ಇದೆಂಥಾ ಬದುಕು?

ಆ ಮಗುವಿನ ಮೃತದೇಹದ ಮುಂದೆ ನಿಂತವನಿಗೆ ಇಡೀ ಜೀವವೇ ಜಗ್ಗಿದಂತಾಯಿತು. ಅದರ ಪಕ್ಕದಲ್ಲಿಯೇ ಅಪ್ಪ-ಅಮ್ಮ ತಲೆ ತಗ್ಗಿಸಿಕೊಂಡು ಕಣ್ಣೀರಾಗಿದ್ದರು. ಐದು ನಿಮಿಷ ಹಾಗೇ ನಿಂತು ಬಿಟ್ಟೆ. ಇಡೀ ದೇಹಕ್ಕೆ ಬಿಳಿ ಬಟ್ಟೆ ಸುತ್ತಿದ್ದ ಆ ಮಗು ಎರಡು ಮೊಳದಷ್ಟೂ ಉದ್ದವಿಲ್ಲ. ಮುಖದ ಚರ್ಮ ಎಷ್ಟು ತೆಳ್ಗಗಿದೆ ಎಂದರೆ ಅದು ರೇಷಿಮೆ ನೂಲಿನಂತೆ ಮುಖದ ಮೂಳೆಗಳಿಗೆ ಅಂಟಿಕೊಂಡಿದ್ದು ಸ್ಪಷ್ಟವಾಗಿ ಗೋಚರಿಸುತ್ತಿತ್ತು. ಬಹಳ ಹೊತ್ತು ನಿಲ್ಲಲಾಗಲಿಲ್ಲ.

ಆ ಮನೆಯ ಹಾಲ್ ನಿಂದ ಈಚೆಗೆ ಬಂದು ಮಿತ್ರರ ಜೊತೆ ನಿಂತವನಿಗೆ ಮನಸ್ಸಿನ ತುಂಬಾ ವೇದನೆ-ಸಂಕಟ. ಬದುಕಿನ ತಕ್ಕಡಿಯಲ್ಲಿ ಎಲ್ಲರಿಗೂ ಸಮಪಾಲು ಇದ್ದಿದ್ದರೆ ಏನಾಗುತ್ತದೆ? ಒಬ್ಬರ ಜೀವನದಲ್ಲಿ ಅತೀವ ಯಾತನೆ, ಇನ್ನೊಬ್ಬರಿಗೆ ಮೆರೆಯುವಷ್ಟು ಸುಖ, ಉಲ್ಲಾಸ. ಜೀವನ ಎಲ್ಲರಿಗೂ ಸಹನೀಯವಾಗಿ ಯಾಕಿರುವುದಿಲ್ಲ? ಆವಾಗ ಜೀವನವೇ ಪರಿಪೂರ್ಣವಾಗುವುದಿಲ್ಲವೇ? ಗೊತ್ತಿಲ್ಲ.

ನಾನು ನೋಡಿದ್ದು ನಿಜಕ್ಕೂ ಮಗುವಿನ ಮೃತ ದೇಹ ಅಲ್ಲ! ಮಗುವಿನ ಹಾಗೆ ಇದ್ದವಳು ಅವಳು. ಆಕೆಗೆ ಸುಮಾರು ಹತ್ತು ವರ್ಷ. ಆದರೆ ಇಡೀ ದೇಹದಲ್ಲಿ ಯಾವುದೇ ಬೆಳವಣಿಗೆ ಇಲ್ಲ. ಬೆನ್ನುಮೂಳೆ, ಮೆದುಳು, ಶ್ವಾಸಕೋಶ.... ಯಾವುದರಲ್ಲೂ ಬೆಳವಣಿಗೆ ಕಾಣಲೇ ಇಲ್ಲ. ಡಾಕ್ಟರು ಆರಂಭದಲ್ಲೇ ಹೇಳಿದ್ದರು ಈ ಮಾತುಗಳನ್ನು. ಮಗು ಬದುಕಿದರೆ ಹತ್ತು ವರ್ಷ ಬದುಕಬಹುದು ಎಂದ್ದಿದ್ದರು. ಹಾಗಂತ ಕರುಳ ಕುಡಿಯಲ್ಲವೇ ಅದು?
ಅಂದಿನಿಂದ ಶುರುವಾಯಿತು ಅಪ್ಪ ಅಮ್ಮನ ಬದುಕಿನ ಹೊಸ ತಿರುವು. ಅಪ್ಪನ ಮಾತು ಹಾಗಿರಲಿ, ಆತ ಹೊರ ಪ್ರಪಂಚಕ್ಕೆ ಬರುತ್ತಾನೆ, ದುಡಿಯುತ್ತಾನೆ, ಕೆಲ ಗಂಟೆಗಳನ್ನು ಇಲ್ಲೆಲ್ಲೋ ಕಳೆಯುತ್ತಾನೆ. ಎಲ್ಲೋ ಒಂದು ಕಡೆ ರಿಫ್ರೆಶ್ ಆಗ್ತಾನೆ. ಎನೋ ಹೊಸದನ್ನು ಪಡೆಯುವ ಪ್ರಯತ್ನ ಮಾಡುತ್ತಾನೆ, ಎಲ್ಲವೂ ಸರಿ. ಆದರೆ ಆ ತಾಯಿ? ಬದುಕಿನ ಪ್ರತಿ ಕ್ಷಣವನ್ನೂ ಆ ಕಂದನ ಜೊತೆಗೇ ಕಳೆಯಬೇಕಲ್ಲ? ನಿಜಕ್ಕೂ ಅದೊಂದು ಗೃಹಬಂಧನ.
ಉಳಿದ ಮನೆಗಳಲ್ಲಾದರೆ ಮಕ್ಕಳು ಪ್ರತಿ ದಿನವೂ, ಪ್ರತಿ ಕ್ಷಣವೂ ತಮ್ಮ ಚಲನಶೀಲತೆಯನ್ನೂ ತೋರಿಸುತ್ತಾ, ನಮ್ಮನ್ನು ಬೆರಗುಗೊಳಿಸುತ್ತಾ, ಖುಷಿಗೊಳಿಸುತ್ತಾ, ಹೆಮ್ಮೆಗೆ ಒಳಪಡಿಸುತ್ತಾ ಹೋಗುತ್ತವೆ. ನಾವೂ ಅವರೊಂದಿಗೆ ಸೇರಿ ಬದುಕಿನ ಕ್ಷಣವನ್ನು ಶ್ರೀಮಂತಗೊಳಿಸುತ್ತಾ ಹೋಗುತ್ತೇವೆ. ಆದರೆ, ಇಲ್ಲೆಲ್ಲಿದೆ ಆ ಸಂಭ್ರಮ? ಹೆಮ್ಮೆ? ಹಾಗಾದರೆ ಅಷ್ಚೂ ವರ್ಷಗಳನ್ನು ಆ ತಾಯಿ ಹೇಗೆ ಕಳೆದಿರಬಹುದು? ಮಗಳ ಹಾಗೆ ಅಲ್ಲ, ಪುಟ್ಟ ಮಗುವಿನ ಹಾಗೆ ಲಾಲನೆ ಪಾಲನೆ ಮಾಡಬೇಕಿತ್ತಲ್ಲ? ಆ ಮಗುವಿನ ಪ್ರತಿ ಕರೆಗೆ ಹೇಗೆ ಸ್ಪಂದಿಸಿರಬಹುದು? ಮಗು ಹೇಗೆ ಅಪ್ಪ -ಅಮ್ಮನನ್ನು ಕರೆದಿರಬಹುದು? ಅನೇಕ ಪ್ರಶ್ನೆಗಳು ಒಮ್ಮೆಗೇ ಅಂತಃಕರಣವನ್ನು ಕಲಕಿದವು. ಆಕೆ ಎಂಥಾ ಸಹನಾಮಯಿ ಅನಿಸಿತು. ಬೆಳೆಯುತ್ತಿರುವ ಮಗಳನ್ನು ಕೋಣೆಯೊಳಗಿಟ್ಟು ಮನೆಗೆ ಬಂದವರನ್ನು ಹೇಗೆ ಮಾತಾಡಿಸರಬಹುದು? ಅವರ ಒಟ್ಟೂ ಮನಸ್ಥಿತಿಯ ಬಗ್ಗೆ ಅಚ್ಚರಿ ಮೂಡಿತು.


ನಿಜ, ಇಂತಹ ಪ್ರಶ್ನೆಗಳಿಗೆ ಯಾರಿಂದಲೂ ಉತ್ತರ ನೀಡಲು ಸಾಧ್ಯವಿಲ್ಲ. ಆ ಪಾಪುವಿನ ಅಮ್ಮ ಅಮ್ಮ ಮಾತ್ರ ಉತ್ತರಿಸಲು ಸಾಧ್ಯ. ಇಂತಹ ಬದುಕನ್ನು ಕಳೆಯುವುದಿದೆಯಲ್ಲ? ನಿಜಕ್ಕೂ ಅದೊಂದು ಸಾಧನೆ. ಹತ್ತು ವರ್ಷದ ಬದುಕು ನೂರು ವರ್ಷದ ಬದುಕಿಗೆ ಸಮಾನ.
ಈ ಮಗುವಿನ ತಂದೆ ನನ್ನ ಮಿತ್ರ, ಸಹೋದ್ಯೋಗಿ. ಶ್ರೀರಂಗಪಟ್ಟಣದ ಬಳಿ ನಡೆದ ಆತನ ಮದುವೆಗೂ ನಾನು ಹೋಗಿದ್ದೆ. ಮುಂದೆ ಇಬ್ಬರೂ ಪತ್ರಿಕೋದ್ಯಮದ ಹರಿವಿನಲ್ಲಿ ಹತ್ತಾರು ವರ್ಷ ಈಜಿ ಬಂದಿದ್ದೇವೆ. ಒಟ್ಟಿಗೆ ಪ್ರಯಾಣ ಮಾಡಿದ್ದಿದೆ, ಪತ್ರಿಕೆಯ ಪುಟಗಳನ್ನು ರೂಪಿಸಿದ್ದಿದೆ, ವರದಿಗಳ ವಿಚಾರದಲ್ಲಿ ಜಗಳವಾಡಿದ್ದಿದೆ. ಮೀಟಿಂಗ್ ಗಳಲ್ಲಿ ವಾದ-ಪ್ರತಿವಾದ ಮಾಡಿದ್ದಿದೆ. ಆದರೆ ಯಾವತ್ತಂದರೆ ಯಾವತ್ತೂ ಆತ ತನ್ನ ಮನೆಯ ಸಂಕಟವನ್ನು ಹೇಳಿಕೊಂಡಿರಲಿಲ್ಲ. ಕೇವಲ ಮೂರು ವರ್ಷಗಳ ಹಿಂದಷ್ಟೆ ಮಿತ್ರರೊಬ್ಬರ ಮೂಲಕ ವಿಷಯ ಗೊತ್ತಾಗಿತ್ತು. ಆಗಲೂ ಅವನನ್ನು ಪ್ರಶ್ನೆ ಮಾಡಿರಲಿಲ್ಲ. ಆತ ರೇಗಿದಾಗ, ಡಿಪ್ರೆಸ್ ಆದಾಗಲೆಲ್ಲ ವಾಸ್ತವ ಸ್ಥಿತಿಯನ್ನು ಅರ್ಥ ಮಾಡಿಕೊಳ್ಳುತ್ತಿದ್ದೆ. ಹೊಸ ಮನೆ ಖರೀದಿ ಮಾಡಬೇಕು ಎಂದು ಓಡಾಡುತ್ತಿದ್ದ. ಅಪಾರ್ಟಮೆಂಟು ನೋಡಲಾ? ಮನೆ ಮಾಡಲಾ? ಎಂಬ ತಾಕಲಾಟಕ್ಕೆ ಬಿದ್ದಿದ್ದ. ಮರುದಿನ ಕೇಳಿದರೆ ಇದಾವುದೂ ಬೇಡ ಎಂದು ಕುಗ್ಗಿ ಹೋದವನಂತೆ ಮಾತನಾಡುತ್ತಿದ್ದ. ನಿಜ, ಅವನ ಬದುಕು ಹಾಗೇ ಇತ್ತು. ಆತ ಒಳ್ಳೆಯ ಹಾಡುಗಾರ. ನಾವು ಕಚೇರಿಯಲ್ಲಿ ಬೆಳದಿಂಗಳ ಊಟ ಏರ್ಪಡಿಸಿದಾಗ ಅದ್ಭುತವಾಗಿ ಹಾಡೋನು...

ಹೊಸ ಬೆಳಕು ಮೂಡುತಿದೆ... ಎಂದು!
ಮನೆಯಿಂದ ಹೊರಗೆ ಬಂದಾಗ ಆತ ಹೀಗೆ ಹಾಡುವ ಮೂಲಕ ಎಲ್ಲವನ್ನೂ ಮರೆಯಲು ಪ್ರಯತ್ನ ಮಾಡುತ್ತಿದ್ದ. ಆದರೆ ಅಂತರಂಗದಲ್ಲಿ ಎಷ್ಟೊಂದು ಕುಗ್ಗಿ ಹೋಗಿರಬಹುದು? ಅದನ್ನು ಊಹಿಸುವುದು ಕಷ್ಟ.
ಎರಡು ವರ್ಷಗಳ ಹಿಂದೆ ಬಹಳ ಕಷ್ಟ ಪಟ್ಟು ಒಂದು ಕಾರು ಖರೀದಿ ಮಾಡಿದ್ದ. ಅದೂ ಕೇವಲ ಮಗಳಿಗಾಗಿ. ಮಗಳನ್ನು ಕರೆದುಕೊಂಡು ಬಸ್ಸಿನಲ್ಲಿ ಓಡಾಟ ಸಾಧ್ಯವಿರಲಿಲ್ಲ, ಆರಾಮವಾಗಿ ಬೆಂಗಳೂರಿಂದ ಮೈಸೂರಿಗೆ ಹೋಗಿ ಬರಬಹುದಿತ್ತು ಎಂಬುದಷ್ಟೆ ಕಾರಣ. ಹಾಗಂತ ಕಳೆದ ಹತ್ತು ವರ್ಷಗಳಿಂದ ಈ ಮಿತ್ರ ದಂಪತಿಯನ್ನು ಯಾವ ಸಮಾರಂಭದಲ್ಲೂ ನೋಡಿರಲಿಲ್ಲ. ಬಂದರೆ ಮಿತ್ರನೊಬ್ಬನೇ ಬರುತ್ತಿದ್ದ. ಆ ತಾಯಿ ಹೇಗಾದರೂ ಬರಲು ಸಾಧ್ಯ? ಆಕೆ ಸದಾ ಗೋಡಗಳ ನಡುವೆ ಬಂಧಿ. ಯಾವ ಸಮಾರಂಭದಲ್ಲೂ ಅವರು ಭಾಗವಹಿಸಿದಂತಿಲ್ಲ. ಮನೆಯಲ್ಲೂ ಅಷ್ಟೇ. ಯಾವ ಖುಷಿಯನ್ನು ಅನುಭವಿಸಬಹುದಿತ್ತು? ಮಗಳೊಬ್ಬಳೆ ಅವರ ಪಾಲಿನ ಜೀವ.
ಆಕೆ ಮಲಗಿದಲ್ಲೇ ನಗ್ತಾ ಇದ್ಲು, ಅಳ್ತಾ ಇದ್ಲು... ಏನಾದರೂ ಬೇಕೆನಿಸಿದರೆ ಕಣ್ಣಲ್ಲೇ ಸಂಜ್ಞೆ ಮಾಡ್ತಾ ಇದ್ಲು... ಆಕೆಯ ಕಣ್ಣನ್ನು ನೋಡುವುದೇ ಚೆಂದ. ಅಷ್ಟೊಂದು ಬ್ರೈಟ್!! ಹೀಗೆ ಹೇಳಿಕೊಂಡಿದ್ದ ಮಿತ್ರ. ಆಕೆಯನ್ನು ಅನುಕ್ಷಣವೂ ನೋಡಿಕೊಳ್ಳುತ್ತಿದ್ದ ತನ್ನ ಮಡದಿಯ ಬಗ್ಗೆ ಯಾವತ್ತೂ ಅವನಿಗೆ ಹೆಮ್ಮೆ. ಅವರೂ ಒಮ್ಮೆಯೂ ಸಹನೆ ಕಳೆದುಕೊಂಡಿದ್ದಿಲ್ಲ. ಮಗಳನ್ನು ಎಷ್ಟು ವರ್ಷ ಬೇಕಿದ್ದರೂ ಹೀಗೇ ಸಲಹುತ್ತೇನೆ ಅಂದಿದ್ದರು. ಮಾತೃ ಹೃದಯ ಅಂದರೆ ಅದು ಅಲ್ಲವೇ?
ಕಳೆದವಾರವಷ್ಟೇ ಮಗಳು ಹಠಾತ್ ಹುಷಾರು ತಪ್ಪಿದ್ದಳು. ಕಚೇರಿಯಿಂದ ಮನೆಗೆ ಧಾವಿಸಿದ ಮಿತ್ರ ಆಕೆಯನ್ನು ಆಸ್ಪತ್ರೆಗೆ ಸೇರಿಸಿದ್ದ. ಹನುಮಂತನಗರದ ಕೆ.ಆರ್. ಆಸ್ಪತ್ರೆಯಲ್ಲಿ ಬೆಡ್ ಇಲ್ಲ ಎಂದು ಸಾಗಹಾಕಿದ್ದರು. ಕೊನೆಗೆ ಜಯನಗರದ ಬೆಂಗಳೂರು ಆಸ್ಪತ್ರೆಗೆ ಸೇರಿಸಿದ್ದ. ಮಗಳ ಪುಟ್ಟ ಶ್ವಾಸಕೋಶದ ತುಂಬಾ ಕಫ ಸೇರಿಕೊಂಡು ನ್ಯೂಮೊನಿಯಾ ಆಗಿತ್ತು. ಕಫ ಹೊರ ಹಾಕುವ ಸಾಮರ್ಥ್ಯ ಕೂಡ ಆಕೆಯ ದೇಹದಲ್ಲಿ ಇರಲಿಲ್ಲ. ಹಾಗೂ ಹೀಗೂ ಚೇತರಿಸಿಕೊಳ್ಳುತ್ತಲೂ ಇದ್ದಳು. ಎರಡೇ ದಿನ, ಮಗಳನ್ನು ಮನೆಗೆ ಕರೆದುಕೊಂಡು ಬರುತ್ತೇನೆ, ಆರೈಕೆಗೆ ದಿನವೂ ನರ್ಸ್ ಒಬ್ಬಳನ್ನು ಇಡುತ್ತೇನೆ ಎಂದು ಮಿತ್ರನ ಬಳಿ ಹೇಳಿಕೊಂಡಿದ್ದ. ಆದರೆ ಮೊನ್ನೆ ಶುಕ್ರವಾರ ಬೆಳಿಗ್ಗೆ ಎಲ್ಲವೂ ಕೈಕೊಟ್ಟಿತ್ತು. ಮಿತ್ರನ ಮನೆಗೆ ಆಂಬುಲೆನ್ಸ್ ಬರಲಿಲ್ಲ. ಮಗಳನ್ನು ಕೊನೆಯ ಬಾರಿಗೆ ತನ್ನ ಕಾರಿನಲ್ಲೇ ಕರೆತಂದ. ಈ ಅಪ್ಪನದ್ದು, ಅಮ್ಮನದ್ದು ಅದೆಂಥಾ ಅದಮ್ಯ ಪ್ರೀತಿ ಅಲ್ಲವೇ?
ಮಗಳ ಮೃತದೇಹದ ಪಕ್ಕದಲ್ಲಿ ಅಮ್ಮ- ಅಪ್ಪ ನಿರ್ಲಿಪ್ತವಾಗಿ ಕುಂತಿದ್ದರು. ನಿಜಕ್ಕೂ ಎಂಥಾ ಬದುಕು ಅಲ್ಲವೇ ಅವರದ್ದು? ಅವರಿಬ್ಬರಿಗೂ ನನ್ನ ದೊಡ್ಡ ಪ್ರಣಾಮ.
ಇನ್ನೊಂದು ವಿಷಯ ಹೇಳಬೇಕು. ಅವರು ಮಗಳಿಗೆ ಎಂಥಾ ಹೆಸರು ಇಟ್ಟಿದ್ದರು ಹೇಳಿ?

ಸೃಜನಾ!

ಮಗಳ ನೇತ್ರ ದಾನವನ್ನೂ ಅವರು ಮಾಡಿದ್ದಾರೆ. ಸೃಜನಾ ಇನ್ನೊಬ್ಬರ ಬದುಕಿಗೆ ಕಣ್ಣಾಗಿದ್ದಾಳೆ! ಅಲ್ಲಿ ಆಕೆ ಬದುಕಿನ ಪೂರ್ಣ ಭಾಗವನ್ನು ನೋಡಲಿ. ಈ ಅಮ್ಮ ಮತ್ತು ಅಪ್ಪ ತಮ್ಮ ದೊಡ್ಡ ಅನುಭವದ ಗಂಟಿನೊಂದಿಗೆ ಹೊಸ ಬದುಕಿನ ಬೆಳಕನ್ನು ಕಾಣುವಂತಾಗಲಿ.

ಕಾಮೆಂಟ್‌ಗಳು

Karnataka Best ಹೇಳಿದ್ದಾರೆ…
ಮಗಳ ನೇತ್ರ ದಾನವನ್ನೂ ಅವರು ಮಾಡಿದ್ದಾರೆ. ಸೃಜನಾ ಇನ್ನೊಬ್ಬರ ಬದುಕಿಗೆ ಕಣ್ಣಾಗಿದ್ದಾಳೆ! ಅಲ್ಲಿ ಆಕೆ ಬದುಕಿನ ಪೂರ್ಣ ಭಾಗವನ್ನು ನೋಡಲಿ. ಈ ಅಮ್ಮ ಮತ್ತು ಅಪ್ಪ ತಮ್ಮ ದೊಡ್ಡ ಅನುಭವದ ಗಂಟಿನೊಂದಿಗೆ ಹೊಸ ಬದುಕಿನ ಬೆಳಕನ್ನು ಕಾಣುವಂತಾಗಲಿ.

avara novige innenu helalu sadya.
chand ಹೇಳಿದ್ದಾರೆ…
ನಿಜ, ಅವರ ನೋವು ಯಾರಿಗೂ ಬಾರದಿರಲಿ.
Shashi jois ಹೇಳಿದ್ದಾರೆ…
ಹ್ವಾಯ್ ಓದಿ ತುಂಬಾ ಬೇಜಾರಾಯ್ತು..ಇಂಥ ಸ್ಥಿತಿ ಯಾರಿಗೂ ಬರೋದು ಬೇಡ..
ಸೃಜನಳ ತಾಯಿಗೆ ನನ್ನ ದೊಡ್ಡ ನಮನ..ಸೃಜನಳ ಕಣ್ಣು ದಾನ ಮಾಡಿ ಒಳ್ಳೆ ಕೆಲಸ ಮಾಡಿದ್ದಾರೆ ಅವರಿಬ್ಬರು....
ಗೀತಾ ಹೇಳಿದ್ದಾರೆ…
novu mareyo shakthi avrige kodali.... avara hadige nanu adesto sala kiviyagiddene....
chand ಹೇಳಿದ್ದಾರೆ…
ನಿಜ ಗೀತ... ನಿಮ್ಮ ಊಹೆ ಸರಿಯಾಗಿದೆ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ