ಗುರುದತ್-ಮೂರ್ತಿ ಸೂಪರ್ ಜೋಡಿ
ಐ ವಾಂಟು ವರ್ಕ್ ವಿದ್ ಯು ಸರ್!
ಆಗ ಒಂದೊಂದು ಫಿಲ್ಮ್ ಶೂಟಿಂಗ್ ಮುಗಿದ ಮೇಲೂ ಒಂದು ಎರಡು ತಿಂಗಳು ಬ್ರೇಕ್ ಇರುತ್ತಿತ್ತು. ಈ ಬಿಡುವಿನ ಸಂದರ್ಭದಲ್ಲಿ ನಾನೊಂದು ಫಿಲ್ಮ್ ನೊಡಿದ್ದೆ; ಅಮ್ರಪಾಲಿ ಅಂತ. ಅದರ ಫೋಟೋಗ್ರಫಿ ಬ್ಯುಟಿಫುಲ್. ಇಂಗ್ಲಿಷ್ ಪಿಕ್ಚರ್ಗೆ ಫೋಟೊಗ್ರಫಿ ಮಾಡಿದಂತಿತ್ತು. ಪಾಲಿ ಮಿಶ್ರಿ ಅಂತ ಅದರ ಫೋಟೋಗ್ರಾಫರ್. ಪ್ರಕಾಶ್ ಸ್ಟುಡಿಯೋದಲ್ಲಿ ನೂರು ರೂ. ಸಂಭಾವನೆ ಪಡೆಯಲು ಹೋಗಿದ್ದಾಗ, ನನ್ನ ಜೂನಿಯರ್ ಕರೆದು, "ಪಾಲಿ ಮಿಶ್ರಿ ತುಮ್ಕೊ ಬುಲಾರಹೇ ಜಾವೋ' ಎಂದ. ನನಗೆ ಭಾರೀ ಅಚ್ಚರಿ. "ಮಜಾಕ್ ಕರ್ ರಹೇ ಹೋ' ಅಂತ ಅವನನ್ನೇ ಬೈದೆ. ಆದರೆ, ಅದು ನಿಜವಾಗಿತ್ತು. ಇನ್ನೊಂದು ಸ್ಟುಡಿಯೊದಲ್ಲಿ ಅವರಿಗಾಗಿ ನಾನು ಕಾದೆ. ವೈಟ್ ಶರ್ಟ್, ವೈಟ್ ಪ್ಯಾಂಟು ಹಾಕ್ಕೊಂಡ ಸ್ಮಾರ್ಟ್ ಆಜಾನುಬಾಹು ಪಾರ್ಸಿ ಬಂದು ಕಾರಿನಿಂದ ಇಳಿದರು. ನನ್ನನ್ನು ನೋಡಿ "ಆರ್ ಯೂ ಕೃಷ್ಣಮೂರ್ತಿ?' ಅಂತ ಕೇಳಿದರು. ನನಗೋ ಆಶ್ಚರ್ಯ. "ಐ ಹರ್ಡ್ ಯು ವಾಂಟು ವರ್ಕ್ ವಿದ್ ಮೀ?'' ಎಂದು ಕೇಳಿದರು. "ಯೆಸ್ ಸರ್! ಇಟ್ಸ್ ಮೈ ambition ಸರ್'' ಅಂದೆ. ಕಮಾನ್ ಅಂತ ಒಳಗಡೆ ಕರ್ಕೊಂಡು ಹೋದರು. ನನಗೆ ಮಾತೇ ಬಂದಾಗಿ ಹೋಗಿತ್ತು. ಆವತ್ತು ಬೆಳಗಿಂದ ಸಂಜೆ ತಂಕ ಅವರ ಜೊತೆ ಕೆಲಸ ಮಾಡಿದೆ. ಸಂಜೆ ನನ್ನ ಕರೆದು ಹೇಳಿದರು, "ನನ್ನ ಜೊತೆ ಇಲ್ಲಿ ತನಕ 23 ಜನ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದರು, ನೀನು 24ನೇಯವನು. ಯು ಆರ್ ದಿ ಬೆಸ್ಟ್'' ಅಂದರು ಮಿಶ್ರಿ. ಮೊದಲನೇ ದಿನವೇ ಆಗಿರುವುದು ಇದು. ನನಗೋ ಅಪಾರ ಸಂತೋಷ. ಯು ಆರ್ ಮಿದ್ ಮಿ, ಡೋಂಟ್ ವರಿ, ಕಮ್ ಟುಮಾರೋ ಅಂತ ಹೇಳಿ ಬೆನ್ನು ತಟ್ಟಿ ಕಳಿಸಿದರು. ಹೀಗೆ ಅವರ ಜೊತೆ ನಾನು ನಾಲ್ಕು ವರ್ಷ ಕಾಲ ಸಹಾಯಕನಾಗಿ ಕೆಲಸ ಮಾಡಿದೆ.
ಗುರುದತ್ ಗೆಣೆತನ...
ಬಳಿಕ ಗುರುದತ್ ನಮ್ಮ ಸ್ಟುಡಿಯೋನಲ್ಲಿ ಒಂದು ಪಿಕ್ಚರ್ ಮಾಡಬೇಕು ಅಂತ ಬಂದ. ಫೇಮಸ್ ಸ್ಟುಡಿಯೋ ಅಂತ ಆಗ ತಾನೆ ಬಾಂಬೆನಲ್ಲಿ ಆರಂಭವಾಗಿತ್ತು. ತುಂಬಾ ಅತ್ಯಾಧುನಿಕ ಸ್ಟುಡಿಯೋ ಆಗಿನ ಕಾಲಕ್ಕೆ. ಒಳ್ಳೆಯ ಸೆಟ್ಟಿಂಗ್, ಸಾಕಷ್ಟು ರೂಮ್ಗಳು, ಒಳ್ಳೆಯ ಕ್ಯಾಮರಾ ಎಲ್ಲ ಇದ್ದವು. ಆಗ ಗುರುದತ್ ಬಾಝಿ ಅಂತ ಫಿಲಂ ಮಾಡಲು ಅಲ್ಲಿಗೆ ಬಂದ. ನಾನು ಇನ್ನೊಬ್ಬರು ಸಿನಿಯರ್ ಫೋಟೋಗ್ರಾಫರ್ಗೆ ಅಸಿಸ್ಟೆಂಟ್ ಆಗಿ ಕೆಲಸ ಮಾಡಿದೆ. ಆ ಫಿಲ್ಮ್ನಲ್ಲಿ ಒಂದು ಸಾಂಗ್ ಪಿಕ್ಚರೈಶೇಷನ್ ಸಂದರ್ಭದಲ್ಲಿ ನಾನು ಕೆಲವು ಹೊಸ ಸಲಹೆಗಳನ್ನು ಕೊಟ್ಟೆ. ಗುರುದತ್ ಗೆ ಇದು ತುಂಬಾ ಇಷ್ಟವಾಯಿತು. ಆದರೆ, ನಮ್ಮ ಕ್ಯಾಮರಾಮ್ಯಾನ್ ಈ ಶಾಟ್ ತಗೊಳ್ಳಲಿಕ್ಕೆ ಸಾಧ್ಯವಿಲ್ಲ ಅಂದ. ಯಾಕೆಂದ್ರೆ ಆತ ಸಲ್ಪ ದಪ್ಪಗಿದ್ದ. ಹಾಗಾಗಿ ಅವನಿಗೆ ಎದ್ದು ಕೂತು ಮಾಡಲು ಸಾಧ್ಯವಿರಲಿಲ್ಲ. ಕ್ಯಾಮರಾಮನ್ಗೆ ಕೇಳಿ ನೋಡು, ಅವನಿಗೆ ಸಾಧ್ಯವಿಲ್ಲಾಂದ್ರೆ ನಾನು ಈ ಶಾಟ್ ಶೂಟ್ ಮಾಡ್ತೇನೆ ಅಂದೆ. ಗುರುದತ್ ಹೋಗಿ ಕೇಳಿದ. ಅದಕ್ಕೆ ಕ್ಯಾಮರಾಮನ್ ಒಪ್ಪಿಗೆ ಕೊಟ್ಟ. ನಾನು ಅದನ್ನು ಶೂಟ್ ಮಾಡಿದೆ. ಆವತ್ತೇ ಗುರುದತ್ ಹೇಳಿದ; ಇನ್ನು ಮುಂದೆ ನಾನು ನೀನು ಒಟ್ಟಿಗೆ ಕೆಲಸ ಮಾಡುವ ಅಂದ. ಮುಂದೆ ಇನ್ನೊಂದು ಫಿಲ್ಮ್ಗೆ ಗುರುದತ್ ಕೈ ಹಾಕಿದ. ಅಲ್ಲಿಂದ ಅವ ಸಾಯುವ ತನಕ ಅವನ ಜೊತೆಗೇ ಕೆಲಸ ಮಾಡಿದೆ. ಗುರುದತ್ ತುಂಬಾ ಸಿಂಪಲ್ ಮನುಷ್ಯ. ಎಲ್ಲರ ಜೊತೆ ಆತ ತುಂಬಾ ಅನ್ಯೋನ್ಯವಾಗಿ ಇರುತ್ತಿದ್ದ. ಗುರುದತ್ ಬಿಟ್ಟು ಬೇರೆಯವರ ಜೊತೆ ಕೆಲಸ ಮಾಡಲು ನನಗೆ ಮನಸ್ಸಿರಲಿಲ್ಲ. ಕೆಲಸದಲ್ಲಿ ನನಗೆಷ್ಟು ಆಸಕ್ತಿ ಇತ್ತೋ, ಅದಕ್ಕಿಂತ ಹೆಚ್ಚು ಆಸಕ್ತಿ ಗುರುದತ್ಗೆ ಇತ್ತು.
ಸಿಂಪಲ್ ಗುರುದತ್...
ಗುರುದತ್ನ ಸಿಂಪಲ್ ಲೀವಿಂಗ್ ಬಗ್ಗೆ ನಾನು ಅನೇಕ ಬಾರಿ ಪ್ರಸ್ತಾಪ ಮಾಡಿದ್ದೆ. ನನ್ನ ಪುಸ್ತಕ (ಬಿಸಿಲು ಕೋಲು)ದಲ್ಲೂ ಇದನ್ನು ಬರೆದಿದ್ದೇನೆ. ನಾವು ಶೂಟಿಂಗ್ ಮಾಡುವಾಗ, ಸಂಜೆ ಹೊತ್ತಿಗೆ ನನಗೆ ಸಲ್ಪ ಹಸಿವೆಯಾಗುತ್ತಿತ್ತು. ಹಾಗಾಗಿ ಏನಾದ್ರೂ ತರಿಸಿಕೊಂಡು ತಿಂತಾ ಇದ್ದೆ. ನಮ್ಮ ಜೊತೆ ಒಬ್ಬ ಕ್ಯಾಮರಾ ಬಾಯ್ ಇದ್ದ ವಿಠಲ್ ಅಂತ. ಅವನನ್ನು ಕರೆದು ಜೋಳದ ರೊಟ್ಟಿ, ಖಾರ ಚಟ್ನಿ ತರಿಸಿಕೊಳ್ಳುತ್ತಿದ್ದೆವು. ಗುರುದತ್ ನನ್ನ ಬಳಿ ಬಂದು, "ಕ್ಯಾ ಖಾ ರಹೆ ಹೋ' ಅಂತ ಕೇಳಿದ. ನಾನು ತಿಂಡಿ ಮುಚ್ಚಿಕೊಂಡು ಇದೆಲ್ಲ ನಿಂಗಲ್ಲ ಅಂದೆ. ಅಂವ ನಂಗೇ ಜೋರು ಮಾಡಿ ನನ್ನ ಜೊತೆಗೇ ಕುಂತು ರೊಟ್ಟಿ ತಿನ್ನಲು ಕೂತು ಬಿಟ್ಟ. ಆ ರೀತಿಯ ಸಿಂಪಲ್ ಮನುಷ್ಯ ಆತ.
ವೇವ್ಲೆಂಥ್ ಸೂಪರ್...
ನನಗೂ ಗುರುದತ್ ನಡುವಿನ ಕೆಮೆಸ್ಟ್ರಿ, wavelength first class ಫಸ್ಟ್ಕ್ಲಾಸ್ ಆಗಿತ್ತು. ಇಬ್ರೂ ಕೆಲಸಕ್ಕೋಸ್ಕರ ಅನೇಕ ಬಾರಿ ಜಗಳ ಮಾಡಿದ್ವಿ. ಅದನ್ನ ಹೀಗೆ ಶೂಟ್ ಮಾಡಬೇಡ, ಸರಿ ಹೋಗಲ್ಲ ಅಂದ್ರೆ, ನಾನು ಹಠ ಮಾಡಿ ಹಾಗೇ ಶೂಟ್ ಮಾಡ್ತಾ ಇದ್ದೆ. ಅನೇಕ ಸಣ್ಣ ಸಣ್ಣ ವಿಷಯಗಳನ್ನು ನನ್ನ ಪುಸ್ತಕದಲ್ಲಿ ಬರೆದಿದ್ದೇನೆ. "ಕಾಗಜ್ ಕೆ ಫೂಲ್' ಅಂತ ಫಿಲ್ಮ್ ಮಾಡಿದೆವಲ್ಲ, ಅದು ಫಿಲ್ಮ್ ಹಿಸ್ಟರಿಯಲ್ಲಿ ದೊಡ್ಡ ಮೈಲ್ಸ್ಟೋನ್. ಈ ಚಿತ್ರ ಆರಂಭ ಮಾಡುವುದಕ್ಕೆ ಮುಂಚೆ ಅವನಿಗೆ ಹೇಳಿದೆ ನಾನು, ಲೋ ಈ ಸಬ್ಜೆಕ್ಟೇ ಬೇಡ, ಸರಿ ಹೋಗಲ್ಲ ಅಂದಿದ್ದೆ. ಫಿಲ್ಮ್ ಇಂಡಸ್ಟ್ರಿಯಲ್ಲಿ ಕೆಲಸ ಮಾಡುವವರು ಅಂದ್ರೆ ಅವರ ಬಳಿ ದಂಡಿಯಾಗಿ ದುಡ್ಡಿರತ್ತೆ ಎಂದು ಭಾವಿಸುತ್ತಾರೆ. ಅವರಿಗೂ ಕಷ್ಟಗಳಿವೆ ಅಂತ ಗೊತ್ತಾಗುವುದಿಲ್ಲ. ಈ ಚಿತ್ರ ಮಾಡುವುದು ಬೇಡ ಅಂದೆ. ಏಯ್, ಇಲ್ಲ ಕಣೋ ನಾನು ಮಾಡಲೇಬೇಕು ಅಂತ ಪಟ್ಟು ಹಿಡಿದ ಗುರುದತ್. ತುಂಬ ಹಠವಾದಿಯಾಗಿದ್ದ ಆತ. ಏನಾದರೂ ಮಾಡಬೇಕು ಅಂದ್ರೆ ಮಾಡಲೇಬೇಕು. ಆದರೆ, ಏನಾದರೂ ಸಿಟ್ಟು ಮಾಡಿಕೊಂಡ್ರೆ, ಮರುದಿನ ಅದನ್ನು ಮರೆತೂ ಬಿಡುತ್ತಿದ್ದ. ಅಷ್ಟೊಂದು ಫ್ರೆಂಡ್ಲಿ ಆಗಿರುತ್ತಿದ್ದ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಗುರುದತ್ ನಂತರ ಅಷ್ಟೊಂದು ಕ್ರಿಯೇಟಿವ್ ಆಗಿರೋರು ಬೇರೆ ಡೈರೆಕ್ಟರ್ ನನಗೆ ಸಿಗಲೇ ಇಲ್ಲ. ಶ್ಯಾಮ್ ಬೆನಗಲ್ ನನಗೆ ತುಂಬಾ ಹಿಡಿಸುತ್ತಿತ್ತು, ಆದರೆ ಅವರ ಸ್ಟೈಲೇ ಬೇರೆ ಇತ್ತು. ಅವರದ್ದು ಸ್ವಲ್ಪ ಡಾಕ್ಯುಮೆಂಟರಿ ಸ್ಟೈಲ್. ಡ್ರಮ್ಯಾಟಿಕ್ ಸ್ಟೈಲ್ ಅವರಿಗೆ ಕಷ್ಟವಾಗಿತ್ತು. ನನ್ನ ಬಳಿಯೇ ಟ್ರೈನಿಂಗ್ ಪಡೆದು ಒಳ್ಳೆ ನಿರ್ದೇಶಕರಾದವರು ಅಂದ್ರೆ ಗೋವಿಂದ ನಿಹಲಾನಿ. ಎಸ್ಜೆಪಿ ಸ್ಟುಡೆಂಟ್ ಅವನು. ನನ್ನ ಬಳಿ ಎರಡು ಫಿಲ್ಮ್ಗೆ ಫ್ರೀ ಆಗಿ ಕೆಲಸ ಮಾಡಿದ...
(ವಿ.ಕೆ.ಮೂರ್ತಿ ಅವರ ಬೆಂಗಳೂರಿನ ಮನೆ)
(ಗುರುದತ್ ಪರ್ಸನಲ್ ಲೈಫ್... ಇನ್ನೊಂದಿಷ್ಟು ಮಾತು... ಮುಂದಿನ ಭಾಗದಲ್ಲಿ...)
ಕಾಮೆಂಟ್‌ಗಳು
shaili tumba chennagide nimdu