TRANSFER ಎಂದೂ ನೀಗದ ಬಾಯಾರಿಕೆ...



ವೈಯಕ್ತಿಕ ಮಟ್ಟದ ಚಾರಿತ್ರ್ಯ ಕಾಯ್ದುಕೊಂಡು ಬಂದಿದ್ದೀರಿ, ಅದರಿಂದಷ್ಟೇನೇ ಪ್ರಭಾವ ಬಳಸಲು ಸಾಧ್ಯವೇ?
ಸಂಪುಟ ಮಟ್ಟದಲ್ಲಿ ಪ್ರಭಾವ ಬೀರುವುದು ಅಂದರೆ ಯಾವ ಮಟ್ಟದಲ್ಲಿ ಅಂತ. ಯಾಕಂದರೆ ಇರೋರೆಲ್ಲ ಉಸ್ತಾದ್ಗಳೇ ಆಗಿರೋವಾಗ ನಾನು ಯಾವ ರೀತಿ ಪ್ರಭಾವ ಬೀರೋಕೆ ಸಾಧ್ಯ?
ಒಂದು ಕಥೆ ಹೇಳ್ತೀನಿ ನಿಮಗೆ ಕೇಳಿ; ಬಿಹಾರದಲ್ಲಿ ದರ್ಭಾಂಗ್ ಅಂತ ಒಂದು ಜಿಲ್ಲೆ ಇದೆ, ಬಹಳ ಕರ್ಮಠ ಹಿಂದುಗಳಿರುವ ಜಾಗ. ಅಲ್ಲಿಗೆ ಒಬ್ಬರು ಕ್ರಿಶ್ಚಿಯನ್ ಪಾದ್ರಿಯನ್ನು ಕಳಿಸಿದರು. ಹತ್ತು ವರ್ಷ, 15 ವರ್ಷ ಆದರೂ ಒಂದೇ ಒಂದು ಕನ್ವರ್ಶನ್ ರಿಪೋರ್ಟ್ ಬರ್ಲಿಲ್ಲ. ಪಾದ್ರಿ ಅವರಿಗೆ ಕಾರಣ ಕೇಳಿ ಪತ್ರ ಹೋಯಿತು. ಪುಣ್ಯ ನಾನಿನ್ನೂ ಹಿಂದೂ ಆಗಿಲ್ವಲ್ಲ ಅಂತ ಪಾದ್ರಿ ಉತ್ತರಿಸಿದರು. ಸೋ, ನಾನು ಪ್ರಭಾವ ಬೀರ್ತೀನೋ ಗೊತ್ತಿಲ್ಲ. ನಾನು ಅವರ ಪ್ರಭಾವಕ್ಕೊಳಗಾಗಿಲ್ವಲ್ಲ, ಅದು ಗ್ರೇಟೆಸ್ಟ್ ಥಿಂಗ್ ಅಂದ್ಕೋತೀನಿ.

ಕೆಲವು ನೀತಿಗಳ ಮಟ್ಟದಲ್ಲಿ ನಿಮ್ಮ ಸರ್ಕಾರ ಚೇಂಜಸ್ ತರಬೋದಿತ್ತಲ್ಲವಾ? ಉದಾಹರಣೆಗೆ ಲೋಕಾಯುಕ್ತ...
ಹಿಂದೆ ಲೋಕಾಯುಕ್ತಕ್ಕೆ ರಾಮಕೃಷ್ಣ ಹೆಗಡೆ ಸರ್ಕಾರ ಹೆಚ್ಚಿನ ಅಧಿಕಾರ ಕೊಟ್ಟಿತ್ತು. ಆದರೆ 6 ತಿಂಗಳೊಳಗೆ ಸೈಲೆಂಟ್ ಆಗಿ ಅದನ್ನು ವಾಪಸ್ ತಗೊಂಡ್ರು. ಅಂತಹುದೊಂದು ಪ್ರೆಷರ್ ಇತ್ತು. ಯಾವುದೇ ಅಧಿಕಾರಯುಕ್ತ ರಾಜಕಾರಣಿ ವೇದಿಕೆಯ ಮೇಲೆ ಮಾತು ಚೆನ್ನಾಗಿ ಆಡ್ತಾನೆ. ಆದ್ರೆ ಅಧಿಕಾರ ಕೊಡುವ ಪ್ರಸಂಗ ಬಂದಾಗ ಅದಕ್ಕೆ ಒಪ್ಪೋದಿಲ್ಲ ಎನ್ನೋದು ಇವತ್ತಿನ ಸ್ಥಿತಿ.

ಬಿಜೆಪಿ ಅಧಿಕಾರಕ್ಕೆ ಬರ್ತಾ ಬರ್ತಾ ಇಂಥ ಪರಿಸ್ಥಿತಿ ಯಾಕೆ ನಿರ್ಮಾಣ ಆಯ್ತು. ಸೈದ್ಧಾಂತಿಕ ಹಿನ್ನೆಲೆ ಇದ್ದ ಪಕ್ಷನೂ ಯಾವುದೇ ಬದಲಾವಣೆ ತರಲಿಕ್ಕೆ ಆಗಲಿಲ್ಲ ಅಲ್ವಾ?
ಹೌದು. ನಾವು ತುಂಬ ಕಾಂಪ್ರಮೈಸ್ ಆದ್ವಿ. ಒಂದು, ಅಧಿಕಾರಕ್ಕೋಸ್ಕರ ನಂಬರ್ ಕಮ್ಮಿ ಇತ್ತು. ನಾವು ಗೆದ್ದಿದ್ದು 110. 113 ಬೇಕಿತ್ತು. ಅದಕೋಸ್ಕರ ಮಾಡ್ಕೊಂಡ ಕಾಂಪ್ರಮೈಸ್. ಎರಡನೆಯದು, ಎಂಎಲ್ಎ ಲೆವೆಲ್ನಲ್ಲಿ ಸರಕಾರ ಮಾಡಿಕೊಂಡ ರಾಜಿ. ಉದಾಹರಣೆಗೆ ಟ್ರಾನ್ಸ್ ಫರ್ಸ್. ಅದಕ್ಕೋಸ್ಕರ ರಾಜಿ. ನಾವು ಪ್ರತಿಪಕ್ಷ ಆಗಿದ್ದಾಗ ಟೀಕೆ ಮಾಡ್ತಾ ಇದ್ವೀ. ರಾಜ್ಯದ ಅತೀ ದೊಡ್ಡ ಉದ್ಯಮ ಸ್ಟೀಲ್, ರೇಶ್ಮೆ, ಸಿಮೆಂಟ್ ಇದ್ಯಾವುದೂ ಅಲ್ಲ. ಟ್ರಾನ್ಸ್ಫರ್ ಈಸ್ ಬಿಗ್ ಇಂಡಸ್ಟ್ರೀ. ಯಾಕೆಂದ್ರೆ, ಒಂದು ಟ್ರಾನ್ಸ್ಫರ್ ಸೀಸನ್ನಲ್ಲಿ 30 40 ಕೋಟಿ ಕೈ ಬದಲಾಗುತ್ತದೆ. ನಾನು ಎಷ್ಟೋ ಬಾರಿ ಪರ್ಯಾಯ ಮಾರ್ಗವನ್ನು ಹೇಳಿದೆ. ಈಗ ನಿಮಗೆ ಪೊಲೀಸ್ ಅಧಿಕಾರಿ ಸರಿಯಿಲ್ಲ, ಬದಲಾವಣೆ ಬೇಕು ಅಂತ ಬರ್ತೀರಿ. ಓಕೆ ಚೇಂಜ್ ಮಾಡಿ ಅಂತ ಕೊಡಿ. ಆದರೆ ಸುರೇಶ್ ಕುಮಾರೇ ಬೇಕು ಅಂತ ಕೇಳ್ಲಿಕ್ಕೆ ಹೋಗಬೇಡಿ. ಬೈನೇಮ್ ಕೇಳೋದೆ ಕರಪ್ಟ್. ಅದು ದೊಡ್ಡ ರಾಜಿ. ಹಾಗಾಗಿ ಅವ್ಯಾಹತವಾಗಿ ನಡೆದು, ಯಾರನ್ನೂ ಸಮಾಧಾನ ಮಾಡೋಕೆ ಆಗ್ಲಿಲ್ಲ. ಯಾಕಂದ್ರೆ ಇದು ನೀಗದ ಬಾಯಾರಿಕೆ. ಪೊಲೀಸ್ ಟ್ರಾನ್ಸ್ಫರ್ ಕಥೆ ಆಯ್ತು. ಪುಣ್ಯಕ್ಕೆ ನಾವು ಒಳ್ಳೆ ಕೆಲಸ ಮಾಡಿದ್ದು ಟೀಚರ್ಸ್ ನೊ ಟ್ರಾನ್ಸ್ಫರ್ ಅಂದಿದ್ದು. ಎರಡನೆಯದು, ಒಟ್ಟಿಗೆ ಕೆಲಸ ಮಾಡದೇ ಇರೋರನ್ನು, ಒಟ್ಟಿಗೆ ಚುನಾವಣೆ ಗೆಲ್ಲದೇ ಇರೋರನ್ನ ಜೊತೆಗೆ ಕರಕೊಂಡ್ವಲ್ಲ. ಅದರಿಂದ ಬಿಜೆಪಿಯಿಂದ ಏನು ಬಯಸಿದ್ದೋ ಅದನ್ನು ಕೊಡೋಕಾಗ್ಲಿಲ್ಲ.

ಆದರೆ ಬಿಜೆಪಿನೋರು ಬಹಳ ಬೇಗ ಕರಪ್ಟ್ ಆದ್ರು ಅಲ್ವಾ? ಕಾಂಗ್ರೆಸ್ನವ್ರು ಬಹಳ ಹಿಂದಿನಿಂದ ಅಧಿಕಾರದಲ್ಲಿದ್ದರು. ಆದರೆ, ಮೊದಲ ಬಾರಿಗೆ ಬಿಜೆಪಿ ಎಮ್ಮೆಲ್ಲೆ ಆದವ ಎರಡೇ ವರ್ಷದಲ್ಲಿ ನಾಲ್ಕೈದು ಲಾರಿ ತಕೋತಾನೆ, ಗಣಿಗಾರಿಕೆ ಶುರು ಮಾಡ್ತಾನೆ....
ಇಲ್ಲ, ಇಲ್ಲ, ಗಣಿಗಾರಿಕೆಗಳನ್ನು ಎಂಎಲ್ಎ ಅಧಿಕಾರಕ್ಕೆ ಬಂದ ಮೇಲೆ ಶುರು ಮಾಡಿದ್ದಲ್ಲ. ಅದು ಮುಂಚಿನಿಂದಲೇ ಇತ್ತು. ಮುಂಚೆ ಎಲ್ಲರೂ ರಾಜಕೀಯದವರು ಅಂಥ ಆಶ್ರಯ ತಗೋತಾ ಇದ್ರು. ಹಣಕೊಡಿ ಅಂತ. ಎಕ್ಸೈಸ್ ಲಾಬಿ ಇತ್ತು...ಆಮೇಲೆ ಎಜುಕೇಶನ್ ಲಾಬಿ ಬಂತು... ನಂತರ ರಿಯಲ್ ಎಸ್ಟೇಟ್ ಲಾಬಿ... ಈವಾಗ ಮೈನ್ಸ್ ಲಾಬಿ. ಆದ್ರೆ ಅವರೀಗ ಪ್ರತ್ಯಕ್ಷವಾಗಿ ರಾಜಕೀಯಕ್ಕೆ ಬಂದಿದ್ದಾರೆ. ಯಾಕೆ ಇಂಡೈರೆಕ್ಟು? ಅಂತ ಡೈರೆಕ್ಟಾಗಿ ರಾಜಕೀಯಕ್ಕೆ ಬಂದಿದ್ದಾರೆ ಅಷ್ಟೆ. ಬಿಜೆಪಿ ಸ್ಪೀಡ್ ಅಂತ ಕಾಣಿಸುತ್ತೆ. ಆದ್ರೆ ಖಂಡಿತ ಅಲ್ಲ. ಹಾಗೆ ನಮ್ಗೆ ಕಾಣಿಸುತ್ತೆ ಅಷ್ಟೆ. ಅದು ಸಾಮಾನ್ಯವಾಗಿಯೇ ಆಗಿದೆ. ಸ್ಟೀಡು ಅಂತ ಏನೂ ಇಲ್ಲ.

ಸರಿ, ಉಳಿದ ಮೂರು ವರ್ಷಗಳಲ್ಲಿ ಮತ್ತೆ ನೀವು ಸರಿದಾರಿಗೆ ಬರಬಹುದು ಅಂತೀರಾ?
ನಿಜ, ಇದರ ಸ್ಟೀಡ್ ಕಡಿಮೆಯಾಗಬಹುದು. ಇಟ್ ಡಿಪೆಂಡ್ಸ್ ಅಪಾನ್ ಇಶ್ಯೂ. ನೋಡಿ ಈಗ ನಮಗೆ ಒಂದು ಪವರ್ಫುಲ್ ಇಶ್ಯೂ ಸಿಕ್ಕಿತ್ತು. ನೆರೆ ಬಂದ ಮೇಲೆ ಮನೆ ಕಟ್ಟುವ ವಿಷ್ಯ. ಅದು ಸಾಮಾನ್ಯವಾಗಿ ಸಿಗೋ ವಿಷ್ಯ ಅಲ್ಲ. ನಾವು ಆರಂಭ ಮಾಡಿದ ಸ್ಪೀಡಲ್ಲೇ ಮುಂದುವರಿದಿದ್ದರೆ ಇವೆಲ್ಲ ನಗಣ್ಯ ಆಗ್ತಿತ್ತು. ಆ ಟೈಮಲ್ಲೇ ಭಿನ್ನಮತ ಸ್ಟಾರ್ಟ್ ಆಗಿ, ನಮ್ಮ ಫೋಕಷ್ ಚೇಂಜ್ ಆಗಿ ಹೋಯ್ತು. ಆದರೆ ಅದನ್ನು ಸರಿಯಾಗಿ ನಿಭಾಯಿಸಲಿಲ್ಲ.

ಪ್ರವಾಹ ಬಂದ ಆರಂಭದಲ್ಲಿ ಯಡಿಯೂರಪ್ಪನವರು ಆ ಪ್ರದೇಶಗಳಿಗೆ ಭೇಟಿ ಕೊಟ್ಟಿದ್ದು, ಮುನ್ನುಗ್ಗಿದ್ದು... ತುಂಬಾ ವೈಬ್ರೆಂಟ್ ಆಗಿತ್ತು....
ನಿಜ ನೀವು ಹೇಳೋದು, ಅತ್ಯಂತ ರಭಸದಲ್ಲಿ ಮುನ್ನುಗಿದ್ರು. ಆದರೆ, ಭಿನ್ನಮತ ಎಲ್ಲವನ್ನೂ ನುಂಗಿ ಹಾಕಿತು.

ಆದರೆ, ಇಶ್ಯೂ ಡೈವರ್ಟ್ ಮಾಡೋದ್ರಲ್ಲಿ ಬಿಜೆಪಿಯ ವಿಫಲತೆ. ತಂತ್ರಗಾರಿಕೆ ಸಾಕಾಗಲಿಲ್ಲ. ಈಗ ನೋಡಿ, ಕುಮಾರಸ್ವಾಮಿ ಅವಧಿಯಲ್ಲಿ 150 ಕೋಟಿ ಹಗರಣ ಬಂತು. ಆದ್ರೆ, ಆ ಕಾಲದಲ್ಲೇ ಅವರು ಗ್ರಾಮವಾಸ್ತವ್ಯ ಪ್ರಕಟಿಸಿದರು. ವಿಷ್ಯ ಬಿದ್ದೋಯ್ತು....
ಹೌದು ಖಂಡಿತ. ನಾವು ಇನ್ನೂ ರಾಜಕಾರಣ ಕಲ್ತಿಲ್ಲ. ಇನ್ನೂ ಕಲೀಬೇಕು...
ಹೌದು ಸ್ವಲ್ಪ ಅನಂತಕುಮಾರ್ ಅವರ ಹತ್ರ ಕಲೀಬೇಕು ಅಲ್ವಾ?
ಹ್ಹಹ್ಹಹ್ಹ



ಸರ್ಕಾರದ ಯೋಜನೆಯನ್ನ ಹಣದಿಂದ ಅಳೆಯುವ ಬದಲು ಅದರ ಸೋಷಿಯಲ್ ಆಡಿಟಿಂಗ್ ಮಾಡೋ ವಿಧಾನ ಬರಬೇಕು.

ಸೋಷಿಯಲ್ ಆಡಿಟಿಂಗ್ ಮಾಡಬೇಕು ಎನ್ನುವ ಪ್ರಯತ್ನ ನಡೀತಾ ಇದೆ. ನೂರಕ್ಕೆ ನೂರು ಹಣ ಖರ್ಚು ಮಾಡಿದೆವು ಅಂತ ಹೇಳೋದ್ರಲ್ಲಿ ಆನಂದವೇನೋ ಇದೆ. ಬಟ್ ಅದಲ್ಲ. ಇತ್ತೀಚೆಗೆ ಬಿಹಾರ ಬಗ್ಗೆ ಓದ್ತೆ. ಗುಜರಾತ್ಗಿಂತಲೂ ಭಿನ್ನವಾಗಿ ಬಿಹಾರದ ಬೆಳವಣಿಗೆ ಆಗಿದೆ. ಸಮ್ಥಿಂಗ್ ವಂಡರ್ಫುಲ್ ಅದು. ಬಿಹಾರದ ಗ್ರೋತ್ ರೇಟ್ 11.03 ಪರ್ಸೆಂಟ್. ಗುಜರಾತದು 11.05. ರಾಷ್ಟ್ರ ಮಟ್ಟದಲ್ಲಿ 8. ಬಿಹಾರಕ್ಕೆ ವರ್ಷಕ್ಕೆ 90 ಸಾವಿರ ಜನ ವಿದೇಶೀಯರು ಭೇಟಿ ಕೊಡ್ತಾ ಇದ್ದರು. ಇವತ್ತು ನಿತೀಶ್ ಕುಮಾರ್ ಬಂದ ಮೇಲೆ ಈ ಸಂಖ್ಯೆ 4.5 ಲಕ್ಷ ಆಗಿದೆ. ಯಾಕೆ? ಕಾನೂನು ಸುವ್ಯವಸ್ಥೆ ಚೆನ್ನಾಗಿದೆ. ಕ್ರೈಂ ರೇಟ್ ಕಡಿಮೆ ಆಗಿದೆ. ಆಸ್ಪತ್ರೆಯಲ್ಲಿ ಡೆಲಿವರಿ ವರ್ಷಕ್ಕೆ 30 ಸಾವಿರ ಇದ್ದದ್ದು 3.5 ಲಕ್ಷ ಆಗಿದೆ. ಇದು ಯಾವುದರ ಪ್ರತೀಕ ಅಂದರೆ, ಜನರಿಗೆ ಆಸ್ಪತ್ರೆ ಬಗ್ಗೆ ವಿಶ್ವಾಸ ಹೆಚ್ಚಾಗಿದೆ. ಹೆಣ್ಮಕ್ಕಳ ಡ್ರಾಪೌಡ್ ರೇಟ್ 25 ಲಕ್ಷದಿಂದ 10ಕ್ಕಿಳಿದಿದೆ. ಇದು ನಿಜವಾದ ಸಾಧನೆ.
ನಿತೀಶ್ ಕುಮಾರ್ ಅವರಿಗೆ ಸಿಕ್ಕಿದ್ದು ಕೊಲಾಪ್ಸ್ ಆಗಿರುವ ಆಡಳಿತ. ಅಲ್ಲಿ ಪೋಲೀಸ್ನವರಿಗೆ ಶೂ ಇರಲಿಲ್ಲ. ನೆಗೆಟಿವ್ ಲೆವೆಲ್ನಿಂದ ಈ ಮಟ್ಟಕ್ಕೆ ಮೇಲೆ ತಂದಿದ್ದಾರೆ. ನಾನು ಹೇಳೋದು ಅದು ಅಭಿವೃದ್ಧಿ ಅಂತ. ಅದು ರೀಚಿಂಗ್ ಪೀಪಲ್. ನಿಮಗೆ ಮೋದಿ ಬಗ್ಗೆ ಏನೇ ಅಭಿಪ್ರಾಯ ಇರಬಹುದು. ಅವರ ಹತ್ರ ಕುಂತು ಮಾತಾಡಿದ್ರೆ ಅವರ ಆಡಳಿತದ ಆಳ ಗೊತ್ತಾಗುತ್ತೆ.
ಒಮ್ಮೆ ರತನ್ ಟಾಟಾ ಮೋದಿ ಭೇಟಿ ಮಾಡಲು ಗುಜರಾತ್ಗೆ ಹೋದ್ರು. ಅಪಾಯಿಂಟ್ಮೆಂಟ್ ಕೇಳಿದ್ರು. ಆದರೆ ಅವರು ಹೇಳಿದ ದಿನ ಮೋದಿಗೆ ಸಾಧ್ಯವಾಗಲಿಲ್ಲ. ವೀ ವಿಲ್ ಮೀಟ್ ಫಾರ್ ಲಂಚ್ ನೆಕ್ಷ್ಟ್ ಸ್ಯಾಟರ್ಡೇ ಅಂದ್ರು. ಊಟ ಏನೂ ಬೇಡ ಅಂದ್ರು. ಮುಂದಿನ ಶನಿವಾರ ಮೀಟಿಂಗ್ ಆಯ್ತು, ಓವರ್ ಏ ಕಪ್ ಆಫ್ ಟೀ... ಈ ನರೇಂದ್ರ ಮೋದಿ ಅವರ ಯೋಜನೆ ಬಗ್ಗೆನೇ ಮಾತಾಡಲಿಲ್ಲ. ಬರೀ ಟೀ ಕುಡ್ದು ದೇಶದ ಬಗ್ಗೆ, ಎಕಾನಮಿ ಬಗ್ಗೆ ಹರಟೆ ಹೊಡೆದ್ರು. ಟಾಟಾ ಯೋಜನೆ ವಿವರ ಕೇಳಲೇ ಇಲ್ಲ. ಹೋಗೋವಾಗ ಅವರ ಯೋಜನೆಗೆ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕೊಟ್ಟು ಕಳಿಸಿದ್ರು. ಅದು ಕೀನ್ನೆಸ್.
ಗುಜರಾತ್ನಲ್ಲಿ ಗೌರವ ಪಥ ಅಂತ ಮಾಡ್ತಾ ಇದ್ದಾರೆ. ಅದರ ಒಂದು ಉದ್ಘಾಟನೆ, ಕೇವಲ 600 ಮೀಟರ್ ರಸ್ತೆ. ಅದಕ್ಕೆ ಅಡ್ವಾಣಿ ಬಂದಿದ್ರು. 15-20 ಸಾವಿರ ಜನ ಸೇರಿದ್ದರು. ಎಲ್ಲಾ ಮುಗೀತು. ಕೊನೆಗೆ ಈ ಕಾರ್ಯಕ್ರಮ ಏನನಿಸ್ತು ಅಂತ ಕೇಳಿದ್ರಂತೆ. ಅದಕ್ಕೆ ಅಡ್ವಾಣಿ, ಓಹ್ ನೀ ಭಾರೀ ಜನಪ್ರಿಯ, ಭಾರೀ ಜನ ಸೇರಿದಾರೆ ಅಂತ ಹೇಳಿದ್ರು. ಆದರೆ ಮೋದಿ ಕೇಳಿದ್ರು ಈ ಕಾನ್ಸೆಪ್ಟ್ ಬಗ್ಗೆ ಏನನಿಸಿತು ಹೇಳಿ ಅಂತ. ಅಡ್ವಾಣಿಗೆ ಅರ್ಥವಾಗಲಿಲ್ಲ. ಅದಕ್ಕೆ ಮೋದಿ ಹೇಳಿದ್ರು, ನಾವು ಉದ್ಘಾಟನೆ ಮಾಡಿದ್ದು 600 ಮೀಟರ್ ರಸ್ತೆ. 15-20 ಸಾವಿರ ಜನ ಬಂದಿದ್ದಾರೆ, ಯಾಕಂದರೆ ಅವರಿಗೆ ಅದು ನಮ್ಮ ರಸ್ತೆ ಅನಿಸಿದೆ. ಅದೇ ವಾಜಪೇಯಿ ಮಾಡಿದ್ರಲ್ಲ ಸುವರ್ಣ ಚತುಷ್ಪಥ ರಸ್ತೆ, ಎಷ್ಟು ಉದ್ದ ರಸ್ತೆ.... ಒಂದು ಕಡೆಗಾದ್ರೂ ಜನ ಸೇರಿಸೋಕೆ ಆಯ್ತಾ ನಮಗೆ? ಆಗ್ಲಿಲ್ಲ. ನೀವು ಗುದ್ದಲಿ ಪೂಜೆ ಮಾಡ್ತೀರಿ, ಆದರೆ ಮುಗಿದ ಮೇಲೆ ಪೂಜೆ ಮಾಡಿ ಅದನ್ನು ಜನರಿಗೆ ಅರ್ಪಿಸ್ತೀರಾ, ನಿಮ್ಮದಿದು ಅಂತ? ಇಲ್ಲ. ಈ ರೀತಿಯ ಥಿಂಕಿಂಗ್ ನಮಗೆ ಬೇಕಾಗಿದೆ.



ನಿತೀಶ್, ಮೋದಿ ಉದಾಹರಣೆ ಕೊಟ್ರಿ.... ಕರ್ನಾಟಕದಲ್ಲಿ ಅವನ್ನು ಅಳವಡಿಸೋಕೆ ಆಗಲ್ಲವಾ?
ಬೇರೆ ರಾಜ್ಯಗಳ ಯೋಜನೆಯ ರೀತಿಯಲ್ಲೆ ಮಾಡುವ ಆಸೆ, ಗುರಿ ಇದೆ. ಆದರೆ ಬೇರೆ ಬೇರೆ ಪರಿಸ್ಥಿತಿ ಸಿಕ್ಕಿಹಾಕಿಕೊಂಡೋ ಗೊತ್ತಿಲ್ಲ, ಜಾರಿ ಮಾಡೋಕೆ ಬಿಡಲ್ಲ. ಉದಾ, ಟ್ರಾನ್ಸ್ಫರ್ ಕೇಸ್ ತಕೊಳ್ಳಿ, ಗುಜರಾತ್ನಲ್ಲಿ ಹೋಂ ಮಿನಿಸ್ಟ್ರಿಯ ವರ್ಗಾವಣೆಯಲ್ಲಿ ರಾಜಕೀಯ ಮಧ್ಯಪ್ರವೇಶ ಎಷ್ಟು ಗೊತ್ತಾ? ಅಬ್ಬಬ್ಬಾ ಅಂದ್ರೆ ಶೇ 2. ಅದು ಯೋಜನೆ ಸ್ಕೀಂ ಪ್ರಕಾರ ಆಗ್ತಾ ಇರತ್ತೆ. ನರೇಂದ್ರ ಮೋದಿ ಹೇಳ್ತಾ ಇರ್ತಾರೆ, ಟ್ರಾನ್ಸ್ಫರ್ ಬಗ್ಗೆ ತಲೆಕೆಡಿಸಿಕೊಳ್ಳಲೇ ಬೇಡಿ ಅಂತ. ಅವರಲ್ಲಿ ಟ್ರಾನ್ಸ್ಫರ್ ಬಗ್ಗೆ ಕೇಳಿದ್ರೆ, ಆರ್ ಯು ಟ್ರಾನ್ಸ್ಫರಿಂಗ್ ದ ಪರ್ಸನ್ ಅಥವಾ ಆರ್ ಯು ಟ್ರಾನ್ಸ್ಫರಿಂಗ್ ದ ಪ್ರಾಬ್ಲಂ ಅಂತ ಮರು ಪ್ರಶ್ನೆ ಹಾಕ್ತಾರೆ. ನಿಮಗೆ ಎಲ್ಲಿದ್ರೂ ತೊಂದ್ರೆ ಕೊಡ್ತಾನೆ ಅವನು, ಹಾಗಾಗಿ ಡೋಂಟ್ ಟ್ರಾನ್ಸ್ಫರಿಂಗ್ ದ ಪ್ರಾಬ್ಲಂ... ನಮ್ಮಲ್ಲಿ ಮಧ್ಯಪ್ರವೇಶ ಇಲ್ಲದೇ ಇರೋದೆ ಟೂ ಪರ್ಸೆಂಟ್!!!


(ಮನೆ, ಮಕ್ಕಳು ಸಂಸಾರ.. ಮುಂದಿನ ಕಂತಿನಲ್ಲಿ...)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ