷಣಕ್ಷಣವೂ ಹೊಂಚು ಹಾಕುವ ಸಾವನ್ನು ಮಣಿಸಲು ದೃಢಸಂಕಲ್ಪ ಬೇಕು. ಆಕಾಂಕ್ಷೆಗಳು ಅಪಾಯವನ್ನು ಮೆಟ್ಟಿ ನಿಲ್ಲಬೇಕು. ಮನುಷ್ಯನ ಸಾವಿರ ಸಾವಿರ ಸಾಮಥ್ರ್ಯವನ್ನು ಮೀರಿಸುವಷ್ಟು ದೈತ್ಯವಾಗಿರುವ ಪರ್ವತದ ಬಾಹು `ಹೆಣ್ಣು ಮಗು' ಎಂಬ ಲೆಕ್ಕವಿಟ್ಟುಕೊಳ್ಳುವುದಿಲ್ಲ.





ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ