ಅಗ್ನಿ ಮತ್ತು ಮಳೆಗೂ ಮುನ್ನ ಅಘೋರಿ ಭೇಟಿ ಮಾಡಿದ್ದ ಕಾರ್ನಾಡರು!
ಹಿರಿಯರಾದ ಧಾರವಾಡದ ಸುರೇಶ್ ಕುಲಕರ್ಣಿ ಅವರು ಗಿರೀಶ್ ಕಾರ್ನಾಡ್ ಅವರೊಂದಿಗೆ ಉತ್ತಮ ಒಡನಾಟ ಹೊಂದಿದವರು. ಉತ್ಸವ ಸೇರಿದಂತೆ ಕಾರ್ನಾಡರ ಅನೇಕ ಸಿನೆಮಾಗಳಲ್ಲಿ ಜೊತೆಗಿದ್ದು ಕೆಲಸ ಮಾಡಿದವರು. ಕಾರ್ನಾಡರ ವೇವ್ಲೆಂಗ್ತ್ ಏನೆಂಬುದು ಕುಲಕರ್ಣಿ ಅವರಿಗೆ ಚೆನ್ನಾಗಿ ಗೊತ್ತಿತ್ತು. ಕೆಲ ಸಮಯದ ಹಿಂದೆ ಅವರನ್ನು ಧಾರವಾಡದಲ್ಲಿ ಭೇಟಿಯಾಗಿದ್ದಾಗ ಕಾರ್ನಾಡರ ಬಗ್ಗೆ ಅವರು ಅನೇಕ ರಸವತ್ತಾದ ಸಂಗತಿಗಳನ್ನು ಹೇಳಿದ್ದರು. ಹಿಂದಿ ಚಿತ್ರರಂಗದ ಬಗ್ಗೆ, ಗಾಯಕರ ಬಗ್ಗೆ ಅಥೆಂಟಿಕ್ ಆಗಿ ಮಾತನಾಡುವ ಸುರೇಶ್ ಕುಲಕರ್ಣಿ ಅವರ ನೆನಪಿನ ಶಕ್ತಿ ಮಾತ್ರ ನಿಜಕ್ಕೂ
ಅದ್ಭುತ. ಕಾರ್ನಾಡರ ಜೊತೆಗಿನ ಒಡನಾಟದ ಪ್ರತಿ ಕ್ಷಣವನ್ನೂ ಅವರು ಕರಾರುವಕ್ಕಾಗಿ ದಾಖಲಿಸಬಲ್ಲವರು ಕುಲಕರ್ಣಿ. ಅವುಗಳಲ್ಲಿ ಕೆಲವನ್ನು ಇಲ್ಲಿ ಹಂಚಿಕೊಳ್ಳುವುದು ಈಗ ಸೂಕ್ತ ಎಂದು ಭಾವಿಸಿದ್ದೇನೆ.
ಕಾರ್ನಾಡರು ಅಗ್ನಿ ಮತ್ತು ಮಳೆ ನಾಟಕವನ್ನು ಬರೆಯುತ್ತಿದ್ದ ಸಮಯವದು. ಒಂದು ದಿನ ಸುರೇಶ್ ಕುಲಕರ್ಣಿ ಅವರ ಮನೆಗೆ ಬಂದ ಗಿರೀಶ್ ಕಾರ್ನಾಡರು,
“ನಿಮಗೆ ಯಾರಾದರೂ ಅಘೋರಿಗಳು ಗೊತ್ತಾ ಸುರೇಶ್?” ಎಂದು ಕೇಳಿದರು.
“ಹಾಂ, ಗೊತ್ತಲ್ಲ? ಇಲ್ಲೇ ಧಾರವಾಡದಾಗ ಅದಾರ್ರೀ, ನನ್ ಕ್ಲೋಸ್ ಫ್ರೆಂಡ್ ಅದಾನ್ರೀ
ಒಬ್ಬಾಂವ” ಅಂತಂದರು.
“ಏಯ್, ಅವ್ರೂ ಗೊತ್ತೇನ್ರೀ ನಿಮಗ? ಭಾರಿ ಆತಲ್ಲ? ಮಾತಾಡ್ತಾನೇನ್ರೀ ನಿಮ್ ಕೂಡ?”
“ಹಾಂ, ಮಾತಾಡ್ತಾನ್ರೀ, ಹಿಂದಿ, ಇಂಗ್ಲಿಷ್ ಕನ್ನಡದಾಗೂ ಮಾತಾಡ್ತಾನ್. ಇಲ್ಲೇ ನಮ್ ಮನಿ ಬಾಚೂಕ ಅದಾನ್ರೀ..”
“ನನ್ನ ಮುದ್ದಾಂ ಅಲ್ಲಿಗೆ ಕರಕೊಂಡು ಹೋಗಬೇಕಲ್ಲ?” ಎಂದು ಕೇಳಿಕೊಂಡರು ಕಾರ್ನಾಡರು. ತಕ್ಷಣ ಆವತ್ತು ಸಂಜೆಯೇ ಅಘೋರಿ ಭೇಟಿ ಮಾಡಲು ಕುಲಕರ್ಣಿ ಅವರು ವ್ಯವಸ್ಥೆ ಮಾಡಿದರು. ಇಬ್ಬರೂ ಆ ಅಘೋರಿ ಬಳಿಗೆ ಹೋದರು. ಅದೊಂದು ಚಿಕ್ಕ ಕೋಣೆಯಲ್ಲಿ ಆತ ಮೈತುಂಬಾ ಬೂದಿ ಬಳಿದುಕೊಂಡು ಕುಳಿತಿದ್ದ. ಕೋಣೆಯ ಮೂಲೆಯಲ್ಲಿ ತ್ರಿಶೂಲವನ್ನು ನೆಡಲಾಗಿತ್ತು. ಅದಕ್ಕೆ ದಪ್ಪನೆ ಗಾತ್ರದ ರುದ್ರಾಕ್ಷಿ ಮಾಲೆಯನ್ನು ನೇತುಹಾಕಿತ್ತು. ಒಂದು ಗೋಡೆಗೆ ಆತುಕೊಂಡು ಅಘೋರಿ ಕುಳಿತಿದ್ದ. ಆತನ ಮುಂದೆ ದೊಡ್ಡ ಹೋಮ ಕುಂಡವಿತ್ತು. ಅದರಲ್ಲಿನ್ನೂ ಬೆಂಕಿ ದಗದಗ ಉರಿಯುತ್ತಿತ್ತು. ಆ ಕುಂಡ ಪಕ್ಕದಲ್ಲೇ ಒಂದು ತಲೆಬುರುಡೆ ಇಡಲಾಗಿತ್ತು. ಅಘೋರಿಯ ಕಣ್ಣುಗಳು ವ್ಯಗ್ರತೆಯಿಂದ ತುಂಬಿತ್ತು. ಸುರೇಶ್ ಕುಲಕರ್ಣಿ ಮತ್ತು ಗಿರೀಶ್ ಕಾರ್ನಾಡರು ಆ ಅಘೋರಿಯ ಎದುರಲ್ಲೇ ಇರುವ ಇನ್ನೊಂದು ಗೋಡೆಗೆ ಆತುಕೊಂಡು ಚಕ್ಕಳ ಮಕ್ಕಳ ಹಾಕಿ ಕುಳಿತರು. ಸುರೇಶ್ ಕುಲಕರ್ಣಿ ಅವರು ಕಾರ್ನಾಡರನ್ನು
ಅಘೋರಿಗೆ ಪರಿಚಯ ಮಾಡಿಸಿದರು.
ಕಾರ್ನಾಡರಿಗೆ ಸಾಮಯಜ್ಞ ಮತ್ತು ವಾಮಯಜ್ಞದ ಸಾಕಷ್ಟು ಮಾಹಿತಿಯ ಅಗತ್ಯವಿತ್ತು. ಸಾಮಯಜ್ಞ ಎಂದರೆ ಸಾತ್ವಿಕವಾದದ್ದು ಮತ್ತು ವಾಮಯಜ್ಞ ಎಂದರೆ ತಾಮಸ ಗುಣದ್ದು. ಸಾಮಯಜ್ಞದ ಬಗ್ಗೆ ತಾವು ಒಂದಷ್ಟು ತಿಳಕೊಂಡಿದ್ದು, ವಾಮಯಜ್ಞದ ಬಗ್ಗೆ ಬೇಕಾದ ಮಾಹಿತಿ ತಿಳಕೊಳ್ಳಲು ತಮ್ಮ ಬಳಿ ಬಂದಿರುವುದಾಗಿ ಕಾರ್ನಾಡರು ಆ ಅಘೋರಿ ಬಳಿ ಕೇಳಿಕೊಂಡರು. ನಿಮಗೆ ಸಲ್ಲಿಸಬೇಕಾದ ಫ್ರೊಫೆಶನಲ್ ಚಾರ್ಜ್ ಕೊಡುವುದಾಗಿಯೂ ತಿಳಿಸಿದರು. “ಕುಲಕರ್ಣಿ ಕೂಡ ಬಂದ ಮೇಲೆ ಮುಗೀತು, ತಾವು ಯಾವುದೇ ಚಾರ್ಜ್ ಕೊಡಬೇಕಾದ ಅಗತ್ಯವಿಲ್ಲ” ಎಂದು ಆತ ಹೇಳಿದ. ಆದರೆ ಕಾರ್ನಾಡರು ಅದಕ್ಕೆ ಸುತಾರಾಂ
ಒಪ್ಪಲಿಲ್ಲ. ಆ
ಹೋಮ ಕುಂಡದ ಒಂದು
ಮೂಲೆಯಲ್ಲಿ ಒಂದಷ್ಟು ನೋಟಿನ ಕಟ್ಟು ಇಟ್ಟು ಮಾತು ಮುಂದುವರಿಸಿದರು. ಅಘೋರಿ ಮಾತ್ರ ನೋಟಿನ ಕಟ್ಟಿನತ್ತ ಕಣ್ಣೆತ್ತಿಯೂ ನೋಡಲಿಲ್ಲ. ಆ ಇಡೀ ಕೋಣೆಯಲ್ಲಿ ಭಯದಿಂದ ಥರಗುಟ್ಟುವ ವಾತಾವರಣವಿತ್ತು. ಮನುಷ್ಯ ಮಾತ್ರರು ಕುಳಿತುಕೊಳ್ಳುವ ಜಾಗವೇ ಅದಾಗಿರಲಿಲ್ಲ ಎಂಬ ವಾತಾವರಣ ಅಲ್ಲಿತ್ತು.
ಅಘೋರಿ ಜೊತೆ ಕಾರ್ನಾಡರು ಸುಮಾರು ಹೊತ್ತು ಮಾತುಕತೆ ನಡೆಸಿದರು. ಆತ ಹೇಳಿದ್ದನ್ನೆಲ್ಲ ಇವರು ಒಂದು ನೋಟ್
ಬುಕ್ಕಿನಲ್ಲಿ ಬರೆದುಕೊಳ್ಳುತ್ತಾ ಹೋದರು. ಅಂತಿಮವಾಗಿ ಕಾರ್ನಾಡರು ಆತನಿಗೆ ಒಂದು ಪ್ರಶ್ನೆಯನ್ನು ಕೇಳಿದರು; “ನೀವು ಅಘೋರಿಗಳು ಇಷ್ಟೆಲ್ಲ ಸಾಧನೆ ಮಾಡುತ್ತೀರಲ್ಲ, ನೀವು ಅಘೋರಿ ಎಂದು ಅಂತಿಮವಾಗಿ ಸರ್ಟಿಫೈ ಮಾಡುವುದು ಯಾವಾಗ, ನೌ ಆ್ಯಂಡ್ ಹೆನ್ಸ್ ಅಘೋರಿ ಎಂದು ಡಿಕ್ಲೇರ್ ಮಾಡುವುದು ಯಾವಾಗ?”
“ಯಾವಾಗ ನಮ್ಮದನ್ನೇ ನಾವೇ (ಹೇಲು-ಕಕ್ಕ) ತಿನ್ನುತ್ತೇವೆ, ಅದೇ ಅಂತಿಮ ಪರೀಕ್ಷೆ. ಅದಕ್ಕಿಂತ ಕಠಿಣವಾದ ಪರೀಕ್ಷೆ ಇಲ್ಲ,” ಎಂದು ಆತ ಹೇಳುತ್ತಾನೆ. ಯಾವುದೇ ಲೌಕಿಕ ಜಗತ್ತಿನಿಂದ ಸಂಪೂರ್ಣವಾಗಿ ವಿಮುಖನಾಗುವುದು ಎಂದರೆ ಇದೇ ಆಗಿದೆ ಎಂಬುದನ್ನು ಆತ ವಿವರಿಸುತ್ತಾನೆ. ಮನುಷ್ಯನ ತಲೆಬುರಡೆಯಲ್ಲಿಯೇ ಅವರು ಹೆಂಡ, ಶೆರೆ ಕುಡಿಯುತ್ತಿದ್ದರು. ಇವೆಲ್ಲ ಮಾಹಿತಿಯನ್ನು ಕಾರ್ನಾಡರು ಅಂದು ಪಡೆದುಕೊಂಡರು. ಅಲ್ಲಿಂದ ತೆರಳಿದ ಬಳಿಕ ಕಾರ್ನಾಡರು ಆ ಅಘೋರಿಗೆ ಒಂದು ಪತ್ರವನ್ನೂ ಬರೆದು, ನಿಮ್ಮನ್ನು ಭೇಟಿ ಮಾಡಿದ್ದು, ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ತುಂಬಾ ಅನುಕೂಲವಾಯಿತು, ಅದನ್ನು ನನ್ನ ಅಗ್ನಿ ಮತ್ತು ಮಳೆ ನಾಟಕದಲ್ಲಿ ಬಳಸಿಕೊಳ್ಳುವುದಾಗಿ ಅದರಲ್ಲಿ ಅವರು ತಿಳಿಸಿದ್ದರು. ಮುಂದೆ ನಾಟಕದಲ್ಲಿ ಅದನ್ನು ಕಾರ್ನಾಡರು ಬಳಸಿಕೊಂಡರು ಕೂಡ.
ಹಾಗೆ ಒಂದು ಕೃತಿಯನ್ನು ಬರೆಯುವ ಸಂದರ್ಭದಲ್ಲಿ ಅವರು ಒಬ್ಬ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಎಲ್ಲ ಅನುಭವಗಳನ್ನು ಖುದ್ದಾಗಿ ಪಡೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದರು ಎನ್ನುತ್ತಾರೆ ಸುರೇಶ್ ಕುಲಕರ್ಣಿ. ತಲೆದಂಡ ನಾಟಕ ಬರೆಯುವ ಸಂದರ್ಭದಲ್ಲಿಯೂ ಕಾರ್ನಾಡರು, ತಮ್ಮ ಮಿತ್ರ ಸುರೇಶ್ ಕುಲಕರ್ಣಿ ಜತೆ ತಾಸುಗಟ್ಟಲೆ ಕುಂತು ಈ ಭಾಗದಲ್ಲಿ ಬ್ರಾಹ್ಮಣರು, ಲಿಂಗಾಯತರು ಬಳಸುವ ಬೈಗುಳ ಬಗ್ಗೆ ಚರ್ಚೆ
ಮಾಡಿದ್ದರು ಮತ್ತು ಅವೆಲ್ಲವನ್ನೂ ನೋಟ್ ಮಾಡಿಕೊಳ್ಳುತ್ತಿದ್ದರು. ಅವೆಲ್ಲವನ್ನೂ ತಲೆದಂಡ ನಾಟಕದಲ್ಲಿ ಯಥೇಚ್ಛವಾಗಿ ಬಳಸಿಕೊಂಡಿದ್ದರು. ಬಿಜ್ಜಳ ಒಂದು ಕಡೆ ತನ್ನ ಹೆಂಡತಿಗೆ ಬಯ್ಯುತ್ತಾ, “ನಿನ್ನ ಮಗನನ್ನ ಕುಂಡಿ ಕೆಳಗಿನ ಅರವಿ ಮಾಡಿ ಬಿಸಾಕೀನಿ" ಹೇಳುತ್ತಾನೆ. ಇದನ್ನು ಕೂಡ ಕಾರ್ನಾಡರು ಒಂದು ಚರ್ಚೆ ಮೂಲಕ ಪಡೆದುಕೊಂಡ ಪದಗಳು ಎಂದು ನೆನಪು ಮಾಡಿಕೊಳ್ಳುತ್ತಾರೆ ಸುರೇಶ್ ಕುಲಕರ್ಣಿ. ಇಂತಹ ಅಧ್ಯಯನಶೀಲತೆ ಇಲ್ಲದೇ ಹೋದರೆ ಒಬ್ಬ ಬರಹಗಾರನ ಕೃತಿಗಳು ಗಟ್ಟಿಯಾಗಲಾರದು ಎಂಬುದಕ್ಕೆ ಅನಂತಮೂರ್ತಿ, ಕಾರ್ನಾಡರಾದಿಯಾಗಿ ಎಲ್ಲ
ಹಿರಿಯ ಲೇಖಕರೇ ನಮಗೆ ಸಾಕ್ಷಿ.
ಇನ್ನೊಂದು ದಿನ ಸಂಜೆ ಕಾರ್ನಾಡರು ಕುಲಕರ್ಣಿ ಅವರ ಲ್ಯಾಂಡ್
ಲೈನ್ ಕರೆ ಮಾಡಿ, ಮನೆಯಲ್ಲೇ ಇದ್ದೀರೇನು, ಇನ್ನೊಂದ್ ಹದಿನೈದ್ ನಿಮಿಷಕ್ಕೆ ಅಲ್ಲಿಗ್ ಬರ್ತೀನಿ, “ಎಲ್ಲಿಗೂ ಹೋಗ್ಬ್ಯಾಡ್ರಿ”, ಎಂದು ಕೇಳಿಕೊಳ್ಳುತ್ತಾ, “ಈ ಗಾಯ ಆದ ಮೇಲೆ ಅದು ಮಾಯುವ ಹಂತದಲ್ಲಿ ಕಪ್ಪಗಾಗಿ ಕೊನೆಗೆ ಎದ್ದು ಹೋಗತ್ತಲ್ಲ, ಅದಕ್ಕೆ ಏನಂತ್ರೀ ಧಾರವಾಡದಾಗ?” ಎಂದು ಕೇಳಿದ್ರು. ಅದಕ್ಕೆ ಹಕ್ಳೀ ಅಂತೀವಿ ಎಂದು ಉತ್ತರ ಕೊಟ್ಟಿದ್ದರು ಕುಲಕಣರ್ಿ ಅವರು. ಅಂದು ಅವರ ಕೂಡ ಅನಂತಮೂರ್ತಿ
ಮತ್ತು ಇನ್ನೂ ಅನೇಕ ಮಂದಿ ಹಿರಿಯರಿದ್ದರು. ಅವರ ಮನೆಯಲ್ಲಿ ಇಂತಹ ಪದಗಳ ಚರ್ಚೆಯೇ ನಡೆದಿತ್ತು. ಕಾರ್ನಾಡರ ಪಾಕೆಟ್ನಲ್ಲಿ ಒಂದು ಪೆನ್ನು ಮತ್ತು ಪುಟ್ಟ ನೋಟ್ ಪ್ಯಾಡ್ ಯಾವತ್ತೂ ಇರುತ್ತಿತ್ತು. ಯಾವತ್ತೂ ತಮಗೆ ತೋಚಿದ್ದನ್ನು ಬರೆದುಕೊಳ್ಳುತ್ತಿದ್ದರು. ಪದಗಳು ತಿಳಿಯದೇ ಹೋದರೆ ಆತ್ಮೀಯರಿಗೆ ಫೋನ್ ಮಾಡಿ ತಿಳಿದುಕೊಳ್ಳುತ್ತಿದ್ದರು. ಇನ್ನೊಂದು ಬಾರಿ ಫೋನ್ ಮಾಡಿದ ಕಾರ್ನಾಡರು, ಆವತ್ತು ಸಿಟ್ಟಿನಿಂದ ಬಿರ್ರೆನೆ ಕಲ್ಲು ಒಗಿದಿದ್ದಕ್ಕೆ ಒಂದು ಶಬ್ಧ ಬಳಸೀರಲ್ಲ, ಏನದು? ಎಂದು ಕೇಳಿದ್ದರು. "ಭಿರ್ಕಾಸಿ ಒಗಿ! ಅಂದರೆ 'ಭಿ' ಮಹಾಪ್ರಾಣ ಅಲ್ಲೇನ್? ಎನ್ನುತ್ತಾ ಅವರು ತಮ್ಮ ಪ್ಯಾಡ್ನಲ್ಲಿ ನೋಟ್ ಮಾಡಿಕೊಂಡಿದ್ದರು. ಗೊತ್ತಿಲ್ಲದನ್ನು ತಿಳಿದುಕೊಳ್ಳಲು ಅವರೆಂದೂ ಮುಜುಗರ ಮಾಡುತ್ತಿರಲಿಲ್ಲ ಎನ್ನುವ ಸುರೇಶ್ ಕುಲಕರ್ಣಿ, ನಾನು ಅವರೊಂದಿಗೆ ಅಡ್ಡಾಡದೇ ಇರುವ ಜಾಗವೇ ಇಲ್ಲ, ಲೊಕೇಶ್ನ ನೋಡ್ಲಿಕ್ಕೆ ನನ್ನೇ ಕರಕೊಂಡು ಹೋಗ್ತಾ ಇದ್ರು, ಕಾರಿನಲ್ಲಿ ಹೋಗೋವಾಗ ಡ್ರೈವರ್
ಗೆ ತಿಳಿಯದ ಭಾಷೆಯಲ್ಲೇ ನಾವು ಮಾತಾಡ್ತಿದ್ವಿ ಎಂದು ನೆನಪು ಮಾಡುಕೊಳ್ಳುತ್ತಾರೆ.
ಬಾಂಬೆ, ಪುನಾ, ಧಾರವಾಡ, ಬೆಳಗಾವಿ, ಬೆಂಗಳೂರು, ಸಿರ್ಸಿ ಎಲ್ಲ ಕಡೆ ಅವರೊಂದಿಗೆ ಅಡ್ಡಾಡುತ್ತಾ ಅಡ್ಡಾಡುತ್ತಾ ಜೀವನಕ್ಕೆ ಅನೇಕ ಸೂಕ್ಷ್ಮಗಳನ್ನು ನಾನು ಅವರಿಂದಲೇ ತಿಳಿದುಕೊಂಡೆ ಎಂಬ ಧನ್ಯತಾ ಭಾವ ಕುಲಕರ್ಣಿ ಅವರಲ್ಲಿದೆ. ಕಲಿಕೆ ಎನ್ನುವುದು ನಿರಂತರ ಎಂದು ಕಾರ್ನಾಡರು ಬಲವಾಗಿ ನಂಬಿದ್ದರು, ಸಾಕ್ರೆಟಿಸ್ ನನ್ನು ಗಲ್ಲಿಗೆ ಹಾಕುವ ಕೈಯೊಲ್ಲೊಂದು ಪುಸ್ತಕ ಹಿಡಿದು ಓದುತ್ತಿರುವುದನ್ನು ನೋಡಿದ ನೇಣು ಹಾಕುವಾತ ಕೇಳಿದ; 'ಇನ್ನು ಐದೇ ನಿಮಿಷಕ್ಕೆ ನೀನು ಸಾಯುತ್ತಿ, ಅದ್ಯಾಕ್ ಓದುತ್ತಿ?' ಇಲ್ಲ, ಆ ಐದು ನಿಮಿಷನೂ ನಾನು ಬಿಡಲಾರೆ ಎನ್ನುತ್ತಾರೆ ಸಾಕ್ರೆಟಿಸ್. ಅಂತಹ ಛಾತಿ ಎಲ್ಲರಲ್ಲೂ ಇರಬೇಕು. ಕಾರ್ನಾಡರಲ್ಲಿ ಅದು ಅದಮ್ಯವಾಗಿತ್ತು," ಎನ್ನುತ್ತಾರೆ 'ಒಂದಾನೊಂದು ಕಾಲದಲ್ಲಿ' ಸಿನೆಮಾದ ದಿನದಿಂದ ಕಾರ್ನಾಡರ ಜೊತೆಗೆ ಮೂರು ದಶಕ ಕಾಲ ಇದ್ದ ಸುರೇಶ್ ಕುಲಕರ್ಣಿ ಅವರು. ಅವರ ಸಿನೆಮಾ ಸೆಟ್ನಲ್ಲಿ ಕೇಳುತ್ತಿದ್ದ ಎರಡೇ ಹೆಸರು ಏನೆಂದರೆ "ಗಿರೀಶ, ಸುರೇಶ!" ಎಷ್ಟೋ ಮಂದಿ ಇವರನ್ನು ಅಣ್ತಮ್ಮ ಅಂದ್ಕೊಂಡಿದ್ದರು!
ಕಾಮೆಂಟ್‌ಗಳು
#ಇಸ್ಮಾಯಿಲ್_N