ಸಾಹಿತ್ಯ ಸಮ್ಮೇಳನದಲ್ಲಿ ಮೊದಲ ಸುತ್ತು…

ಕನ್ನಡ ಸಾಹಿತ್ಯ ಸಮ್ಮೇಳನ ಆರಂಭದ ದಿನ ಬೆಳ್ಳಂಬೆಳಗ್ಗೆಯೇ ತುರ್ತು ಕಾರ್ಯದ ನಿಮಿತ್ತ ಬೆಂಗಳೂರಿಂದ ಹೊರಗೆ ಹೋಗಬೇಕಾಗಿ ಬಂತು. ಎಲ್ಲವನ್ನೂ ಮುಗಿಸಿ ಬಸವನಗುಡಿ ನ್ಯಾಷನಲ್ ಕಾಲೇಜು ಬಳಿ ಬಂದಾಗ ಮೆರವಣಿಗೆ ಬೆವರು ಇಳಿಸಿಯಾಗಿತ್ತು. ಶೃಂಗರಿಸಿಕೊಂಡಿದ್ದ ಆನೆಗಳು, ಕುದುರೆಗಳು ಕಾಲೆಳೆದುಕೊಂಡು ಬದಿಗೆ ಸರಿದಿದ್ದವು.



ಅಧ್ಯಕ್ಷರನ್ನು ಹೊತ್ತ (ಸಾರೋಟು) ವಾಹನ ಇನ್ನೇನು ಒಳ ಪ್ರವೇಶ ಪಡೆಯುವ ತರಾತುರಿಯಲ್ಲಿತ್ತು. ಅಷ್ಟು ಹೊತ್ತಿಗೇ ಅಭಿಮಾನಿಗಳು, ಕನ್ನಡದ ಕಟ್ಟಾಳುಗಳೆಲ್ಲ ಮುತ್ತಿಗೆ ಹಾಕಿದ್ದರು. ಪರಿಷತ್ ಅಧ್ಯಕ್ಷ ನಲ್ಲೂರು ಪ್ರಸಾದ್ ಹೇಗೋ ಮಾಡಿ ಕೆಳಗೆ ಇಳಿದಿದ್ದರು. ಹಿರಿಯ ಜೀವ ವೆಂಕಟಸುಬ್ಬಯ್ಯನವರಿಗೆ ಅದು ಕಷ್ಟವಾಯಿತು.

ನಲ್ಲೂರು ಪ್ರಸಾದ್ ಕೈ ಹಿಡಿದು ಇಳಿಸುವ ಪ್ರಯತ್ನ ಮಾಡಿದರು. ಅದು ಸಾಧ್ಯವಾಗಲಿಲ್ಲ. ಕೊನೆಗೆ ಅಲ್ಲಿದ್ದ ಪೊಲೀಸ್ ಅಧಿಕಾರಿಗಳು ನೆರವಿಗೆ ಬಂದರು.

ಹೇಗೋ ಮಾಡಿ ಅಧ್ಯಕ್ಷರನ್ನು ಹಿಂಭಾಗಿಲಿನಿಂದ ಪ್ರಧಾನ ವೇದಿಕೆಗೆ ಕರೆದೊಯ್ಯಲಾಯಿತು. ಪೊಲೀಸರು, ಕಾರ್ಯಕರ್ತರು ನಿಟ್ಟುಸಿರು ಬಿಟ್ಟರು.
ಮುಂದೆ ಪ್ರಧಾನ ವೇದಿಕೆಯಲ್ಲಿ ಭಾಷಣಗಳು ಶುರುವಾದವು…. ಸಭಾಂಗಣದ ಮೂರು ದಿಕ್ಕಿನಲ್ಲಿ ಜನವೋ ಜನ. ಎಲ್ಲಿಂದ ಇಣುಕಿದರೂ ವೇದಿಕೆಯಲ್ಲಿ ಯಾರಿದ್ದಾರೆ ಎಂಬುದೇ ಕಾಣಿಸದ ಸ್ಥಿತಿ. ಧೂಳೋ ಧೂಳು…!

ಭಾಷಣವನ್ನು ಕೇಳಿಸಿಕೊಳ್ಳಲು, ಸಾಹಿತಿಗಳನ್ನು ಅದರಲ್ಲೂ ವಿಶೇಷವಾಗಿ ರಾಜಕಾರಣಿಗಳ ದಂಡನ್ನು ನೋಡಲು ಕೆಲ ಹುಡುಗರು ಆ ಮೈದಾನದ ಮೂಲೆಯಲ್ಲಿದ್ದ ಬಾಸ್ಕೆಟ್ ಬಾಲ್ ಕಂಬವನ್ನೇ ಹತ್ತಿ ಕುಂತರು…!

ಅಧ್ಯಕ್ಷರು ಆಕಡೆ ವೇದಿಕೆ ಹತ್ತಿದ ಕೂಡಲೇ ಮೆರವಣಿಗೆಯ ಉದ್ದಕ್ಕೂ ಅವರ ಹಿಂದೆಯೇ ಬಂದಿದ್ದ ಅನೇಕ ಮಂದಿ ಕನ್ನಡದ ಕಟ್ಟಾಳುಗಳು ನಮ್ಮದೂ ಒಂದು ಫೋಟೊ ತೆಗೀರಿ ಸಾರ್ ಅಂದರು…!
ಈ ಕಡೆ ಭಾಷಣದ ಭರಾಟೆ ಆರಂಭವಾಗುತ್ತಿದ್ದಂತೆ ಜನಸಾಗರದಿಂದ ತಪ್ಪಿಸಿಕೊಳ್ಳಲು ಸಾಹಿತ್ಯ ಪ್ರಿಯರು, ಪುಸ್ತಕ ಪ್ರಿಯರು ನರಸಿಂಹಯ್ಯ ಸಭಾಂಗಣದತ್ತ ಹೆಜ್ಜೆ ಹಾಕಿದರು. ಪುಸ್ತಕ ಮಳಿಗೆಗಳಲ್ಲಿ ಜನ ತುಂಬಿಕೊಳ್ಳತೊಡಗಿದರು. ಪುಸ್ತಕದ ಮಾರಾಟ ಜೋರಾಗಿಯೇ ನಡೆಯಿತು…
ಮಿತ್ರ ಎ.ಆರ್.ಮಣಿಕಾಂತ್ ಅವರ ನೀಲಿಮಾ ಪ್ರಕಾಶನದ ಮಳಿಗೆಯಲ್ಲಿ ಕೆಲಕಾಲ ಕುಂತೆ. ಮಣಿ ಅಭಿಮಾನಿಗಳು ಪುಸ್ತಕ ಕೊಂಡಿದ್ದಲ್ಲದೇ ಹಸ್ತಾಕ್ಷರಕ್ಕಾಗಿ ಹಾತೊರೆಯುತ್ತಿದ್ದರು. ಕಾಲೇಜು ಹುಡ್ಗೀರು ಆಟೋಗ್ರಾಫ್ ಪಡೆಯುತ್ತಿದ್ದರು…
ಪುಸ್ತಕ ಮಳಿಗೆಗಳಲ್ಲಿ ತಾಸುಗಟ್ಟಳೆ ಅಡ್ಡಾಡಿದೆ. ಕಾಣದೇ ಮರೆಯಾಗಿದ್ದ ಅನೇಕ ಮಂದಿ ಮಿತ್ರರು ಸಿಕ್ಕರು. ನನಗಿಷ್ಟವಾದ ಕೆಲ ಪುಸ್ತಕಗಳನ್ನು ಖರೀದಿಸಿದೆ.
ಉದ್ಘಾಟನಾ ಸಮಾರಂಭ ಮುಗಿದಾಗ ಸಂಜೆ ಸುಮಾರು ಐದೂವರೆ ಗಂಟೆ. ಅಕ್ಕಪಕ್ಕದಲ್ಲಿ ಎಲ್ಲಾದರೂ ಕಾಫಿ-ಟೀ ಸಿಕ್ಕೀತೆ ಎಂದು ಮಿತ್ರರ ಜೊತೆ ಹೊರಟಾಗ ನನ್ನ ಕ್ಯಾಮೆರಾ ಕಣ್ಣಿಗೆ ಸಿಕ್ಕ ಕೆಲ ದೃಶ್ಯಗಳು ಇಲ್ಲಿವೆ…

ಇದೇ ಅಧ್ಯಕ್ಷರು ಬಂದ ಸಾರೋಟು… ನಮ್ಮದೂ ಒಂದು ಫೋಟೊ ಇರಲಿ ಎಂದಿತು ಈ ಕುಟುಂಬ!

ಅಧ್ಯಕ್ಷರು ಇಳಿದು ಹೋದರು… ದುಡಿದ ನಾವಾದರೂ ಕೆಲಕಾಲ ವಿಶ್ರಾಂತಿ ಪಡೆಯೋಣ…!

ಕಾಮೆಂಟ್ಗಳು
ನಿಮ್ಮ ಜೊತೆ ನಾನೂ ಬಂದ ಹಾಗಿತ್ತು ಸರ್ ವಿವರಣೆ ಮತ್ತು ಫೋಟೊ.... ತುಂಬಾ ಧನ್ಯವಾದ...
-ಪ.ರಾಮಚಂದ್ರ,
ರಾಸ್ ಲಫ್ಫಾನ್, ಕತಾರ್.
ಫೋಟೋ ದೊಟ್ಟಿಗೆ ಸೊಗಸಾದ ವಿವರಣೆ.
ನಾನು ಇಲ್ಲೇ ಇದ್ದರು ನಂಗೆ ಹೋಗಲು ಆಗಲಿಲ್ಲ .ಅದೇ ಬೇಸರದ ಸಂಗತಿ.
ನೀವು ಬಂದಿದ್ದರೂ ಆ ಪಾಟೀ ಧೂಳು, ಜನಗಳ ಮಧ್ಯೆ ಕಳೆದು ಹೋಗುತ್ತಿದ್ದೀರೇನೋ...!! ಎರಡನೇ ದಿನ ಎರಡೆರಡು ಬಾರಿ ಹೋಗಿ ಮತ್ತೆ ಗಾಭರಿಯಾಗಿ ಓಡಿ ಬಂದಿದ್ದೆ! ಎಂಥಾ ಜನ ಅಂತೀರಿ?
ಚಂದ್ರಮುಖಿಗೆ ಬಂದಿದ್ದಕ್ಕೆ ಎಲ್ಲರಿಗೂ ಥ್ಯಾಂಕ್ಸ್
ಫೋಟೊಗಳು..
ವರದಿ ಎರಡೂ ತುಂಬಾ ಚೆನ್ನಾಗಿ ಬಂದಿದೆ...
ಕೊನೆಯ ದಿನ ಮಧ್ಯಾಹ್ನದ ಮೇಲೆ ನಾನೂ ಅಲ್ಲಿದ್ದೆ...
ಕನ್ನಡಕ್ಕಾಗಿ ಅಷ್ಟೆಲ್ಲ ಜನ ಸೇರಿದ್ದು ತುಂಬಾ ಖುಷಿ ಆಯ್ತು...
ಸಮ್ಮೇಳನದ ಎರಡನೇ ದಿನ ಬೆಳಿಗ್ಗೆಯೇ ನಿಮ್ಮನ್ನು ಮಣಿ ಅಂಗಡಿಯಲ್ಲಿ ನೋಡಿದೆ. ಮತ್ತೆ ಒಂದು ರೌಂಡು ಹಾಕಿ ನಿಮ್ಮನ್ನು ಮಾತಾಡಿಸುವ ಅಂದುಕೊಂಡರೆ ಬರುವುದರೊಳಗೆ ನೀವು ಮಾಯ..!