ಕೋತಿಗೆ ಹೆಂಡ ಕುಡಿಸಿ, ಚೇಳಿನಿಂದ ಕುಟುಕಿದಂತೆ ರಾಜಕೀಯ.....

(ಇದು ಕೆಲ ತಿಂಗಳ ಹಿಂದೆ ಹುಟ್ಟಿಕೊಂಡ ಚಿಂತನೆ. ನಾವು ಕೆಲವು ಮಿತ್ರರು, ಪತ್ರಕರ್ತರು ನಮ್ಮ ನಡುವಿನ ಅಪರೂಪದ ವ್ಯಕ್ತಿಗಳನ್ನು, ಹಿರಿಯರನ್ನು ಆಗಾಗ ಭೇಟಿ ಮಾಡಿ ಅವರ ಅನುಭವಗಳಲ್ಲಿ, ಅವರ ಅರಿವಿನಲ್ಲಿ ನಾವು ಮಿಂದರೆ ಹೇಗೆ ಎಂಬ ಯೋಚನೆ ಮಾಡಿದೆವು. ಹಾಗೆ ಕೆಲವರನ್ನು ಪಟ್ಟಿ ಮಾಡಿಕೊಂಡು ಮೊದಲು ಭೇಟಿ ಮಾಡಿದ್ದು ಬಿಜೆಪಿ ಸರ್ಕಾರದಲ್ಲಿ 'ಭಿನ್ನರು' (ಭಿನ್ನಮತೀಯರಲ್ಲ!) ಎಂದೇ ಗುರುತಿಸಿಕೊಂಡ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಸುರೇಶ್ ಕುಮಾರ್ ಅವರನ್ನು. ಒಂದು ಬೆಳಿಗ್ಗೆ ಅವರ ಸರ್ಕಾರಿ ನಿವಾಸಕ್ಕೇ ನಮ್ಮ ಲಗ್ಗೆ. ಅವರ ಸಹಾಯಕರು ನಮ್ಮನ್ನು ಅನುಮಾನದಿಂದಲೇ ''ನಿಮಗೆ ನಿಜಕ್ಕೂ ಏನು ಕೆಲಸ ಆಗಬೇಕು'' ಅಂತಲೇ ಕೇಳುತ್ತಿದ್ದರು. ನಮಗೆ ಬೇಕಿದ್ದು ಸಚಿವರ ಸಮಯ ಅಷ್ಟೆ! ತಮ್ಮೆಲ್ಲ ಕೆಲಸಗಳ ನಡುವೆ ಸುರೇಶ್ ಕುಮಾರ್ ಅವರ ಜೊತೆ ನಾವು ಕಳೆದಿದ್ದು ಸುಮಾರು ಒಂದು ತಾಸು. ಯಾವುದೇ ಭಿಡೆ ಇಲ್ಲದೇ ರಾಜಕಾರಣ, ರಾಜಕಾರಣಿಗಳ ಏಕಾಂಗಿತನ, ಮನೆ-ಸಂಸಾರ, ಓದು-ಬರಹ, ಅನುಭವ.... ಹೀಗೆ ಸಾಗಿತ್ತು ಮಾತು... ಅದನ್ನಿಲ್ಲಿ ಸಂಕ್ಷಿಪ್ತವಾಗಿ ಕೊಟ್ಟರೂ ಮೂರು ಕಂತು ಬೇಕು. ಮೊದಲ ಕಂತು ಇಲ್ಲಿದೆ..)







ರಾಜಕಾರಣಿಗಳಿಗೆ ಏಕಾಂಗಿತನ ಅನ್ನೋದು ಇರತ್ತಾ? ಅವರ ಖಾಸಗಿ ಬದುಕು ಹೇಗಿರತ್ತೆ? ಅವರು ತಮ್ಮ ಮನಸ್ಸಿನ ಮಾತನ್ನು ಯಾರ ಬಳಿ ಹೇಳಿಕೊಳ್ತಾರೆ
?
ಹೋದವಾರ ಟೈಮ್ಸ್ ಆಫ್ ಇಂಡಿಯಾ ಸಪ್ಲಿಮೆಂಟ್ ಓದ್ತಾ ಇದ್ದೆ. ಪ್ರತಿಯೊಬ್ಬ ರಾಜಕಾರಣಿ ಕೂಡ ಏಕಾಂಗಿ. ಉನ್ನತ ಮಟ್ಟಕ್ಕೆ ಹೋದಷ್ಟು ಏಕಾಂಗಿತನ ಕಾಡ್ತಾ ಇರತ್ತೆ. ಇಂದಿರಾಗಾಂಧಿ ಸ್ವತಃ ಹೇಳಿದ್ದಾರೆ. ಸೋನಿಯಾ ಗಾಂಧಿನೂ ಹೇಳಿದ್ದಾರೆ. ಅಟ್ಲೀಸ್ಟ್ ಇವರಿಗೆ ಫ್ಯಾಮಿಲಿ ಆದ್ರೂ ಇದೆ. ಆದ್ರೆ ಮಾಯಾವತಿಗೆ? ಜಯಲಲಿತಾಗೆ? ಅವರ ಏಕಾಂಗಿತನ ಹೇಗೆ? ತಮಗನಿಸುವುದನ್ನು ಯಾರತ್ರ ಹೇಳಿಕೊಳ್ತಾರೆ...? ತಾವೇನಾದರೂ ನಿರ್ಣಯ ತೆಗೆದುಕೊಳ್ಳಬೇಕಿದ್ದರೆ ಯಾರತ್ರ ಚರ್ಚೆ ಮಾಡಿ ತಗೊಳ್ತಾರೆ. ಇಂದಿರಾ ಅವರು ಹೇಳಿದಂಗೆ, ಬಹಳ ಉನ್ನತ ಸ್ಥಾನಕ್ಕೆ ಹೋದವರು ಬಹಳಷ್ಟು ಕಾಂಪಿಟೀಷನ್ ನಡುವೆ ಹೋಗಿರ್ತಾರೆ. ಹಾಗಾಗಿ ಕರುಬುವವರು ಜಾಸ್ತಿ ಇರ್ತಾರೆ. ಅವರೆಲ್ಲ ತಮ್ಮ ಜೊತೆಗಿರುವವರೇ ಆಗಿರ್ತಾರೆ.
ರಾಜಕಾರಣಕ್ಕೆ ಬಂದ ಮೇಲೆ ಸ್ನೇಹಿತರು ಕಡಿಮೆಯಾಗಿ ಹಿಂಬಾಲಕರು, ಬೆಂಬಲಿಗರು ಜಾಸ್ತಿ ಆಗ್ತಾರೆ, ನಿಜವಾದ ಗೆಳೆಯರು ಕಡಿಮೆಯಾಗ್ತಾರೆ. ರಾಜಕಾರಣದಲ್ಲಿರುವರು ಹಾಗೆ ವರ್ತಿಸುತ್ತಾರೆ. ಅವರಿಗೆ ಗೆಳೆಯರು ಬೇಕಾಗಿರೋದಿಲ್ಲ. ಗೆಳೆಯ ಎಂದರೆ ಯಾರು? ಅಕಸ್ಮಾತ್ ತಪ್ಪು ಮಾಡಿದ್ರೆ ಅದನ್ನು ತಪ್ಪು ಅಂತ ಹೇಳುವವನು. ಬಹಳ ಸಲ ಒಂದು ಸ್ಥಾನಕ್ಕೆ ಹೋದ ಮೇಲೆ ತಪ್ಪನ್ನು ಹೇಳುವಂತಾದ್ದು, ನೀನು ಸರಿಯಾದ ದಾರಿಯಲ್ಲಿ ಹೋಗು ಅಂತ ಹೇಳುವಂತಾದ್ದು ಅಪಥ್ಯ ಆಗ್ತದೆ. ಅದೊಂತರಾ ಸ್ಥಿತಿನೇ ಬೇರೆ.


ರಾಜಕಾರಣ, ಅಧಿಕಾರದ ನಡುವೆ ಎಂಥಾ ಜನ ಬೇಕಾಗ್ತಾರೆ? ಏನನ್ನ ಓದಬೇಕಾಗ್ತದೆ?
ಪವರ್ ಈಸ್ ಹೆಡ್ಡಿಥಿಂಗ್ ಅಂತಾರೆ. ತಲೆ ತಿರುಗಿಸಿ ಬಿಡುತ್ತದೆ ಅದು. ರಾಜಕೀಯ ಎಂದರೆ ಹೇಗಿರುತ್ತದೆ ಎಂಬುದಕ್ಕೆ ಒಂದು ಸಂಸ್ಕೃತ ಶ್ಲೋಕ ಇದೆ. ಅದರ ಅರ್ಥ ಹೀಗೆ ಹೇಳಬಹುದು. ಮೊದಲೇ ಕೋತಿ, ಅದಕ್ಕೆ ಸ್ವಲ್ಪ ಹೆಂಡ ಕುಡಿಸಬೇಕಂತೆ, ಚೇಳಿನಿಂದ ಕುಟುಕಿಸಬೇಕಂತೆ. ಮೆಣಸಿನ ಕಾಯಿ ತಿನ್ನಿಸಬೇಕಂತೆ. ಹೇಗಾಗಬಹುದು ಹೇಳಿ. ಈ ಕೋತಿ ಹೇಗಾಡತ್ತೋ ಹಾಗೆ ರಾಜಕಾರಣ. ಇಟ್ಸ್ ಫ್ಯಾಕ್ಟ್ ಆಫ್ ಲೈಫ್. ಆದರೆ ಈವಾಗಲೂ ಕೂಡ ಕೆಲವರು ಇದ್ದಾರೆ. ನಮ್ಮ ಖಾಸಗಿ ಸ್ನೇಹಿತರ ಬಳಗವನ್ನು ಇಟ್ಟುಕೊಂಡು, ಆಗಿಂದ್ದಾಗ್ಗೆ ಅವರನ್ನ ಭೇಟಿ ಮಾಡಿ ಚರ್ಚೆ ಮಾಡುತ್ತಾರೆ. ಅದೂ ಇಲ್ಲಾಂದ್ರೆ ತಾವೆ ಗೆಳೆಯರನ್ನು ಹೋಗಿ ಭೇಟಿ ಮಾಡ್ತಿರ್ತಾರೆ. ಆ ಥರ ಇಲ್ಲದೆ ಇದ್ದರೆ ಬಹಳ ಕಷ್ಟ. ಆ ಥರ ಸ್ಪೇಸ್ ಕ್ರಿಯೇಟ್ ಮಾಡ್ಕೊಬೇಕು.
ನನಗೆ ಒಳ್ಳೆ ಸ್ನೇಹಿತರಿದ್ದಾರೆ. ಪುಣ್ಯಕ್ಕೆ ರಾಜಕೀಯದ ನಡುವೆಯೇ ನನಗೆ ಕೆಲವರು ಒಳ್ಳೆಯ ಸ್ನೇಹಿತರಿದ್ದಾರೆ. ಅವರೊಂದಿಗೆ ರಾಜಕೀಯ ಬಿಟ್ಟು ಬೇರೆ ಚರ್ಚೆ ಮಾಡ್ತೇನೆ. ಪುಸ್ತಕ ಎಕ್ಸ್ಚೇಂಜ್ ಮಾಡ್ತೇನೆ. ಈಗ ಲೇಟೆಸ್ಟ್ ಆಗಿ 'ಸ್ಪೀಡ್ ಆಫ್ ಟ್ರಸ್ಟ್' ಅಂತ ಒಂದು ಬುಕ್ ಇದೆ, ಸ್ಟೀಫನ್ ಕೊವೆ ಅವರದ್ದು. ಅದನ್ನು ಓದೋಕೆ ಒಬ್ರು ರಾಜಕೀಯ ಮಿತ್ರರೇ ಹೇಳಿದ್ರು. ಇನ್ನೊಬ್ಬರು ಗೋಪಿನಾಥ್ ಅವರದ್ದು ಆಟೋ ಬಯೋಗ್ರಫಿ, 'ಸಿಂಪ್ಲಿ ಫ್ಲೈ' ಪುಸ್ತಕವನ್ನು ಯಾರೋ ಗಿಫ್ಟ್ ಕೊಟ್ರು. ಇನ್ನೊಬ್ಬರು ಲಾಸ್ಟ್ ಲೆಕ್ಚರ್ ಅಂತ ಬುಕ್ ಇದೆ, ರ್ಯಾಂಡಿ ಪಾಶ್ಚ್ದು, ವಂಡರ್ಫುಲ್ ಬುಕ್ ಅದು, ಅದನ್ನ ಕೊಟ್ರು. ಅದನ್ನ ಓದಿ ಮುಗಿಸಿದೆ. ಹೀಗೆ ಸಮಾನ ಹವ್ಯಾಸ ಇರುವ ಒಂದಷ್ಟು ಸ್ನೇಹಿತರಿದ್ದಾರೆ.

ಅಧಿಕಾರ, ರಾಜಕೀಯ ದಿನನಿತ್ಯದ ಸಂತೆ.. ಅದರ ನಡುವೆ ಬಿಡುವು ಮಾಡಿಕೊಳ್ಳುವುದಾದರೂ ಹೇಗೆ?
ನನ್ನ ಅದೃಷ್ಟನೋ, ಕೊರತೆನೋ ಗೊತ್ತಿಲ್ಲ. ಸಂಜೆ ಹೊತ್ತಾದ ಮೇಲೆ ನಂದೇ ಕೆಲಸಕ್ಕೆ ಟೈಮ್ ಮಾಡ್ಕೊತೇನೆ. ಸಂಜೆ ಬೇರೆ ಬೇರೆ ಕೂಟಗಳ ಸಭೆಗಳಿಗೆ ಹೋಗ್ತೇನೆ. ನನಗೆ ಸಾಕಷ್ಟು ಸಮಯ ಸಿಗತ್ತೆ. ಸಮಯ ಮಾಡ್ಕೋತೇನೆ. ಟ್ವೆಂಟಿಫೋರ್ ಹವರ್ಸ್ ರಾಜಕಾರಣಿ ಅಲ್ಲ. 15 ದಿವಸಕ್ಕೊಂದು ಅಂಕಣ ಬರೀತಾ ಇರೋದ್ರಿಂದ ಆ ಬಗ್ಗೆ ಟೈಮ್ ಕೊಡ್ತಾ ಇರ್ತೇನೆ. ಕಾರಲ್ಲಿ ಪಿಎಗೆ ಡಿಕ್ಟೇಟ್ ಮಾಡ್ತೇನೆ. ನನ್ನ ಪಾಲಿನ ಗಣೇಶ ಇದ್ದ ಹಾಗೆ ಅವರು. ಈಗ ನಾನು ಗೋಪಿನಾಥ್ ಆಟೋಬಯಾಗ್ರಫಿ ಓದ್ತಾ ಇದ್ದೇನೆ. ಮೃಗಶಿರಾವನ್ನು ನಾನು ಬಹಳ ವರ್ಷಗಳಿಂದ ಹುಡುಕುತ್ತಾ ಇದ್ದೆ. ರಾಶಿ ಬರೆದಿರೋ ಬುಕ್ ಅದು. ಓದಿ ಮುಗಿಸಿದೆ. ಲಾಸ್ಟ್ ಲೆಕ್ಚರ್ ಮುಗಿಸ್ದೆ. ನಾನು ಅರುಣ್ ಶೌರಿ ಅಭಿಮಾನಿ. ಅವರ ಯಾವ ಬುಕ್ ಬಂದ್ರೂ ಓದ್ತಾ ಇದ್ದೇನೆ. ನಂಗೂ ಸಾಕಷ್ಟು ಟಾನಿಕ್ ಸಿಗತ್ತೆ.

ರಾಜಕಾರಣದಲ್ಲಿ ನೀವು ತುಂಬಾ ಡಿಫರೆಂಟ್ ಅಂತೆ ಹೌದಾ?
ನಾನು ಡಿಫರೆಂಟ್ ಅಲ್ಲ. ಬೇರೆಯವರು ಭಾಳ ಡಿಫರೆಂಟ್ ಅದು ಸಮಸ್ಯೆ.
ಸುತ್ತೂರಿನ ಸಹ ಚಿಂತನ ಶಿಬಿರದಲ್ಲಿ ಒಂದು ಪ್ರಶ್ನೆ ಕೇಳಿದ್ರು. ನಿಮ್ ಬಗ್ಗೆ ಯಾವುದು ಹೆಮ್ಮೆಯ ಸಂಗತಿ ಅಂತ, ಆಗ ನಾನು ಹೇಳಿದೆ, ನಾನು ನಾನಾಗೇ ಉಳಿದಿರೋದು ಹೆಮ್ಮೆ ಸಂಗತಿ ಅಂತ. ಆದ್ರಿಂದ ಬೇರೆಯವರು ಡಿಫ್ರೆಂಟ್. ನಾನು, ನಾನಾಗಿಯೇ ಕಂಟಿನ್ಯೂ ಮಾಡ್ಕೊಂಡು ಬಂದಿದ್ದೇನೆ. ಅಷ್ಟೆ.

ಒಂದು ವೇವ್ ಇರತ್ತೆ, ಅದರ ಜೊತೆಗೆ ಹೋಗುತ್ತಲೇ ಪಕ್ಕಕ್ಕೆ ಸರಿದು ನಿಲ್ಲುವುದು ಹೇಗೆ ಸಾಧ್ಯವಾಗುತ್ತದೆ ನಿಮಗೆ?

ನಾನು ಮುಂಚೆಯಿಂದ ಕೆಲವನ್ನ ಮೈಗೂಡಿಸಿಕೊಂಡು ಬಂದಿದ್ದೇನೆ. ನಾನು ಬಿಜೆಪಿಗೆ ಸೇರಿದವನಲ್ಲ. ಒಂದು ರೀತಿಯಿಂದ ಬಿಜೆಪಿಯಲ್ಲಿ ಹುಟ್ಟಿದೋನು. ಏಳನೇ ವರ್ಷದಲ್ಲಿ ಆರ್. ಎಸ್ ಎಸ್. ಸೇರಿದೋನು. ಬಹಳ ಚಿಕ್ಕ ವಯಸ್ಸಿನಲ್ಲಿ. ಇದೀಗ ನಾನು ಬೇರೆಯಲ್ಲ. ಅವರು ಹೇಳಿದ್ದು ಬೇರೆಯಲ್ಲ. ಮತ್ತೆ ನಾವೆಲ್ಲ ನಿಜವಾದ ರೀತಿಯಲ್ಲಿ ಗಾಂಧಿ ಶಿಷ್ಯರು. ಗಾಂಧಿ ಒಂದು ಮಾತು ಹೇಳಿದ್ರು: ಹೇಟ್ ದ ಸಿನ್. ನಾಟ್ ದ ಸಿನ್ನರ್. ನಾವು ಅದನ್ನು ಅಡಾಪ್ಟ್ ಮಾಡ್ಕೊಂಡಿದ್ದೇವೆ. ವಿ ಹೇಟ್ ಕರಪ್ಶನ್. ಬಟ್ ವಿ ಲವ್ ಕರಪ್ಟ್ ಪೀಪಲ್. ಪರಿಸ್ಥಿತಿ ಹಾಗಾಗಿದೆ. ಆದ್ರಿಂದ ಇದು ಬೇಡ ಅದು ವಿಷ ಅಂತ ಅನಿಸಿದ್ದಿಲ್ಲ.



ನಾನು ಕಾರ್ಪೋರೇಟರ್ ಆದಾಗ ನಮ್ಮಗೊಬ್ಬರು ಮೇಯರ್ ಇದ್ರು. ಅವರು ಒಂದು ದಿನ ಬಂದು, "ಏನ್ ಸುರೇಶ್ ನೀನು ತುಂಬ ಗಲಾಟೆ ಮಾಡ್ತೀಯಪ್ಪ ನಮ್ಮ ವಿರುದ್ಧ, ನಾವು ಹೆಂಗೆ ಬದುಕಬೇಕು ಹೇಳು. ನಮ್ ಏರಿಯಾದಲ್ಲಿ ಅಣ್ಣಪ್ಪ, ಅಯ್ಯಪ್ಪ ಇದೆ, ಗಣೇಶ ಇದೆ, ಅದೇನೋ ಮಾರಮ್ಮ ಇದೆ, ರಾಜ್ಯೋತ್ಸವ ಇದೆ. ಒಬ್ಬೊಬ್ಬೊರಿಗೆ 5 ಸಾವಿರ ಕೊಡಬೇಕು. ವರ್ಷಕ್ಕೆ ಒಂದು ಲಕ್ಷ ಖರ್ಚಿದೆ'' ಅಂದ್ರು. ಇದು ನಾನು ಹೇಳ್ತಾ ಇರೋದು 83 - 85ರ ರೇಟ್ನಲ್ಲಿ. ಇವತ್ತಿನ ರೇಟು ಬೇರೆ ಬಿಡಿ. ಆದ್ರಿಂದ ನಾನು ದುಡ್ಡು ಮಾಡ್ಲೇಬೇಕು ಅಂತ ಅವರು ಒಂದು ಮಾತನ್ನು ಹೇಳಿದ್ರು. 83ನಲ್ಲಿ. ನಂಗೆ ಅದೃಷ್ಟ ಏನಾಯ್ತು ಅಂದರೆ ನಾನು ಕಾರ್ಪೋರೇಟರ್ ಆಗಿ ಆಯ್ಕೆಯಾದಂದೇ ಒಬ್ರು ಹಿರಿಯರು ಹೇಳಿದ್ರು: ಇವತ್ತಿಂದ ನೀನು ಕಾರ್ಪೋರೇಟರ್. ನಾಳೆನೇ ಕೆಲವರು ಬಂದು ನಮ್ಮಿಂದನೇ ನೀವು ಗೆದ್ದಿದ್ದು ಅಂತ ಹೇಳಿ ಹಾರ ಹಾಕ್ತಾರೆ, ಮತ್ತೆಗೆ ರಸೀದಿ ಪುಸ್ತಕ ತೆಗಿತಾರೆ. ಸರ್ ನಿಮ್ಮ ಕಾಂಟ್ರಿಬ್ಯೂಷನ್ ಕೊಡಿ ಅಂತ. ಆರ್ಕೆಷ್ಟ್ರಾ, ಶಾಮಿಯಾನ ಅಂತ. ಹಾಗಾಗಿ ನೀ ಒಂದು ತೀರ್ಮಾನ ತಗೊ. ಯಾರಿಗೂ ಒಂದು ಪೈಸೆ ಕೊಡಲ್ಲ ಅಂತ. ಬೇಕಾದರೆ ಅವರ ಕೆಲಸ ಮಾಡ್ಕೊಡು. ಕ್ಲೀನಿಂಗ್ ಮಾಡ್ಸು, ಲೈಸೆನ್ಸ್ ಮಾಸ್ಕೊಡು. ಬಟ್ ಡೋಂಟ್ ಗೀವ್ ಮನಿ. ವೆರಿ ಪಸ್ಟ್ ಡೇ ಇಟ್ ಹ್ಯಾಪಂಡ್. ಇದುವರೆಗೂ ಯಾರಿಗೂ ಕೊಟ್ಟಿಲ್ಲ. ಹಾಗೇ ಬದುಕಿಬಿಟ್ಟಿದೀನಿ. ಅನೇಕರು ನನ್ನ ಫಂಕ್ಷನ್ಗೆ ಕರೆಯೋದಿಲ್ಲ. ಆದ್ರಿಂದ ನಾನು ಹ್ಯಾಪಿ. ಆ ಆರ್ಕೆಷ್ಟ್ರಾ ಮುಂದೆ ನಮ್ಮನ್ನ ಕರೆದು ಭಾಷಣ ಮಾಡು ಅಂತ ಹೇಳಿ, ಹರಕೆ ಕುರಿ ಮಾಡ್ಸಿ, ಅದು ಬೇಡ್ವೇ ಬೇಡ, ನಾನು ಆರಾಮವಾಗಿದ್ದೀನಿ.

ಹಣಬಲ ತೋಳ್ಬಲ ಇಲ್ಲದ ರಾಜಕಾರಣಿ ಸರ್ವೈವ್ ಆಗ್ತಾರಾ?
ಸರ್ವೈವ್ ಆಗ್ತಾರೋ ಇಲ್ಲವೋ ಗೊತ್ತಿಲ್ಲ, ಇವೆರಡು ಇಲ್ಲದೆ ನಾನಂತೂ ಸರ್ವೈವ್ ಆಗಿದ್ದೇನೆ. 5 ಇಲೆಕ್ಷನ್ ಗೆದ್ದಿದ್ದೇನೆ. ಒಂದು ಸೋತಿದ್ದೇನೆ. ಪ್ರಾಯಶಃ ನಾನು ಗೆದ್ದಿರೋದೆ ನಾನು ಸಂಪೂರ್ಣ ಭರವಸೆ ಕಳಕೊಳ್ಳಬಾರದು ಅನ್ನೋದಕ್ಕೆ ಸಾಕ್ಷಿ. ಆದ್ರೆ ಒಂದು ಮಾತು, ಮುಂದೆನೂ ಹೀಗೆ ಆಗತ್ತಾ, ಅದು ಹೇಳಲಾರೆ. ಈಗಿನ ಪರಿಸ್ಥಿತಿಯಿಂದ ಬಾಳಾ ಕಷ್ಟ ಆಗ್ತಿದೆ. ನಾನು ಯಾವತ್ತೂ ಮನೆಯ ದುಡ್ಡು ಬಳಸಿ, ಸಾಲ ಮಾಡಿ ಚುನಾವಣೆಗೆ ಖರ್ಚು ಮಾಡಿದ್ದೇ ಇಲ್ಲ. ಮೊದಲನೆ ಚುನಾವಣೆ ಜಸ್ಟ್ ಹ್ಯಾಪನ್ಡ್. ಸ್ನೇಹಿತರೇ ದುಡ್ಡು ಕಲೆಕ್ಟ್ ಮಾಡಿದ್ರು. ಆಗ ನಂಗೆ ಚುನಾವಣೆಗೆ ಅಂತ ಖರ್ಚು ಆಗಿದ್ದು (ಮಾಡಿದ್ದಲ್ಲ) 2,600 ರೂ. ಈಗ ಒಂದು ಬೂತ್ಗೆ ದಿವಸಕ್ಕೆ ಇದಕ್ಕಿಂತ ಜಾಸ್ತಿ ಖರ್ಚಾಗುತ್ತದೆ. ಸೆಕೆಂಡ್ ಇಲೆಕ್ಟನ್ಗೆ ನಾನು ಖರ್ಚು ಮಾಡಿದ್ದು 1,900ರೂ. ಅಷ್ಟೂ ಮಾಡಬಾರದು ಅಂತ ಇದ್ದೆ, ನನ್ನ ವಿರುದ್ಧ ನಿಂತಿದ್ದೋನು, ಒಂದು ಅಪಪ್ರಚಾರ ಮಾಡಿದ್ದ. ಇವರು ಚುನಾವಣೆಗೆ ನಿಂತಿಲ್ಲ ಅಂತ. ಆದ್ರಿಂದ ಆಟೋ ಬಾಡಿಗೆ ಹಿಡಿದು ಕ್ಯಾಂಪೇನ್ ಮಾಡೋದು ಅನಿವಾರ್ಯ ಆಯ್ತು. ಇದುವರೆಗೂ ಮ್ಯಾನೇಜ್ ಮಾಡಿದೇನೆ.




ಕಾರ್ಪೋರೇಟರ್ ಆಗೋಕೆ ಕೋಟಿಗಟ್ಟಳೆ ಬೇಕು, ಇಂಥದ್ರಲ್ಲಿ ದುಡ್ಡೇ ಬೇಡ, ದುಡ್ಡೇ ಇಲ್ಲಾ ಅಂದ್ರೆ ಹೇಗೆ?
ನನ್ನ ಹತ್ರ ಬಾಳ ಜನ ಬರ್ತಾರೆ. ಕಾರ್ಪೋರೇಶನ್ ಸೀಟ್ ಬೇಕು ಅಂತ. ಚುನಾವಣೆ ನಿಲ್ಲೋದಕ್ಕೆ ಏನ್ರಿ ಅರ್ಹತೆ ಅಂತ ಕೇಳಿದ್ರೆ ಸರ್, ದುಡ್ಡಿದೆ ನನ್ನತ್ರ ಅಂತಾರೆ. 50 60 ಲಕ್ಷ ಇದೆ, ನೋ ಪ್ರಾಬ್ಲಂ. ಬಟ್ ಒಂದು ಕೋಟಿವರೆಗೆ ಖರ್ಚು ಮಾಡಬಲ್ಲೆ ಸರ್. ಅಂತಾರೆ. ಅದಕ್ಕೆ ನಾನು ಹಾಸ್ಯ ಮಾಡಿ ಹೇಳ್ತಾ ಇದ್ದೆ. ಪ್ರತಿವಾರ್ಡ್ ಇಲೆಕ್ಷನ್ಗೆ ಟಿಕೆಟ್ ಹರಾಜು ಮಾಡಬಹುದಲ್ವ? ಅತ್ಯಧಿಕ ಬಿಡ್ ಯಾರು ಮಾಡ್ತಾರೆ ಅವರಿಗೆ ಕೋಡೋಣ ಅಂತ. ಆ ಪ್ರಚಾರದ ದುಡ್ಡನ್ನು ಅಭಿವೃದ್ಧಿಗೆ ಬಳಸಬಹುದಲ್ವ. ಆ ಸ್ಥಿತಿ ಬರ್ತಾ ಇದೆ.

(ನಮ್ಮ ಟೀಮ್- ಚಾಂದ್, ಕೆ.ವೆಂಕಟೇಶ್, ಬಿ.ಕೆ.ಗಣೇಶ್, ಕೋಡಿಬೆಟ್ಟು ರಾಜಲಕ್ಷ್ಮಿ, ಸೋಮಶೇಖರ ಕಿಲಾರಿ... ಇನ್ನಷ್ಟು ಮನದ ಮಾತುಗಳಿಗಾಗಿ ನಿರೀಕ್ಷಿಸಿ...)

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ