ಆವತ್ತು ಅಮ್ಮ ಜಾಜಿ ಹೂವುಗಳನ್ನು ಕೊಯ್ಯಲು ಬೆಳಗಾತವೇ ಎದ್ದಿದ್ದಳು. ಎಂಟು-ಒಂಭತ್ತು ಗುಡ್ಡೆ ಜಾಜಿ ಗಿಡಗಳಲ್ಲಿ ವಿಪರೀತ ಹೂವು ಬಿಟ್ಟಿದ್ದವು. ಅಷ್ಟನ್ನೂ ಕೊಯ್ಯಲು ತಾಸುಗಟ್ಟಳೆ ಸಮಯ ಬೇಕಿತ್ತು. ರಾತ್ರಿಯೆಲ್ಲ ಪಿರಪಿರ ಅಂತ ಬರುತ್ತಿದ್ದ ಮಳೆ ಬೆಳಗಾತಾದರೂ ಅದೇ ಆಲಾಪನೆಯನ್ನು ಮುಂದುವರಿಸಿತ್ತು. ಬೆಳಕು ಹರಿಯುವುದಕ್ಕೂ ಮುಂಚೆಗೇ ಹೂವು ಕೊಯ್ಯುವುದಕ್ಕೆಂದು ಪೈಪೋಟಿ ಮಾಡುವಂತಿರಲಿಲ್ಲ. ತಾಸು ಎರಡು ಕಳೆದಮೇಲೇ ಮಿಟ್ಟಿಗಳು ಬಲಿತುಕೊಳ್ಳುತ್ತಿದ್ದವು. ಅದಕ್ಕೂ ಮುಂಚೆ ಕೊಯ್ಯಲು ಹೊಂಟರೆ ಮಿಟ್ಟಿಮಿಟ್ಟಿಮಿಟ್ಟಿ. ಪುಟ್ಪುಟಾಣಿ ಎಲೆಗಳ ನಡುವೆ ಅವಿತುಕೊಂಡು ಅಣಕಿಸುತ್ತಿದ್ದವು. ಅದಕ್ಕೆಂದೇ ಅಮ್ಮ ಬೆಳಗಿನ ತಿಂಡಿ-ಚಾ ಎಲ್ಲ ಮುಗಿಸಿಬಿಟ್ಟಿದ್ದಳು. ಮಳೆ ನೀರಿನಲ್ಲೇ ಕೂತ್ಕಂಡು, ಬೂದಿಗಳನ್ನು ಉಜ್ಜಿ ಉಜ್ಜಿ ಪಾತ್ರೆಗಳನ್ನೆಲ್ಲ ತೊಳೆದು ಹಾಕಿದ್ದಳು. ನಾ ಕಾಲೇಜಿಗೆ ಹೋಗೋದ್ರೊಳಗೆ ಒಂದಿಷ್ಟು ಜಾಜಿ ಹೂ ಕೊಯ್ದು ಅವನ್ನು ಕಟ್ಟಿನೂ ಕೊಡೋದು ಅವಳ ದಿನನಿತ್ಯದ ಕೆಲಸವಾಗಿತ್ತು. ಒಂಭತ್ತು ಗಂಟೆಗಳೊಳಗೆ ಎರಡು ಮೂರು ಸಾವಿರ ಹೂಗಳನ್ನು ಕೊಯ್ದು ಅವನ್ನು ಬಾಳೆಬಳ್ಳಿಯಲ್ಲಿ ಪೋಣಿಸಿ ಪೋಣಿಸಿ ಒಪ್ಪ ಮಾಡಿ ಕೊಟ್ಟರೆ ಅದನ್ನು ಲ್ಯಾಸ್ ನಾಯ್ಕರ ಅಂಗಡಿಯಲ್ಲಿಟ್ಟು ಕಾಲೇಜಿಗೆ ಹೋಗ್ತಿದ್ದೆ.
 |
|
ಉದ್ದನೆಯ ಕೊಡೆಯನ್ನು ಕತ್ತಿನ ಮಧ್ಯೆ ಇಟ್ಟುಕೊಂಡು ಒಂದು ಕೈಯಲ್ಲಿ ಬಿಂದಿಗೆ ಇಟ್ಟುಕೊಂಡು ಸುಮಾರು ಎರಡು ಸಾವಿರ ಜಾಜಿಗಳನ್ನು ಆವತ್ತವಳು ಕೊಯ್ದಿದ್ದಳು. ಆದರೆ, ಬಾವೀಕಟ್ಟೆ ಪಕ್ಕದಲ್ಲಿದ್ದ ಜಾಜಿ ಗುಡ್ಡೆಗೆ ಹೋಗೋ ಮಾರ್ಗದಲ್ಲಿ ಆಯ ತಪ್ಪಿ ಬಿದ್ದುಬಿಟ್ಟಿದ್ದಳು. ನಾವು ಅಪ್ಪ-ಮಗ ಬಹಳ ಹೊತ್ತು ನೋಡೇ ಇರಲಿಲ್ಲ. ಅಮ್ಮ ಯಾಕೆ ಇಷ್ಟೊತ್ತಾದರೂ ಬರಲಿಲ್ಲ ಅಂತ ನೋಡ್ತೀನಿ ಕೊಡೆ ಒಂದು ಕಡೆ, ಬಿಂದಿಗೆ ಒಂದ್ಕಡೆಯಾಗಿ ಬಿದ್ದುಬಿಟ್ಟಿದ್ದಾಳೆ. ಏಳಲಿಕ್ಕೇ ಆಗ್ತಿಲ್ಲ; ಮೂಗಲ್ಲೆಲ್ಲ ರಕ್ತ. ಅಪ್ಪನನ್ನೂ ಕೂಗಿ ಕರೆದು ಮನೆಗೆ ಕರೆದೊಯ್ದರೂ ಅಮ್ಮ ಏನನ್ನೂ ಮಾತನಾಡುತ್ತಿಲ್ಲ. ಹೃದಯ ಬಡಿತ ವಿಪರೀತ ಜಾಸ್ತಿಯಾಗಿತ್ತು. ಏದುಸಿರು ಬಿಡುತ್ತಿದ್ದಳು. ಅಪ್ಪ-ಮಗನಿಗೆ ದಾರಿಯೇ ಕಾಣದ ಸ್ಥಿತಿ. ನಮ್ಮ ತೋಟಕ್ಕೆ ಎದುರಿನಲ್ಲೇ ಕ್ರಿಶ್ಚಿಯನ್ ಆಸ್ಪತ್ರೆಯಿತ್ತು. ಅಲ್ಲಿಗೆ ಕರೆದೊಯ್ಯುವುದಾದರೂ ಹೇಗೆ? ಊರಿನಲ್ಲಿದ್ದುದು ಒಂದೋ ಎರಡೋ ಆಟೋಗಳು. ಮೊಬೈಲ್ ಫೋನ್ನಂತಹ ಸೇವೆಯೂ ಇಲ್ಲದ ಕಾಲದಲ್ಲಿ ಊರಿನ ಬೈಪಾಸ್ಗೆ ಓಡಿಯೇ ಹೋಗಿ ಆಟೋ ತಂದು ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಅಮ್ಮ ಸಂಪೂರ್ಣ ನಿತ್ರಾಣವಾಗಿದ್ದಳು.
ಮಂಗಳೂರಿನಿಂದ ಬಂದಿದ್ದ ಲಂಬೂ ವೈದ್ಯರೊಬ್ಬರು ತಕ್ಷಣ ಚಿಕಿತ್ಸೆ ಮಾಡಿದ್ದರು. ಮುಂದೆ ಸುಮಾರು ಎರಡು ಮೂರು ದಿನಗಳ ಕಾಲ ಆಸ್ಪತ್ರೆಯಲ್ಲೇ ಇದ್ದಳು ಅಮ್ಮ. ಆದರೆ ಅಮ್ಮನಿಗೆ ಇಷ್ಟೊಂದು ಸಿರಿಯಸ್ಸಾದ ಹೃದಯದ ಸಮಸ್ಯೆ ಇದೆ ಅಂತ ನನಗೆ ಗೊತ್ತಾಗಿದ್ದೇ ಆವತ್ತು. ನನಗ್ಯಾಕೆ ಅಪ್ಪನಿಗೂ ಗೊತ್ತಿರಲಿಲ್ಲ. ಆವತ್ತಿನ ದಿನ ಆಸ್ಪತ್ರೆಯ ಹಾಸಿಗೆಯಲ್ಲಿ ಅಪ್ಪನ ಕೈಹಿಡಕೊಂಡ ಅಮ್ಮ ಹೇಳಿದ ಮಾತು ಈಗಲೂ ನೆನಪಿದೆ; ನನ್ನ ಮಗನನ್ನು ಚೆನ್ನಾಗಿ ನೋಡಿಕೊಳ್ಳಿ! ಅಪ್ಪ ಏನೂ ಆಗುವುದಿಲ್ಲ ಸುಮ್ಮನಿರು ಅಂತ ಸಮಾಧಾನ ಹೇಳಿದ್ದರು. ಅಮ್ಮ ತಾನು ಉಳಿಯುವುದಿಲ್ಲ ಅಂತ್ಲೇ ಅಂದುಕೊಂಡಿದ್ದಳು. ಪಕ್ಕದಲ್ಲೇ ಇದ್ದ ನನಗೆ ನಿಜಕ್ಕೂ ದುಃಖ ಉಮ್ಮಳಿಸಿ ಬಂದಿತ್ತು.
 |
With appa |
ಅಲ್ಲಿಂದ ಅಮ್ಮ ಚೇತರಿಸಿಕೊಂಡು ಮನೆಗೆ ಬಂದಳು. ಇದು ಸುಮಾರು 25 ವರ್ಷಗಳಿಗೂ ಹಿಂದೆ. ಅಮ್ಮನಿಗೆ ಹೃದಯದ ಸಮಸ್ಯೆ ಶಾಶ್ವತವಾಗಿ ಉಳಿದುಬಿಟ್ಟಿತು. ಹೃದಯದ ರಕ್ತನಾಳದಲ್ಲಿದ್ದ ಬ್ಲಾಕ್ನಿಂದ ರಕ್ತ ಸಂಚಾರ ಸರಿಯಾಗಿ ಆಗುತ್ತಿರಲಿಲ್ಲ. ಅನೇಕ ಬಾರಿ ಹೃದಯ ಬಡಿತ ವಿಪರೀತ ಜಾಸ್ತಿಯಾಗಿ ಬಿಡುತ್ತಿತ್ತು. ಆಗೊಂದು ಮಾತ್ರೆ ಕೊಡಬೇಕಿತ್ತು. ಅಮ್ಮನನ್ನು ಪ್ರತಿವಾರ ಸಂಜೆ (ನೆನಪಿದ್ದ ಹಾಗೆ ಶನಿವಾರ) ಆಸ್ಪತ್ರೆಗೆ ಕರಕೊಂಡು ಹೋಗಿ ಪೆನೆಡ್ಯೂರ್ ಇಂಜೆಕ್ಷನ್ ಹಾಕಿಸಿಕ್ಕೊಂಡು ಬರುತ್ತಿದ್ದೆ. ಅದರ ನೋವು ಅಸಾಧ್ಯವಿರುತ್ತಿತ್ತು; ಮನೆಗೆ ಬಂದರೆ ರಾತ್ರಿಯಿಡೀ ಅವಳಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಬೆಳಗಾಯಿತೆಂದರೆ ಮತ್ತೆ ಚುರುಕಾಗಿ ಬಿಡುತ್ತಿದ್ದಳು. ಮತ್ತೆ ಜಾಜಿ ಹೂವು ಕೊಯ್ಯಬೇಕು; ಜಾಜಿ ದಂಡೆ ಕಟ್ಟಬೇಕು. ಹಾಗೆ ಆಕೆ ಕಟ್ಟಿದ ಜಾಜಿ ಹೂವುಗಳನ್ನ ಲೆಕ್ಕ ಹಾಕಿದರೆ ಆಕಾಶದಲ್ಲಿ ನಕ್ಷತ್ರಗಳನ್ನು ನೋಡಬೇಕು ಅನಿಸುತ್ತದೆ. ಅಮ್ಮನಿಗೆ ಈಗಲೂ ಜಾಜಿ-ಮಲ್ಲಿಗೆಯ ಪರಿಮಳವೆಂದರೆ ಪಂಚಪ್ರಾಣ.
ಕಾಮೆಂಟ್‌ಗಳು
AR Shivakumar