ಪ್ರಕೃತಿ ನೀಡುವ ಪ್ರತಿ ಹನಿಗೂ ಬೊಗಸೆಯೊಡ್ಡುವ ವಿಜ್ಞಾನಿ..!

ಪರಿಶುದ್ಧ ನೀರು, ಗಾಳಿ, ಶುಭ್ರ ವಾತಾವರಣ ಮತ್ತು ಪರಿಶುದ್ಧ ಮನಸ್ಸು ಇವುಗಳ ಬಗ್ಗೆ ಯೋಚಿಸುವುದೇ ಕ್ಲೀಷೆ ಅನ್ನಿಸುವಂತಹ ದಿನಗಳಿವು. ಕೆರೆಯನ್ನೇ ಮುಚ್ಚಿ ಮನೆಗಳನ್ನು ನಿರ್ಮಿಸುವ, ಬೆಟ್ಟವನ್ನೇ ಕಡಿದು ಬಂಗಲೆ ಕಟ್ಟುವವರ ನಡುವೆ ಇಂಥವರೂ ಇದ್ದಾರೆಯೇ ಎಂಬ ಅಚ್ಚರಿ ಕಾಡುತ್ತದೆ. ಯಾವ ಘೊಷಣೆಯೂ ಇಲ್ಲದೆ ಒಂದು ಸುಸ್ಥಿರ ಬದುಕಿಗೆ ಬೇಕಾದ ಎಲ್ಲವನ್ನೂ ಅಳವಡಿಸಿಕೊಂಡು, ಆಸ್ವಾದಿಸುತ್ತ ಬದುಕುವವರೂ ನಮ್ಮ ನಡುವೆ ಇದ್ದಾರೆ ಎಂಬುದಕ್ಕೆ ಸಾಕ್ಷಿ ಈ ವಿಜ್ಞಾನಿ. ಇವರ ಮನೆ, ಮನೆ ಕಟ್ಟಿಸಬೇಕೆನ್ನುವವರಿಗೊಂದು ಮಾದರಿ. ಒಬ್ಬ ಮನುಷ್ಯ ಪ್ರಕೃತಿಯನ್ನು ನಂಬುತ್ತಾ ಅದರೊಂದಿಗೇ ಲೀನವಾಗಿ ಹೇಗೆ ಜೀವಿಸಬಹುದು ಎಂಬುದಕ್ಕೆ ಈ ವಿಜ್ಞಾನಿಯ ಬದುಕೇ ಪಾಠ.

***
ವಿಜ್ಞಾನಿ ಶ್ರೀ ಎ.ಆರ್.ಶಿವಕುಮಾರ್
ಒಂದೇ ಒಂದು ಹನಿ ನೀರು ಅವರ ಮನೆಯಿಂದ ಆಚೆ ಹೋಗುವುದಿಲ್ಲ. ಜಲಮಂಡಳಿಯ ಸಂಪರ್ಕವೂ ಅವರ ಮನೆಗೆ ಇಲ್ಲ. ಪ್ಲಾಸ್ಟಿಕ್ ಬಿಟ್ಟರೆ ಒಂದು ಸಣ್ಣ ಕಸ, ವೇಸ್ಟ್ ಪೇಪರ್ ಕೂಡ ಮನೆಯಿಂದ ಆಚೆ ಹಾಕುವುದಿಲ್ಲ. ಅವರು ಬಳಸೋದು ಕೇವಲ ಶೇ. 25 ಬೆಸ್ಕಾಂ ವಿದ್ಯುತ್. ಉಳಿದಿದ್ದೆಲ್ಲ ಸೂರ್ಯನ ಬೆಳಕೇ. ಕುಡಿಯುವ ನೀರಿನ ಸಂಸ್ಕರಣೆಗೆ ದುಬಾರಿ ಮಷಿನ್ ಇಲ್ಲ. ಬೆಳಕೂ ಅಷ್ಟೇ; ದಿನದ ಯಾವುದೇ ಹೊತ್ತಿನಲ್ಲಿ ಮನೆಯ ಪ್ರತಿ ಮೂಲೆಯಲ್ಲೂ ಅದರ ತೋರಣ, ಬೆಳದಿಂಗಳು ಕೂಡ. ಅವರೇ ಟೊಂಕಕಟ್ಟಿ ಕಟ್ಟಿದ ಮನೆಗೆ ಈಗ ಬರೋಬ್ಬರಿ ಇಪ್ಪತ್ತು ವರ್ಷ. ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದ ಈ ಮನೆ ಆಗಲೂ, ಈಗಲೂ, ಯಾವಾಗಲೂ ಸಂಪೂರ್ಣ ಸ್ವಾವಲಂಬಿ. ಮನೆಯಲ್ಲಿರುವ ಎಲ್ಲರೂ ದೃಢವಾಗಿ ನಂಬಿದ್ದು ಒಂದನ್ನೇ-ಅದು ಪ್ರಕೃತಿ.
ಶಿವಕುಮಾರ್ ಅವರ ಮನೆ ಸೌರಭದೊಳಗೆ ಚೆಂದ ನೋಟ
ಈ ವಿಜ್ಞಾನಿಯ ಮನೆಗೊಂದು ಸುತ್ತುಹಾಕಿ ಈಚೆ ಬಂದರೆ ಒಂದು ದೊಡ್ಡ ಗಿಲ್ಟ್ ನಮ್ಮನ್ನು ಕಾಡುತ್ತದೆ. ನಿಜಕ್ಕೂ ನಾವು ಎಷ್ಟೊಂದು ಪರಾವಲಂಬಿಗಳಲ್ಲವೆ? ಪರಿಸರ ರಕ್ಷಣೆಯ ಕುರಿತು ಘೊಷಣೆಗಳನ್ನೆಲ್ಲ ಬದಿಗಿಟ್ಟು ಸೀದಾಸಾದಾ ಹೀಗೆ ಬದುಕಬಹುದಾ? ಎಂಬ ಪ್ರಶ್ನೆಗೆ ಸರಳ ಉತ್ತರ ಎ. ಆರ್. ಶಿವಕುಮಾರ್. ಯಾವುದೇ ಬಿಗುಮಾನ, ಭಿಡೆ ಇಲ್ಲದೆ ತೆರೆದ ಪುಟದಂತಿರುವ ಇವರೊಂದಿಗೆ ಒಂದು ದಿನ ಕಳೆದುಬಿಟ್ಟರೆ ಸಾಕು ಎಷ್ಟೋ ಸಂಕೀರ್ಣ ಸಂಗತಿಗಳಿಂದ ಮುಕ್ತರಾಗುತ್ತೇವೆ. ಪ್ರತಿ ಮನೆ ಕಟ್ಟುವಾಗಲೂ ಬೋರ್​ವೆಲ್ ಕೊರೆಯಲೇಬೇಕಾ? ದುಬಾರಿ ಸಾಮಗ್ರಿಗಳನ್ನು ಬಳಸಬೇಕಾ? ಹತ್ತು-ಹನ್ನೆರಡು ಪಿಲ್ಲರ್​ಗಳನ್ನು ಎತ್ತರಕ್ಕೆ ನಿರ್ಮಿಸಬೇಕಾ? ಒಳಗೊಂದು ಹೊರಗೊಂದು ಪೇಂಟ್ ಬಳಿದು ಕನ್​ಪ್ಯೂಸ್ ಆಗಬೇಕಾ ಎಂಬ


ಸೌರಭದ ಮುಂಭಾಗ


ಮೂಲ ಅಂಶಗಳಿಗೇ ಪರಿಹಾರ 
ಕಂಡುಕೊಳ್ಳಲು ಸಾಧ್ಯವಾಗುತ್ತದೆ.

ಶಿಲೆಕಲ್ಲುಗಳಿಂದಲೇ ಕಟ್ಟಿದ ಮನೆ
ಬೆಂಗಳೂರಿನ ವಿಜಯನಗರದ ಬಸವೇಶ್ವರ ಬಡಾವಣೆಯಲ್ಲಿ ಅವರು 20 ವರ್ಷಗಳ ಹಿಂದೆ 40X60 ಜಾಗದಲ್ಲಿ ಮನೆ ಕಟ್ಟಲು ಯೋಚಿಸಿದಾಗ ಅಲ್ಲಿ ನೀರಿನ ಸಂಪರ್ಕವೇ ಇರಲಿಲ್ಲ. ಆಗ ಶಿವಕುಮಾರ್, ಕಳೆದ 100 ವರ್ಷಗಳಲ್ಲಿ ಬಿದ್ದ ಮಳೆಯ ಲೆಕ್ಕಾಚಾರ ಹಾಕುತ್ತಾರೆ. ಈ ಪ್ರದೇಶದಲ್ಲಿ ಅಪಾರ ಪ್ರಮಾಣದ ಮಳೆ ಬಿದ್ದ ಲೆಕ್ಕ ಸಿಗುತ್ತದೆ. ಆಗಲೇ, ‘ಪ್ರತಿ ಹನಿಯೂ ನನಗೆ ಬೇಕುಅನ್ನುವ ಹಠಕ್ಕೆ ಬೀಳುತ್ತಾರೆ. ಇವರಿಗೆ ಪೂರ್ತಿಗೆ ಪೂರ್ತಿ ಸಾಥ್ ಕೊಟ್ಟವರು ಪತ್ನಿ ಸುಮಾ. ಇಬ್ಬರೂ ಮೊದಲು ಮಾಡಿದ ಕೆಲಸವೆಂದರೆ ಬಿದ್ದ ಮಳೆನೀರು ಒಂಚೂರೂ ಆಚೆ ಹೋಗದಂತೆ ಸಂಗ್ರಹಿಸುವ ಕಾಯಕ. ಹಾಗೆ ಅವರ ಮಳೆಪಾತ್ರೆಗೆ ಬಂದು ಬಿದ್ದಿದ್ದು  ಬರೋಬ್ಬರಿ 30 ಸಾವಿರ ಲೀಟರ್ ಮಳೆನೀರು! ಒಂದೇ ಒಂದು ಹನಿ ನೀರನ್ನು ಹೊರಗಿನಿಂದ ತರದೆ, ಬೋರ್​ವೆಲ್ ಕೂಡ ಉಪಯೋಗಿಸದೆ ಇಡೀ ಮನೆ ಮಳೆನೀರಿನಲ್ಲೇ ನಿರ್ಮಾಣಗೊಳ್ಳುತ್ತದೆ. ಹಾಗೆ ಕಟ್ಟಡ ಮೇಲೆದ್ದಾಗ ಸುತ್ತಮುತ್ತಲ ಬಡಾವಣೆಯವರೆಲ್ಲ ಅಚ್ಚರಿಪಟ್ಟಿದ್ದರು - ಕೇವಲ ಮಳೆನೀರಿನಿಂದ ಇಷ್ಟು ದೊಡ್ಡ ಮನೆ (ಸೌರಭ) ಕಟ್ಟಲು ಸಾಧ್ಯವೆ ಎಂದು. ಒಂದು ಪೂರ್ವ ಯೋಜನೆ, ಮಾಡಲೇಬೇಕು ಎಂಬ ದೃಢಸಂಕಲ್ಪವಿದ್ದರೆ ಸಾಧ್ಯ ಎಂಬುದಕ್ಕೆ ಅವರ ಮನೆಯೇ ಉದಾಹರಣೆ

.ಅವರ ಮನೆ ಸೌರಭದ ನೆಲಮಹಡಿಯ ಮೇಲ್ಛಾವಣಿಯ ಮೇಲ್ಭಾಗದಲ್ಲಿ 5 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕ್​ ಇದೆ. ಅದಕ್ಕೆ ಮಳೆನೀರು ಹರಿಯುತ್ತದೆ, ಅದರೊಳಗೇ ಅಳವಡಿಸಿರುವ ವಿಶೇಷ ವಿನ್ಯಾಸದ ಸ್ಟೆಬಿಲೈಸೇಷನ್ ತೊಟ್ಟಿಯ ಮೂಲಕ ಒಳಹರಿಯುವ ನೀರು ಪಾಪ್-ಅಪ್ ಫಿಲ್ಟರ್​ನಲ್ಲಿ ಪರಿಶೋಧನೆಗೆ ಒಳಗಾಗುತ್ತದೆ. ಈ ಟ್ಯಾಂಕ್ ಮೇಲ್ಭಾಗದಲ್ಲಿಯೇ ಇರುವುದರಿಂದ ನೀರನ್ನು ಪಂಪ್ ಮಾಡಬೇಕಾದ ಅಗತ್ಯವಿರುವುದಿಲ್ಲ. ಹಾಗಾಗಿ ವಿದ್ಯುತ್ ಬಳಕೆ ಅಗತ್ಯವಿಲ್ಲ.
ಮೊದಲ ಮಹಡಿಗೆ ತಾಕಿಕೊಂಡಿರುವ ಮಳೆ ನೀರಿನ ಟ್ಯಾಂಕ್
ಮೇಲ್ಭಾಗದ ಟ್ಯಾಂಕ್​ನಲ್ಲಿ ಸಂಗ್ರಹವಾಗುವ ಹೆಚ್ಚುವರಿ ನೀರನ್ನು ಮನೆಯ ಮುಂಭಾಗದ ಸಂಪ್​ಗೆ ಹರಿಸಲಾಗುತ್ತದೆ. ಇದರ ಸಾಮರ್ಥ್ಯ 25 ಸಾವಿರ ಲೀ. ಇಲ್ಲಿಂದ ಪಕ್ಕದ ಗ್ಯಾರೇಜ್ ತಳಭಾಗದಲ್ಲಿರುವ ಸಂಪ್​ಗೆ 10 ಸಾವಿರ ಲೀ. ಸೈಫನ್ ಆಗುತ್ತದೆ. ಇವೆರಡೂ ತೊಟ್ಟಿಗಳಲ್ಲಿ ಹೆಚ್ಚಾದ ನೀರನ್ನು ಅಂತರ್ಜಲ ಪುನಶ್ಚೇತನಕ್ಕೆ ಬಳಸಿಕೊಳ್ಳಲಾಗುತ್ತದೆ. ಅದಕ್ಕಾಗಿ ನೆಲದಾಳದಲ್ಲಿ 4 ಹಳೆಯ ಡ್ರಮ್ಗಳನ್ನು ಒಂದಕ್ಕೊಂದು ಜೋಡಿಸಿ ಇಂಗುಗುಂಡಿ ವ್ಯವಸ್ಥೆ ಮಾಡಲಾಗಿದೆ. ಇಷ್ಟೆಲ್ಲ ಆಗಿಯೂ ಮಳೆನೀರು ಮಿಕ್ಕಿದಾಗ ಅವರು ಅನಿವಾರ್ಯವಾಗಿ ಕೇವಲ 80 ಅಡಿ ಆಳದ ಬೋರ್​ವೆಲ್ ಕೊರೆಸಿ ಅಲ್ಲಿ ಅಂತರ್ಜಲ ಮರುಪಾವತಿಗೆ ವ್ಯವಸ್ಥೆ ಮಾಡಿದ್ದಾರೆ. ಅಂದರೆ ತಾವೇ ನಿರ್ಮಿಸಿಕೊಂಡ ಒಟ್ಟು 45 ಸಾವಿರ ಲೀ. ಜಲಾಗಾರ ಹಾಗೂ ಮರುಪೂರಣಗೊಂಡ ಜಲಸಾಗರದ ಒಡೆಯ ಶಿವಕುಮಾರ್.
ವಿಜ್ಞಾನಿ ಶಿವಕುಮಾರ್ ಅವರ ಬೊಗಸೆಯಲ್ಲಿ "ಭೂಜೀವಿ' 
ಇದರಿಂದಾಗಿ ವರ್ಷದ ಅಷ್ಟೂ ದಿನ ಸಮೃದ್ಧ ನೀರು. ಪ್ರತಿಯೊಂದಕ್ಕೂ ಮಳೆನೀರೇ ಆಶ್ರಯ. ಪಾತ್ರೆ, ಬಟ್ಟೆ ತೊಳೆದ ನೀರೂ ಪುನರ್​ಬಳಕೆಯಾಗುತ್ತದೆ. ಬಟ್ಟೆ ವಾಶ್ ಮಷಿನ್​ನಿಂದ ಬಂದ ನೀರೆಲ್ಲವೂ ಭೂತಳದಲ್ಲಿರುವ ಇನ್ನೊಂದು ಟ್ಯಾಂಕ್​ನಲ್ಲಿ ಸಂಗ್ರಹವಾಗುತ್ತದೆ. ಸೌರವಿದ್ಯುತ್ ಸಂಪರ್ಕದ ಪುಟ್ಟ ಪಂಪ್ ಕೊಳೆನೀರನ್ನು ಟೆರೇಸ್ ಮೇಲಿರುವ ಎರಡು ಪುಟಾಣಿ ಡ್ರಮ್ಳಿಗೆ ಸರಬರಾಜು ಮಾಡುತ್ತದೆ. ಅಲ್ಲಿ ಅದು ಸಂಸ್ಕರಣೆಗೊಳ್ಳುತ್ತದೆ. ಹೇಗೆ? ಸಿಂಪಲ್, ಅದರಲ್ಲಿ ಆಳೆತ್ತರದ ಜೊಂಡು, (ಹುಲ್ಲು, ವಿಟುವೆರಾ) ಬೆಳೆಯಲಾಗಿದೆ. 
ಸೋಪ್ ನೀರನ್ನು ಶುದ್ಧಗೊಳಿಸುವ ವಿಟುವೆರಾ ಹುಲ್ಲು
ಅದರ ಬೇರುಗಳಲ್ಲಿ ನೀರು ಸಂಸ್ಕರಣೆಗೊಂಡು ಇನ್ನೊಂದು ಪ್ರತ್ಯೇಕ ಟ್ಯಾಂಕ್​ಗೆ ಪೂರೈಕೆಯಾಗುತ್ತದೆ. ಅದನ್ನು ಮತ್ತೆ ಟಾಯ್ಲೆಟ್ ಫ್ಲಶ್​ಗೆ ಉಪಯೋಗಿಸುತ್ತಾರೆ. ಅಡುಗೆಮನೆಯಲ್ಲಿ ತರಕಾರಿ, ಪಾತ್ರೆ ತೊಳೆದ ನೀರು ಮನೆಯ ಸುತ್ತಲೂ ಇರುವ ಗಿಡಗಳಿಗೆ ಭರಪೂರ ಸಾಕು. ಅಂದರೆ ಅಷ್ಟೂ ಜಾಗದಲ್ಲಿ ಬಿದ್ದ ಮಳೆ ಪುನರ್ಬಳಕೆಯಾಗಿ ಮತ್ತೆ ಮತ್ತೆ ನಿಮ್ಮ ಬೊಗಸೆಗೆ ಬರುವುದು ವಿಶೇಷ.
ಅನೇಕ ಕಡೆ ನೀರಿನ ತೀವ್ರ ಬಿಕ್ಕಟ್ಟು, ಕುಡಿಯಲಿಕ್ಕೇ ನೀರಿಲ್ಲ ಎಂಬುದನ್ನು ಓದುತ್ತಿರುತ್ತೇವೆ. ಆದರೆ ಮಳೆನೀರಿಗಿಂತ ಪರಿಶುದ್ಧವಾದದು ಬೇರಿನ್ನಾವುದೂ ಇಲ್ಲ. ಈ ಬಿಕ್ಕಟ್ಟಿಗೆ ನಿಸರ್ಗದಲ್ಲೇ ಉತ್ತರವಿದೆ ಎಂಬುದನ್ನು ನಾವು ಗಮನಿಸುವುದೇ ಇಲ್ಲಎನ್ನುವ ಶಿವಕುಮಾರ್ ಕೊಡುವ ಮಳೆಯ ಲೆಕ್ಕಾಚಾರವನ್ನು ಒಮ್ಮೆ ಗಮನಿಸಿ; ಬೆಂಗಳೂರಿಗೆ ವರ್ಷವಿಡೀ ಅಂದಾಜು 1000 ಮಿ.ಮೀ. ಮಳೆ ಬೀಳುತ್ತದೆ. 2400 ಚದರಡಿ ವಿಸ್ತೀರ್ಣದ ನಿವೇಶನಕ್ಕೆ ಅಂದಾಜು 2.23 ಲಕ್ಷ ಲೀಟರ್ ಮಳೆ ಬೀಳುತ್ತದೆ. ಒಂದು ಮನೆಯ ಬಳಕೆಗೆ ವಾರ್ಷಿಕ ಬೇಕಾದುದು 1.5 ಲೀ.ನಿಂದ 1.8 ಲಕ್ಷ ಲೀ. ಮಾತ್ರ. ಅಂದರೆ ಇನ್ನೂ ಹೆಚ್ಚುವರಿ ನೀರು ಉಳಿದುಕೊಳ್ಳುತ್ತದೆ. ಯಾಕೆ ಬೇಕು ಹೊರಗಿನಿಂದ ನೀರು? ಬೋರ್​ವೆಲ್ ಕೊರೆಯುವ ಉಸಾಬರಿ?
ಮಳೆ ನೀರು ಫಿಲ್ಟರ್ ಆಗುತ್ತದೆ ಇಲ್ಲಿ...
***
ಸೂರ್ಯನನ್ನು ನಂಬಿ
ಬರೀ ಮಳೆನೀರಿಗಷ್ಟೇ ಈ ವಿಜ್ಞಾನಿಯ ಆಸಕ್ತಿ ನಿಲ್ಲುವುದಿಲ್ಲ. ಅವರ ಮನೆಯ ತಿಂಗಳ ವಿದ್ಯುತ್ ಬಳಕೆ 90ರಿಂದ 100 ಯೂನಿಟ್ ಮಾತ್ರ. ಅದೂ ಮಿಕ್ಸಿ, ಟಿವಿ ಮತ್ತು ಪಂಪ್ ಬಳಕೆಗೆ ಸೀಮಿತ. ಬೆಳಕು, ಶಾಖಕ್ಕೆಲ್ಲ ಅವರು ನಂಬಿದ್ದು ಸೂರ್ಯನನ್ನು. ಮನೆಯ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನೆಲ್ ಇದೆ, ಅದಕ್ಕೆ ಬೇಕಾದ ಬಿಡಿಭಾಗಗಳನ್ನೆಲ್ಲ ಖರೀದಿಸಿ ಪೂರ್ತಿ ಪ್ಯಾನೆಲ್ ಜೋಡಿಸಿದ್ದೂ ಸ್ವತಃ ಶಿವಕುಮಾರ್. ಮನೆಯ ಬಹುತೇಕ ಭಾಗಗಳಲ್ಲಿ ಇರುವುದು ಎಲ್​ಇಡಿ ಲೈಟುಗಳೇ. ಮನೆಯ ಒಂದು ಭಾಗದ ಮೇಲ್ಛಾವಣಿಯ ನಡುವಿನಲ್ಲಿ ಗಾಜುಗಳನ್ನು ಅಳವಡಿಸಲಾಗಿದೆ. ಎಲ್ಲಿ ಬೆಳಕು ಹರಿಯುವುದಿಲ್ಲವೋ ಅಲ್ಲಿಗೆ ಪ್ರತಿಬಿಂಬ ಬೀಳುವ ರೀತಿಯಲ್ಲಿ ನಾಲ್ಕು ಕಡೆ ಕನ್ನಡಿ ಜೋಡಿಸಲಾಗಿದೆ. ಇದರಿಂದ ಮನೆಯ ಮೂಲೆ ಮೂಲೆಗೂ ಬೆಳಕಿನ ಕಾರಂಜಿ ಹರಿಯುತ್ತದೆ. ಹಾಲು ಸುರಿವ ಬೆಳಂದಿಗಳ ದಿನಗಳಲ್ಲಿ ಸಿಗುವ ಆನಂದಕ್ಕಂತೂ ಎಣೆಯಿಲ್ಲ.
ಸೌರಭದ ಮೇಲ್ಛಾವಣಿಯಿಂದ ಬೆಳಕು ಸುರಿವ ಬಗೆ ಹೀಗಿದೆ...
ಘನತ್ಯಾಜ್ಯವನ್ನು ಬಿಟ್ಟು ಪೇಪರು, ತರಕಾರಿ, ಹಣ್ಣು, ಉಳಿದೆಲ್ಲ ತ್ಯಾಜ್ಯವನ್ನು ಎರೆಹುಳುಗಳು ತಿಂದು ಮುಗಿಸುತ್ತವೆ. ಹಾಗೆ ಉತ್ಪತ್ತಿಯಾದ ಗೊಬ್ಬರವನ್ನು ಮನೆಯ ಸುತ್ತಲೂ ಇರುವ ಕೈತೋಟಗಳಿಗೆ ಬಳಸಿಕೊಳ್ಳುತ್ತಾರೆ. ಉಳಿದಿದ್ದು ನೆರೆಹೊರೆಯವರಿಗೂ ಸಲ್ಲುತ್ತದೆ. ಅವರ ಮನೆಯ ಸುತ್ತಲೂ ಇವೆ ಗಿಡ-ಮರಗಳು, ಮೀನಿನ ಕೊಳಗಳು. ಅದು ಮನೆಯ ಮೇಲ್ಛಾವಣಿಗೂ ವಿಸ್ತರಿಸಿದೆ. ಹಾಗಾಗಿ ಹಕ್ಕಿ-ಪಕ್ಕಿಗಳು, ಪಾತರಗಿತ್ತಿಗಳು ನಿರಂತರ ಅತಿಥಿಗಳು. ಇದರಿಂದ ಮನೆ ಸುತ್ತ ಯಾವತ್ತೂ ತೇವಾಂಶವನ್ನು ಕಾಯ್ದಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಜೊತೆಗೆ ಧೂಳು, ಬಿಸಿಗಾಳಿ ಮನೆಯೊಳಗೆ ಸುತಾರಾಂ ಪ್ರವೇಶ ಮಾಡುವುದಿಲ್ಲ. ಎಲ್ಲಕ್ಕಿಂತ ವಿಶೇಷವೆಂದರೆ ಮನೆಯ ಮೇಲ್ಛಾವಣಿಗೆ ಸುಣ್ಣ ಬಳಿದಿರುವುದು! ಹಾಗೆ ಮಾಡಿರುವುದರಿಂದ ಸೂರ್ಯನ ಶಾಖ ಒಳಪ್ರವೇಶ ಮಾಡುವುದಿಲ್ಲ. ಒಟ್ಟಾರೆ ಇಡೀ ಮನೆ ತಣ್ಣಗೆ.
ಮನೆಯ ಮೇಲೆ, ಆಚೀಚೆ ಎಲ್ಲೆಲ್ಲೂ ಹಸಿರು ತೋರಣ
ಪಿಲ್ಲರ್ ಇಲ್ಲ
ಇಪ್ಪತ್ತು ವರ್ಷಗಳ ಹಿಂದೆ 1800 ಚದರಡಿಯ ಮನೆಗೆ ತಗುಲಿದ ವೆಚ್ಚ ತೀರಾ ಕಡಿಮೆ. ಪ್ರತಿಹಂತದಲ್ಲಿಯೂ, ಪ್ರತಿ ಸಾಮಗ್ರಿ ಬಳಕೆಯಲ್ಲೂ ಎಚ್ಚರಿಕೆ ವಹಿಸಲಾಗಿದೆ. ಅಡಿಪಾಯಕ್ಕೆ ಬಳಸಿದ ಶಿಲೆಕಲ್ಲುಗಳನ್ನು ಅದೇ ರೂಪದಲ್ಲಿ, ಡ್ರೆಸ್ ಕೂಡ ಮಾಡದೆ ಗೋಡೆಗೂ ಬಳಸಿಕೊಳ್ಳಲಾಗಿದೆ. ಕೆಲ ಗೋಡೆಗಳಿಗೆ ಇಟ್ಟಿಗೆಗಳನ್ನು ಇಲಿ ಬೋನಿನ ರೂಪದಲ್ಲಿ ಕಟ್ಟಲಾಗಿದೆ; ಮಧ್ಯದಲ್ಲಿ ಜಾಗ ಬಿಡಲಾಗಿದೆ. ಇದರಿಂದ ಮನೆಯೊಳಗೆ ಸದಾ ತಂಪು ತಂಪು, ಮಾತ್ರವಲ್ಲ ಒಟ್ಟಾರೆ ವೆಚ್ಚವನ್ನೂ ತಗ್ಗಿಸುತ್ತದೆ. ಇದು ಹೊಸ ಮಾದರಿಯಲ್ಲವೇ ಎಂದು ಅವರನ್ನು ಪ್ರಶ್ನಿಸಿದರೆ; ‘ಇಲ್ಲ ಸರ್, ಇದು ಹೊಸತಲ್ಲ. ಇಡೀ ಯುರೋಪನ್ನು ಕಟ್ಟಿದ್ದು ಇದೇ ಮಾದರಿಯಲ್ಲಿ, ನಾವು ಅಳವಡಿಸಿಕೊಂಡಿಲ್ಲ ಅಷ್ಟೆಅನ್ನುವ ಉತ್ತರ ಅವರಿಂದ ಬರುತ್ತದೆ. ಇಷ್ಟೆಲ್ಲ ಇರುವ ಮನೆ ವಾಸ್ತುಪ್ರಕಾರ ಕಟ್ಟಲಾಗಿದೆಯೇ? ‘ಖಂಡಿತ ಇಲ್ಲ, ನಮ್ಮ ಮನೆ ವಿಜ್ಞಾನದ ಪ್ರಕಾರ ಕಟ್ಟಿರುವುದು, ಬಿಸಿಲು, ಗಾಳಿ, ನೀರನ್ನು ನಂಬಿದ ವಿಜ್ಞಾನಎಂದು ನಗುತ್ತಾರೆ. ಇಷ್ಟು ದೊಡ್ಡ ಮನೆಗೆ ಆಧಾರವಾಗಿ ಒಂದೇ ಒಂದು ಪಿಲ್ಲರ್ ಕೂಡ ಇಲ್ಲ!
ಮನೆಯ ಕೆಳಗೆ ಜಲಸಾಗರ, ಮೇಲೆ ಸೌರ ಭಂಡಾರ, ಸುತ್ತಲೂ ಹಸಿರ ತೋರಣ! ಒಬ್ಬ ಮನುಷ್ಯ ತನ್ನ ಸುತ್ತಲೂ ಸುಸ್ಥಿರ ಬದುಕಿನ ಪ್ರಭಾವಳಿಯನ್ನು ನಿರ್ಮಿಸಿಕೊಳ್ಳುವುದೆಂದರೆ ಇದೇ ಅಲ್ಲವೇ? ಈಗ ಅವರ ಮನೆಯ ಹೊರಗೆ ಮಳೆ ಸುರಿಯುತ್ತಿದೆ; ಶಿವಕುಮಾರ್ ಅವರ ಇಡೀ ಕುಟುಂಬ ಸುಗ್ಗಿಯ ಸಂಭ್ರಮದಲ್ಲಿದೆ.
***
ಏಳು ವಿವಿಧ ಪೇಟೆಂಟ್​ಗಳು
ಮೈಸೂರು ವಿವಿಯಲ್ಲಿ ಬಿಇ ಮಾಡಿರುವ ಶಿವಕುಮಾರ್ ಭಾರತೀಯ ವಿದ್ಯಾಭವನದಲ್ಲಿ ಬಿಜಿನೆಸ್ ಮ್ಯಾನೇಜ್​ವೆುಂಟ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇಂಡಿಯನ್ ಇನ್​ಸ್ಟಿಟ್ಯೂಟ್ ಆಫ್ ಸೈನ್ಸ್​ನಲ್ಲಿ ಹಣಕಾಸು ನಿರ್ವಹಣಾ ಪ್ರೊಫೀಸಿಯನ್ಷಿ ಕೋರ್ಸ್ ಮಾಡಿರುವ ಇವರು ಸದ್ಯ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಮಂಡಳಿಯಲ್ಲಿ ಪ್ರಧಾನ ಸಂಶೋಧಕರು ಹಾಗೂ ವಿಜ್ಞಾನಿ. ಟೈಮ್ ಫೋರ್ಬ್ಸ್ ಪತ್ರಿಕೆಗಳಲ್ಲೂ ಇವರ ಬಗೆಗಿನ ಲೇಖನಗಳು ಪ್ರಕಟವಾಗಿವೆ. ವಿಧಾನಸೌಧ, ವಿಕಾಸಸೌಧ, ಬೆಂಗಳೂರಿನ ಪಾಲಿಕೆ ಕಟ್ಟಡ, ಹೈಕೋರ್ಟ್ ಸೇರಿದಂತೆ ಬೆಂಗಳೂರಿನ ಪ್ರಮುಖ ಹತ್ತು ಕಟ್ಟಡಗಳು ಸಂಪೂರ್ಣ ಮಳೆಕೊಯ್ಲನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದ್ದು ಶಿವಕುಮಾರ್ ಅವರಿಂದ. ಇದಲ್ಲದೇ ಇನ್ಪೋಸಿಸ್, ಬಾಷ್, ಮೆಟ್ರೋ ರೈಲಿನಲ್ಲಿ ಕತ್ತಾಳೆ (ಭೂತಾಳೆ) ಎಲೆಯಿಂದ ಫೈಬರ್ ತೆಗೆಯುವ ಯಂತ್ರ ಸೇರಿದಂತೆ ಏಳು ಸಂಶೋಧನೆಗಳಿಗೆ ಪೇಟೆಂಟ್​ಗಳನ್ನು ಹೊಂದಿರುವುದೂ ಅವರ ವಿಶೇಷ. ಲೋವಾಲ್ಟ್ ಹೈ ಎಫೀಸಿಯನ್ಸಿ ವಾಟರ್ ಹೀಟರ್ ಕಂಡುಹಿಡಿದ ಇವರಿಗೆ 2002ರಲ್ಲಿಯೇ ರಾಷ್ಟ್ರಪ್ರಶಸ್ತಿ ಸಂದಿದೆ.
***
ವಿಧಾನ ಬೆಳ್ಳಿ, ನೀರು ಬಂಗಾರ
ಈ ಶುದ್ಧೀಕರಣ ಮುಂದೆ ಇನ್ಯಾವ ಅಕ್ವಾಗಾರ್ಡ್ ಬೇಕಿಲ್ಲ....!
ನೀರಿನ ಸಂಸ್ಕರಣೆಗೆ ಯಾವುದೇ ದುಬಾರಿ ನೀರು ಶುದ್ಧೀಕರಣದ ಅಗತ್ಯವಿಲ್ಲ. ಸಂಪೂರ್ಣ ಕವರ್ ಮಾಡಿರುವ ಒಂದು ಪ್ಲಾಸ್ಟಿಕ್ ಅಥವಾ ಸ್ಟೀಲ್ ಪಾತ್ರೆಯ ತಳಭಾಗದಲ್ಲಿ ಅಥವಾ ಅದರ ಸುತ್ತಲೂ ಶುದ್ಧ ಬೆಳ್ಳಿಯ ತೆಳ್ಳನೆಯ ಶೀಟ್ ಇಟ್ಟು ನೀರು ಹಾಕಿ. ಹತ್ತು ಗಂಟೆ ಕಾಲ ನೀರಿಗೆ ಬೆಳಕೇ ಸೋಕಬಾರದು, ಹಾಗೆ ಕಾಯ್ದಿಡಿ. ಬಳಿಕ ಅದನ್ನು ತೆಗೆದು ನಿಮಗೆ ಬೇಕಾದ ಪಾತ್ರೆಯಲ್ಲಿ ಹಾಕಿಟ್ಟುಕೊಳ್ಳಿ. ಝೀರೋ ಬ್ಯಾಕ್ಟೀರಿಯಾದ ಇಂತಹ ನೀರಿನ ರುಚಿಗೆ ನೀವೇ ಬೆರಗಾಗುತ್ತೀರಿ. ಇದರ ಸೂತ್ರ ಇಷ್ಟೇ; ಸಿಲ್ವರ್​ನಲ್ಲಿ ಬ್ಯಾಕ್ಟೀರಿಯಾವನ್ನು ಕೊಲ್ಲುವ ಅಯಾನ್ ಅಂಶವಿರುತ್ತದೆ. ನೀರಿನಲ್ಲಿರುವ ಬ್ಯಾಕ್ಟೀರಿಯಾ ಅಯಾನ್ ಸಂಪರ್ಕದಿಂದ ನಾಶವಾಗುತ್ತವೆ. ನೀರಿನಲ್ಲಿ ಸಿಲ್ವರ್ ಕರಗುವುದಿಲ್ಲ. ಅಂದರೆ ಕುಡಿಯುವ ನೀರಿನಲ್ಲಿ ಬೆಳ್ಳಿಯಂಶ ಸೇರಿಕೊಳ್ಳುವುದಿಲ್ಲ. ಬೆಳ್ಳಿ ಮಾತ್ರ ಶುದ್ಧವಾಗಿರಬೇಕು, ಅದಕ್ಕೆ ಬೇರಿನ್ನಾವುದೂ ಮಿಶ್ರವಾಗಬಾರದು. ಹತ್ತು ಲೀ. ನೀರಿಗೆ ಎ-4 ಅಳತೆಯ ಬೆಳ್ಳಿ ತಗಡು ಬೇಕಾಗುತ್ತದೆ. 3-4 ದಿನಗಳಿಗೊಮ್ಮೆ ಸ್ವಚ್ಛಗೊಳಿಸಬೇಕು. ಕ್ಲೀನ್ ಮಾಡಿದ ತಕ್ಷಣ ನೀರಿರುವ ಪಾತ್ರೆಯೊಳಗೆ ಹಾಕದಿದ್ದರೆ ಅದು ಸಿಲ್ವರ್ ಆಕ್ಷೈಡ್ ಆಗುತ್ತದೆ. ಹಾಗೆ ಇಟ್ಟ ಸಿಲ್ವರ್ ಶೀಟ್ ಬ್ಯಾಕ್ಟೀರಿಯಾವನ್ನು ಸಾಯಿಸದು. ಶಿವಕುಮಾರ್ ಮನೆಯಲ್ಲಿ ಅಡುಗೆಗೆ, ಕುಡಿಯಲು ಇದೇ ನೀರಿನ ಬಳಕೆ.
***

  
ಫ್ರಿಡ್ಜ್ ನ್ನು ಹೀಗೆ ತೆಗೀರಿ....



ಫ್ರಿಡ್ಜ್ ಉಳಿಸುತ್ತದೆ ಇಂಧನ!
ಶಿವಕುಮಾರ್ ಅವರ ಮನೆಯಲ್ಲಿರುವ ಫ್ರಿಡ್ಜ್ ಕತೆ ಕೇಳಿ; ನಿಮ್ಮ ಮನೆಯಲ್ಲಿ ಇರುವ ಫ್ರಿಡ್ಜ್ ಬಾಗಿಲನ್ನು ಹೇಗೆ ತೆಗೆಯುತ್ತೀರಿ? ಎಡಭಾಗದಿಂದ ತಾನೆ? ಹಾಗೆ ಮಾಡುವುದು ತಾಂತ್ರಿಕವಾಗಿ ಸರಿಯಲ್ಲ. ಅದರಿಂದ ಹೆಚ್ಚು ವಿದ್ಯುತ್  ಖರ್ಚಾಗುತ್ತದೆ. ಎಡಭಾಗದ ಫ್ರಿಡ್ಜ್ ಬಾಗಿಲು ಎಳೆದ ತಕ್ಷಣ ಅದು ನಿಮ್ಮ ಬಲಗೈ ಬರುತ್ತದೆ. ಒಳಗಿದ್ದ ವಸ್ತುಗಳನ್ನು ತೆಗೆಯಲು ಎಡಗೈ ಬಳಸುತ್ತೀರಿ. ಅದು ನಿಜಕ್ಕೂ ಅನನುಕೂಲವಲ್ಲವಾ ಎಂದು ನೀವೆಂದಾದರೂ ಯೋಚಿಸಿದ್ದೀರಾ? ಇಲ್ಲ. ಕೊಟ್ಟಿದ್ದನ್ನು ಬಳಸಿಕೊಂಡು ಹೋಗುವ ಜಾಯಮಾನ ನಮ್ಮದು.
ಆದರೆ ಶಿವಕುಮಾರ್ ಅವರ ಮನೆಯ ಫ್ರಿಡ್ಜ್ ಬಲಭಾಗದಿಂದ ತೆರೆಯುವ ವ್ಯವಸ್ಥೆಯನ್ನು ಇವರೇ ಮಾಡಿಕೊಂಡಿದ್ದಾರೆ. ಅದು ಎಲ್ಲಕ್ಕೂ ಅನುಕೂಲ ಮತ್ತು ವಿದ್ಯುತ್ ಬಳಕೆ ಶೇ.28ರಷ್ಟು ಕಡಿಮೆಯಾಗುತ್ತದೆ.

ನಿಡುಸುಯ್ದ ಭೂತಾಯಿ
ಬೆಂಗಳೂರಿನಲ್ಲಿ ತಾನು ಖರೀದಿಸಿದ 3500 ಅಡಿ ವಿಸ್ತೀರ್ಣದ ಜಾಗದಲ್ಲಿ ಕಟ್ಟಡ ಕಟ್ಟಲು ಶುರು ಮಾಡಿದ ವ್ಯಕ್ತಿಯೊಬ್ಬ ಬೋರ್​ವೆಲ್ ಕೊರೆಸುತ್ತಾನೆ. 850 ಅಡಿ ಆಳಕ್ಕೆ ಹೋದರೂ ಒಂದು ಹನಿ ನೀರಿಲ್ಲ. ಅಂತಹ ಸಂದರ್ಭದಲ್ಲಿ ಆತ ಮಾಡಿದ ಕೆಲಸವೇನು ಗೊತ್ತೆ? 850 ಅಡಿ ಆಳಕ್ಕೆ ಡೈನಮೇಟ್ ಇಟ್ಟು ಸ್ಪೋಟಿಸಿದ್ದು. ಭೂಮಿಯ ಮೇಲ್ಭಾಗದಲ್ಲಿರುವ ಕೊಳವೆಯಲ್ಲಿ ಸಣ್ಣಗೆ ಹೊಗೆ ಬಂದು ಭೂತಾಯಿ ನಿಡುಸುಯ್ಯುತ್ತಾಳೆ. ಕೊನೆಗೂ ಆತನ ಹಠ ಗೆದ್ದಿತಂತೆನೀರು ಸಿಕ್ಕಿತಂತೆ. ಆದರೆ ಭೂತಾಯಿಯ ಗರ್ಭಕ್ಕೇ ಆದ ಹಾನಿಗೆ ಬೆಲೆ ಕಟ್ಟುವವರು ಯಾರುನಮ್ಮ ಸುತ್ತ ಇರುವ ಅಂತಹ ದುರುಳರಿಗೆ ಸಜ್ಜನ ವಿಜ್ಞಾನಿ ಶಿವಕುಮಾರ್ ಎಲ್ಲಿ ಅರ್ಥವಾಗುತ್ತಾರೆ
ನಮ್ಮ ನಡುವಿನ ಸಜ್ಜನ ಶಿವಕುಮಾರ್ ಅವರಿಗೆ ಒಂದು ಸಲಾಂ ಹೇಳೋಣ ಬನ್ನಿ.





ಕಾಮೆಂಟ್‌ಗಳು

kenave ಹೇಳಿದ್ದಾರೆ…
ಧನ್ಯವಾದಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!