ಬಾಲ್ಯ ಕಳೆದಿದೆ, ಯೌವನ ಗಿಲೀಟು ಹಚ್ಚಿಕೊಂಡಿದೆ


ಆವತ್ತು ಆದ್ಯಂತವಾಗಿ ಮಳೆ ಜಿನುಗುತ್ತಲೇ ಇತ್ತು. ಹಿಂಗಾರು ಮಳೆ. ನಮ್ಮನೆಯಲ್ಲೇ ಹುಟ್ಟಿ ಬೆಳೆದ ಕಾಯ್ಲಾಗೆ  ಬೆಳಿಗ್ಗೆಯಿಂದ ಹೆರಿಗೆ ನೋವು. ಹಟ್ಟಿಯ ತುಂಬಾ ಆಚಿಂದೀಚೆ ಈಚಿಂದಾಚೆ ಕುಣಿದಾಡುತ್ತಲೇ ಇತ್ತು. ರಾತ್ರಿಯಾದರೂ ಕರು ಹಾಕಲೇ ಇಲ್ಲ. ಕಾಯ್ಲಾ ಮೊದಲೇ ಹರಾಮಿ ಎಂದೇ ಕುಖ್ಯಾತಿ ಪಡೆದಿತ್ತು. ಎಷ್ಟೇ ಗಟ್ಟಿ (ಬಲವಾದ) ಹಗ್ಗ ಕಟ್ಟಿದರೂ ಕಿತ್ತುಕೊಂಡು ಇಡೀ ಹಕ್ಲು ತುಂಬಾ ಕುಂಬ್ಚಟ್ ಹಾರುತ್ತಾ ಓಡುತ್ತಿತ್ತು. ಕುಳ್ಳನೆಯ ದನವನ್ನು ಹಿಡಿಯುವುದು ಯಾರಿಗೂ ಸಾಧ್ಯವಿರಲಿಲ್ಲ. ಸಂಜೆ ಕಳೆದ ಮೇಲೆ ಅದೇ ಹಟ್ಟಿಗೆ ಬಂದು ಸೇರುವುದನ್ನೇ ಕಾಯುತ್ತಿದ್ದೆವು. ಇಂಥಾ ಕಾಯ್ಲಾನ ಚೊಚ್ಚಲ ಹೆರಿಗೆ ಇದು. ನಮಗೋ ಆತಂಕ. ರಾತ್ರಿ ನಾವೆಲ್ಲ ಮಲಗಿದ ಮೇಲೆ ನಿಂತೇ ಕರು ಹಾಕಿಬಿಟ್ಟರೆ? ಹಟ್ಟಿಯಲ್ಲೊಂದು ಚಿಮಣಿ ದೀಪ ಹಚ್ಚಿ ಸರತಿ ಮೇಲೆ ಒಬ್ಬೊಬ್ಬರೇ ಕಾಯುವುದು ಅಂತ ತೀಮರ್ಾನ ಮಾಡಿದೆವು. ರಾತ್ರಿಯ ಮೊದಲ ಚರಣದಲ್ಲಿ ನಾನು ಮತ್ತು ಅಕ್ಕ ಹತ್ತು ನಿಮಿಷಕ್ಕೆ ಒಮ್ಮೆ ಹೋಗಿ ನೋಡಿ ಬರುವುದು ಮಾಡಿದೆವಾದರೂ ಅಮ್ಮ ನಿದ್ದೆಯನ್ನೇ ಮಾಡಲಿಲ್ಲ. ಬೆಳಗಿನ ಜಾವದ ಹೊತ್ತಿಗೆ ಹಸು ಕರು ಹಾಕಿತ್ತು. ಒದ್ದೆ ಒದ್ದೆ ಕರುವಿನ ಮೇಲೆ ತೌಡು (ಅಕ್ಕಿ ಹೊಟ್ಟು) ಹಾಕುವುದು ಹಸು ಅದನ್ನು ನೆಕ್ಕುವುದು ಮಾಡುತ್ತಿತ್ತು. ಬೆಳಗಿನ ಜಾವ ಹಿತ್ಲ್ ತುಂಬಾ ಕರು ಓಡುವುದು, ದನ ಹೂಂಕರಿಸಿ ಕೂಗುವುದು ಇದೇ ಗಲಾಟೆ. 


ಆದರೆ ಆವತ್ತೇ ನರಕ ಚತುರ್ದಶಿ. ಕೈ ತುಂಬಾ ಅಲ್ಲ, ಮೈ ತುಂಬಾ ಕೆಲಸ. ಅಂಗಳ ಗುಡಿಸಿ, ಸೆಗಣಿ ಹಾಕಬೇಕು. ಬಚ್ಚಲ ಮನೆಯಲ್ಲಿದ್ದ ಹಂಡೆಯನ್ನು ತಂದು ಸ್ವಚ್ಛಗೊಳಿಸಬೇಕು, ಬಚ್ಚಲಮನೆಗೂ ಸಗಣಿ ಹಾಕಿ ಸ್ವಚ್ಛ ಮಾಡಿ ಎಲ್ಲ ಒಣಗಿದ ಮೇಲೆ ರಂಗೋಲಿ ಬರೆಯಬೇಕು. ತೋಟದ ತುಳಸಿ ಕೊಡಿ, ಮಿಟಾಯಿ ಹೂವು, ಅಬ್ಬಲಿ ಹೂವುಗಳನ್ನೆಲ್ಲ ಕೊಯ್ದು ಮಾಲೆ ಮಾಡಿ ಹಂಡೆಗೆ, ಕೊಡಪಾನಕ್ಕೆ ಕಟ್ಟಬೇಕು, ಬಾವಿಗೂ ತೋರಣ ಮಾಡಬೇಕು, ಇಷ್ಟೆಲ್ಲದರ ನಡುವೆ ಹಸುವಿನ ಆರೈಕೆಯೂ ಕೊರಳಿಗೆ ಬಿದ್ದಿದೆ. ಶುಂಠಿ-ಬೆಳ್ಳುಳ್ಳಿ ಅದಿನ್ನೇನನ್ನೋ ಹಾಕಿದ ತಿಂಡಿಯನ್ನು ಕಾಯ್ಲಾಗೆ ತಿನ್ನಿಸಬೇಕು. ಹರಾಮಿ ದನ ಸುಮ್ಮನೇ ತಿಂದು ಬಿಟ್ಟೀತು ಅಂತೀರಾ? ಸುತಾರಾಂ ಇಲ್ಲ. ನಾಲ್ಕು ಜನ ಹಿಡಕೊಂಡು ಬಾಯಿಗೆ ತುರುಕಬೇಕಿತ್ತು. ಕರುವನ್ನು ತಂದು ಕೆಚ್ಚಲು ತೋರಿಸಿ ತೋರಿಸಿ ಹಾಲು ಕುಡಿಸಬೇಕು... ನಾವೇನಾದರೂ ಆ ಕೆಲಸ ಮಾಡಲು ಹೋಗಿದ್ದರೆ ಕಾಯ್ಲಾ ಒದೆ ತಿಂದು ಮುಖ-ಮುಸುಡಿ ಚೂರಾಗುತ್ತಿತ್ತು.!


ಸಂಜೆ ಹೊತ್ತಿಗೆ ನಿಜಕ್ಕೂ ನಿತ್ರಾಣವೆದ್ದು ಹೋಗಿತ್ತು. ಆದರೆ ಅಮ್ಮ ಕೆಲಸ ಮಾಡುತ್ತಲೇ ಇದ್ದಳು. ಬಡಕಲು ದೇಹದ ಅಮ್ಮ ಹಣೆಯ ಮೇಲೆ ಟಿಸಿಲೊಡೆದ ಬೆವರನ್ನೂ ಒರೆಸಿಕೊಳ್ಳದೇ, ಕಳೆದ 24 ಗಂಟೆ (ಈಗಿನ ಲೆಕ್ಕದಲ್ಲಿ ಹೇಳೋದಾದ್ರೆ 24*7!)ಗಳಿಂದ ಸರಮಾಲೆ ಕಟ್ಟಿದ ಹಾಗೆ ಒಂದೊಂದೇ ಕೆಲಸ ಮಾಡುತ್ತಿದ್ದರೂ ಒಂದಿನಿತೂ ಸೊಂಟವನ್ನು ಒತ್ತಿ ನಿಡುಸುಯ್ಯದೇ ಹೇಗೆ ಮಾಡ್ತಿದ್ಲು ಕೆಲ್ಸಾ? 

ನಿಜಕ್ಕೂ ಭಗವಂತನೇ ಬಲ್ಲ.

ಸಂಜೆ ಬಾವಿಯಿಂದ ನೀರು ತಂದು ಹಂಡೆಗೆ ತುಂಬುವ ಕೆಲಸ. ಅಮ್ಮ-ಅಕ್ಕ ನೀರಿನ ಕೊಡಪಾನ ಹಿಡಕೊಂಡು ಮುಂದೆ ಹೋಗುತ್ತಿದ್ದರೆ ನಾನು ಜಾಗಟೆ ಹೊಡೆಯುತ್ತಾ ಹಿಂದೆ ಹಿಂದೆ. ಅದೋ ಅಂತಿಂಥ ಹಂಡೆಯಲ್ಲ, ಹತ್ತಿಪ್ಪತ್ತು ಕೊಡಪಾನವಾದರೂ ತುಂಬಬೇಕು. ನೀಜಕ್ಕೂ ಹೇಳ್ತೀನಿ ಆ ಜಾಗಟೆ ಹೊಡ್ಕೊಂಡು ಹಿಂದೆ ಹೋಗುವುದು ಎಂಥಾ ಮಜಾ ಇತ್ತು. ದೋನ್ ಕುಂಡಿ ದಪ್ಪನ್ ಕುಂಡಿ, ತಟಕ್ ಪಟಕ್! ಅಂತ ಕಿಚಾಯಿಸೋದ್ ಬೇರೆ ಮಾಡ್ತಿದ್ದೆ. ನಂಗೂ ಅಕ್ಕಂಗೂ ಇನ್ನಿಲ್ಲದ ಜಗಳ ಹತ್ತಿಕೊಳ್ಳುತ್ತಿತ್ತು. ಕೆಲವೊಮ್ಮೆ ತಣ್ಣೀರ ಸ್ನಾನ ಅಲ್ಲೇ ಆಗ್ತಿತ್ತು. ನಮ್ಮಿಬ್ಬರ ಜಗಳ ಬಿಡಿಸೋ ಕೆಲಸವನ್ನೂ ಅಮ್ಮ ಮಾಡಬೇಕಿತ್ತು.

ಹೊತ್ತು ಕಂತಿ ಕತ್ತಲ ಪರದೆ ಎಳೆದರೂ ಕೆಲಸದ ಪಟ್ಟಿ ಮಾತ್ರ ಕೆಲಸ ಮುಗಿದಿಲ್ಲ. ನಾಳಿನ ಬೆಳಗಿನ ಜಾವಕ್ಕೆ ಸಿಹಿತಿಂಡಿ ರೆಡಿ ಮಾಡ್ಬೇಕಲ್ಲ? ಮುಳ್ಳು ಸೌತೆಕಾಯಿಯನ್ನು ನುಣ್ಣಗೆ ತುರಿದು, ಅಕ್ಕಿಯನ್ನು ಕಡೆಯುವ ಕಲ್ಲಿನಲ್ಲಿ ಕಡೆದು (ಮಿಕ್ಸಿ ಇರಲಿಲ್ಲ) ದೊಡ್ಡ ಪಾತ್ರೆಯಲ್ಲಿ ಹಾಕಿ ಅದಕ್ಕೆ ಬೆಲ್ಲ ಸುರವಿ ಸಿದ್ಧಗೊಳಿಸಿದ್ದಳು. ಎಲ್ಲಕ್ಕಿಂತ ಹೆಚ್ಚಾಗಿ ಅಮ್ಮ ಪ್ರತೀ ದೀಪಾವಳಿಗೆ ಮಾಡುತ್ತಿದ್ದ ಇನ್ನೊಂದು ತಿಂಡಿ ಮಣ್ಣಿ! ಅಕ್ಕಿಯನ್ನು ನುಣ್ಣಗೆ ಹಾಲಿನಂತೆ ಅರೆದು ಮಾಡಬೇಕಿದ್ದ ಮಣ್ಣಿಗೆ ಸ್ವಲ್ಪ ಹದ ತಪ್ಪಿದರೆ ಅಕ್ಷರಶಃ ಮಣ್ಣೇ! ಅಮ್ಮ ಹದ ತಪ್ಪಿದ ನೆನಪಂತೂ ನನಗಿಲ್ಲ. ಅದರಲ್ಲೂ ಸಿಹಿ ಮಣ್ಣಿ ಮತ್ತು ಸಪ್ಪೆ ಮಣ್ಣಿ ಮಾಡುತ್ತಿದ್ದಳು. ಅದನ್ನು ರಾತ್ರಿಯೇ ಮಾಡಿ ಬಟ್ಟಲಿನಲ್ಲಿ ಅಥವಾ ಬಾಳೆಯೆಲೆ ಮೇಲೆ ಸುರಿದು ಇಡಬೇಕಿತ್ತು. ಮತ್ತು ಆ ಬಟ್ಟಲಿನ ಮೇಲೆ ತೆಳ್ಳನೆಯ ಬಟ್ಟೆಯನ್ನು ಕಟ್ಟಿ ಇಡಬೇಕು. ಬೆಳಗಾತ ಎದ್ದು ಮಣ್ಣಿ ನೋಡೋದೇ ಒಂದು ಕುತೂಹಲದ ಸಂಗತಿ. ಬಟ್ಟಲಲ್ಲಿ ಹರವಿದ ಮಣ್ಣಿಯನ್ನು ಸಣ್ಣ ಸಣ್ಣ ತುಂಡು ಮಾಡಿ ತೆಗೆದರೆ ಬೆಣ್ಣೆಯ ಹಾಗೆ ಜಾರಿಯೇ ಬಿಡುತ್ತದೆ. ಆದರೆ ಅಂತಹ ಮಣ್ಣಿಯನ್ನು ಮತ್ತೊಮ್ಮೆ ತಿನ್ನಲು ಇನ್ನೊಂದು ದೀಪಾವಳಿಗಾಗಿ ಕಾಯಬೇಕಿತ್ತು ಎಂಬುದು ಆಗಿನ ಕೊರಗಾಗಿತ್ತು. (ಈಗಿನ ದೀಪಾವಳಿ ತಿಂಡಿಗಳಿಗೆ ಹೋಲಿಸೋ ಹಾಗಿಲ್ಲ ಬಿಡಿ, ಇದೆಲ್ಲವೂ ಬರೀ ಮಣ್ಣೇ!) 


ಅಮ್ಮನ ಸೊಂಟಕ್ಕೆ ಎಂಥಾ ಶಕ್ತಿಯಿತ್ತು ಹಾಗಾದ್ರೆ? ಯಾರ ಹಂಗಿಗೆ ಬಿದ್ದು ಅಷ್ಟೆಲ್ಲವನ್ನೂ ಮಾಡುತ್ತಿದ್ದಳು? ಆಕೆಗೆ ನಾವು ಕೊಟ್ಟ ಪ್ರೀತಿಯ ಗಂಟಾದ್ರೂ ಎಷ್ಟು? ಇಂತಹ ಪ್ರಶ್ನೆಗಳು ಆಗಾಗ ಕಾಡುತ್ತಲೇ ಇರುತ್ತವೆ. 

ಆ ಹರಾಮಿ ದನದ ಬಾಣಂತನವನ್ನು ಮಾಡಿ ಹೈರಾಣಾಗದ, ಅಂಗಳದ ತುಂಬಾ ಸೆಗಣಿ ಹಾಕಿ ಅದರ ಅಂದವನ್ನೂ ದಿಟ್ಟಿಸಿ ನೋಡದ, ಮಾಡಿದ ಮಾಲೆಗಳ ಸುವಾಸನೆಯನ್ನೂ ಆಘ್ರಾಣಿಸದ, ತಿದಿಯ ತನಕ ಒತ್ತರಿಸಿ ಬರುವ ಅಡುಗೆ ಕೋಣೆಯ ದಟ್ಟ ಹೊಗೆಗೂ ಧೈರ್ಯಗೆಡದ ಅಮ್ಮ ದೊಡ್ಡ ಜವಾಬ್ದಾರಿ ತನ್ನ ಹೆಗಲನ್ನೇರಿ ಕುಳಿತಿದೆ ಎಂದು ಇವೆಲ್ಲವನ್ನೂ ಮಾಡುತ್ತಿರಲಿಲ್ಲ. ಅವೆಲ್ಲವೂ ಆಕೆಗೆ ಆಯಾಯ ದಿನದ ಕೆಲಸ. ಒಂದು ದಿನದ ಚಾಪೆಯನ್ನು ಮಡಿಸಿ ಇನ್ನೊಂದಕ್ಕೆ ರೆಡಿ ಮಾಡಿದಂತೆ. 

 ಇಷ್ಟಾಯ್ತಲ್ಲ? ಬೆಳಗಿನ ಜಾವವೇ ಮತ್ತೆ ಗಿರಣಿ ಆರಂಭ. ನಾಲ್ಕೂವರೆಗೋ, ಐದು ಗಂಟೆಗೋ ಎದ್ದು ಬಿಟ್ಟಿರಬಹುದೇ? ಇಲ್ಲ ಬೆಳ್ಳಿ ಮೂಡುವುದಕ್ಕೆ ಮುಂಚೆ ಆಕೆ ಎದ್ದಿದ್ದಳು. ಅಕ್ಕ-ತಮ್ಮ ಇಬ್ಬರನ್ನೂ ಎಬ್ಬಿಸಿ, ಎಣ್ಣೆ ಹಾಕಿ ಸ್ನಾನಕ್ಕೆ ಕಳಿಸಿದ್ದಳು. ನಾವಿಬ್ಬರೂ ರೆಡಿಯಾಗಿ ಬೆಳ್ಳುಳ್ಳಿ ಪಟಾಕಿ ಹೊಡೆಯಲು ಹೊರಗಿನ ಜಗುಲಿಗೆ ಬಂದರೆ ಸೌತೆಕಾಯಿ ಸಿಹಿ ಇಡ್ಲಿ, ತಟ್ಟೆಯಲ್ಲಿ ಸಿಹಿ ಮಣ್ಣಿ ಕಾಯುತ್ತಿದೆ! ಮ್! ಅವನ್ನೆಲ್ಲ ಯಾವ ಜಾವದಲ್ಲಿ ಎದ್ದು ಮಾಡಿದ್ದಳು? ಹಾಗಂತ ಮಾಡಿದ ತಿಂಡಿಯನ್ನು ತಕ್ಷಣಕ್ಕೆ ತಿನ್ನಲು ಆಕೆ ಬಿಡುತ್ತಿರಲಿಲ್ಲ. ಮೊದಲು ಕಿರಾತಕಡ್ಡಿ ಮತ್ತು ಬೇರಿನಿಂದ ಮಾಡಿದ ಕಷಾಯವನ್ನು ಕುಡಿಯಬೇಕಿತ್ತು. ಅದೋ ಘನಘೋರ ಕಹಿ. ಅದೇನು ಒಂದು ಲೋಟ ಕುಡಿಯಬೇಕಿರಲಿಲ್ಲ. ಕೇವಲ ಕಾಲು ಲೋಟ. ಅಷ್ಟು ಕುಡಿಯುವಾಗ ಕಿರಾತಕನೇ ಗಂಟಲೊಳಗೆ ಪ್ರವೇಶ ಮಾಡಿದಂತಾಗುತ್ತಿತ್ತು. ಕಹಿ ಕಷಾಯ ಕುಡಿದ ಮೇಲೆ ಮನೆಯ ಕಟಾಂಜನದ ತುಂಬಾ ಹಣತಿಗೆಗಳನ್ನು ಹಚ್ಚಬೇಕು. ನಾವೇ ಬಿದಿರು ಕಟ್ಟಿಗಳನ್ನು ಕಟ್ಟಿ ಮಾಡಿದ ಗೂಡುದೀಪ (ಆಕಾಶಬುಟ್ಟಿ)ದೊಳಗೆ ಹಣತೆಯನ್ನು ಇಟ್ಟು (ನಿಜ, ನಮ್ಮ ಹಳ್ಳಿಯಲ್ಲಿ ಆಗ ಕರೆಂಟಿರಲಿಲ್ಲ) ಮೇಲೆ ಕಟ್ಟಬೇಕು. ಅವೆಲ್ಲ ಮುಗಿದ ಮೇಲೆಯೇ ಮಣ್ಣಿ ತಿನ್ನುವ ಭಾಗ್ಯ. 

ಇಷ್ಟಾದರೂ ಬೆಳ್ಳಿಬೆಳಕಿನ ನುಣುಪಾದ ಪಾದ ಕಾಣಿಸುತ್ತಿರಲಿಲ್ಲ. ಆ ಹೊತ್ತಿಗಾಗಲೇ ನಮ್ಮ ಹೊಟ್ಟೆ ತಂಪಾಗಿರುತ್ತಿತ್ತು. ಈಗ ಎಲ್ಲಿದೆ ಗೂಡುದೀಪ? ಎಲ್ಲಿದೆ ಕಿರಾತಕ ಕಷಾಯ? ಬೆಣ್ಣೆಯ ಹಾಲೆಯಂತಿರುವ ಮಣ್ಣಿ? ಬೆಂಗಳೂರಿನ ಮಗನ ಮನೆ ಸೇರಿರುವ ಅಮ್ಮ ಅವೆಲ್ಲ ನೆನಪನ್ನೂ ಸೆರಗಿನ ತುದಿಯಲ್ಲಿ ಕಟ್ಟಿ ನಿಟ್ಟುಸಿರು ಬಿಟ್ಟಿರಬಹುದೇ? 


ನನ್ನ ಬಾಲ್ಯದಲ್ಲಿ ಆಕೆ ಹಚ್ಚಿದ ಇಂತಹ ಸಾಲು ದೀಪಗಳು ಇನ್ನೂ ಉರಿಯುತ್ತಲೇ ಇವೆ. 

ಬಾಲ್ಯ ಕಳೆದಿದೆ, ಯೌವನ ಗಿಲೀಟು ಹಚ್ಚಿಕೊಂಡಿದೆ, 

ಈ ನಗರವೆಂಬ ಮಾಟಗಾತಿಯ ಸೆರಗಿನ ಗಂಟಿನಲ್ಲಿ ನಾನು ಬಂಧಿಯಾಗಿದ್ದೇನೆ...!  


ಕಾಮೆಂಟ್‌ಗಳು

sumanalaxmish ಹೇಳಿದ್ದಾರೆ…
ಹಬ್ಬವೇ ಕಣ್ಣಿಗೆ ಕಟ್ಟುವಂತಿದೆ. ನಿಜ ಸರ್...ಬಾಲ್ಯದ ದಿನಗಳ ಹಬ್ಬ, ಅಮ್ಮಂದಿರ ಸಂಭ್ರಮ, ಅವರ ಪ್ರತಿ ಕೆಲಸದಲ್ಲೂ ಇರುತ್ತಿದ್ದ ಶ್ರಮ, ಪ್ರೀತಿ, ನಮ್ಮ ಇಂದಿನ ನಿರಾಸಕ್ತಿಗಳು ಎಲ್ಲ ಒಂದಕ್ಕೊಂದು clash ಆಗುವಂಥವು. nimma ಅಮ್ಮನಿಗೆ ಅಂದಿನ ಹಾಗೆ ಹಬ್ಬ ಮಾಡಲಿಕ್ಕಾಗುವುದಿಲ್ಲವಲ್ಲ ಎನ್ನುವ feel ಇರಬಹುದಾದರೂ ಮಗ ಕೈಗೆ ಸಿಗುವಷ್ಟು ಹತ್ತಿರದಲ್ಲೇ ಇರುವ ನೆಮ್ಮದಿಯಂತೂ ಇರುತ್ತದೆ. ಎಲ್ಲ ಅಮ್ಮಂದಿರಿಗೂ ಅದೊಂದು ಆಸೆ ತಾನೇ?
chand ಹೇಳಿದ್ದಾರೆ…
ಬಾಲ್ಯದ ದೀಪಾವಳಿಗಳೇ ಇಡೀ ಜೀವನಕ್ಕೆ ಸಾಕಾಗುವಷ್ಟು! ಅಮ್ಮ ಹಚ್ಚಿದ ರಂಗೋಲಿ ಅಳಿಸಲು ಸಾಧ್ಯವೇ ಇಲ್ಲ... ನಿಮ್ಮ ಪ್ರತಿಕ್ರಿಯೆಗೆ ಥ್ಯಾಂಕ್ಸ್ ಸುಮನಾ ಮೇಡಂ...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಬದುಕು ಗೆಲ್ಲಿಸುವ ಸಿಮರೂಬ....

‘ಜಂಟಲ್ಮನ್’ ರಾಜಕಾರಣಿ, ಆಕರ್ಷಕ ವ್ಯಕ್ತಿತ್ವದ -ಕೃಷ್ಣ ನಿರ್ಗಮನ

ಶತಮಾನಗಳಿಂದ ಕನ್ನಡ ತಾಯಿಗೆ ಪೂಜೆ ಸಲ್ಲಿಸುತ್ತಿರುವ ಪ್ರಕೃತಿ-ಇದೇ ನಿತ್ಯೋತ್ಸವ...!