ಕಿಟಕಿ...

ಒಂದು ಆಸ್ಪತ್ರೆಯ ವಿಶಾಲ ಕೊಠಡಿ. ಅಲ್ಲಿ ಇಬ್ಬರು ರೋಗಿಗಳು. ಇಬ್ಬರಿಗೂ ಗಂಭೀರ ಕಾಯಿಲೆ. ಒಬ್ಬನ ಹೆಸರು ಮನಸ್ಸು ಇನ್ನೊಬ್ಬನ ಹೆಸರು ತಮಸ್ಸು ಅಂತಿಟ್ಟುಕೊಳ್ಳೋಣ.
ಮನಸ್ಸಿನ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡಿದೆ. ಪ್ರತಿದಿನ ಮಧ್ಯಾಹ್ನ ತಾನಿದ್ದ ಬೆಡ್ ಮೇಲೆ ಆತ ಕುಳಿತುಕೊಳ್ಳುತ್ತಾನೆ. ನರ್ಸ್ ಬರುತ್ತಾಳೆ. ಬಂದು ಅವನ ಪುಪ್ಪುಸದಲ್ಲಿ ಸೇರಿದ್ದ ನೀರಿನ ಅಂಶವನ್ನು ತೆಗೆದು ಹಾಕುತ್ತಾಳೆ. ಈತನ ಹಾಸಿಗೆ ಇರುವುದು ಆ ರೂಮಿನ ಒಂದೇ ಒಂದು ಕಿಟಕಿಯ ಪಕ್ಕದಲ್ಲಿ. ಇನ್ನೊಂದು ತುದಿಯಲ್ಲಿ ಗೋಡೆಯ ಪಕ್ಕದಲ್ಲಿ ಇರುವವನು ತಮಸ್ಸು. ತನ್ನ ಹಾಸಿಗೆಯಲ್ಲಿ ಸದಾ ಕಾಲ ಮಲಗಿದಲ್ಲೇ ಇರಬೇಕು. ಬೆನ್ನು ಮೂಳೆಗೆ ಶಕ್ತಿಯೇ ಇಲ್ಲ. ಪ್ರತಿದಿನ ಮನಸ್ಸು ಮತ್ತು ತಮಸ್ಸು ಇಬ್ಬರೂ ಗಂಟೆಗಟ್ಟಳೆ ಮಾತನಾಡಿಕೊಳ್ಳುತ್ತಾರೆ.
ಅವರು ಮಾತನಾಡಿಕೊಳ್ಳದ ವಿಷಯವಿಲ್ಲ. ತಮ್ಮ ಹೆಂಡತಿ, ಮಕ್ಕಳು, ಕುಟುಂಬ, ತಾವು ಮಾಡಿದ ಮನೆ-ಮಾರು, ತಮ್ಮ ಕೆಲಸ, ತಾವು ಕೆಲಸದಲ್ಲಿ ಇದ್ದಾಗ ಕಳೆದ ದಿನಗಳು, ರಜಾ ದಿನಗಳಲ್ಲಿ ತೆರಳಿದ ಪ್ರದೇಶಗಳು... ಹೀಗೆ ಅವರ ಮಾತಿನ ಲಹರಿ ಹರಿಯುತ್ತದೆ. ಅವರದೇ ಪ್ರಪಂಚವದು.

ಪ್ರತಿ ಮಧ್ಯಾಹ್ನ ಮನಸ್ಸು ತನ್ನ ಬೆಡ್ ಮೇಲೆ ಕುಳಿತುಕೊಂಡು ಜೀವನ್ಮುಖಿಯಾಗುತ್ತಾನೆ. ತನ್ನ ಕಿಟಕಿಯ ಆಚೆ ನಡೆಯುತ್ತಿರುವ ವಿದ್ಯಮಾನಗಳನ್ನೆಲ್ಲ ಗೋಡೆಯ ಪಕ್ಕ ಮಲಗಿರುವ ತಮಸ್ಸಿಗೆ ಬಣ್ಣಿಸುತ್ತಾ ಹೋಗುತ್ತಾನೆ. ಅಲ್ಲಿ ನಡೆಯುತ್ತಿರುವ ಬದುಕಿನ ಪ್ರತಿಯೊಂದು ಕ್ಷಣವನ್ನೂ ತನ್ನ ರೂಮ್ಮೇಟ್ಗೆ ವಿವರಿಸುತ್ತಾ ತನಗಿದ್ದ ಒಂದು ಗಂಟೆ ಕಾಲವನ್ನು ಕಳೆಯುತ್ತಾನೆ.
ಮಧ್ಯಾಹ್ನದ ಈ ಒಂದು ತಾಸೆಂದರೆ ತಮಸ್ಸಿಗೆ ಅಪಾರ ಉಲ್ಲಾಸದ ಗಳಿಗೆ. ಆತ ಮಲಗಿದಲ್ಲೇ ಬದುಕಿನ ಇನ್ನೊಂದು ಮುಖವನ್ನು ಅನುಭವಿಸಬಹುದು. ಈ ಒಂದು ತಾಸನ್ನು ಅತ್ಯಂತ ಖುಷಿ ಖುಷಿಯಿಂದ ಕಳೆಯುತ್ತಾನೆ ಆತ. ಮನಸ್ಸು ಬಿಡಿಸಿಡುವ ಪ್ರತಿಯೊಂದು ಚಿತ್ರಣದಿಂದ ಆತನ ಪ್ರಪಂಚ ಇನ್ನಷ್ಟು ವಿಶಾಲವಾಗುತ್ತಾ, ಉಜ್ವಲವಾಗುತ್ತಾ ಹೋಗುತ್ತದೆ. ಕಿಟಕಿಯಿಂದ ಹೊರಗೆ ನಡೆಯುವ ಚಟುವಟಿಕೆಗಳ ಚಿತ್ರಣ ಅವನಲ್ಲಿ ಹೊಸ ಹುರುಪು ತುಂಬುತ್ತಾ ಹೋಗುತ್ತದೆ.
ಆವತ್ತು ಮಧ್ಯಾಹ್ನ ತನ್ನ ಪುಪ್ಪುಸದ ನೀರು ಖಾಲಿಯಾಗುತ್ತಿದ್ದಂತೆ ಹೊರ ಪ್ರಪಂಚವನ್ನು ವರ್ಣಿಸುತ್ತ ಹೋದ ಮನಸ್ಸು...
ನೋಡು, ಕಿಟಕಿಯ ಆಚೆ ಒಂದು ಉದ್ಯಾನವಿದೆ, ಅಲ್ಲೊಂದು ಸುಂದರ ಸರೋವರವಿದೆ. ಅದರಲ್ಲಿ ಎಷ್ಟೊಂದು ಹಂಸಗಳು. ಅವುಗಳಲ್ಲಿ ಗಂಡು-ಹೆಣ್ಣು ಪರಸ್ಪರ ಸರಸ ಸಲ್ಲಾಪದಲ್ಲಿ ತೊಡಗಿವೆ. ಪುಟ್ಟ ಪುಟ್ಟ ಮಕ್ಕಳು ಪುಟ್ಟ ದೋಣಿಗಳಲ್ಲಿ ತೇಲಾಡುತ್ತಾ ನಕ್ಕು ನಲಿಯುತ್ತಿದ್ದಾರೆ. ಇನ್ನು ಕೆಲವು ಮಕ್ಕಳು ಕಾಗದದ ದೋಣಿಗಳನ್ನು ಮಾಡಿ ನೀರಲ್ಲಿ ತೇಲಿ ಬಿಟ್ಟು ಆನಂದದಿಂದ ತೇಲಾಡುತ್ತಿದ್ದಾರೆ. ತರುಣ ತರುಣಿಯರು, ಪ್ರೇಮಿಗಳು, ಪತಿ-ಪತ್ನಿಯರು ಕೈಯೊಳಗೆ ಕೈಬೆಸೆದುಕೊಂಡು, ಮೈಗೆ ಮೈ ತಾಗಿಸಿಕೊಂಡು, ಬುಜಕ್ಕೆ ಬುಜ ತಟ್ಟಿಕೊಂಡು ಓಡಾಡುತ್ತಿದ್ದಾರೆ. ಪಾರ್ಕಿನ ಉದ್ದಕ್ಕೂ ಬಿದ್ದ ಬಣ್ಣ-ಬಣ್ಣದ ಹೂವುಗಳು, ಅಕ್ಕಪಕ್ಕದ ತರಾವರಿ ಸಸ್ಯಗಳು ಅವರ ಕ್ಷಣಗಳನ್ನು ಅನನ್ಯಗೊಳಿಸುತ್ತಿವೆ. ಅನತಿ ದೂರದಲ್ಲಿಯೇ ನಗರದ ನೀಲಾಕಾಶದ ಹಿನ್ನೆಲೆ. ಇವೆಲ್ಲವೂ ಇಡೀ ವಾತಾವರಣಕ್ಕೆ ತೋರಣ ಕಟ್ಟಿದಂತೆ ಕಾಣುತ್ತಿದೆ. ಹೊರಗಡೆ ಬದುಕು ಎಷ್ಟೊಂದು ಲವಲವಿಕೆಯಿಂದ ಕೂಡಿದೆ ಅಲ್ಲವಾ.... ಅಂತಾನೆ.

ಕಿಟಕಿಯ ಬಳಿ ಕುಂತ ಮನಸ್ಸು ಅಲ್ಲಿ ನಡೆಯುವ ಇಂತಹ ಚಿಕ್ಕ ಪುಟ್ಟ ದೃಶ್ಯವನ್ನೂ ವರ್ಣರಂಜಿತವಾಗಿ ವಿವರಿಸುತ್ತಾ ಹೋದ ಹಾಗೆ ಇನ್ನೊಂದು ಮೂಲೆಯಲ್ಲಿ ತಮಸ್ಸು ಮಲಗಿದಲ್ಲೇ ಕಣ್ಣು ಮುಚ್ಚಿಕೊಂಡು ಎಲ್ಲವನ್ನೂ ಕಲ್ಪಿಸಿಕೊಳ್ಳುತ್ತಾ ಆ ಪ್ರಪಂಚದಲ್ಲಿ ವಿಹರಿಸುತ್ತಾನೆ. ದೇಹದಲ್ಲಿ ಅದೇನೋ ಶಕ್ತಿ ತುಂಬಿಕೊಂಡ ಹಾಗೆ.... ಮನಸ್ಸು ಜೀವನ್ಮುಖಿಯಾದ ಹಾಗೆ...
ಇನ್ನೊಂದು ಮಧ್ಯಾಹ್ನ ಮನಸ್ಸು ಕಿಟಕಿಯಾಚೆ ಸಾಗುತ್ತಿರುವ ದಿಬ್ಬಣದ ಬಗ್ಗೆ ವಿವರಿಸುತ್ತಾನೆ. ಅಲ್ಲಿನ ಬ್ಯಾಂಡು-ಬಜಾನ, ಅವರ ರಂಗುರಂಗಿನ ಧಿರಿಸುಗಳು, ಕಿರೀಟಗಳು, ಮದುಮಕ್ಕಳು, ಬದುಕಿನ ಇನ್ನೊಂದು ಮಗ್ಗುಲಿಗೆ ಪಯಣಿಸುವ ಅವರ ಮುಖದಲ್ಲಿರುವ ಸಂಭ್ರಮ, ಮೆರವಣಿಗೆಯಲ್ಲಿ ತಲ್ಲೀನರಾದ ಮನೆಮಂದಿ... ಹೊಸ ಜೋಡಿಯ ಕಣ್ಣುಗಳು ಬೆಸೆದುಕೊಂಡ ಕ್ಷಣ.. ಮತ್ತೆ ಅವರು ನಾಚಿ ನೀರಾಗಿದ್ದು.... ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ಹೇಳುತ್ತಾ ಹೋಗುತ್ತಾನೆ. ಬ್ಯಾಂಡಿನ ಸದ್ದು ತಮಸ್ಸಿಗೆ ಕೇಳದೇ ಹೋದರೂ ಆತ ತನ್ನ ಒಳಮನಸ್ಸಿನಲ್ಲಿ ಅವೆಲ್ಲವನ್ನೂ ಗ್ರಹಿಸುತ್ತಾ, ಅದೆಲ್ಲವನ್ನೂ ಅನುಭವಿಸುತ್ತಾ ಹೋಗುತ್ತಾನೆ.
ಹೀಗೆ ಪ್ರತಿದಿನ, ಪ್ರತಿ ಮಧ್ಯಾಹ್ನ ಕಿಟಕಿಯಾಚೆ ನಡೆಯುವ ಬದುಕಿನ ಭಿನ್ನ ಮುಖಗಳನ್ನು ಮನಸ್ಸು ತಮಸ್ಸಿಗೆ ಪರಿಚಯ ಮಾಡಿಕೊಡುತ್ತಾ, ತನಗೆ ತಾನೆ ಆ ಪ್ರಪಂಚದಲ್ಲಿ ಸುತ್ತಾಡಿಕೊಂಡು ಬಂದ ಹಾಗೆ ವಿವರಿಸುತ್ತಾ ಹೋಗುತ್ತಾನೆ. ಈ ದಿನ ಎಷ್ಟು ಹೊತ್ತಿಗೆ ಮಧ್ಯಾಹ್ನವಾಗುತ್ತದೆ, ಇವತ್ತು ಏನು ನಡೆಯುತ್ತಿರಬಹುದು ಎಂಬ ಕುತೂಹಲ ತಮಸ್ಸಿಗೆ. ಮನಸ್ಸು ಮಾತ್ರ ಯಾವುದೇ ನಿರ್ವಂಚನೆ ಮಾಡದೆ ತನ್ನ ಮುಂದೆ ಬಂದ ದೃಶ್ಯಗಳನ್ನು ವಿವರಿಸುತ್ತಾ ಇರುತ್ತಾನೆ. ಮಿತ್ರರಿಬ್ಬರ ಆಸ್ಪತ್ರೆಯ ದಿನಗಳು ಇದೇ ರೀತಿ ಸಾಗುತ್ತಿರುತ್ತವೆ. ಮೈಯಲ್ಲಿ ನೋವು, ಸಂಕಟ ತುಂಬಿದ್ದರೂ ಇಬ್ಬರೂ ಇಂತಹ ಹೊಸ ಕ್ಷಣಗಳಿಗಾಗಿ ತುಡಿಯುತ್ತಾರೆ. ದಿನ, ವಾರ, ತಿಂಗಳು ಕಳೆಯುತ್ತವೆ. ಮಧ್ಯಾಹ್ನದ ದೃಶ್ಯಗಳಿಗಾಗಿ ತಮಸ್ಸು ತಡಕಾಡುವುದು ನಡೆದೇ ಇತ್ತು.
ಒಂದು ಮುಂಜಾನೆ ನರ್ಸ್ ಎಂದಿನಂತೆ ಇಬ್ಬರಿಗೂ ಸ್ನಾನ ಮಾಡಲು ಬಿಸಿ ನೀರಿನೊಂದಿಗೆ ಕೋಣೆಗೆ ಬರುತ್ತಾಳೆ. ಕಿಟಕಿ ಸನಿಹ ಮಲಗಿದ್ದ ಮನಸ್ಸಿನ ಬಳಿಗೆ ಬಂದರೆ ಆತ ಮಲಗಿದ್ದಲ್ಲೇ ಇಹಲೋಕ ತ್ಯಜಿಸಿದ್ದ. ಅತ್ಯಂತ ದುಃಖದಿಂದ ಆಸ್ಪತ್ರೆಯ ಸಿಬ್ಬಂದಿಗೆ ಮನಸ್ಸಿನ ಶವ ತೆಗೆಯಲು ಹೇಳುತ್ತಾಳೆ. ತಮಸ್ಸು ಕೂಡ ಕಣ್ಣೀರಾಗುತ್ತಾನೆ.
ಇತ್ತಕಡೆಯ ಗೋಡೆಯ ಸನಿಹದಿಂದ ಮುಕ್ತಿ ಪಡೆದು ಕಿಟಕಿ ಬಳಿಗೆ ಬಡ್ತಿ ಪಡೆಯಬೇಕು, ಮನಸ್ಸು ಕಂಡ ಪ್ರಪಂಚವನ್ನು ತಾನೂ ಕಾಣಬೇಕು ಎಂಬ ತಹತಹ ತಮಸ್ಸಿಗೆ. ತನ್ನನ್ನು ಕಿಟಕಿಯ ಬಳಿಯ ಹಾಸಿಗೆಗೆ ವಗರ್ಾಯಿಸುವಂತೆ ಕೇಳಿಕೊಳ್ಳುತ್ತಾನೆ. ನರ್ಸ್ ಯಾವುದೇ ಅಭ್ಯಂತರವಿಲ್ಲದೇ ಕಿಟಕಿ ಬಳಿಯ ಹಾಸಿಗೆಗೆ ಆತನನ್ನು ವರ್ಗಾಯಿಸುತ್ತಾಳೆ. ಈಗ ಕೊಠಡಿಯಲ್ಲಿ ಉಳಿದಿದ್ದು ಆತನೊಬ್ಬನೇ. ಬೇರೆ ಯಾವುದೇ ದನಿಯಿಲ್ಲ. ಬದುಕನ್ನು ಬಣ್ಣಿಸುವ ಮಿತ್ರನೂ ಇಲ್ಲ.
ಆತನಿಗೆ ನಿಜವಾದ ಕುತೂಹಲ ಇದ್ದಿದ್ದು ಕಿಟಕಿಯಾಚೆಗಿನ ಪ್ರಪಂಚದ ಬಗ್ಗೆ. ಈಗ ತಾನು ಎಲ್ಲವನ್ನೂ ನೇರವಾಗಿ ನೋಡಬಹುದಲ್ಲಾ ಎಂಬ ಆಸೆ. ಮಲಗಿದ ಹಾಸಿಗೆಯಲ್ಲೇ ತನ್ನ ಅಷ್ಟೂ ಸ್ನಾಯುಗಳಿಗೆ ಶಕ್ತಿ ತುಂಬಿಕೊಳ್ಳುತ್ತಾ, ಅತ್ಯಂತ ವೇದನೆಯಿಂದ ಮೆಲ್ಲಗೆ ಕಿಟಕಿಯ ಆಚೆ ಇಣುಕುತ್ತಾನೆ.
ಅರೆ!! ಅಲ್ಲೇನಿದೆ? ಖಾಲಿ ಖಾಲಿ ಗೋಡೆ!!
ತಮಸ್ಸು ತಕ್ಷಣ ನರ್ಸ್ ಕರೆಯುತ್ತಾನೆ. ಇದೇನಿದು? ಕಿಟಕಿಯಾಚೆ ಇರೋ ಪ್ರಪಂಚದ ಬಗ್ಗೆ ಪ್ರತಿ ದಿನ ರಂಗುರಂಗಾಗಿ ಬಣ್ಣಿಸುತ್ತಿದ್ದನಲ್ಲ ನನ್ನ ರೂಮ್ಮೇಟ್ ಮನಸ್ಸು? ಇಲ್ಲೇನಿದೆ ಬರೀ ಗೋಡೆ! ಎಂದು ಉದ್ಗರಿಸುತ್ತಾನೆ.
ಆಗ ನರ್ಸ್ ಹೇಳುತ್ತಾಳೆ; ಹೌದೆ? ಕಿಟಕಿ ಬಳಿ ಮಲಗಿದ್ದ ಮನಸ್ಸಿಗೆ ಕಣ್ಣೇ ಕಾಣುತ್ತಿರಲಿಲ್ಲ. ಇನ್ನು ಆತನಿಗೆ ಎದುರಿಗಿರುವುದು ಗೋಡೆ ಅಂತ ಹೇಗೆ ತಿಳಿಯಲು ಸಾಧ್ಯ ಹೇಳು?
ಮತ್ತೆ ಅವ ಪ್ರತಿದಿನ ಅಷ್ಟೊಂದು ಅದ್ಭುತವಾದ ಚಿತ್ರವನ್ನು ನನ್ನ ಮುಂದಿಡುತ್ತಿದ್ದ?
ನಿಜ, ಆತ ತನ್ನ ಒಳ ಮನಸ್ಸಿನಲ್ಲಿ ಮೂಡುತ್ತಿದ್ದ ಅಷ್ಟೂ ಭಾವನೆಯನ್ನು ನಿನಗೆ ವಿವರಿಸುತ್ತಿದ್ದ ಅನಿಸುತ್ತದೆ. ನಿನ್ನಲ್ಲಿ ಶಕ್ತಿ, ಉತ್ಸಾಹ ತುಂಬುವುದಷ್ಟೇ ಅವನ ಕೆಲಸವಾಗಿತ್ತು ಅನಿಸುತ್ತದೆ ಎನ್ನುತ್ತಾಳೆ ನರ್ಸ್.
ತಮಸ್ಸು ನಿಧಾನವಾಗಿ ತನ್ನ ಹಾಸಿಗೆಗೆ ಮೈ ಇಳಿಸುತ್ತಾನೆ.....


(ಒಂದು ಇ-ಮೇಲ್ ಈ ಕಥೆಗೆ ಪ್ರೇರಣೆ)

ಕಾಮೆಂಟ್‌ಗಳು

ಮನಸಿನ ಹಲವು ಮುಕಗಳ ತೆರೆದಿಡುವ ಕಿಟಕಿ ಅದು ಎಲ್ಲರ ಮನದೊಳಗೂ ಅಸ್ತಿತ್ವ ಪಡೆದಿದೆ,ಮಧ್ಯಾನ ಬಿಸಿಲಿನ ಆರ್ಭಟದಲ್ಲಿ ತಮಸ್ಸಿನ ಅಸ್ತಿತ್ವದ ಅಮೂರ್ತತೆ ಅನನ್ಯ ಅನುಭವ.ನಾವೆಲ್ಲರೂ ಜೀವನ್ಮುಕಿಗಳೇ ಆದರೆ ಕೆಲವೊಂದು ಸಂದರ್ಬ ನಮ್ಮನ್ನು ಸಮಸ್ಯೆಗಲೆಂಬ ತಮಸ್ಸು ಅಪ್ಪಿಕೊಂದುಬಿದುತ್ತವೆ ಬೆಳಕಲ್ಲು ಕಟ್ಟಲು,ಆಶಭಾವದಲ್ಲೂ ನೀರಶವಾದವನ್ನು ಸುಮ್ಮನೆ ಒಪ್ಪಿಕೊಂಡು ಬಿಡುವಾಗ ಮನಸಿನ ಜೀವನ್ಮುಕಿ ಚಿಂತನೆಗಳು ಹೇಗೆ ನಮಗೆ ಔಷಧಿಗಳಗುತ್ತವೆ ಎಂಬುದು ಕಿಟಕಿಯಲ್ಲಿ ಅನಾವರಣಗೊಂಡಿದೆ .ಕಥೆಯ ಆರಂಭ ಮನಸ್ಸು ತಮ್ಮಸ್ಸು ಹೆಸರಿನ ಮೂಲಕ ನೀರಿಕ್ಷೆಗಳನ್ನು ಹುಟ್ಟಿಸುತ್ತಾ ಸಾಗಿಸುತ್ತದೆ.ವಾಸ್ತವದ ಹಾದಿಯಲ್ಲಿ ಕಲ್ಪನೆಗಲಿಂದಲೇ ನಾವು ಜೀವನ್ಮುಕಿಗಳುವುದು ಅಮ್ಮೊರ್ತ ಸತ್ಯ .ಭರವಸೆ ಹುಟ್ಟಿಸೋ ಕಲ್ಪನೆಗಳು,ಸಾಧನೆಯ ಸೋವ್ದವ ಕಟ್ಟುವ ಕಲ್ಪನೆಗಳು,ಒಂಟಿ ತಾಣದ ಯಾವ ಹಂಗಿಗೂ ಒಳಪಡದೆ ನಮ್ಮ ಜೊತೆ ಇರುವ ಕಲ್ಪನೆಗಳು ನಮಗೆ ನಾಳೆ ಬಗ್ಗೆ ಭರವಸೆ ಕೊಡುವಾಗ ಅಲ್ಲಿ ಮನಸ್ಸಿನ ಮನಸ್ಸು ಪ್ರಶಾಂತ.ಅಂತಹ ಬರವಸೆ,ನಂಬಿಕೆಯ ಕೊಡುವ ಮನಸ್ಥಿತಿಯನ್ನು ನಾವು ಕಳೆದುಕೊಂಡರೆ ಮುಂದಿನ ಬದುಕು ಕಿಟಕಿಯಾಚೆಗಿನ ಖಾಲಿ ಗೋಡೆಯಂತೆ, ಮನಸ್ಸು ನಂಬಿಕೆ,ಭರವಸೆಗಳಿಂದ ಕೂಡಿದ್ದರೆ ಅದು ಕುರುದನಿಗು ಬೆಳಕ ನೀಡುವ ಮುಉತು,ಒಟ್ಟಿನಲ್ಲಿ ಮನಸಿನ ತಮಸಿಗೆ ಕಿಟಕಿ ಪರೆದೆ ಸರಿಸಿ ನೋಡಿದ್ರೆ "ಲೈಫ್ ಇಸ್ ಬ್ಯೂಟಿಫುಲ್ "
chand ಹೇಳಿದ್ದಾರೆ…
ಲೈಫ್ ಇಸ್ ಬ್ಯೂಟಿಫುಲ್... ನಿಜ ನಿಮ್ಮ ಮಾತು... ಚೆನ್ನಾಗಿ ಹೇಳಿದ್ದೀರಿ... ಧನ್ಯವಾದ ನಿಮ್ಮ ಅಭಿಪ್ರಾಯಕ್ಕೆ.. ಹೀಗೆ ಬರುತ್ತಿರಿ ಈ ಬ್ಲಾಗ್ ವೇದಿಕೆಗೆ...
chand ಹೇಳಿದ್ದಾರೆ…
ಥ್ಯಾಂಕ್ಸ್ ಅರುಣ್
chand ಹೇಳಿದ್ದಾರೆ…
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Ittigecement ಹೇಳಿದ್ದಾರೆ…
ತುಂಬಾ ಸೊಗಸಾಗಿದೆ..

ಕಲ್ಪನೆಗಳೆ ಬದುಕಿಗೆ ಬಣ್ಣ ತುಂಬುತ್ತವೆ..
ಬಣ್ಣಗಳೇ..
ಬದುಕಿನ ಸ್ವಾರಸ್ಯ..
ಅಗತ್ಯ.. ಅಲ್ಲವೆ?

ಅಭಿನಂದನೆಗಳು ಸರ್..
chand ಹೇಳಿದ್ದಾರೆ…
ನಿಮ್ಮ ಮಾತು ನಿಜ ಪ್ರಕಾಶ್, ಜಡವಾಗಿರೋ ಬದುಕಿಗೆ ಬಣ್ಣ ತುಂಬುವವರೂ ಬೇಕಾಗುತ್ತದೆ. ಕಿಟಕಿಯಲ್ಲಿ ಇಣುಕಿದ ನಿಮಗೂ ವಿ.ಆರ್.ಭಟ್ ಅವರಿಗೂ ಥ್ಯಾಂಕ್ಸ್
ದಿನಕರ ಮೊಗೇರ ಹೇಳಿದ್ದಾರೆ…
badukige kanasu, manasu irade iddare, baNNa iruttiralilla.... tumbaa chennaagide bareda reeti....

dhanyavaada sir....
Guruprasad . Sringeri ಹೇಳಿದ್ದಾರೆ…
ತುಂಬಾ ಸುಂದರವಾಗಿ ಬರೆದಿದ್ದೀರಿ ಸಾರ್..... ಇಷ್ಟವಾಯಿತು.
geeta bhat ಹೇಳಿದ್ದಾರೆ…
nimma baraha nodi tumba impress aade.very nice....tumba feel aagotara baradidira.Namma MANASONDU chennagidre eedi jeevanavanne estu sundaravagi itkobahudu annodanna idarinda kalibahudu alva........
once again VERY NICE ARTICLE..!!!
chand ಹೇಳಿದ್ದಾರೆ…
ಥ್ಯಾಂಕ್ಯೂ ದಿನಕರ್... ಬರುತ್ತಿರಿ.. ಬೆನ್ನು ತಟ್ಟುತ್ತಿರಿ...
chand ಹೇಳಿದ್ದಾರೆ…
ಧನ್ಯವಾದ ಗೀತಾ ಭಟ್... ಬದುಕು ಒಂದೇ ಲಹರಿಗೆ ಸಿಗುವುದೇ ಬಹಳ ಅಪರೂಪ. ಹಾಗಾಗೇ ಸಂಘರ್ಷಗಳು ಮನುಷ್ಯನ ಮಧ್ಯೆ ಅಲ್ವಾ? ಈ ಬ್ಲಾಗಿನ ಕಿಟಕಿಯಲ್ಲಿ ಇಣುಕುತ್ತಿರಿ ಆಗಾಗ...

ಗುರುಪ್ರಸಾದ್ ಅವರಿಗೂ ಥ್ಯಾಂಕ್ಸ್... ನಿಮ್ಮ ಫೋಟೋಗ್ರಫಿ ಚೆನ್ನಾಗಿವೆ.. ಅದಕ್ಕೆ ಕೊಡುವ ಸಲಹೆಗಳು ಮುಂದುವರಿಯಲಿ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!

ಅವರ ಸುಸ್ವರಕ್ಕೆ ಸಾವಿಲ್ಲ