ಫೋಟೋಗ್ರಫಿ ಕಲಿಸಲು ಅಡ್ವೋಕೇಟ್...!!


(ವಿ.ಕೆ.ಮೂರ್ತಿ ಅಂದ ಕೂಡಲೇ ಕಾಗಜ್ ಕೆ ಫೂಲ್, ಪ್ಯಾಸಾ, ಪಾಕೀಜಾ... ಇವರ ಕಟ್ಟಾ ದೋಸ್ತ್ ಗುರುದತ್... ಎಲ್ಲವೂ ನಮ್ಮ ಕಣ್ಣ ಮುಂದೆ ಬಂದು ನಿಲ್ಲುತ್ತದೆ. ಇಡೀ ಇಂಡಿಯಾಕ್ಕೆ ಮೊಟ್ಟಮೊದಲ ಸಿನೆಮಾಸ್ಕೋಪ್ ಸಿನೆಮಾ (ಕಾಗಜ್ ಕೆ ಫೂಲ್) ಕೊಟ್ಟವರು, ಕಪ್ಪು-ಬಿಳುಪು ಫೋಟೋಗ್ರಫಿಗೆ ಹೊಸ ಭಾಷ್ಯ ಬರೆದವರು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಭಾಜನರಾದವರು... ವೆಂಕಟರಾಮ ಕೃಷ್ಣಮೂರ್ತಿ ಅವರೊಂದಿಗೆ ಕೆಲ ಕಾಲ ಕಳೆದರೆ ಹೇಗೆ? ತುಂಬ ಭಯದಿಂದಲೇ ನಮ್ ಟೀಮ್ ಅವರ ಮನೆಗೆ ಭೇಟಿ ಕೊಟ್ಟಿತು. ನಮಗೆ ನಿಜಕ್ಕೂ ಅಚ್ಚರಿ. ಯಾವ ಗತ್ತು-ಗೈರತ್ತೂ ಇಲ್ಲದೇ ಚಿಕ್ಕ ಮಗುವಿನಂತೆ ನಮ್ಮ ಅವರು ಮಾತನಾಡಿದ್ದು ಬರೋಬ್ಬರಿ ಒಂದೂವರೆ ತಾಸು...! ವಾಯಲಿನ್ ಕಲಿತದ್ದು, ನಟನಾಗಬೇಕು ಅಂದುಕೊಂಡಿದ್ದು, ಫೋಟೋಗ್ರಫಿ ಶುರು ಮಾಡಿದ್ದು, ಮುಂಬೈ ಸಿನೆಮಾ ಜಗತ್ತಿನ ಬಾಗಿಲು ತಟ್ಟಿದ್ದು, ಗುರುದತ್ ಜೊತೆ ಸೇರ್ಕೊಂಡು ಮಾಸ್ಟರ್ ಪೀಸ್ ಗಳನ್ನು ಕೊಟ್ಟಿದ್ದು... ಎಲ್ಲವನ್ನೂ ಅವರು ಮಾತನಾಡಿದರು. ಇಷ್ಷಾದರೂ ಅವರ ಜೊತೆ ಇನ್ನೂ ಮಾತನಾಡಬೇಕು ಎಂಬ ಆಸೆ ನಮಗೆ. ಕೊನೆಗೆ ಅವರೇ ನಮ್ಮನ್ನೆಲ್ಲ ನಿಲ್ಲಿಸಿ ಫೋಟೋ ತೆಗಿದಿದ್ದು... ಹೀಗೆ ಕಳೆದ ಕೆಲ ಆಪ್ತ ಕ್ಷಣಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು ಅನಿಸಿತು. ಈ ಅಂತರಂಗದ ಮಾತುಕತೆಯ ಮೊದಲ ಭಾಗ ಇದು...)


ಆ್ಯಕ್ಟರ್ ಆಗಲು ಹೊರಟು...

ನನಗೆ ನಾಟಕವೆಂದರೆ ಬಹಳ ಇಷ್ಟ. ಆಗಿನ ಕಾಲಕ್ಕೆ ನಾನು ವೃತ್ತಿಪರ ನಾಟಕ ಕಂಪೆನಿಗೆ ಹೊರಟು ಹೋಗಿದ್ದೆ. ಆಗಿನ್ನೂ ಹದಿನಾಲ್ಕು ಹದಿನೈದು ವರ್ಷ ನನಗೆ. ಆಕ್ಟರ್ ಆಗಬೇಕು ಅಂತ ಆಸೆ ಇತ್ತು ನನಗೆ. ಮನೆಯಲ್ಲಿ ಎಜುಕೇಶನ್ ಬಿಟ್ಟು ಅಲ್ಲಿಗೇಕೆ ಹೋಗ್ತಿ ಅಂತ ಬೈತಾ ಇದ್ರು. ಕೊನೆಗೆ ಇದು ಸರಿಯಲ್ಲ ಅಂತ ನನಗೇ ಅನಿಸಿತು. ಕೊಂಚ ಬ್ರೈನ್ ಡೆವಲಪ್ ಆದ ಮೇಲೆ ಎಲ್ಲದಕ್ಕೂ ಬೇಸಿಕ್ ಎಜುಕೇಶನ್ ಇರಬೇಕು ಅನಿಸಿತು.
ಆದರೂ ನನಗೆ ಆಕ್ಟರ್ ಆಗಬೇಕು ಅಂತಲೇ ಇತ್ತು. ಯಾಕೆಂದರೆ ಫಿಲ್ಮ್ ನನ್ನ ಬ್ಲಡ್ನಲ್ಲೇ ಹೊರಟು ಹೋಗಿತ್ತು. ಏನಾದ್ರೂ ಮಾಡಿ ಫಿಲ್ಮನಲ್ಲಿ ಕೆಲ್ಸ ಮಾಡಬೇಕು, ಏನಾದರೂ ಕಲ್ತುಕೋಬೇಕು ಎಂಬ ತುಡಿತ ಇತ್ತು. ನಾನು ಹೈಸ್ಕೂಲ್ ಎಜುಕೇಶನ್ ಮುಗಿಸೋದಕ್ಕೆ ಮೊದಲು, ಪೇಪರನಲ್ಲಿ ಯಾವುದೋ ಒಂದು ಜಾಹೀರಾತು ನೋಡಿದೆ. ಒಂದು ರೂಪಾಯಿ ಕಳಿಸಿದ್ರೆ, ಆಕ್ಟರ್ ಆಗಿಲ್ಲಿಕ್ಕೆ ಬೇಕಾದ ಡೀಟೇಲ್ ಎಲ್ಲ ಕಳಿಸ್ತೇವೆ ಅಂತ ಏನೇನೋ ಇತ್ತು. ಇದು ಸುಮಾರು 55 ವರ್ಷಗಳ ಹಿಂದೆ. ನಾನು ಒಂದು ರೂಪಾಯಿ ಸ್ಟಾಂಪು ಅಂಟಿಸಿ ಕಳಿಸಿದೆ. ಅದಕ್ಕೆ ಅವರು ಆಕ್ಟರ್ ಆಗಬೇಕಾದ ವಿವರ ಎಲ್ಲ ಕಳಿಸಿದ್ದರು. ಆಕ್ಟರ್ ಆಗೋಕೆ ಟ್ರೈನಿಂಗ್ ಕೊಡ್ತೀವಿ, 250 ರೂ. ಕಳಿಸಿ ಅಂತ ಇತ್ತು. ಇನ್ನೂರ ಐವತ್ತು ರೂಪಾಯಿ! ಆಗಿನ ಕಾಲದಲ್ಲಿ ಅದನ್ನು ಇಮ್ಯಾಜಿನ್ ಮಾಡಿಕೊಳ್ಳುವುದೇ ಕಷ್ಟ. ನನ್ನ ತಂದೆ ಮೈಸೂರಲ್ಲಿ ಸರಕಾರಿ ಆಯುರ್ವೇದಿಕ್ ಆಸ್ಪತ್ರೆ ಚೀಫ್ ಡಾಕ್ಟರ್ ಆಗಿದ್ದರು. ಆಗ ಅವರಿಗೆ ಬರುತ್ತಿದ್ದ ಸಂಬಳ ಆರವತ್ತು ರೂ.! ನನಗೆ ಅವರು ಇನ್ನೂರೈವತ್ತು ರೂ. ಕೊಟ್ಟು ಬಾಂಬೆಗೆ ಆಕ್ಟರ್ ಆಗಿಲ್ಲಕ್ಕೆ ಕಳಿಸ್ತಾರಾ? ಅದೆಲ್ಲ ಆಗೋ ಕೆಲ್ಸ ಅಂತ ನಾನೂ ಅದನ್ನ ಮರೆತು ಬಿಟ್ಟೆ. ಎಸ್ಎಸ್ಎಲ್ಸಿಯಲ್ಲಿ ಇರೋವಾಗಲೂ ಇನ್ನೊಂದು ಪ್ರಯತ್ನ ಮಾಡಿದ್ದೆ. ಆಗಲೂ ಆಗಲಿಲ್ಲ.

ವಾಯಲಿನ್ ಮೋಹ...
ನಂತರ ಇವನ್ನೆಲ್ಲ ಬಿಟ್ಟು ಮ್ಯೂಸಿಷಿಯನ್ ಆಗಬೇಕು ಅಂತ ವಾಯಲಿನ್ ಪ್ರಾಕ್ಟಿಸ್ ಮಾಡೋಣಾ ಅಂತ ಶುರು ಮಾಡಿದೆ. ಆವಾಗ ನಂಗೆ ಕೇಶವಮೂರ್ತಿ ಅಂತ ದೊಡ್ಡ ವಿಧ್ವಾನ್ ಸಿಕ್ಕಿದ್ರು. ಆವಾಗ ಅವರು ಸೆವೆನ್ ಸ್ಟ್ರಿಂಗ್ ವಾಯಲಿನ್ ನುಡಿಸ್ತಾ ಇದ್ರು. ಚೌಡಯ್ಯ ಬಿಟ್ಟರೆ ಇವರೇ ಸೆವೆನ್ ಸ್ಟ್ರಿಂಗ್ ನುಡಿಸ್ತಾ ಇದ್ದಿದ್ದು. ಅವರು ನನಗೆ ಮಾಡೆಲ್ ಅನಿಸಿತು. ಮೊದಲ ದಿನ ಹೋದಾಗ, ಅವರ ವಾಯಲಿನ್ನ್ನೇ ಕೊಟ್ಟರು ನುಡಿಸಿ ಅಂತ. ನುಡಿಸಿದೆ, ಪರವಾಗಿಲ್ಲ ನುಡಿಸಬಹುದು ಅಂದರು. ಮುಂದೆ ಅವರು ಮೈಸೂರಿಂದ ಹೊರಗಡೆ ಕಛೇರಿ ನಡೆಸಲು ಹೋದ್ರು, ನಾನು ಬರೋವರ್ಗೂ ಭೈರವಿ ವರ್ಣ ಪ್ರಾಕ್ಟೀಸ್ ಮಾಡು ಅಂತ ಹೇಳಿದ್ರು. ಫಿಲ್ಮ್ ಆಗಲಿಲ್ಲ, ವಾಯಲಿನ್ನಲ್ಲಾದರೂ ಸಾಧನೆ ಮಾಡೋಣ, ನಾನಾದರೂ ಚೌಡಯ್ಯ ಅವರಂತೆ ಆಗೋಣ ಅಂದುಕೊಂಡೆ. ಪ್ರತಿದಿನ ಎಂಟರಿಂದ ಹತ್ತು ಗಂಟೆ ಪ್ರಾಕ್ಟೀಸ್ ಮಾಡ್ತಾ ಇದ್ದೆ. ಮನೆಯಲ್ಲಿದ್ದುದು ನಾನು ಮತ್ತು ನನ್ನ ಅಪ್ಪ ಇಬ್ಬರೇ. ನನ್ನ ತಾಯಿ ಬಹಳ ಹಿಂದೆ ತೀರಿಕೊಂಡಿದ್ದರು. ನನ್ನ ಬ್ರದರ್ ಮದ್ರಾಸ್ನಲ್ಲಿ ಕೆಲ್ಸ ಮಾಡ್ತಾ ಇದ್ರು. ಹೀಗೆ ಎರಡು ಮೂರು ತಿಂಗಳು ವಾಯಲಿನ್ ನುಡಿಸ್ತಾ ಇದ್ದೆ.

ಆರವತ್ತು ರೂಪಾಯಿಗೂ ಪರದಾಟ...
ಆ ಹಂತದಲ್ಲಿ ಬೆಂಗಳೂರಿನಲ್ಲಿ ಆಕ್ಯುಪೇಶನ್ ಇನ್ಸ್ಟಿಟ್ಯೂಟ್ (ಜಯಚಾಮರಾಜೇಂದ್ರ ಪಾಲಿಟೆಕ್ನಿಕ್)ಓಪನ್ ಆಯ್ತು. ಬೆಂಗಳೂರಲ್ಲಿರುವ ನನ್ನ ಕಸಿನ್ಗೆ ಅರ್ಜಿ ಕಳಿಸಿದೆ. ಆ ಹೊತ್ತಿಗೆ ನಮ್ಮ ಅಪ್ಪ ರಿಟೈರ್ ಆಗಿದ್ರು. ನಮ್ಮ ಹತ್ರ ಹಣವೇ ಇರಲಿಲ್ಲ. ಶಿಫಾರಸು ಪತ್ರದ ಮೇಲೆ ನನಗೆ ಸೀಟೇನೋ ಸಿಕ್ತು. ಆದ್ರೆ ಅಡ್ಮಿಷನ್ ಆಗೋಕೆ 50-60 ರೂ. ಕೊಡಬೇಕಿತ್ತು. ಎಲ್ಲಿಂದ ತರೋದು? ನನಗೆ ತುಂಬಾ ಬೇಜಾರಾಗಿತ್ತು. ಆಗ ನನಗೆ 16-17 ವರ್ಷ. ಅಲ್ಲಿವರೆಗೆ ನಾನು ಅತ್ತಿದ್ದೇ ಇಲ್ಲ. ಮನೆಯಲ್ಲಿ ಅಮ್ಮ ಇರಲಿಲ್ಲ, ಆದ್ರೂ ನನಗೆ ಅಳು ಅನ್ನೋದು ಗೊತ್ತೇ ಇರಲಿಲ್ಲ. ಬೆಂಗಳೂರಿನಲ್ಲಿ ನನ್ನ ಫ್ರೆಂಡ್ ಒಬ್ಬ ಅಂಗಡಿನಲ್ಲಿ ಅಕೌಂಟೆಂಟ್ ಆಗಿ ಕೆಲ್ಸ ಮಾಡ್ತಾ ಇದ್ದ. ನನ್ನ ಕಷ್ಟ ಸುಖ ಏನಿದ್ರೂ ಅವನ ಹತ್ರ ಹೇಳಿಕೊಳ್ತಾ ಇದ್ದೆ. ಆವತ್ತೂ ಅವನ ಹತ್ರ ಹೋಗಿದ್ದೆ. ಸೀಟು ಸಿಗಲಿಲ್ಲ ಅಂತ ಹೇಳುತ್ತಾ ದುಃಖ ತಡೆಯಲಾರದೆ ಅತ್ತೇ ಬಿಟ್ಟಿದ್ದೆ. ಅವ ನನ್ನ ಅಲ್ಲಿಯೇ ಕೂರಿಸಿ "ಯೇ, ಯಾಕ್ ಆಳ್ತಿಯಾ? ನಾನೇನು ನಿನ್ನ ಪಾಲಿಗೆ ಸತ್ತೋಗಿದ್ದೀನಾ? ನಿನಗೆ ಓದ್ಬೇಕು ತಾನೆ, ನಾಳೆ ಬಾ ಆರವತ್ತು ರೂಪಾಯಿ ಕೊಡ್ತೇನೆ. ಫೀಸ್ ಕಟ್ಟು, ಹೋಗಿ ಸೇರ್ಕೊ. ನೀನು ಈ ಸ್ಟಡಿ ಪೂರ್ತಿ ಮಾಡೋದು ನನ್ನ ಜವಾಬ್ದಾರಿ'' ಅಂದ. ಈ ಫ್ರೆಂಡ್ನಿಂದ ನನಗೆ ಸ್ಟಡಿ ಮುಂದುವರಿಸಲು ಸಾಧ್ಯವಾಯ್ತು. ಹೀಗೆ ನನ್ನ ಸ್ಟಡಿ ಆರಂಭವಾಯ್ತು.


ರಾಮಕೃಷ್ಣ ಸ್ಟುಡೆಂಟ್ ಹೋಮ್ನಲ್ಲಿ (ಈಗಲೂ ಇದು ವಿ.ವಿ.ಪುರಂನಲ್ಲಿದೆ) ನನ್ನ ಸ್ನೇಹಿತನೊಬ್ಬ ಇದ್ದ. ಆಗಿನ ಕಾಲದಲ್ಲಿ ಫ್ರೀ ಅಕಾಮಡೇಶನ್ ಸಿಗ್ತಾ ಇತ್ತು ಅಲ್ಲಿ. ನಾನು ಪ್ರಯತ್ನ ಮಾಡಿದರೂ ಲೇಟ್ ಆದ ಕಾರಣ ಸೀಟ್ ಸಿಗಲಿಲ್ಲ. ಆದರೆ, ಅದರ ಸೆಕ್ರೆಟರಿ ನನ್ನನ್ನು ಕರೆದು "ಲುಕ್ ಯಂಗ್ ಬಾಯ್, ಯು ಆರ್ ಲೇಟ್. ಬಟ್ ಯು ಕ್ಯಾನ್ ಹ್ಯಾವ್ ದಿ ಫುಡ್ ಹಿಯರ್ ಫಾರ್ ಫ್ರೀ, ಬೋತ್ ದಿ ಟೈಮ್'' ಅಂತಂದ್ರು. ನಂಗೆ ಎಷ್ಟು ಖುಷಿ ಆಯ್ತು ಅಂದ್ರೆ ಅದನ್ನ ಎಕ್ಸಪ್ರೆಸ್ ಮಾಡಲಿಕ್ಕೇ ಸಾಧ್ಯವಿಲ್ಲ ಬಿಡಿ. ಮುಂದೆ ನನ್ನ ಇನ್ನೊಬ್ಬ ಫ್ರೆಂಡ್ ಬೆಂಗಳೂರಲ್ಲಿ ಬಿಎಸ್ಸಿ ಮಾಡ್ತಾ ಇದ್ದ. ಆತ ಒಬ್ಬನೇ ರೂಮ್ ಮಾಡ್ಕೊಂಡಿದ್ದ, ನೀನು ಬಾ ನಂಜೊತೆ ಇರು ಅಂದ. ಆಗ ಆತ ಕೊಡುತ್ತಿದ್ದ ಬಾಡಿಗೆ ನಾಲ್ಕೂವರೆ ರೂಪಾಯಿ. ಇದರಿಂದಾಗಿ ನನ್ನ ಲಾಡ್ಜಿಂಗ್ ಮತ್ತು ಊಟದ ಸಮಸ್ಯೆ ಪರಿಹಾರವಾಯಿತು.

ಕೆಮೆಸ್ಟ್ರೀ, ಆಲ್ಜೀಬ್ರಾ, ಟ್ರಿಗ್ನಾಮೇಟರಿ...
ಆದರೆ, ನಾನೇನು ಗುಡ್ ಸ್ಟುಡೆಂಟ್ ಆಗಿರಲಿಲ್ಲ. ಕೆಮೆಸ್ಟ್ರೀ ನನ್ನ ತಲೆಗೆ ಹೋಗ್ತಾನೇ ಇರಲಿಲ್ಲ. ಹೋಗ್ಲಿ ಆದಾದರೂ ಓಕೆ. ಆದರೆ, ಟ್ರಿಗ್ನಾಮೇಟರಿ? ಆಲಜಿಬ್ರಾ? ಇದು ನನ್ನ ತಲೆಗೆ ಹತ್ತುತ್ತಲೇ ಇರಲಿಲ್ಲ. ಐ ಹೇಟ್ ಬೋತ್ ದ ಸಬ್ಜೆಕ್ಟ್! ಆಗ ಸುಮಾರು 13 ಪ್ರೊಫೆಶನಲ್ ಕೋರ್ಸ್ ಗಳಿದ್ದವು. ಟೈಲರಿಂಗ್ ನಿಂದ ಆರಂಭಿಸಿ ಬೂಟ್ ಮ್ಯಾನುಫ್ಯಾಕ್ಚರಿಂಗ್ ತನಕ. ಆದರೆ, ಸರಿಯಾದ ಪ್ರೊಫೆಶನಲ್ ಅಪ್ರೋಚ್ ಇರಲಿಲ್ಲ. ನಮಗೆ ಫೋಟೋಗ್ರಫಿ ಹೇಳಿಕೊಡುತ್ತಿದ್ದವರು ಒಬ್ಬರು ಅಡ್ವೊಕೇಟ್. ಬಿಎ ಎಲ್ಎಲ್ಬಿ ಮಾಡಿದ್ದವರು. ಅವರು ಏನು ಹೇಳಿಕೊಡಬಹುದಿತ್ತು ಹೇಳಿ? ಅವರು ಕೇವಲ ಸ್ಟಿಲ್ ಫೋಟೊ ತೆಗಿತಾ ಇದ್ದರು. ಅವರೇ ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್!
ಆಗ ಬಾಂಬೆ ಕಾಲೇಜುಗಳಿಂದ ಪ್ರೋಫೆಸರ್ಗಳು ಬಂದಿದ್ದರು. ಅವರ ಬಳಿ ಹೋಗಿ ನಾನು ಕೇಳಿದೆ; ಬಾಂಬೆ ಕಾಲೇಜುಗಳಲ್ಲಿ ಫೋಟೊಗ್ರಫಿಯಲ್ಲಿ ಈ ಸಬ್ಜೆಕ್ಟ್ಗಳೆಲ್ಲ ಇವೆಯಾ? ಅಂತ. ಅವರದಕ್ಕೆ; "ನೋ ನೋ, ಆಲ್ ದೀಸ್ ಆರ್ ಸಿಲ್ಲಿ ಥಿಂಗ್ಸ್' ಅಂದರು. ಆಮೇಲೆ ಅವರನ್ನೇ ಮುಂದೆ ಮಾಡಿಕೊಂಡು ಪ್ರಿನ್ಸಿಪಾಲರನ್ನು, ಹೆಡ್ ಆಫ್ ದಿ ಡಿಪಾರ್ಟ್ ಮೆಂಟ್ ಭೇಟಿ ಮಾಡಿ ಕಂಪ್ಲೇಂಟ್ ಮಾಡಿದ್ವಿ. ಅವರು ಇದೆಲ್ಲಾ ಬೇಡ್ವಾ ಹಾಗಾದರೆ? ಅಂತ ಹೇಳಿ ಒಬ್ಬರು ದೇಸಾಯಿ ಅಂತಿದ್ದರು ಅವರನ್ನು ಕರೆಸಿದ್ರು. ಅವರು ಬಂದವರು, ಟ್ರಿಗ್ನಾಮೇಟರಿ, ಆಲ್ಜಿಬ್ರಾ ಫೋಟೋಗ್ರಫಿಗೆ ಸಂಬಂಧವೇ ಇಲ್ಲದ್ದು ಅಂತ ತೀರ್ಪು ಕೊಟ್ಟರು. ಸರಿ ಅಂದ್ಹೇಳಿ ಆ ಸಬ್ಜೆಕ್ಟನ್ನೇ ತೆಗೆದು ಹಾಕಿದರು. ಮೊದಲ ಪರೀಕ್ಷೆ ಹೊತ್ತಿಗೆ ಆ ಸಬ್ಜೆಕ್ಟ್ ಗಳೇ ಇರಲಿಲ್ಲ. ಅಬ್ಬಾ! ನಮಗಂತೂ ಬಾರೀ ನಿರಾಳ ಆಗಿತ್ತು.

ಆದರೂ ನಾನು ಆರ್ಕೆಷ್ಟ್ರಾ, ನಾಟಕ, ಸಂಗೀತ ಅಂದ್ಕೊಂಡು ಅದೂ ಇದೂ ಪ್ರೋಗ್ರಾಂ ಮಾಡ್ಕೊಂಡು ಇನ್ಸ್ಟಿಟ್ಯೂಟ್ನಲ್ಲಿ ಸಲ್ಪ ಫೇಮಸ್ ಆಗಿದ್ದೆ. ಒಂದಿಷ್ಟು ಹುಡುಗರನ್ನು ಜಮಾಯಿಸಿಕೊಂಡು ಕಾರ್ಯಕ್ರಮ ಮಾಡ್ತಾ ಇದ್ದೆ. ಆರ್ಕೆಷ್ಟ್ರಾ ಮಾಡ್ತಾ ಇದ್ದೆ. ಇದನ್ನೆಲ್ಲ ಮಾಡೋಕೆ ಫಂಡ್ ಬೇಕಲ್ಲ? ಅದಕ್ಕೆ ಸ್ಕೂಲ್ ಬಾಯ್ಸ್ ಫಂಡ್, ಪ್ಲೀಸ್ ಡೊನೇಟ್ ಅಂತ ಬೋರ್ಡ್ ನೇತ್ಹಾಕ್ಕೊಂಡು ಆಗಿನ ಕಾಲದಲ್ಲಿ ಹೆಸರು ಮಾಡಿದ ದೊಡ್ಡವರ ಮನೆಗೆ ಹೋಗ್ತಾ ಇದ್ವಿ. ಆಗ ಒಂದಿನ ನಾವು ಸರ್ ಸಿ.ವಿ.ರಾಮನ್, ಎಸ್.ಜೆ.ಭಗವಾನ್ ಮನೆಗೆ ಹೋಗಿ ಪ್ರೋಗ್ರಾಂಗೆ ದುಡ್ಡು ಕಲೆಕ್ಟ್ ಮಾಡಿಕೊಂಡು ಬಂದಿದ್ದೆವು.

ಒಂದು ತಮಾಷಿ ಹೇಳ್ತೀನಿ ಕೇಳಿ...
ಇನ್ನೊಂದು ತಮಾಷಿ ಸಂಗತಿ ಹೇಳ್ತೀನಿ ನಿಮಗೆ; ನಂಗೆ ಟ್ರಿಗ್ನಾಮೇಟರಿ, ಅಲ್ಜಿಬ್ರಾ ಜೊತೆಗೆ ಕೆಮೆಸ್ಟ್ರೀ ಕೂಡ ಅರಗಿಸಿಕೊಳ್ಳಲು ಆಗುತ್ತಿರಲಿಲ್ಲ. ಪರೀಕ್ಷೆ ಕೂಡ ಬಂತು. ಪ್ರೊಮೋಷನ್ ಕೂಡ ಸಿಗಬೇಕಲ್ಲ? ಪರೀಕ್ಷೆ ಹಿಂದಿನ ದಿನ ಕೆಮೆಸ್ಟ್ರೀ ಪ್ರೊಫೆಸರ್ ಮನೆಗೆ ಹೋದೆ. ಆವಾಗ ನಾನು ಕಾರ್ಯಕ್ರಮಗಳನ್ನು ಮಾಡಿ ಫೇಮಸ್ ಆಗಿದ್ದೆನಲ್ಲ, ಬನ್ನಿ ಬನ್ನಿ ಕೃಷ್ಣಮೂರ್ತಿ ಎಂದು ಕರೆದು ಮಾತಾಡಿಸಿದರು ಪ್ರೋಫೆಸರ್ ಸಾಹೇಬರು. ಈ ಟ್ರಿಗ್ನಾಮೇಟರಿ, ಅಲ್ಜಿಬ್ರಾ ಜೊತೆ ಕೆಮೆಸ್ಟ್ರೀ ಕೂಡ ಅರ್ಥವಾಗದು ನನಗೆ ಎಂದೆ. ನಾಳೆ ಎಗ್ಸಾಂ ಇದೆ, ಇವತ್ತು ಬಂದಿದ್ದೀರಲ್ಲಾ, ಏನು ಮಾಡ್ಲಿಕಾಗತ್ತೆ ಹೇಳಿ? ಅಂದರು. ಏನೂ ಇಲ್ಲ ನೀವು ಇದರಿಂದ ನನ್ನ ಪಾರು ಮಾಡಬೇಕಾದರೆ ನಾಳಿನ ಎಗ್ಸಾಂನ ಕ್ವಶ್ಚನ್ ಎಲ್ಲ ಕೊಟ್ಟುಬಿಡಿ ಅಂದೆ. ಅದಕ್ಕೆ ಅಯ್ಯೋ ಅದ್ಹಾಗೆ ಆಗತ್ತೆ? ಅಂದ್ರು. ನಾನು, ಈ ಫೋಟೋಗ್ರಫಿಗೂ ಕೆಮೆಸ್ಟ್ರೀಗೂ ಏನು ಸಂಬಂಧ? ಕಲ್ತು ಏನು ಪ್ರಯೋಜನ ಅಂತೆಲ್ಲ ವಾದ ಮಾಡಿದೆ. 'ನೀನು ನನ್ನನ್ನಆಕ್ವರ್ಡ್ ಪೊಸಿಶನ್ನಲ್ಲಿ ಸಿಕ್ಕಿ ಹಾಕ್ಸಿತ್ತಿದ್ದಿಯಾ' ಅಂದ್ರು. ನಿಮಗೆಂಥ ಆಕ್ವರ್ಡ್, ನನಗೆ ಆಗಿರೋದು ಆಕ್ವರ್ಡ್ ಅಂದೆ. ಅವರು ನನ್ನನ್ನು ಮನೆಯೊಳಗೆ ಕರಕೊಂಡು ಹೋಗಿ ನಾಳೆ ಪರೀಕ್ಷೆಗೆ ಬರುವ ಎಲ್ಲ ಪ್ರಶ್ನೆಗಳನ್ನು ಕೊಟ್ಟರು!! ಆದ್ರೆ ನಂಗೆ ಉತ್ತರಗಳು ಬರಬೇಕಲ್ಲ? ನಾನು ಕೂಡ್ಲೆ ರಾತ್ರಿ ಬಿಎಸ್ಸಿ ಓದ್ತಾ ಇರೋ ನನ್ನ ಫ್ರೆಂಡ್ ಬಳಿ ಹೋಗಿ ಎಲ್ಲ ಪ್ರಶ್ನೆಗಳಿಗೆ ಆನ್ಸರ್ ಬರೆದುಕೊಂಡು ಬಂದು ಬೆಳಗಿನ ಜಾವ ಎರಡು ಗಂಟೆ ತನಕ ಆನ್ಸರ್ಗಳನ್ನು ಪದ್ಯದ ರೀತಿಯಲ್ಲಿ ಉರು ಹೊಡೆದೆ. ಇನ್ನು ನನ್ನ ಕೆಲವು ಕ್ಲೋಸ್ ಫ್ರೆಂಡ್ಸ್ ಗಳನ್ನು ಕರೆದು, ಬಡ್ಡಿ ಮಕ್ಕಳ್ರಾ ನೋಡ್ಕೊಳ್ಳಿ ಇದು ಕ್ವಶ್ಚನ್ ಪೇಪರ್ ಅಂತ ಅವರಿಗೂ ತೋರಿಸಿ ಹೆಲ್ಪ್ ಮಾಡಿದ್ದೆ. ಹೀಗೆ ಮಾಡಿ ಫಸ್ಟ್ ಈಯರ್ ಪಾಸ್ ಮಾಡ್ಕೊಂಡೆ.


ಇಂಗ್ಲಿಷ್ ಸಿನೆಮಾ ಅಂದ್ರೆ ಪ್ರಾಣ...
ಶಾಲೆಗೆ ಹೋಗೋವಾಗ ತುಂಬಾ ಫಿಲಮ್ ನೋಡ್ತಾ ಇದ್ದೆ. ಅವುಗಳನ್ನು ನೋಡಿ ನೋಡಿಯೇ ಈ ಸಿನೆಮಾ ರಂಗದತ್ತ ಆಕರ್ಷಿತನಾಗಿದ್ದೆ. ಕನ್ನಡ ಸಿನೆಮಾಗಳ ಬಗ್ಗೆ ಅಷ್ಟೊಂದು ನೆನಪಿಲ್ಲ. ಆಗ ಯಾರ್ಯಾರೋ ನಾಯಕರುಗಳಿದ್ದರು. ಆದರೆ, ನನ್ನ ಹೆಚ್ಚಿನ ಆಕರ್ಷಣೆ ಅಂತ ಇದ್ದಿದ್ದು ಇಂಗ್ಲಿಷ್ ಸಿನೆಮಾಗಳತ್ತ. ಜಾನಿ ರೇಸ್ಮುಲ್ಲರ್ ಅಂತ ಒಬ್ಬರು ಟಾರ್ಜಾನ್ ರೋಲ್ ಮಾಡ್ತಾ ಇದ್ದರು. ಆಗಿನ ಕಾಲದಲ್ಲಿ ಹೀ ವಾಸ್ ದಿ ಫಸ್ಟ್ ಟಾರ್ಜಾನ್. ನಮ್ಮ ಏಜ್ನಲ್ಲಿ ಟಾರ್ಜಾನ್ ಥರದ ಆ್ಯಕ್ಷನ್ ಸಿನೆಮಾಗಳು ಬರುತ್ತಿದ್ದವು. ಎಷ್ಟೋ ಜನ ವರ್ಲ್ಡ್ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಚಾಂಪಿಯನ್ ಆದ ಅಥ್ಲೀಟ್ ಗಳು ಇದರಲ್ಲಿ ಮೇಜರ್ ರೋಲ್ ಮಾಡ್ತಾ ಇದ್ದರು. ಮತ್ತೆ ಹಾರ್ಸ್ ರೈಡಿಂಗ್, ಕೌಬಾಯ್ ಫಿಲ್ಮ್ ಗಳನ್ನೇ ನಾನು ಜಾಸ್ತಿ ನೋಡ್ತಿದ್ದೆ.


ಸಿನೆಮಾದಲ್ಲಿ ನಾಯಕನಾಗಲಾಗಲೀ, ಯಾವುದೇ ಪಾತ್ರ ಮಾಡಲು ಸಾಧ್ಯವಾಗದೇ ಇದ್ದುದರಿಂದ ಟೆಕ್ನಿಕಲ್ ಸೈಡ್ ಹೊರಟು ಹೋಗಿದ್ದೆ. ಈ ಮೋಹಕ್ಕೆ ಬಿದ್ದೇ ನಾನು ಕದ್ದು ಮುಚ್ಚಿ ಬಾಂಬೆಗೆ ಹೋರಟು ಬಿಟ್ಟಿದ್ದೆ. ಅಲ್ಲಿನ ಸ್ಟುಡಿಯೋಗೆ ಹೋದರೆ ನನ್ನ ಗೇಟ್ ಒಳಗೂ ಸೇರಿಸುತ್ತಿರಲಿಲ್ಲ. ನಾನು ಹಾಫ್ ಪ್ಯಾಂಟ್, ಪೈಜಾಮಾ ಹಾಕ್ಕೊಂಡಿದ್ರೆ ಯಾರು ಬಿಡ್ತಾರೆ ನನ್ನ? ಆವಾಗಿನ್ನೂ ನಾನು ಎಸ್ಸೆಸ್ಸೆಲ್ಸಿ ಮಾಡಿರಲಿಲ್ಲ. ಮತ್ತೆ ವಾಪಾಸು ಬಂದು ಫೋಟೋಗ್ರಫಿ ಕೋರ್ಸ್ ಮಾಡಿದೆ ಆ ಮಾತು ಬೇರೆ.

ದೇವಸ್ಥಾನದಂತಿತ್ತು ಸಿನೆಮಾ ಇಂಡಸ್ಟ್ರೀ...
ಫೋಟೋಗ್ರಫಿ ಡಿಪ್ಲೊಮಾ ಕೋರ್ಸ್ ಮಾಡಿದ ನಂತರವೂ ನನಗೆ ನೇರವಾಗಿ ಸಿನೆಮಾ ಇಂಡಸ್ಟ್ರಿಯೊಳಗೆ ಬಿಡಲಿಲ್ಲ. ಆಗ ಮುಂಬೈನಲ್ಲಿ ಸಿನೆಮಾ ಇಂಡಸ್ಟ್ರೀ ಅಂದ್ರೆ ಭಾರೀ ಕಟ್ಟುನಿಟ್ಟು. ಯಾರನ್ನೂ ಒಳಗೆ ಬಿಡುತ್ತಿರಲಿಲ್ಲ. ಅದು ಒಂದು ದೇವಸ್ಥಾನದ ಥರ. ಒಳಗೆ ಹೋಗಬೇಕಂದರೆ ತುಂಬಾ ಕಷ್ಟ ಇತ್ತು. ಡಿಪ್ಲೊಮಾ ಮಾಡಿದ ನಂತರ ನನಗೆ ಫೋಟೊಗ್ರಫಿ ಪ್ರೊಫೆಸನಲ್ಸ್ ಹತ್ರ ತರಬೇತಿಗೆ ಹಾಕಿದರು. ಪ್ರಕಾಶ್ ಸ್ಟುಡಿಯೋದಲ್ಲಿ ಪ್ರಾಕ್ಟಿಕಲ್ ಟ್ರೈನಿಂಗ್ ಮಾಡಿದೆ. ಅದೆಲ್ಲ ಆದ ಮೇಲೆ ಬಾಂಬೆಯಿಂದ ವಾಪಾಸ್ ಬರೋಕೆ ಇಷ್ಟ ಇರಲಿಲ್ಲ. ಆದರೆ ಏನು ಮಾಡೋದು ಅಂತ ಚಿಂತೆ. ನನ್ನ ಫ್ರೆಂಡು ಧೈರ್ಯ ತುಂಬಿದ. ಯಾರಾದರೂ ಮಿನಿ ಡೈರೆಕ್ಟರ್ ಬಳಿ ಕರೆದೊಯ್ಯುವೆ ಎಂದ. ವಾಯಲಿನ್ ನುಡಿಸಬಹುದು, ಅದರಿಂದ ದುಡ್ಡು ಬರುತ್ತೆ, ಪ್ರಯತ್ನ ಮಾಡು ಅಂತ ಹೇಳಿದ.


(ಪ್ಯಾಸಾ ಚಿತ್ರದಲ್ಲಿ ವಿ.ಕೆ.ಮೂರ್ತಿ ಅವರ ಕಪ್ಪು-ಬಿಳುಪಿನ ಕೈಚಳಕ)

ಮೋಹನ್ ಸೆಹಗಲ್ ಅಂತ ಒಬ್ರು ಫ್ರೆಂಡ್ ಇದ್ರು. ಅವರು ಆಗಿನ ಕಾಲದಲ್ಲಿ ಭರತನಾಟ್ಯಂ ಡ್ಯಾನ್ಸರ್ ಆಗಿದ್ದರು. ನಾನು ವಾಯಲಿನ್ ನುಡಿಸುವುದನ್ನು ನೋಡಿ ಫೆಮಸ್ ಕೊರಿಯೋಗ್ರಾಫರ್ ಉದಯಶಂಕರ್ (ಕಥಕ್ ಶೈಲಿ), ರಾಮಗೋಪಾಲ್ ಅವರಿಗೆ ನನ್ನನ್ನು ಪರಿಚಯ ಮಾಡಿಸಿಕೊಟ್ಟರು, ಇವರು ವಾಯಲಿನ್ ನುಡಿಸ್ತಾರೆ ಅಂತ. ಅವರು ನನ್ನನ್ನ ಮೋಹನ್ ಸೆಹಗಲ್ಗೆ ಪರಿಚಯ ಮಾಡಿಸಿದರು. ಅವರು ಒಬ್ಬರು ಸಂಗೀತ ನಿರ್ದೇಶಕರಲ್ಲಿ ನನ್ನನ್ನು ಸೇರಿಸಿದರು. ಅವರ ಜೊತೆ ಕೆಲಸ ಮಾಡಿದೆ. ಕೊನೆಗೆ ಅವರು ನನಗೆ ನೂರು ರೂ. ಸಂಭಾವನೆ ಕೊಟ್ಟರು. 100 ರೂ. ಆಗಿನ ಕಾಲದಲ್ಲಿ ಭರ್ಜರಿ ಮೊತ್ತ. ಅದೇ ಸಂಗೀತ ನಿರ್ದೇಶಕರು ದ್ರೋಣಾಚಾರ್ಯ ಅಂತ ಒಬ್ಬರು ಕ್ಯಾಮರಾ ಚೀಫ್ ಅವರಿಗೆ ಪರಿಚಯ ಮಾಡಿಸಿದರು. ಓಹ್ ಯು ಸ್ಟಡೀಡ್ ಕ್ಯಾಮರಾ? ಗುಡ್ ಕಮ್ ಫ್ರಂ ಟುಮಾರೊ ಅಂದರು. ಅವರೇ ನನ್ನ ಕ್ಯಾಮರಾಗೆ ಜೀವ ತುಂಬಿದ ದ್ರೋಣಾಚಾರ್ಯರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ