ತಿಂಗಳ ಬೆಳಕಿನಲ್ಲಿ ಅಮ್ಮ ಕೊಟ್ಟ ಜಾಜಿದಂಡೆ ಘಮಘಮ
-ಕೋ. ಶಿವಾನಂದ ಕಾರಂತ
(ನನ್ನ ಗುರುಗಳಾದ ಶಿವಾನಂದ ಕಾರಂತರು ಸಾಹಿತಿಗಳು, ಕಥೆಗಾರರು. ಒಳ್ಳೆಯ ಮಾತುಗಾರರು. ಅವರ ನೆನಪಿನ ಶಕ್ತಿ ಅಪಾರ. ನನ್ನ ಎಸ್.ಎಸ್.ಎಲ್,ಸಿ ವರೆಗಿನ ಓದಿನಲ್ಲಿ ಕಾರಂತರು ನನಗೆ ಸಮಾಜಶಾಸ್ತ್ರ ಪಾಠ ಮಾಡುತ್ತಿದ್ದರು. ಅವರು ಪಾಠ ಮಾಡುವ ಶೈಲಿ ಭಿನ್ನ. ಪ್ರತಿ ಕ್ಲಾಸಿನಲ್ಲಿ ಕಥೆಗಳನ್ನೇ ಹೇಳುತ್ತ ಮನಸ್ಸಿಗೆ ಮುಟ್ಟುವ ಹಾಗೆ ಹೇಳುತ್ತಿದ್ದರು. ಅವರು ಕೊಟ್ಟ ನೋಟ್ಸ್ ಬರೆದುಕೊಳ್ಳುವುದೆಂದರೆ ನನಗೆ ಇನ್ನಿಲ್ಲದ ಹುಚ್ಚು. ಅದು ಅತ್ಯಂತ ಸ್ವಾರಸ್ಯಕರವಾಗಿರುತ್ತಿತ್ತು. ಅದು ಕೇವಲ ಪುಸ್ತಕದ ಬದನೆಕಾಯಿ ಆಗಿರುತ್ತಿರಲಿಲ್ಲ. ಪಾಠಗಳನ್ನು ಅವರು ತಮ್ಮದೇ ಶೈಲಿಯಲ್ಲಿ ಬರೆದಿರುತ್ತಿದ್ದರು. ಅಂತಹ ನೋಟ್ಸ್ ನಾನು ಆಗಾಗ ಓದುತ್ತ ಕೂತಿರುತ್ತಿದ್ದುದೇ ಹೆಚ್ಚು. ಅವರು ಕೊಟ್ಟ ನೋಟ್ಸ್ ಅನ್ನು ಬಹಳ ವರ್ಷ ಇಟ್ಟುಕೊಳ್ಳುತ್ತಿದ್ದೆ. ಅಲ್ಲಿಂದದ ಮಗ್ಗುಲು ಬದಲಿಸಿ ನಾನು ಪತ್ರಿಕೋದ್ಯಮದ ದಾರಿ ಹಿಡಿದೆ. ನನಗೆ ಅಕ್ಷರದ ಮೋಹ ಹತ್ತಿಕೊಂಡಿದ್ದರೆ ಅದರಲ್ಲಿ ಮೊದಲ ಪಾಲು ಕಾರಂತ ಮೇಷ್ಟರಿಗೆ ಸಲ್ಲಬೇಕು. ನಾನೇನಾದರೂ ಒಂದು ಪುಸ್ತಕ ಬಿಡುಗಡೆ ಮಾಡಿದರೆ ಅದರ ಒಂದು ಪ್ರತಿಯನ್ನು ಮೇಷ್ಟ್ರರಿಗೆ ಹೋಗಿ ಕೊಡದೇ ಇದ್ದರೆ ನೆಮ್ಮದಿ ಇಲ್ಲ. ಈ ಬಾರಿ ನಾನು ಆ ಕೆಲಸವನ್ನು ತಡವಾಗಿ ಮಾಡಿದೆ. ಆದರೆ ಅಮ್ಮ ಕೊಟ್ಟ ಜಾಜಿ ದಂಡೆಯನ್ನು ಅವರ ಮಡಿಲಿಗಿಟ್ಟ ಕೆಲವೇ ದಿನಗಳಲ್ಲಿ ಅದರ ವಿಮರ್ಶೆಯನ್ನೂ ಕುಂದಾಪುರ ಸ್ಥಳೀಯ ಹಾಗೂ ಜನಪ್ರಿಯ ಪತ್ರಿಕೆ ಕುಂದಪ್ರಭದ ತಮ್ಮ ಅಂಕಣದಲ್ಲಿ ಬರೆದೂ ಬಿಟ್ಟಿದ್ದಾರೆ. ಮೇಷ್ಟರಿಗೆ ವಂದಿಸುತ್ತಾ... )
ನೆನಪುಗಳು, ಬರೀ ನೆನಪಲ್ಲವಿದು. ಶಾಶ್ವತವಾಗಿ ಎದೆಯಾಳದಲ್ಲಿ, ಮಸ್ತಕದ ಭಿತ್ತಿಯಲ್ಲಿದ್ದು, ಬೇಕೆಂದಾಗ ಹೊರಗೆ ಬಂದು ಬದುಕನ್ನು ಸಂತಸದ ನಾವೆಯಲ್ಲಿ ಸಾಗಿಸುವಂತಹದ್ದು. ಮಂಜುನಾಥ್ ಚಾಂದ್ ತ್ರಾಸಿ ನಮ್ಮ ಹುಡುಗ. ನಾನು ವೃತ್ತಿ ನಿರತನಾಗಿದ್ದ ಸಮಯದಲ್ಲಿ ನನ್ನ ವಿದ್ಯಾರ್ಥಿಯಾಗಿದ್ದ. ಈತ ಇಷ್ಟು ಚೆನ್ನಾಗಿ ಬರೆಯುತ್ತಾನೆ ಎಂದು ನಾನಾಗ ಈತನನ್ನು ಗುರುತಿಸಲೇ ಇಲ್ಲ. ಆದರೆ ಈತ ನನ್ನನ್ನು ಮರೆಯಲಿಲ್ಲ. ನಮ್ಮ ಮನೆಗೆ ಒಂದು ಸಂಜೆ ಬಂದ. ಸುಮಾರು ಎರಡು ಘಂಟೆಗಳ ಕಾಲ ಪಟ್ಟಾಂಗ ಹೊಡೆದೆವು. ನಾಟಕ, ಪತ್ರಿಕೋದ್ಯಮ , ಸಿನಿಮಾ, ಮಹಾನ್ ಲೇಖಕರು ಎಂದು ಅನ್ನಿಸಿಕೊಳ್ಳಲು ಮಾಡುವ ಲಾಬಿ, ಪ್ರಶಸ್ತಿಗಳನ್ನು ಹಂಚುವಲ್ಲಿ ರಾಜಕೀಯ, ನನ್ನ ಶಿಷ್ಯ ಚಂದ್ರಕಾಂತ ಕೊಡ್ಪಾಡಿಯ ಆಸಕ್ತಿ. ಹೀಗೆ ಒಂದೇ ಎರಡೇ ನೂರಾರು. ನನ್ನ ಕಣ್ಣ ಮುಂದೆ ಗತಕಾಲದ ಗವಾಕ್ಷಿ ತೆರೆಯಿತು. ಮಾತುಗಳ ಧಾರಾವಾಹಿಯ ನಡುವೆ ನನ್ನ ಮತ್ತು ಈತನ ಅಭಿಪ್ರಾಯಗಳು ಒಂದು ಬಿಂದುವಿನಲ್ಲಿ ಸಂಲಗ್ನವಾದುವು. ಅದು ಶ್ರೇಷ್ಠ ಕತೆಗಾರ ದಿವಂಗತ ಎಂ.ವ್ಯಾಸರ ಬಗೆಗಿನ ಮಾತು; "ಯಾರು ಏನೇ ಹೇಳಲಿ, ಕಥೆಗಳು ಎಂದರೆ ವ್ಯಾಸರದ್ದು. ದೊಡ್ಡ ಕಥೆಗಾರರು ಎಂದು ಗುರುತಿಸಲ್ಪಡುವವರು. ಯಾರೇ ಆಗಲಿ ವ್ಯಾಸರ ಕಥೆಯ ಒಂದು ಪ್ಯಾರಾ ಬರೆಯಲಿ ನೋಡೋಣ. ಎಂಥಹ ಗಟ್ಟಿತನ ಅದರಲ್ಲಿ. ಕೆಲವು ಇನ್ನೂ ನಮ್ಮ ಗ್ರಹಿಕೆಗೆ ಸಿಕ್ಕಿಲ್ಲ. ಅವೇ ನಮ್ಮ ಮಿದುಳನ್ನು ಕೊರೆಯುತ್ತಿರುತ್ತವೆ."
ಚಾಂದ್ ತೆರಳುವಾಗ ನನ್ನ ಅಂಗೈಯ ಮೇಲೆ ಈತನ ಪುಟ್ಟ ಪುಸ್ತಕವನ್ನು ಇರಿಸಿ "ಪ್ರೀತಿಯ ಗುರುಗಳಾದ ಶಿವಾನಂದ ಕಾರಂತ್ ಅವರಿಗೆ ಬೊಗಸೆ ತುಂಬ ಘಮ". ಎಂದು ಬರೆದು ಕೊಟ್ಟರು. ನನಗೆ ಎದೆ ತುಂಬಿ ಬಂತು. ಹೆಚ್ಚಿನವರು ಬರೆಯುವುದು "ಪ್ರೀತಿಯಿಂದ" ಆದರೆ ಈ ಕೃತಿಯನ್ನು ನಾನು ಒಮ್ಮೆಯಲ್ಲ ಎರಡು ಬಾರಿ ಓದಿದೆ. ಇದು ನಿಮಿತ್ತ ಮಾತ್ರವಲ್ಲ. ಅಸೀಮ ಘಮಘಮ. ಮೈಮನಗಳೆಲ್ಲ ಘಮಘಮ. ಇಷ್ಟು ಚೆನ್ನಾಗಿ ಬರೆಯಲು ಸಾಧ್ಯವೇ? ಇದು ಈ ಕ್ಷಣಕ್ಕೂ ನನ್ನನ್ನು ಕಾಡುತ್ತಿದೆ. ಇದು ಚಾಂದ್ ತ್ರಾಸಿಯ ಸ್ಮೃತಿಗಳಲ್ಲ. ನಮ್ಮ ನಿಮ್ಮೆಲ್ಲರ ಬಾಳಿನ ಬಾಲ್ಯಕಾಲದ ಹಾಳೆಗಳು ಪಟಪಟನೆ ಪುಟಿಯುತ್ತ ಮುದಗೊಳಿಸುವಂತವು. ಇಲ್ಲಿನ ಮಣ್ಣು, ಗಾಳಿ, ನೀರು, ಆಹಾರ, ಪಶು ಪಕ್ಷಿಗಳು, ನಳನಳಿಸುವ ಹೂವುಗಳು, ನೆಲದ ವಾಸನೆ, ಅಮ್ಮನ ನಿಲರ್ಿಪ್ತ ಕಾಯಕ, ಅಪ್ಪನ ಅನುಭವ ಜ್ಞಾನ, ಅಕ್ಕನ ಒಲುಮೆ ಇವೆಲ್ಲವನ್ನು ಒಟ್ಟುಗೂಡಿಸಿದರೆ ಅದೇ ಸಂಬಂಧಾನು ಸಂಬಂಧಗಳ ಮನೆಯಾಗುತ್ತವೆ. ಚಿನ್ನವೀರ ಕಣವಿ ಹೇಳಿದಂತೆ "ಬಾಲ್ಯಕಾಲವೊಂದು ಬರೆಯಲಾಗದ ಭಾವಗೀತೆ" ಎಂದು.
ನಿಜ, ತಾರುಣ್ಯ, ಗೃಹಸ್ತ್ಯ, ವೃದ್ದಾಪ್ಯ, ಸಂನ್ಯಾಸದ ಹೊಸ್ತಿಲ ಮೇಲಿದ್ದರೂ ಮಕ್ಕಳಾಟಿಕೆಯನ್ನು ಅಳಿಸಲಾಗದು. ಪ್ರಿಯ ಓದುಗ, ಈ ಕೃತಿ ಕಥೆಯಲ್ಲ, ವ್ಯಥೆಯೂ ಅಲ್ಲ, ಕಾವ್ಯವಲ್ಲ, ಕಾದಂಬರಿ ಅಲ್ಲ, ಪ್ರಬಂಧವಲ್ಲ, ಅಂಕಣವೂ ಅಲ್ಲ, ಮತ್ತೇನು? ಇಲ್ಲಿರುವುದು ನಮ್ಮ ಹೃದಯಗಳು. ಇಲ್ಲಿ ಹೃದಯದ ತೆರೆದ ಚಿಕಿತ್ಸೆಯಿಲ್ಲ. ಬಹು ಜಾಗೃತೆಯಿಂದ ಮುಚ್ಚಿಟ್ಟ ಪೆಟ್ಟಿಗೆಯಿಂದ ಆಯಾಸದಿಂದಲೋ, ಅತಿ ನಲಿವಿನಲ್ಲಿ ಇದ್ದಾಗಲೋ, ಶಾಂತವಾಗಿದ್ದಾಗಲೋ, ಈ ಪೆಟ್ಟಿಗೆ ತೆರೆಯುತ್ತದೆ. ಆಗ ನಿಮಗೆ ಯಾರೂ ಕಾಣಿಸುವುದಿಲ್ಲ, ಯಾವ ನೋವು ನಿಮ್ಮನ್ನು ಹಿಂಡುವುದಿಲ್ಲ. ತಾಪತ್ರಗಳ ಗೊಡವೆ ಇಲ್ಲ. ಚಾಂದ್, ಅವರ ಅಮ್ಮ (ಈಕೆಯೇ ಕಥಾನಾಯಕಿ, ಇದು ಕಥೆ ಅಲ್ಲದಿದ್ದರೂ) ಅಪ್ಪ , ಅಕ್ಕ, ಇವರೆಲ್ಲರೂ ನಾವಾಗಿ ಬಿಡುತ್ತೇವೆ. ಬರೆಹಗಾರ ಓದುಗರನ್ನು ಒಟ್ಟುಗೂಡಿಸಿ ಒಂದು ಅವಿಭಕ್ತ ಕುಟುಂಬವನ್ನು ನಿಮರ್ಿಸಿ ಬಿಡುತ್ತಾರೆ. ಈ ಸಂದರ್ಭದಲ್ಲಿ ನನಗೆ ನನ್ನ ಎರಡನೇ ಅಕ್ಕ ಮನಸ್ಸಿಗೆ ಬರುತ್ತಾಳೆ. "ಹೂವುಗಳು ಎಂದರಾಯಿತು ಅವಳಿಗೆ. ಆ ಬಿಡಿ ಬಿಡಿ ಹೂಗಳನ್ನು ತಂದು ನೂಲಿನಿಂದಲೋ ಬಾಳೆಯ ನಾರಿನಿಂದಲೋ ಆಕೆ ಮಾಲೆಯಾಗಿಸಿ, ಒಂದು ತುಂಡನ್ನು ದೇವರ ಫೋಟೊಕ್ಕೆ ಏರಿಸಿ, ಮತ್ತೊಂದನ್ನು ತನ್ನ ಮುಡಿಗೇರಿಸಿ ಬಿಡುತ್ತಾಳೆ. ನಾನು ಅವಳಿಗೆ ಹೆಳುತ್ತಿದ್ದೆ 'ಎಂಥಾ ಹುಚ್ಚೇ, ನಿನಗೆ ಹೂವೆಂದರೆ" ಅವಳು ಸುಮ್ಮನೇ ನಕ್ಕು ಬಿಡುತ್ತಿದ್ದಳು.
ಚಾಂದ್ ಚೆಂದವಾಗಿ, ಎಳೆಎಳೆಯಾಗಿ ಇಲ್ಲಿ ಚಿತ್ರಿಸಿದ್ದಾರೆ. ಈಗಿನ ಕಾಲದಲ್ಲಿ ಮಳೆಗಾಲ

"ಅಮ್ಮನೊಂದಿಗೆ ಕಾಡಹಾದಿಯ ಹೆಜ್ಜೆ" ಎಂಬ ಅಧ್ಯಾಯದ ಆರಂಭದ ವಾಕ್ಯ ನೋಡಿ; "ಇದು ಕೇದಗೆ ಹೂವು. ನಾಗನಿಗೆ ಭಾರಿ ಪ್ರೀತಿ. ನಾಗರ ಪಂಚ್ಮಿದಿನ ಇದ ಹಾಕಿ ತನು ಕೊಟ್ಟಷ್ಟು ಒಳ್ಳೆದೆ, ಎಂದು ತಾಯಿ ಉದ್ದಕ್ಕೂ ತನ್ನೊಡನೆ ಬಂದ ಮಗನಿಗೆ ದಾರಿಯಲ್ಲಿ ಕಾಣಿಸುವ ಹುಳು, ಹಾವು, ಹಣ್ಣು , ಗಿಡ, ಮರ, ಮುಳ್ಳು, ಎಲ್ಲವನ್ನೂ ಪರಿಚಯಿಸುತ್ತಾಣೆ. ಮತ್ತೆ ಇಂಥ ಮಕ್ಕಳಿಗೆ ಮಕ್ಕಳಿಗೆ ಭೂಗೋಳ, ಪ್ರಾಣಿ ಪಕ್ಷಿಗಳ ಶಾಸ್ತ್ರ ಬೇಕಾ? ಅಮ್ಮ ಕಲಿಸಿದ್ದು ಸದಾ ನೆನಪಿರುತ್ತದೆ. ಶಾಲೆಯಲ್ಲಿ ಅಧ್ಯಾಪಕರು ಹೇಳಿದ್ದನ್ನು ಉರುಹೊಡೆದು ಪರೀಕ್ಷೆಗೆ ಬರೆಯಬೇಕಾಗಿತ್ತು. ಅಮ್ಮ "ಬದುಕಿನ ಪಾಠ ಕಲಿಸುತ್ತಾಳೆ" ಗುರುಗಳು "ಉದ್ಯೋಗಕ್ಕಾಗಿ ಹೇಳಿಕೊಡುತ್ತಾರೆ'' ಆದ್ದರಿಂದಲೇ ಈ ತೆರನ ಬರವಣಿಗೆಗಳು ಇಷ್ಟವಾಗುತ್ತವೆ. ಇಲ್ಲಿ ಅಮ್ಮ, ಅಪ್ಪ, ಅಕ್ಕ ಹಾಗೂ ಊರುಕೇರಿಯ ಜನಗಳಿಗೆ ಇರುವುದು ತಾವಿರುವ ಭೂಮಿ, ಮನೆ, ಮಕ್ಕಳು. ಈ ಅವಿನಾಭಾವ ಸಂಬಂಧ ಎಷ್ಟು ಸುಂದರ! ಆದರೆ ಇಂದಿನ ಭೌತಿಕ ಬದಲಾವಣೆಗಳು ಸೌಲಭ್ಯಗಳನ್ನು ನೀಡುತ್ತವೆಯೇ ಹೊರತು, ಆತ್ಮೀಯತೆಯನ್ನಲ್ಲ. ನನ್ನೂರಿನಲ್ಲಿ ಒಬ್ಬರಿದ್ದಾರೆ. ಬೇಕಾದಷ್ಟು ದೊಡ್ಡ ಜಮೀನ್ದಾರ, ಅವರಿಗೆ ದುಡಿತದವರು ಸಿಗುವುದಿಲ್ಲ. ಅವರನ್ನು ನಾನು ಕೇಳಿದೆ "ಇದನ್ನೆಲ್ಲ ಇಟ್ಟುಕೊಂಡು ಏನು ಮಾಡುತ್ತೀರಿ? ಮಾರಿಹಾಕಬಹುದಲ್ಲ?" ತತ್ಕ್ಷಣ ಅವರು ಉತ್ತರಿಸಿದರು. "ಅವುಗಳನ್ನು ನೋಡುವುದರಿಂದಲೇ ನನ್ನ ದಿನ ಕಳೆಯುತ್ತದೆ. ನಾವು ನೋಡಿ ಇನ್ನು ಅಬ್ಬಬ್ಬಾ ಎಂದರೆ ಕೆಲವು ವರ್ಷ ಬದುಕಬಹುದು. ಆದರೆ ಅವುಗಳು ಸಾಯುವುದೇ ಇಲ್ಲ. ಮುಂದೆ ಬದುಕ ಸಾಗಿಸುವವರಿಗೆ ಅನ್ನ ನೀಡುತ್ತವೆ. ದುಡ್ಡು ಸಂತೋಷ ಕೊಡುತ್ತದಾ? ಹಣವಿದ್ದವರೆಲ್ಲ ಆರಾಮವಿದ್ದಾರ?" ನನ್ನ ಬಾಯಿ ಮುಚ್ಚಿಹೋಯಿತು.
ಇಲ್ಲಿ ಲೇಖಕರ ಅಮ್ಮನಿಗೆ ಸಂಕಷ್ಟದ, ಕೆಲಸಗಳ ಗೋಳಿದ್ದರೂ ಈಕೆ ಗೊಣಗುವುದಿಲ್ಲ. ಇದು ಇದ್ದರಿದ್ದರೇನೆ ಜೀವನ. ಹಾಗಾಗಿ ಈಕೆಯ ಬದುಕು ನಿರಂತರ ಜೀವಭರಿತ ಪ್ರವಾಹ. ಸದಾ ಹರಿಯುತ್ತಿರುವುದೇ ಅದರ ಗುಣ. ಈ ಕೃತಿಯಲ್ಲಿನ ಯಾವ ಅಧ್ಯಾಯವನ್ನೂ ಬಿಟ್ಟು ಬಿಡಲು ಮನಸ್ಸಾಗುವುದಿಲ್ಲ. "ಒಂದೇ ಲಾಟೀನನ ಕೆಳಗೆ" ಎಂಬ ಅಧ್ಯಾಯವನ್ನೇ ನೋಡಿ, ಈಗ ಝಗಮಗಿಸುವ ವಿದ್ಯುತ್ ದೀಪದೆದುರಿಗೆ ಲಾಟೀನು ಎಂಬ ಶಬ್ಧಕ್ಕೆ ಇಂದಿನ ಮಕ್ಕಳು ಶಬ್ದಕೋಶ ತಕ್ಕೊಂಡು ಅರ್ಥ ಹುಡುಕುತ್ತಾರೆ. ಕತ್ತಲಾಗುತ್ತ ಬಂದರೆ ಸಾಕು, ಅಮ್ಮ ಅಂಗಳಕ್ಕೆ ಮಕ್ಕಳು ಕಾಲಿಡುತ್ತಲೇ ಹೇಳುತ್ತಾಳೆ ""ದೀಪ ಹಚ್ಚಿ ಮಕ್ಕಳೇ, ಎಂದು. ಅವರಲ್ಲೂ ್ಲ ಈಕೆಗೆ ಸ್ವಚ್ಛತೆಯ ಬಗ್ಗೆ ಎಚ್ಚರ. ಕಾಲ್ತೊಳ್ಕಣದೇ ಒಳಗೆ ಬಂದೀಯಾ ಗಂಡೆ" ಎಂಬ ಎಚ್ಚರಿಕೆ. ಹೀಗಿನ ಹಲವಾರು ದೈನಂದಿನ ಸಂಗತಿಗಳನ್ನು ಲೇಖಕ ನಮ್ಮ ಮುಂದಿರಿಸುತ್ತಾರೆ. ಅದರಲ್ಲೂ ನಾನು ಮೆಚ್ಚಿದ್ದು, ಅಮ್ಮ ಹೆಚ್ಚು ಕಲಿತವಳಲ್ಲ,
ನಿರಂತರವಾಗಿ ಅವಳಾಡುವ ಶ್ಲೋಕ "ಅನ್ನಪೂರ್ಣೆ ಸದಾಪೂರ್ಣೆ, ಶಂಕರ ಪ್ರಾಣವಲ್ಲಭೆ. ಆದರೆ ಅಜ್ಜಿ ಇವರ ಮನೆಗೆಂದು ಬಂದಾಗ ಮಕ್ಕಳು ಕಾಯುವುದು. ಆಕೆ ತರುವ ಕುರುಕುರು ತಿಂಡಿಗಾಗಿ. ಈ ಕೃತಿಯಲ್ಲಿ ಏನಿಲ್ಲ? ಎಲ್ಲವೂ ಇದೆ. ಇಲ್ಲದಿರುವುದು ಸಂಘರ್ಷ, ಹಾಳಾ ಹರಟೆ, ಮನೆಮುರುಕುತನ, ಸ್ವಾರ್ಥ, ಸೋಮಾರಿತನ. ಇಂತಹ ಅಮ್ಮನ ಬದುಕು ಆಕೆಗೆ ತಿಳಿದೋ ತಿಳಿಯದೆಯೋ ಹೃದಯ ವೇದನೆಗೆ ಒಳಗಾಗುತ್ತಾರೆ. ಯಾರಿಂದಲೂ ಗುಣ ಪಡಿಸಲಾಗಲಿಲ್ಲ ಎಂದಾದಾಗ ಡಾ| ಹಂಸರಾಜ ಆಳ್ವ ತಮ್ಮ ತಪಾಸಣಾ ಚಾತುರ್ಯದಿಂದ ಅಮ್ಮನನ್ನು ಹತ್ತು ವರ್ಷಕ್ಕೂ ಹೆಚ್ಚು ಆಯುಷ್ಯವಿದ್ದು ಆರಾಮವಾಗಿರುವಂತೆ ಮಾಡುತ್ತಾರೆ. ಅಪ್ಪ ಅಸಾಧ್ಯ ಜ್ಞಾನಿ. ಪುರಾಣ, ವೇದ, ಉಪನಿಷತ್ತುಗಳು, ಅದರಲ್ಲೂ ಮುಖ್ಯವಾಗಿ ಗಮನ ಸೆಳೆಯುವುದು ಕಾಳಿದಾಸನ ಶ್ಯಾಮಲ ದಂಡಕ ಸೂತ್ರವಾದ "ಮಾಣಿಕ್ಯ ವೀಣಾ ಮುಪಲಾಲಯಂತಿ, ಮದಾಲಸಾ ಮಂಜುಲವಾಗ್ವೀಲಾಸ" ಗೀತೆ. ಧ್ಯಾನ, ತಪಸ್ಸು, ಸಾವಿರಾರು ಮಂದಿಗೆ ಆಧ್ಯಾತ್ಮದ ಒಲವನ್ನು, ಅದರ ಬಲವನ್ನು ಅನಾವರಣಗೊಳಿಸಿದವರು. ಈ ಕೃತಿಯ ಕೊನೆಯಲ್ಲಿ ಚಾಂದ್ ಬರೆದ ಕವನದ ಕೊನೆಯ ಚರಣ ಮನಃಸ್ಪರ್ಶಿಯಾಗಿದೆ.
ಹರಿಯುವ ತೊರೆಯ ತಟದಲ್ಲಿ
ಅರಳಿದ ಕೇದಗೆ ನೀನು
ಹೂವಿನೆಸಳಿನ ಗಂಧ ನೀನು
ನಿನ್ನ ಅಂತರಂಗದ ಕಂಪಿನಲ್ಲಿ
ನಾನು ಮಗುವಾಗಬೇಕು ಸದಾ
ಅಳಿಸಿಹೋದ ಚಿತ್ರಗಳಿಗೆಲ್ಲ
ಜೀವ ತುಂಬಬೇಕು
ಹುಡುಗಾ, ಚಾಂದ್ ನೀನು ನಿನ್ನ ಲೇಖನಿಗೆ ಪ್ರಾಣ ಕೊಟ್ಟಿದ್ದೀಯಾ. ನನಗಂತೂ ತುಂಬ ಹೊಟ್ಟೆಕಿಚ್ಚು, ನಿನ್ನಂತೆ ನನಗೆ ಬರೆಯಲಿಕ್ಕೆ ಆಗಲಿಲ್ಲ ಎಂದು. ಇನ್ನೂ ನೀನು ಅನುಭವಿಸಿದ ಬದುಕಿನ ವಿಭಿನ್ನ ಆಯಾಮಗಳನ್ನು ತೆರೆದಿಡು. ಖಂಡಿತಾ ನೀನು ಎಲ್ಲರಿಗೂ ಬೇಕಾಗುವ ಬರಹಗಾರನಾಗುತ್ತಿಯಾ. ಇಲ್ಲಿರುವುದು ಕೌಟುಂಬಿಕ ಸಾಮರಸ್ಯದ ಸಂಶೋಧನೆ. ಈ ಅನ್ವೇಷಣೆ ಮತ್ತು ಅಂತರಂಗದ ಪರವೀಕ್ಷಣೆ ತುಂಬ ಕ್ಲಿಷ್ಟಕರ. ಸರಳವಾಗಿದ್ದರೂ. ನಿನಗೆ ಶುಭವನ್ನು ಹಾರೈಸುತ್ತೇನೆ, ಮುಕ್ತಾಯಗೊಳಿಸುವ ಮುನ್ನ ನನಗೆ ತೋಚಿದ್ದು. ಇರುಳಲ್ಲಿ ತಿಳಿಯಾದ ಬಾನಲ್ಲಿ ಕಾಣಿಸುವ ತಿಂಗಳ ಬೆಳಕಿನಲ್ಲಿ ಒಂದು ಮೊಲದಂತಿರುವ ಚಿತ್ರವಿದೆಯಲ್ಲ. ಅದು ಬೇರೇನೂ ಅಲ್ಲ. ನಿನ್ನಮ್ಮನ ಜಾಜಿದಂಡೆ ಘಮಘಮ, ಚಂದಮಾಮ ಸರಿಗಮ.
ಕಾಮೆಂಟ್‌ಗಳು