ಈನಾ ಮೀನಾ ಡೀಕಾ... ಇದು ಕಿಶೋರ್!

ಕಿಶೋರ್ ಕುಮಾರ್ ಬಗ್ಗೆ ಏನನ್ನೇ ಹೇಳಿದರೂ, ಬರೆದರೂ ಅದು ಕ್ಲೀಷೆಯಾಗಿ ಬಿಡುತ್ತದೆ. ಈ ಗೀತೆಗಳ ಸರದಾರನ ಬಗ್ಗೆ ಸಾವಿರಾರು ಲೇಖನಗಳು ಬಂದು ಹೋಗಿವೆ. ಅವರ ವ್ಯಕ್ತಿತ್ವ, ಹಾಡು, ಅಭಿನಯ, ಬದುಕಿನಲ್ಲಿ ಕಂಡ ಏರಿಳಿತದ ನೆನಪು ಮೊನ್ನೆ ಮೊನ್ನೆ ಕೇಳಿದ ಹಳೆಯ ಹಿಂದಿ ಹಾಡಿನಷ್ಟೆ ಹಸಿಹಸಿಯಾಗಿದೆ. ಒಬ್ಬ ಹಾಡುಗಾರನಾಗಿ ಕಿಶೋರ್ ದಾ ಏರಿದ ಎತ್ತರವನ್ನು ಯಾರೊಬ್ಬರೂ ಏರಲು ಸಾಧ್ಯವಿಲ್ಲ. ಹಿಂದಿ ಚಿತ್ರದ ಗೀತೆಗಳಿಗೆ ಕಿಶೋರ್ ಕೊಟ್ಟ ಸ್ಪರ್ಶಕ್ಕೆ ಏನೇ ಹೇಳಿದರೂ ಕಮ್ಮಿಯೇ. ಯಾರೇ ಆದರೂ ಅವರೊಬ್ಬ ಜೀನಿಯಸ್ ಎಂದು ಬಿಡಲೇ ಬೇಕು. ಆದರೆ, ಬದುಕಿನ ಕೊನೆಯ ಅಧ್ಯಾಯದಲ್ಲಿ ಪಟ್ಟ ಅಧ್ವಾನಗಳು, ಅವರ ವಿಚಿತ್ರ ವರ್ತನೆಗಳು, ಪದೆಪದೇ ಎದುರಿಸಿದ ಸಮಸ್ಯೆಗಳಿಂದಾಗಿ ಅವರು ಹರಿದ ಗಾಳಿಪಟದಂತಾಗಿ ಬಿಟ್ಟಿದ್ದರು. ಸಂಪೂರ್ಣ ಮಗುವಿನಂತೆ ರಚ್ಚೆ ಹಿಡಿದು ಬಾಲಿಶವಾಗಿ ವರ್ತಿಸುತ್ತಿದ್ದರು. ಅವರ ವರ್ಚಸ್ಸಿಗೆ ತಕ್ಕ ಗಾಂಭೀರ್ಯ ಇರಲೇ ಇಲ್ಲ. ಜನ ಅವರ ವಿಚಿತ್ರ ವರ್ತನೆಗಳನ್ನು ನೋಡಿ ಭಯ ಬೀಳುತ್ತಿದ್ದರು. ಕಿಶೋರ್ ಸಹವಾಸನೇ ಬೇಡಾ ಎಂದು ದೂರ ಉಳಿಯುತ್ತಿದ್ದರು.


(ತನುಜಾ ಜೊತೆ ಕಿಶೋರ್)


`ಮೇ ಹ್ಞೂಂ ಏಕ್ ಪಾಗಲ್ ಪ್ರೇಮಿ...
ಮೇರಾ ದರ್ದ್ ನಾ ಕೋಯೀ...ಜಾನಾ...'


ಹೌದು ಕಿಶೋರ್ ಬದುಕು ಹಾಗೇ ಇತ್ತು ಅನಿಸುತ್ತದೆ. ಅವರ ಆಂತರ್ಯದಲ್ಲಿ ಇದ್ದ ನೋವಾದರೂ ಎಂಥಾದ್ದು ಎಂಬುದು ಯಾರಿಗೂ ಗೊತ್ತೇ ಆಗಲಿಲ್ಲ. ಆದರೆ, ಒಂದು ವಿಚಾರವನ್ನು ಯಾರದೂ ಅರ್ಥ ಮಾಡಿಕೊಳ್ಳಬಹುದಾಗಿತ್ತು. ಖಾಸಗಿ ಬದುಕಿನಲ್ಲಿ ಅವರು ಹೈರಾಣಾಗಿ ಹೋಗಿದ್ದರು. ತಾನು ಬಯಸಿದ ಪ್ರೀತಿ ಸಿಗಲಿಲ್ಲ ಎಂಬ ಕೊರಕು ಅವರ ಮನಸ್ಸಿನಲ್ಲಿ ಸದಾ ಕಾಡುತ್ತಿತ್ತೇ? ಅದನ್ನು ಯಾರೂ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ.
ಕಿಶೋರ್ ಸ್ವಭಾವವಾದರೂ ಎಂಥಾದ್ದು. ಅವರ ಜೊತೆಗಿದ್ದವರು ಅದನ್ನು ಹೇಳಬೇಕು. ಯಾರು ಅವರ ಜೊತೆಗಿದ್ದವರು ಹಾಗಾದರೆ? ದಾದಾ ನಾಲ್ಕು ಮದುವೆಯಾದರು. ರುಮಾ ಘೋಷ್, ಎವರ್ ಗ್ರೀನ್ ಚೆಲ್ವಿ ಮಧುಬಾಲಾ, ಮಾದಕ ಕಣ್ಣುಗಳ ಯೋಗಿತಾ ಬಾಲಿ ಮತ್ತು ಲೀನಾ ಚಂದಾರ್ವಕರ್ ಕಿಶೋರ್ ಬದುಕಿನ ಭಾಗವಾಗಿದ್ದವರು. (ಅಷ್ಟಕ್ಕೂ ಇಂತಹ ಮಳ್ಳನನ್ನು ಚಿತ್ರರಂಗದ ಚೆಂದುಳ್ಳಿ ಚೆಲುವಿಯರು ಯಾಕೆ ಮದ್ವಿಯಾದರು ಎಂಬ ಪ್ರಶ್ನೆಯನ್ನು ಆಗಾಗ ಹಿಂದಿಚಿತ್ರರಂಗದ ಮಂದಿ ಕೇಳುತ್ತಿರುತ್ತಾರೆ, ಅದು ಬೇರೆ ಮಾತು!) ಸಾರ್ವಜನಿಕ ಜೀವನದಲ್ಲಿ ಅಗ್ರಸ್ಥಾನದಲ್ಲಿ ಮೆರೆದಾಡಿದ ಗಾಯಕನೊಬ್ಬನ ಖಾಸಗಿ ಬದುಕಿನಲ್ಲಿ ಕಿರಿಕಿರಿಯೇ ಅಗ್ರಸ್ಥಾನ ಪಡೆದಿದ್ದರೆ ಆತನ ಒಟ್ಟಾರೆ ವರ್ತನೆ ಹಾಗೂ ಪ್ರತಿಭಾಪೂರ್ಣವಾದ ಬದುಕು ಹೇಗೆ ಕುಸಿಯುತ್ತಾ ಹೋಗುತ್ತದೆ ಎಂಬುದಕ್ಕೆ ಕಿಶೋರ್ ಕುಮಾರ್ ಉದಾಹರಣೆಯಾಗಬಲ್ಲರು. ಚೆಂದುಳ್ಳಿ ಚೆಲುವಿ ಮಧುಬಾಲಾ ಸಾವು ಅವರನ್ನು ಝರ್ಜರಿತರನ್ನಾಗಿ ಮಾಡಿತ್ತು ಎಂಬುದು ನಿಜ. ಆಕೆ ಹಾಸಿಗೆ ಹಿಡಿದು ಹಿಂಸೆ ಪಟ್ಟರೆ ಕುಮಾರ್ ಒಳಗೊಳಗೇ ಸಂಕಟಪಟ್ಟುಕೊಂಡು ಒದ್ದಾಡಿದರು. `ಜಿಂದಗಿ ಕಾ ಸಫರ್...' ಎಂದು ಅವರು ಕಣ್ಣೀರಿಟ್ಟರು. ಯೋಗಿತಾ ಬಾಲಿ ಇವರ ಜೊತೆ ಬಹಳ ಕಾಲ ಬಾಳಲಿಲ್ಲ. ಆಕೆ ಮಿಥುನ್ ಚಕ್ರವರ್ತಿ ತೋಳು ಆವರಿಸಿ ಹೆಜ್ಜೆ ಹಾಕತೊಡಿದಾಗ ಕಿಶೋರ್ ಬರಿದಾಗಿದ್ದರು. ಒಂಟಿಯಾಗಿ ಬಿಟ್ಟಿದ್ದರು. ಏಕಾಂಗಿತನದಿಂದ ಹೈರಾಣಾಗಿದ್ದರು.
ಅವರ ಬದುಕಿನ ಅಂತಿಮ ಚರಣದಲ್ಲಿ ಬಂದು ನಿಂತವರು ಇನ್ನೊಬ್ಬಳು ಚೆಲ್ವಿ ಲೀನಾ ಚಂದಾರ್ವಕರ್. ಮೊದಲ ಪತಿಯ ಸಾವಿನ ನಂತರ ಕುಸಿದು ಕುಳಿತಿದ್ದ ಲೀನಾ ಅವರ ಕೈಹಿಡಿದಾಗ ಕಿಶೋರ್ ವರ್ತನೆಗಳು ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿ ಹೋಗಿತ್ತು. "ನನ್ನ ವರ್ತನೆ ತೀರಾ ವಿಚಿತ್ರ'' ಎಂದು ಅವರು ಹೇಳಿ ಬಿಟ್ಟಿದ್ದರು ಕೂಡ. ತಾನು ಹುಚ್ಚುಹುಚ್ಚಾಗಿ ವರ್ತಿಸುತ್ತಿದ್ದೇನೆ ಎಂಬುದು ಎಲ್ಲರಿಗಿಂತ ಹೆಚ್ಚಾಗಿ ಅವರಿಗೇ ಗೊತ್ತಿತ್ತು. ಆದರೆ, ಆ ಹುಚ್ಚಿನ ಸುಳಿಯಿಂದ ಅವರು ಹೊರಗೆ ಬಾರದ ಸ್ಥಿತಿ ತಲುಪಿಬಿಟ್ಟಿದ್ದರು.


(ಮಧುಬಾಲಾ)

ಲೀನಾ ಮತ್ತು ಕಿಶೋರ್ ಪರಿಚಿತರಾದ ಹೊಸದರಲ್ಲಿನ ಒಂದು ಪ್ರಸಂಗವನ್ನೇ ತೆಗೆದುಕೊಳ್ಳಿ. ಒಂದು ದಿನ ಶೂಟಿಂಗ್ ಮುಗಿಸಿ ಲೀನಾ ಬಳಿ ಬಂದ ದಾದಾ `ನನ್ನ ಬಗ್ಗೆ ನಿನಗೇನು ಗೊತ್ತು' ಎಂದು ಕೇಳಿದರು. ಲೀನಾ ಇವರ ಪ್ರತಿಭೆ, ಗಾನಾ, ಅಭಿನಯದ ಬಗ್ಗೆ ಮಾತು ಹರಿಯ ಬಿಟ್ಟಿದ್ದಾರೆ. ಇದಾವುದೂ ಕಿಶೋರ್ ಮನಸ್ಸಿಗೆ ಹೋಗಿಲ್ಲ. ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳಿದ್ದಾರೆ. ಮುಖವನ್ನೆಲ್ಲ ಕಿವುಚಿಕೊಂಡು, ಮೆಳ್ಳೆಗಣ್ಣು ಮಾಡಿ ಹುಚ್ಚನಂತೆ ವರ್ತಿಸಿದ್ದಾರೆ ಕಿಶೋರ್. `ನಖರೇವಾಲಿ... ದೇಖನೇಮೆ ದೇಖಲೋ ಕೈಸಿ ಬೋಲಿ ಬಾಲಿ... ಮನ್ಕೆ ಖಾಲಿ... ಡಿಡ್ಲಿ ಡಿಡ್ಲಿ ಡಿಡ್ಲಿ ಊಂ..' ಎಂಬಂತೆ! ಲೀನಾಗೆ ಈ ವಿಖ್ಯಾತ ಗಾಯಕ ಹಿಂಸಾಗ್ರಸ್ತ ಮನುಷ್ಯನಂತೆ ಕಾಣಿಸಿ ಭಯಗೊಂಡಿದ್ದಾರೆ. ಆದರೂ ಹೇಳಲ್ಲಿಕ್ಕುಂಟೆ? ಸುಮ್ಮನಾಗಿದ್ದಾರೆ. ಆದರೆ, ಕಿಶೋರ್ ಸುಮ್ಮನಾಗಿಲ್ಲ! ಅಲ್ಲಿಯೇ ನೆಲದ ಮೇಲೆ ಚಕ್ಕಮಕ್ಕಳ ಹಾಕಿ ಕುಳಿತು, ನಾಲಿಗೆ ಹೊರಗೆ ಹಾಕಿ ನಾಯಿಯ ಥರ ಜೋರಾಗಿ ಏದುಸಿರು ಬಿಟ್ಟಿದ್ದಾರೆ. ಮತ್ತದೇ ಪ್ರಶ್ನೆ ಕೇಳಿದ್ದಾರೆ. ಲೀನಾ ಕಿರುಚಿಕೊಂಡು `ಹೌದು! ನೀವು ದೊಡ್ಡ ಹುಚ್ಚ ಅಂತ ಜನ ಹೇಳುವುದನ್ನ ಕೇಳಿದ್ದೇನೆ' ಅಂದಿದ್ದಾರೆ. ಆಗಲೇ ಕಿಶೋರ್ ನಾರ್ಮಲ್ ಆಗಿದ್ದು! `ಇದನ್ನೇ ನಾನು ನಿಮ್ಮಿಂದ ಕೇಳಲು ಬಯಸಿದ್ದು!' ಎಂದು ನಿಟ್ಟುಸಿರು ಬಿಟ್ಟಿದ್ದಾರೆ. ಅಬ್ಬಾ! ಲೀನಾ ಜೀವ ಮರಳಿ ಬಂದಿದೆ.
ನಿಮಗೆ ಕಿಶೋರ್ ಹಾಡಿದ ಈ ಗೀತೆ ನೆನಪಿರಬಹುದು...
``ಸಿ.ಎ.ಟಿ. ಕ್ಯಾಟ್... ಕ್ಯಾಟ್ ಮಾನೆ ಬಿಲ್ಲಿ...
ಎಂ.ಎ.ಡಿ. ಮ್ಯಾಡ್... ಮ್ಯಾಡ್ ಮಾನೆ ಪಾಗಲ್...''

ಕಿಶೋರ್ ಈ ಹಾಡನ್ನು ಎಷ್ಟೊಂದು ನ್ಯಾಚುರಲ್ ಆಗಿ ಹಾಡಿದ್ದರಲ್ಲವಾ ಥೇಟ್ ಪಾಗಲ್ ಥರಾ? ಅನ್ನೋ ಪ್ರಶ್ನೆ ಎಲ್ಲರಲ್ಲೂ ಆವರಿಸಿಕೊಳ್ಳುತ್ತದೆ. ಬಹುಷಃ ಅವರ ವರ್ತನೆ ಕೂಡ ಹಾಗೇ ಇತ್ತು. ಈ ಗೀತೆ ಅವರಿಗಾಗೇ ಬರೆಯಲಾಗಿತ್ತೋ ಅನ್ನುವಷ್ಟು. ಹಿಂದಿ ಹಾಡಿನ ಲಯವನ್ನೇ ಬದಲಿಸಿದವರು ಕಿಶೋರ್ ಕುಮಾರ್. `ಯೊಡ್ಲಿ ಯೊಡ್ಲಿ ಯೊಡ್ಲಿರೇ...' ಹಾಡನ್ನು ನೆನಪಿಸಿಕೊಂಡರೆ ಅವರದೊಂದು ಚಿತ್ರ ನಿಮ್ಮ ಕಣ್ಣ ಮುಂದೆ ಬಂದುಬಿಡಬಹುದು. ಮುಂದೆ ಇಂತಹ ಅನೇಕ ಹಾಡುಗಳನ್ನು ಅವರು ಈ ಗೀತಪ್ರಪಂಚಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. `ಈನಾ ಮೀನಾ ಡೀಕಾ... ಮಕನಕಾ ನಕಾ... ಟಿಕಾಪಿಕಾ..' ಹಾಡನ್ನೇ ಒಮ್ಮೆ ಗುನುಗಲು ಶುರುಮಾಡಿ ಬೇಕಿದ್ದರೆ. ಕುಶಾಲು ಅನಿಸುತ್ತದೆ, ನಕ್ಕು ಬಿಡಲು ಅದೊಂದೇ ಹಾಡು ಸಾಕು. ಕಿಶೋರ್ ಬಿಟ್ಟರೆ ಬೇರೆ ಯಾರು ಇವನ್ನು ಹಾಡಲು ಸಾಧ್ಯವಿತ್ತು ಹೇಳಿ? ಇಂತಹ ಗೀತೆಗಳಿಗೆ ಸರಿಯಾಗಿ ಅಂಥಹುದೇ ಪಾತ್ರಗಳು ಅವರಿಗೆ ಸಿಕ್ಕಿವೆ.
ಕಿಶೋರ್ ಅಂದ ಕೂಡಲೇ ಅನೇಕರಿಗೆ ನೆನಪಾಗುವುದು ಶೋಕದ ಗೀತೆಗಳು.
"ಕೋಯಿ ಹಮ್ ದಮ್ ನ..ರಹಾ...
ಕೋಯಿ ಸಹಾರಾ ನ..ರಹಾ...
ಹಮ್ ಕಿಸೀಸೇ ನರಹೇ ಕೋಯಿ ಹಮಾರಾ ನರಹಾ...
ಶ್ಯಾಮ್ ತನಹಾಯೀಕೇ... ಮೇ ಬೀ ತುಮಾರಾ ನರಹಾ...'


ಅನ್ನುತ್ತಿದ್ದರೆ ಯಾರ ಕಣ್ಣಲ್ಲಾದರೂ ನೀರು! ನಿಜಕ್ಕೂ ಹಾಡಲ್ಲಿ ಹಾಡಾಗಿ ಬಿಡುತ್ತಿದ್ದರು ಅವರು. ಇಂತಹುದೇ ಒಂದು ಪ್ರಸಂಗವನ್ನು ಲತಾ ಮಂಗೇಶ್ಕರ್ ನೆನಪಿಸಿಕೊಳ್ಳುತ್ತಾರೆ. ಲೀನಾ ತಾಯಿ ತೀರಿಕೊಂಡ ಸಂದರ್ಭದಲ್ಲಿ ಕಿಶೋರ್ಜಿ ಸ್ಟುಡಿಯೋದಲ್ಲಿ ಹಾಡಲು ನಿಂತಿದ್ದರು. ಅದು ಸಾವಿಗೆ ಸಂಬಂಧಿಸಿದ ಹಾಡು. `ಜಿಂದಗೀ ಕಾ ಸಫರ್.. ಹೇ ಯೇ ಕೈಸಾ ಕಬರ್... ಜಿಂದಗೀಕೆ ಪೆಹೆಲೇ ಮೌತ್ ಆಗಯೀ..' ಕಿಶೋರ್ ಅವರಿಗೆ ಇದನ್ನು ಹಾಡಲಿಕ್ಕೇ ಸಾಧ್ಯವಾಗಲಿಲ್ಲ. ಸ್ಟುಡಿಯೋದಲ್ಲೇ ಅಳುತ್ತಾ ಕುಳಿತುಬಿಟ್ಟರು. ಅವರು ಈ ರೀತಿ ಅತ್ತಿದ್ದನ್ನು ತಾವು ಎಂದೂ ನೋಡಿಲ್ಲ ಅನ್ನುತ್ತಾರೆ ಲತಾಜಿ.



"ಆದರೆ ಆವರ ಈ ಮುಖ ಯಾರಿಗೂ ಪರಿಚಿತವಾಗಲಿಲ್ಲ. ಕೇವಲ ಅವರ ವಿಚಿತ್ರ ವರ್ತನೆಗಳೇ ಭಾರೀ ಪ್ರಚಾರ ಪಡೆದವು. ಪತ್ರಿಕೆಗಳು ವಿಚಿತ್ರವಾಗಿ ಬರೆದವು. ಅವರಿಗೆ ಸಿಗಬೇಕಾದ ಗೌರವ ದೊಡ್ಡದು, ಅದನ್ನು ಯಾರಿಂದಲೂ ವ್ಯಾಖ್ಯಾನ ಮಾಡಲು, ವಿಶ್ಲೇಷಣೆ ಮಾಡಲು ಸಾಧ್ಯವಿಲ್ಲ. ಅವರಲ್ಲೊಂದು ದಿವ್ಯಪ್ರಭೆ ಇತ್ತು. ಅದನ್ನು ಹತ್ತಿರದಿಂದ ಕಂಡಿದ್ದೇನೆ. ಜನ ಭಯ ಬೀಳಲಿ ಎಂದು ಅವರೆಂದೂ ಉದ್ದೇಶಪೂರ್ವಕವಾಗಿ ನಡಕೊಳ್ಳುತ್ತಿರಲಿಲ್ಲ. ಆದರೂ ಕೆಲವೊಮ್ಮೆ ಜನ ಸಂಶಯಪಡುವ ಪರಿಸ್ಥಿತಿ ನಿರ್ಮಾಣ ಆಗಿರುತ್ತಿತ್ತು...'' ಅವರ ಬದುಕಿನ ಕೊನೆಯ ಕ್ಷಣದಲ್ಲಿ ಜೊತೆಜೊತೆಗೆ ಇದ್ದ ಲೀನಾಗೆ ಕಿಶೋರ್ ಏನೆಂಬುದು ಅರ್ಥವಾಗಿತ್ತು. ಪತಿಯ ಸ್ವಭಾವ ಸಹಜವಲ್ಲ ಎಂಬುದು ಗೊತ್ತಿದ್ದೂ ಅವನ್ನೆಲ್ಲ ಒಪ್ಪಿಕೊಂಡೇ ಹೆಜ್ಜೆ ಹಾಕಿದವರು ಅವರು.
ಯಾರಾದರೂ ಬಂದು ಅನಗತ್ಯ ಕಿರಿಕಿರಿ ಮಾಡುತ್ತಾ ಹೋದರೆ ಕೆಲಕಾಲ ಸಹಿಸಿಕೊಳ್ಳುತ್ತಿದ್ದ ಕಿಶೋರ್, ಅದು ನಿಲ್ಲದೇ ಹೋದರೆ ವ್ಯಗ್ರರಾಗಿ ಬಿಡುತ್ತಿದ್ದರು. ಒಮ್ಮೆ ಅವರ ಮನೆಗೆ ಇಂಟೀರಿಯರ್ ಡೆಕೋರೇಟರ್ ಒಬ್ಬ ಬಂದಿದ್ದ. ತಾನು ಬಹಳ ಬುದ್ಧಿವಂತನೆಂಬಂತೆ ವರ್ತಿಸುತ್ತಿದ್ದ. ಈ ಮನುಷ್ಯನಿಗೆ ಬುದ್ಧಿ ಕಲಿಸಲು ಅವರು ತೀರ್ಮಾನ ಮಾಡಿಬಿಟ್ಟರು. ತಮ್ಮ ಮನೆ ಹೀಗಿರಬೇಕು, ಹಾಗಿರಬೇಕು ಎಂದು ಬುದ್ದು ಬುದ್ದು ಥರ ಹೇಳಲು ಶುರು ಮಾಡಿದರು. ಪಾಪ ಆ ಬಡಪಾಯಿ ಬಾಯಿಮುಚ್ಚಿಕೊಂಡು ಮೆಲ್ಲಗೇ ಅಲ್ಲಿಂದ ಕಾಲ್ಕಿತ್ತಿದ್ದ.
ಇನ್ನೊಮ್ಮೆ ಇವರನ್ನು ಸಂದರ್ಶನ ಮಾಡಲು ಒಬ್ಬಳು ಪತ್ರಕರ್ತೆ ಬಂದಿದ್ದಳಂತೆ. ಪ್ರಶ್ನೆ ಶುರುವಿಟ್ಟುಕೊಂಡವಳೇ, ನೀವು ಏಕಾಂಗಿಯೇ? ಹೇಗೆ ಕಳೆಯುತ್ತೀರಿ? ಎಂದಿದ್ದಾಳೆ. ಕಿಶೋರ್ ಗೆ ತಕ್ಷಣ ಸಿಟ್ಟು ಬಂದಿದೆ, "ನಾನಾ? ಮರಗಳ ಜೊತೆ ಮಾತನಾಡುತ್ತೇನೆ. ನೋಡಿ ಬನ್ನಿ ಇಲ್ಲಿ," ಎಂದು ಪತ್ರಕರ್ತೆಯನ್ನು ಮನೆಯಿಂದ ಹೊರಗೆ ತೋಟಕ್ಕೆ ಕರೆದೊಯ್ದು, ಈತ ಜಾನಕಿನಂದನ್, ಆತ ಹರಿ ನಿರಂಜನ್ ಎನ್ನುತ್ತಾ ಒಂದೊಂದೇ ಮರಗಳ ಹೆಸರು ಹೇಳಿದ್ದಾರೆ. ಪತ್ರಕರ್ತೆ ಮಾರಾಯ್ತಿಗೆ ಒಳಗೊಳಗೇ ಪುಕುಪುಕು ಶುರುವಾಗಿದೆ. ಸಾಕು ಸಾಕು, ನಾನು ಹೊರಡುತ್ತೇನೆ ಎಂದಿದ್ದಾಳೆ. ಬಿಡಬೇಕಲ್ಲ ಕಿಶೋರ್? `ನೋ ನೋ, ಅದ್ಹೇಗೆ ಹೋಗ್ತೀರಿ? ನೀವಾಗೇ ಇಲ್ಲಿಗೆ ಬಂದಿದ್ದೀರಿ, ನಾನು ಕಳಿಸುವ ತನಕ ನೀವು ಹೋಗುವ ಹಾಗೇ ಇಲ್ಲ. ಇರಿ ಇರಿ ಅಂದಿದ್ದಾರೆ. ಪತ್ರಕರ್ತೆ ಮಹರಾಯ್ತಿ ನಿಂತಲ್ಲೇ ಗಡಗಡ! ಈ ಸಂದರ್ಶನದ ನಂತರ ಪತ್ರಿಕಾ ಜಗತ್ತು ಅವರನ್ನು `ಮ್ಯಾಡ್!' ಅಂತಲೇ ಬ್ರಾಂಡ್ ಮಾಡಿಬಿಟ್ಟಿತು.

(ಯೋಗಿತಾ ಬಾಲಿ)

ಊಟಿಯಲ್ಲಿ ಒಮ್ಮೆ ಅವರದ್ದೇ ಚಿತ್ರ `ಪ್ಯಾರ್ ಅಜ್ನಬಿ ಹೈ' ಶೂಟಿಂಗ್ ಇತ್ತು. ಚಿತ್ರಕ್ಕೆ ಬಹಳಷ್ಟು ದುಡ್ಡು ಸುರಿದಿದ್ದರು. ಚಿತ್ರೀಕರಣ ನಡೆಯುತ್ತಿದ್ದಾಗಲೇ ಇದ್ದಕ್ಕಿದ್ದಂತೆ ಮಳೆ ಜಿನುಗಲು ಆರಂಭಿಸಿತು. ಕಿಶೋರ್ ಅಭಿನಯ ಬಿಟ್ಟು ಏಕಾಏಕಿ ಚಿಕ್ಕಮಗುವಿನಂತೆ ಕುಣಿದು ಕುಪ್ಪಳಿಸುತ್ತಾ `ಚುಟ್ಟಿ ಚುಟ್ಟಿ...' ಎಂದು ಹಾಡತೊಡಗಿದರು. ಕೊನೆಗೆ ಸೆಟ್ನಲ್ಲಿದ್ದವರು, ಇದು ನಿಮ್ಮದೇ ನಿರ್ಮಾಣದ ಚಿತ್ರ ಎಂದು ನೆನಪು ಮಾಡಿಕೊಟ್ಟಾಗ ಸುಮ್ಮನಾದರಂತೆ. ಇನ್ನೊಮ್ಮೆ ಸೆಟ್ನಲ್ಲಿ ಅರ್ಧ ಮೇಕಪ್ ಹಾಕಿ ಕುಳಿತಿದ್ದರಂತೆ. ಯಾಕಂತ ಕೇಳಿದರೆ, ಚಿತ್ರದ ನಿರ್ಮಾಪಕರು ಇವರಿಗೆ ಅರ್ಧ ಸಂಭಾವನೆ ಮಾತ್ರ ಕೊಟ್ಟಿದ್ದರು. ಅದಕ್ಕೆ ಪ್ರತಿಭಟನೆ!
ಇಂತಹುದೇ ಇನ್ನೊಂದು ಸನ್ನಿವೇಶ ಅತ್ಯಂತ ತಮಾಷೆಯಾಗಿದೆ- ಇವರ ಒಂದೇ ಒಂದು ಶಾಟ್ ಚಿತ್ರೀಕರಣ. ಗಂಟೆಗಳು ಕಳೆದರೂ ಶೂಟಿಂಗ್ ರೆಡಿಯಾಗಿಲ್ಲ, ರೋಸಿ ಹೋದ ಕಿಶೋರ್ ಎದ್ದು ಹೊರಟೇ ಬಿಟ್ಟರು. ಚಿತ್ರೀಕರಣ ಯೂನಿಟ್ ಮಂದಿ ಅವರ ಹಿಂದೆ ಹೋದರೆ ಅವರೇನು ಹೇಳಬೇಕು? `ನಾನಾ? ನಾನು ಕಿಶೋರ್ ಕುಮಾರ್ ಅಲ್ಲವೇ ಅಲ್ಲ. ಕಿಶೋರಿ ಲಾಲ್ ಕಠ್ಮಂಡು. ನೀವ್ಯಾರೂ ನನಗೆ ಗೊತ್ತೇ ಇಲ್ಲ!' ಹಿಂದೆ ಬಂದವರು ಸುಸ್ತು. ಕಿಶೋರ್ ಇವೆಲ್ಲವನ್ನೂ ಬೇಕಂತ ಮಾಡುತ್ತಿರಲಿಲ್ಲ. ಅವರಿಗೆ ಜಟಾಪಟಿ ಬೇಕಿರಲಿಲ್ಲ. ಹಾಗಾಗಿ ವಿಚಿತ್ರವಾಗಿ ನಡಕೊಂಡು ಜನ ಇವರ ಸಹವಾಸವೇ ಬೇಡ ಎಂದುಕೊಂಡು ದೂರ ಉಳಿದುಬಿಡುತ್ತಿದ್ದರು. ಕೊನೆಗೆ ಇವರು ಮಾತ್ರ ಒಂಟಿ ಒಂಟಿ.


ಮಧ್ಯಪ್ರದೇಶದ ಖಾಂಡ್ವಾ ಪಟ್ಟಣದ ಹುಡುಗ ಅಬ್ಬಾಸ್ ಕುಮಾರ್ ಗಂಗೂಲಿ ಸೆಲ್ಯುಲಾಡ್ ಪ್ರಪಂಚಕ್ಕೆ ಬಂದಿದ್ದು ಹಾಡಲೆಂದೇ. ಆಗಲೇ ಆತ ಪ್ರತಿಭಾವಂತ ಹಾಡುಗಾರ. ಅಷ್ಟರಲ್ಲಾಗಲೇ ಅಣ್ಣ ಅಶೋಕ್ ಕುಮಾರ್ ದೊಡ್ಡ ಸ್ಟಾರ್ ಆಗಿಬಿಟ್ಟಿದ್ದ. ತಮ್ಮನಿಗೋ ಕೆ.ಎಲ್. ಸೈಗಲ್ ಅಂದರೆ ಪಂಚಪ್ರಾಣ. ಆದರೆ, ಕುಮಾರ ಚಿತ್ರರಂಗದ ಆಕರ್ಷಣೆಗೆ ಬಿದ್ದು ಅಭಿನಯಕ್ಕೆ ಇಳಿದುಬಿಟ್ಟ. ಅದು ಕ್ಲಿಕ್ ಆಗಿ ಬಿಡ್ತು ಬೇರೆ. ಜುಮ್ರೂ, ಹಾಫ್ ಟಿಕೆಟ್, ಚಲ್ತಿ ಕಾ ನಾಮ್ ಗಾಡಿ, ಪಡೋಸನ್ ಚಿತ್ರಗಳಿಂದ ಕಿಶೋರ್ ಒಬ್ಬ ಪ್ರಬುದ್ಧ ನಟ, ನಿರ್ದೇಶಕ, ಕಾಮಿಡಿಯನ್ ಎಂಬುದು ಸಾಬೀತಾಗಿತ್ತು. ಕಿಶೋರ್ ಹಾಡಲು ಶುರು ಮಾಡಿದರು, ಅಲ್ಲೊಂದು ಇತಿಹಾಸವೇ ನಿರ್ಮಾಣವಾಗಿತ್ತು. ಎಸ್.ಡಿ.ಬರ್ಮನ್, ಆರ್.ಡಿ.ಬರ್ಮನ್, ಬಪ್ಪಿ ಲಹಿರಿಯಂತಹ ದಿಗ್ಗಜ ಸಂಗೀತ ನಿರ್ದೇಶಕರ ಸಾಥ್ ಬೇರೆ. ಕಿಶೋರ್ ಕಂಠಸಿರಿ ಒಂಥರಾ ಬೇರೇ ಅಲ್ವಾ ಅನ್ನೋ ಥರಾ ಇತ್ತು. ಅದು ಹೊಸ ಅಲೆಯನ್ನೇ ನಿರ್ಮಿಸಿತು. ಹಾಸ್ಯ ಪಾತ್ರ ಬೇಕೆ? ದುಃಖದ ಪಾತ್ರ ಬೇಕೆ? ಎಲ್ಲಕ್ಕೂ ಕಿಶೋರ್ ದನಿ ಸೂಟ್ ಆಗುತ್ತಿತ್ತು. ನಂತರದ ದಿನಗಳಲ್ಲಿ ಅವರನ್ನು ಸೈಡ್ಲೈನ್ ಮಾಡುವ ಪ್ರಯತ್ನ ಕೂಡ ನಡೆಯಿತು ಎಂಬುದು ಬೇರೆ ಮಾತು.
ಚಿತ್ರರಂಗಕ್ಕೆ ಬಂದಾಗ `ಎಣ್ಣೆಜಿಡ್ಡು ತಲೆಗೂದಲಿನ, ಕರಿಬಣ್ಣದ ಹುಡುಗ ಯಾರಿದು?' ಅಂದಿದ್ದರಂತೆ ಬಿ.ಆರ್.ಛೋಪ್ರಾ. ಆಗ ಅನಿವಾರ್ಯ ಸುಮ್ಮನಿದ್ದರು ಕಿಶೋರ್. ಮುಂದೆ ಅವರು ನಟ, ನಿರ್ದೇಶಕ,ನಿರ್ಮಾಪಕ, ಸಂಕಲನಕಾರ, ಹಾಡುಗಾರನಾಗಿ ಉತ್ತುಂಗಕ್ಕೆ ಏರಿದರು. ಮುಂದೊಂದು ದಿನ ಅದೇ ಛೋಪ್ರಾ ತಮ್ಮ ಚಿತ್ರವೊಂದರಲ್ಲಿ ನಟಿಸುವಂತೆ ಕೇಳಿಕೊಂಡರು. ಆಗ ಕಿಶೋರ್ಜಿ ಹಾಕಿದ ಷರತ್ತುಗಳನ್ನು ಕೇಳಿ; ಚಿತ್ರದ ನಿರ್ದೇಶಕರು ಸೆಟ್ನಲ್ಲಿ ಮಾರ್ಚ್ ಮಾಡಬೇಕು, ಟೇಬಲ್ ಮೇಲೆ ನಿಂತುಕೊಂಡು ತಮ್ಮನ್ನು ಸ್ವಾಗತಿಸಬೇಕು... ಹೀಗೆ! ಛೋಪ್ರಾ ನಾಪತ್ತೆಯಾಗಿದ್ದರು.
ಅವರ ಚೇಷ್ಟೆ, ಕುಚೇಷ್ಟೆ ಇಲ್ಲಿಗೇ ನಿಲ್ಲುವುದಿಲ್ಲ. ಕಿಶೋರ್ ಒಮ್ಮೆ ಪ್ರಶಸ್ತಿ ಸ್ವೀಕರಿಸಲು ಹೋಗಬೇಕಿತ್ತು. ಸಮಾರಂಭಕ್ಕೆ ಟವೆಲ್ ಹಾಕ್ಕೊಂಡು ಹೋದರೆ ಹೇಗೆ ಎಂದರು ಕಿಶೋರ್. ಅದಕ್ಕೆ ಅವರ ಕಾರ್ಯದರ್ಶಿ ಅನೂಪ್ ಶರ್ಮಾ ಇದನ್ನು ಜೋಕ್ ಎಂದು ಭಾವಿಸಿ, ಸವಾಲು ಹಾಕಿದರು. ಸಮಾರಂಭಕ್ಕೆ ಹೋಗುವ ದಿನ ಬಂತು. ಕಿಶೋರ್ಜಿ ಟವೆಲ್ ಧರಿಸಿ ಹೊರಟೇ ಬಿಟ್ಟರು. ಶರ್ಮಾ ಬೆಪ್ಪು! ಬಳಿಕ ಅವರನ್ನು ಬೇರೆ ಬಟ್ಟೆ ತೊಡುವಂತೆ ಮಾಡುವ ಹೊತ್ತಿಗೆ ಕಾರ್ಯದರ್ಶಿ ಸಾಕೋಸಾಕು.



ಸ್ಟುಡಿಯೋದಲ್ಲಿದ್ದಾಗಲಂತೂ ಕಿಶೋರ್ ಖುಷಿಖುಷಿಯಾಗಿರುತ್ತಿದ್ದರು. ಎಲ್ಲರೂ ನಕ್ಕು ಹೊಟ್ಟೆಹುಣ್ಣಾಗುವಂತೆ ಮಾಡುತ್ತಿದ್ದರಂತೆ. ಅಷ್ಟೊಂದು ಮಜಾ ಮನಷ್ಯ ಎಂದು ಲತಾ ಅನೇಕ ಬಾರಿ ನೆನಪಿಸಿಕೊಂಡಿದ್ದಾರೆ. ತಮಗಂತೂ ನಕ್ಕು ಹಾಡಲಾಗದಷ್ಟು ಗಂಟಲು ಬಿದ್ದು ಹೋಗುತ್ತಿತ್ತು, ಅದಕ್ಕೆ ಕಿಶೋರ್ದಾ, ಮೊದಲು ಹಾಡು ಹೇಳಿ ಆಮೇಲೆ ನಗು ಅನ್ನುತ್ತಿದ್ದರು ಲತಾ. ಇನ್ನೊಂದು ದಿನ ಲತಾ ಜೊತೆ ಡುಯೆಟ್ ಹಾಡಬೇಕಿತ್ತು. ಆದರೆ, ಲತಾ ಬಾರದೇ ದೊಡ್ಡ ಸಮಸ್ಯೆಯಾಯ್ತು. ಸಂಗೀತ ನಿರ್ದೇಶಕರು ತಲೆಕೆಡಿಸಿಕೊಂಡು ಕುಳಿತಿದ್ದರು. ಆಗ ಎರಡೂ ದನಿಯಲ್ಲಿ ನಾನೇ ಹಾಡಿದರೆ ಹೇಗೆ ಎಂಬ ಪ್ರಸ್ತಾಪವನ್ನು ಕಿಶೋರ್ ಮುಂದಿಟ್ಟರು. ಜೋಕ್ ಮಾಡ್ತಾರೆ ಬಿಡಿ ಎಂದು ಸುಮ್ಮಗಾದರು. ಆದರೆ ಕಿಶೋರ್ ಎರಡೂ ದನಿಯಲ್ಲಿ ಹಾಡಿಯೇ ಬಿಟ್ಟರು. `ಆಕೇ ಸೀದಿ ಲಗೀ ದಿಲ್ ಪೆ ಬೈಟೇ ಕಠರಿಯಾ...' ಎಂಬ ಹಾಡು ಇದಕ್ಕೆ ಸ್ಪಷ್ಟ ಉದಾಹರಣೆ.


(ಕಿಶೋರ್ ನಾಲ್ಕನೇ ಪತ್ನಿ ಲೀನಾ ಚಂದಾರ್ವಕರ್)

ಕಿಶೋರ್ ಲೀನಾ ಚಂದಾವರ್ಕರ್ ಅವರನ್ನು ಮದುವೆಯಾದಾಗ ಆಕೆಗಿನ್ನೂ ಎಳೆ ವಯಸ್ಸು. ಕಿಶೋರ್ ಪುತ್ರ ಅಮಿತ್ ಕುಮಾರ್ ಗಿಂತ ಕೇವಲ ಕೆಲವೇ ವರ್ಷ ದೊಡ್ಡವರು. ಇದೇ ದೊಡ್ಡ ಸುದ್ದಿಯಾಗಿತ್ತು ಆಗ. ಮೂರು ಮದ್ವೆಯಾದ ಮನುಷ್ಯನನ್ನು ಒಪ್ಪಿಕೊಳ್ಳಲು ಹಿಂಜರಿಕೆಯೇನೂ ಆಗಲಿಲ್ಲ ಅನ್ನುತ್ತಾರೆ ಲೀನಾ. ಯಾಕೆಂದರೆ, ಕಿಶೋರ್ ಪ್ರಸ್ತಾಪ ಮುಂದಿಟ್ಟಾಗ ಅದರಲ್ಲಿ ಯಾವುದೇ ಕೆಟ್ಟ ಭಾವನೆ ಕಾಣಿಸಲಿಲ್ಲ ಅವರಿಗೆ. ಜೊತೆಗಿದ್ದ ಅಷ್ಟೂ ವರ್ಷ ರುಮಾ ಘೋಷ್ ಬಗ್ಗೆಯಾಗಲೀ, ಯೋಗಿತಾ ಬಗ್ಗೆಯಾಗಲೀ ಒಂದೇ ಒಂದು ಕೆಟ್ಟ ಮಾತು ಆಡಿರಲಿಲ್ಲ. ಎಲ್ಲರ ಬಗ್ಗೆಯೂ ಅವರಿಗೆ ಗೌರವ ಭಾವನೆಯಿತ್ತು. ಅದರಲ್ಲೂ ಮಧುಬಾಲಾ ಅವರಲ್ಲಿ ಅಪಾರವಾದ ಪ್ರೀತಿ ಬೇರೂರಿತ್ತು.
ಅಪಾರ ಜನಮನ್ನಣೆ ಗಳಿಸಿದ್ದ ಒಬ್ಬ ಗಾಯಕನ ಜೊತೆ ಸವೆದ ಕೆಲವೇ ವರ್ಷಗಳ ಹಾದಿ ಅತ್ಯಂತ ಸ್ಮರಣೀಯ ಎನ್ನುತ್ತಾರೆ ಲೀನಾ ಚಂದಾವರ್ಕರ್. ಒಬ್ಬ ವ್ಯಕ್ತಿ ಜೊತೆ 80 ವರ್ಷ ಬದುಕಿ ಹೇಳಿಕೊಳ್ಳಲು ಒಂದೇ ಒಂದು ನೆನಪಿನ ನವಿಲುಗರಿ ಇಲ್ಲದಿರುವುದಕ್ಕಿಂತ ಇದು ಅನನ್ಯವಲ್ಲವೇ? ಆ ನೆನಪಿನಲ್ಲಿಯೇ ಬದುಕುತ್ತಿದ್ದೇನೆ, ಅವರ ಪತ್ನಿಯಾಗಿ ತಮಗೆ ಸಿಕ್ಕ ಪ್ರೀತಿ ಅಪೂರ್ವ, ಕಿಶೋರ್ಜಿ ಇಲ್ಲವೆಂಬ ಭಾವನೆ ಎಂದೂ ಬಂದಿಲ್ಲ ಅವರಿಗೆ.
ಕಿಶೋರ್ ತುಂಬಾ ಜಿಪುಣರಾಗಿದ್ದರು ಎಂದು ಆಗೆಲ್ಲ ಪತ್ರಿಕೆಗಳು ವರದಿ ಮಾಡಿದ್ದವು. ಲೀನಾ ಅವನ್ನೆಲ್ಲ ಶುದ್ಧ ಸುಳ್ಳು ಎನ್ನುತ್ತಾರೆ. ತಮಗೇನಾದರೂ ಇಷ್ಟವಾಯಿತೆಂದರೆ ಅದಕ್ಕೆ ಎಷ್ಟೇ ದುಡ್ಡು ಖರ್ಚಾದರೂ ಖರೀದಿಸದೇ ಬಿಡುತ್ತಿರಲಿಲ್ಲ. ಕ್ಯಾಸೆಟ್ ಕೊಳ್ಳುವುದು ಅವರ ನೆಚ್ಚಿನ ಹವ್ಯಾಸವಾಗಿತ್ತು. ಅದಕ್ಕಾಗಿ ಎಷ್ಟು ದೂರ ಬೇಕಿದ್ದರೂ ಹೋಗುತ್ತಿದ್ದರವರು.
ಇಷ್ಟೆಲ್ಲ ಆಗುವಾಗ ಕಿಶೋರ್ ಅವರಿಗೆ ಇನ್ನೊಂದು ಆಘಾತ ಕಾದಿತ್ತು. ಅವರ ಮನೆಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದರು. ತೆರಿಗೆ ಅಧಿಕಾರಿ ತಲಾಶ್ ಶುರುಮಾಡಿದಾಗ ಅವರನ್ನೂ ಗೋಳು ಹುಯ್ದುಕೊಳ್ಳದೇ ಬಿಡಲಿಲ್ಲ ಕಿಶೋರ್. ಇಲ್ಲಿ ಈ ಟೈಲ್ಸ್ ಹಿಂದೆ ಹಣ ಇಟ್ಟಿರಬಹುದು ನೋಡಿ, ಮರದ ಮೇಲೆ ಗಂಟುಕಟ್ಟಿ ಇಟ್ಟಿದ್ದೇನೆ ನೋಡಿ, ಕಾಲುಹಾಸಿನ ಕೆಳಗಿದೆ ಹಣ ಎನ್ನುತ್ತಾ ಬರಿದೇ ಬೆಚ್ಚಿ ಬೀಳಿಸಿದ್ದರು. ಕೊನೆಗೆ ಅಧಿಕಾರಿಗಳು ಬರಿಗೈಲಿ ಹೋಗಿದ್ದರು. ಆವತ್ತು ಬೇರೆ ಅನೇಕ ಮನೆಗಳಿಗೆ ತೆರಿಗೆ ದಾಳಿ ನಡೆಸಿದ್ದರೂ ಮರುದಿನ ಪತ್ರಿಕೆಯ ಮುಖಪುಟದಲ್ಲಿ ಬಂದಿದ್ದು `ಕಿಶೋರ್ ಮನೆ ಮೇಲೆ ಆದಾಯ ತೆರಿಗೆ ದಾಳಿ' ಅಂತ. ಇದು ಅವರನ್ನು ತುಂಬಾ ಹರ್ಟ್ ಮಾಡಿತ್ತು. ಇನ್ನೇನು ಕಿಶೋರ್ ಅವರು ಜೈಲಿಗೆ ಹೋಗಬೇಕಿತ್ತು. ಆಗ ಅಣ್ಣ ಅಶೋಕ್ ಕುಮಾರ್ ತೆರಿಗೆ ಬಾಕಿ ಪಾವತಿ ಮಾಡಿ ಪಾರು ಮಾಡಿದ್ದರು.
ಕಿಶೋರ್ದಾ ಬದುಕಿನಲ್ಲಿ ಬಿದ್ದ ಹೊಡೆತಗಳು ಅನೇಕ. ಅವರು ಅವೆಲ್ಲವನ್ನೂ ಸಹಿಸಿಕೊಂಡರು. ತಾವು ಅತ್ಯಂತ ಪ್ರೀತಿಸುತ್ತಿದ್ದ ಮಗ ಅಮಿತ್ ಮದುವೆ ಮುರಿದು ಬಿದ್ದಾಗ ಅವರು ಪೂರ್ತಿಗೆ ಪೂರ್ತಿ ಕುಸಿದಿದ್ದರು. ಹಾಡಲು ಸ್ಟುಡಿಯೋಗೆ ಬಂದರೆ ಮನಸ್ಸು ನಿಲ್ಲುತ್ತಿರಲಿಲ್ಲ. ಮನಸ್ಸು ಭಾರವಾದಂತೆ, ಅನ್ಯಮನಸ್ಕರಾದಂತೆ ಇರುತ್ತಿದ್ದರು. ಇಷ್ಟೆಲ್ಲ ಆಗುವಾಗ ಭಾರೀ ಹೃದಯಾಘಾತಕ್ಕೆ ಗುರಿಯಾದರು. 1987 ಅಕ್ಟೋಬರ್ 13ರಂದು ಅಣ್ಣ ಅಶೋಕ್ ಕುಮಾರ್ ಜನ್ಮದಿನ. ಅದಕ್ಕಾಗಿ ತಮ್ಮ ಮನೆಯಲ್ಲಿ ಸಿದ್ಧತೆ ಮಾಡಿಕೊಂಡು `ನಿನಗೊಂದು ಒಳ್ಳೆಯ ಗಿಫ್ಟ್ ಕೊಡ್ತೇನೆ ಬಾ' ಎಂದು ಅಣ್ಣನನ್ನು ಬರಹೇಳಿದ್ದರು ಕಿಶೋರ್. ಈ ಸಂಭ್ರಮದಲ್ಲಿದ್ದಾಗಲೇ ಗಾಯಕ ತನ್ನ ಹಾಡು-ಮಾತು ಎಲ್ಲವನ್ನೂ ನಿಲ್ಲಿಸಿಬಿಟ್ಟಿದ್ದ.
ಈ ದೀಪಾವಳಿಯಿಂದ ನನ್ನೂರು (ಮಧ್ಯಪ್ರದೇಶ) ಖಾಂಡ್ವಾದಲ್ಲೇ ಹೋಗಿ ನೆಲೆಸುತ್ತೇನೆ ಅಂದಿದ್ದರು ಕಿಶೋರ್. ಅದಕ್ಕಾಗಿ ಅಲ್ಲಿನ ಮನೆಗೆಲ್ಲ ಬಣ್ಣ ಬಳಿಸಿದ್ದರು. ಕೊನೆಗೆ ಅವರು ವಿರಮಿಸಿದ್ದು ಖಾಂಡ್ವಾದಲ್ಲಿಯೇ. ಅಂದು ಅಂತಿಮ ದರ್ಶನಕ್ಕೆ ಖಾಂಡ್ವಾದಲ್ಲಿ ಸೇರಿದ್ದ ಸುಮಾರು ಆರು ಲಕ್ಷ ಜನ `ಇಲ್ಲಿಯೇ ಬಂದು ನೆಲೆಸುತ್ತೇನೆ ಎಂದಿರಿ, ಎಂಥಾ ದೊಡ್ಡ ಮೋಸ ಮಾಡಿದಿರಿ!' ಎಂದು ಕಣ್ಣೀರಿಟ್ಟರು.



ಇನ್ನೊಂದು ಮಾತು: ಬಹಳ ವರ್ಷಗಳ ನಂತರ ಅಣ್ಣ ಅಶೋಕ್ ಕುಮಾರ್ ಲೀನಾ ಜೊತೆ ಹೇಳಿದರಂತೆ, `ಅಂದು ಆತ ನನಗೆ ಹುಟ್ಟುಹಬ್ಬದ ಕೊಡುಗೆಯಾಗಿ ಕೊಟ್ಟಿದ್ದು ಆತನ ಜೀವವನ್ನೇ, ಅದನ್ನು ಹೊತ್ತು ನಾನು 90 ವರ್ಷ ಬದುಕಲು ಸಾಧ್ಯವಾಯ್ತು!'


(ಬಹಳ ಹಿಂದೆ ಕಿಶೋರ್ ಕುಮಾರ್ ಬಗ್ಗೆ ಬರೆದಿದ್ದು... )

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ