ಗುರುಗೆ ಅಮ್ಮನೇ ಲಾಸ್ಟ್ ವರ್ಡ್...
(ವಿ.ಕೆ.ಮೂರ್ತಿ ಸಂದರ್ಶನದ ಕೊನೆಯ ಕಂತು)
ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಬೇಕು ಎಂಬ ಮಹದಾಸೆ ನನಗಿತ್ತು. ಆದರೆ ಯಾವ ನಿರ್ದೇಶಕರೂ ಆಸಕ್ತಿ ವಹಿಸಲಿಲ್ಲ. ಕೊನೆಯಲ್ಲಿ ನನಗೊಂದು ಪಾತ್ರ ಅಂತ ಕೊಟ್ಟವರು ರಾಜೇಂದ್ರ ಸಿಂಗ್ ಬಾಬು ಅವರು. ಅವರ 'ಹೂವು ಹಣ್ಣು' ಚಿತ್ರದಲ್ಲಿ ಅಭಿನಯ ಮಾಡಿದೆ. ಅದನ್ನು ಬಿಟ್ಟರೆ ಬೇರೆ ಯಾರೂ ನನ್ನನ್ನು ಕರೆಯಲಿಲ್ಲ. ನನ್ನ ಸಂದರ್ಶನಕ್ಕೆ ಬಂದ ಅನೇಕರು ಇಂತಹ ಪ್ರಶ್ನೆಗಳನ್ನೇ ಕೇಳಿದ್ದಾರೆ. ನೀವು ಈ ಪ್ರಶ್ನೆಯನ್ನು ನಿರ್ದೇಶಕರಿಗೆ ಕೇಳಿ ಅಂತ ಹೇಳುತ್ತಿದ್ದೆ. ನೀವೆ ಒಂದು ಸಿನೆಮಾ ನಿರ್ದೇಶನ ಮಾಡಿ ಎಂದು ಕೆಲವರು ನನಗೆ ಆಫರ್ ಕೊಟ್ಟಿದ್ದಿದೆ. ಆದರೆ, ನಾನು ಆ ಬಗ್ಗೆ ಹೆಚ್ಚು ಆಸಕ್ತಿ ವಹಿಸಲಿಲ್ಲ.
ಕ್ಯಾಮರಾಮನ್ ಹೆಚ್ಚು ಕ್ರಿಯೇಟಿವ್...
ಒಂದು ವಿಷಯ ನಿಮಗೆ ಸ್ಪಷ್ಟವಾಗಿ ಹೇಳಿಬಿಡುತ್ತೇನೆ. ಒಬ್ಬ ನಿರ್ದೇಶಕನಿಗಿಂತ ಒಬ್ಬ ಕ್ಯಾಮೆರಾಮನ್ ಹೆಚ್ಚು ಕ್ರಿಯೇಟಿವ್ ಆಗಿರುತ್ತಾನೆ. ಆತ ಶೂಟಿಂಗ್ ಮಾಡುವಾಗ ಅತ್ಯಂತ ಡೆಡಿಕೇಟ್ ಆಗಿ, ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ. ಬೆಳಿಗ್ಗೆ 9.30ಕ್ಕೆ ಸ್ಟುಡಿಯೋಗೆ ಶೂಟಿಂಗ್ ಮಾಡೋಕೆ ಅಂತ ಎಂಟರ್ ಆದ್ರೆ ಸಂಜೆ 6.30 ತನಕ ಅವನ ಮನಸ್ಸು, ದೇಹ ಕೆಲಸ ಮಾಡುತ್ತಲೇ ಇರಬೇಕಾಗುತ್ತದೆ. ಒಂದು ನಿಮಿಷವೂ ಪುರುಸೊತ್ತು ಇರುವುದಿಲ್ಲ. ಮೋಸ್ಟ್ ಹಾರ್ಡ್ ವರ್ಕಿಂಗ್ ಪರ್ಸನ್ ಅಂದ್ರೆ ಕ್ಯಾಮರಾಮನ್. ಇದೆಲ್ಲರ ಜೊತೆಗೆ ಕ್ಯಾಮರಾಮನ್ ಒಂದು ಸನ್ನಿವೇಶದ ಬಗೆಗಿನ ನಿರ್ಧಾರವನ್ನು ಆ ತಕ್ಷಣವೇ ಆನ್ ದಿ ಸ್ಪಾಟ್ ಕೈಗೊಳ್ಳಬೇಕಾಗುತ್ತದೆ. ನಿರ್ದೇಶಕನಾದರೆ ಯಾವ್ಯಾವುದನ್ನು ಹೇಗೆ ಮಾಡಬೇಕು ಅಂತ ಮೊದಲೇ ಮನೆಯಲ್ಲಿ ಕುಂತೇ ನಿರ್ಧಾರ ಕೈಗೊಳ್ಳಬಹುದು. ಬಟ್ ಸ್ಟುಡಿಯೋಗೆ ಬಂದಾಗ ಕ್ಯಾಮರಾಮನ್ ಕ್ರಿಯೇಟಿವ್ ವರ್ಕ್ ಮಾತ್ರ ಲೆಕ್ಕಕ್ಕೆ ಬರೋದು.
ನಾನು ಪ್ರತಿ ದಿನ ಬೆಳಿಗ್ಗೆ ಚಿತ್ರದ ಶೂಟಿಂಗ್ಗೆ ಒಂದು ತಯಾರಿ ಅಂತ ಮಾಡಿಕೊಳ್ಳುತ್ತಿದ್ದೆ. ಬೆಳಿಗ್ಗೆ ಬಂದ ಕೂಡಲೇ ಸಹಾಯಕ ನಿರ್ದೇಶಕನಿಗೆ ಹೇಳಿ ಇವತ್ತಿನ ಸೀನ್ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳುತ್ತಿದ್ದೆ. ಹಿಂದಿನ ದಿನದ ಸೀನ್ ಬಗ್ಗೆಯೂ ಲಿಂಕ್ ಇರಬೇಕಾಗುತ್ತದೆ. ಅದನ್ನು ಮನಸ್ಸಿನಲ್ಲಿಟ್ಟುಕೊಂಡು ಮುಂದಿನ ಸೀನ್ ಬಗ್ಗೆ ಚಿಂತನೆ ಮಾಡುತ್ತಿದ್ದೆ. ಇದು ನನಗೆ ತುಂಬಾ ಅನುಕೂಲ ಆಗ್ತಿತ್ತು ಮತ್ತು ನನ್ನ ಕೆಲಸ ಸುಲಭ ಕೂಡ ಆಗ್ತಿತ್ತು. ಕೆಲಸದಲ್ಲಿ ಹೆಚ್ಚು ಇನ್ವಾಲ್ವ್ ಆಗಲು ಪ್ರೇರಣೆ ಕೊಡುತ್ತಿತ್ತು.
(ಅವರ ಮನೆ ಅಂಗಳದಲ್ಲಿ...)
ಕಲರ್ ಕಾಲ...
'ಕನೀಜ್' ನಾನು ಮಾಡಿದ ಮೊದಲ ಕಲರ್ ಫಿಲ್ಮ್. ಗುರುದತ್ ಈ ಫಿಲ್ಮ್ ಅನ್ನು ಕಲರ್ ನಲ್ಲಿ ಮಾಡೋಣ ಅಂತ ಹೊರಟ. ಅದನ್ನು ಪೂರ್ತಿ ಮಾಡಲಿಕ್ಕೆ ಅವನಿಂದ ಸಾಧ್ಯವಾಗಲಿಲ್ಲ. ಇಷ್ಟ ಆಗಲಿಲ್ಲ ಅವನಿಗೆ. ಅರ್ಧಕ್ಕೆ ಬಿಟ್ಟುಬಿಟ್ಟ. ಆಮೇಲೆ ಕೈಗೆತ್ತಿಕೊಂಡಿದ್ದು 'ಚೌದುನಿಕಾ ಚಾಂದ್'. ಈ ಫಿಲ್ಮ್ ಸೂಪರ್ ಹಿಟ್ ಚಿತ್ರ ಆಗೋಯ್ತು. ಆಗಿನ ಕಾಲದಲ್ಲಿ ಸಿಲ್ವರ್ ಜುಬಿಲಿ ಆಯ್ತು. ಫಿಲ್ಮ್ ಡಿಸ್ಟ್ರಿಬ್ಯುಟರ್ ಎಲ್ಲ ಬಂದು ಇನ್ನೊಂದಿಷ್ಟು ಚಿತ್ರ ಮಾಡಿ ಅಂತ ಕೇಳ್ತಾ ಇದ್ರು. ಆವಾಗೊಂದು ಕ್ರೇಜ್ ಬಂದಿತ್ತು; ಒಂದೋ ಎರಡೋ ಸಾಂಗ್ ಕಲರ್ ನಲ್ಲಿ ಮಾಡುವುದು. ಪೂರ್ತಿ ಫಿಲ್ಮ್ ಕಲರ್ ನಲ್ಲಿ ಮಾಡುವುದು ಕಷ್ಟ ಇತ್ತು ಬಿಡಿ. ಪ್ರೊಡಕ್ಷನ್ ತುಂಬಾ ದುಬಾರಿ ಇತ್ತು. ಹೀಗೆ ಕೆಲವು ಫಿಲ್ಮ್ ಸಾಂಗ್ ಪಿಕ್ಚರೈಸೇಶನ್ ಕಲರ್ ನಲ್ಲಿ ಮಾಡಿಕೊಟ್ಟಿದ್ದೂ ಇದೆ.
ಅಮ್ಮಾ ಅಂದ್ರೆ ಲಾಸ್ಟ್ ವರ್ಡ್!
ಗುರುದತ್ನ ಪರ್ಸನಲ್ ಲೈಫ್ ಹೇಗೋ ಏನೋ ಗೊತ್ತಿಲ್ಲ ನನಗೆ. ಆತ್ಮಹತ್ಯೆ ಮಾಡಿಕೊಳ್ಳೋ ಟೆಂಡೆನ್ಸಿ ಅವನ ಬ್ಲಡ್ನಲ್ಲೇ ಇತ್ತು ಅನಿಸತ್ತೆ. ಗುರುದತ್ ಮಗ ಕೂಡ ಆತ್ಮಹತ್ಯೆ ಮಾಡಿಕೊಂಡ. ಗುರು ತನ್ನ ವೈಯಕ್ತಿಕ ಜೀವನದ ಸಂಗತಿಗಳನ್ನು ಯಾರ ಹತ್ತಿರವೂ ಹೇಳಿಕೊಳ್ಳುತ್ತಿರಲಿಲ್ಲ. He never expressed anything to anybody. ಇನ್ಫ್ಯಾಕ್ಟ್ ಅವರ ವೈಫ್ ಗೀತಾ ದತ್ ಮಾತ್ರ ನನ್ನ ಮನೆಗೆ ಬಂದು ಕೆಲವು ವಿಷಯ ಹೇಳಿಕೊಳ್ತಾ ಇದ್ಲು. ಆದರೆ, ಅವಳಿಗೆ ನಾನು ಹೇಳ್ತಾ ಇದ್ದೆ; ನೀವು ಒಂದು ವಿಷಯ ಹೇಳು, ನೀನು ಹ್ಯಾಪಿಯಾಗಿದ್ದಿಯೋ ಇಲ್ಲವೋ ಹೇಳು? ಗುರು ನಿನ್ನನ್ನು, ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ತಾ ಇದ್ದಾನೋ ಇಲ್ಲವೋ? ಆತ ಮೂರು ಮಕ್ಕಳನ್ನೂ ಚೆನ್ನಾಗಿ ನೋಡಿಕೊಳ್ತಾ ಇದ್ದ. ಎಲ್ಲರನ್ನೂ ಹ್ಯಾಪಿಯಾಗಿ ಇರಿಸಿದ್ದ. ಅದನ್ನು ಬಿಟ್ಟು ಹೊರಗಿನವರ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ತಿಯಾ? Forget it. ಅಳೋದು ಎಲ್ಲ ಮಾಡಬೇಡ. ಅಂತ ಹೇಳಿ ಕಳಿಸ್ತಾ ಇದ್ದೆ. ಅವಳೇ ಹೇಳಿದ್ಲು, ಆ ವಿಷಯದಲ್ಲಿ ಗುರುದತ್ ಬಗ್ಗೆ ಯಾವುದೇ ಕಂಪ್ಲೇಂಟ್ ಇಲ್ಲ ಅಂತ.
ಗುರುದತ್ ಅನ್ಯಮನಸ್ಕನಾಗಿದ್ದಾಗ ನಾನೂ ಹೇಳಿದ್ದಿದೆ; ಯಾಕೆ ಏನೇನಕ್ಕೋ ತಲೆ ಕೆಡಿಸಿಕೊಳ್ತಿಯಾ ಅಂತ? ಏಯ್ ಅದೆಲ್ಲ ಬಿಡು, ಅವೆಲ್ಲ ನೀನು ಕೇಳೋಕೆ ಬರಬೇಡ ಅಂತಿದ್ದ. ಏನಾದರೂ ಸಮಸ್ಯೆ ಇದ್ದರೂ ಇರಬಹುದು, ಆದರೆ, ನಾನು ಅವನ ಪರ್ಸನಲ್ ವಿಷಯದಲ್ಲಿ ಮಧ್ಯಪ್ರವೇಶ ಮಾಡಲು ಹೋಗುತ್ತಿರಲಿಲ್ಲ. ಅವನ ಅಮ್ಮನ ಹತ್ರಾನೂ ಹೇಳಿಕೊಳ್ತಾ ಇರಲಿಲ್ಲ; ಆದ್ರೆ ಅಮ್ಮನನ್ನು ತುಂಬಾ ಪ್ರೀತಿ ಮಾಡ್ತಾ ಇದ್ದ. ಅಮ್ಮಾ ಅಂದ್ರೆ ಅವನಿಗೆ ಲಾಸ್ಟ್ ವರ್ಡ್.
ಗುರುದತ್ಗೆ ಕನ್ನಡವೇನೂ ಬರುತ್ತಿರಲಿಲ್ಲ. ಆತ ಹುಟ್ಟಿದ್ದು ಬೆಂಗಳೂರು. ಎರಡು ವರ್ಷ ಮಗುವಾಗಿದ್ದಾಗ ಅವರ ಅಪ್ಪ-ಅಮ್ಮ ಕಲ್ಕತ್ತಾಗೆ ಹೊರಟು ಹೋದರು. ಅವರ ಅಪ್ಪ-ಅಮ್ಮ ಮೂಲತಃ ಕುಂದಾಪುರದ ಪಡುಕೋಣೆಯವರು. ಅವರು ಪಣಂಬೂರಲ್ಲಿದ್ದರು ಅನಂತರ ಬೆಂಗಳೂರಿಗೆ ಬಂದರು. ಬಳಿಕ ಪ.ಬಂಗಾಲಕ್ಕೆ ಹೋದರು. ಗುರುದತ್ಗೆ ಬಂಗಾಲಿ ಓದಲು, ಬರೆಯಲು ಚೆನ್ನಾಗಿ ಬರುತ್ತಿತ್ತು. ಅದರಿಂದಾಗಿಯೇ ಅವರು ಗೀತಾ ರಾಯ್ ಪ್ರಭಾವಕ್ಕೆ ಒಳಗಾದ.
(ಗ್ರೇಟ್ ಫೋಟೊಗ್ರಾಫರ್ ಜೊತೆ ನಮ್ ಟೀಮ್)
ಪಾಲ್ಕೆ ಪ್ರಶಸ್ತಿ ಬಗ್ಗೆ...
ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ಮೊದಲ ಬಾರಿಗೆ ಒಬ್ಬ ಟೆಕ್ನಿಶಿಯನ್ ಗೆ ಕೊಟ್ಟಿದ್ದಾರೆ. ಅದನ್ನು ಇಷ್ಟು ವರ್ಷದ ನಂತರ ಹೇಗೆ ನಿರ್ಧಾರ ಮಾಡಿದರು ಎಂಬುದು ನನಗೂ ಅಚ್ಚರಿ. ಇದ್ದಕ್ಕಿದ್ದಂತೆ ಒಂದು ದಿನ ಮಿನಿಸ್ಟ್ರಿ ಆಫ್ ಇನ್ಫರ್ಮೇಶನ್ ಮತ್ತು ಬ್ರಾಡ್ಕಾಸ್ಟ್ ದೆಹಲಿಯಿಂದ ಫೋನ್ ಬಂತು. ಆರ್ ಯು ವಿ.ಕೆ.ಮೂರ್ತಿ? ಅಂತ ಕೇಳಿದರು. “Are you same V.K.Murthy who photographed with Gurudutt?” ಹೌದು ಅಂತಂದೆ. ಏನಾಗಬೇಕು ಹೇಳಿ ಅಂದೆ? ಇಲ್ಲ, ನಮಗೇನೂ ಆಗಬೇಕಿಲ್ಲ, ನಿಮಗೇ ಒಂದು ವಿಷಯ ತಿಳಿಸಬೇಕಿತ್ತು, ದಾದಾ ಸಾಹೇಬ್ ಪಾಲ್ಕೆ ಪ್ರಶಸ್ತಿಗೆ ನೀವು ಆಯ್ಕೆ ಆಗಿದ್ದೀರಿ, ಕಂಗ್ರಾಟ್ಸ್ ಅಂದರು. ನನಗೆ ನಂಬಲಿಕ್ಕೆ ಆಗಲಿಲ್ಲ, ಯಾರೋ ಫೂಲ್ ಮಾಡ್ತಿದ್ದಾರೆ ಅನಿಸಿ, ಏನು, ಏನು, ಇನ್ನೊಮ್ಮೆ ಹೇಳಿ ಅಂತ ಕನ್ಫರ್ಮ್ ಮಾಡಿಕೊಂಡೆ. ಇದಾದ ಕೆಲ ದಿನಗಳಲ್ಲೇ ಗುಲ್ಬರ್ಗಾ ವಿ.ವಿ.ಯವರು ಡಾಕ್ಟರೇಟ್ ಕೊಡಬೇಕೆಂದು ಮುಂದೆ ಬಂದರು.
(ಬಳಿಕ ನಮ್ಮ ಮಾತು ಅವರ ಪತ್ನಿ ಸಂಧ್ಯಾ ಅವರ ಬಗ್ಗೆ ಹೊರಳಿತು. ಅವರ ಬಗ್ಗೆ ಕೊಂಚ ಮಾತಾಡಿ ಅಂದ್ವಿ ಅದಕ್ಕೆ ಅವರು ಅಂದಿದ್ದು ಇಷ್ಟು...) best kind of woman any man can have…in all respects. She was highly educated woman, her father is much more famous than me, ಎಲ್ಲಕ್ಕಿಂತ ಹೆಚ್ಚಾಗಿ ಎಲ್ಲರನ್ನೂ ಪ್ರೀತಿ ಮಾಡ್ತಾ ಇದ್ರು. ಯಾವತ್ತೂ ಒಂಚೂರೂ ಅಹಂಕಾರ ಮಾಡಿದವರಲ್ಲ. ಯಾರನ್ನೂ ತಾರತಮ್ಯದಿಂದ ನೋಡಿದವರಲ್ಲ...... ಹೀಗೆ ಹೇಳುತ್ತಾ ಮೂರ್ತಿ ಅವರು ತಮ್ಮ ಹಿಂದಿನ ಬದುಕಿನ ಕ್ಷಣಗಳನ್ನು ನೆನೆಸಿಕೊಳ್ಳುತ್ತಾ ಕೆಲಕ್ಷಣ ಮೌನಕ್ಕೆ ಜಾರಿದರು...
(ಹಿಂದಿ ಚಿತ್ರರಂಗದ ಅದ್ಭುತ ಕ್ಷಣಗಳನ್ನು, ಸನ್ನಿವೇಶಗಳನ್ನು ಸೆರೆ ಹಿಡಿದ ವಿ.ಕೆ.ಮೂರ್ತಿ ಅವರೊಂದಿಗೆ ನಾವು ಕಳೆದ ಸುಮಾರು ಎರಡು ತಾಸು ನಿಜಕ್ಕೂ ಅನನ್ಯ ಕ್ಷಣಗಳು. ಯಾವ ಭಿಡೆಯೂ ಇಲ್ಲದೆ, ನಮ್ಮೊಂದಿಗೆ ಚಿಕ್ಕ ಮಗುವಿನಂತೆ ತಮ್ಮ ಅನುಭವಗಳನ್ನು ಹಂಚಿಕೊಂಡರು. ಅವರಿಗೆ ನಮ್ ಟೀಮ್ನಿಂದ ಧನ್ಯವಾದ ಸಲ್ಲಿಸಲೇಬೇಕು)
(ಮೂರ್ತಿ ಸರ್ ತೆಗೆದರು ನಮ್ಮ ಫೋಟೊ...)
ವಿ.ಕೆ.ಮೂರ್ತಿ ಅವರು ನಮ್ಮ ಕ್ಯಾಮೆರಾದಿಂದ ಫೋಟೊ ತೆಗೆಯುತ್ತಿರುವ ದೃಶ್ಯ..
ಕಾಮೆಂಟ್‌ಗಳು