ಬಂದುಬಿಡು
ಮಳೆಗಾಲದ ಸಂಜೆಗೆ


ಅಂಥದೊಂದು ಮಳೆಗಾಲದ ಸಂಜೆ
ಮತ್ತೇರಿದ ಮುಗಿಲಿನ ಕಪ್ಪು ಕರಗಿ
ನಿನ್ನ ಕಣ್ಣ ಕೆಳಗಿನ ಕಾಡಿಗೆಯಾಗಿತ್ತು
ರೆಪ್ಪೆ ಅದುರಿ ಬಿದ್ದ ಪ್ರತಿ ಹನಿಯೂ
ಮುಂಗಾರಿನ ಗಿಲಕಿ ಹಾಡಿತ್ತು

ನೆಲದ ಬದುವಿನ ಕಂಕುಳಲ್ಲಿ
ಒಸರಿದ ಸೆಲೆಗಳ ನೆನೆಯುತ್ತ
ಪಾರಿಜಾತ ಗಿಡದ ಕೆಳಗೆ
ಗಲ್ಲೆನ್ನಲಿಲ್ಲ ಹಸಿರ ಬಳೆ
ತೋಳಬಂಧಿಯಲ್ಲಿ
ಶಿಲೆಯಾಯ್ತು ಒನಪಿನ ದೇಹ

ಕೆಂಪು ಚುಕ್ಕಿಗಳ ದಾವಣಿಯ
ಅಂಚು ಸವರಿ ಕಾವಾರಿದ
ಮಣ್ಣೊಳಗೆ ಇಳಿದಂತೆ ಮಳೆ
ನಿನ್ನೊಳಗೆ ಹುಚ್ಚು ಕುದುರೆಯಾಗಿತ್ತು
ಕೆಂಡದಂಥ ಆಸೆ
ನಾಭಿಯನ್ನೆಲ್ಲ ತಡಕಾಡಿ
ಧ್ಯಾನಸ್ಥನಂತೆ ಸೋಗು ಹಾಕಿತ್ತು

ಮಳೆಯೆಂದರೆ ಹೀಗೆ
ತೆನೆ ಅರಳಿದ ಮೋಡದ ಕಂಪು
ಅದರೊಳಗೆ ಮಿಂದ ನೀನು
ಗಂಧವತಿಯಾದ ಕನಸು

ಮೊದಲ ಮಳೆ ಬಿದ್ದು ಹೋದ ಮೇಲೆ
ಉಳಿದದ್ದು ಮೌನವೋ? ಸದ್ದೋ?
ಉಸಿರಿಗೆ ಉಸಿರೇ ನಿಂತು
ಮೊಳಕೆ ಒಡೆದಿದ್ದು
ಹಸಿನೆಲದೊಡಲಿನ ದಾವಂತವೋ?

ಇಂಥದೊಂದು ಮಳೆಗಾಲದ ಸಂಜೆಗಾಗಿ
ಎಷ್ಟೊಂದು ವರ್ಷ ಕಾದಿದ್ದೇನೆ
ಮೋಡ ಕಟ್ಟಿತ್ತು, ಗಾಳಿ ಬೀಸಿತ್ತು
ನಿನ್ನಂತೆ ತೊಯ್ದು ನಿಂತಿದೆ
ಪಾರಿಜಾತದ ಗಿಡ
ಬೆಟ್ಟದ ತಪ್ಪಲಿನ ಕೆಳಗೆ
ಬಿಸಿಯುಸಿರಿಗೆ ಕಾದು
ಶಿಲೆಯಾಗಿದ್ದೇನೆ ನಾನು

ಈಗ ಮತ್ತೆ ಬಿಚ್ಚಿಕೊಂಡಿದೆ
ಮೋಡದ ಸೆರಗು
ಎದೆಯ ಉಬ್ಬಿನೊಳಗೆ ಉಳಿದ
ಅಷ್ಟೂ ಹನಿಗಳು
ಕರಗಲಿ ನಿನ್ನ ಬೊಗಸೆಯೊಳಗೆ
ಬಂದು ಬಿಡು ಇನ್ನೊಮ್ಮೆ
ಮಳೆಗಾಲದ ಸಂಜೆಗೆ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ