ದೇವಲೋಕದ ಬಾಗಿಲಲ್ಲಿ ನಿಂತು…




ನೀವು ಯಾವುದಾದರೂ ಪೌರಾಣಿಕ ಚಿತ್ರಗಳಲ್ಲಿ ಮೋಡಗಳ ರಾಶಿಯ ನಡುವೆ ದೇವರು ಪ್ರತ್ಯಕ್ಷ ಆಗುವುದನ್ನು, ಹಾಗೆ ಪ್ರಯಾಣ ಮಾಡುವುದನ್ನು ನೋಡಿರಬಹುದು. ಹಾಗೊಂದು ಮೋಡಗಳ ರಾಶಿ ಕೈಗೇ ನಿಲುಕಿ ಬಿಟ್ಟರೆ ಹೇಗಿರಬೇಡ? ಇಲ್ಲ, ನನ್ನ ಕೈಗೇನೂ ನಿಲುಕಿಲ್ಲ. ಆದರೆ, ಸಾಲು-ಸಾಲು ಪರ್ವತಗಳ ಮೇಲಿನಿಂದ ಹಿಂಡು-ಹಿಂಡು ಮೋಡಗಳ ರಾಶಿ ತೇಲಿ ತೇಲಿ ಹೋಗುವ ದೃಶ್ಯವನ್ನು ಕಂಡು ಮೂಕವಿಸ್ಮಿತರಾಗುವ ಭಾಗ್ಯ ಲಭಿಸಿದ್ದು ಕಳೆದ ವಾರ (ಅ.20.2010).


ಸೆಪ್ಟೆಂಬರ್ ತಿಂಗಳ ಮಧ್ಯ ಭಾಗದಲ್ಲಿ ಮಂಗಳೂರಿಂದ ಬೆಂಗಳೂರಿಗೆ ರಸ್ತೆ ಮೂಲಕ ಪ್ರಯಾಣ ಮಾಡಿದಾಗ ಶಿರಾಡಿ ಘಾಟ್ ಸೊಂಟದ ನಡುವೆ ನಿಂತಿದ್ದಾಗ ಬೆಟ್ಟದ ತುದಿಯಲ್ಲಿ ರೈಲು ಹರಿದು ಹೋಗುತ್ತಿದ್ದ ದೃಶ್ಯ ಕಂಡು ಆನಂದಕ್ಕೆ ಪಾರವೇ ಇಲ್ಲದಂತೆ ಕುಣಿದಾಡಿದ್ದನ್ನು ಚಂದ್ರಮುಖಿಯಲ್ಲಿ ಬರೆದಿದ್ದೆ. ಇನ್ನೊಂದು ತಿಂಗಳು ಕಳೆಯುವುದರೊಳಗೆ ಅದೇ ರೈಲಿನಲ್ಲಿ ಹಗಲು ಪ್ರಯಾಣ ಮಾಡುವ ಭಾಗ್ಯ….!



ಕುಂದಾಪುರದಿಂದಲೇ ಬೆಂಗಳೂರಿಗೆ ಬಸ್ಸು ಹತ್ತಬೇಕಾಗಿತ್ತು ನಮ್ಮ ಸಂಸಾರ. ಆದರೆ, ಊರಿಗೆ ಊರೇ ಬೆಂಗಳೂರಿಗೆ ಹೊರಟು ನಿಂತಂತಿತ್ತು.! ಯಾವ ಬಸ್ಸಿನಲ್ಲೂ ಸೀಟು ನಾಸ್ತಿ. ಸೀಟಿಗೆ ಆರುನೂರು ಕೊಟ್ಟರೂ ಇಲ್ಲ. ಹಾಗೆ ಎಲ್ಲರನ್ನೂ ಶಪಿಸುತ್ತ ನಾವು ಬಂದಿದ್ದು ಮಂಗಳೂರು ಅಕ್ಕನ ಮನೆಗೆ. ಮರುದಿನ ಬೆಳಗಿನ ಜಾವವೇ ಎದ್ದು ನಾವು ಹತ್ತಿದ್ದು ಮಂಗಳೂರು-ಯಶವಂತಪುರ ಟ್ರೈನಿಗೆ. ಎರಡೂವರೆ ಸೀಟು- ನಾವು ಕೊಟ್ಟ ಕಾಸು ಕೇವಲ 254 ರೂಪಾಯಿ.



ಎಲ್ಲಕ್ಕಿಂತ ಹೆಚ್ಚಾಗಿ ನಮಗೆ ಸಿಕ್ಕಿದ್ದು ಪುಷ್ಕಳ ಭೋಜನ!! ಮೈ-ಮನಸ್ಸು ಪುಳಕಗೊಳ್ಳುವಂತಹ ಅದ್ಭುತ ಕ್ಷಣಗಳು! ಆಗಸದಿಂದಲೇ ಧರೆಯ ಸೌಂದರ್ಯ ಸವಿದಂತಹ ಅನುಭವ. ಸ್ವರ್ಗಕ್ಕೇ ಮೂರೇ ಗೇಣು ಎಂಬುದು ಇಲ್ಲಿ ನೂರಕ್ಕೆ ನೂರರಷ್ಷು ನಿಜ. ಇದೇನು ಈ ಊರು-ಈ ಚೆಲುವು-ಈ ರಮ್ಯತೆ ಕರ್ನಾಟಕದಲ್ಲೇ ಇದ್ಯಾ? ಅದೂ ನಮ್ಮೂರಲ್ಲೇ? ನೀವು ನಂಬಲಾರಿರಿ… ರೈಲಿನ ಬಾಗಿಲಲ್ಲಿ ನಿಂತು ಬಿಟ್ಟರೆ ಈ ಸೊಬಗು ನೋಡುತ್ತ ನೋಡುತ್ತ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ. ಇದನ್ನು ನೀವು ಅದ್ಭುತ ಎನ್ನಿ, ಅಪೂರ್ವ ಎನ್ನಿ, ಅನನ್ಯ ಎನ್ನಿ… ಅವೆಲ್ಲ ಸುಮ್ಮನೇ ಕ್ಲೀಷೆ ಅನಿಸಿಬಿಡುತ್ತದೆ.



ಇಂತಹುದೊಂದು ರಸಸ್ವಾದ ಸುಬ್ರಹ್ಮಣ್ಯ ರೋಡ್ ಸ್ಟೇಷನ್ ಬಿಟ್ಟ ತಕ್ಷಣ ಆರಂಭವಾಗುತ್ತದೆ. ಆ ನಿಲ್ದಾಣದಲ್ಲಿ ರೈಲು ನಿಂತ ತಕ್ಷಣ ಜನ ದಬದಬ ಅಂತ ತುಂಬಿಕೊಳ್ಳುತ್ತಾರೆ. ಅವರಲ್ಲಿ ಬಹುತೇಕ ಮಂದಿ ಸುಬ್ರಹ್ಮಣ್ಯದಲ್ಲಿ ಮುಡಿಕೊಟ್ಟವರು.



ಆಗ ಸುಮಾರು ಬೆಳಿಗ್ಗೆ ಹತ್ತೂ ಮುಕ್ಕಾಲು ಸಮಯ. ಅಲ್ಲಿಂದ ಆರಂಭವಾಗುತ್ತದೆ ಪ್ರಯಾಣದ ರಸಕ್ಷಣ. ಪ್ರತಿ ಕ್ಷಣವನ್ನೂ ಮಿಸ್ ಮಾಡಿಕೊಳ್ಳುವ ಹಾಗೇ ಇಲ್ಲ. ಇದು ಬೆಟ್ಟದ ಮೇಲಿನ ಪ್ರಯಾಣ ಅಲ್ಲ… ಬೆಟ್ಟದ ಒಳಗಿನಿಂದ ಪ್ರಯಾಣ! ಶಿರಬಾಗಿಲು-ಎಡಕುಮೇರಿ-ದೋಣಿಗಾಲ್-ಸಕಲೇಶಪುರ… ಸುಮಾರು 54-60 ಕಿ.ಮೀ… ದೇವಲೋಕದ ಒಂದು ಮೋಡದಿಂದ ಇನ್ನೊಂದು ಮೋಡಕ್ಕೆ ಲಗ್ಗೆ ಹಾಕಿದ ಹಾಗೆ. ಒಂದು ಬೆಟ್ಟದಿಂದ ಇನ್ನೊಂದು ಬೆಟ್ಟ. ಒಂದು ಸುರಂಗದಿಂದ ಈಚೆ ಬಂದೆವಪ್ಪಾ ಅನ್ನೋದರೊಳಗೆ ಇನ್ನೊಂದು. ಒಂದು ಬೆಟ್ಟದ ಮಗ್ಗುಲಿಗೂ ಇನ್ನೊಂದು ಬೆಟ್ಟದ ಮಗ್ಗುಲಿಗೂ ಬೆಸುಗೆ ಹಾಕುತ್ತವೆ ಸೇತುವೆಗಳು. ಇಂತಹ ಸೇತುವೆಯ ಮೇಲೆ ತಿರುವಿಕೊಳ್ಳುತ್ತಾ, ಸುತ್ತಿಕೊಳ್ಳುತ್ತಾ, ಒನಪು-ಒಯ್ಯಾರ ಮಾಡುತ್ತಾ ರೈಲು ಹೋಗುತ್ತಿದ್ದರೆ “..ಆಹಾ ಏನ್ ಅಂದವಾ…’ ಅಂತ ಡಾ. ರಾಜ್ ಕುಮಾರ್ ಹಾಗೆ ಉದ್ಘಾರ ತೆಗೀಬೇಕು.!!





ಹಾಗಂತ ಮುಗಿಯೋದೇ ಇಲ್ಲವಾ ಈ ಟನಲ್ ಗಳು? ಒಂದಲ್ಲ-ಎರಡಲ್ಲ 58 ಸುರಂಗಗಳು! ಸೇತುವೆಗಳೋ? ಅದನ್ನು ಹೇಗೆ ಹಾಕಿದ್ದಾರೆ ಈ ಬೆಟ್ಟದ ಮೇಲೆ? ರೈಲ್ವೆ ಇಲಾಖೆಯ ಈ ಅದ್ಭುತ ಕಾರ್ಯಕ್ಕೆ ನಮೋನ್ನಮಃ. ಸೇತುವೆ ಹೀಗಿದೆಯಲ್ಲಾ ಅಂತ ಬಗ್ಗಿಕೊಂಡು ಕೆಳಗೆ ನೋಡಿದರೆ ಎದೆ ದಸಕ್ ಅನ್ನುತ್ತದೆ. ಇಂತಹ 109 ಸೇತುವೆಗಳು! ಅವುಗಳ ಮೇಲೆ ರೈಲು ಹೋಗುತ್ತಿದ್ದರೆ ನಿಜಕ್ಕೂ ಕನ್ಫೂಸ್… ರೈಲಿನ ಬೆಡಗು ನೋಡುವುದೋ? ಬೆಟ್ಟದ ಆಳ ನೋಡುವುದೋ? ಒಂದು ಹಸಿರ ಗೂಡಿಗೆ ರೈಲು ಸಾಗುತ್ತಲೇ ಇರುತ್ತದೆ. ಒಂದು ಸೇತುವೆಯನ್ನು ದಾಟಿ ಮುಂದೆ ಹೋಗುತ್ತಿದ್ದಂತೆ ಅದರ ಮೂತಿಯೇ ಕಾಣದೇ ಒಂದು ಕ್ಷಣ ದಂಗಾಗಿ ಬಿಡುತ್ತೇವೆ.. ಎಲ್ಲೋಯ್ತು ರೈಲು?



ಇವೆಲ್ಲವನ್ನೂ ದಾಟಿಕೊಂಡು ದಾಟಿಕೊಂಡು ರೈಲಿನದ್ದು ನಿರಂತರ ಓಟ. ಕುತ್ತಿಗೆಗೆ ಹಾಕಿಕೊಂಡ ಕ್ಯಾಮರಾಗೆ ಸಲ್ಪ ವಿಶ್ರಾಂತಿ ಕೊಟ್ಟು ರೈಲಿನ ಬಾಗಿಲಲ್ಲಿ ಒರಗಿ ನಿಂತು ಕಣ್ಣಾಡಿಸಿ… ನಿಜಕ್ಕೂ ದೇವಲೋಕವದು. ಬೆಟ್ಟದ ಸಾಲು ಸಾಲು..ಅಲ್ಲಲ್ಲಿ ಹರಿವ ಝರಿ… ಜಲಪಾತಗಳು… ಬೆಟ್ಟದ ತುದಿಗೆ ಮುತ್ತಿಕ್ಕುವ ಹಿಮದ-ಮೋಡ ರಾಶಿ… ಹಸಿರು ಹಸಿರು… ಕೆಳಗಿಣುಕಿದರೆ ಬಣ್ಣ ಬಣ್ಣದ ಚಿಟ್ಟೆಗಳು… ಕ್ಯಾಮರಾ ಮತ್ತೆ ಸುಮ್ಮನಿರುವುದಿಲ್ಲ… ಅತ್ತ ಪ್ರಖರ ಬಿಸಿಲೂ ಇಲ್ಲ, ಇತ್ತ ಕಪ್ಪಡರಿದ ಮೋಡವೂ ಇಲ್ಲ… ಇಂತಹ ಬೆಳಕಿದ್ದರೆ ಕ್ಯಾಮರಾ ಖಂಡಿತ ಸುಮ್ಮನಿರುವುದಿಲ್ಲ…




ರೈಲು ಸಕಲೇಶಪುರಕ್ಕೆ ಬಂದು ನಿಲ್ಲುವ ಹೊತ್ತಿಗೆ ಮಧ್ಯಾಹ್ನ ಒಂದು ಗಂಟೆ. ಅಲ್ಲಿಂದ ಮುಂದೆ ಬೆಂಗಳೂರು ತಲುಪುವುದು ಸಂಜೆ ಏಳೂವರೆಗೆ. ಆರೂವರೆ ಗಂಟೆ ಪಯಣ ಬೋರೊ ಬೋರು! ಹಾಸನ-ತಿಪಟೂರು-ತುಮಕೂರು-ಬೆಂಗಳೂರು… ಯಾಕಪ್ಪ ರೈಲು ಇಷ್ಟೆಲ್ಲ ಸುತ್ತು ಹೊಡೆಯುತ್ತದೆ ಅನಿಸುತ್ತದೆ. ಹಾಸನ-ಶ್ರವಣಬೆಳಗೊಳ ನೇರ ಬೆಂಗಳೂರು ತಲುಪುವ ಭಾಗ್ಯವನ್ನು ರೈಲ್ವೆ ಇಲಾಖೆ ಯಾವಾಗ ಕರುಣಿಸುತ್ತದೋ?



ಅದೇನೇ ಇರಲಿ, ನವೆಂಬರ್ ತಿಂಗಳಲ್ಲಿ ಮತ್ತೆ ಕ್ಯಾಮರಾ ಹೆಗಲಿಗೆ ಹಾಕಿಕೊಂಡು ಬೆಂಗಳೂರಿಂದ ಮಂಗಳೂರಿಗೆ ಹೊರಡುತ್ತೇನೆ. ಸಂಜೀ ಬಿಸಿಲಿಗೆ ಇದರ ಸೊಬಗು ನೋಡಬೇಕು. ನೀವ್ಯಾರಾದರೂ ಕಜ್ಜಾಯ ಹಿಡ್ಕೊಂಡು ಬರುತ್ತೀರಾ ಹೇಗೆ? ತಿಳಿಸಿ ಮತ್ತೆ…




ಕಾಮೆಂಟ್‌ಗಳು

Unknown ಹೇಳಿದ್ದಾರೆ…
ರೈಲಿನ ಅನುಭವ ಚೆನ್ನಾಗಿದೆ.
ಮುಂದಿನ ಸಾರಿ 'ನಮ್ ಟೀಂ'ನ್ನು ಕರಕೊಂಡು ಹೋಗ್ರೀ...

ರಾಜಲಕ್ಷ್ಮಿ
chand ಹೇಳಿದ್ದಾರೆ…
ನನ್ನ ರೈಲು ಸವಾರಿಯನ್ನು ಓದಿದ್ದಕ್ಕೆ ಥ್ಯಾಂಕ್ಯು ಮೇಡಂ. ನವೆಂಬರ್ ತಿಂಗಳ ಮೊದಲ ವಾರ ಟೀಂ ಕರ್ಕೊಂಡು ರೆಡಿಯಾಗಿ. ನಾನಂತೂ ರೆಡಿ...
nenapina sanchy inda ಹೇಳಿದ್ದಾರೆ…
yes!! i totally agree.
We travelled on night train, on a full moon day. imagine!! it was like we were skimming through the thick foliage of trees like kinnara/kinnari. Me husband and my best freind stayed awake the whole night, our heads out the window, just enjoying the lovely sight, without speaking one word to disturb our moment of enchantment.The moon was unusually big and bright that day.
Sorry!! comment got too long
:-)
malathi S
chand ಹೇಳಿದ್ದಾರೆ…
Thank you for considerably too short comment!! FULL MOON DAY! you are really lucky. I`m jealous too. Next time will plan for night train. Thank you for your words.
ಸೂರ್ಯ ವಜ್ರಾಂಗಿ ಹೇಳಿದ್ದಾರೆ…
ಒಳ್ಳೆಯ ಬರಹ..ನನಗೂ ಅದೇ ಅನುಭವವಾಗಿದೆ. ಎರಡೂ ಬಾರಿಯೂ ನನಗೆ ಯಾರೂ ಜೊತೆಗಾರರು ಇಲ್ಲದ್ದರಿಂದ ಬಹುಮಟ್ಟಿಗೆ ಅದನ್ನು ಸವಿಯಾಗಲಿಲ್ಲ...
ಮಂಗಳೂರಿನಿಂದ ಬೆಂಗಳೂರಿಗೆಹಗಲು ರೈಲಿನ ಪ್ರಯಾಣದ ಅನುಭವನ್ನು ಎರಡು ರೀತಿಯಲ್ಲಿ ವಿಂಗಡಿಸಬಹುದು.
ಅತಿ ಸುಂದರ ಮತ್ತು ಅತಿ ಬೇಸರ.
ಅಂತಿಮವಾಗಿ ಪಶ್ಚಿಮ ಘಟ್ಟದದಲ್ಲಿ ಪಡೆದ ಸುಂದರ ಅನುಭವ, ಉಳಿದ ಎಲ್ಲಾ ಬೇಸರತೆಯನ್ನು ಮರೆಯುವಂತೆ ಮಾಡುತ್ತದೆ... ಅಲ್ವಾ ಸಾರ್‌...
chand ಹೇಳಿದ್ದಾರೆ…
ನಿಜ ನಿಮ್ಮ ಮಾತು... ಜೊತೆಗಾರರಿಲ್ಲದಿದ್ದರೂ ಪ್ರಯಾಣ ತೀರಾ ನೀರಸ ಅನಿಸುತ್ತದೆ.

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ