
ಬಾಲ್ಯ ಕಳೆದಿದೆ, ಯೌವನ ಗಿಲೀಟು ಹಚ್ಚಿಕೊಂಡಿದೆ ಆವತ್ತು ಆದ್ಯಂತವಾಗಿ ಮಳೆ ಜಿನುಗುತ್ತಲೇ ಇತ್ತು. ಹಿಂಗಾರು ಮಳೆ. ನಮ್ಮನೆಯಲ್ಲೇ ಹುಟ್ಟಿ ಬೆಳೆದ ಕಾಯ್ಲಾಗೆ ಬೆಳಿಗ್ಗೆಯಿಂದ ಹೆರಿಗೆ ನೋವು. ಹಟ್ಟಿಯ ತುಂಬಾ ಆಚಿಂದೀಚೆ ಈಚಿಂದಾಚೆ ಕುಣಿದಾಡುತ್ತಲೇ ಇತ್ತು. ರಾತ್ರಿಯಾದರೂ ಕರು ಹಾಕಲೇ ಇಲ್ಲ. ಕಾಯ್ಲಾ ಮೊದಲೇ ಹರಾಮಿ ಎಂದೇ ಕುಖ್ಯಾತಿ ಪಡೆದಿತ್ತು. ಎಷ್ಟೇ ಗಟ್ಟಿ (ಬಲವಾದ) ಹಗ್ಗ ಕಟ್ಟಿದರೂ ಕಿತ್ತುಕೊಂಡು ಇಡೀ ಹಕ್ಲು ತುಂಬಾ ಕುಂಬ್ಚಟ್ ಹಾರುತ್ತಾ ಓಡುತ್ತಿತ್ತು. ಕುಳ್ಳನೆಯ ದನವನ್ನು ಹಿಡಿಯುವುದು ಯಾರಿಗೂ ಸಾಧ್ಯವಿರಲಿಲ್ಲ. ಸಂಜೆ ಕಳೆದ ಮೇಲೆ ಅದೇ ಹಟ್ಟಿಗೆ ಬಂದು ಸೇರುವುದನ್ನೇ ಕಾಯುತ್ತಿದ್ದೆವು. ಇಂಥಾ ಕಾಯ್ಲಾನ ಚೊಚ್ಚಲ ಹೆರಿಗೆ ಇದು. ನಮಗೋ ಆತಂಕ. ರಾತ್ರಿ ನಾವೆಲ್ಲ ಮಲಗಿದ ಮೇಲೆ ನಿಂತೇ ಕರು ಹಾಕಿಬಿಟ್ಟರೆ? ಹಟ್ಟಿಯಲ್ಲೊಂದು ಚಿಮಣಿ ದೀಪ ಹಚ್ಚಿ ಸರತಿ ಮೇಲೆ ಒಬ್ಬೊಬ್ಬರೇ ಕಾಯುವುದು ಅಂತ ತೀಮರ್ಾನ ಮಾಡಿದೆವು. ರಾತ್ರಿಯ ಮೊದಲ ಚರಣದಲ್ಲಿ ನಾನು ಮತ್ತು ಅಕ್ಕ ಹತ್ತು ನಿಮಿಷಕ್ಕೆ ಒಮ್ಮೆ ಹೋಗಿ ನೋಡಿ ಬರುವುದು ಮಾಡಿದೆವಾದರೂ ಅಮ್ಮ ನಿದ್ದೆಯನ್ನೇ ಮಾಡಲಿಲ್ಲ. ಬೆಳಗಿನ ಜಾವದ ಹೊತ್ತಿಗೆ ಹಸು ಕರು ಹಾಕಿತ್ತು. ಒದ್ದೆ ಒದ್ದೆ ಕರುವಿನ ಮೇಲೆ ತೌಡು (ಅಕ್ಕಿ ಹೊಟ್ಟು) ಹಾಕುವುದು ಹಸು ಅದನ್ನು ನೆಕ್ಕುವುದು ಮಾಡುತ್ತಿತ್ತು. ಬೆಳಗಿನ ಜಾವ ಹಿತ್ಲ್ ತುಂಬಾ ಕರು ಓಡುವುದು, ದನ ಹೂಂಕರಿಸಿ ಕೂಗುವುದು ಇದೇ ಗಲಾಟೆ. ಆದರೆ ಆವತ...