ನಕ್ಷತ್ರಗಳನ್ನು ಹಾಸಿದವಳು...




ಮಿಕ್ಸಿ ಇರಲಿಲ್ಲ, ಹಿಟ್ಟಿನ ಗಿರಣಿಯೂ ಇಲ್ಲ
ರಾತ್ರಿ ನೆನೆ ಹಾಕಿದ ಅಕ್ಕಿ
ಬೆಳ್ಳಿ ಮೂಡುವ ಹೊತ್ತಿಗೆ
ಸೆರಗು ಸೊಂಟಕ್ಕೆ ಸಿಕ್ಕಿ
ರೊಟ್ಟಿಯ ಹಿಟ್ಟು ಕಟ್ಟಿದ್ದಾಯಿತು
ಕೆಂಡದ ಮೇಲೆ ಸುಡುವ ರೊಟ್ಟಿ
ಅಮ್ಮನ ಕಣ್ಣಲ್ಲಿ ನೀರು
ಅಡುಗೆಮನೆ ಮೆಟ್ಟಿಲ ಮೇಲೆ
ಹಸಿದು ಕೂತವನು ನಾನು

ಸೆಗಣಿ ಅಂಟಿದ ಕೆಚ್ಚಲು
ಸಾಕಾಗದು ಒಂದೇ ತಂಬಿಗೆ ನೀರು
ಇನ್ನೊಂದು ಬಿಂದಿಗೆ ತಾ ಅಂದವಳು
ಕೆಂಪಗಿನ ಕೆಚ್ಚಲಿಂದ
ನೊರೆ ನೊರೆಯ ಹಾಲು
ಅಂಡು ಊರಿಸಿ ಕತ್ತು ಇಣುಕಿಸಿ
ಕಣ್ಣು ಪಿಳಿ ಪಿಳಿ
ಹೀಗೆ ಕಾದವನು ನಾನು

ಸೀಳಿದ್ದ ಒದ್ದೆ ನೆಲದೊಳಗೆ ಗೊಬ್ಬರ
ಸಿಬರು ಸಿಬರಿನಂತೆ ಪುಷ್ಯಮಳೆ
ಹಾಳೆಯ ಮೇಲೊಂದು ಗೊರಬು
ಬಿತ್ತಿದ್ದು ನೆಲಗಡಲೆ ಬೀಜ
ಓಲಿ ಕೊಡೆಯೊಳಗೆ ಕುಂತು
ಮಣ್ಣಿನ ಘಮಲನು ಕುಡಿದು
ಅಮ್ಮ ಇರಿಸಿದ ಜೀವವು
ಇನ್ನು ಮೊಳಕೆಯೊಡೆಯದೇ
ಹೇಗೆ ಉಳಿದೀತೆಂದು ಬಿಮ್ಮನೆ
ಸಂಭ್ರಮಿಸಿದವನು ನಾನು


(ನಾ ತೆಗೆದ ಅಮ್ಮನ ಫೋಟೊಗಳು..)


ಬಾವಿಕಟ್ಟೆಯ ಮಗ್ಗುಲಲಿ
ಪಾರಿಜಾತದ ಗಿಡವಿತ್ತು
ಬೈಗು ಹರಿದರೆ ಸಾಕು
ಕಸುಬನ್ನೆಲ್ಲ ಬಿಸಾಕಿ
ಸೆರಗ ತುಂಬಿಕೊಳ್ಳುತ್ತಿದ್ದಳು
ಕೆಂಪು ನತ್ತಿನ ಸುಂದರಿಯರ
ಜಗಲಿಯ ತುಂಬ ನಕ್ಷತ್ರ ರಾಶಿ
ಮನೆಯ ಮೂಲೆ ಮೂಲೆಗೂ ಜೀವಸೆಲೆ
ಘಮದ ನೆಯ್ಗೆ ಕಟ್ಟಿದವನು ನಾನು

ಕತ್ತಲ ಕಳೆವ ತತ್ವಮಸಿ ಇವಳಲ್ಲ
ಮಸಿ ಕಚ್ಚಿದ ಲಾಟೀನು
ಬೂದಿಯ ಸೆಳಕಿಗೆ ಸಿಕ್ಕು
ಹೊಳಪು ಕೊಟ್ಟವಳಿವಳು
ಬೆಳಕ ಕಣ್ಣಿಗೆ ಕಣ್ಣು ನಿರುಕಿಸಿ
ಅವಳ ನಿಟಿಲ ಗೆರೆಗಳನು ಓದದೆ
ಮರೆತುಬಿಟ್ಟವನು ನಾನು


(ಇವತ್ತು -ಮೇ 8- ಅಮ್ಮನ ದಿನವಂತೆ...! ಇದು ಒಂದೇ ದಿನಕ್ಕೆ ಮುಗಿದು ಹೋಗುವಂತಾದ್ದೆ? ನನಗಂತೂ ಪ್ರತಿ ದಿನವೂ ಅಮ್ಮನ ದಿನ. ಆಕೆಯೇ ಜೀವ. ಇವತ್ತು ಬೆಳಗಿನ ಜಾವ ಕೂತಾಗ ನೆನಪಿಗೆ ಬಂದ ಕ್ಷಣಗಳು ಇವು. ಇವ್ಯಾವೂ ಕೇವಲ ಕಲ್ಪನೆಯಲ್ಲ. ನೇರಾನೇರ ಸಂಗತಿಗಳು. ಹೀಗೆ ಕೂತು ಬಿಟ್ಟರೆ ಅಮ್ಮನ ಬಗ್ಗೆ ಸಾವಿರಾರು ಸಾಲುಗಳನ್ನು ಬರೆದುಬಿಡಬಹುದಲ್ಲವೆ ಅನಿಸಿತು... ನಿಮ್ಮ ಅನುಭವ ಹೇಗೆ? ದಯಮಾಡಿ ನಾಲ್ಕು ಸಾಲು ಬರೆಯಿರಿ ಪ್ಲೀಸ್..!)

ಕಾಮೆಂಟ್‌ಗಳು

Unknown ಹೇಳಿದ್ದಾರೆ…
tumbha channagide manju :)
from
satyakka:)
Unknown ಹೇಳಿದ್ದಾರೆ…
hi uncle smitha here
i read ur writing and it was awsome..i loved it and so did amma and mava...
ಸಾಗರದಾಚೆಯ ಇಂಚರ ಹೇಳಿದ್ದಾರೆ…
Happy Mothers day
tumbaa chennagide kavana adarolagina bhaava
chand ಹೇಳಿದ್ದಾರೆ…
....ಅಮ್ಮ ನಮ್ಮ ಮನೆಯೊಳಗೆ, ಮನಸ್ಸಿನೊಳಗೆ ಹರಿಸಿದ ಬೆಳಕಿನಲ್ಲೇ ಬೆಳೆದವಳು ನನ್ನಕ್ಕ. ಅಕ್ಕನ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ಥ್ಯಾಂಕ್ಸ್ ಅಕ್ಕ ನಿಂಗೆ..
chand ಹೇಳಿದ್ದಾರೆ…
thank you very much Smitha...
chand ಹೇಳಿದ್ದಾರೆ…
ಚಂದ್ರಮುಖಿಯತ್ತ ಮುಖ ಮಾಡಿದ ಡಾ.ಗುರುಮೂರ್ತಿ ಅವರಿಗೆ ಧನ್ಯವಾದ. ನಿಮ್ಮ ಮಾತು ನನಗೆ ಸ್ಪೂರ್ತಿ.. ಆಗಾಗ ಬರುತ್ತಿರಿ...ಥ್ಯಾಂಕ್ಸ್
ರಾಮಸ್ವಾಮಿ ಹುಲಕೋಡು ಹೇಳಿದ್ದಾರೆ…
ನಿಮ್ಮಮ್ಮನ ಬಗ್ಗೆ ಬರೆದಿದ್ದು, ನನ್ನಮ್ಮನ ಬಗ್ಗೆ ಬರೆದ ಹಾಗಿದೆ ಸರ್.
chand ಹೇಳಿದ್ದಾರೆ…
ತುಂಬಾ ಧನ್ಯವಾದ ರಾಮಸ್ವಾಮಿ... ಕೂತರೆ ಅಮ್ಮನ ಬಗ್ಗೆ ಎಷ್ಟೊಂದು ಬರೆದು ಬಿಡಬಹುದು ಅನಿಸುತ್ತದೆ. ಅಲ್ವಾ? ನಮ್ಮನ್ನ ಈ ನಗರದ ಗೂಡಿಗೆ ಕಳಿಸಿ.. ಅಥವಾ ನಾವೇ ಆ ಕಂಫರ್ಟ್ ನಿಂದ ತಪ್ಪಿಸಿಕೊಂಡು ಇಲ್ಲಿ ಎಲ್ಲವನ್ನೂ ಮರೆತುಬಿಡುತ್ತೇವಾ ಅನಿಸುತ್ತದೆ.. ಬ್ಗಾಗ್ ಮಂಟಪಕ್ಕೆ ಬಂದಿದ್ದಕ್ಕೆ ಖುಷಿ ಆಯ್ತು..
Ittigecement ಹೇಳಿದ್ದಾರೆ…
ಮಂಜುನಾಥರವರೆ...

ನಿಮ್ಮ ಅಮ್ಮನವರಿಗೆ ಸ್ವಲ್ಪ ತಡವಾಗಿ ಶುಭಾಶಯಕೋರುತ್ತಿರುವೆ..
ನಿಮ್ಮನ್ನು ಜೀವನ ಪ್ರೀತಿಕೊಟ್ಟು ಬೆಳೆಸಿದ ಅವರಿಗೆ ನನ್ನ ನಮನಗಳು...

ನೀವು ಬರೆದ ಸಾಲುಗಳು ತುಂಬಾ ತುಂಬಾ ಇಷ್ಟವಾಯಿತು..
ನನ್ನ ಭಾವನೆಗಳನ್ನು ನೀವು ಬರೆದಿದ್ದೀರಿ ಅಂತ ಅನಿಸಿತು...

ಚಂದದ ಸಾಲುಗಳಿಗೆ ಹೃತ್ಪೂರ್ವಕ ವಂದನೆಗಳು....
umesh desai ಹೇಳಿದ್ದಾರೆ…
its good. yes words are not enough to describe mothr. but you have done a good job. keepit up.
chand ಹೇಳಿದ್ದಾರೆ…
ಪ್ರಕಾಶ್ ಮತ್ತು ದೇಸಾಯಿ ಅವರ ಆಪ್ತವಾದ ಮಾತುಗಳಿಗೆ ತುಂಬಾ ತುಂಬಾ ಥ್ಯಾಂಕ್ಸ್
minchulli ಹೇಳಿದ್ದಾರೆ…
nimma saalugalu adbhutavagive...

ammana bagge bareyodu sulabhavE heli...estu baredaroo bareyade ulidavu bahalastu enisollave..
chand ಹೇಳಿದ್ದಾರೆ…
ಮಿಂಚುಳ್ಳಿ (ಶಮ), ನಿಮ್ಮ ಮಾತು ಅಕ್ಷರಶಃ ನಿಜ. ಹಳ್ಳಿಯ ಹಿನ್ನೆಲೆಯಿಂದ ಬಂದವರಿಗಂತೂ ಈ ಅನುಭವಗಳು ದಟ್ಟವಾಗಿರುತ್ತವೆ ಎಂದು ನಂಬಿದ್ದೇನೆ. ಕೊನೆಗೂ ಎದೆಯಲ್ಲಿ ಇನ್ನಷ್ಟು ಉಳಿದುಬಿಡುತ್ತವೆ. ನಿಮ್ಮ ಅಭಿಪ್ರಾಯಗಳಿಗೆ ಥ್ಯಾಂಕ್ಸ್... ಸೀತಾರಾಮ್ ಅವರಿಗೂ ಧನ್ಯವಾದ...
mshebbar ಹೇಳಿದ್ದಾರೆ…
ಅಮ್ಮನ ನೆನಪಾಯಿತು. ಚೆನ್ನಾಗಿದೆ.
ದಿನಕರ ಮೊಗೇರ ಹೇಳಿದ್ದಾರೆ…
manjunath sir...
mana tumbi banda kavana....

naanu bareyabekendidde... aagiralilla...

khushiyaayitu sir....
chand ಹೇಳಿದ್ದಾರೆ…
ಸತ್ಯ ದಿನಕರ್ ಜೀ
ಅಮ್ಮ ಎಂದರೆ ಮುಗಿಯದ ಬಂಧ
ಅಮ್ಮ ಎಂದರೆ ಆರದ ಗಂಧ..!
ಥ್ಯಾಂಕ್ಸ್ ನಿಮಗೆ..
ಲೋಕು ಕುಡ್ಲ.. ಹೇಳಿದ್ದಾರೆ…
ಸ್ವಲ್ಪ ಹೊಸದು ಅನಿಸುತ್ತಿದೆ ಈ ಲೇಖನ
ಎನ್ನಮ್ಮನೆಡಗೆ ವಾಲುತ್ತಿದೆ ಈ ಮನ
ಸುಂದರವಾದ ಮೆಲುಕು,,,ಅದಕ್ಕೆ ತಕ್ಕ ಹಾಗೆ ವರ್ಣ ರಂಜಿತವಾದ ಸಾಲುಗಳು...
p. gayathri ಹೇಳಿದ್ದಾರೆ…
ಅಮ್ಮನಂತ ಅದ್ಭುತ ವ್ಯಕ್ತಿತ್ವ ಇನ್ನೊಂದಿಲ್ಲ .ಕವನದೊಂದಿಗೆ ನನ್ನ ಅಮ್ಮನ ನೆನಪುಗಳು ಒತ್ತರಿಸಿ ಬಂದು ತುಂಬಾ ಮಿಸ್ ಮಾಡಿಕೊಳ್ಳುವಂತಯ್ತು.....
prabhamani nagaraja ಹೇಳಿದ್ದಾರೆ…
'ಅಮ್ಮ' ನ ಬಗ್ಗೆ, ಆಕೆ ನಮಗಾಗಿ ಪಡುತ್ತಿದ್ದ ಶ್ರಮದ ಬಗ್ಗೆ, ಅನ೦ತ ಅಕ್ಕರೆಯ ಬಗ್ಗೆ ನೆನಪುಮಾಡಿ ಕೊಳ್ಳುವಾಗಲೆಲ್ಲಾ ನನಗೂ ನಿಮ್ಮ೦ತೆಯೆ 'ಕೂತರೆ ಅಮ್ಮನ ಬಗ್ಗೆ ಎಷ್ಟೊಂದು ಬರೆದು ಬಿಡಬಹುದು' ಅನಿಸುತ್ತದೆ! ಅಮ್ಮನ ಫೋಟೋ ಹಾಕಿದ್ದು ತು೦ಬಾ ಇಷ್ಟವಾಯಿತು. ಅಭಿನ೦ದನೆಗಳು. ನನ್ನ ಬ್ಲಾಗ್ ಗೆ ಭೇಟಿಕೊಡಿ.
chand ಹೇಳಿದ್ದಾರೆ…
ಲೋಕು ಕುಡ್ಲಾ, ಗಾಯತ್ರಿ ಮತ್ತು ಪ್ರಭಾಮಣಿ ಅವರಿಗೆ ತುಂಬಾ ತುಂಬಾ ಥ್ಯಾಂಕ್ಸ್. ಅಮ್ಮ ಮೊನ್ನೆಯಿಂದ ಬೆಂಗಳೂರಿಗೆ ಬಂದು ನನ್ನ ಜೊತೆಗಿದ್ದಾರೆ, ನನ್ನ ಬ್ಲಾಗ್ ನ ಮೇಲೆ ಕಣ್ಣಾಡಿಸಿ, ನಾ ಬರೆದ ಕವಿತೆಯನ್ನೂ ನೋಡಿ, ಎಂತೆಲ್ಲಾ ಬರೀತೆ ಮಾರಾಯ ನೀ ಎಂದು ಖುಷಿ ಪಟ್ಟಿದ್ದಾಳೆ. ನಿಮ್ಮೆಲ್ಲರ ಪ್ರತಿಕ್ರಿಯೆ ಕಂಡು ಆಕೆ ಅಚ್ಚರಿ ಪಟ್ಟಿದ್ದಾಳೆ. ನಂಗೂ ಒಂಥರಾ ಖುಷಿ, ನಿಮಗೆಲ್ಲ ಧನ್ಯವಾದ....
ಪ್ರವರ ಕೊಟ್ಟೂರು ಹೇಳಿದ್ದಾರೆ…
ಸರ್ ಒಳ್ಳೆ ಕವಿತೆ.... ಅಮ್ಮ ಅಂದ್ರೆ ಅಮ್ಮ ಅಷ್ಟೆ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ